ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Monday, February 17, 2014

ಅವಧಾನ ಒಂದು ಕಲೆ, ವಿಜ್ಞಾನ…. - ವಿ. ಕೃಷ್ಣಾನಂದ

ಕೃಪೆ - ವಿಶ್ವ ಕನ್ನಡ

ನಮ್ಮಲ್ಲಿ ಅನೇಕರು ಈ ಹೆಸರನ್ನು ಕೇಳಿರಬಹುದು. ಅದರ ಬಗೆಗೆ ಚಿಂತಿಸುವ ಅಥವಾ ತಿಳಿದುಕೊಳ್ಳುವ ವ್ಯವಧಾನ, ಅವಕಾಶ ಕಾರಣಾಂತರಗಳಿಂದ ಒದಗಿ ಬರದೇ ಇರಬಹುದು. ಕೆಲವೊಮ್ಮೆ ಕೃಷ್ಣ ಅವಧಾನಿ ನರಸಿಂಹ ಅವಧಾನಿ ಎಂಬ ಹೆಸರೋ ಅಥವಾ ಪೂಜಾ ಕಾರ್ಯಕ್ಕೆ, ಜ್ಯೋತಿಷ್ಯಕ್ಕೆ, ಪೌರೋಹಿತ್ಯಕ್ಕೆ ಅವಧಾನಿಗಳನ್ನು `ಕಾಣುವ’ ಪರಿಪಾಠವೂ ಇರಬಹುದು. ಇನ್ನೂ ಆಶ್ಚರ್ಯದ ಸಂಗತಿಯೆಂದರೆ ಅದೇ ಹೆಸರಿನವರಿಗೆ ಕೆಲವೊಮ್ಮೆ ಅದರ ಅರ್ಥ ತಿಳಿಯದೆ ಇರುವುದು. ಏನೋ ಶತಪಾಠಿ, ತ್ರಿವೇದಿಯಂತೆ ನಂದೂ ಒಂದು ಹೆಸರಿರಬಹುದು ಎಂಬ ಧೋರಣೆ ಅಷ್ಟೇ.
ಏನಿದು ಅವಧಾನ? ಯಾರು ಈ ಅವಧಾನಿ? ಏನವನ ವಿಶೇಷತೆ? ಇದನ್ನು ಈಗ ನಾವೆಲ್ಲರೂ ತಿಳಿಯುವ ಪ್ರಯತ್ನ ಮಾಡೋಣ.
ಅವಧಾನ ಎಂದರೆ ಸ್ಥೂಲವಾಗಿ `ಗಮನವಿಟ್ಟು ಕೇಳು’ ಎಂದರ್ಥ. ಆದರೆ ವಿಶೇಷಾರ್ಥದಲ್ಲಿ ಇದರಲ್ಲಿ ಒಂದು ಅದ್ಭುತ ಸಂಗತಿಯೇ ಅಡಗಿದೆ.
ಗಮನವಿಟ್ಟು ಕೇಳು, ಕೇಳಿದ್ದನ್ನು ಗ್ರಹಿಸು, ಗ್ರಹಿಸಿದ್ದನ್ನು ಮನನ ಮಾಡು ಮತ್ತು ಸಂದರ್ಭಕ್ಕೆ ಪುನರುಚ್ಚರಿಸು. ಇವೆಲ್ಲಾ ಕ್ರಿಯೆಗಳೂ ಸಹ ಅವಧಾನದಲ್ಲಿ ಅಡಕವಾಗಿದೆ.
ಹಿಂದಿನ ಕಾಲದ ಕಲಿಕೆಯ, ವಿದ್ಯಾಭ್ಯಾಸದ ಪದ್ಧತಿಯಾದ ಶೃತಿ, ಸ್ಮೃತಿ, ಧೃತಿಯಂತೆಯೇ ಅವಧಾನ ಕೂಡ. ವಾಸ್ತವದಲ್ಲಿ ವೈಜ್ಞಾನಿಕ ಪದ್ಧತಿಯೂ ಹೌದು. ಆದರೆ ಇಂದು ವಿವಿಧ ಪರಿಣಾಮ, ಪ್ರಭಾವದಿಂದಾಗಿ ಕಲಿಕೆಯ ವಸ್ತು, ವಿಷಯ ರೀತಿ ಸಂಸ್ಕೃತಿಯೇ ಬದಲಾಗಿ ಹೋಗುತ್ತಿದೆ. ಇದರಿಂದ ಆಗುತ್ತಿರುವ ದುಷ್ಪರಿಣಾಮಗಳು ಅನೇಕ. ಇರಲಿ, ಅದರ ಕಡೆಗೆ ಮತ್ತೊಮ್ಮೆ ಗಮನ ಹರಿಸೋಣ.
ಅವಧಾನ ಒಂದು ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕ್ರೀಡೆ. ನಿರ್ದಿಷ್ಟ ಅವಧಿಯಲ್ಲಿ ಕೆಲವು ನಿಯಮಗಳೊಂದಿಗೆ ನಡೆಸಲ್ಪಡುವ ಒಂದು ಅದ್ಭತ ಕ್ರೀಡೆ. ಇದರ ಪರಿಚಯವನ್ನು ಅವಧಾನಿಯಿಂದ ಪ್ರಾರಂಭಿಸೋಣ.
ಅವಧಾನಿ: ಅವಧಾನಿಯೆಂದರೆ ಅವಧಾನವನ್ನು ನಡೆಸಿಕೊಡುವವನು. ಇವನೇ ಅವಧಾನದ ಕೇಂದ್ರ ಬಿಂದು. ಇವನ ಬುದ್ಧಿಶಕ್ತಿ, ಕವಿತಾ ರಚನಾ ಸಾಮರ್ಥ್ಯ, ಧಾರಣೆ ಇವುಗಳ ಆಧಾರದ ಮೇಲೆ ಕ್ರೀಡೆಯ ರಸಾಸ್ವಾದನೆ ಸುಲಲಿತ ಸಂವಹನೆ ಸಾಧ್ಯವಾಗುತ್ತದೆ.
ಪೃಚ್ಛಕ: ಎಂದರೆ ಪ್ರಶ್ನೆ ಕೇಳುವವನು ಎಂದರ್ಥ. ಆದರೆ ಅವಧಾನಕ್ಕೆ ಸಂಬಂಧಪಟ್ಟ ಕೆಲವು ವಿಶೇಷ ನಿಯಮಗಳಡಿಯಲ್ಲಿ, ನಿರ್ದಿಷ್ಟ ಪ್ರಕಾರದ, ಸಂಬಂಧಿತ ಪ್ರಶ್ನೆಗಳನ್ನು ಜವಾಬ್ದಾರಿಯುತವಾಗಿ ಕೇಳುವುದು ಇವರ ಪಾಲಿನ ಕೆಲಸ. ತಮ್ಮ ಉತ್ತಮ ಗುಣಮಟ್ಟದ, ಸದಭಿರುಚಿಯ, ಸದುದ್ದೇಶದಿಂದ ಕೂಡಿದ ಪ್ರಶ್ನೆಗಳಿಂದ ಕಾರ್ಯಕ್ರಮವನ್ನು ರಂಜನೀಯವಾಗಿ ಮಾಡುವಲ್ಲಿ ಇವರ ಪಾತ್ರ ಬಹಳ ಹಿರಿದು.
ಶ್ರೋತೃಗಣ: ಸಭಾಸದರು, ನೆರೆದ ಜನತೆಯೇ ಶ್ರೋತೃಗಣ. ಉತ್ತಮ ಅಭಿರುಚಿಯುಳ್ಳ, ಸದುದ್ದೇಶವನ್ನು ಹೊಂದಿರುವ, ರಸಿಕ ಜನತೆಯೇ ಶ್ರೋತೃಗಣ. ಸಾಹಿತ್ಯ ಸಂಸ್ಕೃತಿಯಲ್ಲಿನ ಅಭಿರುಚಿ, ಪರಿಚಯ, ತಕ್ಕ ಮಟ್ಟಿಗಿನ ಅಭ್ಯಾಸದಿಂದ ಶ್ರೋತೃಗಣ ಉತ್ತಮ ರೀತಿಯಲ್ಲಿ ಭಾಗವಹಿಸಿ, ರಸಾಸ್ವಾದನೆಯನ್ನೂ ಮನೋಲ್ಲಾಸವನ್ನೂ ಪಡೆಯಬಹುದು. ಕೆಲವೊಮ್ಮೆ ಅಪರೋಕ್ಷ ರೀತಿಯಲ್ಲಿ ಉತ್ತಮ ಅವಧಾನಕ್ಕೆ ಕಾರಣರಾಗಬಹುದು.
ಈಗ ಅವಧಾನ ರಚನೆ ಮತ್ತು ವಿಧಾನಗಳನ್ನು ನೋಡೋಣ.
ಮೊದಲೇ ತಿಳಿಸಿದಂತೆ ಅವಧಾನಿಯೇ ಅವಧಾನದ ಕೇಂದ್ರಬಿಂದು. ಆತನ ಸತತ ಅಭ್ಯಾಸ ಭಾಷೆಯ ಮೇಲಿನ ಪ್ರೀತಿ ಮತ್ತು ಹಿಡಿತ, ಸಮಯಸ್ಫೂರ್ತಿ, ನೆನಪಿನ ಶಕ್ತಿ, ಉಚ್ಛಾರಣೆ, ಕಂಠಸಿರಿ, ಲೋಕಜ್ಞಾನ, ಜೀವನದರ್ಶನ ಮುಂತಾದುವುಗಳಿಂದ ಅವಧಾನಕ್ಕೆ ಶೋಭೆ ಬರುತ್ತದೆ. ಹಾಗೆಯೇ ಮೇಲೆ ತಿಳಿಸಿದ ಅರ್ಹತೆಗಳಲ್ಲದೇ, ಸಹೃದಯತೆ, ಸೌಹಾರ್ದತೆ, ಸಹಿಷ್ಣುತೆಗಳೂ ಆವಶ್ಯಕ. ಪ್ರಾಚೀನ ಮತ್ತು ಅರ್ವಾಚೀನ ಕಾವ್ಯಸಂಪದ, ವಿವಿಧ ರೀತಿಯ ಸಾಹಿತ್ಯ ಪ್ರಕಾರಗಳನ್ನು, ಹಲವಾರು ವಿಶೇಷ ಕವಿಗಳನ್ನೂ ಆತ ಓದಿರಬೇಕು. ಅಧ್ಯಯನದಿಂದ ಕಂಡುಕೊಂಡ ವಿಶೇಷ ಅಂಶಗಳನ್ನು ಮನನ ಮಾಡಿ ಸಮಯಕ್ಕೆ ತಕ್ಕಂತೆ ಅವುಗಳನ್ನು ಬಳಸಿಕೊಳ್ಳುವ ನೆನಪಿನ ಶಕ್ತಿ, ಏಕಾಗ್ರತೆ ಹಾಗೂ ಸಮಯಸ್ಫೂರ್ತಿಯನ್ನು ಆತ ಹೊಂದಿರಬೇಕು.
ಅವಧಾನಿಯ ಒಟ್ಟು ಸಾಮರ್ಥ್ಯವನ್ನು ತಾನೇ ಒರೆಹಚ್ಚಿ ಅವಧಾನಕ್ಕೆ ಪೃಚ್ಛಕರನ್ನು ಆತ ಆಹ್ವಾನಿಸುತ್ತಾನೆ. ಅವನ ಇಚ್ಛೆಯಂತೆ, ಆತನು ಹೇಳುವ ಭಾಷೆಯಲ್ಲಿ ಅವಧಾನ ನಡೆಯುತ್ತದೆ. ಹೀಗೆ ಯಾವ ಭಾಷೆಯಲ್ಲಿ ಅವಧಾನ ಎಂಬುದು ತೀರ್ಮಾನವಾದ ಮೇಲೆ ಯಾವ ರೀತಿಯ ಅವಧಾನ ಎಂದು ನಿರ್ಧಾರವಾಗಬೇಕು.
ಅಷ್ಟಾವಧಾನ: ಎಂಟು ಜನ ಪೃಚ್ಛಕರಿಂದ ಎಂಟು ವಿವಿಧ ಪ್ರಕಾರಗಳ ಪ್ರಶ್ನೆಯನ್ನು ಅನುಕ್ರಮವಾಗಿ ಹಾಗೂ ನಿರ್ದಿಷ್ಟ ರೀತಿಯಲ್ಲಿ ಎದುರಿಸಿ ಅದರ ಪರಿಹಾರವನ್ನು ಬಿಡಿಬಿಡಿಯಾಗಿ ನೀಡಿ ಅವಧಾನದ ಕೊನೆಯಲ್ಲಿ ಸಮಗ್ರವಾಗಿ ಒಟ್ಟುಗೊಳಿಸಿ ಧಾರಣೆಯನ್ನು ಪೂರೈಸುವುದೇ ಅಷ್ಟಾವಧಾನ.
ಇದೇ ರೀತಿಯಲ್ಲಿ ಹದಿನಾರು ಜನರಿಂದ ಕೂಡಿದ್ದರೆ ಷೋಡಶಾವಧಾನ, ಶತಾವಧಾನ ಹಾಗೂ ಸಹಸ್ರಾವಧಾನಗಳೂ ಕೂಡ ಹಿಂದೆ ನಡೆಯುತ್ತಿದ್ದವು ಹಾಗೂ ಈಗಲೂ ಸಾಧ್ಯ ಸಹ. ಅವುಗಳಲ್ಲಿ ಅತ್ಯಂತ ಜನಪ್ರಿಯವಾದದ್ದು ಅಷ್ಟಾವಧಾನ. ಎಂಟು ವಿವಿಧ ಬಗೆಯ ಅಂಶಗಳನ್ನು ಒಳಗೊಂಡ ಪ್ರಶ್ನೆಗಳನ್ನು ಪೃಚ್ಛಕರು ನೀಡುತ್ತಾರೆ. ಅದನ್ನು ತನ್ನ ಅಪಾರ ಪಾಂಡಿತ್ಯದಿಂದ, ಪ್ರತಿಭೆಯಿಂದ ಅವಧಾನಿ ಸಮಗ್ರವಾಗಿ ಪರಿಹರಿಸುತ್ತಾನೆ. ಒಂದು ಪ್ರಶ್ನೆಗೆ ಉತ್ತರವನ್ನು ಆತ ಸಿದ್ಧಪಡಿಸುತ್ತಿರುವಾಗಲೇ ಮತ್ತೊಂದು ಅಥವಾ ಒಂದಕ್ಕಿಂತ ಹೆಚ್ಚು ವಿಷಯಗಳ ಸಮಸ್ಯೆಗಳನ್ನು ಆತ ಬಿಡಿಸುತ್ತಿರಬೇಕಾಗುತ್ತದೆ. (ಇದನ್ನು ಗಣಕ parallel process ಗಳಿಗೆ ಹೋಲಿಸಬಹುದು)
ಅಷ್ಟಾವಧಾನದ ಜನಪ್ರಿಯ ವಿನ್ಯಾಸ ಹೀಗಿದೆ:
ಎಂಟು ಜನ ಪೃಚ್ಛಕರಲ್ಲಿ ಆರು ಜನ ನಿರ್ದಿಷ್ಟ ಪ್ರಕಾರದ (ಪೂರ್ವ ನಿರ್ಧಾರಿತ ಪ್ರಕಾರ) ಪ್ರಶ್ನೆಗಳನ್ನು ಅನುಕ್ರಮವಾಗಿ ಕೇಳುತ್ತಾರೆ ಹಾಗೂ ಅದಕ್ಕೆ ಅವಧಾನಿಯಿಂದ ಉತ್ತರ ಬಯಸುತ್ತಾರೆ. ಅವಧಾನಿಯು ಅವರಿಗೆ ಹಂತ ಹಂತವಾಗಿ ಉತ್ತರ ನೀಡಿ ಒಟ್ಟು ಉತ್ತರವನ್ನು ಅವಧಾನದ ಕೊನೆಯಲ್ಲಿ ನೀಡುತ್ತಾನೆ.
ಏಳನೆಯ ಪೃಚ್ಛಕನದ್ದೇ ತಕರಾರು. ಈತನಿಗೆ ಯಾವ ಪ್ರಕಾರವೂ ಇಲ್ಲ. ಆತ ಸ್ವತಂತ್ರ. ಈತನ ವಿಷಯವೇ “ಅಪ್ರಸ್ತುತ ಪ್ರಸಂಗ” ಎಂದರೆ ಅವಧಾನಿಯು ತೀವ್ರ ಹಾಗೂ ಕ್ಲಿಷ್ಟಕರ ಸಮಸ್ಯೆಯನ್ನು ಬಿಡಿಸುತ್ತಿರುವಾಗ, ಅವನಿಗೆ ತೊಂದರೆಯಾಗುವಂತೆ, ಏಕಾಗ್ರತೆಗೆ ಭಂಗ ಬರುವಂತೆ ಅಪ್ರಸ್ತುತ ಪ್ರಶ್ನೆಗಳನ್ನು ಆತ ಎಸೆಯುತ್ತಾನೆ. ಅವಧಾನಿಯು ತನ್ನ ಸಮಯ ಸ್ಫೂರ್ತಿಯಿಂದ ಆತನಿಗೆ ತಕ್ಕ ಸಮಾಧಾನ ಹೇಳಿ ತನ್ನ ಯೋಚನಾಲಹರಿ ಮತ್ತು ರಚನಾಕಾರ್ಯಕ್ಕೆ ತೊಡಗಿಸಿಕೊಳ್ಳಬೇಕು.
ಎಂಟನೆಯ ವ್ಯಕ್ತಿಯ ಕೆಲಸ -ಘಂಟಾನಾದ, ಈತ ಕಾರ್ಯಕ್ರಮದ ನಡುನಡುವೆ ಆಗಾಗ ಗಂಟೆಯನ್ನು ಬಾರಿಸುತ್ತಾನೆ. ಅವಧಾನಿಯು ಅದರ ಗಣನೆಯನ್ನು ಅಂದರೆ ಒಟ್ಟು ಎಷ್ಟು ಬಾರಿ ಈ ರೀತಿ ಗಂಟೆ ಬಾರಿಸಲಾಗಿದೆ ಎಂಬುದನ್ನು ಕಾರ್ಯಕ್ರಮದ ಕೊನೆಯಲ್ಲಿ ತಿಳಿಸಬೇಕು.
ಈಗ ಮೊದಲ ಆರು ಜನರ ನಿರ್ದಿಷ್ಟ ಕಾರ್ಯವನ್ನು ನೋಡೋಣ:
೧. ನಿಷೇಧಾಕ್ಷರೀ: ಯಾವುದಾದರೂ ಕವಿತಾವಸ್ತು (ಜನ, ಜೀವನ, ರೀತಿ, ನೀತಿ, ಪುರಾಣ ಘಟನೆ) ನೀಡಿ ಅದರ ಮೇಲೆ ಕೆಲವು ಅಕ್ಷರಗಳನ್ನು ನಿಷೇಧಿಸಿ ಪದ್ಯ ರಚಿಸುವಂತೆ ಹೇಳುವುದು.
ಉದಾ: ಶಿವನನ್ನು ಕುರಿತ ಪದ್ಯ ರಚಿಸಲು ಹೇಳಿ ಶಿ ಅಕ್ಷರವನ್ನು ನಿಷೇಧಿಸುವುದು. ಆಗ ಅವಧಾನಿ ಉ ಎಂದು ಪ್ರಾರಂಭಿಸಿದರೆ ಮಾ ಎಂಬ ಅಕ್ಷರವನ್ನು ನಿಷೇಧಿಸುವುದು. ಈ ಎಂದು ಮುಂದುವರೆದರೆ ಶಿ ಎಂದು ನಿಷೇಧಿಸುವುದು ಹೀಗೆ.
ಹೀಗೆ ಪ್ರತೀ ಹಂತದಲ್ಲೂ ಅವಧಾನಿಯ ಕವಿತ್ವವನ್ನು ಊಹಿಸಿ ಅದಕ್ಕೆ ಸೂಕ್ತ ನಿಷೇಧಗಳ ಮೂಲಕ ತಡೆಯೊಡ್ಡುವುದು.
ಆದರೆ ಅವಧಾನಿಯು ಇವೆಲ್ಲ ನಿಷೇಧಗಳ ನಡುವೆಯೂ ಸಹ ಕೊಟ್ಟ ವಸ್ತುವಿನ ಮೇಲೆ ಕೇಳಿದ ಛಂದಸ್ಸಿನಲ್ಲಿ ಕವಿತಾರಚನೆ ಮಾಡುತ್ತಾನೆ.
೨. ಸಮಸ್ಯಾಪೂರಣ: ಒಂದು ನಾಲ್ಕು ಸಾಲಿನ ಪದ್ಯದಲ್ಲಿ ಯಾವುದಾದರೂ ಒಂದು ಸಾಲನ್ನು ಪೃಚ್ಛಕ ಸಮಸ್ಯಾ ರೂಪದಲ್ಲಿ ನೀಡುತ್ತಾನೆ. ಆಗ ಅವಧಾನಿಯು ಉಳಿದ ಸಾಲುಗಳನ್ನು ಅದೇ ಛಂದಸ್ಸಿನಲ್ಲಿ ಪೂರೈಸಿ ಆ ಸಮಸ್ಯೆಯ ಪರಿಹಾರ ನೀಡಬೇಕು. ಉದಾ: ಅಮವಾಸ್ಯೆಯ ಚಂದಿರ ಹೊಳೆಯುತ್ತಿದ್ದ ಎಂಬ ಸಮಸ್ಯೆಯಲ್ಲಿ ಅಸಾಧ್ಯತೆ ಇದೆ. ಸೂಕ್ತ ರೀತಿಯಲ್ಲಿ ಪರಿಹಾರ ನೀಡಬೇಕು. ಆಗ ಅವಧಾನಿಯೂ ಸಹ ಕೆಲವೊಮ್ಮೆ ಊಹೆಯಿಂದ ಇದನ್ನೂ ಈ ರೀತಿ ಪರಿಹರಿಸಬಹುದು. ಅಮವಾಸ್ಯೆಯ ದಿನ ಚಂದ್ರ ಬೇರೆ ಭೂಭಾಗದಲ್ಲಿ ಹೊಳೆಯುತ್ತಿದ್ದ ಎಂಬರ್ಥ ಬರುವಂತೆ ಪರಿಹರಿಸಬಹುದು.
ಅಂತೆಯೇ ವಿರೋಧಾಭಾಸದಿಂದ ಕೂಡಿದ, ಮೂರ್ಖತೆಯೇ ಮೈವೆತ್ತಂತೆ ಇರುವ ಸಮಸ್ಯೆಗಳೂ ಎದುರಾಗುತ್ತದೆ. ಅವಧಾನಿಯು ಅದನ್ನು ಪರಿಹರಿಸಬೇಕು. ಉದಾ: ವಿಷ್ಣು ಶಿವನನ್ನು ಮದುವೆಯಾದನು ಎಂಬ ಸಮಸ್ಯೆ ಇದ್ದರೆ, ಅಯ್ಯಪ್ಪನ ಕಥೆಯನ್ನು ಬಳಸಿ ಪರಿಹರಿಸಬಹುದು.
೩. ದತ್ತಪದೀ: ಯಾವುದಾದರೂ ಕವಿತಾ ವಸ್ತುವನ್ನು ನೀಡಿ ಅದಕ್ಕೆ ನಿರ್ದಿಷ್ಟ ಛಂದಸ್ಸನ್ನು ನಿಗದಿಪಡಿಸಿ ಅದಕ್ಕೆ ಹೊಂದದ ಪದಗಳನ್ನೂ ನೀಡಿ ಕವಿತಾ ರಚನೆ ಮಾಡುವಂತೆ ಹೇಳುವುದು.
ಉದಾ: ಇಡಲಿ, ಸಾಂಬಾರು, ದೋಸೆ ಮತ್ತು ಪೂರಿಗಳನ್ನು ಬಳಸಿ ಶಿವಸ್ತುತಿ.
ದೆಹಲಿ, ಮದ್ರಾಸು, ಕಲಕತ್ತಾ ಮತ್ತು ಮುಂಬಯಿ ಬಳಸಿ ಕೃಷ್ಣಸ್ತುತಿ.
ಗಡ್ಡ, ಮೀಸೆ, ಕ್ರಾಪ್, ಶೇವ್ ಪದಗಳನ್ನು ಬಳಸಿ ನವವಧು ವರ್ಣನೆ. ಸೈನ್, ಶೊಸೈನ್, ಟ್ಯಾನ್, ಕಾಟ್(Sine, Cosine, Tan, Cot) ಬಳಸಿ ಯುದ್ಧ ವರ್ಣನೆ.
ಹೀಗೆ ಯಾವ ಪದಗಳಾದರೂ ಸರಿ ಅವುಗಳನ್ನು ನೀಡಿ ಪದ್ಯ ರಚಿಸುವಂತೆ ಕೇಳುವುದು. ಅವಧಾನಿಯು ಅದನ್ನು ನಿರ್ದಿಷ್ಟ ಛಂದಸ್ಸಿನಮಲ್ಲಿಯೇ ಪೂರೈಸಬೇಕು. ಹೀಗೆ ಮಾಡುವಾಗ ಅವನಿಗೆ ಅತ್ಯಂತ ಸಮಯಸ್ಫೂರ್ತಿಯೂ, ಲೋಕಜ್ಞಾನವೂ, ಆಶುಕವಿತ್ವವೂ ಇರಬೇಕಾಗುತ್ತದೆ.
೪.ಸ್ಯಂಸ್ತಂಕ್ಷರೀ: ಒಂದು ಪದ್ಯದ ನಿರ್ದಿಷ್ಟ ಸಾಲುಗಳ ನಿರ್ದಿಷ್ಟ ಅಕ್ಷರಗಳೂ ಸಹ ಇದೇ ರೀತಿ ಇರಬೇಕೆಂದು ನಿಯಮಹಾಕಿ, ತಮಗೆ ಬೇಕಾದ ಛಂದಸ್ಸಿನಲ್ಲಿ ತಮಗೆ ಬೇಕಾದ ವಸ್ತುವಿನ ಮೇಲೆ ಪದ್ಯ ರಚಿಸುವಂತೆ ಕೇಳುತ್ತಾರೆ. ಕೆಲವೊಮ್ಮೆ ಹಾಗೆ ಕೇಳಿದ ಕೇಳಿಕೆಗಳು ಆ ಛಂದಸ್ಸಿನಲ್ಲಿ ಬಹಳ ಕಷ್ಟಪ್ರಾಯವಾಗಿ ಕವಿಯು( ಅವಧಾನಿಯು) ತನ್ನ ಶಬ್ದವ್ಯುತ್ಪತ್ತಿಯನ್ನೇ ಅವಲಂಬಿಸಿ ಅದನ್ನು ಪರಿಹರಿಸಬೇಕು.
೫. ಚಿತ್ರಕವಿತ್ವ: ನಿಜಕ್ಕೂ ಕಷ್ಟಸಾಧ್ಯವಾದ ಭಾಗ. ಪೃಚ್ಛಕ ಮೊದಲೇ ತಯಾರಿಸಿ ಅಳವಡಿಸಿ ನೋಡಿದ ವಿನ್ಯಾಸಕ್ಕೆ ಅವಧಾನಿಯನ್ನು ಆಶುವಾಗಿ ಕವಿತೆ ರಚಿಸೆಂದು ವಸ್ತು ಮತ್ತು ವಿನ್ಯಾಸವನ್ನು ಛಂದಸ್ಸಿನೊಡನೆ ನೀಡುತ್ತಾನೆ. ಉದಾ: ಹಾಸನದ ಮೇಲೆ ಅಷ್ಟಕೋನಾಕೃತಿಯಲ್ಲಿರುವ ಸಾಲುಗಳಿಂದ ಕವಿತೆಯನ್ನು ಭಾಮಿನೀ ಷಟ್ಪದಿಯಲ್ಲಿ ರಚಿಸಿ ಎಂದು ಹೇಳಿದರೆ ಹೇಗಿಂದ ಹೇಗೆ ಓದಿದರೂ ಆರು ಸಾಲುಗಳಲ್ಲಿ ಸರಿಯಾದ ಅಕ್ಷರಗಳಿಂದ ಕೂಡಿದ ಅಷ್ಟಕೋನಾಕೃತಿಯ ವಿನ್ಯಾಸದಲ್ಲಿ ಪದ್ಯ ರಚಿಸಬೇಕು. ಇದನ್ನು ಚಕ್ರಬಂಧವೆಂದೂ ಕರೆಯುತ್ತಾರೆ.
೬. ಕಾವ್ಯವಾಚನ: ಪೃಚ್ಛಕ ಯಾವುದಾದರೊಂದು ಪ್ರಸಿದ್ಧ ಕಾವ್ಯದಿಂದ ಆಯ್ದ ಪದ್ಯಗಳನ್ನು ವಾಚನ ಮಾಡುತ್ತಾನೆ. ಅವಧಾನಿಯು ಅದರ ಪ್ರಸಂಗ ವಿಶೇಷವನ್ನು ತಿಳಿಸಿ ಮೂಲ ಆಕರ ಇತ್ಯಾದಿ ವಿವರಣೆಯನ್ನು ನೀಡಬೇಕಾಗುತ್ತದೆ. ಇದಕ್ಕೆ ಅವಧಾನಿಗೆ ಸಮಗ್ರ ಕಾವ್ಯದ ಪರಿಚಯ, ಅಪಾರ ನೆನಪಿನ ಶಕ್ತಿಯು ಅವಶ್ಯಕ.
ಉದಾಹರಣೆಗೆ: ಕನ್ನಡದ ಅವಧಾನವಾದರೆ ೯ನೇ ಶತಮಾನದ ವಡ್ಡಾರಾಧನೆಯ ಸಾಲಿನಿಂದ ಹಿಡಿದು ೨೦ನೇ ಶತಮಾನದ ಬಣ್ಣದ ತಗಡಿನ ತುತ್ತೂರಿವರೆಗೆ ಎಲ್ಲಾ ಪ್ರಸಿದ್ಧ ಪರಿಚಿತ, ಕಾವ್ಯ, ಕೃತಿ, ಕರ್ತೃಗಳ ಬಗ್ಗೆ ಮಾಹಿತಿ ಇರಬೇಕು ಮತ್ತು ಅಷ್ಟರಮಟ್ಟಿನ ವ್ಯಾಪಕ ಪರಿಚಯ ಅಧ್ಯಯನ ಅತೀ ಅಗತ್ಯ.
೭. ಅಪ್ರಸ್ತುತ ಪ್ರಸಂಗ: ಘಂಟಾನಾದ ಹೀಗೆ ಇವೆಲ್ಲವುಗಳಿಂದ ಒಡಗೂಡಿದ ಒಂದು ರಚನೆಯೇ ಅವಧಾನ. ಇಷ್ಟಾಗುವಾಗ ಸುಮಾರು ೨ ೧/೨ ಯಿಂದ ೩ ಗಂಟೆಯ ಕಾಲಾವಕಾಶದಲ್ಲಿ ಸಭಿಕರಿಗೆ ಸಾಹಿತ್ಯದ, ಸಂಸ್ಕೃತಿಯ ರಸದೂಟವೇ ದೊರೆಯುತ್ತದೆ.
ಹೀಗೆ ಅವಧಾನಿಯ ಶ್ರೇಷ್ಠತೆ ಅವಧಾನದ ಸಂಪೂರ್ಣ ಧಾರಣದ ವೇಳೆಗೆ ಸಾಬೀತಾಗಿ ಜನ ನಿಬ್ಬೆರಗಾಗುವಂತೆ ಆಗಿರುತ್ತದೆ.
ಅವಧಾನ ಒಂದು ಶ್ರೇಷ್ಠ ಕಲೆ. ಮಾನವನ ಸತತ ಪ್ರಯತ್ನ, ಅಧ್ಯಯನ ಒಲವಿನಿಂದ, ದೈವಪ್ರಸಾದವಾಗಿ ಬರುವಂತಾದ್ದು. ಹಿಂದೆ ಭಾರತದ ಅನೇಕ ಭಾಷೆಗಳಲ್ಲಿ ಅನೇಕರೀತಿಯ ಅವಧಾನಿಗಳಿದ್ದರು. ಎಂತಲೇ ಆ ಕುಟುಂಬದ ಹೆಸರುಗಳು ಇಂದಿಗೂ ಇವೆ. ಆದರೆ ಕಾಲನ ಹೊಡೆತಕ್ಕೆ ಸಿಕ್ಕು ಬದಲಾಗಿರುವ ಜನರ ಅಭಿರುಚಿಯಲ್ಲಿ ಸಾಹಿತ್ಯ, ಸಂಸ್ಕೃತಿ, ನಮ್ಮತನಗಳು ಮೂಲೆಗುಂಪಾಗಿವೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ನಮ್ಮ ನಡುವೆಯೂ ಸಹ ಇಂದಿಗೂ ಸಹ ಕೆಲವು ಅವಧಾನಿಗಳಿದ್ದಾರೆ. ತಮ್ಮ ವಿಶೇಷ ಹಾಗೂ ಭಗೀರಥ ಪ್ರಯತ್ನದಿಂದ ಸಾಹಿತ್ಯ ಗಂಗೆಯನ್ನು ವಿವಿಧ ಕ್ಷೇತ್ರಗಳಲ್ಲಿ ಹಾಯಿಸಿ ಹುಲುಸಾದ ಬೆಳೆ ತೆಗೆದು ಜನರ ಜೀವನ ಸಾಹಿತ್ಯ ಸಂಸ್ಕೃತಿ ಇವುಗಳನ್ನು ಹಸನು ಮಾಡಲು ಶ್ರಮಿಸುತ್ತಿದ್ದಾರೆ.
ಇಂತಹ ಅಧ್ಭುತ ಕಲೆ ಕೇವಲ ಇತಿಹಾಸದಲ್ಲಿ ಮಾತ್ರ ಓಡುವಂತಾಗದೇ ಇರಲು ಪ್ರಯತ್ನಪಡುತ್ತಿರುವ ಇಂತಹ ಅವಧಾನಿ ಕುಲಕ್ಕೆ, ಅಂತಹ ಅವಧಾನಿಗಳ ಕಲಾಪೋಷಣೆಗೆ, ಅದರಲ್ಲಿ ಅಭಿರುಚಿಯಿರುವ ಸಹೃದಯ ಬಳಗಕ್ಕೆ, ಮತ್ತು ಪೃಚ್ಛಕ ಮಹಾಶಯರುಗಳಿಗೆ `ವಿಶ್ವಕನ್ನಡ’ ತನ್ನ ಅಭಿನಂದನೆಯನ್ನು ಸಲ್ಲಿಸುತ್ತದೆ.
ಗ್ರಂಥಋಣ: “ಅವಧಾನ ಕಲೆ”   – [http://vishvakannada.com/node/325|ಡಾ. ರಾ.

ವಿಶ್ವ ಕನ್ನಡ -

No comments:

Post a Comment