ಗಣಪತಿ ಹಬ್ಬ - ಶತಾವಧಾನಿ ಆರ್‌. ಗಣೇಶ್‌


ಮೊನ್ನೆ ರಸ್ತೆಯ ಬದಿಗೆ ಚೌಕಾಸಿ ದರದಲ್ಲಿ
ತಂದು ಕಟ್ಟಿದ್ದ ಬಾಳೆಯ ಕಂದನು
ನಿನ್ನೆಮಟ್ಟಿಗೆ ಮಾತ್ರ ಮಂದಾಸನದ ಪಾತ್ರ
ವಹಿಸಿದ್ದ ಕುರ್ಚಿಯಿಂದೀಗ ಕಳಚಿ
ಊಟಕ್ಕೆ ತಕ್ಕಮಟ್ಟಿಗೆ ಒದಗಬಹುದಾದ
ಎಲೆಗಳನ್ನೂ ಅವುಗಳಿಂದ ಕಿತ್ತು 
ಉಳಿದಸ್ಥಿಪಂಜರವ ಹಿತ್ತಿಲ್ಲೆಸೆವಾಗ
ಯಾವುದೋ ನಂಟನ್ನು ನುಲಿದ ಭಾವ.
ಬತ್ತಿ ಬಾಡಿದ್ದ ನಿರ್ಮಾಲ್ಯವನು ಹೂಗಿಡದ
ಪಾತಿಗಳಿಗೆಸೆವಾಗಲೇನೊ ಅರಕೆ.
ನಿನ್ನೆಗಳ ನೆನಪೆಲ್ಲ ನಾಳೆಹೂಗಳಿಗೆಂದು
ಗೊಬ್ಬರದ ಗತಿಗಾಣುತಿರುವ ಹಾಗೆ.
ಹತ್ತುಹಲವರು ಬಂದು ತಳಿದ ಮಂತ್ರಾಕ್ಷತೆಯ
ಕಾಳು ಚೆಲ್ಲಾಡಿ ತುಸು ರೂಪಗೆಟ್ಟು
ಆಕಳಿಸಿ ಮೈಚಾಚಿ ತೂಕಡಿಪ ರಂಗೋಲಿ-
ಗರಿವಿಲ್ಲ ಪೊರಕೆ-ಮೊರಗಳ ಜೋಗುಳ.
'ಮಣೆಯ ಮೇಲಿರುವ ರಂಗೋಲಿಯನ್ನಾದರೂ
ಮಂಚದಡಿ ಎತ್ತಿಡೋ! ಭದ್ರವಾಗಿ
ನಾಲ್ಕು ದಿನವಾದರೂ ನಿನ್ನ ದುಡಿಮೆಯ ಸಾಕ್ಷಿ
ಬಣ್ಣಬಣ್ಣದ ಧೂಳಿನಲ್ಲುಳಿಯಲಿ'
ಎನ್ನುವಮ್ಮನ ಮಾತು ಕಿವಿಯನಾಳುತ್ತಿರಲು
ನೆಲವ ಸಾರಿಸುತಲಿದೆ ಕೈಯ ಕೂಲಿ
ದೀಪದೆಣ್ಣೆಯ ಜಿಡುª, ಗಂಧ-ಕುಂಕುಮ ಸೇರಿ
ಮಡಿಯ ಮೈಲಿಗೆಯೊಳಿದೆ ಗಾರೆಗಚ್ಚು.
ರಜತಪೂಜಾಪಾತ್ರ-ಪರಿಕರಗಳನ್ನೆಲ್ಲ
ಮತ್ತೆ ತೊಳೆದೆತ್ತಿಡುವ ಜತನದಲ್ಲಿ
ಗಂಧ-ಕುಂಕುಮಹರಿದ್ರಾಚೂರ್ಣಚೈತನ್ಯ
ನೆನಪಾಗಿ ನಿಂತ ಬರಿಬಟ್ಟಲುಗಳು
ಮತ್ತಷ್ಟು ಹೊಳೆದರೂ ಮನದುಂಬಲಾರದಿವೆ
ಶತಾವಧಾನಿ ಡಾ ಆರ್ ಗಣೇಶ್', 
ಸಿರಿಯಿದ್ದು ಸೊಗವಿರದ ನಗರದಂತೆ.
ಮಂಟಪಕೆ ತಂದಿದ್ದ ಸಿಂಗರದ ಸಾಮಗ್ರಿ
ಕೆಲಸದಿಂದ ನಿವೃತ್ತರೆನುವ ಹಾಗೆ,
ಯುದಟಛಿದಲಿ ಗೆದ್ದರೂ ಸಂಧಿಯಲಿ ಸೋತಿರುವ
ಸೈನಿಕರ ಹಾಗೆ; ತಣ್ಣನೆಯ ಬೇಗೆ.
ತಡೆಯೆ ಜಲಮಾಲಿನ್ಯ, ಕೆರೆಯಾಗಿರೆ ಬಕೆಟ್ಟು
ನಿನ್ನೆಯೆ ವಿಸರ್ಜಿಸಿದ ವಿಘ್ನರಾಜ
ಬಣ್ಣಬಣ್ಣದ ಮಣ್ಣಮೈ ಮೆತ್ತಗಾದರೂ
ತುಸುವಾದರೂ ಮಾಸದಿರುವ ತೇಜ.
ನಿನ್ನೆ ಸಂಭ್ರಮವೆಲ್ಲ ಕನಸಾಗಿ ಕರಗುತಿರೆ
ನೆನಪು ನೀರಾಗುತಿರೆ, ನಲವು ಮುಳುಗೆ;
ಕರಗದಿಹನಿಂದಿಗೂ ಸ್ನೇಹವರ್ಣವಿಲಿಪ್ತ-
ನೆನ್ನ ನೆಳಲೊಡನೆ ತಿಳಿಯಾದ ಜಲದಿ.
ಮಂಟಪದ ಶೂನ್ಯತೆ ಶ್ರುತಿಯಾಗೆ ಮನೆಯಲ್ಲಿ
ಏನೊ ಭಣಭಣ; ತಾಳ ತಪ್ಪುತ್ತಿದೆ .
ಇಂಥ ತುಟ್ಟಿಯ ದಿನಗಳಲ್ಲಿಯೂ ಆತ್ಮೀಯ-
ರಾದ ನಂಟರು ಬಂದು ತೆರಳಿದಂತೆ.



Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು