ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Thursday, December 22, 2011

ಬರೆದ ಮೇಲಿನ್ನೇನಿದೆ.....

ಕಲೆಗಟ್ಟಿದ ಮನಸನ್ನ ತೊಳೆದು ಮತ್ತೆ ಬಿಳುಪಾಗಿಸುವ
ಯಾವ ಮಾರ್ಜಕವೂ ನನಗೆ ಸಿಕ್ಕಿಲ್ಲ....
ಒಡೆದ ಕನಸಿನ ಮೇಲೆ ನೋವಿನ ನೆತ್ತರು ಸಿಡಿಸಿದ ಕೊಳೆಯ
ಅಳಿಸುವ ಯಾವ ತಂತ್ರವೂ ಇನ್ನೂ ದಕ್ಕಿಲ್ಲ/
ಕೊನೆಯಿರದ ಕಡಲಲ್ಲಿ ಉಕ್ಕುವ ತೆರೆಗಳಲ್ಲೆಲ್ಲ ಕಣ್ಣೀರಿನ ಪ್ರತಿಬಿಂಬ
ಬೀಸುವ ಗಾಳಿಯ ಉದಾಸತನದಲ್ಲೂ ನಿಟ್ಟುಸಿರ ಪ್ರತಿಧ್ವನಿ.....
ಎದೆಯ ನೋವಿಗೆ ನೂರು ಮುಖ,
ಮನಸೊಳಗೆ ಹತ್ತಿಕ್ಕಲಾಗದ ಒಲವ ಭಾವಗಳೆಲ್ಲ
ಹುಚ್ಚುಹುಚ್ಚು ಸಾಲುಗಳಾಗಿ ಹೊರಹೊಮ್ಮುವಾಗ...
ನಾನಂತೂ ಅಸಹಾಯಕ//ಶಾಂತ ಮನಸಿನ ಕೊಳವನ್ನ ಆಗಾಗ ಕದಡೋದು
ಕೇವಲ ನಿನ್ನ ನೆನಪು ಅದರೊಳಗೆ ಒಗೆಯುವ ಗತದ ಕಲ್ಲು....
ಕುಸಿದ ಆಶಾಸೌಧದ ಅವಶೇಷಗಳಡಿ ಸಿಲುಕಿಕೊಂಡಿರುವಾಗಲೂ
ಈ ಪಾಪಿ ಹೃದಯಕ್ಕೆ ನಿನ್ನ ನಾಮದ್ದೆ ನಿರಂತರ ಜಪ/
ಶೋಕದ ದಾರದಲ್ಲಿ ಪೋಣಿಸಿದ ಕಣ್ಣಹನಿಗಳನ್ನೆಲ್ಲ
ಹಾಗೆಯೆ ಕಾತರದಿಂದ ಕಾಪಿಟ್ಟುಕೊಂಡಿದ್ದೇನೆ....
ನೀನಿತ್ತ ಸೊತ್ತದು!
ನಿನಗೇನೆ ಜತನದಿಂದ ಮುಟ್ಟಿಸಬೇಕಲ್ಲ ಕೊನೆಯುಸಿರ ಪಕ್ಷಿ ಹಾರಿ ಹೋಗುವ ಮುನ್ನ//
ನಿರೀಕ್ಷೆಯ ಭಾರಕ್ಕೆ ನೆಲಮುಟ್ಟಿದ ಮೋಡ
ಮಳೆಯ ಹನಿಗಳಾಗಿ ಎಲ್ಲೆಲ್ಲೋ ಚಲ್ಲಿ ಬಿರಿದ ಭೂಮಿಯೆದೆಯಲ್ಲಿ ಇಂಗಿಹೋದವು....
ಇತ್ತೀಚೆಗೇಕೊ ವಿಪರೀತ ಚಳಿ ಹೊರಗೆ
ನಿನಗೇನು ಹೇಳು?
ಎದೆಯ ಆಗಿಷ್ಟಿಕೆಯ ಮುಂದೆ ಬೆಚ್ಚಗಿದ್ದೀಯಲ್ಲ ನೀ ನನ್ನ ಮನದ ಒಳಗೆ/
ಕೊನೆಮುಟ್ಟದ ನಿರೀಕ್ಷೆಯ ನಿಟ್ಟುಸಿರ ಉಗಿಬಂಡಿಯನ್ನೆ ಒಲವೆನ್ನಬಹುದಾ?
ಸೋತ ಮನಕ್ಕದೇ ಚೂರು ಬಲವೆನ್ನಬಹುದಾ?,
ಚೂರು ಸುಳಿವಿದ್ದರೂ ಸಾಕಿತ್ತು
ನಾನಷ್ಟು ಬೆರೆಯುತ್ತಿರಲಿಲ್ಲ
ನಿನ್ನ ಬಿಂಬವನ್ನೆ ಒಲವ ನೆತ್ತರು ಚಿಮ್ಮಿಸುತ್ತಾ ಹೃದಯದಲ್ಲಿ ಕೊರೆಯುತ್ತಿರಲಿಲ್ಲ....
ಬರೆದ ಮೇಲಿನ್ನೇನಿದೆ
ಅಳಿಸಲಾಗದ ಹಚ್ಚೆಯಾಗಿ ನನ್ನೆದೆಯಲ್ಲೆ ನೀನು ಉಳಿದು ಹೋಗಿದ್ದೀಯ....
ಕಣ್ಣಲ್ಲಿ ಕೂಡಿಟ್ಟಿದ್ದ ಕನಸುಗಳನ್ನೆಲ್ಲ ಅದೆ ಕಣ್ಣನೀರಲ್ಲಿ ಮುಲಾಜಿಲ್ಲದೆ ತೊಳೆದು ಸಾಗಿದ್ದೀಯ//

No comments:

Post a Comment