ಎರಡು ದಾರಿಗಳು


ಒಂದು ಹಳ್ಳಿಯಲ್ಲಿ ಒಬ್ಬ ರೈತನಿದ್ದ. ಅವನ ಮನೆಯ ಪಕ್ಕದಲ್ಲಿ ಒಬ್ಬ ಬೇಟೆಗಾರನಿದ್ದ. ರೈತ ತನ್ನ ಜೀವನೋಪಾಯಕ್ಕೆ ಸಾಕಷ್ಟು ಕುರಿಗಳನ್ನು ಸಾಕಿಕೊಂಡಿದ್ದ. ಪ್ರತಿಯೊಂದು ಕುರಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಬೇಲಿಕಟ್ಟಿ ಅವುಗಳನ್ನು ಕಾಪಾಡುತ್ತಿದ್ದ.

ಒಂದು ರಾತ್ರಿ ಬೇಟೆಗಾರನ ನಾಯಿಗಳಿಗೆ ಈ ಬೇಲಿಯಲ್ಲಿ ಒಂದು ಕಿಂಡಿ ಕಂಡಿತು. ಅವು ಒಳಗೆ ನುಗ್ಗಿ ಒಂದೆರಡು ಕುರಿಗಳನ್ನು ಕೊಂದು, ಕೋಲಾಹಲ ಮಾಡಿ, ಕೊಂದಿದ್ದ ಕುರಿಗಳನ್ನು ಎಳೆದುಕೊಂಡು ಹೋದವು. ದುಃಖದಿಂದ ರೈತ ಪಕ್ಕದ ಮನೆಗೆ ಹೋಗಿ ಬೇಟೆಗಾರನಿಗೆ ತನ್ನ ದೂರು ಹೇಳಿಕೊಂಡ. ಅವನು ಕ್ಷಮೆ ಕೇಳಿ ನಾಳೆಯಿಂದ ಹೀಗೆ ಆಗುವುದಿಲ್ಲ, ನನ್ನ ಮಕ್ಕಳಿಗೆ ಹೇಳಿ ನಾಯಿಗಳನ್ನು ಕಟ್ಟಿ ಹಾಕಿಸುತ್ತೇನೆ ಎಂದ. ರೈತ ಅವನ ಮಾತನ್ನು ನಂಬಿದ.

ಎರಡು ದಿನಗಳ ನಂತರ ಮತ್ತೆ ಅದೇ ತೊಂದರೆ. ನಾಯಿಗಳು ಹೇಗೋ ತಪ್ಪಿಸಿಕೊಂಡು ಬಂದು ಕುರಿಗಳ ಮಂದೆಗೆ ನುಗ್ಗಿ ಕೆಲವು ಕುರಿಗಳನ್ನು ಕೊಂದು ಹಾಕಿದವು. ಈ ಬಾರಿ ಕೋಪದಿಂದಲೇ ರೈತ ಬೇಟೆಗಾರನ ಮನೆಗೆ ಹೋಗಿ, `ಇದೇನಾ ನೀನು ಮಾತುಕೊಟ್ಟಿದ್ದು?
ಹೇಳಿದ್ದೇನು, ಮಾಡಿದ್ದೇನು?` ಎಂದು ಧ್ವನಿ ಏರಿಸಿದ. ಬೇಟೆಗಾರ ಮತ್ತೊಮ್ಮೆ ವಿಷಾದ ವ್ಯಕ್ತಪಡಿಸಿ ಹೇಳಿದ, `ನಾಯಿಗಳು ನನ್ನ ಮಕ್ಕಳ ಕಣ್ಣು ತಪ್ಪಿಸಿ ಕಿಟಕಿಯಿಂದ ಹಾರಿ ಹೊರಬಂದು ಹಾವಳಿ ಮಾಡಿವೆ. ನಾಳೆಯಿಂದ ಎಲ್ಲ ಕಿಟಕಿಗಳನ್ನು ಮುಚ್ಚಿ ಬಿಡುತ್ತೇನೆ. ಯಾವ ಚಿಂತೆಯೂ ಬೇಡ.` ರೈತ ಜೋಲು ಮೋರೆ ಹಾಕಿಕೊಂಡು ಮರಳಿದ.

ಆದರೆ ಮತ್ತೆ ಅಂಥದೇ ಘಟನೆ ನಡೆಯಿತು. ಪ್ರತಿಬಾರಿ ರೈತ ತಕರಾರು ಮಾಡುವುದು, ಅದಕ್ಕೆ ಬೇಟೆಗಾರ ಕ್ಷಮೆ ಕೇಳಿದಂತೆ ಮಾಡುವುದು, ಆದರೆ ಪರಿಣಾಮ ಮಾತ್ರ ಶೂನ್ಯ. ಆಗ ರೈತ ಚಿಂತಿಸಿದ. ಮೇಲಿಂದ ಮೇಲೆ ಬೇಟೆಗಾರನ ಮನೆಗೆ ಹೋಗಿ ಕೇಳಿಕೊಳ್ಳುವುದಕ್ಕಿಂತ ನ್ಯಾಯಾಧೀಶರ ಹತ್ತಿರ ಫಿರ್ಯಾದು ನೀಡುವುದು ಕ್ಷೇಮ ಎಂದುಕೊಂಡು ನ್ಯಾಯಾಲಯಕ್ಕೆ ಹೋದ. ಆ ದಿನಗಳಲ್ಲಿ ನ್ಯಾಯಾಧೀಶರು ತುಂಬ ನ್ಯಾಯಪರರಾಗಿರುತ್ತಿದ್ದರು. ಅವರು ಕೊಟ್ಟ ತೀರ್ಪನ್ನು ಯಾರೂ ಪ್ರಶ್ನೆ ಮಾಡುವಂತಿರಲಿಲ್ಲ.

ನ್ಯಾಯಾಲಯದ ಕಾರ್ಯ ನಡೆಯಿತು. ನ್ಯಾಯಾಧೀಶರು ಇಬ್ಬರಿಗೂ ಅನೇಕ ಪ್ರಶ್ನೆಗಳನ್ನು ಹಾಕಿ ಅವರಿಂದ ವಿವರಗಳನ್ನು ಪಡೆದರು. ನಂತರ ರೈತನೊಬ್ಬನನ್ನೇ ಬೇರೆಯಾಗಿ ಕರೆದು ಮಾತನಾಡಿದರು. `ಈ ಸಮಸ್ಯೆಯನ್ನು ಎರಡು ರೀತಿಯಲ್ಲಿ ಬಗೆಹರಿಸಬಹುದು. ನಾನು ಖಂಡಿತವಾಗಿಯೂ ನಿನ್ನ ಪಕ್ಕದ ಮನೆಯವನಿಗೆ ಶಿಕ್ಷೆ ನೀಡಿ ನಿನಗೆ ಸಹಾಯಧನವನ್ನು ಕೊಡಿಸಬಹುದು. ಆದರೆ ನೀನು ಮುಂದೆಯೂ ಅವನ ಮನೆಯ ಪಕ್ಕದಲ್ಲೇ ಇರಬೇಕಲ್ಲ? ಆಗ ಅವನಿಗೆ ನಿನ್ನ ಬಗ್ಗೆ ಪ್ರೀತಿ ಇರುತ್ತದೆಯೋ? ಅವನೋ ಮಹಾ ಒರಟ. ನೀನು ನಿನ್ನ ವೈರಿಯ ಮನೆಯ ಪಕ್ಕದಲ್ಲೇ ಇರಲು ಇಷ್ಟಪಡುತ್ತೀಯಾ?`

ರೈತ ಕ್ಷಣಕಾಲ ಯೋಚಿಸಿ ಹೇಳಿದ  `ನೀವು ಹೇಳುವುದು ಸರಿ ಸ್ವಾಮಿ. ವೈರಿಯ ಅದೂ ಇಂಥ ಒರಟು ವೈರಿಯ ಮನೆಯ ಪಕ್ಕದಲ್ಲೇ ಇರುವುದು ಸಾಧ್ಯವಿಲ್ಲ.` `ಹಾಗಾದರೆ ನಾನು ಹೇಳಿದಂತೆ ಮಾಡು. ಇದು ಎರಡನೆಯ ದಾರಿ. ಪ್ರಶ್ನೆ ಕೇಳದೇ ನಾನು ಹೇಗೆ ಹೇಳುತ್ತೇನೋ ಹಾಗೆ ಮಾಡು` ಎಂದರು ನ್ಯಾಯಾಧೀಶರು.

ಮರುದಿನ ರೈತ ಬೆಳಿಗ್ಗೆ ತನ್ನ ಮಂದೆಯಲ್ಲಿದ್ದ ಅತ್ಯಂತ ಸುಂದರವಾದ, ಬಲಿಷ್ಠವಾದ ಎರಡು ಕುರಿಗಳನ್ನು ತೆಗೆದುಕೊಂಡು ಬೇಟೆಗಾರನ ಮನೆಗೆ ಹೋದ. ಅವನು ಇವನನ್ನು ನೋಡಿ ಮುಖ ಗಂಟಿಕ್ಕಿಕೊಂಡ. ಈತ,  `ಸ್ನೇಹಿತ, ನಿನಗೆ ಕೆಲಕಾಲ ತುಂಬ ತಕರಾರು ಮಾಡಿ ತೊಂದರೆ ಕೊಟ್ಟಿದ್ದೇನೆ. ನೀನೂ ಪಾಪ, ನಾಯಿಗಳನ್ನು ಹದ್ದುಬಸ್ತಿನಲ್ಲಿಡಲು ಬಹಳ ಕಷ್ಟಪಟ್ಟಿದ್ದೀಯಾ. ಅದಕ್ಕೆ ಕೃತಜ್ಞತೆಯಿಂದ ಈ ಶ್ರೇಷ್ಠ ಕುರಿಗಳನ್ನು ಸ್ನೇಹದ ಕಾಣಿಕೆಯಾಗಿ ನಿನಗೆ ತಂದಿದ್ದೇನೆ` ಎಂದ. ಬೇಟೆಗಾರನಿಗೆ ನಂಬಲಿಕ್ಕೇ ಆಗಲಿಲ್ಲ. ಅವನ ಮಕ್ಕಳು ಖುಷಿಯಿಂದ ಕುರಿಗಳನ್ನು ತೆಗೆದುಕೊಂಡು ಹೋದರು.

ಮರುದಿನ ರೈತ ಮನೆಯಿಂದ ಹೊರಬಂದು ಬೇಟೆಗಾರನ ಮನೆಯ ಕಡೆ ನೋಡಿದಾಗ ಆಶ್ಚರ್ಯವಾಯಿತು. ಬೇಟೆಗಾರ ಒಂದು ಹೊಸದಾದ ದೊಡ್ಡ ಪಂಜರವನ್ನು ತಂದು ಅದರಲ್ಲಿ ನಾಯಿಗಳನ್ನು ಹಾಕಿ ಬೀಗ ಜಡಿದಿದ್ದಾನೆ. ಮುಂದೆ ಇವನ ಕುರಿಗಳಿಗೆ ಯಾವ ತೊಂದರೆಯೂ ಆಗಲಿಲ್ಲ. ಅಷ್ಟೇ ಅಲ್ಲ, ಯಾವತ್ತಾದರೂ ಬೇಟೆಗಾರನಿಗೆ ಒಳ್ಳೆಯ ಮೊಲ ಅಥವಾ ಜಿಂಕೆಯ ಬೇಟೆ ಸಿಕ್ಕರೆ ಅದರಲ್ಲೊಂದು ಪಾಲು ರೈತನ ಮನೆಗೆ ಬರುತ್ತಿತ್ತು. ಮುಂದೆ ಅವರಿಬ್ಬರೂ ಸ್ನೇಹದಿಂದ ಬದುಕಿದರು.

ಯಾವುದಾದರೂ ಸಂದರ್ಭದಲ್ಲಿ ಘರ್ಷಣೆ ಬಂದಾಗ ಹಟದಿಂದ, ದ್ವೇಷದಿಂದ ಹೋರಾಡುವುದು ಒಂದು ರೀತಿಯಾದರೆ, ಮನಸ್ಸನ್ನು ಒಳಗಡೆ ತಿರುಗಿಸಿಕೊಂಡು ಪ್ರೀತಿಯಿಂದ ಗೆಲ್ಲುವುದು ಇನ್ನೊಂದು ರೀತಿ. ಮೊದಲನೆಯದು ತಾತ್ಪೂರ್ತಿಕ ತೀರ್ಮಾನ ಕೊಡಬಹುದು ಆದರೆ ಬಹುಕಾಲದ ಶಾಂತಿ ಬರುವುದು ಎರಡನೆಯ ದಾರಿಯಿಂದ. ಅದು ಸುಲಭದ ದಾರಿಯಲ್ಲ, ಅದಕ್ಕೆ ಪ್ರಯತ್ನಬೇಕು.

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು