ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Saturday, December 10, 2011

ಜ್ಞಾನದ ಉಡುಗೊರೆ

ಅವರೊಬ್ಬ ಮಹಾಜ್ಞಾನಿ. ಅವರ ಮಗಳಿಗೆ ಅದು ವಿಶೇಷವಾದ ದಿನ. ಅವಳಿಗೆ ಅಂದು ಇಪ್ಪತ್ತನೆಯ ಹುಟ್ಟುಹಬ್ಬ. ಚೀನಾ ದೇಶದಲ್ಲಿ ಹುಡುಗಿಗೆ ಇಪ್ಪತ್ತಾದರೆ ಬಾಲ್ಯ ಮುಗಿದು ತಾರುಣ್ಯಕ್ಕೆ ಕಾಲಿಟ್ಟ ಕ್ಷಣ ಅದು. ಆಕೆ ಸಂಭ್ರಮದಲ್ಲಿದ್ದಳು. ಮನೆಯಲ್ಲಿಯೂ ತುಂಬ ಸಂತಸದ ವಾತಾವರಣ.

ಸಂಜೆ ಬಂದ ಅತಿಥಿಗಳ ಮುಂದೆ ಪ್ರಾರ್ಥನೆಯ ಕಾರ್ಯಕ್ರಮವಾದ ಮೇಲೆ ಜ್ಞಾನಿಯಾದ ತಂದೆ ಮಗಳನ್ನು ಪ್ರೀತಿಯಿಂದ ಕರೆದು ತಲೆನೇವರಿಸಿ ಅವಳ ಕೈಯಲ್ಲಿ ಒಂದು ಪೆಟ್ಟಿಗೆಯನ್ನಿಟ್ಟು,  `ಮಗೂ, ಇದು ನಿನ್ನ ಹುಟ್ಟುಹಬ್ಬದ ಕಾಣಿಕೆ` ಎಂದ. ಆಕೆಗೆ ತನ್ನ ತಂದೆ ಯಾವ ಉಡುಗೊರೆ ಕೊಟ್ಟಿರಬೇಕು ಎಂಬುದನ್ನು ತಿಳಿಯುವ ಕುತೂಹಲ. `ಅಪ್ಪಾ ಇದರಲ್ಲಿ ಏನಿದೆ?` ಎಂದು ಕೇಳಿದಳು. ತಂದೆ ನಕ್ಕು ಹೇಳಿದರು, `ಮಗೂ ಅದನ್ನು ನೀನೇ ಕಂಡುಕೊಳ್ಳಬೇಕು. ರಾತ್ರಿ ಊಟವಾದ ಮೇಲೆ ನಿನ್ನ ಕೋಣೆಗೆ ಇದನ್ನು ತೆಗೆದುಕೊಂಡು ಹೋಗು. ಮೊದಲು ಹತ್ತು ನಿಮಿಷ ಧ್ಯಾನ ಮಾಡಿ ನಂತರ ಪೊಟ್ಟಣವನ್ನು ಬಿಚ್ಚಿ ಉಡುಗೊರೆಯನ್ನು ನೋಡು.` 

ತಂದೆ ಹೇಳಿದಂತೆಯೇ ಈ ಹುಡುಗಿ ಧ್ಯಾನ ಮಾಡಿದ ಮೇಲೆ ಪೊಟ್ಟಣವನ್ನು ಬಿಚ್ಚಿದಳು. ಅದರೊಳಗೆ ಮೂರು ಸುಂದರವಾದ, ಆಕರ್ಷಕವಾಗಿ ಕೆತ್ತನೆ ಮಾಡಿದ ಮರದ ಪುಟ್ಟ ಪೆಟ್ಟಿಗೆಗಳು. ಅವುಗಳ ಮೇಲೆ ಒಂದು, ಎರಡು, ಮೂರು ಎಂಬ ಸಂಖ್ಯೆಗಳನ್ನು ಅಂಟಿಸಲಾಗಿತ್ತು. ನಿಧಾನವಾಗಿ ಒಂದನೇ ಪೆಟ್ಟಿಗೆಯನ್ನು ತೆರೆದಳು. ಅದರಲ್ಲಿ ಒಂದು ಸುಂದರವಾದ ಚೌಕಟ್ಟಿನೊಳಗೆ ಹೊಂದಿಸಿದ ಕನ್ನಡಿ ಇತ್ತು. ಹುಡುಗಿ ಕನ್ನಡಿಯಲ್ಲಿ ತನ್ನ ಮುಖ ನೋಡಿಕೊಂಡಳು. ತನ್ನ ರೂಪ ಹೆಮ್ಮೆ ತರುವಂತಿತ್ತು ಎನ್ನಿಸಿತು. ಸೂಕ್ಷ್ಮವಾಗಿ ಗಮನಿಸಿದಾಗ ಕನ್ನಡಿಯ ಅಂಚಿನಲ್ಲಿ ಏನೋ ಬರೆದಿತ್ತು. ಕುತೂಹಲದಿಂದ ನೋಡಿದಳು. ಅಲ್ಲಿ `ಇದು ಇಂದಿನ ನೀನು` ಎಂದು ಬರೆದಿತ್ತು.

ಮತ್ತೊಂದು ಪೆಟ್ಟಿಗೆಯನ್ನು ತೆರೆದಳು. ಆಕೆಗೆ ಗಾಬರಿಯಾಯಿತು. ಅದರೊಳಗೆ ಗಾಜಿನಿಂದ ಮಾಡಿದ ಮನುಷ್ಯನ ತಲೆಬುರುಡೆಯ ಪ್ರತಿಕೃತಿ ಇತ್ತು. ಈ ಸಾವಿನ ಚಿಹ್ನೆಯಾದ ತಲೆಬುರುಡೆಯನ್ನು ಅದೇಕೆ ತನಗೆ ಕೊಟ್ಟಿರಬಹುದು ಎಂಬ ಚಿಂತೆಯೂ ಆಯಿತು, ದುಃಖವೂ ಆಯಿತು. ಆ ಪೆಟ್ಟಿಗೆಯ ಮೂಲೆಯ ಮೇಲೆ `ಇದು ನಾಳೆಯ ನೀನು` ಎಂದು ಬರೆದಿತ್ತು.

ಮುಖ ಗಂಟಿಕ್ಕಿಕೊಂಡು ಮೂರನೆಯ ಪೆಟ್ಟಿಗೆಯ ಮುಚ್ಚಳವನ್ನು ತೆರೆದಳು. ಇದರಲ್ಲಿ ಕನ್ನಡಿಯಂಥ ಸುಂದರವಾದ ವಸ್ತುವಿರಬಹುದೇ ಅಥವಾ ತಲೆಬುರುಡೆಯಂಥ ಹೆದರಿಕೆ ಬರುವ ಚಿಹ್ನೆ ಇರಬಹುದೇ ಎಂದು ಚಿಂತಿಸುತ್ತಲೇ ಒಳಗೆ ನೋಡಿದಳು. ಅದರಲ್ಲಿ ಅತ್ಯಂತ ಸುಂದರವಾದ, ಆಕರ್ಷಕವಾಗಿ ಕೆತ್ತಲಾದ, ಧ್ಯಾನಮುದ್ರೆಯಲ್ಲಿದ್ದ ಭಗವಾನ್ ಬುದ್ಧನ ದಂತದ ವಿಗ್ರಹವಿತ್ತು. ಬುದ್ಧನ ಮುಖದ ಮೇಲಿನ ಕಾಂತಿ, ಶಾಂತಿ ಮನ ತುಂಬುತ್ತಿತ್ತು. 

ಅವಳ ಮನಸ್ಸಿಗೆ ತುಂಬ ಹಾಯೆನಿಸಿತು. ತಂದೆಯ ಉಡುಗೊರೆಯ ಬಗ್ಗೆ ಹೆಮ್ಮೆಯಾಯಿತು. ಈ ಪೆಟ್ಟಿಗೆಯ ಮೂಲೆಯಲ್ಲೂ ಒಂದು ಬರಹವಿತ್ತು. `ಇದು ಶಾಶ್ವತವಾದ ನೀನು` ಎಂಬುದೇ ಆ ಒಕ್ಕಣೆ.

ಆಗ ಆ ಹುಡುಗಿಗೆ ತನ್ನ ತಂದೆ ನೀಡಿದ್ದು ಸಾಮಾನ್ಯವಾದ ಉಡುಗೊರೆಯಲ್ಲ ಎಂಬುದು ಅರ್ಥವಾಯಿತು. ಅವರು ಕೊಟ್ಟದ್ದು ಮೂರು ವಸ್ತುಗಳಲ್ಲ, ಅವು ಮೂರು ದೊಡ್ಡ ತತ್ವಗಳು, ಅವುಗಳ ಅರ್ಥವನ್ನು ತಿಳಿದುಕೊಳ್ಳಬೇಕೆಂದು ಹೊರಟಳು. ಇದು ಮಾತಿಲ್ಲದೇ ಕಲಿಸುವ ಪಾಠ. ಆ ಹುಡುಗಿಗೆ ಮಾತ್ರವಲ್ಲ, ಆ ಜ್ಞಾನಿ ನಮಗೆಲ್ಲರಿಗೂ ನೀಡಿದ ಅತ್ಯಂತ ಪ್ರಯೋಜನಕಾರಿಯಾದ ಪಾಠ. ಮೊದಲ ಪೆಟ್ಟಿಗೆಯಲ್ಲಿದ್ದ ಕನ್ನಡಿ ನಮ್ಮ ಇಂದಿನ ಸ್ಥಿತಿಯನ್ನು ತಿಳಿಸುತ್ತದೆ. ಕನ್ನಡಿ ಎಂದಿಗೂ ಹಿಂದಿನ, ಮುಂದಿನ ಚಿತ್ರಗಳನ್ನು ಸಂಗ್ರಹಿಸಿ ಇಡಲಾರದು. ಅದು ಕೇವಲ ವಾಸ್ತವವನ್ನು ಮಾತ್ರ ತೋರುತ್ತದೆ. ಸಾಂಕೇತಿಕವಾಗಿ ಅದು ನಮ್ಮ ಆತ್ಮವನ್ನು ಪ್ರತಿಫಲಿಸುವ ಕ್ರಿಯೆಯನ್ನು ಸೂಚಿಸುತ್ತದೆ. ನಾವು ಸದಾ ನಮ್ಮ ಆತ್ಮಪರೀಕ್ಷಣೆಯನ್ನು ಮಾಡಿಕೊಂಡು ಜೀವನವನ್ನು ಶುದ್ಧವಾಗಿಟ್ಟುಕೊಳ್ಳಬೇಕು. 

ಬಾಹ್ಯಸುಂದರತೆ ಮಾತ್ರವೇ ಸಾಲದು. ಎರಡನೆಯ ಪೆಟ್ಟಿಗೆಯಲ್ಲಿಯ ತಲೆಬುರುಡೆ ನಮ್ಮ ನಾಳೆಯ ಸೂಚನೆ. ನಾವು ನಾಳೆ ಮೃತ್ಯುವನ್ನಪ್ಪಿ ದೇಹ ಕಳೆದು ಅಸ್ಥಿಯಾಗುತ್ತೇವೆ. ಈ ಜೀವನ, ನಿರ್ದಿಷ್ಟ ಅವಧಿಯದು ಮಾತ್ರವಲ್ಲ ತುಂಬ ಚಿಕ್ಕದೂ ಹೌದು. ಇದರ ಸರಿಯಾದ ಅರ್ಥವಾದರೆ ನಮಗೆ ದೊರೆತಿರುವ ಪ್ರತಿಯೊಂದು ಕ್ಷಣವೂ ಎಷ್ಟು ಮುಖ್ಯವಾದದ್ದು ಮತ್ತು ವ್ಯರ್ಥಮಾಡಲಾಗದಷ್ಟು ಅಮೂಲ್ಯವಾದದ್ದು ಎಂಬುದು ತಿಳಿಯುತ್ತದೆ, ತಿಳಿಯಬೇಕು. 

ಮೂರನೆಯ ಪೆಟ್ಟಿಗೆಯಲ್ಲಿನ ಬುದ್ಧನ ವಿಗ್ರಹ ನಮ್ಮಲ್ಲಿ ಸದಾ ಸರ್ವದಾ ಇರುವ ದಿವ್ಯತೆಯ ಸಂಕೇತ. ಅದು ಎಂದೆಂದಿಗೂ ಇರುವಂತಹದು. ಪ್ರತಿಕ್ಷಣವೂ ಅದನ್ನು ನೆನೆಸಿಕೊಂಡು ಅದನ್ನು ಬೆಳಸುವಲ್ಲಿ ನಮ್ಮ ಪ್ರಯತ್ನ ನಡೆಯಬೇಕು. ಅದೊಂದು ಅಧ್ಯಾತ್ಮಿಕವಾಗಿ ಉನ್ನತಿಗೇರುವ ಪ್ರಕ್ರಿಯೆ. ಇದೇ ಶಾಶ್ವತವಾದ ನಮ್ಮ ರೂಪ. ಇದೇ ಮಹಾಜ್ಞಾನಿ ನೀಡಿದ ಕಾಣಿಕೆ  ಮಗಳಿಗೆ ಮಾತ್ರವಲ್ಲ, ಇಡೀ ಮಾನವ ಕುಲಕ್ಕೆ. ನಮ್ಮ  ಇಂದು ಸದಾ ಅಂತಃಸಾಕ್ಷಿಯನ್ನು ಪರೀಕ್ಷಿಸುತ್ತ ನಡೆಯಬೇಕು. ನಮ್ಮ ನಾಳೆ ಕೇವಲ ನಶ್ವರವಾದದ್ದೆಂಬ ಎಚ್ಚರಿಕೆಯಲ್ಲಿ ಪ್ರತಿಕ್ಷಣವನ್ನು ವ್ಯರ್ಥಗೊಳಿಸದೇ ಶ್ರಮಿಸಬೇಕು. ಕೊನೆಗೆ ಎಂದೆಂದಿಗೂ ಶಾಶ್ವತವಾದ  ಬುದ್ಧತ್ವವನ್ನು ಎಂದರೆ ನಮಗೆ ದೈವದತ್ತವಾಗಿ ಬಂದ ದೈವತ್ವವನ್ನು ವೃದ್ಧಿಸಿಕೊಂಡು ಜೀವನವನ್ನು ಸಾರ್ಥಕವಾಗಿಸಿಕೊಳ್ಳಬೇಕು. ಇದೇ ನಾವು ಪ್ರೌಢಾವಸ್ಥೆಯಲ್ಲಿ ಹಿರಿಯರಿಂದ ಪಡೆಯುವ ಜ್ಞಾನದ ಉಡುಗೊರೆ. ಅದರ ಹದವರಿತು ಬಾಳು ಅರಳಬೇಕು. 


Krupe: Prajavani 

No comments:

Post a Comment