ಜೀವನ ದರ್ಶನ ನೀಡಿದ ಶಿಕ್ಷಕ


ಅವರೊಬ್ಬ ಶಿಕ್ಷಕ. ಅವರು ಜೀವನದ ಬೇರೆ ಮುಖಗಳನ್ನು ನೋಡಿ ನಂತರ ಶಿಕ್ಷಕತ್ವವನ್ನು ಆರಿಸಿಕೊಂಡರೋ ಇಲ್ಲ, ಶಿಕ್ಷಕರಾಗಲೆಂದೇ ಹುಟ್ಟಿದರೋ ಹೇಳುವುದು ಕಷ್ಟ. ಅವರೊಂದು ವಿಶ್ವಕೋಶವೇ ಆಗಿದ್ದರು. ಆಗಿನ್ನೂ ಪ್ರತಿಯೊಂದಕ್ಕೂ  ಗೂಗಲ್  ನೋಡುವ ಪ್ರವೃತ್ತಿ ಇರಲಿಲ್ಲ. ಆದರೆ ಯಾವ ಸಮಸ್ಯೆ ಬಂದರೂ  ಮೇಷ್ಟರು ಇದ್ದಾರಲ್ಲ, ಅವರನ್ನು ಕೇಳಿದರಾಯಿತು  ಎಂಬುದು ಎಲ್ಲರ ಮನಸ್ಸಿಗೂ ಬರುತ್ತಿತ್ತು, ಅವರ ಸಮಸ್ಯೆಗಳಿಗೆ ಉತ್ತರವೂ ದೊರೆಯುತ್ತಿತ್ತು. 

ಅವರು ಜೀವನದಲ್ಲಿ ಎಲ್ಲವನ್ನೂ ಕಂಡಿದ್ದವರು, ಮನಸ್ಸು ಮಾಗಿದವರು. ಎಂಥ ಕಷ್ಟವೇ ಬರಲಿ, ಎಂಥ ಸಂತೋಷವೇ ಇರಲಿ,  ಆಯ್ತು ಅದು ಭಗವಂತನ ಇಚ್ಛೆ  ಎಂದು ನಕ್ಕುಬಿಡುವರು. ಅವರಿಗೆ ಇಬ್ಬರು ಮಕ್ಕಳಿದ್ದರು. ದೊಡ್ಡ ಮಗ ಬುದ್ಧಿವಂತ, ಪರಿಶ್ರಮಿ. ಆತ ಕೆಲಸಕ್ಕೆ ಸೇರಿ ತಂದೆಗೆ ಸಹಾಯಕನಾಗುತ್ತಾನೆ ಎಂದು ಎಲ್ಲರೂ ಭಾವಿಸಿದ್ದರು. ಅದೇ ಸಮಯಕ್ಕೆ ಮೇಷ್ಟ್ರು ನಿವೃತ್ತರಾಗಿದ್ದರು. ಅವರದು ತುಂಬ ಮಗುವಿನಂಥ ಸ್ವಭಾವ. ಯಾರೋ ಹೇಳಿದರೆಂದು ತಮ್ಮ ಉಳಿತಾಯದ ಹಣವನ್ನೆಲ್ಲ ಒಂದೆಡೆ ಹೂಡಿ ಎಲ್ಲವನ್ನೂ ಕಳೆದುಕೊಂಡರು. ಈ ಸಮಯದಲ್ಲಿ ಒಂದು ದಿನ ಹಿರಿಯ ಮಗ ಬಂದು,  ಅಪ್ಪಾ ನಾನು ಪಾದ್ರಿಯಾಗಬೇಕೆಂದು ನಿರ್ಧರಿಸಿದ್ದೇನೆ. ನನಗೆ ಅದೇ ಹಾದಿ ಸರಿಯೆಂದು ಎನ್ನಿಸಿದೆ, ನಿಮ್ಮ ಅಪ್ಪಣೆಬೇಕು  ಎಂದಾಗ ಈ ಮುದುಕರಿಗೆ ಕ್ಷಣಕಾಲ ನಿರಾಸೆಯಾಗಿದ್ದಿರಬೇಕು. ಆದರೆ ತೋರಗೊಡಲಿಲ್ಲ. ಮಗ ಹೊರಟುನಿಂತಾಗ ತಾವೂ ರೈಲ್ವೆ ನಿಲ್ದಾಣಕ್ಕೆ ಹೋದರು. 

ರೈಲು ಬಿಡುವುದಕ್ಕಿಂತ ಕ್ಷಣ ಮೊದಲು ಮಗನನ್ನು ಬದಿಗೆ ಕರೆದು,  ಮಗೂ, ನಿನ್ನ ನಂಬಿಕೆಯನ್ನು ಬಲವಾಗಿಸಿಕೊಂಡು ನಡೆ. ಆದರೆ ಒಂದು ಮಾತು, ನಿನಗೆ ಅಲ್ಲಿನ ವ್ಯವಸ್ಥೆ ಸರಿಯಿಲ್ಲವೆಂದೆನ್ನಿಸಿದರೆ ಮನಸ್ಸಿನಲ್ಲಿ ಖಿನ್ನತೆಯನ್ನು ಮಾಡಿಕೊಂಡು, ಮನೆಗೆ ಹೇಗೆ ಹೋಗಲಿ ಎಂದು ಚಿಂತಿಸಬೇಡ. ನಾನು ಯಾವಾಗಲೂ ನಿನ್ನೊಂದಿಗಿದ್ದೇನೆ  ಎಂದು ಹೇಳಿ ಮೈದಡವಿ ಕಳುಹಿಸಿಕೊಟ್ಟರು. ತನ್ನ ತಂದೆ ಸದಾ ತನ್ನೊಂದಿಗಿದ್ದಾರೆ ಎಂದು ಹೇಳುವ ಈ ಆಶ್ವಾಸನೆ ಎಂಥ ಭದ್ರತೆಯನ್ನು ಮಕ್ಕಳಿಗೆ ನೀಡುತ್ತದೆ!

ಕೆಲದಿನಗಳ ನಂತರ ಅವರ ಹೆಂಡತಿಯ ಆರೋಗ್ಯ ಕೆಟ್ಟಿತು. ಹೊಟ್ಟೆಯಲ್ಲಿ ವೃಣವಾಗಿ ಕರುಳಿನ ಬಹುಭಾಗವನ್ನು ಕತ್ತರಿಸಬೇಕಾಯಿತು. ಆಸ್ಪತ್ರೆಯ ಖರ್ಚು ವಿಪರೀತವಾಯಿತು. ತಮಗಾಗಿ ಪ್ರೀತಿಯಿಂದ ಕೊಂಡಿದ್ದ ಕಾರನ್ನು ಮಾರಿ ಹೆಂಡತಿಯನ್ನು ಕಾಪಾಡಿಕೊಂಡರು. ಒಂದು ದಿನ ತಮ್ಮ ಎರಡನೆಯ ಮಗನನ್ನು ಕರೆದುಕೊಂಡು ಆಸ್ಪತ್ರೆಗೆ ನಡೆದು ಹೋಗುತ್ತಿರುವಾಗ ಹುಡುಗ ಕೇಳಿದ,  ಯಾಕಪ್ಪಾ, ಕಾರು ಮಾರಿಬಿಟ್ಟೆ? ಅದಿದ್ದರೆ ಎಷ್ಟು ಚೆನ್ನಾಗಿತ್ತಲ್ಲ?  ತಂದೆ ಅಷ್ಟೇ ಶಾಂತವಾಗಿ ಹೇಳಿದರು,  ಮಗೂ ನನಗೆ ಕಾರಿಗಿಂತ ನಿನ್ನ ತಾಯಿ ಹೆಚ್ಚು ಮುಖ್ಯ .  ಈ ಮಾತು ಮಗುವಿನ ಮೇಲೆ ಏನೆಲ್ಲ ಪ್ರಭಾವ ಬೀರಿತು. ತನ್ನ ತಂದೆ ತನ್ನ ಹೆಂಡತಿಯ ಮೇಲಿಟ್ಟ ಪ್ರೀತಿ, ಆ ಪ್ರೀತಿಗೋಸ್ಕರ ಯಾವ ತ್ಯಾಗವೂ ದೊಡ್ಡದಲ್ಲವೆಂಬ ತಿಳಿವು ಇವೆಲ್ಲ ಪರಿವಾರದ ಸಂಬಂಧಗಳು ಹೇಗಿರಬೇಕು ಎನ್ನುವ ಜೀವನದುದ್ದಕ್ಕೂ ಸಾಕಾಗುವ ಪಾಠವನ್ನೂ ಆ ಮಗುವಿಗೆ ನೀಡಿದ್ದಿರಬೇಕು.

ಆ ಮೇಷ್ಟ್ರರಿಗೆ ತಮ್ಮ ಸಾವು ಹತ್ತಿರ ಬಂತೆಂದು ತಿಳಿದಿರಬೇಕು. ಆದರೆ ಸಾವಿನಲ್ಲೂ ಕೂಡ ಅದೇ ಸಮತ್ವ, ಅದೇ ಶುದ್ಧತೆ, ಅದೇ ಪರಿಪೂರ್ಣತೆ. ಮಗನಿಗೆ ಹೇಳಿದರು,  ಅಲ್ಲಿ ಮೇಜಿನ ಮೇಲೆ ಬೈಬಲ್ಲಿನ ಯಾವ ಯಾವ ಹಾಡುಗಳನ್ನು ನಾನು ತೀರಿಹೋದಮೇಲೆ ಹಾಡಬೇಕೆಂಬುದನ್ನು ಗುರುತು ಮಾಡಿ ಇಟ್ಟಿದ್ದೇನೆ. ಆದರೆ ಜೋಪಾನ, ನೀನು ಕೆಲವೊಂದು ಬಾರಿ ಅವಸರದಿಂದ ಪದಗಳನ್ನು ಸರಿಯಾಗಿ ಉಚ್ಛರಿಸುವುದಿಲ್ಲ. ನನ್ನನ್ನು ಸಮಾಧಿ ಮಾಡುವಾಗ ನಿನ್ನ ಉಚ್ಛಾರಣೆ ಸರಿಯಾಗಿರಲಿ . ಮುಂದೆ ಎರಡೇ ದಿನದಲ್ಲಿ ಎದುರು ಬಂದ ಸಾವನ್ನು ಬಹುದಿನಗಳಿಂದ ಕಾಣದೇ ಇದ್ದ ಅತ್ಯಂತ ಪ್ರೀತಿಸಿದ ಸ್ನೇಹಿತನಂತೆ ಅಪ್ಪಿಕೊಂಡು ನಡೆದೇಬಿಟ್ಟರು. ಸದಾ, ಸರ್ವದಾ ಆದರ್ಶ ಶಿಕ್ಷಕನಂತೆ.

ನಾವೂ ನಮ್ಮ ಮಕ್ಕಳಿಗೆ ಇಂಥ ಜೀವನದ ಮೌಲ್ಯಗಳನ್ನು, ಬದುಕುವ ರೀತಿಯನ್ನು, ಪರಿವಾರದಲ್ಲಿ ಒಬ್ಬರನ್ನೊಬ್ಬರು ಪ್ರೀತಿಸುವ ಪರಿಯನ್ನು ಕಲಿಸಿಕೊಡುವುದು ಸಾಧ್ಯವೇ? ಹಾಗಾಗುವಂತೆ ಪ್ರಯತ್ನಿಸಬೇಕು. ಅದು ನಮ್ಮ ಮನೆಗೂ, ಸಮಾಜಕ್ಕೂ ಸಮಾಧಾನ, ಸಂತೃಪ್ತಿಯನ್ನು ನೀಡುವ ಕ್ರಿಯೆ.

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು