ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Sunday, December 11, 2011

ಪ್ರಚೋದನೆಗಳು


ಇದು ಕೆಲವರ್ಷಗಳ ಹಿಂದೆ ಅಮೆರಿಕೆಯಲ್ಲಿ ಮಾಡಿದ ಸಂಶೋಧನೆಯ ಫಲಿತಾಂಶ. ಶಿಕಾಗೋದಲ್ಲಿರುವ ಸ್ಟೋನ್‌ಬ್ರಾಂಡೆಲ್ ಕೇಂದ್ರದಲ್ಲಿ ಡಾ.ಲೇಸಿ ಹಾಲ್ ಎಂಬ ಮನಃಶಾಸ್ತ್ರಜ್ಞರ ನೇತೃತ್ವದಲ್ಲಿ ನಡೆಸಿದ ಸಂಶೋಧನೆ ಇದು.

ಡಾ.ಲೇಸಿ ಪ್ರಪಂಚದಲ್ಲಿರುವ ಅನೇಕ ಜನರನ್ನು ಸೂಕ್ಷ್ಮವಾಗಿ ಗಮನಿಸಿದರು. ಅದರಲ್ಲಿ ಬಹಳಷ್ಟು ಜನ ನಿರಾಸೆಯಿಂದ ಕೊರಗುತ್ತಾರೆ, ಕೆಲವರು ತುಂಬ ಶೃದ್ಧೆಯಿಂದ ಆತ್ಮವಿಶ್ವಾಸದಿಂದ ಜೀವನವನ್ನು ಉಕ್ಕಿಸುತ್ತಾರೆ. ಇನ್ನು ಉಳಿದವರು ಉತ್ಸಾಹವೂ ಇಲ್ಲದೇ ಕೊರಗೂ ಇಲ್ಲದೇ ಹೇಗೆ ಹೇಗೋ ಜೀವನವನ್ನು ಕಳೆದುಬಿಡುತ್ತಾರೆ. ಈ ವ್ಯತ್ಯಾಸಕ್ಕೆ ಕಾರಣವೇನಿದ್ದಿರಬಹುದು? ಇದು ವಂಶಪಾರಂಪರ್ಯವಾಗಿ ಬಂದದ್ದೇ? ಪರಿಸರದಿಂದಲೇ? ಶಿಕ್ಷಣದಿಂದಲೇ? ಅವರವರಿಗೆ ದೊರೆತ ಅವಕಾಶಗಳು, ಸ್ಪಂದನೆಗಳು ಅವರ ವ್ಯಕ್ತಿತ್ವವನ್ನು ನಿರ್ಮಿಸಿದವೇ? ಇದನ್ನು ಅಭ್ಯಾಸ ಮಾಡಲು ಡಾ. ಲೇಸಿ ಹಾಲ್     ಪ್ರವೃತ್ತರಾದರು. ಅವರು ಮೊದಲು ಸಮಾಜದ ಬೇರೆ ಬೇರೆ ಸ್ತರಗಳಲ್ಲಿರುವ ಸಾವಿರಾರು ಜನರನ್ನು ಸಂಪರ್ಕಿಸಿ ಈ ಕಾರ್ಯದಲ್ಲಿ ಭಾಗಿಯಾಗುವಂತೆ ಕೇಳಿಕೊಂಡರು. ನಂತರ ಅವರೆಲ್ಲರಿಗೆ ಒಂದು ಡೈರಿಯನ್ನು ಕೊಟ್ಟು ಅದರಲ್ಲಿ ತಮ್ಮ ಮನಸ್ಸಿಗೆ ದೊರೆತ ಪ್ರತಿ ಸ್ಪಂದನೆಯನ್ನು ದಾಖಲಿಸಲು ಹೇಳಿದರು. ಬೆಳಿಗ್ಗೆಯಿಂದ ರಾತ್ರಿಯವರೆಗೆ ನಡೆಯುವ ಪ್ರತಿಯೊಂದು ಘಟನೆಯಿಂದ ತಮ್ಮ ಮನಸ್ಸಿಗೆ ದೊರೆತ ಪ್ರತಿಕ್ರಿಯೆ ಎಂಥದ್ದು ಎಂಬುದನ್ನು ಬರೆಯಬೇಕಿತ್ತು. ಬೆಳಿಗ್ಗೆ ಎದ್ದಾಗ ನಿಮ್ಮ ಹೆಂಡತಿ ಕಾಫೀ ನೀಡಿದ ರೀತಿ, ಪೇಪರಿನವನು ಅದನ್ನು ಎಸೆದು ಹೋದ ಬಗೆ, ದೂರದರ್ಶನವನ್ನು ನೋಡುವಾಗ ಪ್ರತಿಯೊಂದು ಚಾನೆಲ್ ತೋರಿಸುವ ಸುದ್ದಿ, ಆ ಸೀರಿಯಲ್‌ಗಳಲ್ಲಿ ತೋರುವ ವಸ್ತುಗಳು, ಮನೆಯಲ್ಲಿ ಆಗಾಗ ಹೋಗುವ ವಿದ್ಯುತ್, ಪೆಟ್ರೋಲ್ ಬೆಲೆ ಏರಿಕೆ, ಆಫೀಸಿಗೆ ತೆರಳುವಾಗ ಆಗುವ ನುಗ್ಗಾಟ, ಕಂಡಕ್ಟರನೊಡನೆ ವಾದ, ಆಫೀಸಿನಲ್ಲಿ ಸಾಹೇಬರ ಸಿಡಿಮಿಡಿ, ಸಹೋದ್ಯೋಗಿಗಳ ಅಸಹಕಾರ ಮತ್ತು ನಿರಾಸಕ್ತಿ, ಊಟ ಮಾಡುವಾಗ ಕಂಡುಬರುವ ವಸ್ತುಗಳ ಕಲಬೆರಕೆ, ಮಕ್ಕಳ ಶಾಲೆಯ ಫೀ ಹೆಚ್ಚಳ, ವರ್ತಮಾನ ಪತ್ರಿಕೆಗಳಲ್ಲಿ ಬರುವ ಸುದ್ದಿಗಳ ಸಾರ ಇವೆಲ್ಲವುಗಳು ತಮ್ಮ ಬುದ್ಧಿಯನ್ನು ಪ್ರಚೋದಿಸಿದ ಪರಿಯನ್ನು ಡೈರಿಯಲ್ಲಿ ಬರೆಯಬೇಕೆಂದು ಕೋರಲಾಗಿತ್ತು. ಡಾ.ಲೇಸಿ ಹಾಲ್‌ರ ಈ ವಿನಂತಿಯನ್ನು ಜನ ಉತ್ಸಾಹದಿಂದ ಒಪ್ಪಿಕೊಂಡು ಸಂಶೋಧನೆಯಲ್ಲಿ ಭಾಗಿಯಾದರು. ಜನ ತಮ್ಮ ಅನುಭವಕ್ಕೆ ಬಂದ ಎಲ್ಲ ಘಟನೆಗಳನ್ನು ದಾಖಲಿಸುತ್ತ ಆ ಘಟನೆಗಳಲ್ಲಿ ಎಷ್ಟು ನಕಾರಾತ್ಮಕ ಅಥವಾ ಸಕಾರಾತ್ಮಕ ಪ್ರಚೋದನೆಯನ್ನು ನೀಡಿದವು ಎಂಬುದನ್ನು ತೋರಿದರು.

ಡಾ.ಲೇಸಿ ಸುಮಾರು ಒಂದೂವರೆ ವರ್ಷದವರೆಗೆ ಈ ಪ್ರಯೋಗವನ್ನು ಮುಂದುವರೆಸಿದರು. ನಂತರ ಈ ದಾಖಲೆಗಳನ್ನೆಲ್ಲ ತರಿಸಿಕೊಂಡು ಕಂಪ್ಯೂಟರಿನಲ್ಲಿ ಶೇಖರಿಸಿ ವಿಶ್ಲೇಷಿಸಿದರು. ತಮ್ಮ ಸಹೋದ್ಯೋಗಿಗಳೊಡನೆ ಚರ್ಚಿಸಿ ತಮ್ಮ ಸಂಶೋಧನೆಯ ಪಾಠವನ್ನು ಪ್ರಕಟಿಸಿದರು. ಅದು ಯಾರಿಗಾದರೂ ಗಾಬರಿಯನ್ನುಂಟು ಮಾಡುವ ವಿಚಾರ. ಸಂಶೋಧನೆಯ ಪ್ರಕಾರ ಬಹಳಷ್ಟು ಜನಕ್ಕೆ ದೊರೆತದ್ದು ಪ್ರತಿಶತ ತೊಂಬತ್ತರಷ್ಟು ನಕಾರಾತ್ಮಕ ಪ್ರಚೋದನೆ. ವೃತ್ತಪತ್ರಿಕೆಯನ್ನೋ, ದೂರದರ್ಶನ ವಾರ್ತೆಯನ್ನೋ ನೋಡಿ, ಅದರಲ್ಲಿ ನಕಾರಾತ್ಮಕವಾದದ್ದೆಷ್ಟು, ಸಕಾರಾತ್ಮಕವಾದದ್ದೆಷ್ಟು ಎಂಬ ಅರಿವಾಗುತ್ತದೆ ಅಲ್ಲವೇ? ನಮಗೆ ದೊರೆತ ಪ್ರಚೋದನೆ ತೊಂಬತ್ತು ಭಾಗ ನಕಾರಾತ್ಮಕವಾಗಿದ್ದರೂ ಪ್ರತಿಶತ ಹತ್ತು ಜನರು ಜೀವನದಲ್ಲಿ ಆಶಾವಾದಿಗಳಾಗಿ, ಸದಾ ಉತ್ಸಾಹಿಗಳಾಗಿ ಇರುವುದು ಹೇಗೆ ಸಾಧ್ಯವಾಯಿತು ಎಂದುಕೊಂಡು ಡಾ. ಲೇಸಿ ಅಂಥ ಜನರ ಜೀವನ ಚರ್ಯೆಯನ್ನು ಆಳವಾಗಿ ಪರಿಶೀಲಿಸಿದರು. ಅವರಿಗೊಂದು ವಿಷಯ ಸ್ಪಷ್ಟವಾಯಿತು. ಯಾರ ವೈವಾಹಿಕ, ಪಾರಿವಾರಿಕ ಜೀವನ ಹೆಚ್ಚು ಭದ್ರವಾಗಿದೆಯೋ, ಯಾರು ಸದಾಕಾಲ ಅತ್ಯಂತ ಸೃಜನಶೀಲವಾದ ಜನರ, ಸಂಸ್ಥೆಗಳೊಡನೆ ಸಂಬಂಧ ಇಟ್ಟುಕೊಂಡಿದ್ದಾರೋ ಅವರೆಲ್ಲ ಜಗತ್ತನ್ನು ಆಶಾವಾದದಿಂದ, ಪ್ರೀತಿಯಿಂದ   ಕಾಣುತ್ತಾರೆ. ಡಾ.ಲೇಸಿ ಹೇಳುತ್ತಾರೆ,  ನಮ್ಮೆದುರು ಒಂದು ಪ್ರಚಂಡವಾದ ಸವಾಲಿದೆ.

ಇದೊಂದು ಕಠಿಣವಾದ ಯುದ್ಧ, ನಮ್ಮ ಮನಸ್ಸು ಬುದ್ಧಿಗಳ ಮೇಲೆ ಇಷ್ಟೊಂದು ಭಾರಿ ಪ್ರಮಾಣದ ನಕಾರಾತ್ಮಕ ಪ್ರಚೋದನೆಗಳ ಪೆಟ್ಟು ಸದಾ ಬೀಳುತ್ತಿದ್ದರೂ ಸಕಾರಾತ್ಮಕವಾಗಿ ಉಳಿಯಲು ನಾವು ಹಟದಿಂದ, ಶ್ರದ್ಧೆಯಿಂದ ಗಟ್ಟಿಯಾದ ನಂಬಿಕೆಗಳಿಗೆ, ಮನುಷ್ಯ ಸಂಬಂಧಗಳಿಗೆ ನಮ್ಮನ್ನು ಬಿಗಿದುಕೊಂಡು ಒಳ್ಳೆಯದನ್ನೇ ಕಾಣುವ ಮೊಂಡತನವನ್ನು ತೋರಬೇಕು. ಇಲ್ಲದಿದ್ದರೆ ಈ ನಕಾರಾತ್ಮಕತೆಯ ಮಹಾಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿಬಿಡುತ್ತೇವೆ . ನಮಗೆ ಬೇರೆ ಯಾವ ದಾರಿಯೂ ಇಲ್ಲ. ನಮ್ಮ ಮುಂದಿನ ಸಮಾಜ ಸುಂದರವಾಗಬೇಕಾದರೆ ಇದನ್ನು ನಾವು ಮಾಡಲೇಬೇಕಲ್ಲವೇ?

No comments:

Post a Comment