ಅವರೊಬ್ಬ ಶಿಕ್ಷಕ. ಅವರು ಜೀವನದ ಬೇರೆ ಮುಖಗಳನ್ನು ನೋಡಿ ನಂತರ ಶಿಕ್ಷಕತ್ವವನ್ನು ಆರಿಸಿಕೊಂಡರೋ ಇಲ್ಲ, ಶಿಕ್ಷಕರಾಗಲೆಂದೇ ಹುಟ್ಟಿದರೋ ಹೇಳುವುದು ಕಷ್ಟ. ಅವರೊಂದು ವಿಶ್ವಕೋಶವೇ ಆಗಿದ್ದರು. ಆಗಿನ್ನೂ ಪ್ರತಿಯೊಂದಕ್ಕೂ ಗೂಗಲ್ ನೋಡುವ ಪ್ರವೃತ್ತಿ ಇರಲಿಲ್ಲ. ಆದರೆ ಯಾವ ಸಮಸ್ಯೆ ಬಂದರೂ ಮೇಷ್ಟರು ಇದ್ದಾರಲ್ಲ, ಅವರನ್ನು ಕೇಳಿದರಾಯಿತು ಎಂಬುದು ಎಲ್ಲರ ಮನಸ್ಸಿಗೂ ಬರುತ್ತಿತ್ತು, ಅವರ ಸಮಸ್ಯೆಗಳಿಗೆ ಉತ್ತರವೂ ದೊರೆಯುತ್ತಿತ್ತು. ಅವರು ಜೀವನದಲ್ಲಿ ಎಲ್ಲವನ್ನೂ ಕಂಡಿದ್ದವರು, ಮನಸ್ಸು ಮಾಗಿದವರು. ಎಂಥ ಕಷ್ಟವೇ ಬರಲಿ, ಎಂಥ ಸಂತೋಷವೇ ಇರಲಿ, ಆಯ್ತು ಅದು ಭಗವಂತನ ಇಚ್ಛೆ ಎಂದು ನಕ್ಕುಬಿಡುವರು. ಅವರಿಗೆ ಇಬ್ಬರು ಮಕ್ಕಳಿದ್ದರು. ದೊಡ್ಡ ಮಗ ಬುದ್ಧಿವಂತ, ಪರಿಶ್ರಮಿ. ಆತ ಕೆಲಸಕ್ಕೆ ಸೇರಿ ತಂದೆಗೆ ಸಹಾಯಕನಾಗುತ್ತಾನೆ ಎಂದು ಎಲ್ಲರೂ ಭಾವಿಸಿದ್ದರು. ಅದೇ ಸಮಯಕ್ಕೆ ಮೇಷ್ಟ್ರು ನಿವೃತ್ತರಾಗಿದ್ದರು. ಅವರದು ತುಂಬ ಮಗುವಿನಂಥ ಸ್ವಭಾವ. ಯಾರೋ ಹೇಳಿದರೆಂದು ತಮ್ಮ ಉಳಿತಾಯದ ಹಣವನ್ನೆಲ್ಲ ಒಂದೆಡೆ ಹೂಡಿ ಎಲ್ಲವನ್ನೂ ಕಳೆದುಕೊಂಡರು. ಈ ಸಮಯದಲ್ಲಿ ಒಂದು ದಿನ ಹಿರಿಯ ಮಗ ಬಂದು, ಅಪ್ಪಾ ನಾನು ಪಾದ್ರಿಯಾಗಬೇಕೆಂದು ನಿರ್ಧರಿಸಿದ್ದೇನೆ. ನನಗೆ ಅದೇ ಹಾದಿ ಸರಿಯೆಂದು ಎನ್ನಿಸಿದೆ, ನಿಮ್ಮ ಅಪ್ಪಣೆಬೇಕು ಎಂದಾಗ ಈ ಮುದುಕರಿಗೆ ಕ್ಷಣಕಾಲ ನಿರಾಸೆಯಾಗಿದ್ದಿರಬೇಕು. ಆದರೆ ತೋರಗೊಡಲಿಲ್ಲ. ಮಗ ಹೊರಟುನ...