ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ನನ್ನ ಅನುಭವಗಳು - ಡಾ. ಹೆಚ್. ನರಸಿಂಹಯ್ಯ

ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ನನ್ನ ಅನುಭವಗಳು

ಮೂವತ್ತಾರು ವರ್ಷಗಳ ಹಿಂದಿನ ನೆನಪು. ಆಗ ನಾನು ಭೌತಶಾಸ್ತ್ರದ ಬಿ. ಎಸ್‌ಸಿ. (ಆನರ್ಸ್) ಮೂರನೆಯ ತರಗತಿಯಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಓದುತ್ತಿದ್ದೆ. ೧೯೪೨ನೆಯ ಇಸವಿ ಆಗಸ್ಚ್ ಮೊದನೆಯ ವಾರ, ತರಗತಿಯಲ್ಲಿ ಒಂದು ವಿಜ್ಞಾನದ ಪ್ರಯೋಗ ನಡೆಸುತ್ತಿದ್ದಾಗ ನನ್ನ ಸಹಪಾಠಿಗಳಾಗಿದ್ದ ಮತ್ತು ಈಗ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿರುವ ಶ್ರೀ ಕೆ. ಎನ್. ಶ್ರೀನಿವಾಸರಾವ್ ಅವರೊಂದಿಗೆ ಮಾತನಾಡುತ್ತಾ " ಇದೇ ನನ್ನ ಕೊನೆಯ ಪ್ರಯೋಗ. ಇನ್ನು ಎರಡು ದಿನಗಳಲ್ಲಿ ಆಗಸ್ಚ್ ೯ನೆ. ತಾರೀಖು ಮಹಾತ್ಮ ಗಾಂಧಿಯವರು ದೇಶದ ಸ್ವಾತಂತ್ರ್ಯಕ್ಕಾಗಿ `ಕ್ವಿಟ್ ಇಂಡಿಯಾ` ಚಳುವಳಿಯನ್ನು ಆರಂಭ ಮಾಡುತ್ತಾರೆ. ನಾನು ಆ ಚಳುವಳಿಯಲ್ಲಿ ಭಾಗವಹಿಸುತ್ತೇನೆ. ಕಾಲೇಜಿಗೆ ಬರುವುದಿಲ್ಲ." ಎಂದೆ. ಚಳುವಳಿಯು ಮೊದಲಾಗುವುದಕ್ಕೆ ಮುಂಚೆಯೇ ಬೊಂಬಾಯಿಯಲ್ಲಿ ಗಾಂಧೀಜಿ, ಪಂಡಿತ್ ಜವಹರ್‌ಲಾಲ್ ನೆಹ್ರೂ, ಸರ್ದಾರ್ ವಲ್ಲಭಾಯಿ ಪಟೇಲ್ ಮತ್ತು ದೇಶದ ಇತರ ಕಾಂಗ್ರೆಸ್ ನಾಯಕರನ್ನು ರಾತ್ರೋರಾತ್ರಿ ಹಠಾತ್ತನೆ ದಸ್ತಗಿರಿ ಮಾಡಿದರು. ದೇಶವೆಲ್ಲಾ ಅಲ್ಲೋಲ ಕಲ್ಲೋಲವಾಯಿತು. ಕೇಂದ್ರೀಕೃತ ಚಳುವಳಿಗೆ ಅವಕಾಶವೂ ಇಲ್ಲ, ನಾಯಕರೂ ಇಲ್ಲ. ಸ್ವಯಂ ಸ್ಪೂರ್ತಿಯಿಂದ ಹಳ್ಳಿ ಹಳ್ಳಿಯಲ್ಲಿಯೂ ಪ್ರತಿಭಟನೆ, ಅಂದೋಳನ ಮೊದಲಾಯಿತು. ಮೆರವಣಿಗೆ, ಸಭೆಗಳನ್ನು ನಡೆಸುವುದು, ಪ್ರತಿಬಂಧಕಾಜ್ಞೆಯನ್ನು ಮುರಿಯುವುದು, ಲಾಠಿ ಏಟು ತಿನ್ನುವುದು, ಜೈಲಿಗೆ ಹೋಗುವುದು ಇವು ಸ್ವಾತಂತ್ರ್ಯ ಪ್ರೇಮಿಗಳ ದಿನಚರಿ. ದೇಶದ ಎಲ್ಲ ಕಡೆಯಲ್ಲೂ ವಿಶೇಷ ಉತ್ಸಾಹದಿಂದ ಆತ್ಮ ವಿಶ್ವಾಸದಿಂದ ಮುಂದುವರಿಯಿತು.
ಅಹಮ್ಮದಾಬಾದ್ ನಗರದಲ್ಲಿ, ನನಗೆ ಜ್ಞಾಪಕವಿದ್ದ ಹಾಗೆ ಸುಮಾರು ಐದು ತಿಂಗಳು ಪ್ರತಿನಿತ್ಯವೂ ಗೋಳಿಬಾರ್ ನಡೆಯಿತು. ಜನರ ಅದಮ್ಯ ಉಗ್ರ ಪ್ರತಿಭಟನೆಗೆ ಇದು ಸಾಕ್ಷಿ. ಆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಿದ್ಯಾರ್ಥಿಗಳ ಪಾತ್ರವಂತೂ ತುಂಬಾ ಶ್ಲಾಘನೀಯವಾದದ್ದು, ಮಹತ್ತರವಾದದ್ದು. ಆಗಿನ ಕೇಲವೇ ಆಂದೋಳನಗಳ ಕಾಲ, ಸದಾ ಸರ್ಕಾರಕ್ಕೂ ಸ್ವಾತಂತ್ರ್ಯ ಪ್ರೇಮಿಗಳಿಗೂ ಒಂದಲ್ಲ ಒಂದು ಕಾರಣದಿಂದ ಘರ್ಷಣೆ. ಗಾಂಧೀಜಿ ಮತ್ತು ಉಳಿದ ಅಪ್ರತಿಮ ನಾಯಕರುಗಳ ಹೇಳಿಕೆಗಳು ಮತ್ತು ಭಾಷಣಗಳನ್ನು ಪ್ರತಿ ನಿತ್ಯ ತುಂಬಾ ಆಸಕ್ತಿಯಿಂದ ಓದಿ ವಿದ್ಯಾರ್ಥಿಗಳು ಸ್ಫೂರ್ತಿಗೊಂಡಿದ್ದರು. ಧೀಮಂತವಾಗಿ ಹೋರಾಟ ನಡೆಸಿ ಇಂಗ್ಲೀಷರನ್ನು ಓಡಿಸಬೇಕೆಂಬ ಮಹೋನ್ನತ ಧ್ಯೇಯ.
ಗಾಂಧೀಜಿಯವರ ರಾಷ್ಟ್ರೀಯ ಪ್ರಜ್ಞೆಯಲ್ಲಿ ಮೊದಲನೆಯ ಪಾಠ ನನಗೆ ದೊರೆತಿದ್ದು ನಾನು ಮಿಡಲ್ ಸ್ಕೂಲಿನಲ್ಲಿ ಓದುತ್ತಿದ್ದಾಗ, ನನ್ನ ವಿದ್ಯಾಗುರುಗಳಾದ ದಿವಂಗತ ಶ್ರೀ ಎಸ್.ವೆಂಕಟಾಚಲಯ್ಯನವರು ಮತ್ತು ಶ್ರೀ ಎಂ. ಎಸ್ ನಾರಾಯಾಣ ರಾಯರಿಂದ. ಆಗಲೇ ನನಗೆ ಚರಕದಿಂದ ನೂಲುವುದು, ಖಾದಿ ಹಾಕಿಕೊಳ್ಳುವುದು ಮತ್ತು ಹಿಂದಿ ಕಲಿಯುವ ಅಭ್ಯಾಸಗಳು ಬೆಳೆದವು. ಈ ನನ್ನ ಖಾದೀ ಷರಟು, ಪಂಚೆ, ಟೋಪಿ ಉಡುಪು ಯಾವ ರಾಜಕೀಯ ಸಿದ್ಧಾಂತದ ಚಿಹ್ನೆಯೂ ಅಲ್ಲ. ಇದಕ್ಕೆ ಮುಂಚೆ ಹಲವು ಚಳುವಳಿಗಳನ್ನು ನಡೆಸಿ ಕೊನಗೆ ರೋಸಿ ಹೋಗಿ ಇದೇ ಕೊನೆಯ ಅಂದೋಳನ, ಬ್ರಿಟಿಷರೇ ಭಾರತವನ್ನು ಬಿಟ್ಟು ತೊಲಗಿ, `ಕ್ವಿಟ್ ಇಂಡಿಯಾ` ಎಂದು ನೈತಿಕ ಆಧಾರದ ಮೇಲೆ ಬ್ರಿಟಿಷರಿಗೆ ಆಜ್ಞೆ ಮಾಡಿದರು. ಇದನ್ನು ಕಾರ್ಯಗತ ಮಾಡುವ ಉದ್ದೇಶದಿಂದ ಭಾರತೀಯರಿಗೆ `ಮಾಡು ಅಥವಾ ಮಡಿ`- ಡು ಆರ್ ಡೈ ಎಂಬ ಆದೇಶವನ್ನು ಕೊಟ್ಟರು.
ಮೈಸೂರು ಸಂಸ್ಥಾನದಲ್ಲಿ ಚಳುವಳಿ ಬಿರುಸಿನಿಂದ ಸಾಗಿತು. ಶಾಲಾ ಕಾಲೇಜುಗಳು ಮುಚ್ಚಲ್ಪಟ್ಟವು.
ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಮಾರ್ಕೆಟ್‌ನ ತನಕ ಸುಮಾರು ಒಂದು ಮೈಲಿ ಉದ್ದದ, ವಿದ್ಯಾರ್ಥಿಗಳ ಬೃಹತ್ ಮೆರವಣಿಗೆಗಳು; ಸಭೆಗಳು ಅದೇ ಪ್ರಮಾಣದಲ್ಲಿ. ಪ್ರತಿಬಂಧಕಾಜ್ಞೆ ಉಲ್ಲಂಘಿಸಿದಾಗ ನಗರದ ಮುನಿಸಿಪಲ್ ಗಡಿಯಿಂದ ಆಚೆಗೆ ಇದ್ದ ಬನಶಂಕರಿ ಪ್ರದೇಶದಲ್ಲಿ ಸಭೆ, ಭಾಷಣಗಳು.
ಆಗಸ್ಟ್ ಮೂರನೆಯ ವಾರ, ವಿಶ್ವೇಶ್ವರ ಪುರದ ಸಜ್ಜನರಾವ್ ಸರ್ಕಲ್‌ನಲ್ಲಿ ಒಂದು ದಿನ ಸಭೆ ನಡೆಸಬೇಕೆಂಬ ಪ್ರಯತ್ನದಲ್ಲಿ, ಹಲವಾರು ವಿದ್ಯಾರ್ಥಿಗಳು ಮನೆಗೆ ಸೈಕಲ್ ಮೇಲೆ ಹೋಗಿ ಬೆಳಿಗ್ಗೆ ಎಂಟು ಘಂಟೆಯ ಹೊತ್ತಿಗೆ ಆ ಸರ್ಕಲ್ ಬಳಿ ಬಂದೆ. ಒಂದು ಪೋಲೀಸ್ ವ್ಯಾನ್ ಭರದಿಂದ ಬಂದು ನನ್ನ ಸೈಕಲ್‌ಗೆ ಅಡ್ಡಲಾಗಿ ನಿಂತಿತು. ಪೋಲಿಸ್ ಅಧಿಕಾರಿ ಮತ್ತು ಕೆಲವು ಕಾನ್‌ಸ್ಟೇಬಲ್‌ಗಳು ವ್ಯಾನಿನಿಂದ ಇಳಿದರು. ಅಧಿಕಾರಿ `ನಿನಗೆ ಮಾಡೋಕೆ ಕೆಲಸ ಇಲ್ವೆ? ವಿದ್ಯಾರ್ಥಿಯಾಗಿದ್ದೀಯ, ಕಾಲೇಜಿಕೆ ಹೋಗಿ ಓದಿಕೋ. ರಾಮಕೃಷ್ಣ ಸ್ಟೂಡೆಂಟ್ ಹೋಂನಲ್ಲಿ ಬಿಟ್ಟಿ ಊಟ ಮಾಡ್ತಾ ಇದೇ ಕೆಲಸಾನೆ ಮಾಡೋದು. ಹುಷಾರ್` ಎಂದು ಎಚ್ಚರಿಕೆ ಕೊಟ್ಟರು. ಅದಕ್ಕೆ ನಾನು `ನಿಮ್ಮ ಕೆಲಸ ನೀವು ಮಾಡಿ ಸಾರ್, ನನ್ನ ಕೆಲಸ ನಾನು ಮಾಡ್ತೇನೆ ` ಎಂದೆ.
ಅವರಿಗೆ ಸಹಜವಾಗಿಯೇ ಕೋಪಬಂತು. `ನನ್ನ ಕೆಲಸ ಮಾಡಬೇಕೆಂದು ಬುದ್ಧಿ ಹೇಳ್ತೀಯಾ, ಮಾಡ್ತೇನೆ ನೋಡು. ನಿನ್ನನ್ನು ದಸ್ತಗಿರಿ ಮಾಡಿದ್ದೇನೆ. ವ್ಯಾನ್ ಹತ್ತು` ಎಂದರು. ಸೈಕಲ್ ಅನ್ನು ಅಲ್ಲಿ ನೆರದಿದ್ದವರ ಪೈಕಿ ಪರಿಚಯವಿರುವ ಒಬ್ಬ ಸ್ನೇಹಿತನಿಗೆ ಕೊಟ್ಟು, ಶ್ರೀ ರಾಮಕೃಷ್ಣ ಸ್ಟೂಡೆಂಟ್ ಹೋಂಗೆ ತಲುಪಿಸುವಂತೆ ಕೋರಿ ವ್ಯಾನಿನಲ್ಲಿ ಕೆಂಗೇರಿ ಗೇಟ್ ಪೋಲಿಸ್ ಠಾಣೆಗೆ ಬಂದೆ. ಅಲ್ಲಿದ್ದ ಉನ್ನತ ಪೋಲೀಸ್ ಅಧಿಕಾರಗಳು `ಕ್ಷಮಾಪಣೆ ಪತ್ರ ಕೊಡಿ, ಬಿಟ್ಟು ಬಿಡುತ್ತೇವೆ` ಎಂದು ಸೂಚಿಸಿದರು. ಅದನ್ನು ನಾನು ನಿರಾಕರಿಸಿದ ಮೇಲೆ ಅದೇ ವ್ಯಾನಿನಲ್ಲಿ ಸೆಂಟ್ರಲ್ ಜೈಲಿಗೆ ಕಳುಹಿಸಿದರು.
ಜೈಲಿನಲ್ಲಿ ಮೊಟ್ಟಮೊದಲು ನನ್ನನ್ನು ನಮ್ಮ ಗೌರಿಬಿದನೂರು ತಾಲ್ಲೂಕಿನ ಮುಖಂಡರಾದ ದಿವಂಗತ ಶ್ರೀ ಎನ್.ಸಿ. ನಾಗಯ್ಯರೆಡ್ಡಿಯವರು `ಏಮಯ್ಯ ಒಗಡೆ ವಸ್ತಿವಿ, ಉಪ್ಪಿಂಡಿ ತಿನ್ದಾಮು ರಾ` (ಏನಯ್ಯ ಒಬ್ಬನೇ ಬಂದೆ, ಉಪ್ಪಿಟ್ಟು ತಿನ್ನೋಣ, ಬಾ) ಎಂದು ಮುಗುಳುನಗೆಯಿಂದ ಸ್ವಾಗತಿಸಿದರು. ಸೆಂಟ್ರಲ್ ಜೈಲು ಕಾಂಗ್ರೆಸ್ ನಾಯಕರಿಂದ ಮತ್ತು ಕೆಲ ವಿದ್ಯಾರ್ಥಿಗಳಿಂದ ತುಂಬಿ ಹೋಗಿತ್ತು. ವಿದ್ಯಾರ್ಥಿಗಳನ್ನು ಕಾಂಗ್ರೆಸ್‌ನವರೊಂದಿಗಿಟ್ಟರೆ ವಿದ್ಯಾರ್ಥಿಗಳ ಅಭಿಪ್ರಾಯಗಳು ರಾಜಕೀಯ ವಿಚಾರಗಳಲ್ಲಿ ಖಚಿತವಾಗಬಹುದೆಂಬ ಶಂಕೆಯಿಂದ ಅಲ್ಲಿದ್ದ ಸುಮಾರು ೩೫ ಮಂದಿ ವಿದ್ಯಾರ್ಥಿಗಳನ್ನು ಬೆಂಗಳೂರಿಗೆ ಸುಮಾರು ೨೦ ಮೈಲಿ ದೂರವಿರುವ ಅತ್ತಿಬೆಲೆ ಛತ್ರದಲ್ಲಿ ಕೂಡಿಹಾಕಿದರು. ಕನಿಷ್ಟ ಸೌಲಭ್ಯಗಳ ಅಭಾವದ ಪ್ರತಿಭಟಿಸಿ ಒಂದೆರಡು ದಿನ ಉಪವಾಸ ಮಾಡಿದ ಮೇಲೆ ಪುನಃ ಬೆಂಗಳೂರು ಸೆಂಟ್ರಲ್ ಜೈಲಿಗೆ ವರ್ಗಾಯಿಸಿ, ಅದಾದ ಮೂರನೆಯ ದಿನ ಸುಮಾರು ಇನ್ನೂರು ವಿದ್ಯಾರ್ಥಿಗಳನ್ನು ವ್ಯಾನುಗಳಲ್ಲಿ ಮೈಸೂರು ಜೈಲಿಗೆ ರವಾನಿಸಿದರು.
ಮೈಸೂರು ಜೈಲಿನಲ್ಲಿ ಯಾವ ರಾಜಕೀಯ ಖೈದಿಗಳೂ ಇರಲಿಲ್ಲ, ಸುಮಾರು ೩೦೦ ಮಂದಿ ವಿದ್ಯಾರ್ಥಿ ಬಂದಿಗಳು. ನಾವೆಲ್ಲಾ ವ್ಯವಸ್ಥಿತ ನಿತ್ಯ ಕಾರ್ಯಕ್ರಮಗಳಲ್ಲಿ ತೊಡಗಿದ್ದೆವು. ಪ್ರತಿಭಟನೆ, ಸಭೆ, ಚರ್ಚೆ, ಸ್ವಾತಂತ್ರ್ಯಗೀತೆಗಳ ಸಾಮೂಹಿಕ ಗಾಯನ, ಪುಸ್ತಕಗಳನ್ನು ಓದಿಕೊಳ್ಳುವುದು, ಸಂಜೆ ಖೋ ಖೋ, ಕಬ್ಬಡಿ ಆಟ, ಊಟ. ಉಪಹಾರ ಸಮರ್ಪಕವಾಗಿದ್ದವು. ಪ್ರಸಿದ್ಧ ಹೋಟೆಲ್ ಉದ್ಯಮಿಗಳಾಗಿದ್ದ ದಿವಂಗತ ಶ್ರೀ ಬಿ. ವಿ. ರಾಮಯ್ಯನವರಿಗೆ ಆ ಕೆಲಸ ವಹಿಸಲಾಗಿದ್ದಿತು. ೨೦ ಮಂದಿಗೆ ವಾಸಕ್ಕೆ ಆಗುವಷ್ಟು ವಿಶಾಲವಾದ ಕೊಠಡಿ. ಮಲಗಲು ಅನುಕೂಲಕ್ಕಾಗಿ ಒಬ್ಬೊಬ್ಬರಿಗೆ ಒಂದಡಿ ಎತ್ತರದ ಆಯಾಕಾರದ ದಿನ್ನೆ, ತಣ್ಣೀರು ಸ್ನಾನ, ಜೈಲಿನಲ್ಲಿಯೇ ಆಯಷ್ಕರ್ಮ. ಶಾಲೆವಿದ್ಯಾರ್ಥಿಗಳು ಎಂದು ಸರ್ಕಾರ ಮತ್ತು ಜೈಲಿನ ಅಧಿಕಾರಿಗಳು ಸಾಮಾನ್ಯವಾಗಿ ಉದಾರ ಮನೋಭಾವದಿಂದಲೇ ನಮ್ಮಗಳ ಯೋಗಕ್ಷೇಮಗಳ ಕಡೆ ಗಮನಕೊಟ್ಟಿದ್ದರು. ಏನೇ ಆಗಲಿ, ಜೈಲು, ಜೈಲೆ.
ಜೈಲಿನ ಅಧಿಕಾರಗಳಿಗೂ ವಿದ್ಯಾರ್ಥಿಗಳಿಗೂ ಪದೇ ಪದೆ ಕಿರಿಕಿರಿ ಉಂಟುಮಾಡುವ ಸಮಸ್ಯೆಗಳಿರುತ್ತಲೇ ಇದ್ದವು. ಒಂದು ಗುಂಪಿನ ವಿದ್ಯಾರ್ಥಿಗಳಿಗೆ ಕೆಲವು ಅನುಕೂಲಗಳಿರಲಿಲ್ಲ. ಒಂದು ದಿನ ತಮ್ಮ ಮೇಲೆ ಹಾಕಿದ್ದ ಮೊಕದ್ದಮೆಯ ವಿಚಾರಣೆಗಾಗಿ ಮೈಸೂರಿನಲ್ಲಿರುವ ಕೋರ್ಟಿಗೆ ಹೋಗಿ, ಸಂಜೆ ಜೈಲಿನ ಮಹಾದ್ವಾರಕ್ಕೆ ವಾಪಾಸು ಬಂದರು. ಆ ವಿದ್ಯಾರ್ಥಿಗಳಿಗೂ ಮತ್ತು ಅವರನ್ನು ಕರೆದುಕೊಂಡು ಹೋಗಿದ್ದ ಮೇಲ್ವಿಚಾರಕರಿಗೂ ಒಂದೆರಡು ವಿಷಯಗಳ ಬಗ್ಗೆ ವಿರಸ ಉಂಟಾಗಿತ್ತು. ಇವೆಲ್ಲಾ ಕೂಡಿ ಅಸಮಾಧಾನ ಹೆಚ್ಚಿತು. ತಮ್ಮ ಬೇಡಿಕೆಗಳು ಇತ್ಯರ್ಥವಾಗುವ ತನಕ ತಾವು ಜೈಲಿನೊಳಕ್ಕೆ ಬರುವುದಿಲ್ಲವೆಂದು ಪ್ರತಿಭಟಿಸಿ, ಮಹಾದ್ವಾರದ ಮುಂದೆ ವ್ಯಾನಿನಲ್ಲಿಯೇ ಕುಳಿತಿದ್ದರು. ಸಮಾಜಾರ ನಮಗೆ ಗೊತ್ತಾದ ಮೇಲೆ ನಮ್ಮ ಸ್ನೇಹಿತರಿಗೆ ಸಹಾನುಭೂತಿಯನ್ನು ತೋರಿಸುವ ಪ್ರಯುಕ್ತ ನಾವೆಲ್ಲಾ ಮಹಾದ್ವಾರದ ಕೆಳಭಾಗದಲ್ಲಿ ಕುಳಿತುಕೊಂಡೆವು.
ನಭೋಮಂಡಲವನ್ನು ಭೇದಿಸುವಂತೆ ಘೋಷಣೆಗಳ ಝೇಂಕಾರ, ದೇಶಭಕ್ತಿ ಗೀತೆಗಳ ವೃಂದಗಾನ, ನಮ್ಮಿಂದ ಆಚೆ ನಮ್ಮ ಒಡನಾಡಿಗಳ ಪ್ರತಿಧ್ವನಿ. ಮೌನವೀಕ್ಷಕರು ಜೈಲಿನ ಅಧಿಕಾರಿಗಳು, ಸಿಬ್ಬಂದಿ. ಸಂಜೆ ಮುಗಿಯಿತು, ಕಾಲ ಸಾಗಿತು. ರಾತ್ರಿಯಾಯಿತು. ಬೇಡಿಕೆಗಳಿಗೆ ಜೈಲಿನ ಅಧಿಕಾರಿಗಳು ಜಗ್ಗಲಿಲ್ಲ, ನಾವೂ ಜಗ್ಗಲಿಲ್ಲ. ಹನ್ನೊಂದು ಗಂಟೆಯ ಹೊತ್ತಿಗೆ ಸುಮಾರು ೧೦೦ ಮಂದಿ ಪೋಲೀಸರು ಪ್ರವೇಶಿಸಿ, ನಮ್ಮ ಮುಂದೆ ಸಾಲಾಗಿನಿಂತರು. ನಡುರಾತ್ರಿ ಸಮೀಪಿಸಿತು. ಬಿಕ್ಕಟ್ಟು ಬಗೆಹರಿಯಲಿಲ್ಲ. ಕಾಲಮಿಂಚಿದಂತೆ ಕಾವು ಮತ್ತು ಹುಮ್ಮಸ್ಸು ಹೆಚ್ಚಾದರೂ ಸುಸ್ತಿನಿಂದ ಮುಖಗಳು ಬಾಡಿದುವು. ಅಧಿಕಾರಿಗಳ ಬಿಗಿ ಮನೋಭಾವ ಅವರ ಮುಖದಲ್ಲೇ ಎದ್ದು ಕಾಣುತ್ತಿತ್ತು. ಪೋಲಿಸರದು ಗಡಸುಮುಖ.
ಪರಿಸ್ಥಿತಿ ಬದಲಾಯಿಸಿತು; ಬಿಗಡಾಯಿಸಿತು. ಆಚೆ ಇದ್ದ ವಿದ್ಯಾರ್ಥಿ ಸ್ನೇಹಿತರನ್ನು ಒಬ್ಬೊಬ್ಬರಾನ್ನಾಗಿ ಜೈಲಿನ ಕಿರುದ್ವಾರದ ಮೂಲಕ ಒಳಕ್ಕೆ ತಳ್ಳಿದರು. ಹಠಾತ್ತನೆ `ಚಾರ್ಜ` ಎಂಬ ಶಬ್ದ ಕೇಳಿಸಿತು. ಆ ಪೋಲೀಸಿನವರು ಅಸಹಾಯಕ ವಿದ್ಯಾರ್ಥಿಗಳ ಮೇಲೆ ಬಲವಾದ ಲಾಠಿ ಪ್ರಹಾರ ಮಾಡಿದರು. ನಾವೆಲ್ಲಾ ಕುಯ್ಯೋ ಮರ್ರೋ ಅಂತ ಆರ್ತನಾದ ಮಾಡಿಕೊಂಡು ದಿಕ್ಕು ಪಾಲಾಗಿ ಓಡಿ, ಬೆನ್ನು ಹತ್ತಿ ಬರುತ್ತಿರುವ ಪೋಲೀಸಿನವರ ಏಟುಗಳಿಂದ ಅಷ್ಟಷ್ಟು ತಪ್ಪಿಸಿಕೊಂಡು ಬದುಕಿದೆಯಾ ಬಡಜೀವವೇ ಎಂದು ಯಾವ ಕೊಠಡಿ ತೆಗೆದಿದ್ದರೆ ಆ ಕೊಠಡಿಗೆ ಓಡುತ್ತಾ ಬೆದರುತ್ತಾ ಬಾಗಿಲು ಮುಚ್ಚಿ ಬಲವಾಗಿ ಅಗಳಿ ಹಾಕಿಕೊಂಡೆವು. ಎಲ್ಲವೂ ಮಿಂಚಿನ ವೇಗದಲ್ಲಿ ನಡೆದು ಹೋಯಿತು. ನೇರವಾಗಿ ಏಟಿಗೆ ಸಿಕ್ಕದವರಿಗೆಯೇ ತುಂಬಾ ಹೊಡೆತ, ಗಾಯಗಳು. ಕೆಲವರಿಗೆ ತಲೆ ಒಡೆಯಿತು, ಮತ್ತೆ ಕೆಲವರಿಗೆ ಮೂಳೆ ಮುರಿಯಿತು. ಬಾಸುಂಡೆಗಳು ಬಂದವು. ಶಕರಂಪ್ಪ ಎಂಬ ವಿದ್ಯಾರ್ಥಿ ಮೂರು ದಿನಗಳಾದ ಮೇಲೆ ಸತ್ತೇ ಹೋದನು.
ಆ ನಿಶಿ ರಾತ್ರಿ ಭೀಕರ ಲಾಠಿ ಪ್ರಹಾರವಾದ ಬಳಿಕ ಹಲವು ವಿದ್ಯಾರ್ಥಿಗಳು ಧೃತಿಗೆಟ್ಟರು. ತಾಯಿ ತಂದೆಗಳಿಗೆ ವಿಪರೀತ ಕಾತರ, ಕಳವಳ ಅವರ ಮುಚ್ಚಳಿಕೆ, ಮತ್ತು ವಿದ್ಯಾರ್ಥಿಗಳ ಕ್ಷಮಾಪಣೆಯ ಆಧಾರದ ಮೇಲೆ ಹಲವು ವಿದ್ಯಾರ್ಥಿಗಳು ಬಿಡುಗಡೆ ಪಡೆದುಕೊಂಡರು.
ಆ ಘಟನೆಯಾದ ಕೆಲವು ದಿನಗಳ ಮೇಲೆ ನಮ್ಮಲ್ಲಿ ಹಲವರನ್ನು ಈಗ ಮಾನಸ ಗಂಗೋತ್ರಿಯ ಸಮೀಪದಲ್ಲಿರುವ ಒಂದು ಖಾಸಗಿ ಕಟ್ಟಡಕ್ಕೆ ಸಾಗಿಸಿದರು. ಡಿಸೆಂಬರ್ ತಿಂಗಳಲ್ಲಿ ಪಕ್ಷಾತೀತ ಮುಖಂಡರುಗಳ ಸಂಧಾನದಿಂದ ಎಲ್ಲಾ ವಿದ್ಯಾರ್ಥಿಗಳ ಬೇಷರತ್ ಬಿಡುಗಡೆಯಾಯಿತು.
ಚಳುವಳಿಯ ಉದ್ಧೇಶ ಸಾಧನೆಯಾಗದಿದ್ದ ಪ್ರಯುಕ್ತ ನಾನು ಕಾಲೇಜಿಗೆ ಹೋಗಲಿಲ್ಲ. ಬಹುಮಂದಿ ಕಾಲೇಜಿಗೆ ಹೋಗಿ ತಮ್ಮ ವ್ಯಾಸಂಗವನ್ನು ಮುಂದುವರಿಸಿದರು. ಜೈಲಿನಿಂದ ಬಂದ ಮೇಲೆ ನಾನು ನ್ಯಾಷನಲ್ ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗ ಆಶ್ರಯ ಕೊಟ್ಟಿದ್ದ ನ್ಯಾಷನಲ್ ಹೈಸ್ಕೂಲಿನ ಅಂಗವಾದ ಬಡ ಹುಡುಗರ ವಿದ್ಯಾರ್ಥಿನಿಲಯದಲ್ಲಿಯೇ ಇರಲು ಅವಕಾಶ ಸಿಕ್ಕಿತು. ಅದರ ಮೇಲ್ವಿಚಾರಣೆಯಲ್ಲಿ ಸಹಾಯಕನಾಗಿ, ಊಟ, ವಸತಿಗಳ ಖರ್ಚಿಗಾಗಿ ನಾಲ್ಕೈದು ಪೆವೇಟ್ ಟ್ಯೂಷನ್ ಇಟ್ಟುಕೊಂಡಿದ್ದೆ.
ಗಾಂಧೀಜಿಯವರನ್ನು ದಸ್ತಗಿರಿ ಮಾಡಿದ ಮೇಲೆ ಶ್ರೀಮತಿ ಕಸ್ತೂರ್‌ಬಾ ಗಾಂಧಿ ಮತ್ತು ಗಾಂಧೀಜಿಯವರ ಕಾರ್ಯದರ್ಶಿ ಶ್ರೀ ಮಹದೇವ ದೇಸಾಯಿಯವರೊಂದಿಗೆ ಪೂನಾದಲ್ಲಿ ಆಗಾಖಾನ್ ಅರಮನೆಯಲ್ಲಿಟ್ಟದ್ದರು. ಗಾಂಧೀಜಿಯವರಿಗೆ ಅರಮನೆ, ಗುಡಿಸಲು ಎಲ್ಲಾ ಒಂದೆ. ೧೯೪೩ ನೇ ಇಸವಿ ಫ್ರೆಬ್ರವರಿ ೧೦ನೆಯ ತಾರೀಖು ಗಾಂಧಿಯವರು ೨೧ ದಿನಗಳ ಉಪವಾಸವನ್ನು ಮೊದಲು ಮಾಡಿದರು. ಅವರ ಉಪವಾಸಕ್ಕೆ ಸಹಾನುಭೂತಿ ತೋರಿಸುವ ಮತ್ತು ಸರ್ಕಾರದ ಧೋರಣೆಯನ್ನು ಪ್ರತಿಭಟಿಸುವ ಉದ್ಧೇಶದಿಂದ ದೇಶದ ಮೂಲೆ ಮೂಲೆಗಳಿಂದ ಹಲವಾರು ತಂಡಗಳು ಪೂನಾಕ್ಕೆ ಹೋಗಿ ಪ್ರದರ್ಶನಗಳನ್ನು ನಡೆಸುವ ಪ್ರಯತ್ನಗಳು ನಡೆದವು. ಸರ್ಕಾರ ಇವುಗಳನ್ನು ತಡೆಯುವದಕ್ಕಾಗಿ ಪ್ರತಿಬಂಧಕಾಜ್ಞೆಯನ್ನು ಜಾರಿಗೆ ತಂದಿತು. ಈ ಪ್ರತಿಬಂಧಕಾಜ್ಞೆಯನ್ನು ವ್ಯವಸ್ಥಿತಿವಾಗಿ ಮುರಿದ ಮೊದಲನೆಯ ತಂಡದ ನಾಯಕರು, ಆಗ ಬೊಂಬಾಯಿ ನಗರದ ಮೇಯರ್ ಮತ್ತು ಕಾಂಗ್ರೆಸ್ ಸೋಷಿಯಲಿಸ್ಟ್ ಪಾರ್ಟಿ ಮುಖಂಡರಾಗಿದ್ದ ಶ್ರೀ ಮೀನೂಮಸಾನಿಯವರು. ಬೆಂಗಳೂರಿನಿಂದ ಒಂದು ತಂಡ ಹೋಗಬೇಕೆಂಬ ಪ್ರಯತ್ನ ನಡೆಯಿತು. ನನ್ನ ಜೊತೆಗೆ ಇನ್ನೂ ಏಳು ಮಂದಿ ಸ್ನೇಹಿತರನ್ನು ಹುಡುಕಿದೆನು. ನಾವೆಂಟು ಮಂದಿ ಪೂನಾಕ್ಕೆ ಹೋಗಿ ಪ್ರತಿಬಂಧಕಾಜ್ಞೆಯನ್ನು ಮುರಿಯಬೇಕೆಂದು ನಿಶ್ಟಯಿಸಿದೆವು. ಭೂಗತ ನಾಯಕರ ಸಹಾದಿಂದ ಬೆಂಗಳೂರು-ಪೂನಾಕ್ಕೆ ರೈಲಿನಲ್ಲಿ ಹೋಗಿ ಬರುವಷ್ಟು ಹಣದ ಸಹಾಯ ಸಿಕ್ಕಿತು. ಒಂದು ದಿನ ಬೆಳಗ್ಗೆ ಬೆಂಗಳೂರಿನಿಂದ ರೈಲಿನಲ್ಲಿ ಹೊರಟು ಗುಂತಕಲ್ ಮಾರ್ಗವಾಗಿ ಮಾರನೆಯ ದಿನ ಸಂಜೆ ಪೂನಾಕ್ಕೆ ತಲುಪಿದೆವು. ಯಾವ ಕಡೆ ಹೋಗಬೇಕು ಎಂದು ತೋಚಲಿಲ್ಲ. ನಮ್ಮಲ್ಲಿ ಯಾರೂ ಪೂನಾ ನೋಡಿರಲಿಲ್ಲ. ವಿಚಾರಿಸಿಕೊಂಡು ಜನನಿಬಿಡವಾದ ಪ್ರದೇಶಕ್ಕೆ ಹೋದೆವು. ಪಾದಾಜಾರಿಗಳ ರಸ್ತೆಯಲ್ಲಿ ನಾವು ತಂದಿದ್ದ ಘೋಷಣೆಗಳನ್ನು ಬರೆದಿದ್ದ ಬಟ್ಟೆಯ ಬ್ಯಾನರ್ ಅನ್ನು ಹಿಡಿದುಕೊಂಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಕೆಲವು ಗಜ ದೂರ ಹೋಗುವಷ್ಟರಲ್ಲಿಯೇ ಒಂದು ಪೋಲೀಸ್ ವ್ಯಾನ್ ಧಾವಿಸಿಬಂದು ನಮ್ಮ ಬಳಿ ನಿಂತಿದ್ದೇ ತಡ, ಪೋಲೀಸ್ ಅಧಿಕಾರಿಗಳು, ಪೇದೆಗಳು ದಡದಡ ಇಳಿದು ನಮ್ಮನ್ನು ಸುತ್ತುಗಟ್ಟಿದರು. ಅಧಿಕಾರಿಗಳು ನಮ್ಮನ್ನು ಸುತ್ತುಗಟ್ಟಿದರು. ಅಧಿಕಾರಿಗಳು ನಿಮ್ಮನ್ನೆಲ್ಲಾ ದಸ್ತಗಿರಿ ಮಾಡಿದ್ದೇವೆ, ಹತ್ತಿ ವ್ಯಾನ್ ಎಂದು ಇಂಗ್ಲೀಷ್‌ನಲ್ಲಿ ಆಜ್ಞಾಪಿಸಿದರು. ತುಂಬಾ ಸಂತೋಷದಿಂದ, ಉತ್ಸಾಹದಿಂದ ವ್ಯಾನಿನಲ್ಲಿ ಪ್ರವೇಶಿಸಿ ಕುಳಿತುಕೊಂಡೆವು. ನಾವು ಬಂದ ಕೆಲಸವೆಲ್ಲಾ ಆಯಿತಲ್ಲಾ ಎನ್ನುವುದೇ ಸಮಾಧಾನ. ಪ್ರತಿಬಂಧಕಾಜ್ಞೆ ಮುರಿದದ್ದಾಯಿತು, ಸರ್ಕಾರದ ಆತಿಥ್ಯ ಸಿಕ್ಕಿತು. ದಸ್ತಗಿರಿ ಆಗದೇ ಇದ್ದರೆ ನಮಗೆ ಊಟ, ವಸತಿಗೆ ದೂರದ ಕಾಣದ ಊರಿನಲ್ಲಿ ತುಂಬಾ ಕಷ್ಟವಾಗುತ್ತಿತ್ತು.
ನಾವು ಕ್ಷಮಾಪಣೆ ಪತ್ರ ಕೊಟ್ಟರೆ ಬಿಡುಗಡೆ ಮಾಡುತ್ತೇವೆಂದು ಪೋಲೀಸ್ ಅಧಿಕಾರಿಗಳು ತಿಳಿಸಿದರು. ಸಹಜವಾಗಿಯೇ ನಾವು ಸಮ್ಮತಿಸಲಿಲ್ಲ. ಸ್ವಲ್ಪ ಹೊತ್ತಾದ ಮೇಲೆ ಒಂದು ಬೃಹತ್ ಕಟ್ಟಡದ ಬಳಿ ಬಂದಿಳಿದೆವು. ಆ ಕಟ್ಟಡದ ಮೇಲೆ, ಯರವಾಡ ಸೆಂಟ್ರಲ್ ಜೈಲ್ ಎಂದು ಬರೆದಿದ್ದನ್ನು ನೋಡಿ ನನಗಂತೂ ತುಂಬಾ ಸಂತೋಷವಾಯಿತು.
ಯರವಾಡ ಜೈಲು ತುಂಬಾ ಪ್ರಸಿದ್ಧಿಯಾದ ಬಂದೀಖಾನೆ, ಇಡೀ ದೇಶದಲ್ಲಿಯೇ ಅತ್ಯಂತ ದೊಡ್ಡದಷ್ಟೇ ಅಲ್ಲ, ಮಹಾತ್ಮ ಗಾಂಧಿಯವರನ್ನು ಬಹು ಸಲ ಪೋಷಿಸಿದ ಕಾರಾಗೃಹ. ನಮ್ಮಲ್ಲಿದ್ದ ಹಣ ಮತ್ತು ಇತರೆ ಸಣ್ಣ ಪುಟ್ಟ ವಸ್ತುಗಳನ್ನು ಜೈಲಿನ ಕಛೇರಿಯಲ್ಲಿ ಅಧಿಕಾರಿಗಳು ವಶಪಡಿಸಿಕೊಂಡರು. ನಮಗೆ ವಸತಿಗೆ ಸುಮಾರು ೭೦ ಮಂದಿ ವಾಸ ಮಾಡುವಂತಹ ಕೊಠಡಿ. ಊಟಕ್ಕೆ, ಒಂದು ಕಬ್ಬಿಣದ, ರಂಧ್ರಗಳಿಲ್ಲದ ಜಲ್ಲಡಿಯಂತಹ ತಟ್ಟೆ, ನೀರು ಕುಡುಯುವದಕ್ಕೆ ಸ್ನಾನಕ್ಕೆ ಮ್ತತು ಉಳಿದ ಎಲ್ಲಾ ಕೆಲಸವನ್ನು ಮಾಡಲು ಉಪಯೋಗಿಸಬೇಕಾದ ಒಂದು ದೊಡ್ಡ ಕಬ್ಬಿಣದ ಲೋಟ. ಆ ಪಾತ್ರೆಗಳ ಕಿಲುಬು ಕೆಗೆಯುವುದೇ ನಮ್ಮ ನಿತ್ಯ ಕರ್ಮಗಳಲ್ಲೊಂದು. ಸಂಜೆ ಆರು ಘಂಟೆಯ ಹೊತ್ತಿಗೆ ಎಲ್ಲರನ್ನೂ ನಮ್ಮ ನಿವಾಸದೊಳಕ್ಕೆ ದೂಡಿ ಬೀಗ ಹಾಕುತ್ತಿದ್ದರು. ಬಾಗಿಲು ತೆರೆಯುವುದು ಮರುದಿನ ಬೆಳಗ್ಗೆ ಆರು ಘಂಟೆಗೆ. ಹೀಗೆ ದಿನದ ಅರ್ಧಭಾಗವನ್ನು ಜೈಲಿನಲ್ಲಿರುವ ಉಪ ಜೈಲಿನಲ್ಲಿ ಕಳೆಯುತ್ತಿದ್ದೆವು. ನಮ್ಮ ಮೇಲೆ ಉಸ್ತುವಾರಿಗೆ ದೀರ್ಘಅವಧಿ ಅಥವಾ ಕೊಲೆ ಮಾಡಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಗಳು. ಅವರ ಕೆಲಸ ಪ್ರತಿ ರಾತ್ರಿ ಮೂರು ನಾಲ್ಕು ಸಲ ನಮ್ಮನ್ನೆಲ್ಲಾ ಎಣಿಸಿ ಸಂಖ್ಯೆಯಲ್ಲಿ ಏನೂ ವ್ಯಾತ್ಯಾಸವಿಲ್ಲವೆಂದು ಖಚಿತ ಪಡಿಸಿ ಕೊಳ್ಳುವುದು. ಜೊತೆಗೆ ಯಾವುದಾದರೂ ಕಾರಣದಿಂದ ಪ್ರತಿಭಟನೆಯೋ ಅಥವಾ ಉಪವಾಸ ಸತ್ಯಾಗ್ರಹವೋ ಆಗುವ ಚಿಹ್ನೆಗಳಿದ್ದರೆ ಅದನ್ನು ಮತ್ತು ಅದಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳ ಹೆಸರನ್ನು ಮೇಲಾಧಿಕಾರಿಗಳಿಗೆ ತಿಳಿಸುವುದು ಅವರ ಕೆಲಸವಾಗಿದ್ದಿತ್ತು. ನಮ್ಮನ್ನೆಲ್ಲಾ ಕಂಡರೆ ಅವರಿಗೆ ಹಾಸ್ಯ. ಈ ಗಾಂಧಿ ಖೈದಿಗಳು ಈವತ್ತು ಬರ್ತಾರೆ, ನಾಳೆ ಹೋಗ್ತಾರೆ, ೧೦-೧೨ ವರ್ಷಗಳಿಂದ ಈ ಗಾಂಧಿ ಗಲಾಟೆ ನೋಡುತ್ತಲೇ ಇದ್ದೇವೆ ಎಂದು ಮೂದಲಿಸುತ್ತಿದ್ದರು, ಲೇವಡಿ ಮಾಡುತ್ತಿದ್ದರು.
ಯರವಾಡ ಜೈಲಿನ ಆಹಾರ ನಮಗಂತೂ ತೀರಾ ಹೊಸದು. ಬೆಳಿಗ್ಗೆ ಒಂದು ಅಳತೆ ಪಾವಿನಷ್ಟು ಗಂಜಿ, ಮಧ್ಯಾಹ್ನ, ಸಂಜೆ ಒಂದು ಜೋಳದ ರೊಟ್ಟಿ, (ಭಕ್ರಿ) ಈ ರೊಟ್ಟಿಯಲ್ಲಿ ಸಾಮಾನ್ಯವಾಗಿ ಜೋಳ ಮತ್ತು ಮಣ್ಣು ಸಮಸಮ. ಈ ರೊಟ್ಟಿಯ ಜೊತೆಗೆ ಹಚ್ಚಗೆ ಕಾಣುವಂಥ ಎಲ್ಲ ತರಹ ಸೊಪ್ಪುಗಳನ್ನು ಹಾಕಿ ಯಥಾಶಕ್ತಿ ಬೇಯಿಸಿದ ಹುಳಿ. ಅಂಬಲಿ ಕುಡಿಯುಷ್ಟು ಬಡತನದಲ್ಲಿಯೇ ಬೆಳಿದಿದ್ದರೂ ಅಭ್ಯಾಸವಿಲ್ಲದ ಆ ಗಂಜಿ ಕುಡಿಯಲು ಮನಸ್ಸು ಒಗ್ಗಲಿಲ್ಲ. ನನಗೆ ಆಗದಿದ್ದ ಮೇಲೆ ನನ್ನ ಸ್ನೇಹಿತರಿಗಂತೂ ಅದರ ವಾಸನೆ, ದೃಷ್ಟಿಯೇ ಹಿಡಿಸಲಿಲ್ಲ. ಮೊದನೆಯ ದಿನ ಬೆಳಿಗ್ಗೆ ಗಂಜಿ ಬಡಿಸಲು ಬಂದರು. `ಬೇಡ` ಅಂದಿವಿ, `ಬಿಡಿ` ಎಂದು ಹೋದರು. ಅವರು ಕೊಟ್ಟ ಜೋಳದ ರೊಟ್ಟಿ, ನಮಗೆ ಯಾವ ಮೂಲೆಗೂ ಸಾಕಾಗುತ್ತಿರಲಿಲ್ಲ. ಮಾರನೆಯ ದಿನ, ಸಧ್ಯ ಗಂಜಿ ಬಂದರೆ ಸಾಕಪ್ಪ ಎಂದು ಕಾದು ತಟ್ಟೆ ಹಿಡಿದುಕೊಂಡು ಜಾತಕ ಪಕ್ಷಿಗಳಂತೆ ನಿರೀಕ್ಷಿಸುತ್ತಿದ್ದೆವು. ನಿತ್ಯ ನಮಗೆ ಆ ಗಂಜಿಯೇ ಪರಮಾನ್ನ., ಪಂಚಾಮೃತವಾಯಿತು. ಭಾನುವಾರದ ಸಂಜೆಯ `ಹಬ್ಬ` ದೂಟಕ್ಕಾಗಿ ಎರಡು ಮೂರು ಹಿಂದಿನ ದಿನಗಳಿಂದಲೇ ನಿರೀಕ್ಷೆ. ಈ ಹಬ್ಬದ ಊಟಕ್ಕೆ ಜೋಳದ ಭಕ್ರಿಗೆ ಬದಲಾಗಿ ಒಂದು ಗೋದಿಯ ಚಪಾತಿ, ಒಂದು ಚಿಕ್ಕ ನಿಂಬೆಕಾಯಿ ಗಾತ್ರದಷ್ಟು ಬೆಲ್ಲ, ತೀರ್ಥಕೊಡುವಂತಹ ಒಂದು ಸಣ್ಣ ಉದ್ಧರಣೆಯಲ್ಲಿ ಎಣ್ಣೆ, ನಮಗೆ ಆ ದಿನ ಆನಂದವೋ ಆನಂದ. ಆ ಬೆಲ್ಲದ ಉಂಡೆ ಅದೇ ದಿನ ತಿನ್ನದೆ ಕಂತು ಕಂತುಗಳಲ್ಲಿ ತಿನ್ನುತ್ತಾ, ಅದರ ಅವಶೇಷವನ್ನು ಎಚ್ಚರಿಕೆಯಿಂದ ಎರಡು ಮೂರು ದಿನಗಳ ತನಕ ಕಾಪಾಡಿಕೊಂಡು ತಿನ್ನುತ್ತಿದ್ದೆವು. ಹತ್ತು ಹದಿನೈದು ದಿನಗಳಿಗೊಂದು ಸಲ ನಮಗೂ ಜೈಲಿನ ಅಧಿಕಾರಿಗಳಿಗೂ ಒಂದಲ್ಲ ಒಂದು ವಿಷಯದಲ್ಲಿ ತೀವ್ರ ಭಿನ್ನಾಭಿಪ್ರಿಯದ ಪ್ರಯುಕ್ತ ಉಪವಾಸದ ಮೂಲಕ ಪ್ರತಿಭಟನೆ, ಉಳಿದ ದಿವಸಗಳೆಲ್ಲಾ ಅರೆ ಊಟ, ಅರೆ ಉಪವಾಸ. ಆ ಜೈಲಿನಲ್ಲಿದ್ದ ಸುಮಾರು ಐದು ತಿಂಗಳು ಒಂದು ದಿನವಾದರೂ ಹೊಟ್ಟೆ ತುಂಬುವಷ್ಟು ಊಟ ನಮಗೆ ಕೊಡಲಿಲ್ಲ. ನನ್ನ ಮೊದಲನೆಯ ಮುಖಕ್ಷೌರವನ್ನು ಇನ್ನೂ ಮರೆತಿಲ್ಲ. ಮೈಸೂರು ಜೈಲಿನಲ್ಲಿದ್ದಂತೆ ಇಲ್ಲಿ ಆಯುಷ್ಕರ್ಮ ಶಾಲೆ ಇರಲಿಲ್ಲ. ನೆಲದ ಮೇಲೆ ನಾಯಿಂದನ ಮುಂದೆ ಕುಳಿತುಕೊಂಡೆ. ಬಟ್ಚಲಲ್ಲಿ ನೀರಿತ್ತು. ಅವನಕಡೆ ನೋಡುತ್ತಾ ಸುಮ್ಮನೆ ಕುಳಿತೇ ಇದ್ದೆ.
`ಕ್ಯಾ ದೇಖತಾಹೈ, ಪಾನೀ ಲಗಾಲೇ` (ಏನು ನೋಡ್ತಾ ಇದ್ದೀಯ ನೀರು ಹಚ್ಚಿಕೊ) ಎಂದು. ಸೋಪ್ ಬ್ರಷ್ ಕಹಾ ಹೈ? (ಸೋಪು ಮತ್ತು ಬ್ರಷ್ ಎಲ್ಲಿ?) ಎಂದೆ. ಯೆ ತೇರಾ ಬಾಪ್‌ಕಾ ಘರ್ ನಹೀ ಹೈ (ಇದು ನಿಮ್ಮಪ್ಪನ ಮನೆ ಅಲ್ಲ) ಎಂದು ಹೇಳಿದ. ಬರಿ ಕೈಯಲ್ಲಿಯೇ ನೀರನ್ನು ಮುಖಕ್ಕೆ ಹಚ್ಚಿಕೊಂಡೆ. ಆತನ ಎಷ್ಟು ಒರಟಾಗಿದ್ದನೋ ಆತನ ಕತ್ತಿಯೂ ಅಷ್ಟೇ ಮೊಂಡಾಗಿದ್ದಿತು. ಕೂದಲನ್ನು ಚರ್ಮಸಹಿತ ಮೂಲೋತ್ಪಾಟನೆ ಮಾಡುವ ಪ್ರಯತ್ನದಲ್ಲಿ ಆತನು ಅಲ್ಲಲ್ಲಿ ಯಶಸ್ವಿಯಾದನು. ಅದಾದ ಮೇಲೆ ಜೈಲಿನಲ್ಲಿ ಇದ್ದಷ್ಟು ದಿನ ಆಯುಷ್ಕರ್ಮಕ್ಕೆ ಪೂರ್ಣ ವಿರಾಮ ಹಾಕಿದ್ದಾಯಿತು.
ಸುಮಾರು ಒಂದೂವರೆ ತಿಂಗಳಾದ ಮೇಲೆ ನಮ್ಮ ಮೇಲಿನ ಮೊಕದ್ದಮೆ ವಿಚಾರಣೆಗೆ ಬಂತು. ಜೈಲಿನಲ್ಲಿಯೇ ಕೋರ್ಟು. ಪ್ರತಿಭಂದಕಾಜ್ಞೆ ಮುರಿದ ಅಪಾದನೆಯನ್ನು ಒಪ್ಪಿಕೊಂಡೆವು. ಕ್ಷಮಾಪಣೆ ಕೇಳಿದರೆ ಬಿಡುಗಡೆ ಮಾಡುತ್ತೇವೆಂದು ನ್ಯಾಯಾಧೀಶರು ಅಪ್ಪಣೆ ಕೊಡಿಸಿದರು. ಮಾಮೂಲಿನಂತೆ, ನಿರಾಕರಿಸಿದ ಮೇಲೆ ಮೂರು ತಿಂಗಳು ಕಠಿಣ ಶಿಕ್ಷೆವಿಧಿಸಿದರು.
ಸಾದಾ ಶಿಕ್ಷೆ ವಿಧಿಸಿದರೆ ಕೆಲಸ ಮಾಡಬೇಕಾಗಿಲ್ಲ. ಜೊತೆಗೆ ಇನ್ನೂ ಸ್ವಲ್ಪ ಸೌಲಭ್ಯಗಳಿರುತ್ತವೆ. ಕಠಿಣ ಶಿಕ್ಷೆ ಯವರಿಗೆ ಸೌಲಭ್ಯಗಳೆಲ್ಲ ಕಡಿತ, ಜೊತೆಗೆ ದಿನಕ್ಕೆ ಎಂಟು ಘಂಟೆ ಅವರು ಕೊಟ್ಟ ಕೆಲಸ ಮಾಡಬೇಕು. ನಮಗೆ ಒಪ್ಪಿಸಿದ ಕೆಲಸ ಕಷ್ಟವಾಗಿರಲಿಲ್ಲ. ಕೈಯಲ್ಲಿ ಬಟ್ಟೆ ಹೊಲಿಯುವುದು, ಆದರೆ ತುಂಬಾ ಬೇಜಾರಿನ ಕೆಲಸ.
ಶಿಕ್ಷೆ ಆಗುವತನಕ ನಮ್ಮ ಮಾಮೂಲು ಬಟ್ಟೆಯನ್ನೇ ಹಾಕಿಕೊಂಡಿದ್ದೆವು. ಆಮೇಲೆ ಉಡುಪಿನಲ್ಲಿ ಬದಲಾವಣೆ. ಖೈದಿಗಳ ವೇಷ; ದಪ್ಪ ಬಟ್ಟೆಯ ನಿಕ್ಕರ್, ಷರಟು ಮತ್ತು ಟೊಪ್ಪಿಗೆ. ದೇಶದಾದ್ಯಂತ ಎಲ್ಲಾ ಖೈದಿಗಳಿಗೂ ಒಂದೇ ಸಮವಸ್ತ್ರ.
ಜೈಲಿನಲ್ಲಿ ಆದ ಒಂದು ಭಯಾನಕ ಘಟನೆ ಈಗಲೂ ಕಣ್ಣಿಗೆ ಕಟ್ಟಿದ ಹಾಗಿದೆ. ಒಂದು ಮಧ್ಯಾಹ್ನ ಸುಮಾರು ಒಂದೂವರೆ ಘಂಟೆ ಸಮಯ. ವಿರಮಾದ ವೇಳೆ. ನಾವಿದ್ದ ಕೊಠಡಿಯ ಮುಂದೆ ಸುಮಾರು ಹದಿನೈದು ಗಜ ದೂರದಲ್ಲಿ ಒಬ್ಬ ಪಠಾನ್ ಖೈದಿ ಅದೇ ವರ್ಗದ ಸಿಂಧಿ ಖೈದಿಯನ್ನು ಹಿಂದಿನ ವೈಷಮ್ಯದ ಕಾರಣ ಇರಿದುಕೊಂದನು. ಆಮೇಲೆ ಆವೇಶದಿಂದ ಆಯುಧವನ್ನು ಝಳಿಪಿಸುತ್ತಾ ಸಮೀಪದವರ ಮೇಲೆ ಎರಗುವ ಪ್ರಯತ್ನ ಮಾಡುತ್ತಾ, ಜಾಗದಿಂದ ಜಾಗಕ್ಕೆ ಹಾರುತ್ತಿದ್ದ ಆ ಪಠಾನ್ ಕೊಲೆ ಪಾತಕನನ್ನು ಜೈಲು ಸಿಬ್ಬಂಧಿ ಮತ್ತು ವಿಶೇಷ ಪೋಲಿಸಿನವರ ಸರ್ವ ಪ್ರಯತ್ನ ಮಾಡಿ, ಅವನ ಜೊತೆ ಸೆಣೆಸಾಡಿ ಸುಮಾರು ಅರ್ಥ ಘಂಟೆಯಾದ ಮೇಲೆ ಹಿಡಿದರು.
ಶಿಕ್ಷೆಯ ಅವಧಿ ಮುಗಿದು ಬಿಡುಗಡೆಯಾಯಿತು. ೧೯೪೩ ಜುಲೈ ತಿಂಗಳಿನಲ್ಲಿ ಬೆಂಗಳೂರಿಗೆ ಹಿಂದುರಿದೆವು. ಚಳುವಳಿ ಇನ್ನೂ ಮಣಿದಿರಲಿಲ್ಲ. ಆದರೆ ಕಾವು ತುಂಬಾ ಕಡಿಮೆಯಾಗಿತ್ತು. ಗಾಂಧೀಜಿ ಮತ್ತು ಉಳಿದ ನಾಯಕರು ಇನ್ನೂ ಜೈಲಿನಲ್ಲಿಯೇ ಇದ್ದರು. ಆ ವರ್ಷವೂ ಕಾಲೇಜಿಗೆ ಹೋಗಲಿಲ್ಲ. ಆ ವರ್ಷದ ಕೊನೆಯ ಭಾಗದಲ್ಲಿ ಸರ್ಕಾರಕ್ಕೂ, ಕಾಂಗ್ರೆಸ್ಸಿಗೂ ಸಂಧಾನದ ಮೂಲಕ ಒಪ್ಪಂದವಾಗಿ ಎಲ್ಲ ನಾಯಕರ ಬಿಡುಗಡೆಯಾಯಿತು. ೧೯೪೪ ಜೂನ್ ತಿಂಗಳಲ್ಲಿ ಕಾಲೇಜಿಗೆ ಸೇರಿ ವ್ಯಾಸಂಗ ಮುಂದುವರಿಸಬೇಕೆಂದು ನಿಶ್ಚಯಿಸಿದೆ. ಆದರೆ ಒಂದು ಬಹು ಮುಖ್ಯವಾದ ಅನುಕೂಲ ತಪ್ಪಿಹೋಗಿತ್ತು. ಚಳುವಳಿಗಾರನೆಂದು, ಜೈಲಿನಲ್ಲಿದ್ದೆನೆಂದು ಶ್ರೀರಾಮಕೃಷ್ಣ ಸ್ಟೂಡೆಂಟ್ ಹೋಂನಲ್ಲಿ ಊಟ ವಸತಿಗಳಿಗೆ ಅವಕಾಶ ಕೊಡಲಿಲ್ಲ. ಆ ಕಷ್ಟ ಸಮಯದಲ್ಲಿ ನನಗೆ ತೀರಾ ಅಪರಿಚಿತರಾಗಿದ್ದ, ಬಸವನಗುಡಿಯಲ್ಲಿರುವ ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರಾಗಿದ್ದ ಸ್ವಾಮಿ ತ್ಯಾಗೀಶಾನಂದಜೀಯವರು ನನಗೆ ಹೇಳಿ ಕಳುಹಿಸಿ `ತುಂಬಾ ಕಷ್ಟದಲ್ಲಿದ್ದೀಯ ಎಂದು ತಿಳಿಯಿತು. ಆಶ್ರಮದಲ್ಲಿದ್ದುಕೊಂಡು ಬಿ. ಎಸ್‌ಸಿ. (ಆನರ್ಸ್) ಮತ್ತು ಎಂ. ಎಸ್‌ಸಿ, ಯನ್ನು ಮುಗಿಸಿಬಹುದು` ಎಂದಾಗ ನನಗಾದ ಸಂತೋಷದಲ್ಲಿ ಮಾತೇ ಹೊರಡಲಿಲ್ಲ. ಯಾರೋ ಹಿತಚಿಂತಕರು ನನ್ನ ಬವಣೆಯನ್ನು ಸ್ವಾಮೀಜಿಯವರಿಗೆ ಹೇಳಿರಬೇಕು. ತುಂಬಾ ಕೃತಜ್ಞತೆಯಿಂದ ಅವರ ಸಹಾಯ ಸ್ವೀಕರಿಸಿ ಆಶ್ರಮದಲ್ಲಿಯೇ ಎರಡು ವರ್ಷ ಇದ್ದು ನನ್ನ ವಿದ್ಯಾಭ್ಯಾಸವನ್ನು ಮುಗಿಸಿದೆ.
ನನ್ನ ಈ ಅನುಭವಗಳು ಆಗಾಗ ಜ್ಞಾಪಕಕ್ಕೆ ಬರುತ್ತವೆ. ಪ್ರತಿ ವರ್ಷ ಆಗಸ್ಟ್ ತಿಂಗಳಲ್ಲಿ ತಪ್ಪದೆ ಈ ನೆನಪು ಮರುಕಳಿಸುತ್ತವೆ. ಯಾವ ಕ್ಷುಲ್ಲಕ ಕ್ಷುದ್ರರಾಜಕೀಯವೂ ಇಲ್ಲದ ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ ನೆನಪು, ಸಂತೃಪ್ತಿ, ಸಮಾಧಾನ ಇಂದಿಗೂ ಕೊಡುತ್ತದೆ.

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು