ಕುವೆಂಪು
ಸಾವಿರದ ಒಂಬೈನೂರ ನಾಲ್ಕು, ಡಿಸೆಂಬರ್, ಇಪ್ಪತ್ತೊ೦ಭತ್ತರಂದು ಕುಪ್ಪಳಿ ವೆಂಕಟಪ್ಪಗೌಡ (ವೆಂಕಟಯ್ಯಗೌಡ) ಪುಟ್ಟಪ್ಪ (ಕೆ. ವಿ. ಪುಟ್ಟಪ್ಪ - ಕುವೆಂಪು) ಜನಿಸಿದರು. ಅಂದರೆ, ಇಂದಿಗೆ (೨೯-೧೨-೨೦೦೦) ತೊಂಬತ್ತಾರು ವರ್ಷಗಳ ಹಿಂದೆ ಕ್ರೋಧಿನಾಮ ಸಂವತ್ಸರದ ಮಾರ್ಗಶೀರ್ಷ - ಬಹುಳ ಸಪ್ತಮೀ ಗುರುವಾರದ ಉತ್ತರಾ ನಕ್ಷತ್ರದಲ್ಲಿ. ಇದೇ ದಿನ ಶ್ರೀ ಮಹಾಮಾತೆ ಶಾರದಾದೇವಿಯವರ ಜನ್ಮತಿಥಿಯೂ ಆಗಿರುವುದು ಪುಟ್ಟಪ್ಪನವರಿಗೆ ಆನಂದದ ಮತ್ತು ಹೆಮ್ಮೆಯ ವಿಷಯ. ಅವರು ಭೂಸ್ಪರ್ಶ ಮಾಡಿದ್ದು ತಮ್ಮ ತಾಯಿಯ ತವರಾದ ಹಿರಿಕೊಡಿಗೆ ಮನೆಯಲ್ಲಿ. ಹಿರಿಕೊಡಿಗೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಒಂದು ಕುಗ್ರಾಮ. ಮಲೆನಾಡಿನ ಸಹ್ಯಾದ್ರಿಯ ಮಡಿಲಲ್ಲಿರುವ ಎಲ್ಲ ಹಳ್ಳಿಗಳಂತೆಯೆ ಹಿರಿಕೊಡಿಗೆಯೂ ಒಂದೇ ಮನೆಯ ಹಳ್ಳಿ. ಅನಂತರ ``ತವರು ಮನೆ ಹಿರಿಕೊಡಿಗೆಯಿಂದ ಗಂಡನ ಮನೆ ಕುಪ್ಪಳಿಗೆ ಚೊಚ್ಚಲು ತಾಯಿಯಾಗಿ ಸೀತಮ್ಮನವರು ತೊಟ್ಟಿಲ ಕೂಸನ್ನು ಕರೆತಂದು ಮನೆವುಗಿಸಿದಂದಿನಿಂದ '' ತಂದೆಯ ಮನೆ ಕುಪ್ಪಳಿ ಪುಟ್ಟಪ್ಪನವರ ``ಮನೆ''ಯಾಯಿತು.
ತೀರ್ಥಹಳ್ಳಿಯ ಕಳೆದು, ತಾಯಿ ತುಂಗೆಯ ದಾಟಿ ,
ಒಂಬತ್ತು ಮೈಲಿಗಳ ದೂರದಲಿ, ನಮ್ಮೂರು ಕುಪ್ಪಳಿ .
ಊರಲ್ಲ ನಮ್ಮ ಮನೆ. ನಮ್ಮ ಕಡೆ ಊರೆಂದರೊಂದೆ ಮನೆ.
ಕುಪ್ಪಳಿ ಮನೆ ತಮ್ಮ ತಾಯಿಯ ತವರು ಮನೆಗಿಂತ ನೆಮ್ಮದಿಯ ಬೀಡಾಗಿತ್ತು. ಕುಪ್ಪಳಿಯನ್ನು ದೊಡ್ಡಮನೆಯೆಂದೂ, ಕುಪ್ಪಳಿ ಮನೆಯವರನ್ನು ದೊಡ್ಡ ಮನೆತನದವರೆಂದೂ ಜನ ಗೌರವಿಸುತ್ತಿದ್ದರು. ಬತ್ತದ ಗದ್ದೆ, ಅಡಕೆ ತೋಟ, ಜಾನುವಾರು, ಆಳುಕಾಳು, ಪಟೇಲಿಕೆಯ ಅಧಿಕಾರ - ಹೀಗೆ ಎಲ್ಲ ವಿಧದಲ್ಲಿಯೂ ಕುಪ್ಪಳಿ ಮನೆ ಸಮೃದ್ಧವಾಗಿತ್ತು. ಕುಪ್ಪಳಿಯ ಮನೆಯ ಸುತ್ತಣ ಪರಿಸರವು ಅತ್ಯಂತ ಸಮೃದ್ಧ. ಈ ಪರಿಸರ ಕವಿಚೇತನಕ್ಕೆ, ಮಹಾಕವಿಯಾಗಲಿರುವ ಚೇತನಕ್ಕೆ, ಅದರಲ್ಲೂ ಅವರ ಬಾಲ್ಯದ ಬದುಕಿಗೆ ಉಸಿರನ್ನಿತ್ತು ಸಲಹಿದೆ.
ಕುಪ್ಪಳಿಯ ಮನೆಯ ಸುತ್ತಣ ಪರಿಸರವು ಅತ್ಯಂತ ಸಮೃದ್ಧ. ಈ ಪರಿಸರ ಕವಿಚೇತನಕ್ಕೆ, ಮಹಾಕವಿಯಾಗಲಿರುವ ಚೇತನಕ್ಕೆ, ಅದರಲ್ಲೂ ಅವರ ಬಾಲ್ಯದ ಬದುಕಿಗೆ ಉಸಿರನ್ನಿತ್ತು ಸಲಹಿದೆ.
ಕುಪ್ಪಳಿಯ ಮನೆಯ ಸುತ್ತಣ ಪರಿಸರವು ಅತ್ಯಂತ ಸಮೃದ್ಧ. ಈ ಪರಿಸರ ಕವಿಚೇತನಕ್ಕೆ, ಮಹಾಕವಿಯಾಗಲಿರುವ ಚೇತನಕ್ಕೆ, ಅದರಲ್ಲೂ ಅವರ ಬಾಲ್ಯದ ಬದುಕಿಗೆ ಉಸಿರನ್ನಿತ್ತು ಸಲಹಿದೆ.
ಕುಪ್ಪಳಿ ಪುಟ್ಟಕೋಟೆಯಂತಿರುವ ಹೆಮ್ಮನೆ. ದೊಡ್ಡ ಹೆಬ್ಬಾಗಿಲು, ದಪ್ಪವಾದ ಸುತ್ತುಗೋಡೆ, ನಾಜೋಕಿಗಿಂತ ಬಲದ ದೃಷ್ಟಿಯಲ್ಲಿ ಕಟ್ಟಿರುವ ಗೋಡೆಗಳು. ಏಕೆಂದರೆ ಕಾಡಿನಲ್ಲಿ, ಮಳೆಯಲ್ಲಿ, ಬಿರುಗಾಳಿಯಲ್ಲಿ, ಸಿಡಿಲು ಮಿಂಚುಗಳ ಆರ್ಭಟದಲ್ಲಿ ತಾಳಿ-ಬಾಳಬೇಕಾದರೆ ದಪ್ಪ ಗೋಡೆಗಳು ಅಗತ್ಯ.
ಕುಪ್ಪಳಿ ಮನೆ ಮಲೆನಾಡಿನ ವನಾಲಂಕೃತ ಗಿರಿಶ್ರೇಣಿಗಳ ತೊಡೆಯ ಮೇಲೆ ಕೂತಿದೆ. ಮನೆಯಿಂದ ಪೂರ್ವದಿಕ್ಕಿಗೆ ಹತ್ತುಮಾರು ಹೋಗುವುದರೊಳಗಾಗಿ ಬೆಟ್ಟವೇರಿ ಕಾಡಿನಲ್ಲಿ ತೂರಬೇಕು. ಕುಪ್ಪಳಿ ಮನೆಗೆ ಪೂರ್ವೋತ್ತರ ದಕ್ಷಿಣ ಭಾಗಗಳಲ್ಲಿ ಭೀಮಾಕಾರದ ಪರ್ವತ ಶ್ರೇಣಿಗಳು ದಿಗಂತವನ್ನು ನಡುಬಾನಿಗೆತ್ತಿ ನಿಂತಿವೆ. ಪಶ್ಚಿಮ ಭಾಗದಲ್ಲಿಯೂ ಬೆಟ್ಟಗಳಿವೆ; ಆದರೆ ಒಂದು ಮೈಲಿಯಷ್ಟು ದೂರ. ನಡುವೆಯೇನೋ ಬೇಕಾದಷ್ಟು ಕಾಡುಗಳಿವೆ. ಕುಪ್ಪಳಿ ಮನೆಗೂ ಪೂರ್ವಾದ್ರಿಗೂ ನಡುವೆ ಅಡಕೆ ತೋಟವಿದೆ. ಅದರ ಸೆರಗಿನಲ್ಲಿಯೆ ಕುಪ್ಪಳಿ ಮನೆಯ ಕೆರೆಯಿದೆ. ಕೆರೆ ಬೆಟ್ಟದ ಬುಡದಲ್ಲಿ ಅರಣ್ಯದ ಮಡಿಲಲ್ಲಿ ಮಲಗಿದೆ. ಹೆಮ್ಮರಗಳು, ಪೊದೆಗಳು, ಬಿದಿರು ಮೆಳೆಗಳು ಅದರ ನೀರಿನ ಮೇಲೆ ಚಾಚಿಕೊಂಡಿವೆ.
ಕುಪ್ಪಳಿ ಮನೆಯ ಉಪ್ಪರಿಗೆ ಪೂರ್ವದಿಕ್ಕಿಗೆ ತೆರೆದುಕೊಂಡಿದೆ. ಉಳಿದೆಲ್ಲ ದಿಕ್ಕಿಗೂ ಗೋಡೆ, ಕಿಟಕಿಗಳಿವೆ. ಅಲ್ಲಿ ಕುಳಿತು ನೋಡಿದರೆ ಎದುರಿಗೆ ಇಳಿಜಾರಾಗಿ ಮೇಲೆದ್ದಿರುವ ಅನಂತ ನಿಬಿಡಾರಣ್ಯ ಶ್ರೇಣಿಗಳು ಸುಂದರವಾಗಿ ರಂಜಿಸುವುವು. ಮನೆಯ ಮುಂದೆಯೆ, ಅಡಕೆ ತೋಟದಾಚೆಯ ಮೊದಲುಗೊಂಡು ನಡು ಆಕಾಶದವರೆಗೆಂಬಂತೆ ಗೋಡೆ ಹಾಕಿದಂತೆ ಕಡಿದಾಗಿ ವಿಜೃಂಭಿಸಿ ಮಹೋನ್ನತವಾಗಿ ಮೇಲೆದ್ದು, ನಿತ್ಯ ಶ್ಯಾಮಲ ಅರಣ್ಯಾಚ್ಛಾದಿತವಾಗಿರುವ ಮಲೆ ಮತ್ತು ಮನೆಯ ಹಿಂಬದಿಯಿಂದಲೆ ಪ್ರಾರಂಭವಾಗಿ ವಿರಳ ಮರಪೊದೆಗಳಿಂದ ಹಕ್ಕಲು ಹಕ್ಕಲಾಗಿ ಮೇಲೇರಿ ಏರಿ ಬಂಡೆ ಮಂಡೆಯಲ್ಲಿ ಕೊನೆಗೊಂಡಿರುವ ಹಿರಿಯ ಹಾಸುಗಳಲ್ಲಿನ ಕವಿಶೈಲ! - ಇವೆರಡೂ ಕವಿ ಹೃದಯದ ಅಕ್ಕಪಕ್ಕದಲ್ಲಿರುವ ಎರಡು ಶ್ವಾಸಕೋಶಗಳಂತೆ ಅವರ ಬಾಲ್ಯದ ರಸಜೀವನದ ಬದುಕಿಗೆ ಉಸಿರನ್ನಿತ್ತು ಪೊರೆದಿವೆ. ಮುಂದೆ ಮಹಾಕವಿಯಾಗಲಿರುವ ಒಂದು ಋಷಿ ಚೇತನದ ವಿಕಾಸನಕ್ಕೆ ವಿಧಿ ಅದಕ್ಕಿಂತಲೂ ಹೆಚ್ಚು ಅರ್ಹವೂ ಅನುಕೂಲವೂ ಆದ ಭಿತ್ತಿರಂಗವನ್ನು ಕೆತ್ತಲಾರದೆಂದೇ ತೋರುತ್ತದೆ.




![]() |
ಕುವೆಂಪು ಹಸ್ತಾಕ್ಷರ |
Comments
Post a Comment