ಮಳೆಗಾಗಿ ಯೋಗಿಯ ವ್ಯರ್ಥ ಪ್ರಾರ್ಥನೆ - ಡಾ. ಹೆಚ್. ನರಸಿಂಹಯ್ಯ

ಮಳೆಗಾಗಿ ಯೋಗಿಯ ವ್ಯರ್ಥ ಪ್ರಾರ್ಥನೆ

ಬೆಂಗಳೂರು, ಸುಮಾರು ಮೂವತ್ತು ಲಕ್ಷ ಜನರು ವಾಸಿಸುವ ನಗರ. ಈ ನಗರಕ್ಕೆ ನೀರನ್ನು ಒದಗಿಸುವ ಮುಖ್ಯ ಆಕರಗಳಲ್ಲಿ, ಇಲ್ಲಿಂದ ಇಪ್ಪತ್ತು ಮೈಲಿಗಳ ದೂರದಲ್ಲಿರುವ ತಿಪ್ಪಗೊಂಡನಹಳ್ಳಿ ಜಲಾಶಯವೂ ಒಂದು. ಈ ಜಲಾಶಯಕ್ಕೆ ನೀರು ಸರಬರಾಜು ಮಾಡುವ ಜಲಾನಯನ ಪ್ರದೇಶಗಳಲ್ಲಿ ಸಾಕಷ್ಟು ಮಳೆ ಬೀಳದ ಕಾರಣ, ಕೆರೆಯ ನೀರಿನ ಮಟ್ಟ ಒಂದೇ ಸಮನೆ ಕುಸಿಯತೊಡಗಿ, ಸರ್ಕಾರ ಮತ್ತು ಸಾರ್ವಜನಕರಿಗೆ ಅಪಾರ ಆಂತಕವಾಗಿತ್ತು..
೧೮-೦೪-೮೫ ರಂದು ಕರ್ನಾಟಕದಲ್ಲಿ ಅತ್ಯಧಿಕ ಪ್ರಸಾರವಿರುವ ಜನಪ್ರಿಯ ಇಂಗ್ಲಿಷ್ ದಿನ ಪತ್ರಿಕೆಯಾದ ಡೆಕ್ಕನ್ ಹೆರಾಲ್ಡ್‌ನಲ್ಲಿ ಈ ಕೆಳಗಿನ ಸುದ್ದಿಯು ಪ್ರಕಟವಾಯಿತು.
'ಇನ್ನೂ ಮಳೆಯ ದೇವತೆಯು ಕರುಣೆ ತೋರದಿರುವ ಕಾರಣ, ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು, ತಿಪ್ಪಗೊಂಡನಹಳ್ಳಿ ಜಲಾಶಯವನ್ನು ಆಶೀರ್ವದಿಸಲು ಯೋಗಿಯೊಬ್ಬರನ್ನು ಆಹ್ವಾನಿಸುವ ಯೋಜನೆ ಹಾಕಿಕೊಂಡಿದೆ.
ಬರುವ ತಿಂಗಳ ಮೊದಲ ವಾರದಲ್ಲಿ, ಜಲಾಶಯದ ಬಳಿ, ಶ್ರೀ ಶಿವಬಾಲಯೋಗಿಯವರು ಮಳೆಗಾಗಿ ಪ್ರಾರ್ಥನೆ ಮಾಡಲಿರುವರೆಂದು ನಗರಾಭಿವೃದ್ಧಿ ಸಚಿವರಾದ ಶ್ರೀ ಎ. ಲಕ್ಷೀಸಾಗರ್ ಅವರು ಈ ದಿನ ವರದಿಗಾರರಿಗೆ ತಿಳಿಸಿದರು. ಸಂಪೂರ್ಣವಾಗಿ ಬತ್ತಿಹೋಗಿರುವ ಹೆಸರಘಟ್ಟ ಕೆರೆ, ಹಾಗೂ ಜಲಮಟ್ಟ ೭೪ ಅಡಿಗಳಿರಬೇಕಾಗಿದ್ದು, ಈಗ ೨೩ ಅಡಿಗಳಿಗೆ ಇಳಿದಿರುವ ತಿಪ್ಪಗೊಂಡನಹಳ್ಳಿ ಕೆರೆಗಳ ಭೇಟಿಗೆಂದು ಕರೆದೊಯ್ದಾಗ ಈ ಮಾಹಿತಿಯನ್ನು ನೀಡಲಾಯಿತು.'
ನಾನು ಅದೇ ದಿನ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ವಾಚಕರವಾಣಿ ವಿಭಾಗಕ್ಕೆ ಪತ್ರವೊಂದನ್ನು ಬರೆದೆ. ೧೯-೦೪-೮೫ ರಂದು ಪ್ರಕಟವಾದ ಆ ಪತ್ರದ ಒಕ್ಕಣೆ ಈ ರೀತಿ ಇತ್ತು.
ಮಳೆ ಬರಲೆಂದು ಮಾಡುವ ಪ್ರಾರ್ಥನೆಯು ನಮ್ಮ ರಾಜ್ಯಾಂಗದ ಮೂಲತತ್ವವನ್ನು ಭಂಗಿಸುತ್ತದೆ.
ಇಂದು ಬೆಳಿಗ್ಗೆ ಪತ್ರಿಕೆಗಳನ್ನು ಓದುವಾಗ ಶ್ರೀ ಶಿವಬಾಲಯೋಗಿಯವರ ಸಹಾಯದಿಂದ ಮಳೆ ತರಿಸುವುದಾಗಿ ನಗರಾಭಿವೃದ್ಧಿ ಸಚಿವರಾದ ಶ್ರೀ ಎ. ಲಕ್ಷ್ಮೀಸಾಗರ್ ಅವರು ನೀಡಿರುವ ಹೇಳಿಕೆಯನ್ನು ಓದಿ ನನಗೆ ದಿಗ್ಭ್ರಮೆಯಾಯಿತು.
'ಸ್ವಾಮಿ ಶ್ರೀ ಶಿವಬಾಲಯೋಗಿಯವರು ಬರುವ ತಿಂಗಳ ಮೊದಲ ವಾರ ಜಲಾಶಯದ ಬಳಿ ಪ್ರಾರ್ಥನೆ ಸಲ್ಲಿಸಲಿದ್ದಾರೆ' ಎಂದು ಸಚಿವರು ಹೇಳಿದ್ದಾರೆ. ಈ ಮಾತು ಬಹಳ ಅವೈಜ್ಞಾನಿಕವಾಗಿರುವುದಷ್ಟೇ ಅಲ್ಲದೆ, ಒಟ್ಟು ಭಾರತೀಯ ರಾಜ್ಯಾಂಗಕ್ಕೆ ಧಕ್ಕೆ ತರುವಂತಹುದಾಗಿದೆ. ನಮ್ಮದು ಕಾನೂನಿನಂತೆ ಜಾತ್ಯತಿತ ರಾಷ್ಟ್ರವೆನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಆಕ್ಸ್‌ಫರ್ಡ್ ಇಂಗ್ಸಿಷ್ ನಿಘಂಟಿನ ಪ್ರಕಾರ ಸೆಕ್ಯುಲರ್ (ಜಾತ್ಯತೀತ) ಎಂಬ ಪದದ ಅರ್ಥ ಈ ರೀತಿ ಇದೆ.
ಈ ಜಗತ್ತಿನ ಲೌಕಿಕ ವ್ಯವವಹಾರಗಳಿಗೆ ಸಂಬಂಧಪಟ್ಟಿದ್ದು, ಚರ್ಚ್ ಮತ್ತು ಧರ್ಮದ ವಲಯದಿಂದ ಪ್ರತ್ಯೇಕವಾಗಿ ಇರುವಂತಹದು. ನಾಗರೀಕವೂ, ಜನಸಾಮಾನ್ಯರಿಗೆ ಸಂಬಂಧಿಸಿದ್ದೂ, ತತ್ಕಾಲೀನವೂ ಆದ ವಿಷಯ. ಮುಖ್ಯವಾಗಿ ಇದನ್ನು ಅ-ಧಾರ್ಮಿಕ, ಅ-ಪವಿತ್ರ ಎಂಬ ಅರ್ಥದಲ್ಲಿ ಉಪಯೋಗಿಸಲಾಗುತ್ತದೆ.
ಎನ್ಸೈಕ್ಲೋಪೀಡಿಯಾ ಬ್ರಿಟಾನಿಕ ಪ್ರಕಾರ,
'ಸೈಕ್ಯುಲರ್ ಎಂದರೆ ಧಾರ್ಮಿಕವಲ್ಲದ್ದು. ಆಧ್ಯಾತ್ಮಿಕವಾದ ಮತ್ತು ಧಾರ್ಮಿಕವಾದ ವಿಚಾರಗಳ ಬಗೆಗೆ ಯಾವುದೇ ಆಸಕ್ತಿಯನ್ನು ತೋರಿಸದೆ ಇರುವಂತಹುದು '
ಇವೆಲ್ಲದರ ಪ್ರಕಾರ ರಾಜ್ಯವ್ಯವಸ್ಥೆಯು ಧರ್ಮದ ವಿಷಯದಲ್ಲಿ ಸಂಪೂರ್ಣವಾಗಿ ತಟಸ್ಥವಾಗಿರಬೇಕು. ಧರ್ಮವು ಖಾಸಗೀ ವಿಷಯವಾದ್ದರಿಂದ, ಸರ್ಕಾರವು ಧಾರ್ಮಿಕ ಆಚರಣೆಗಳನ್ನು ಪ್ರೋತ್ಸಾಹಿಸೂಬಾರದು. ತಡೆಗಟ್ಟಲೂಬಾರದು.
ಮಳೆಯನ್ನು ತರಿಸಲೆಂದು ಸ್ವಾಮೀಜಿಯೊಬ್ಬರ ನೆರವನ್ನು ಪಡೆದುಕೊಳ್ಳಲೆತ್ನಿಸುವ ಸರ್ಕಾರದ ಕ್ರಮವು, ನಮ್ಮ ರಾಜ್ಯಾಂಗದ ಮತ್ತೊಂದು ಕಲಮನ್ನು ಕೂಡ, ಅತ್ಯಂತ ಸ್ಪಷ್ಟವಾಗಿ ಉಲ್ಗಂಘಿಸುತ್ತಿದೆ. ರಾಜ್ಯಾಂಗದ ಪ್ರಕಾರ ನಮ್ಮೆಲ್ಲರ ಮೂಲಭೂತ ಕರ್ತ್ಯವಗಳಲ್ಲಿ ಒಂದೆದರೆ ವೈಜ್ಞಾನಿಕ ಮನೋಧರ್ಮ, ಮಾನವೀಯತಾವಾದ, ಪ್ರಶ್ನೆ ಕೇಳುವ ಪ್ರವೃತ್ತಿ ಹಾಗೂ ಸುಧಾರಣ ಪರತೆಗಳನ್ನು ಬೆಳೆಸುವುದು. ಈ ದೃಷ್ಟಿಯಲ್ಲಿ ಕಾನೂನು ಸಚಿವರು ರಾಜ್ಯಾಂಗದ ಪ್ರಕಾರ ಅಪರಾಧಿಗಳಾಗುತ್ತಾರೆ. ಅವರು ತಮ್ಮ ಇಡೀ ಸರ್ಕಾರವನ್ನೇ, ಅಸ್ಪಷ್ಟವಾದ ಸಿದ್ಧಾಂತಗಳ ಪ್ರಸಾರಕ್ಕೆಂದು ನಿಸ್ಸಂಕೋಚವಾಗಿ ಬಳಸಿಕೊಂಡಿದ್ದಾರೆ.
ಯಾವ ಪವಿತ್ರ ವ್ಯಕ್ತಿಯೂ ಮಳೆಯನ್ನೂ ತರಿಸಲಾರ. ಪ್ರಾಕೃತಿಕ ನಿಯಮಗಳು ಸಾರ್ವತ್ರಿಕವೂ, ಸರ್ವಶಕ್ತವೂ ಆಗಿದೆ. ಈ ನಿಯಮಗಳನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಎರಡು ವರ್ಷಗಳ ಹಿಂದೆ ಮದ್ರಾಸು ಮತ್ತು ಅದರ ಪರಿಸರದಲ್ಲಿ, ಸತತವಾಗಿ ಮಳೆಬರದೆ ಜನರು ಪಟ್ಟಪಾಟು ಅಷ್ಟಿಷ್ಟಲ್ಲ. ಅಲ್ಲಿನ ಜನರು ಮಳೆಬರಿಸಲು ಭಗೀರಥ ಪ್ರಯತ್ನ ನಡೆಸಿದರು. ಅದಕ್ಕಾಗಿ ಎಲ್ಲ ಬಗೆಯ ಹತಾಶ ಪ್ರಯತ್ನಗಳನ್ನೂ ನಡೆಸಿದರು. ಪ್ರತಿದಿನದ ಪೂಜೆಗಳು, ಸಾಮೂಹಿಕ ಪ್ರಾರ್ಥನೆಗಳು ಎಲ್ಲ ಅರಣ್ಯರೋಧನಗಳಾದವು. 'ಪರ್ಜನ್ಯ ಜಪ' ವು ಒಂದೇ ಒಂದು ಹನಿ ಮಳೆ ತರಿಸಲು ಸಮರ್ಥವಾಗಲಿಲ್ಲ. ಖ್ಯಾತ ಪೀಟಿಲು ವಾದಕರಾದ ಕುನ್ನಕುಡಿ ವೈದ್ಯನಾಥನ್ ಅವರು ನುಡಿಸಿದ ಅಮೃತವರ್ಷಿಣಿ ರಾಗವು ವ್ಯರ್ಥವಾಯಿತು. ಇಂಥ ಹಲವು ಅವೈಜ್ಞಾನಿಕ ಪ್ರಯತ್ನಗಳನ್ನು ಮಾಡಿದರೂ ಮಳೆ ಬರುವ ಕುರುಹು ಕಾಣಲಿಲ್ಲ. ಅಲ್ಲಿನ ಜನರ ಯಾತನೆಯು ಮನಮಿಡಿಯುವಂಥದಾಗಿತ್ತು. ಕೊನೆಗೆ ಅವರು ನೀರಿಗಾಗಿ ಹಾತೊರೆಯುತ್ತಾ ರಾಜ್ಯದ ಬೇರೆ ಭಾಗಗಳಿಗೆ ವಲಸೆ ಹೋದರು.
ಸನ್ಯಾಸಿಗಳು ಹಾಗೂ ಪೂಜೆಗಳಿಂದ ಮಳೆ ತರಿಸಲು ಸಾಧ್ಯವಿದ್ದರೆ, ನಮ್ಮಲ್ಲಿ ತೀರ ಕಡಿಮೆ ಮಳೆ ಬೀಳುವ ಭೂ ಪ್ರದೇಶಗಳು ಇರುತ್ತಲೇ ಇರಲಿಲ್ಲ. ಮಳೆಯ ಅಭಾವವನ್ನು ಇಂಥ ವಿಧಾನಗಳಿಂದ ಬಹಳ ಸುಲಭವಾಗಿ ಹೊಗಲಾಡಿಸಿಕೊಳ್ಳಬಹುದಿತ್ತು. ಇದೇ ಉಪಾಯವನ್ನು ಅತಿವೃಷ್ಟಿಯನ್ನು ತಡೆಯಲೆಂದೂ ಬಳಸಬಹುದಿತ್ತು. ಒಂದು ಮಾತಿನಲ್ಲಿ ಹೇಳುವುದಾದರೆ ಆಗ ಈ ಜಗತ್ತಿನಲ್ಲಿ ಸಹರಾ ಆಗಲೀ ಚಿರಾಪುಂಜಿಯಾಗಲೀ ಇರುತ್ತಿರಲಿಲ್ಲ.
ಸನ್ಯಾಸಿಗಳು, ಭಗವಾನರು, ಬಾಬಾಗಳು ಹಾಗೂ ಇನ್ನಿತರ ದೈವೀಪುರುಷರಿಂದ ನಮ್ಮ ದೇಶವು ಕಕ್ಕಿರಿದು ಹೋಗಿದೆಯೆಂದು ನಮಗೆಲ್ಲರಿಗೂ ಗೊತ್ತು. ನಮ್ಮ ಸಮಯದ ಒಂದು ಭಾಗ ಜಪ-ತಪ, ಪೂಜೆ ಪುನಸ್ಕಾರಗಳಲ್ಲಿ ಕಳೆದುಹೋಗುತ್ತದೆ. ಆದರೂ `ಧರ್ಮಭೂಮಿ`, 'ಪುಣ್ಯಭೂಮಿ' ಎಂದು ಕರೆಸಿಕೊಳ್ಳುವ ನಮ್ಮ ದೇಶವು ಬಹುಪಾಲು ಜನರಿಗೆ ನರಕವಾಗಿಯೇ ಉಳಿದಿದೆ.
ಅವಿದ್ಯಾವಂತನಾದ ಮೂಢನಂಬಿಕಸ್ಥನಿಗಿಂತ ಅವನ ವಿದ್ಯಾವಂತ ಗೆಳೆಯನು ದೇಶಕ್ಕೆ ಹೆಚ್ಚು ಅಪಾಯಕಾರಿಯೆಂಬ ಸತ್ಯವು ಕಾನೂನು ಸಚಿವರ ಹೇಳಿಕೆಗಳಿಂದ ಸ್ಪಷ್ಟವಾಗುತ್ತದೆ. ರಾಜ್ಯಾಂಗದ ಮೂಲತತ್ವಗಳ ಉಲ್ಲಂಘನೆಗಾಗಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಾನು ತಿಳಿದಿದ್ದೇನೆ.
ಈ ಪತ್ರವು ಬಹಳ ವಾದ-ವಿವಾದಗಳಿಗೆ ಕಾರಣವಾಯಿತು. ಡೆಕ್ಕನ್ ಹೆರಾಲ್ಡ್‌ನಲ್ಲಿ ಅನೇಕ ಪ್ರತಿಕ್ರೆಯೆಗಳು ಪ್ರಕಟವಾದವು. ಬೇರೆ ಪತ್ರಿಕೆಗಳಲ್ಲೂ ಈ ವಿಷಯದ ಬಗ್ಗೆ ಚರ್ಚೆ ನಡೆಯಿತು. ಬಹುಪಾಲು ಪತ್ರಗಳು ನನ್ನ ನಿಲುವನ್ನು ವಿರೋಧಿಸಿ, ಕಾನೂನು ಸಚಿವರ ಹೇಳಿಕೆಯನ್ನು ಸಮರ್ಥಿಸಿದವು. ಎಲ್ಲೊ ಕೆಲವು ನನಗೆ ಬೆಂಬಲ ನೀಡಿದವು. ಬೇರೆ ಪತ್ರಿಕೆಗಳ ವರದಿಗಾರರು ಈ ಬಗ್ಗೆ ನನ್ನ ಸಂದರ್ಶನ ನಡೆಸಿದರು.
ರಾಜ್ಯ ಸರ್ಕಾರ ಹಾಗೂ ಬೆಂಗಳೂರು ನಗರ ಜಲಮಂಡಲಿಯು ಈ ಎಲ್ಲ ವಾದವಿವಾದಗಳಿಂದ ಕೊಂಚ ವಿಚಲಿತವಾದವು. ಯೋಗಿಗಳನ್ನು ಆಹ್ವಾನಿಸುವುದನ್ನು ಮುಂದೂಡಲಾಯಿತು.
ಭಾರತದಲ್ಲಿಯೇ ಅತಿ ಹೆಚ್ಚಿನ ಪ್ರಸಾರ ಸಂಖ್ಯೆಯಿರುವ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ೬-೫-೮೫ ರಂದು ಈ ಕೆಳಗಿನ ಸುದ್ದಿಯು ಪ್ರಕಟವಾಯಿತು.
ಜಲಮಂಡಳಿಯು ಮಳೆಗಾಗಿ ತಪಸ್ಸನ್ನು ಮುಂದೂಡಿದೆ.
ಬೆಂಗಳೂರು, ಮೇ ೫ (ಪಿ ಟಿ ಐ):
'ವಿಚಾರವಾದಿ ಮತ್ತು ಆಧ್ಯಾತ್ಮವಾದಿಗಳ ನಡುವೆ ಎದ್ದಿರುವ ವಾಗ್ವಾದ ಫಲವಾಗಿ ಜನರೆಲ್ಲರೂ ಕುತೂಹಲದಿಂದ ಕಾಯುತ್ತಿದ್ದ ಶ್ರೀ ಶಿವಬಾಲಯೋಗಿಗಳ ತಪಸ್ಸನ್ನು ಮುಂದೆ ಹಾಕಲಾಗಿದೆ. ಈ ಕಾರ್ಯಕ್ರಮವು ಇದೇ ತಿಂಗಳ ಮೊದಲ ವಾರದಲ್ಲಿ ನಡೆಯಬೇಕಾಗಿತ್ತು. ಕಾನೂನು ಮತ್ತು ನಗರಾಭಿವೃದ್ಧಿ ಸಚಿವರಾದ ಶ್ರೀ ಲಕ್ಷ್ಮೀಸಾಗರ್ ಅವರ ಹೇಳಿಕೆಯಂತೆ, ಸರ್ಕಾರವು ಶ್ರೀ ಶಿವಬಾಲಯೋಗಿಗಳ ನೆರವಿನಿಂದ ಒಣಗುತ್ತಿರುವ ನಗರಕ್ಕೆ ಜಲಸೇಚನೆ ಮಾಡುವ ಯೋಜನೆಯನ್ನು ಹಾಕಿಕೊಂಡಿತ್ತು.'
ಈ ಸುದ್ಧಿಯು ಪ್ರಕಟವಾದ ಕೂಡಲೇ ವಿಚಾರವಾದಿಯಾದ ಡಾ. ಹೆಚ್. ನರಸಿಂಹಯ್ಯನವರು ಶಿವಬಾಲಯೋಗಿಗಳ ಆಧ್ಯಾತ್ಮಿಕ ಸಾಮರ್ಥ್ಯವನ್ನು ಪ್ರಶ್ನಿಸಿದರು. ಈ ನಿರ್ಣಯವನ್ನು ಪ್ರತಿಭಟಿಸುತ್ತಾ ಅದು ಸಮಸ್ತ ಜನರಿಗೂ ಅವಮಾನಕರವಾದುದೆಂದು ಹೇಳಿ ಮುಖ್ಯಮಂತ್ರಿಗಳಿಗೆ ಒಂದು ಪತ್ರ ಬರೆದಿದ್ದಾರೆ.
ನಾನು ಮತ್ತೊಮ್ಮೆ ಇದನ್ನು ಬಲವಾಗಿ ವಿರೋಧಿಸಿದೆ. ನಮ್ಮ ರಾಜ್ಯದಲ್ಲಿ ಯಾವುದೇ ಕಾರಣದಿಂದ ಇಂಥ ಅತಿನಿಗೂಢ ಚಟುವಟಿಕೆಗಳಿಗೆ ಎಡೆಮಾಡಿಕೊಡಬಾರದೆಂದು ರಾಜ್ಯದ ಮುಖ್ಯಮಂತ್ರಿಗಳಿಗೆ ಒಂದು ಪತ್ರ ಬರೆದೆ. ಅದರ ಪ್ರತಿಗಳನ್ನು ಎಲ್ಲ ಮಂತ್ರಿಗಳಿಗೂ ಕಳಿಸಿಕೊಟ್ಟೆ. ಏನೂ ಪ್ರಯೋಜನವಾಗಲಿಲ್ಲ.
ಈ ಮಧ್ಯೆ ಇಂಡಿಯನ್ ಎಕ್ಸ್‌ಪ್ರೆಸ್‌ನ ಪ್ರತಿನಿಧಿಗಳು ಶ್ರೀ ಶಿವಬಾಲಯೋಗಿಗಳು ಮತ್ತು ನನ್ನ ಸಂದರ್ಶನ ನಡೆಸಿ, ಅದರ ಭಾಗಗಳನ್ನು ಅನುಕ್ರಮವಾಗಿ ೨೨-೦೪-೮೫ ಮತ್ತು ೨೩-೦೪-೮೫ರ ಪತ್ರಿಕೆಯಲ್ಲಿ ಪ್ರಕಟಿಸಿದರು.
ಮಳೆತರಿಸಲು ಸಿದ್ಧವಾಗಿರುವ ಬಾಲಯೋಗಿ ಮತ್ತು ಡಾ ಎಚ್.ಎನ್.
ಬೆಂಗಳೂರು, ಏಪ್ರಿಲ್,೨೨: ಕರ್ನಾಟಕ ಸರ್ಕಾರವು ಬತ್ತಿಹೋಗಿರುವ ಬೆಂಗಳೂರು ನಗರಕ್ಕೆ ಮಳೆ ಬರಿಸಲೆಂದು ಆಹ್ವಾನಿಸಿರುವ ವ್ಯಕ್ತಿಯು ಸನ್ನದ್ಧರಾಗಿದ್ದಾರೆ. ಶ್ರೀ ಶ್ರೀ ಶ್ರೀ ಶಿವಬಾಲಯೋಗಿಯವರು ತಮ್ಮ ಯೋಗಶಕ್ತಿಯಿಂದ, ಆಕಾಶವನ್ನೇ ಬಿರಿಸಿ ಸಮೃದ್ಧ ಮಳೆ ಸುರಿಸುವುದಲ್ಲದೆ, ಈ ವಿಷಯದಲ್ಲಿ ವಿಚಾರವಾದಿಯಾದ ಡಾ. ಹೆಚ್. ಎನ್. ಅವರೊಂದಿಗೆ ಮುಕ್ತವಾದ ಚರ್ಚೆಯನ್ನು ನಡೆಸಲು ತಯಾರಾಗಿದ್ದಾರೆ. ವಿಚಾರವಾದಿ ಮತ್ತು ಆಧ್ಯಾತ್ಮವಾದಿಗಳ ನಡುವೆ ಎದ್ದಿರುವ ಎಲ್ಲ ವಾದವಿವಾಗಳಿಗೂ ಅಂತಿಮ ಉತ್ತರಗಳನ್ನು ನೀಡಿ ಮಂಗಳ ಹಾಡಬೇಕೆಂದು ಅವರ ಹಂಬಲ.
ಸುಮಾರು ೫೦ ವರ್ಷ ವಯಸ್ಸಿನ ಸ್ವಾಮೀಜಿಯವರು ಜೆ.ಪಿ ನಗರದ ತಮ್ಮ ಆಶ್ರಮದಲ್ಲಿ ನಡೆದ ಸಂದರ್ಶನವೊಂದರಲ್ಲಿ ಪತ್ರಕರ್ತರ ಬಿರುಸಾದ ಪ್ರಶ್ನೆಗಳನ್ನು ಎದುರಿಸಿದರು. ಅವರು ಹೀಗೆ ಹೇಳಿದರು :
"ನಾನು ನರಸಿಂಹಯ್ಯನವರಿಗೆ ಸವಾಲು ಹಾಕುತ್ತೇನೆ ಬೇಕಾದರೆ ಅವರು ಎಲ್ಲಾ ವಿಜ್ಞಾನಿಗಳನ್ನೂ ಕರೆತರಲಿ. ಈ ಹುಚ್ಚಾಟವನ್ನು ನಾನು ಇಂದು ಕೊನೆ ಮುಟ್ಟಿಸುತ್ತೇನೆ. ಯಾರದು ಸತ್ಯ ಮತ್ತು ಯಾರದು ಸುಳ್ಳು ಎನ್ನುವುದು ಇಡೀ ದೇಶಕ್ಕೆ ತಿಳಿಯಲಿ."
ಶಿವಬಾಲಯೋಗಿಯವರಿಂದ ಮಳೆ ತರಿಸುವ ಪ್ರಯತ್ನವನ್ನು, ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಗಳೂ, ವಿಚಾರವಾದಿಯೂ ಆದ ಡಾ. ಹೆಚ್.ಎನ್. ವಿರೋಧ ವ್ಯಕ್ತಪಡಿಸಿದ್ದರು. ಅದನ್ನು ಕೇಳಿದ ಶಿವಬಾಲಯೋಗಿಗಳು ಈ ರೀತಿ ಸಿಡಿದೆದ್ದಿದ್ದಾರೆ. ರಾಜ್ಯ ವಿಜ್ಞಾನ ಪರಿಷತ್ತಿನ ಸದಸ್ಯರೂ ಆಗಿರುವ ಶ್ರೀ ನರಸಿಂಹಯ್ಯನವರು ಸರ್ಕಾರದ ಈ ಕ್ರಮವನ್ನು ಅಸಂಗತ ಹಾಗೂ ಚಾತಿಪರ ಎಂದು ಕರೆದು, ಇದು ರಾಜ್ಯಾಂಗಬಾಹಿರವೆಂದು ಟೀಕಿಸಿದ್ದಾರೆ.
ಇದರಿಂದ ಯೋಗಿಗಳು ಇನ್ನಷ್ಟು ಕೆರಳಿದರು. ಅವರು ಹೀಗೆ ಹೇಳಿದರು.
"ಜಾಗ ಬಿಟ್ಟು ಓಡಿಹೋಗಲು ನಾನು ಸತ್ಯಸಾಯಿಬಾಬಾ ಅಲ್ಲ. ಅವರು ಇಲ್ಲಿಗೆ ಬರಲಿ. ನಾನು ಸರಿಯಾದ ಉತ್ತರ ಕೊಡುತ್ತೇನೆ. ಇನ್ನು ಮುಂದೆ ಅವರು ಈ ದೇಶದ ಸನ್ಯಾಸಿಗಳ ತಂಟೆಗೆ ಬರದಂತೆ ಪಾಠ ಕಲಿಸುತ್ತೇನೆ."
ಮೊದಲು ಮಳೆತರಿಸಿ: ಬಾಲಯೋಗಿಗಳಿಗೆ ಡಾ ಹೆಚ್. ಎನ್. ಉತ್ತರ
ಬೆಂಗಳೂರು, ಏಪ್ರಿಲ್, ೨೩: ಬೆಂಗಳೂರಿನ ಪ್ರಸಿದ್ಧ ವಿಚಾರವಾದಿಗಳಾದ ಎಚ್ ನರಸಿಂಹಯ್ಯನವರು, ಇದೇ ನಗರದ ಪ್ರಸಿದ್ಧ ಮಳೆಯೋಗಿಗಳಾದ ಶ್ರೀ ಶ್ರೀ ಶ್ರೀ ಶಿವಬಾಲಯೋಗಿಗಳಿಗೆ ತಾನು ನಿಗದಿ ಪಡಿಸಿದ ಸ್ಥಳ ಮತ್ತು ಕಾಲದಲ್ಲಿ ಮಳೆ ತರಿಸಿಕೊಡಬೇಕೆಂದು ಸವಾಲು ಹಾಕಿದ್ದಾರೆ.
ನಿನ್ನೆ ಇದೇ ಅಂಕಣದಲ್ಲಿ ಪ್ರಕಟವಾದ ಶಿವಬಾಲಯೋಗಿಗಳ ಸವಾಲಿಗೆ ನರಸಿಂಹಯ್ಯನವರ ಪ್ರತ್ಯುತ್ತರ ಇದು.
ಮಳೆ ತರಿಸಲೆಂದು ಯೋಗಿಗಳನ್ನು ಆಹ್ವಾನಿಸಿರುವ ಶ್ರೀ ಲಕ್ಷ್ಮೀಸಾಗರ್ ಅವರು ನಮ್ಮ ರಾಜ್ಯಾಂಗದ ಮೂಲತತ್ವಗಳಿಗೆ ಅಪಚಾರ ಮಾಡಿದ್ದಾರೆಂದು ಡಾ. ಹೆಚ್.ಎನ್ ಹೇಳಿದರು.
"ಶಿವಬಾಲಯೋಗಿಗಳು ಬೇಕಾದರೆ ಎಂಟು ತಿಂಗಳುಗಳ ತಯಾರಿ ನಡೆಸಲಿ. ಆದರೆ ನಾನು ಹೇಳಿದ ಕಾಲದಲ್ಲಿ, ಹೇಳಿದ ಸ್ಥಳದಲ್ಲಿ ಮಳೆ ತರಿಸ ಬೇಕು. ಅವರು ಹೀಗೆ ಮಾಡಬಲ್ಲರೇ? ಮಾಡುತ್ತಾರೆಯೇ?"
ಶಿವಬಾಲಯೋಗಿಗಳು ಸರ್ಕಾರದ ಆಮಂತ್ರಣವನ್ನು ಒಪ್ಪಿಕೊಂಡರು. ೩೦-೫-೮೫ರಂದು ತಿಪ್ಪಗೊಂಡನಹಳ್ಳಿ ಜಲಾಶಯದ ಅಂಚಿನಲ್ಲಿ ಮಳೆಗಾಗಿ ಪ್ರಾರ್ಥನೆ ನಡೆಸುವೆನೆಂದು ಬಹಿರಂಗವಾಗಿ ಘೋಷಿಸಿದರು. ಅದನ್ನು ನಿರೀಕ್ಷಿಸಲು ಪತ್ರಕರ್ತರು, ಆಕಾಶವಾಣಿಯವರು ಹಾಗೂ ದೂರದರ್ಶನದವರಿಗೆ ಕರೆ ನೀಡಿದರು. ಹೀಗೆ ದೊಡ್ಡ ಪರಿವಾರ ಮತ್ತು ಪರಿಕರದೊಂದಿಗೆ ಶಿವಬಾಲಯೋಗಿಗಳು ಪ್ರಾರ್ಥನೆ ನಡೆಸಲೆಂದು ತಿಪ್ಪಗೊಂಡನಹಳ್ಳಿಗೆ ಹೋದರು.
ಅದರ ಮಾರನೆಯ ದಿನ, ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಇನ್ನಷ್ಟು ವಿವರಗಳೊಂದಿಗೆ ಈ ಕೆಳಗಿನ ವರದಿಯು ಪ್ರಕಟವಾಯಿತು.
ಒಂದು ತಿಂಗಳಲ್ಲಿ ಕೆರೆ ತುಂಬುತ್ತದೆ: ಪ್ರಾರ್ಥನೆ ಮುಗಿಸಿದ ಯೋಗಿಯ ಆಶ್ವಾಸನೆ
ಬೆಂಗಳೂರು, ಮೇ ೩೦: ಬಿಸಿಲಿನಿಂದ ಸುಟ್ಟು ಬಿರಿದ ತಿಪ್ಪಗೊಂಡನಹಳ್ಳಿ ಕೆರೆಯ ಅಂಗಳವು ಈ ದಿನ ಶ್ರೀ ಶಿವಬಾಲಯೋಗಿಗಳು ನಡೆಸಿದ ವರುಣ ಜಪದ ವೇದಿಕೆಯಾಯಿತು. ಅಂದು ಗುರುವಾರ ಯೋಗಿಗಳು ಕುಳಿತು ಜಪ ಮತ್ತು ಧ್ಯಾನ ಮಾಡಿದರು. ಅನಂತರ ಒಂದು ತಿಂಗಳಿನೊಳೆಗೆ ಕೆರೆಯು ತುಂಬುವುದೆಂದು ಜನರಿಗೆ ಭರವಸೆ ನೀಡಿದರು.
ಭಕ್ತರು ಉನ್ಮತ್ತ ಕುಣಿತ, ಶಂಖನಾದ, ಎತ್ತರದ ಧ್ವನಿಯ ಭಜನೆ, ಉದ್ರಿಕ್ತ ಅನುಯಾಯಿಗಳ ಕೀರುದನಿಯ ಕೇಕೆಗಳಿಂದ ತಿಪ್ಪಗೊಂಡನಹಳ್ಳಿಯ ಮೌನಮುದ್ರಿತ ವಾತಾವಾರಣವು ಕಲಕಿಹೋಯಿತು. ಈ ನಿಗೂಢ, ವಿಚಿತ್ರ ಸನ್ನಿವೇಶವನ್ನು ನಗರದ ಜಲಮಂಡಳಿಯು ನಿರ್ಮಿಸಿತ್ತು.
ಈ ದಿನದ ನಾಯಕಮಣಿಯೆಂದರೆ ಶ್ರೀ ಶಿವಬಾಲಯೋಗಿಗಳು, ಅವರು ಬಿಳಿಯುಡಿಗೆ ಧರಿಸಿದ ಸ್ಥೂಲಕಾಯರು. ಸುಮಾರು ಮಧ್ಯಾಹ್ನದ ವೇಳೆಗೆ ತಮ್ಮ ಲಿಮೋಸಿನ್ ಕಾರಿನಲ್ಲಿ ಬಂದಿಳಿದರು. ಅವರು ಕೆರೆಯಂಗಳಕ್ಕೆ ಆಗಮಿಸುವಷ್ಟರಲ್ಲಿ ಒಂದು ಘಂಟೆ ತಡವಾಗಿತ್ತು. ಅವರ ಶಿಷ್ಯರಿಂದ ಸಂಭ್ರಮದ ಸ್ವಾಗತ ದೊರಕಿತು.
ಯೋಗಿಗಳನ್ನು ಕಾರಿನಿಂದ ಇಳಿಸಿ, ಒಣಗಿಹೋಗುತ್ತಿದ್ದ ಕೆರೆಯಂಗಳದಲ್ಲಿ ನಿರ್ಮಿಸಲಾಗಿದ್ದ ಚಪ್ಪರವೊಂದಕ್ಕೆ ಕರೆತರಲಾಯಿತು. ಅವರು ನಿರ್ದಿಷ್ಟ ಪಡಿಸಿದ ಜಾಗದಲ್ಲಿ ಪದ್ಮಾಸನದಲ್ಲಿ ಕುಳಿತುಕೊಂಡರು. ಕಣ್ಣುಗಳನ್ನು ಮುಚ್ಚಿದರು. ಒಂದೆರಡು ನಿಮಿಷಗಳಲ್ಲಿಯೇ ಗಾಢವಾದ ಧ್ಯಾನದಲ್ಲಿ ಲೀನವಾದರು.
ಕುತೂಹಲ ತುಂಬಿದ ಹಳ್ಳಿಗರು, ಚಿಕ್ಕಮಕ್ಕಳು, ಸಂಭ್ರಮದ ಉಡುಗೆ ಧರಿಸಿದ ಮಹಿಳೆಯರು ಹಾಗೂ ಜಲಮಂಡಳಿಯ ಕೆಲವು ಅಧಿಕಾರಿಗಳು ಅವರ ಹಿಂದೆ ಕುಳಿತಿದ್ದರು. ತನ್ನ ಸುತ್ತಲೂ ನಡೆಯುತ್ತಿದ್ದ ಈ ಆಟಾಟೋಪಗಳಿಂದ ಯೋಗಿಗಳು ವಿಚಲಿತರಾಗಲಿಲ್ಲ. ಅವರು ಧ್ಯಾನದಲ್ಲಿ ಮುಳುಗಿ ಈ ಜಗತ್ತನ್ನು ಮರೆತಿದ್ದರು. ಉಸಿರಾಟಕ್ಕೆ ಅಲ್ಪ ಸ್ವಲ್ಪ ಚಲಿಸುತ್ತಿದ್ದ ಉದರ ಭಾಗವನ್ನು ಬಿಟ್ಟರೆ ಬಂಡೆಯಂತೆ ಕುಳಿತಿದ್ದರು. ಆಗೊಮ್ಮೆ ಈಗೊಮ್ಮೆ ಭಕ್ತನೊಬ್ಬನು ಅವರ ಮೈಮೇಲೆ ಸಂಗ್ರಹವಾಗುತ್ತಿದ್ದ ಬೆವರ ಹನಿಗಳನ್ನು ಒರೆಸಿ ನೊಣಗಳನ್ನು ಓಡಿಸುತ್ತಿದ್ದನು.
ಭಜನೆ ಮತ್ತು ಶಂಖನಾದಗಳು ತಮ್ಮ ಶಿಖರವನ್ನು ಮುಟ್ಟಿದಂತೆ ಭಕ್ತರು ಮೇಲೆದ್ದು ಉನ್ಮತ್ತ ಕುಣಿತದಲ್ಲಿ ತೊಡಗಿದರು.ತಮ್ಮ ಶರೀರವನ್ನು ಆಕಡೆ ಈಕಡೆ ಓಲಾಡಿಸುತ್ತ ವೀರಾವೇಶದಿಂದ ಕುಣಿಕುಣಿದು ಶಾಮಿಯಾನವನ್ನು ಸುತ್ತತೊಡಗಿದರು.
ಭಕ್ತಳೊಬ್ಬಳು ಮೈಮೇಲೆ ಬಂದಂತೆ ಕಿರುಚಿ ಕಿರುಚಿ, ಚಪ್ಪರಕ್ಕೆ ಕಟ್ಟಿದ್ದ ಹಸಿರು ಎಲೆಗಳನ್ನು ಕಚಪಚ ಅಗಿಯತೊಡಗಿದಳು. ತಾನೂ ಅಲ್ಲಾಡದೆ ಕುಳಿತು, ಕಣ್ಣು ಗುಡ್ಡೆಗಳನ್ನು ಉರುಳಿಸುತ್ತಾ ಶೂನ್ಯದ ಕಡೆ ನಿಟ್ಟಿಸಿ ನೋಡತೊಡಗಿದಳು.
ಹಳ್ಳಿಯ ಜನರು ಈ ದೃಶ್ಯವನ್ನೂ ಶಾಂತವಾಗಿ ನೋಡಿದರು. ಸಮಾಧಿ ಸ್ಥಿತಿಯಲ್ಲಿದ್ದ ಭಕ್ತರ ಆಶೀರ್ವಾದಗಳನ್ನು ಪಡೆದರು. ಆ ಭಕ್ಕರಾದರೋ ಪ್ರೇಕ್ಷಕರ ಹಣೆಗಳನ್ನು ತಮ್ಮ ಹೆಬ್ಬೆರಳಿನಿಂದ ಉಜ್ಜುವ ಮೂಲಕ ತಮ್ಮ ಆನಂದವನ್ನು ಅವರಿಗೆ ತಲುಪಿಸಿದರು. ಬೇರೆ ಕೆಲವು ನರ್ತಕರು ತಮ್ಮ ನಾಲಿಗೆಗಳನ್ನು ಮುಂದೆ ಚಾಚಿ ಅದರ ಮೇಲೆ ಉರಿಯುವ ಕರ್ಪೂರದ ಬಿಲ್ಲೆಗಳನ್ನು ಇಡಿಸಿಕೊಂಡರು.
ಎಲ್ಲವೂ ಶಾಂತವಾಗಿ ನಡೆಯುತ್ತಿತ್ತು. ಇದ್ದಕ್ಕಿಂದತೆ ಯುವಕರ ತಂಡವೊಂದು ವೇಗವಾಗಿ ನಡೆಯುತ್ತಾ ಕಪ್ಪುಬಾವುಟಗಳನ್ನು ಬೀಸುತ್ತಾ, ಜಲಮಂಡಳಿ ಹಾಗೂ ಮೂಢನಂಬಿಕೆಗಳ ವಿರುದ್ಧ ಘೋಷಣೆ ಕೂಗುತ್ತಾ ನುಗ್ಗಿ ಬಂದಿತು. ಅವರು ಯೋಗಿಗಳು ಜಪ ಮಾಡುತ್ತಿದ್ದ ಸ್ಥಳವನ್ನು ತಲುಪುವುದಕ್ಕೆ ಮೊದಲೇ ಪೋಲೀಸರು ಅವರನ್ನು ಕರೆದುಕೊಂಡು ಹೋದರು.
ಈ ಯುವಕರು ಹೆಬ್ಬಾಳಿನ ಕೃಷಿ ವಿಶ್ವವಿದ್ಯಾಲಯದ ಸಮಾಜವಾದಿ ಅಧ್ಯಯನ ಕೇಂದ್ರಕ್ಕೆ ಸೇರಿದವರು. ಅವರು ತಮ್ಮನ್ನು ನೀರಿಕ್ಷಿಸುತ್ತಿದ್ದ ಪೋಲೀಸರ ಕಣ್ಣು ತಪ್ಪಿಸಿ ಒಳಗೆ ಬಂದಿದ್ದರು. ತಾವು ಪತ್ರಿಕೋದ್ಯೋಗಿಗಳಂತೆ ನಟಿಸುವುದರ ಮೂಲಕ ಅವರು ಒಳಗೆ ಬಂದಿದ್ದರು.
ಸಮಯ ಸಾಗುತ್ತಿತ್ತು. ಕೆಲವು ಸಲ ಆಕಾಶ ಧಗಧಗ ಉರಿಯುತ್ತಿದ್ದರೆ ಮತ್ತೆ ಕೆಲವು ಸಲ ಮೋಡಗಳು ಅದಕ್ಕೆ ಮಸುಕು ಬಣ್ಣ ಕೊಡುತ್ತಿದ್ದವು. ಹೊಟ್ಟೆ ಹಸಿದ ಹಾಗೂ ಬೇಜಾರಾದ ಹಳ್ಳಿಗರ ತಂಡ ನಿಧಾನವಾಗಿ ದೂರ ನಡೆಯತೊಡಗಿತು. ಆಸ್ಟೇಲಿಯಾದ ನಾಗರೀಕರ ತಂಡವೊಂದು, ಭಾರತದ ಮತ್ತು ಅದರ ಪವಿತ್ರ ಯೋಗಿಗಳನ್ನು ಕುರಿತು ಹರಟೆ ಹೊಡೆಯತೊಡಗಿದರು. ಅವರೆಲ್ಲರೂ ಬೆಂಗಳೂರಿನಲ್ಲಿ ನೆಲಸಿ, ಸತ್ಯ ಮತ್ತು ಜೀವನ ಅರ್ಥಕ್ಕಾಗಿ ಹುಡುಕುತ್ತಿದ್ದವರು.
ಪತ್ರಕರ್ತರು ತಮ್ಮ ಕಾವಲು ಕೆಲಸವನ್ನು ನಿಲ್ಲಿಸಿ ಐದು ನಿಮಿಷಗಳಿಗೊಮ್ಮೆ ತಮ್ಮ ಕೈಗಡಿಯಾರಗಳ ಕಡೆ ನೋಡತೊಡಗಿದರು. ಇದ್ದಕ್ಕಿದ್ದಂತೆ ಚಪ್ಪರದಲ್ಲಿ ಕೋಲಾಹಲ ಪ್ರಾರಂಭವಾಯ್ತು. ಪತ್ರಕರ್ತರು, ಯೋಗಿ ಇದ್ದಕಡೆಗೆ ಓಡಿದರು. ಛಾಯಾಗ್ರಾಹಕರು ತಮ್ಮ ಕ್ಯಾಮರಾವನ್ನು ಸರಿಪಡಿಸಿಕೊಂಡರು. ಆಗ ಸುಮಾರು ೨ ಘಂಟೆ ೪೦ ನಿಮಿಷಗಳು. ಸ್ವಾಮಿಗಳು ತಮ್ಮ ಕಣ್ಣು ತೆಗೆದು ಜಪವನ್ನು ನಿಲ್ಲಿಸಿದರು.
ಆಮೇಲೆ ನಡೆದದ್ದು ಸಂಕ್ಷಿಪ್ತವಾದ ಆಚರಣೆ. ಯೋಗಿಗಳು ವಿಭೂತಿಯನ್ನು ಅನುಗ್ರಹಿಸಿದರು. ಅಗರ ಬತ್ತಿಗಳನ್ನು ಹಚ್ಚಿದರು. ಅವರಿಗೆಂದು ಐದು ತೆಂಗಿನಕಾಯಿಗಳನ್ನು ಅರ್ಪಿಸಲಾಯಿತು. ಅವರು ಅವುಗಳನ್ನು ಅನುಗ್ರಹಿಸಿ ಜಲಮಂಡಳಿಯ ಅಧಿಕಾರಿಗಳಿಗೆ ಹಿಂದುರಿಗಿಸಿದರು. ಅವರಾದರೋ ಅವುಗಳನ್ನು ಕೆರೆಗೆ ಸಮರ್ಪಿಸಿದರು. ಕೆರೆಯ ಕೆಸರು ಬಣ್ಣದ ನೀರು ಕ್ಷಣಕಾಲ ಕುಂಕುಮ ರಾಶಿ ಕರಗಿ ಕೆಂಪು ಬಣ್ಣ ತಳೆಯಿತು. ಕ್ರಮೇಣ ಕೆರೆಯ ಅಲೆಗಳು ಅವನ್ನೂ ನುಂಗಿದವು.
ಇದಾದ ಮೇಲೆ ಯೋಗಿಗಳ ಘನ ಆಶೀರ್ವಚನ ಸಮಯ ಬಂತು. ಪತ್ರಕರ್ತರಿಗೆ ಮೊಸರನ್ನದ ಸೇವೆ ನಡೆಯಿತು. ಅದನ್ನು ಜಲಮಂಡಳಿಯ ನೌಕರರ ಕಾಣಿಕೆಗಳಿಂದ ತಯಾರಿಸಲಾಗಿತ್ತು. ಎಲ್ಲರೂ ಅತಿಥಿ ಗೃಹಕ್ಕೆ ಹೋದರು. ಭಕ್ತಾದಿಗಳು ರತ್ನಗಂಬಳಿಯ ಮೇಲೆ ಕುಳಿತರು.
ಪತ್ರಕರ್ತರು ಪ್ರಶ್ನೆಗಳ ಸುರಿಮಳೆಯನ್ನು ಪ್ರಾರಂಭಿಸಿದರು
"ಹೇಳಿ, ಈ ಮೂರು ಘಂಟೆಗಳ ಕಾಲ ನಾನು ಯಾರಿಗಾದರೂ ತೊಂದರೆ ಕೊಟ್ಟೆನೆ? ನಾನು ಜನರನ್ನು ಮೋಸ ಮಾಡುತ್ತಿದ್ದೇನೆಯೇ? ನಾನು ಜನರ ಸೇವಕ" ಡಾ. ನರಸಿಂಹಯ್ಯನವರ ಮಾತು ಬಂದಾಗ ಅವರು ಹೀಗೆ ಹೇಳಿದರು.
"ನೂರಾರು ಸಾವಿರಾರು ಮಂತ್ರಿಗಳು, ಉಪಕುಲಪತಿಗಳು ಇರಬಹುದು. ಆದರೆ ಯೋಗಿ ಒಬ್ಬನೇ. ಅವರು ಪ್ರಜ್ಞೆ ಸರಿಮಾಡಿಕೊಳ್ಳಲಿ. ನನ್ನ ಅನುಭವಗಳನ್ನು ಮೊದಲು ಅರ್ಥ ಮಡಿಕೊಂಡು ನಂತರ ಸವಾಲು ಹಾಕಲಿ. ನಾನು ತಯಾರಿದ್ದೇನೆ. ಅವರು ತಮ್ಮ ಪ್ರಶ್ನೆಗಳನ್ನು ಬರವಣಿಗೆಯಲ್ಲಿ ಕಳಿಸಲಿ ನಮ್ಮ ಸಮ್ಮುಖದಲ್ಲಿ ಅದನ್ನು ಬಗೆಹರಿಸೋಣ." ಎಂದು ಅವರು ಪತ್ರಕರ್ತರಿಗೆ ಹೇಳಿದರು. ವಿಚಾರವಾದಿಯು ಆರಿಸಿದ ಸ್ಥಳ, ಸಮಯದಲ್ಲಿ ಮಳೆ ತರಿಸಲಾದೀತೆ ಎಂಬ ಸವಾಲನ್ನು ಜ್ಞಾಪಿಸಿದಾಗ ಯೋಗಿ ಉರಿದೆದ್ದು "ನರಸಿಂಹಯ್ಯ ನನ್ನ ದೊರೆಯಲ್ಲ. ಅವರು ಸೌಮ್ಯರಾಗಿ ಮಾತನಾಡುವುದನ್ನು ಕಲಿಯಲಿ. ಇಂಥ ಹುಚ್ಚು ಪ್ರಶ್ನೆಗಳಿಗೆ ನಾನು ಉತ್ತರಿಸಬೇಕಾದ್ದು ಅವಶ್ಯವಿಲ್ಲವೆಂದುಕೊಂಡಿದ್ದೇನೆ."
೩೦ ದಿನಗಳ ಅವಧಿ ಮುಗಿದು ಹೋಯಿತು. ಇಂಡಿಯನ್ನ್ ಎಕ್ಸ್‌ಪ್ರೆಸ್ ವಿವರಿಸಿದ ಪರಿಸ್ಥಿತಿ ಈ ರೀತಿ ಇದೆ:
ಯೋಗಿ ಹೊಸ ಸಬೂಬುಗಳನ್ನು ಹೇಳುತ್ತಿರುವಂತೆ ಜಲಾಗಾರ ಇನ್ನೂ ಬತ್ತಿಕೊಂಡೇ ಇದೆ.
ಬೆಂಗಳೂರು ಜೂನ್, ೨೯: ಯೋಗಿ ನಿರ್ದಿಷ್ಟವಾಗಿ ಹೇಳಿದ್ದ ೩೦ನೇ ದಿನದ ಕೊನೆಯಾಗಿದೆ. ತಿಪ್ಪಗೊಂಡನಹಳ್ಳಿ ಜಲಾಗಾರದಲ್ಲಿ ಮಳೆ ತರಿಸಲು ಸರ್ಕಾರ ಶಿವಬಾಲಯೋಗಿಯನ್ನು ನೇಮಿಸಿದ್ದರೂ ನೀರು ೧೪.೫ ಅಡಿಯಿಂದ ೭.೫ ಅಡಿಗೆ ಇಳಿದರೂ ಯೋಗಿಗೆ ಅವಮಾನವಾದಂತೆ ಕಾಣುವುದಿಲ್ಲ.
ಈಗ ಹೊಸ ವಿಚಾರವನ್ನು ಹುಟ್ಟಿಸಿಕೊಂಡಿದ್ದಾರೆ. "ಈ ೩೦ ದಿನಗಳೂ ಕೇವಲ ತಿಪ್ಪಗೊಂಡನಹಳ್ಳಿಗಾಗಿಯೇ ನಾನು ಪ್ರಾರ್ಥಿಸುತ್ತಿದ್ದನೆಂದು ನಿಮಗೆ ಹೇಳಿದವರಾರು?" ಎಂದು ಪತ್ರಕರ್ತರಿಗೆ ಕೇಳಿದರು. "ನಾನು ಇಡೀ ರಾಜ್ಯಕ್ಕಾಗಿ ಪ್ರಾರ್ಥಿಸುತ್ತಿದ್ದೆ. ಇಡೀ ರಾಜ್ಯದಲ್ಲಿ ಈಗ ಮಳೆ ಸುರಿಯುತ್ತಿಲ್ಲವೇ?" "ತಿಪ್ಪನಗೊಂಡನಹಳ್ಳಿಯಲ್ಲೂ ಮಳೆ ಸುರಿಯುತ್ತದೆ." ತಮ್ಮ ಬಲೆಯಲ್ಲೇ ತಾವು ಬೀಳುತ್ತಾ "ಇನ್ನೇನು ಒಂದು ವಾರದಲ್ಲೋ, ಹದಿನೈದು ದಿನದಲ್ಲೋ ಮಳೆ ಬೀಳುತ್ತದೆ. ಆ ಎಲ್ಲ ಜಾಗಗಳ ಮಳೆ ನಿಲ್ಲಿಸಿ ಇಲ್ಲಿ ಮಾತ್ರ ಮಳೆ ತರಿಸುವುದು ನ್ಯಾಯವೇ? ಇಡೀ ರಾಜ್ಯದ ನೀರನ್ನು ತಡೆದು ತಿಪ್ಪಗೊಂಡನಹಳ್ಳಿಗೆ ಮಾತ್ರ ನೀರು ಬರುವಂತೆ ಮಾಡುವುದು ಸರಿಯೇ?"
ಅವರೇ ಅಲ್ಲವೇ ಒಂದು ತಿಂಗಳಲ್ಲಿ ತಿಪ್ಪಗೊಂಡನಹಳ್ಳಿ ಕಂಠಪೂರ್ತಿ ತುಂಬುವುದೆಂದು ಹೇಳಿದ್ದವರು? ಈ ಪ್ರಶ್ನೆಗೂ ಯೋಗಿಯಲ್ಲಿ ಉತ್ತರ ತಯಾರಾಗಿತ್ತು. "ನೋಡಿ, ತಿಪ್ಪಗೊಂಡನಹಳ್ಳಿಯ ಸುತ್ತ ಬರಡು ನೆಲದ್ದೆ ತೊಂದರೆ. ಏನಂದರೆ ಜಲಾಗಾರಕ್ಕೆ ನೀರಿಳಿಯುವ ಮುನ್ನವೇ ಈ ಬಂಜರು ಭೂಮಿ ನೀರು ಕುಡಿದು ಬಿಡುತ್ತದೆ."
ಯಾರಾದರೂ ತಾವು ಕೇವಲ ತಿಪ್ಪಗೊಂಡನಹಳ್ಳಿಗಾಗಿ ಪ್ರಾರ್ಥಿಸಿತ್ತಿದ್ದುದಾಗಿ ತಿಳಿದಿದ್ದರೆ ಅದು ತಪ್ಪೆಂದು ಅವರು ಹೇಳಿದರು.
"ನಾನು ಇನ್ನೂ ಹೆಚ್ಚಿನ ಕಾಲಾವಕಾಶ ಗೊತ್ತು ಪಡಿಸಬೇಕಿತ್ತು. ಆಗ ನಿಮ್ಮ ಮನಸ್ಸಿನಲ್ಲಿ ಹುಟ್ಟುವ ಈ ಗೊಂದಲಗಳು ಹುಟ್ಟುತ್ತಿರಲಿಲ್ಲವೇನೋ" ಎಂದು "ಎಂದೂ ಸೋಲದ" ಯೋಗಿ ಹೇಳಿದರು.
"ನಾನೆಂದೂ ಸೋಲುವುದಿಲ್ಲ" ತನ್ನ ಸಣ್ಣ ಧ್ವನಿಯಲ್ಲಿ ಯೋಗಿ ಹೇಳಿದರು. "ಈ ಬರಡು ರಾಜ್ಯಕ್ಕೆ ಮಳೆ ತರಿಸಲು ನಾನು ನನ್ನ ಅರೋಗ್ಯವನ್ನೇ ಹಾಳುಮಾಡಿಕೊಂಡಿದ್ದೇನೆ. ಪ್ರತಿದಿನ ಮುಂಜಾನೆ ಮೂರು ಘಂಟೆ ಕಾಲ ನಾನು `ಧ್ಯಾನ ` ಮಾಡುತ್ತೇನೆ. ತಿಪ್ಪಗೊಂಡನಹಳ್ಳಿಗಾಗಿಯೇ ವಿಶೇಷವಾಗಿ ಚಿಂತಿಸಬೇಡಿ. ಇಷ್ಟರಲ್ಲೇ ಮಳೆ ಸುರಿಯುತ್ತದೆ."
ಯಾವುದಾದರೂ ಅಪಶಕುನವು ದುಷ್ಟಶಕ್ತಿಗಳು ಅಡ್ಡ ಬಂದಿದೆಯೇ? ಎಂಬ ಪ್ರಶ್ನೆಗೆ "ಇಲ್ಲ, ಇಲಾಖೆಯವರು ನನಗೆ ಇದೇ ಪ್ರಶ್ನೆ ಕೇಳಿದರು. ವಿಚಾರವಾದಿಗಳು ಕಪ್ಪುಬಾವುಟ ಬೀಸಿದರು. ಗಲಾಟೆ ಮಾಡಿದರು. ಇಂಥವಕ್ಕೆಲ್ಲ ನಾನು ಚಿಂತಿಸುವುದಿಲ್ಲ. ನಾನು ನಿಜವಾದ ವಿಚಾರವಾದಿ. ಅವರಲ್ಲ. ನಾನು ಜನಪರ, ಅವರ ಕಪ್ಪು ಬಾವುಟಗಳು ಮಳೆ ತರಿಸಬಹುದೇ?"
"ಈ ದಿನ ಯೋಗಿ ಅತ್ಯಂತ ಕರುಣಾಜನಕವಾದ, ತನ್ನ ಮೇಲೆ ತಾನೇ ಗೂಬೆ ಕೂರಿಸಿಕೊಂಡ ವ್ಯಕ್ತಿ" ಎಂದು ಡಾ. ನರಸಿಂಹಯ್ಯನವರು ಹೇಳತೊಡಗಿದರು. ದೇವಪುರುಷರು ಮತ್ತು ಪವಾಡ ಪುರುಷರನ್ನು ಕುರಿತು ಮಾತನಾಡತೊಡಗಿದರೆ ಅವರಿಗೆ ಎಲ್ಲಿಲ್ಲದ ಉತ್ಸಾಹ.
"ಇವರು ಕೂಡ ರಾಜಕಾರಣಿಗಳಂತೆ ಜನರಿಗೆ ಬಾಯಿಗೆ ಬಂದಂತೆ ಭರವಸೆ ನೀಡಿದರು. ಈಗ ಅದರ ಪ್ರತಿಫಲವನ್ನು ಅನುಭವಿಸುತ್ತಿದ್ದಾರೆ." ಆದರೆ ನರಸಿಂಹಯ್ಯನವರು ಶಿವಬಾಲಯೋಗಿ ಜಾಣನೆಂದು ಒಪ್ಪಿಕೊಂಡರು. ಏಕೆಂದರೆ ಅವರು ಬೇಕೆಂದೇ ಮೂವತ್ತು ದಿನಗಳ ಗಡಿಗೆರೆಯನ್ನು ಹಾಕಿದ್ದರು. ಅಷ್ಟರಲ್ಲಿ ಮಳೆಗಾಲ ಯಾವಾಗ ಬೇಕಾದರೂ ಪ್ರಾರಂಭವಾಗಬಹುದಿತ್ತು. ಆದರೆ ಮಳೆ ಕೂಡ ಬಡಪಾಯಿಯೊಡನೆ ಸಹಕರಿಸಲಿಲ್ಲ. ಅವರು ಜನಗಳ ಎದುರು ನಗೆಪಾಟಲಾದರು.
ಈ ಯೋಗಿ ಕೊನೆಯ ದಿನವನ್ನು ಮುಂದೆ ಹಾಕುತ್ತಲೇ ಹೋಗುತ್ತಾರೆ. ಒಂದಲ್ಲ ಒಂದು ದಿನ ಕೆರೆ ಸಹಜವಾದ ಕಾರಣದಿಂದಲೇ ತುಂಬುತ್ತದೆ. ಪಾಪ, ಹೇಗಾದರೂ ಮಾಡಿ ಅವರು ತಮ್ಮ ಮರ್ಯಾದೆ ಉಳಿಸಿಕೊಳ್ಳಬೇಕಲ್ಲ. ಆದರೆ ಸಾಯಿಬಾಬಾ ಇವರಿಗಿಂತ ಜಾಣ. ಅವರು ನನ್ನ ಸವಾಲನ್ನು ಒಪ್ಪಿಕೊಳ್ಳಲೇ ಇಲ್ಲ. ಇವರು ಒಪ್ಪಿಕೊಂಡರು ಮತ್ತು ಹೆಸರು ಕೆಡಿಸಿಕೊಂಡರು.
ಆದರೆ ರಾಜ್ಯದ ಲಿಂಗನಮಕ್ಕಿ ಮತ್ತು ಇತರ ದೊಡ್ಡ ಜಲಾಶಯಗಳು ಸ್ವಾಮಿಗಳ ಯಾವ ಸಹಾಯವೂ ಇಲ್ಲದೆ ಮಳೆಯಿಂದಲೇ ತುಂಬುತ್ತಿರವ ಸಂಗತಿಯ ಕಡೆ ಅವರ ಗಮನ ಸೆಳೆದರು. ಇನ್ನು ಮೇಲಾದರೂ ಶಿವಬಾಲಯೋಗಿಗಳು ಇಂತಹ ಹುಚ್ಚುಸಾಹಸಗಳನ್ನು ನಿಲ್ಲಿಸಿ ತಮ್ಮ ಜೀವಿತದ ಉಳಿದ ಭಾಗವನ್ನು ನಿರಪಾಯಕಾರಿಯಾದ ಭಜನೆಗಳಲ್ಲಿ ಕಳೆಯಬೇಕೆಂದು ಅವರು ಸಲಹೆ ಕೊಟ್ಟರು.
ಇನ್ನು ಮೇಲಾದರೂ ಕರ್ನಾಟಕ ಸರ್ಕಾರವು ತನ್ನ ತಪ್ಪನ್ನು ತಿಳಿದುಕೊಳ್ಳುವುದೆಂದು ಅವರು ಆಶಿಸಿದರು. ಜಲಮಂಡಳಿ ಕೂಡಾ ಈ ರೀತಿಯ ವ್ಯರ್ಥಪ್ರಯತ್ನಗಳನ್ನು ನಿಲ್ಲಿಸಬಹುದೆಂದು ನಿರೀಕ್ಷಿಸಿದರು.
ಹೀಗೆ ಶಿವಬಾಲ ಯೋಗಿಯವರು ಸಾರ್ವಜನಿಕರ ದೃಷ್ಟಿಯಲ್ಲಿ ನಗೆಪಾಟಲಿಗೆ ಗುರಿಯಾದರು. ಅವರು ಈ ಐತಿಹಾಸಿಕ ಪರಾಭವದಿಂದ ಕಹಿಯಾದ ಪಾಠವೊಂದನ್ನು ಕಲಿತಿರುವರೆಂಬ ಆಸೆ ನನ್ನದು. ಅವರು ಇನ್ನು ಮೇಲೆ ದೇವರು, ಧರ್ಮ ಮತ್ತು ಪ್ರಾರ್ಥನೆಗಳ ಹೆಸರಿನಲ್ಲಿ ಜನರನ್ನು ವಂಚಿಸುವುದನ್ನು ನಿಲ್ಲಿಸಬೇಕು. ನಿಜವಾಗಲೂ ಆಧ್ಯಾತ್ಮಿಕ ಶಕ್ತಿಯುಳ್ಳ ಮಹಾನುಭಾವರು ಈ ರೀತಿ ಅಗ್ಗದ ಸಾರ್ವಜನಿಕ ಪ್ರದರ್ಶನಗಳಲ್ಲಿ ತೊಡುಗುವುದಿಲ್ಲ.

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು