ಬಸವಣ್ಣನ ವಚನಗಳು 201- 300

೨೦೧.
ಊರ ಸೀರೆಗೆ ಅಸಗ ಬಡಿವಡೆದಂತೆ
ಹೊನ್ನೆನ್ನದು, ಹೆಣ್ಣೆನ್ನದು, ಮಣ್ಣೆನ್ನದು,
ಎಂದು ಮರುಳಾದೆ.
ನಿಮ್ಮನರಿಯದ ಕಾರಣ,
ಕೆಮ್ಮನೆ ಕೆಟ್ಟೆ ಕೂಡಲಸಂಗಮದೇವ.
೨೦೨.
ಕಾಂಚನವೆಂಬ ನಾಯ ನೆಚ್ಚಿ
ನಿಮ್ಮ ನಾನು ಮರೆದೆನಯ್ಯ.
ಕಾಂಚನಕ್ಕೆ ವೇಳೆಯಲ್ಲದೆ, ಲಿಂಗಕ್ಕೆ ವೇಳೆಯಿಲ್ಲ!
ಹಡಕಿಗೆ ಮೆಚ್ಚಿದ ಸೊಣಗನಮೃತದ ರುಚಿಯ ಬಲ್ಲುದೇ ?
ಕೂಡಲಸಂಗಮದೇವ.
೨೦೩.
ಹಗೆಹದಲ್ಲಿ ಬಿದ್ದವರ ಮೇಲೆ ಒರಳ ನೂಂಕುವರೆ ?
ಕೋಳದ ಮೇಲೆ ಸಂಕಲೆಯನಿಕ್ಕುವರೆ ?
ಬೆಂದ ಹುಣ್ಣ ಕಂಬಿಯಲ್ಲಿ ಕೀಸುವರೆ ?
ಕೂಡಲಸಂಗಯ್ಯ ಕಾಡುವ ಕಾಟ
ಸಿರಿಯಾಳಂಗಲ್ಲದೆ ಸೈರಿಸಬಹುದೆ ?
೨೦೪.
ಮಾತಿನಲ್ಲಿ ಶ್ರೋತ್ರಸುಖವ ನುಡಿಯಬಹುದಲ್ಲದೆ,
ಮಾಡುವ ಸತ್ಕ್ರಿಯೆಯಿಂದ ಭಕ್ತನೆನಿಸಲು ಬಾರದು.
ಅರ್ಥಪ್ರಾಣಾಭಿಮಾನವಾರಿಗೆಯು ಸಮನಿಸದು,
ಲಿಂಗಮುಖದಲುದಯವಾದ ಶರಣಂಗಲ್ಲದೆ,
ಅಯ್ಯ, ಕೂಡಲಸಂಗನ ಶರಣರ
ಭಕ್ತಿಭಂಡಾರವು ಎನಗೆಂತು ಸಾಧ್ಯವಪ್ಪುದು,
ಹೇಳೆನ್ನ ತಂದೆ.
೨೦೫.
ಬಾಣಮಯೂರರಂತೆ ಬಣ್ಣಿಸಲರಿಯೆ
ಸಿರಿಯಾಳನಂತೆ ಉಣಲಿಕ್ಕಲರಿಯೆ
ದಾಸಿಮಯ್ಯನಂತೆ ಉಡಕೊಡಲರಿಯೆ
ಉಂಡುಟ್ಟು ಕೊಟ್ಟರೆ ಮುಯ್ಯಿಗೆ ಮುಯ್ಯೆನಿಸಿತ್ತು,
ಎನಗೆ ಕೊಟ್ಟರೆ ಧರ್ಮ ಕೂಡಲಸಂಗಮದೇವ.
೨೦೬.
ಎನ್ನ ತಪ್ಪನಂತಕೋಟಿ
ನಿಮ್ಮ ಸೈರಣೆಗೆ ಲೆಕ್ಕವಿಲ್ಲಯ್ಯ.
ಇನ್ನು ತಪ್ಪಿದೆನಾದರೆ
ನಿಮ್ಮ ಪಾದವೇ ದಿವ್ಯ ಕೂಡಲಸಂಗಮದೇವಯ್ಯ,
ನಿಮ್ಮ ಪ್ರಮಥರ ಮುಂದೆ ಕಿನ್ನರಿ ಬೊಮ್ಮಣ್ಣನೇ ಸಾಕ್ಷಿ!
೨೦೭.
ಅಡಿಗಡಿಗೆ ಎನ್ನ ಮನವ ಜಡಿದು ನೋಡದಿರಯ್ಯ.
ಬಡವನೆಂದೆನ್ನ ಕಾಡದಿರಯ್ಯ
ಎನಗೊಡೆಯರುಂಟು ನಮ್ಮ ಕೂಡಲಸಂಗನ ಶರಣರು.
೨೦೮.
ಮನೆ ನೋಡಾ ಬಡವರು,
ಮನ ನೋಡಾ ಧೀರರು
ಸೋಂಕಿನಲ್ಲಿ ಶುಚಿ;
ಸರ್ವಾಂಗಕಲಿ.
ಪರಸಕ್ಕನುವಿಲ್ಲ; ಬಂದ ತತ್ಕಾಲಕ್ಕುಂಟು.
ಕೂಡಲಸಂಗನ ಶರಣರು ಸ್ವತಂತ್ರಧೀರರು.
೨೦೯.
ಆ ಕರಿಯಾಕೃತಿಯ ಸೂಕರನ ಹೋಲಿಸಿದರೆ
ಸೂಕರ ಆ ಕರಿಯಾಗಬಲ್ಲುದೆ ?
ಆ ವ್ಯಾಳೇಶನಾಕೃತಿಯ ಭೂನಾಗನ ಹೋಲಿಸಿದರೆ
ಭೂನಾಗನಾ ವ್ಯಾಳೇಶನಾಗಬಲ್ಲುದೇ ?
ನಾನು ಭಕ್ತನಾದರೇನಯ್ಯ
ನಮ್ಮ ಕೂಡಲಸಂಗಮದೇವರ ಸದ್ಭಕ್ತರ ಹೋಲಲರಿವೆನೆ ?
೨೧೦.
ಮೋಟನ ಮೌಳಿ, ಮೂಕೊರತಿಯ ಶೃಂಗಾರ,
ಬೇಟ ಕುರುಡಂಗೆ ನಗೆಗೆಡೆಯಾಯಿತ್ತು!
ನಮ್ಮ ಕೂಡಲಸಂಗನ ಶರಣರ ಮುಂದೆ
ಆನು ಭಕ್ತನೆಂಬ ನಾಚಿಕೆ ಸಾಲದೆ ?
೨೧೧.
ಮಾವಿನ ಕಾಯೊಳಗೊಂದು ಎಕ್ಕೆಯ ಕಾಯಿ ನಾನಯ್ಯ!
ನಾನು ಭಕ್ತನೆಂತೆಂಬೆ ನಿಮ್ಮ ಶರಣರ ಮುಂದೆ ನಾಚಿಕೆಯಿಲ್ಲದೆ ?
ಕೂಡಲಸಂಗನ ಶರಣರ ಮುಂದೆ ನಾನೆಂತು ಭಕ್ತನಪ್ಪೆನಯ್ಯ ?!
೨೧೨.
ಮರದ ನೆಳಲಲ್ಲಿದ್ದು ತನ್ನ ನೆಳಲನರಸುವರೆ ?
ನಿಮ್ಮ ಶರಣರ ಮುಂದೆ ನಾನೇತರ ಭಕ್ತನಯ್ಯ!
ನಿಮ್ಮ ಶರಣರ ಮುಂದೆ ನಾನೇತರ ಯುಕ್ತನಯ್ಯ!
ನಾನು ಭಕ್ತನೆಂಬ ನುಡಿ ಸುಡದೆ ಕೂಡಲಸಂಗಮದೇವ.
೨೧೩.
ಎನಗಿಂತ ಕಿರಿಯರಿಲ್ಲ!
ಶಿವಭಕ್ತರಿಗಿಂತ ಹಿರಿಯರಿಲ್ಲ.
ನಿಮ್ಮ ಪಾದ ಸಾಕ್ಷಿ ಎನ್ನ ಮನ ಸಾಕ್ಷಿ!
ಕೂಡಲಸಂಗಮದೇವಾ ಎನಗಿದೇ ದಿಬ್ಯ.
೨೧೪.
ಅರ್ಚಿಸಲರಿಯೆ, ಪೂಜಿಸಲರಿಯೆ,
ನಿಚ್ಚ ನಿಚ್ಚ ಶಿವರಾತ್ರಿಯ ನಾ ಮಾಡಲರಿಯೆ!
ಕಪ್ಪಡಿವೇಷದಿಂದಾನು ಬಂದಾಡುವೆ.
ಕಪ್ಪಡಿವೇಷದಿಂದ, ಈಶ,
ನಿಮ್ಮ ದಾಸರ ದಾಸಿಯ ದಾಸ ನಾನಯ್ಯ.
ನಿಮ್ಮ ವೇಷಧಾರಿಯ ಮನೆಯ ಪಂಗುಳ ನಾನಯ್ಯ.
ಕೂಡಲಸಂಗಮದೇವ, ನಿಮ್ಮ ಲಾಂಛನವ ಧರಿಸಿಪ್ಪ
ಉದರಪೋಷಕ ನಾನಯ್ಯ.
೨೧೫.
ಅಪ್ಪನು ಡೋಹರ ಕಕ್ಕಯ್ಯನಾಗಿ,
ಮುತ್ತಯ್ಯ ಚೆನ್ನಯ್ಯನಾದರೆ ಆನು ಬದುಕೆನೆ ?
ಮತ್ತಾ ಶ್ವಪಚಯ್ಯನ ಸನ್ನಿಧಿಯಿಂದ
ಭಕ್ತಿಯ ಸದ್ಗುಣವ ನಾನರಿಯೆನೆ ?
ಕಷ್ಟಜಾತಿಜನ್ಮದಲ್ಲಿ ಜನಿಯಿಸಿದೆ ಎನ್ನ,
ಎನಗಿದು ವಿಧಿಯೇ ಕೂಡಲಸಂಗಮದೇವ ?
೨೧೬.
ಉತ್ತಮ ಕುಲದಲ್ಲಿ ಹುಟ್ಟಿದೆನೆಂಬ
ಕಷ್ಟತನದ ಹೊರೆಯ ಹೊರಿಸಿದಿರಯ್ಯ!
ಕಕ್ಕಯನೊಕ್ಕುದನಿಕ್ಕ ನೋಡಯ್ಯ,
ದಾಸಯ್ಯ ಶಿವದಾನವನೆರೆಯ ನೋಡಯ್ಯ.
ಮನ್ನಣೆಯ ಚೆನ್ನಯ್ಯನೆನ್ನುವ ಮನ್ನಿಸ.
ಉನ್ನತಮಹಿಮ ಕೂಡಲಸಂಗಮದೇವಾ
ಶಿವಧೋ! ಶಿವಧೋ!!
೨೧೭.
ಸೆಟ್ಟಿ ಎಂಬೆನೆ ಸಿರಿಯಾಳನ ?
ಮಡಿವಾಳನೆಂಬೆನೆ ಮಾಚಯ್ಯನ ?
ಡೋಹರನೆಂಬೆನೆ ಕಕ್ಕಯ್ಯನ ?
ಮಾದಾರನೆಂಬೆನೆ ಚೆನ್ನಯ್ಯನ ?
ಆನು ಹಾರುವನೆಂದರೆ,
ಕೂಡಲಸಂಗಯ್ಯ ನಗುವನಯ್ಯ.
೨೧೮.
ಸೂಳೆಗೆ ಹುಟ್ಟಿದ ಕೂಸಿನಂತೆ
ಆರನಾದರೆಯೂ 'ಅಯ್ಯ' 'ಅಯ್ಯ' ಎನಲಾರೆನಯ್ಯ.
ಚೆನ್ನಯ್ಯನೆಮ್ಮಯ್ಯನು,
ಚೆನ್ನಯ್ಯನ ಮಗ ನಾನು;
ಕೂಡಲಸಂಗನ ಮಹಾಮನೆಯಲ್ಲಿ
ಧರ್ಮಸಂತಾನ ಭಂಡಾರಿ ಬಸವನು!
೨೧೯.
ಭಕ್ತಿ ಇಲ್ಲದ ಬಡವ ನಾನಯ್ಯ.
ಕಕ್ಕಯ್ಯನ ಮನೆಯಲು ಬೇಡಿದೆ.
ದಾಸಯ್ಯನ ಮನೆಯಲು ಬೇಡಿದೆ.
ಚೆನ್ನಯ್ಯನ ಮನೆಯಲು ಬೇಡಿದೆ,
ಎಲ್ಲ ಪುರಾತರು ನೆರೆದು,
ಭಕ್ತಿ-ಭಿಕ್ಷವನಿಕ್ಕಿದರೆ ಎನ್ನ ಪಾತ್ರೆ ತುಂಬಿತ್ತು.
ಕೂಡಲಸಂಗಮದೇವ.
೨೨೦.
ಅರಸರ ಮನೆಯಲ್ಲಿ ಅರಸಿಯಾಗಿಪ್ಪುದರಿಂದ
ಭಕ್ತರ ಮನೆಯಲ್ಲಿ ತೊತ್ತಾಗಿಪ್ಪುದು ಕರ ಲೇಸಯ್ಯ.
ತಾರೌ ಅಗ್ಗವಣಿಯ, ನೀಡೌ ಪತ್ರೆಯ,
ಲಿಂಗಕ್ಕೆ ಬೋನವ ಹಿಡಿಯೌ ಎಂಬರು;
ಕೂಡಲಸಂಗನ ಮಹಾಮನೆಯಲ್ಲಿ ಒಕ್ಕುದನುಣ್ಣೌ
ತೊತ್ತೇ ಎಂಬರು.
೨೨೧.
ಮೇಲಾಗಲೊಲ್ಲೆ ಕೀಳಾಗಲೊಲ್ಲದೆ!
ಕೀಳಿಂಗಲ್ಲದೆ ಹಯನು ಕರೆವುದೆ ?
ಮೇಲಾಗಿ ನರಕದಲೋಲಾಡಲಾರೆನು!
ನಿಮ್ಮ ಶರಣರ ಪಾದಕ್ಕೆ ಕೀಳಾಗಿರಿಸು
ಮಹಾದಾನಿ ಕೂಡಲಸಂಗಮದೇವ.
೨೨೨.
ಕಾಗೆ ವಿಷ್ಟಿಸುವ ಹೊನ್ನಕಳಶವಹುದರಿಂದ,
ಒಡೆಯರು ಜೋಗೈಸುವ ಚಮ್ಮಾವುಗೆಯ ಮಾಡಯ್ಯ.
ಅಯ್ಯ, ನಿಮ್ಮ ಶರಣರ ಪಾದಕ್ಕೆ ಚಮ್ಮಾವುಗೆಯ ಮಾಡಯ್ಯ.
"ಕರ್ಮಾವಲಂಬಿನಃ ಕೇಚಿತ್
ಕೇಚಿತ್ ಜ್ಞಾನಾವಲಂಬಿನಃ
ವಯಂತು ಶಿವಭಕ್ತಾನಾಂ
ಪಾದರಕ್ಷಾವಲಂಬಿನಃ"
ಕೂಡಲಸಂಗಮದೇವ ನಿಮ್ಮ ಸೆರಗೊಡ್ಡಿ ಬೇಡುವೆನು
ಇದೊಂದೇ ವರವ ಕರುಣಿಸಯ್ಯ.
೨೨೩.
ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ,
ಅಂಬುಜಕ್ಕೆ ಭಾನುವಿನ ಉದಯದ ಚಿಂತೆ.
ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ.
ಎನಗೆ ನಮ್ಮ ಕೂಡಲಸಂಗಮದೇವರ
ನೆನೆವುದೇ ಚಿಂತೆ!
೨೨೪.
ಹೊಲಬುಗೆಟ್ಟ ಶಿಶು ತನ್ನ ತಾಯನರಸುವಂತೆ,
ಬಳಿದಪ್ಪಿದ ಪಶು ತನ್ನ ಹಿಂಡನರಸುವಂತೆ,
ಬಯಸುತ್ತಿದ್ದೆನಯ್ಯ ನಿಮ್ಮ ಭಕ್ತರ ಬರವನು!
ಬಯಸುತ್ತಿದ್ದೆನಯ್ಯ ನಿಮ್ಮ ಶರಣರ ಬರವನು!
ದಿನಕರನುದಯಕ್ಕೆ ಕಮಳ ವಿಕಸಿತವಾದಂತೆ
ಎನಗೆ ನಿಮ್ಮ ಶರಣರ ಬರವು ಕೂಡಲಸಂಗಮದೇವ.
೨೨೫.
ಸೂರ್ಯನುದಯ ತಾವರೆಗೆ ಜೀವಾಳ!
ಚಂದ್ರಮನುದಯ ನೈದಿಲೆಗೆ ಜೀವಾಳ!
ಕೂಪರ ಠಾವಿನಲ್ಲಿ ಕೂಟ-ಜೀವಾಳವಯ್ಯ.
ಒಲಿದ ಠಾವಿನಲ್ಲಿ ನೋಟ-ಜೀವಾಳವಯ್ಯ.
ಕೂಡಲಸಂಗನ ಶರಣರ ಬರವೆನಗೆ
ಪ್ರಾಣ-ಜೀವಾಳವಯ್ಯ.
೨೨೬.
ಕಂಡರೆ ಮನೋಹರವಯ್ಯ,
ಕಾಣದಿದ್ದರೆ ಅವಸ್ಥೆ ನೋಡಯ್ಯ.
ಹಗಲು ಇರುಳಹುದು; ಇರುಳು ಹಗಲಹುದು.
ಇರುಳು ಹಗಲೊಂದು
ಜುಗ ಮೇಲೆ ಕೆಡೆದಂತೆ ಇಹುದು.
ಕೂಡಲಸಂಗನ ಶರಣರನಗಲುವ ಧಾವತಿಯಿಂದ
ಮರಣವೇ ಲೇಸು ಕಂಡಯ್ಯ.
೨೨೭.
ಅಂಗೈ ತಿಂದುದು, ಎನ್ನ ಕಂಗಳು ಕೆತ್ತಿಹವಯ್ಯ.
ಬಂದಹರಯ್ಯ ಪುರಾತರೆನ್ನ ಮನೆಗೆ!
ಬಂದಹರಯ್ಯ ಶರಣರೆನ್ನ ಮನೆಗೆ!
ಕಂಡ ಕನಸು ದಿಟವಾಗಿ,
ಜಂಗಮ ಮನೆಗೆ ಬಂದರೆ
ಶಿವಾರ್ಚನೆಯ ಮಾಡಿಸುವೆ
ಕೂಡಲಸಂಗಮದೇವಾ ನಿಮ್ಮ ಮುಂದೆ.
೨೨೮.
ಗಿಳಿಯ ಪಂಜರವಿಕ್ಕಿ, ಸೊಡರಿಗೆಣ್ಣೆಯನೆರೆದು,
ಬತ್ತಿಯನಿಕ್ಕಿ ಬರವ ಹಾರುತ್ತಿದ್ದೆನೆಲೆಗವ್ವ!
ತರಗೆಲೆ ಗಿರಕಂದರೆ, ಹೊರಗನಾಲಿಸುವೆ.
ಅಗಲಿದೆನೆಂದೆನ್ನ ಮನ ಧಿಗಿಲೆಂದಿತ್ತೆಲೆಗವ್ವ.
ಕೂಡಲಸಂಗನ ಶರಣರು ಬಂದು
ಬಾಗಿಲ ಮುಂದೆ ನಿಂದು
'ಶಿವಾ' ಎಂದರೆ ಸಂತೋಷಪಟ್ಟೆನೆಲೆಗವ್ವ.
೨೨೯.
ಅಡವಿಯಲೊಬ್ಬ ಕಡುನೀರಡಸಿ
ಎಡೆಯಲ್ಲಿ ನೀರ ಕಂಡಂತಾಯಿತಯ್ಯ!
ಕುರುಡ ಕಣ್ಣ ಪಡೆದಂತಾಯಿತಯ್ಯ!
ಬಡವ ನಿಧಾನವ ಪಡೆದಂತಾಯಿತಯ್ಯ!
ನಮ್ಮ ಕೂಡಲಸಂಗನ ಶರಣರ
ಬರವೆನ್ನ ಪ್ರಾಣ ಕಂಡಯ್ಯ.
೨೩೦.
ಇಂದೆನ್ನ ಮನೆಗೆ ಪ್ರಮಥರು ಬಂದಾರೆಂದು,
ಗುಡಿ, ತೋರಣವ ಕಟ್ಟಿ;
ಪಡುಸಮ್ಮಾರ್ಜನೆಯ ಮಾಡಿ
ರಂಗವಾಲಿಯನಿಕ್ಕಿ
ಉಘೇ, ಚಾಂಗು, ಭಲಾ, ಎಂಬೆ!
ಕೂಡಲಸಂಗನ ಶರಣರು
ತಮ್ಮ ಒಕ್ಕುದನಿಕ್ಕಿ ಸಲಹುವರಾಗಿ.
೨೩೧.
ಸಾಸವೆಯ ಮೇಲೆ ಸಾಗರವರಿದಂತಾಯಿತಯ್ಯ!
ಆನಂದದಿಂದ ನಲಿನಲಿದಾಡುವೆನು.
ಆನಂದದಿಂದ ಕುಣಿಕುಣಿದಾಡುವೆನು.
ಕೂಡಲಸಂಗನ ಶರಣರು ಬಂದರೆ
ಉಬ್ಬಿಕೊಬ್ಬಿ ಹರುಷದಲೋಲಾಡುವೆನು.
೨೩೨.
ಎಳ್ಳಿಲ್ಲದ ಗಾಣವನಾಡಿದ
ಎತ್ತಿನಂತಾಯಿತ್ತೆನ್ನ ಭಕ್ತಿ!
ಉಪ್ಪ ಅಪ್ಪುವಿನಲ್ಲಿ ಅದ್ದಿ
ಮೆಲಿದಂತಾಯಿತ್ತೆನ್ನ ಭಕ್ತಿ!
ಕೂಡಲಸಂಗಮದೇವ,
ಅನು ಮಾಡಿದೆನೆಂಬೀ ಕಿಚ್ಚು ಸಾಲದೆ ?
೨೩೩.
ಧ್ಯಾನಮೌನವೆಂಬ ಶಸ್ತ್ರವ ಹಿಡಿಯಲಾರದೆ
ಅಹಂಕಾರಧಾರೆಯ ಮೊನೆಯಲಗೆಂಬ ಶಸ್ತ್ರವ ಹಿಡಿದು ಕೆಟ್ಟೆನಯ್ಯ!
ಅಂಜುವೆನಂಜುವೆನಯ್ಯ!
ಜಂಗಮ-ಲಿಂಗವೆಂಬ ಭಾಷೆ ಪಲ್ಲಟವಾಯಿತ್ತು!
ಇನ್ನು-ಜಂಗಮಲಿಂಗವೆಂಬ ಶಿಕ್ಷಾಶಸ್ತ್ರದಲ್ಲಿ,
ಎನ್ನ ಹೊಯ್ದು ಬಯ್ದು ರಕ್ಷಿಸುವುದು ಕೂಡಲಸಂಗಮದೇವ!
೨೩೪.
ಎನ್ನಲ್ಲಿ ಭಕ್ತಿ ಸಾಸವೆಯ ಷಡ್ಭಾಗದಿನಿತಿಲ್ಲ;
ಎನ್ನ ಭಕ್ತನೆಂಬರು; ಎನ್ನ ಸಮಯಾಚಾರಿ ಎಂದೆಂಬರು.
ನಾನೇನು ಪಾಪವ ಮಾಡಿದೆನೋ!
ಬೆಳೆಯದ ಮುನ್ನವೇ ಮೊಳೆಯ ಕೊಯ್ವರೆ ಹೇಳಯ್ಯ ?
ಇರಿಯದ ವೀರ ಇಲ್ಲದ ಸೊಬಗುವ
ಎಲ್ಲ ಒಡೆಯರು ಏರಿಸಿ ನುಡಿವರು!
ಎನಗಿದು ವಿಧಿಯೇ ಕೂಡಲಸಂಗಮದೇವ ?
೨೩೫.
ಎನ್ನವರೆನಗೊಲಿದು ಹೊನ್ನಶೂಲದಲ್ಲಿಕ್ಕಿದರೆನ್ನ
ಹೊಗಳಿ ಹೊಗಳಿ!
ಎನ್ನ ಹೊಗಳತೆ ಎನ್ನನಿಮ್ಮೈಗೊಂಡಿತಲ್ಲ!
ಅಯ್ಯೋ ನಿಮ್ಮ ಮನ್ನಣೆಯೆ
ಮಸೆದಲಗಾಗಿ ತಾಗಿತ್ತಲ್ಲ!
ನೊಂದೆನು, ಸೈರಿಸಲಾರೆನು-ಕೂಡಲಸಂಗಮದೇವ,
ನೀನೆನಗೊಳ್ಳಿದನಾದರೆ,
ಎನ್ನ ಹೊಗಳತೆಗಡ್ಡ ಬಾರಾ ಧರ್ಮೀ.
೨೩೬.
ಎನ್ನವರೆನಗೊಲಿದು ಹೊನ್ನಶೂಲದಲ್ಲಿಕ್ಕಿದರೆನ್ನ!
ಅಹಂಕಾರ ಪೂರಾಯ ಗಾಯದಲ್ಲಿ
ಆನೆಂತು ಬದುಕುವೆನೆಂತು ಜೀವಿಸುವೆ!
ಜಂಗಮವಾಗಿ ಬಂದು ಜರಿದು
ಶೂಲವನಿಳುಹಿ, ಪ್ರಸಾದದ ಮದ್ದನಿಕ್ಕಿ
ಸಲಹು ಕೂಡಲಸಂಗಮದೇವ.
೨೩೭.
ಹೊಯ್ದವರೆನ್ನ ಹೊರೆದವರೆಂಬೆ,
ಬಯ್ದವರೆನ್ನ ಬಂಧುಗಳೆಂಬೆ.
ನಿಂದಿಸಿದವರೆನ್ನ ತಂದೆತಾಯಿಗಳೆಂಬೆ!
ಆಳಿಗೊಂಡವರೆನ್ನ ಆಳ್ದರೆಂಬೆ.
ಜರಿದವರೆನ್ನ ಜನ್ಮಬಂಧುಗಳೆಂಬೆ.
ಹೊಗಳಿದವರೆನ್ನ ಹೊನ್ನಶೂಲದಲಿಕ್ಕಿದವರು
ಕೂಡಲಸಂಗಮದೇವ.
೨೩೮.
ಎಡದ ಕೈಯಲು ಹಾಲ ಬಟ್ಟಲು
ಬಲದ ಕೈಯಲು ಓಜುಗಟ್ಟಿಗೆ!
ಆವಾಗ ಬಂದಾನೆಮ್ಮಯ್ಯ
ಬಡಿದು ಹಾಲು ಕುಡಿಸುವ ತಂದೆ! ?
"ದಂಡಕ್ಷೀರದ್ವಯೀಹಸ್ತಂ
ಜಂಗಮಂ ಭಕ್ತಿಮಂದಿರಂ |
ತದ್‌ಭಕ್ತ್ಯಾ ಲಿಂಗಸಂತುಷ್ಟಿಃ
ಅಪಹಾಸಾಚ್ಚ ದಂಡನಂ ||"
ಎಂದುದಾಗಿ ಕೂಡಲಸಂಗಮದೇವಯ್ಯ
ತಾನೇ ಭಕ್ತಿಪಥವ ತೋರುವ ತಂದೆ.
೨೩೯.
ಕೃತಯುಗದಲ್ಲಿ ಕೇತಾರವೆಂಬ ಮೂಲಸ್ಥಾನ;
ತ್ರೇತಾಯುಗದಲ್ಲಿ ವಾರಣಾಸಿ ಎಂಬ ಮೂಲಸ್ಥಾನ;
ದ್ವಾಪರಯುಗದಲ್ಲಿ ವಿರೂಪಾಕ್ಷವೆಂಬ ಮೂಲಸ್ಥಾನ;
ಕಲಿಯುಗದಲ್ಲಿ ಪರ್ವತವೆಂಬ ಮೂಲಸ್ಥಾನ;
ನಾ-ನಾ ಸ್ಥಾನವ ಮೆಟ್ಟಿದೆ
ಜಂಗಮವೇ ಲಿಂಗವೆಂದು ನಂಬಿದೆ
ಕೂಡಲಸಂಗಮದೇವ.
೨೪೦.
ಭಕ್ತದೇಹೀಕದೇವನಪ್ಪ ದೇವನು
ಸದ್ಭಕ್ತರ ಬಳಿಯಲ್ಲಿ ಬಪ್ಪನಾಗಿ,
ಆಳ್ದನು ಬರಲಾಳು ಮಂಚದ ಮೇಲೆ
ಇಪ್ಪುದು ಗುಣವೇ ಹೇಳಾ
ಕೂಡಲಸಂಗಮದೇವ ?
ಜಂಗಮರೂಪವಾಗಿ ಸಂಗಯ್ಯ ಬಂದಾನೆಂದು
ಎಂದೆಂದೂ ನಾನು ಮಂಚವನೇರದ ಭಾಷೆ!
೨೪೧.
ಭಿತ್ತಿಯಿಲ್ಲದೆ ಬರೆಯಬಹುದೆ ಚಿತ್ತಾರವ ?
ಬಿತ್ತಿ ಬೆಳೆಯಬಹುದೆ ಧರೆಯಿಲ್ಲದೆ ?
ಜಂಗಮವಿಲ್ಲದೆ ಮಾಡಬಹುದೆ,
ರೂಢೀಶನ ಭೇದಿಸಬಹುದೆ ?
ಒಡಲಿಲ್ಲದ ನಿರಾಳಕರ್ತೃ ಕೂಡಲಸಂಗಮದೇವ
ಜಂಗಮಮುಖಲಿಂಗವಾದನಾಗಿ
ಮತ್ತೊಂದನರಿಯೆನಯ್ಯ.
೨೪೨.
ಕೆಂಡದಲ್ಲಿಟ್ಟರೆ ಕೈ ಬೆಂದುದೆಂಬರು;
ಕೊಂಡಿಟ್ಟವನ ಕೈ ಮುನ್ನವೇ ಬೆಂದುದು!
ನೊಂದೆ ನಾನು ನೊಂದೆನಯ್ಯ.
ಬೆಂದೆ ನಾನು ಬೆಂದೆನಯ್ಯ.
ಕೂಡಲಸಂಗನ ಶರಣರ ಕಂಡು
ಕಾಣದಂತಿದ್ದರೆ ಅಂದೇ ಬೆಂದೆನಯ್ಯ.
೨೪೩.
ಲಾಂಛನವ ಕಂಡು ನಂಬುವೆ,
ಅವರಂತರಂಗವ ನೀವೇ ಬಲ್ಲಿರಿ.
ತೊತ್ತಿಂಗೆ ತೊತ್ತುಗೆಲಸವಲ್ಲದೆ
ಅರಸರ ಸುದ್ದಿ ಎಮಗೇಕಯ್ಯ ?
ರತ್ನಮೌಕ್ತಿಕದಚ್ಚು ಕೂಡಲಸಂಗಮದೇವ, ನಿಮ್ಮ ಶರಣರು.
೨೪೪.
ಎಡದ ಕೈಯಲ್ಲಿ ನಿಗಳವನಿಕ್ಕಿ,
ಬಲದ ಕೈಯ್ಯ ಕಡಿದುಕೊಂಡರೆ,
ನೋಯದಿಪ್ಪುದೇ, ಅಯ್ಯ ?
ಪ್ರಾಣ ಒಂದಾಗಿ ದೇಹ ಬೇರಿಲ್ಲ.
ಲಿಂಗವ ಪೂಜಿಸಿ ಜಂಗಮವನುದಾಸೀನ ಮಾಡಿದರೆ
ಬೆಂದೆನಯ್ಯ ನಾನು, ಕೂಡಲಸಂಗಮದೇವ.
೨೪೫.
ತನುವ ನೋಯಿಸಿ, ಮನವ ಬಳಲಿಸಿ
ನಿಮ್ಮ ಪಾದವಿಡಿದವರೊಳರೆ ?
ಈ ನುಡಿ ಸುಡದಿಹುದೆ ?
ಕೂಡಲಸಂಗಮದೇವ,
ಶಿವಭಕ್ತರ ನೋವೇ ಅದು ಲಿಂಗದ ನೋವು!
೨೪೬.
ಕುದುರೆ ಸತ್ತಿಗೆಯವರ ಕಂಡರೆ
ಹೊರಳಿಬಿದ್ದು ಕಾಲ ಹಿಡಿವರಯ್ಯ.
ಬಡಭಕ್ತರು ಬಂದರೆ, ಎಡೆಯಿಲ್ಲ ಅತ್ತ ಸನ್ನಿ ಎಂಬರು.
ಎನ್ನೊಡೆಯ ಕೂಡಲಸಂಗಯ್ಯನವರ
ತಡೆಗೆಡಹಿ ಮೂಗ ಕೊಯ್ಯದೆ ಮಾಬನೆ ?
೨೪೭.
ಅಡ್ಡದೊಡ್ಡ ನಾನಲ್ಲಯ್ಯ.
ದೊಡ್ಡ ಬಸಿರು ಎನಗಿಲ್ಲವಯ್ಯ.
ದೊಡ್ಡವರನಲ್ಲದೆ ನಿಮ್ಮ ಶರಣರು ಮನ್ನಿಸರಯ್ಯ.
ಹಡೆದುಂಬ ಸೂಳೆಯಂತೆ
ಧನವುಳ್ಳವರನರಸಿಯರಸಿ ಬೋಧಿಸಲು,
ಪ್ರಾರ್ಥಿಸಲು ಮುನ್ನ ನಾನರಿಯೆನಯ್ಯ!
ದೊಡ್ಡತನವೆನಗಿಲ್ಲವಯ್ಯ.
ಅಂಜುವೆನಂಜುವೆ ನಿಮ್ಮ ಪ್ರಥಮರಿಗೆ
ಅನಾಥ ನಾನಯ್ಯ, ಕೂಡಲಸಂಗಮದೇವ.
೨೪೮.
ಹಾಲ ಕಂದಲು, ತುಪ್ಪದ ಗಡಿಗೆಯ-
ಬೋಡ, ಮುಕ್ಕೆನಬೇಡ!
ಹಾಲು ಸಿಹಿ, ತುಪ್ಪ ಕಮ್ಮಗೆ!
ಲಿಂಗಕ್ಕೆ ಬೋನ,
ಕೂಡಲಸಂಗನ ಶರಣರ
ಅಂಗಹೀನರೆಂದರೆ ನಾಯಕನರಕ!
೨೪೯.
ಮರಕ್ಕೆ ಬಾಯಿ ಬೇರೆಂದು
ತಳಕ್ಕೆ ನೀರನೆರೆದರೆ ಮೇಲೆ ಪಲ್ಲವಿಸಿತ್ತು ನೋಡಾ!
ಲಿಂಗದ ಬಾಯಿ ಜಂಗಮವೆಂದು
ಪಡಿಪದಾರ್ಥವ ನೀಡಿದರೆ, ಮುಂದೆ ಸಕಲಾರ್ಥವನೀವನು!
ಆ ಜಂಗಮವ ಹರನೆಂದು ಕಂಡು
ನರನೆಂದು ಭಾವಿಸಿದರೆ, ನರಕ ತಪ್ಪದು ಕಾಣಾ!
ಕೂಡಲಸಂಗಮದೇವ.
೨೫೦.
ನನಗೆ ನಾನೇ ಹಗೆ ನೋಡಯ್ಯ!
ನನಗೆ ನಾನೇ ಕೆಳೆ ನೋಡಯ್ಯ!
ನಿಮ್ಮ ಸದ್ಭಕ್ತರೊಡನೆ ವಿರೋಧವ ಮಾಡಿದರೆನ್ನ ಕೊಲುವುದಾಗಿ
ನಿಮ್ಮ ಪುರಾತನರಿಗಂಜಿ ಬೆಸಗೊಂಡರೆನ್ನ ಕಾಯ್ವುದಾಗಿ
ಅನ್ಯ ಹಗೆಯೆಲ್ಲಿ ? ಕೆಳೆಯೆಲ್ಲಿ ?
ಬಾಗಿದ ತಲೆಯ, ಮುಗಿದ ಕೈಯಾಗಿರಿಸು ಕೂಡಲಸಂಗಮದೇವ.
೨೫೧.
ಆರಾಧನೆಯ ಮಾಡಿದರೆ ಅಮೃತದ ಬೆಳಸು.
ವಿರೋಧಿಸಿದರೆ ವಿಷದ ಬೆಳಸು.
ಇದು ಕಾರಣ,
ಲಿಂಗ ಜಂಗಮಕ್ಕಂಜಲೇಬೇಕು.
ಸ್ಥಾವರ-ಜಂಗಮ ಒಂದೆಂದರಿದರೆ
ಕೂಡಲಸಂಗಮದೇವ ಶರಣಾಸನ್ನಿಹಿತನು.
೨೫೨.
ಜಂಗಮ ನಿಂದೆಯ ಮಾಡಿ, ಲಿಂಗವ ಪೂಜಿಸುವ
ಭಕ್ತನ ಅಂಘವಣೆ ಎಂತೋ ?
ಶಿವಶಿವ, ನಿಂದಿಸುವ ಪೂಜಿಸುವ
ಪಾತಕವಿದ ಕೇಳಲಾಗದು!
"ಗುರುವಿನ ಗುರು ಜಂಗಮ"
ಇಂತೆಂದುದು ಕೂಡಲಸಂಗನ ವಚನ.
೨೫೩.
ಅರಸರ ಕಂಡು ತನ್ನ ಪುರುಷನ ಮರೆತರೆ
ಮರನೇರಿ ಕಯ್ಯ ಬಿಟ್ಟಂತಾದೆನಯ್ಯ!
ಇಹಲೋಕಕ್ಕೆ ದೂರ, ಪರಲೋಕಕ್ಕೆ ದೂರ
ನಮ್ಮ ಕೂಡಲಸಂಗಮದೇವಯ್ಯ
ಜಂಗಮಮುಖಲಿಂಗವಾದ ಕಾರಣ.
೨೫೪.
ಲಿಂಗದಲ್ಲಿ ದಿಟವನರಸುವಡೆ
ಜಂಗಮವ ನೆರೆ ನಂಬುವುದು.
ನಡೆ ಲಿಂಗ, ನುಡಿ ಲಿಂಗ
ಮುಖ ಲಿಂಗವೆಂದೆ ನಂಬೊ.
ಯತ್ರ ಮಾಹೇಶ್ವರಸ್ತತ್ರಾಸನ್ನಹಿತನಾಗಿ,
ಅಧರ ತಾಗಿದ ರುಚಿಯನು
ಉದರ ತಾಗಿದ ಸುಖವ
ಉಂಬ-ಉಡುವ ಕೂಡಲಸಂಗಮದೇವ
ಜಂಗಮಮುಖದಲ್ಲಿ.
೨೫೫.
ಎಂಬತ್ತುನಾಲ್ಕುಲಕ್ಷ ಮುಖದೊಳಗೊಂದೇ ಮುಖವಾಗಿ
ಕಾಡಿ ನೋಡೆನ್ನನು, ಬೇಡಿ ನೋಡೆನ್ನನು
ಬೇಡದಿದ್ದರೆ, ಅಯ್ಯ, ನಿಮಗೆ ಪ್ರಮಥರಾಣೆ!
ನೀನಾವ ಮುಖದಲ್ಲಿ ಬಂದು ಬೇಡಿದರೀವೆನು
ಕೂಡಲಸಂಗಮದೇವ.
೨೫೬.
ಕಂದಿದೆನಯ್ಯ ಎನ್ನ ನೋಡುವರಿಲ್ಲದೆ.
ಕುಂದಿದೆನಯ್ಯ ಎನ್ನ ನುಡಿಸುವರಿಲ್ಲದೆ.
ಬಡವಾದೆನಯ್ಯ ಎನ್ನ ತನುಮನಧನವ ಬೇಡುವರಿಲ್ಲದೆ,
ಕಾಡುವ ಬೇಡುವ ಶರಣರ ತಂದು
ಕಾಡಿಸು ಬೇಡಿಸು ಕೂಡಲಸಂಗಮದೇವ.
೨೫೭.
ನೀನಿಕ್ಕಿದ ಬಿಯ್ಯದಲ್ಲಿ ವಂಚನೆಯುಳ್ಳೊಡೆ
ಸಂಗ, ನಿಮ್ಮ ತೊತ್ತುತನಕ್ಕೆ ದೂರವಯ್ಯ.
ಕದ್ದು ತಿಂದರೆ, ಕೈಯ ಹಿಡಿದೊಮ್ಮೆ ಬಡಿದು,
ತುಡುಗುಣಿತನವ ಬಿಡಿಸಯ್ಯ.
ಜಂಗಮ ಮನೆಗೆ ಬಂದಲ್ಲಿ ಓಸರಿಸಿದರೆ
ಹಿಡಿದು ಮೂಗ ಕೊಯ್ಯಯ್ಯ ಕೂಡಲಸಂಗಮದೇವ.
೨೫೮.
ಹೊನ್ನಿನೊಳಗೊಂದೊರೆಯ,
ಸೀರೆಯೊಳಗೊಂದೆಳೆಯ,
ಇಂದಿಂಗೆ ನಾಳಿಂಗೆ ಬೇಕೆಂದೆನಾದರೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ,
ನಿಮ್ಮ ಶರಣರಿಗಲ್ಲದೆ ಮತ್ತೊಂದಕಿಕ್ಕೆನಯ್ಯ
ಕೂಡಲಸಂಗಮದೇವ.
೨೫೯.
ಕಾಗೆಯಂದಗುಳ ಕಂಡರೆ
ಕರೆಯದೇ ತನ್ನ ಬಳಗವನ್ನು ?
ಕೋಳಿಯೊಂದು ಕುಟುಕ ಕಂಡರೆ
ಕೂಗಿ ಕರೆಯದೇ ತನ್ನ ಕುಲವೆಲ್ಲವನ್ನು ?
ಶಿವಭಕ್ತನಾಗಿ ಭಕ್ತಿ-ಪಕ್ಷವಿಲ್ಲದಿದ್ದರೆ
ಕಾಗೆ ಕೋಳಿಯಿಂದ ಕರಕಷ್ಟ ಕೂಡಲಸಂಗಮದೇವ.
೨೬೦.
ಆವನಾದರೇನು ಹೇಮವಿಲ್ಲದುಂಗೈಸಬಹುದೆ ?
ಕೊಡಲಿಲ್ಲೆಂಬುದರಿಂದ ಸಾಯಲುಬಹುದು,
ಸೈರಿಸಬಾರದು!
ಬೇಡುವರ ನೋಡಿ ನೋಡಿ
ಈಯಲಿಲ್ಲದ ಜೀವನವದೇಕೆ ಕೂಡಲಸಂಗಮದೇವ.
೨೬೧.
ಓಡುವಾತ ಲೆಂಕನಲ್ಲ, ಬೇಡುವಾತ ಭಕ್ತನಲ್ಲ!
ಓಡಲಾಗದು ಲೆಂಕನು ಬೇಡಲಾಗದು ಭಕ್ತನು!
ಓಡೆನಯ್ಯ, ಬೇಡೆನಯ್ಯ ಕೂಡಲಸಂಗಮದೇವ.
೨೬೨.
ಎಲ್ಲಿ ನೋಡಿರಲ್ಲಿ ಮನವೆಳಸಿದರೆ
ಆಣೆ, ನಿಮ್ಮಾಣೆ, ನಿಮ್ಮ ಪ್ರಮಥರಾಣೆ!
ಪರವಧುವನು ಮಾದೇವಿಯೆಂದೇ ಕಾಬೆ ಕೂಡಲಸಂಗಮದೇವ.
೨೬೩.
ಹರಿವ ಹಾವಿಂಗಂಜೆ, ಉರಿಯ ನಾಲಗೆಗಂಜೆ!
ಸುರಗಿಯ ಮೊನೆಗಂಜೆ!
ಒಂದಕ್ಕಂಜುವೆ, ಒಂದಕ್ಕಳುಕುವೆ;
ಪರಧನ ಪರಸ್ತ್ರೀಯೆಂಬೀ ಜೂಬಿಂಗಂಜುವೆ!
ಮುನ್ನಂಜದ ರಾವಣನೇ ವಿಧಿಯಾದ
ಅಂಜುವೆನಯ್ಯ, ಕೂಡಲಸಂಗಮದೇವ!
೨೬೪.
ಅಸುರನೈಶ್ವರ್ಯವನೆಣಿಸುವಡೆ-
ಸೀತೆಗೆ ಸರಿ-ಮಿಗಿಲೆನಿಸುವ ಸತಿಯರುಂಟು ಕೋಟಿ!
ಮತಿವಂತ ಶಿರಃಪ್ರಧಾನರೆಂಟು ಕೋಟಿ!
ಲೆಕ್ಕವಿಲ್ಲದ ದಳವು! ಲಕ್ಷ ಕುಮಾರರು!
ದಿಕ್ಪಾಲಕರವನ ಮನೆಯ ಬಂಧನದಲಿಪ್ಪರು
ಸುರಸತಿಯರನೆಲ್ಲರನಾತ ಸೆರೆಮಾಡಿಯಾಳಿದ!
ಶಿವನೇ ನೀ ಕರುಣಿಸಿದಂತಿರದೆ
ಪರವಧುವಿನ ಬೇಟವವನ ಪ್ರಾಣವ ಕೊಂಡಿತ್ತು.
ಇದನರಿತು ಪರವಧುವಿಗೆಳಸುವವರ ಕಂಡು
ಗರುಡ ಕಂಡ ಸರ್ಪ ಧರೆಗಿಳಿವಂತೆ ಅಡಗಿಪ್ಪೆನಯ್ಯ
ಕೂಡಲಸಂಗಮದೇವ.
೨೬೫.
ಒಂದಕೊಂಬತ್ತ ನುಡಿದು ಕಣ್ಣ ಕೆಚ್ಚನೆ ಮಾಡಿ,
ಗಂಡುಗೆದರಿ ಮುಡುಹಿಕ್ಕಿ
ಕೆಲೆವರ ಕಂಡಂಜುವೆ ಓಸರಿಸುವೆ,
ಓಡಿದೆನೆಂಬ ಭಂಗವಾದರಾಗಲಿ
ನಮ್ಮ ಕೂಡಲಸಂಗನ ಶರಣರನುಭಾವವಿಲ್ಲದವರ
ಹೊಲಮೇರೆಯ ಹೊದ್ದೆ, ಹೊಲನ ಬಿಟ್ಟೋಡುವೆ.
೨೬೬.
ದೇವಸಹಿತ ಭಕ್ತ ಮನೆಗೆ ಬಂದರೆ
ಕಾಯಕವಾವುದೆಂದು ಬೆಸಗೊಂಡೆನಾದರೆ
ನಿಮ್ಮಾಣೆ, ನಿಮ್ಮ ಪುರಾತರಾಣೆ, ತಲೆದಂಡ, ತಲೆದಂಡ.
ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಸಿದರೆ
ನಿಮ್ಮ ರಾಣಿವಾಸದಾಣೆ.
೨೬೭.
ಕೂಪರಿಗೆ ಹೇಳುವೆನು ಕುಳಸ್ಥಳಂಗಳನೆಲ್ಲ,
ಕೂರದವರಿಗೆ ಹೇಳಿ ನಾನೇವೇನು ಶಿವನೆ,
ಕರಲ ಭೂಮಿಯಲ್ಲಿ ಕರೆದ ವೃಷ್ಟಿಯ ತೆರನಂತೆ!
ಅವರೆತ್ತ ಬಲ್ಲರೆನ್ನ ಸುಖದುಃಖವ ?
ಅಂಗವಿಲ್ಲದ ಸಂಗವು
ಅಳಲಿಲ್ಲದ ಹುಯ್ಯಲಂತೆ.
ಇದು ಕಾರಣ ಕೂಡಲಸಂಗಮದೇವಾ
ನಿಮ್ಮ ಶರಣರಿಗಲ್ಲದೆ ಬಾಯ ತೆರೆಯನು.
೨೬೮.
ಒಡೆದೋಡೂ ಎನ್ನ ಮನೆಯಲಿಲ್ಲದಂತೆ ಮಾಡಯ್ಯ !
ಕೊಡು ದೇವ ಎನ್ನ ಕೈಯಲೊಂದು ಗರಿಕೆಯನು,
ಮೃಡದೇವಾ ಶರಣೆಂದು ಭಿಕ್ಷಕ್ಕೆ ಹೋದರೆ,
ಅಲ್ಲಿ, ನಡೆ ದೇವಾ ಎಂದೆನಿಸು ಕೂಡಲಸಂಗಮದೇವ.
೨೬೯.
ಅಯ್ಯ, ನಿಮ್ಮ ಶರಣರ ದಾಸೋಹಕ್ಕೆ
ಎನ್ನ ತನು-ಮನ-ಧನವಲಸದಂತೆ ಮಾಡಯ್ಯ.
ತನು ದಾಸೋಹಕ್ಕೆ ಉಬ್ಬುವಂತೆ ಮಾಡು;
ಮನ ದಾಸೋಹಕ್ಕೆ ಲೀಯವಹಂತೆ ಮಾಡು;
ಧನ ದಾಸೋಹಕ್ಕೆ ಸವೆದು
ನಿಮ್ಮ ಶರಣರ ಪ್ರಸಾದದಲ್ಲಿ ನಿರಂತರ
ಆಡಿ, ಪಾಡಿ; ನೋಡಿ, ಕೂಡಿ;
ಭಾವಿಸಿ, ಸುಖಿಸಿ; ಪರಿಣಾಮಿಸುವಂತೆ ಮಾಡು
ಕೂಡಲಸಂಗಮದೇವ.
೨೭೦.
ಹಾರುವ ಹಾರುವನಪ್ಪೆ ನಾನು,
ಸದ್ಭಕ್ತರೆನ್ನವರೆನ್ನವರೆಂದು!
ಹಾರುವ ಹಾರುವನಪ್ಪೆ ನಾನು, ಶರಣರು ಎನ್ನವರೆನ್ನವರೆಂದು!
ಕೂಡಲಸಂಗನ ಶರಣರು ಒಕ್ಕುದನಿಕ್ಕಿ ಸಲಹುವರೆಂದು!
೨೭೧.
ಆವನಾದರೇನು ?
ಶ್ರೀಮಹಾದೇವನ ನೆನೆವನ ಬಾಯ ತಂಬುಲವ ಮೆಲುವೆ,
ಬೀಳುಡಿಗೆಯ ಕಾಯ್ದು ಬದುಕುವೆ
ಕೂಡಲಸಂಗಮದೇವ.
೨೭೨.
ನಾನು ಹೊತ್ತ ಹುಳ್ಳಿಯನಂಬಲಿಗೆ
ಕೊಂಬವರಿಲ್ಲ ನೋಡಯ್ಯ.
ಆನು ನಿಮ್ಮ ಶರಣರ ಒಕ್ಕುದನುಂಡು
ಬದುಕುವೆನಯ್ಯ.
ಮೇರುವ ಸಾರಿದ ಕಾಗೆ
ಹೊಂಬಣ್ಣವಪ್ಪುದು ತಪ್ಪದು ಕೂಡಲಸಂಗಮದೇವ.
೨೭೩.
ದಾಸಿಯ ವರ್ಗದಲ್ಲಿಪ್ಪೆನು ಶಿವಶರಣರ ಮನೆಯಲ್ಲಿ.
ಅವರೊಕ್ಕುದನುಂಡು, ಮಿಕ್ಕುದನಾಯ್ದುಕೊಂಡಿಪ್ಪ ಕಾರಣ-
ಕಾಲ ಮುಟ್ಟಲಮ್ಮದು, ಕಲ್ಪಿತ ತೊಡೆಯಿತ್ತು;
ಭವಬಂಧನ ಹಿಂಗಿತ್ತು, ಕರ್ಮನಿರ್ಮಳವಾಯಿತ್ತು.
ಅವರ ತೊತ್ತಿನ ತೊತ್ತಿನ ಪಡಿದೊತ್ತಿನ ಮಗನೆಂದು
ಕೂಡಲಸಂಗಮದೇವನು ಇತ್ತ ಬಾ ಎಂದೆತ್ತಿಕೊಂಡನು.
೨೭೪
ಜನ್ಮ ಜನ್ಮಕ್ಕೆ ಹೋಗಲೀಯದೆ,
"ಸೋಹಂ" ಎಂದೆನಿಸದೆ, 'ದಾಸೋಹಂ' ಎಂದೆನಿಸಯ್ಯ.
ಲಿಂಗಜಂಗಮದ ಪ್ರಸಾದವ ತೋರಿ
ಬದುಕಿಸಯ್ಯ ಕೂಡಲಸಂಗಮದೇವ.
೨೭೫.
ಕರ್ತರು ನಿಮ್ಮ ಗಣಂಗಳು,
ಎನ್ನ ತೊತ್ತ ಮಾಡಿ ಸಲಹಿದ ಸುಖವು
ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯದುಂತುಟಲ್ಲ
ಕೇಳಿರಯ್ಯ, ಕೂಡಲಸಂಗನ ಶರಣರು
ತಮ್ಮ ಒಕ್ಕುದನಿಕ್ಕಿ ಸಲಹಿದ ಸುಖವು.
೨೭೬.
ತೊತ್ತಿಂಗೆ ಬಲ್ಲಹನೊಲಿದರೆ
ಪದವಿಯನೀಯದೆ ಮಾಬನೆ ?
ಅಯ್ಯ, ಜೇಡರ ದಾಸಯ್ಯಂಗೊಲಿದಾತ
ಮತ್ತೊಬ್ಬ ದೇವನೆ ?
ಅಯ್ಯ, ಮಾದರ ಚೆನ್ನಯ್ಯಂಗೆ
ಡೋಹರಕಕ್ಕಯ್ಯಂಗೆ, ತೆಲುಗ ಜೊಮ್ಮಯ್ಯಂಗೆ
ಒಲಿದಾತ ಮತ್ತೊಬ್ಬ ದೇವನೆ ?
ಅಯ್ಯ, ಎನ್ನ ಮನದ ಪಂಚೇಂದ್ರಿಯ
ನಿಮ್ಮತ್ತಲಾದರೆ ತನ್ನತ್ತ ಮಾಡುವ ಕೂಡಲಸಂಗಮದೇವ.
೨೭೭.
ಹೊರಗೆ ಪೂಸಿ ಏವೆನಯ್ಯಾ
ಒಳಗೆ ಶುದ್ಧವಿಲ್ಲದನ್ನಕ ?
ಮಣಿಯ ಕಟ್ಟಿ ಏವೆನಯ್ಯ ?
ಮನ ಮುಟ್ಟದನ್ನಕ ?
ನೂರನೋದಿ ಏವೆನಯ್ಯ
ನಮ್ಮ ಕೂಡಲಸಂಗಮದೇವನ
ಮನ ಮುಟ್ಟದನ್ನಕ ?
೨೭೮.
ಸುಚಿತ್ತದಿಂದ ನಿಮ್ಮ ನೆನೆಯಲೊಲ್ಲದೆನ್ನ ಮನವು,
ಎಂತಯ್ಯ ?
ಎನಗಿನ್ನಾವುದು ಗತಿ ಎಂತಯ್ಯ ?
ಎನಗಿನ್ನಾವುದು ಮತಿ ಎಂತಯ್ಯ ?
ಹರಹರ ಕೂಡಲಸಂಗಮದೇವ.
ಮನವ ಸಂತೈಸೆನ್ನ.
೨೭೯.
ನಾ ನಿಮ್ಮ ನೆನೆವೆನು
ನೀವೆನ್ನನರಿಯಿರಿ!
ನಾ ನಿಮ್ಮನೋಲೈಸುವೆನು
ನೀವೆನ್ನ ಕಾಣಿರಿ!
ನಾನೆಂತು ಬದುಕುವೆನೆಂತು ಜೀವಿಸುವೆನಯ್ಯ ?
ಕೂಡಲಸಂಗಮದೇವ,
ಎನಗೇ ನೀವೇ ಪ್ರಾಣ, ಗತಿ, ಮತಿ ನೋಡಯ್ಯ!
೨೮೦.
ತಂದೆ ನೀನು, ತಾಯಿ ನೀನು;
ಬಂಧು ನೀನು ಬಳಗ ನೀನು;
ನೀನಲ್ಲದೆ ಮತ್ತಾರು ಇಲ್ಲವಯ್ಯ!
ಕೂಡಲಸಂಗಮದೇವ,
ಹಾಲಲದ್ದು ನೀರಲದ್ದು.
೨೮೧.
ಎನ್ನ ಜನ್ಮವ ತೊಡೆದ ನೀ ಧರ್ಮಿ!
ಎನ್ನ ಜನ್ಮವನತಿಗಳೆದ ನೀ ಧರ್ಮಿ!
ಎನ್ನ ಭವಬಂಧನವ ನೀಕರಿಸಿದೆಯಾಗಿ
ಶಿವನೇ ಗತಿಯೆಂದು ನಂಬಿದೆನಯ್ಯ.
ಎನ್ನಷ್ಟಮದಂಗಳ ಸುಟ್ಟುರುಹಿದೆಯಾಗಿ
ಕಟ್ಟುಗ್ರದಿಂದ ನಿಮ್ಮ ಶ್ರೀಚರಣವ ಕಂಡೆ.
ಸೃಷ್ಟಿಪ್ರತಿಪಾಲಕ ನಿಮ್ಮ ನಾ ನಂಬಿದೆ
ಕರುಣಿಸು ಕೂಡಲಸಂಗಮದೇವ.
೨೮೨.
ಭವರೋಗವೈದ್ಯನೆಂದು ನಾ ನಿಮ್ಮ ಮರೆವೊಕ್ಕೆ,
ಭಕ್ತಿದಾಯಕ ನೀನು, ಕರುಣಿಸು ಲಿಂಗತಂದೆ.
ಜಯ ಜಯ ಶ್ರೀ ಮಹಾದೇವ,
ಜಯ ಜಯ ಶ್ರೀ ಮಹಾದೇವ,
ಎನುತಿದ್ದಿತೆನ್ನ ಮನವು;
ಕೂಡಲಸಂಗಮದೇವಂಗೆ
ಶರಣೆನುತಿದ್ದಿತೆನ್ನ ಮನವು.
೨೮೩.
ಅಂಗೈಯೊಳಗಣ ಲಿಂಗವ ನೋಡುತ್ತ
ಕಂಗಳು ಕಡೆಗೋಡಿವರಿವುತ್ತ ಸುರಿವುತ್ತ ಎಂದಿಪ್ಪೆನೋ ?!
ನೋಟವೇ ಪ್ರಾಣವಾಗಿ ಎಂದಿಪ್ಪೆನೋ!
ಕೂಟವೇ ಪ್ರಾಣವಾಗಿ ಎಂದಿಪ್ಪೆನೋ!
ಎನ್ನಂಗ ವಿಕಾರದ ಸಂಗವಳಿದು
ಕೂಡಲಸಂಗಯ್ಯ ಲಿಂಗಯ್ಯ ಲಿಂಗವೆನುತ್ತ ಎಂದಿಪ್ಪೆನೋ !?
೨೮೪.
ಎದೆ ಬಿರಿವನ್ನಕ, ಮನ ದಣಿವನ್ನಕ
ನಾಲಗೆ ನಲಿನಲಿದೋಲಾಡುವನ್ನಕ
ನಿಮ್ಮ ನಾಮಾಮೃತವ ತಂದಿರಿಸು ಕಂಡ
ಎಲೆ ಹರನೆ
ಎಲೆ ಶಿವನೆ!
ನಿಮ್ಮ ನಾಮಾಮೃತವ ತಂದಿರಿಸು ಕಂಡಾ
ಬಿರಿಮುಗುಳಂತೆ ಎನ್ನ ಹೃದಯ
ನಿಮ್ಮ ಶ್ರೀಚರಣದ ಮೇಲೆ ಬಿದ್ದರಳುಗೆ
ಕೂಡಲಸಂಗಮದೇವ.
೨೮೫.
ಆಡಿ ಕಾಲು ದಣಿಯದು
ನೋಡಿ ಕಣ್ಣು ದಣಿಯದು,
ಹಾಡಿ ನಾಲಗೆ ದಣಿಯದು,
ಇನ್ನೇವೆನಿನ್ನೇವೆ!
ನಾ ನಿಮ್ಮ ಕಯ್ಯಾರೆ ಪೂಜಿಸಿ
ಮನ ದಣಿಯಲೊಲ್ಲದು
ಇನ್ನೇವೆನಿನ್ನೇವೆ!
ಕೂಡಲಸಂಗಮದೇವಯ್ಯ,
ನಿಮ್ಮ ಉದರವ ಬಗಿದಾನು ಹೊಗುವ ಭರವೆನಗೆ!
೨೮೬.
ಕಾಮಸಂಗ ನಿಸ್ಸಂಗವಾಗಿ
ಇನ್ನಾವ ಸಂಗವನರಿಯೆನಯ್ಯ.
ಮಿಗೆ ಒಲಿದೆನಾಗಿ ಅಗಲಲಾರೆ:
ನಗೆಮೊಗದರಸ ಅವಧಾರು! ಕೂಡಲಸಂಗಮದೇವ,
ಬಗಿದು ಹೊಗುವೆ ನಾ ನಿಮ್ಮ ಮನವನು.
೨೮೭.
ವಾರವೆಂದರಿಯೆ, ದಿನವೆಂದರಿಯೆ!
ಏನೆಂದರಿಯೆನಯ್ಯ.
ನಾನು ಇರುಳೆಂದರಿಯೆ, ಹಗಲೆಂದರಿಯೆ!
ಏನೆಂದರಿಯೆನಯ್ಯ.
ನಾನು ನಿಮ್ಮುವ ಪೂಜಿಸಿ, ಎನ್ನುವ ಮರೆದೆನು
ಕೂಡಲಸಂಗಮದೇವ.
೨೮೮.
ನಿಮ್ಮ ನೋಟವನಂತಸುಖ.
ನಿಮ್ಮ ಕೂಟ ಪರಮಸುಖ.
ಅಷ್ಟಕೋಟಿರೋಮಂಗಳೆಲ್ಲ
ಕಂಗಳಾಗಿ ನೋಡುತ್ತಿದ್ದೆನು.
ಕೂಡಲಸಂಗಮದೇವಯ್ಯ,
ನಿಮ್ಮ ನೋಡಿ ನೋಡಿ
ಎನ್ನ ಮನದಲ್ಲಿ ರತಿ ಹುಟ್ಟಿ,
ನಿಮಿರ್ದವೆನ್ನ ಕಳೆಗಳು.
೨೮೯.
ವಚನದಲ್ಲಿ ನಾಮಾಮೃತ ತುಂಬಿ.
ನಯನದಲ್ಲಿ ನಿಮ್ಮ ಮೂರುತಿ ತುಂಬಿ,
ಮನದಲ್ಲಿ ನಿಮ್ಮ ನೆನಹು ತುಂಬಿ;
ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ;
ಕೂಡಲಸಂಗಮದೇವ,
ನಿಮ್ಮ ಚರಣಕಮಲದೊಳಗಾನು ತುಂಬಿ!
೨೯೦.
ಉರಿಯೊಳಗಣ ಕರ್ಪೂರಕ್ಕೆ ಕರೆಯುಂಟೇ ಅಯ್ಯ ?
ಬಯಲು ಮರೀಚಿಕೆಯ ಜಲಕ್ಕೆ ಕೆಸರುಂಟೇ ಅಯ್ಯ ?
ವಾಯುವನಪ್ಪಿದ ಪರಿಮಳಕ್ಕೆ ನಿರ್ಮಾಲ್ಯವುಂಟೇ ಅಯ್ಯ ?
ನೀವು ನೆರೆಯೊಲಿದ ಬಳಿಕೆನಗೆ ಭವವುಂಟೇ ?
ಕೂಡಲಸಂಗಮದೇವ.
ಚರಣಕಮಲದೊಳಗೆನ್ನನಿಂಬಿಟ್ಟುಕೊಳ್ಳಯ್ಯ!
೨೯೧.
ಮಂಡೆಯ ಬೋಳಿಸಿಕೊಂಡು
ಗಂಡುದೊತ್ತುವೊಕ್ಕೆನಯ್ಯ.
ಲಜ್ಜೆಗೆಟ್ಟಾದರೂ ಲಿಂಗವನೊಲಿಸುವೆ.
ನಾಣುಗೆಟ್ಟಾದರೂ ಲಿಂಗವನೊಲಿಸುವೆ.
ಕೆಲದ ಸಂಸಾರಿಗಳು ನಗುತಿದ್ದರಿರಲಿ.
ಕೂಡಲಸಂಗಮದೇವ ಶರಣಾಗತಿವೊಕ್ಕೆನಯ್ಯ.
೨೯೨.
ಎನಗೆ ನಿಮ್ಮ ನೆನಹಾದಾಗವೇ ಉದಯ!
ಎನಗೆ ನಿಮ್ಮ ಮರಹಾದಾಗವೇ ಅಸ್ತಮಾನ!
ಎನಗೆ ನಿಮ್ಮ ನೆನಹವೇ ಜೀವ!
ಎನಗೆ ನಿಮ್ಮ ನೆನಹವೇ ಪ್ರಾಣ ಕಾಣ ತಂದೆ!
ಸ್ವಾಮಿ, ಎನ್ನ ಹೃದಯದಲ್ಲಿ
ನಿಮ್ಮ ಚರಣದುಂಡಿಗೆಯನೊತ್ತಯ್ಯ!
ವದನದಲ್ಲಿ ಪಂಚಾಕ್ಷರಿಯ ಬರೆಯಯ್ಯ
ಕೂಡಲಸಂಗಮದೇವ.
೨೯೩.
ಎನ್ನ ಕಾಯವ ದಂಡಿಗೆಯ ಮಾಡಯ್ಯ,
ಎನ್ನ ಶಿರವ ಸೋರೆಯ ಮಾಡಯ್ಯ,
ಎನ್ನ ನರವ ತಂತಿಯ ಮಾಡಯ್ಯ,
ಎನ್ನ ಬೆರಲ ಕಡ್ಡಿಯ ಮಾಡಯ್ಯ,
ಬತ್ತೀಸ ರಾಗವ ಹಾಡಯ್ಯ,
ಉರದಲೊತ್ತಿ ಬಾಜಿಸು ಕೂಡಲಸಂಗಮದೇವ.
೨೯೪.
ಮನಕ್ಕೆ ಮನೋಹರವಲ್ಲದ ಗಂಡರು
ಮನಕ್ಕೆ ಬಾರರು ಕೇಳವ್ವ ಕೆಳದಿ.
ಪನ್ನಗಭೂಷಣನಲ್ಲದ ಗಂಡರು
ಇನ್ನೆನಗಾಗದ ಮೋರೆ ನೋಡವ್ವ!
ಕನ್ನೆಯಂದಿನ ಕೂಟ:
ಚಿಕ್ಕಂದಿನ ಬಾಳುವೆ,
ನಿಮ್ಮಾಣೆಯಯ್ಯ ಕೂಡಲಸಂಗಮದೇವ.
೨೯೫.
ಜಗವೆಲ್ಲಾ ಅರಿಯಲು
ಎನಗೊಬ್ಬ ಗಂಡನುಂಟು!
ಆನು ಮುತ್ತೈದೆ;
ಆನು ನಿಟ್ಟೈದೆ.
ಕೂಡಲಸಂಗಮದೇವನಂತಪ್ಪ
ಎನಗೊಬ್ಬ ಗಂಡನುಂಟು.
೨೯೬.
ಸಂಸಾರವೆಂಬ ಶ್ವಾನನಟ್ಟಿ
ಮೀಸಲ ಬೀಸರ ಮಾಡದಿರಯ್ಯ!
ಎನ್ನ ಚಿತ್ತವು ನಿನ್ನ ಧ್ಯಾನವಯ್ಯ!
ನೀನಲ್ಲದೆ ಮತ್ತೇನನೂ ಅರಿಯೆನು
ಕನ್ನೆಯಲ್ಲಿ ಕೈವಿಡಿದೆನು.
ನಿನ್ನಲ್ಲಿ ನೆರೆದೆನು.
ಮನ್ನಿಸು ಕಂಡಾ ಮಹಾಲಿಂಗವೆ!
ಸತಿಯಾನು ಪತಿ ನೀನು
ಮನೆಯೊಡೆಯ ಮನೆಯ ಕಾಯ್ದಿಪ್ಪಂತೆ
ನೀನೆನ್ನ ಮನವ ಕಾಯ್ದಿಪ್ಪ ಗಂಡನು.
ನಿನಗೋತ ಮನವನನ್ಯಕ್ಕೆ ಹರಿಸಿದರೆ
ನಿನ್ನಭಿಮಾನ ಹಾನಿ ಕೂಡಲಸಂಗಮದೇವ.
೨೯೭.
ಅಯ್ಯ, ನಿಮ್ಮ ಅನುಭಾವದಿಂದ
ಎನ್ನ ತನು ಹಾಳಾಯಿತ್ತು.
ಅಯ್ಯ, ನಿಮ್ಮ ಅನುಭಾವದಿಂದ
ಎನ್ನ ಮನ ಹಾಳಾಯಿತ್ತು.
ಅಯ್ಯ, ನಿಮ್ಮ ಅನುಭಾವದಿಂದ
ಎನ್ನ ಕರ್ಮಚ್ಛೇದನವಾಯಿತ್ತು.
ಅಯ್ಯ, ನಿಮ್ಮವರು ಅಡಿಗಡಿಗೆ ಹೇಳಿ
ಭಕ್ತಿ ಎಂಬೀ ಒಡವೆಯನು
ದಿಟಮಾಡಿ ತೋರಿದರು ಕೂಡಲಸಂಗಮದೇವ.
೨೯೮.
ಭಕ್ತನೆಂತೆಂಬೆನಯ್ಯ, ಭವಿಸಂಗ ಬಿಡದನ್ನಕ ?
ಮಾಹೇಶ್ವರನೆಂತೆಂಬೆನಯ್ಯ,
ಪರಸ್ತ್ರೀ ಪರರರ್ಥದಾಸೆ ಬಿಡದನ್ನಕ ?
ಪ್ರಸಾದಿಯೆಂತೆಂಬೆನಯ್ಯ,
ಆಧಿವ್ಯಾಧಿ ನಷ್ಟವಾಗದನ್ನಕ ?
ಪ್ರಾಣಲಿಂಗಿಯೆಂತೆಂಬೆನಯ್ಯ,
ಪ್ರಾಣ ಸ್ವಸ್ಥಿರವಾಗದನ್ನಕ ?
ಶರಣನೆಂತೆಂಬೆನಯ್ಯ,
ಪಂಚೇಂದ್ರಿಯ ನಾಸ್ತಿಯಾಗದನ್ನಕ ?
ಐಕ್ಯನೆಂತೆಂಬೆನಯ್ಯ,
ಜನನ ಮರಣ ವಿರಹಿತವಾಗದನ್ನಕ ?
ಇಂತಪ್ಪ ಭಾಷೆ-ವ್ರತ-ವೇಷಂಗಳ
ನಾನರಿಯೆನಯ್ಯ!
ಅಘಟಿತ-ಘಟಿತ-ವರ್ತಮಾನವ
ನಾನರಿಯೆನಯ್ಯ!
ನಿಮ್ಮ ಶರಣರ ತೊತ್ತು,
ಭೃತ್ಯಾಚಾರವ ಮಾಡುವೆ ಕೂಡಲಸಂಗಮದೇವ.
೨೯೯.
ಅಭ್ಯಾಸವೆನ್ನ ವರ್ತಿಸಿತ್ತಯ್ಯ!
ಭಕ್ತಿ ಸಾಧ್ಯವಾಗದು, ನಾನೇವೆನಯ್ಯ ?
ಆನು ನಿಮ್ಮ ಮನಂಬೊಗುವನ್ನಕ,
ನೀವೆನ್ನ ಮನಂಬೊಗುವನ್ನಕ.
ಕಾಯಗುಣಂಗಳ ಕಳೆದವರಿಗೆ ಶರಣೆಂಬೆ
ಕೂಡಲಸಂಗಮದೇವ.
೩೦೦.
ತನುಸಾರಾಯರ, ಮನಸಾರಾಯರ,
ಜ್ಞಾನಸಾರಾಯರ ತೋರಯ್ಯ ನಿಮ್ಮ ಧರ್ಮ!
ಭಾವಸಾರಾಯರ, ಭಕ್ತಿಸಾರಾಯರ,
ತೋರಯ್ಯ ನಿಮ್ಮ ಧರ್ಮ !
ಕೂಡಲಸಂಗಮದೇವಯ್ಯ, ನಿಮ್ಮನರಿಯದ
ಅವಗುಣಿಗಳ ತೋರದಿರಯ್ಯ ನಿಮ್ಮ ಧರ್ಮ.

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು