ಟಿ.ಎಸ್.ವೆಂಕಣ್ಣಯ್ಯ

ಟಿ.ಎಸ್.ವೆಂಕಣ್ಣಯ್ಯ

ವೆಂಕಣ್ಣಯ್ಯನವರು ಬಹುಬಾಷಾವಿದರು. ಅವರು ಕನ್ನಡ, ಇಂಗ್ಲಿಷ್ ಸಾಹಿತ್ಯಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದರು. ತೆಲುಗು, ಬಂಗಾಳಿ ಭಾಷೆಗಳ ಪರಿಚಯವೂ ಅವರಿಗೆ ಚೆನ್ನಾಗಿತ್ತು. ತಮಿಳು, ಸಂಸ್ಕೃತಗಳನ್ನೂ ಕಲಿತಿದ್ದರು. ಬಂಗಾಳಿ ಗ್ರಂಥವನ್ನು ಓದಿ, ಶ್ರೀ ರಾಮಕೃಷ್ಣ ಪರಮಹಂಸ ಎಂಬ ಜೀವನಚರಿತ್ರೆಯನ್ನು ಬರೆದರು. ಶ್ರೀರಾಮಕೃಷ್ಣ ಲೀಲಾ ಪ್ರಸಂಗದ ಒಂದು ಭಾಗವನ್ನು ಬಂಗಾಳಿಯಿಂದ ಕನ್ನಡಕ್ಕೆ ಭಾಷಾಂತರ ಮಾಡಿದ್ದರು. ರವೀಂದ್ರನಾಥರು ಬರೆದ ಪ್ರಬಂಧಗಳಲ್ಲಿ ಕೆಲವನ್ನು ಅನುವಾದಿಸಿ ಪ್ರಾಚೀನ ಸಾಹಿತ್ಯ ಎಂಬ ಹೆಸರಲ್ಲಿ ಪ್ರಕಟಿಸಿದರು.
         ಸುಬ್ಬಣ್ಣ-ಲಕ್ಷ್ಮಿದೇವಮ್ಮ ರವರ ಹಿರಿಯ ಮಗನಾಗಿ ವೆಂಕಣ್ಣಯ್ಯನವರು ಹುಟ್ಟಿದ್ದು 1885ರ ಅಕ್ಟೋಬರ್ 1 ರಂದು, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕಿನಲ್ಲಿ; ಸಾಹಿತ್ಯ, ಕಲೆಗಳಲ್ಲಿ ತುಂಬ ಆಸಕ್ತಿಯಿದ್ದ ವಂಶದಲ್ಲಿ. ವೆಂಕಣ್ಣಯ್ಯನವರ ವಿದ್ಯಾಭ್ಯಾಸ ಚಳ್ಳಕೆರೆಯಲ್ಲಿ ಆರಂಭವಾಯಿತು. ಅನಂತರ ಚಿತ್ರದುರ್ಗದ ಹೈಸ್ಕೂಲಿನಲ್ಲಿ ಮೆಟ್ರಿಕ್ಯುಲೇಷನ್ ವರೆಗೆ ಓದಿದರು. ಬಳ್ಳಾರಿಯಲ್ಲಿ ಎಫ್.ಎ. ಆದ ಮೇಲೆ ಮೈಸೂರಿಗೆ ಹೋಗಿ 1909ರಲ್ಲ ಬಿ.ಎ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು. ಆಮೇಲೆ ಎಲ್.ಎಲ್.ಬಿ. ಓದಲು ಮುಂಬಯಿ ಸೇರಿದರು. ಆದರೆ ನ್ಯಾಯಶಾಸ್ತ್ರ ವ್ಯಾಸಂಗವನ್ನು ಪೂರ್ಣ ಮಾಡಲಿಲ್ಲ. ಮುಂಬಯಿಯಲ್ಲಿದ್ದಾಗ ಕೆಲಕಾಲ ಪೋಸ್ಟಾಫೀಸ್ ನಲ್ಲಿ ಗುಮಾಸ್ತೆಯಾಗಿ ಕೆಲಸ ಮಾಡಿದರು. ಪುನಃ ಮೈಸೂರಿಗೆ ಬಂದು ಎಸ್.ತಿಮ್ಮಪ್ಪಯ್ಯಶಾಸ್ತ್ರಿಗಳ ಹತ್ತಿರ ಕನ್ನಡ ಸಾಹಿತ್ಯವನ್ನೂ ರಾ.ಅನಂತಕೃಷ್ಣಶರ್ಮರ ಬಳಿ ತೆಲುಗು ಸಾಹಿತ್ಯವನ್ನೂ ಅಭ್ಯಾಸ ಮಾಡಿ, ಮದರಾಸು ವಿಶ್ವವಿದ್ಯಾನಿಲಯದ ಕನ್ನಡ ಎಂ.ಎ. ಪರೀಕ್ಷೆಗೆ ಕುಳಿತು 1914ರಲ್ಲಿ ತೇರ್ಗಡೆ ಹೊಂದಿದರು. ಹಿಗೆ ವೆಂಕಣ್ಣಯ್ಯನವರ ವಿದ್ಯಾಭ್ಯಾಸ ನಡೆದದ್ದು ಅವರ ಚಿಕ್ಕಪ್ಪ ಟಿ.ಶ್ರೀನಿವಾಸರಾಯ ನೆರವಿನಿಂದ.
         ವೆಂಕಣ್ಣಯ್ಯನವರ ಉಪಾಧ್ಯಾಯರಾಗಿ ಕೆಲಸವನ್ನಾರಂಭಿಸಿದ್ದು ಧಾರವಾಡದ ಮಿಷನ್ ಸ್ಕೂಲಿನಲ್ಲಿ. ಅನಂತರ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿಗೆ ಬಂದರು. ಅವರಿಗೆ ಸರ್ಕಾರಿ ನೌಕರಿ ದೊರೆತದ್ದು 1917ರಲ್ಲಿ, ದೊಡ್ಡಬಳ್ಳಾಪುರದ ಕನ್ನಡ ಪ್ರೌಢಶಾಲೆಯ ಮುಖ್ಯೋಪಧ್ಯಾಯರಾಗಿ. ಅಲ್ಲಿಂದ ಮುಂದೆ ಬೆಂಗಳೂರಿನ ಕೊಲಿಜಿಯೇಟ್ ಹೈಸ್ಕೂಲು, ಸೆಂಟ್ರಲ್ ಕಾಲೇಜುಗಳಲ್ಲಿ ಅಧ್ಯಾಪಕರಾಗಿದ್ದು, ಕೊನೆಗೆ 1927ರಲ್ಲಿ ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಕನ್ನಡದ ಪ್ರಥಮ ಪ್ರಾಧ್ಯಾಪಕರಾಗಿದ್ದರು. ಪಾಠ ಹೇಳುವ ಕಲೆ ವೆಂಕಣ್ಣಯ್ಯನವರಿಗೆ ಕರಗತವಾಗಿತ್ತು. ವಿದ್ಯಾರ್ಥಿಗಳಿಗೆ ಚೆನ್ನಾಗಿ ಪಾಠ ಹೇಳುತ್ತಿದ್ದುದು ಮಾತ್ರವಲ್ಲದೇ ಅವರನ್ನು ತಮ್ಮ ಮಕ್ಕಳಂತೆ ಕಾಣುತ್ತ ಶ್ರೇಯೊಭಿವೃದ್ಧಿಗೆ ಸಹಾಯಕವಾದ ಉತ್ತೇಜನ ಸಲಹೆಗಳನ್ನು ಕೊಡುತ್ತಿದ್ದರು. ಇದಕ್ಕೆ ಅತ್ಯುತ್ತಮ ನಿದರ್ಶನ ವೆಂಕಣ್ಣಯ್ಯನವರಿಗೂ ಕವಿ ಕುವೆಂಪು ಅವರಿಗೂ ಇದ್ದ ಅಪೂರ್ವ ಗುರು-ಶಿಷ್ಯರ ಸಂಬಂಧ.
         ವೆಂಕಣ್ಣಯ್ಯನವರು ಯಾವ ಕೆಲಸವನ್ನು ದುಡುಕಿ ಮಾಡುತ್ತಿರಲಿಲ್ಲ. ಪೂರ್ವಾಪರಗಳನ್ನು ಯೋಚಿಸಿಯೇ ಮುಂದುವರಿಯುತ್ತಿದ್ದರು. ಎಂಥಾ ಸಂಧರ್ಭದಲ್ಲೂ ಅವರು ತಮ್ಮ ಸಹನೆಯನ್ನು ಕಳೆದುಕೊಳ್ಳುತ್ತಿರಲಿಲ್ಲ. ಬೇರೆಯವರೊಡನೆ ಅವರ ಸಂಬಂಧ ಹಿತ ಮಿತ; ಆತ್ಮೀಯತೆಯಿಂದ ಕೂಡಿದ್ದು. ಅವರು ಸಧೃಡ ದೇಹಪ್ರಕೃತಿಯಲ್ಲ; ಆದರೂ ಅವರು ಯಾವ ಕೆಲಸದಲ್ಲಿಯೂ ಆಲಸ್ಯ ತೋರುತ್ತಿರಲಿಲ್ಲ. ದೇಹಶ್ರಮವನ್ನು ಲೆಕ್ಕಿಸದೇ ತಮ್ಮ ಕರ್ತವ್ಯವನ್ನು ತಪ್ಪದೆ ನಡೆಸುತ್ತಿದ್ದರು. ಇದು ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡಿತು. ಸ್ವಲ್ಪ ಕಾಲದ ಅನಾರೋಗ್ಯದ ಅನಂತರ ಅವರು 1939ನೆಯ ಫೆಬ್ರುವರಿ 21ರಂದು ಕೊನೆಯ ಉಸಿರೆಳೆದರು. 
Krupe : http://www.chitharadurga.com

Comments

  1. ವೆಂಕಣ್ಣಯ್ಯನವರದು ದೈಹಿಕವಾಗಿ ಮತ್ತು ಮಾನಸಿಕವಾಗಿಯೂ ಎತ್ತರದ ವ್ಯಕ್ತಿತ್ವ. ಅವರ ದೈಹಿಕ ಎತ್ತರವನ್ನು ನೋಡಿದ ಕೈಲಾಸಂ‍ರವರು, "ಸ್ವಾಮಿ ಇಲ್ಲಿಂದಲೇ ಸ್ವರ್ಗದಲ್ಲಿರೋ ತಾತ-ಮುತ್ತಾತಂದಿರೆಲ್ಲಾ ಚೆನ್ನಾಗಿದ್ದಾರೋ ಇಲ್ಲವೋ ನೋಡಿ ಹೇಳಿಬಿಡಿ" ಎಂದರಂತೆ

    ReplyDelete

Post a Comment

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು