ಅಲ್ಲಮಪ್ರಭು
ಅಲ್ಲಮಪ್ರಭುವಿನ ಜೀವನ ಚರಿತ್ರೆ
ಅಲ್ಲಮನ ಜೀವನ ಚರಿತ್ರೆಯನ್ನು ನಿಖರವಾಗಿ ನಿರೂಪಿಸಲು ಸಾಧ್ಯವಾಗಲಾರದೊಷ್ಟು ಐತಿಹ್ಯಗಳು ಆ ವ್ಯಕ್ತಿತ್ವವನ್ನು ಸುತ್ತುವರಿದಿವೆ. ಅಲ್ಲಮನ ಬಗ್ಗೆ ಹದಿಮೂರನೇ ಶತಮಾನದ ಹರಿಹರಮಹಾಕವಿಯು, ಪ್ರಭುದೇವರ ರಗಳೆಯಲ್ಲಿ ಸಾಕಷ್ಟು ವಿವರಣೆಗಳನ್ನು ನೀಡಿರುವನಾದರೂ, ಅಲ್ಲಮನ ಪ್ರಭಾವಲಯದಿಂದ ಪೂರ್ಣವಾಗಿ ಹೊರ ಬಂದು , ಒಂದು ಸಹಜ ಚಿತ್ರಣವನ್ನು ಕೊಡುವಲ್ಲಿ ಹರಿಹರನಂತಹ ವಾಸ್ತವವಾದಿ ಕವಿ ಸಹ ಸೋಲುತ್ತಾನೆನಿಸುತ್ತದೆ . ಇನ್ನು ಚಾಮರಸನು ಅಲ್ಲಮಪ್ರಭುದೇವನನ್ನು ಈ ಲೋಕದ ಮಾನವ ಚೇತನವೆಂದು ಒಪ್ಪಿಕೊಳ್ಳುವುದೇ ಇಲ್ಲ. ಅವನು ಕೈಲಾಸದಿಂದ ಬಂದ ಶಿವನ ಚಿತ್ಕಳೆ , ಎಂದೇ ಚಿತ್ರಿಸುತ್ತಾನೆ. ಇವರಿಬ್ಬರಲ್ಲದೆ ಎಳಂದೂರು ಹರಿಹರೇಶ್ವರನೆಂಬ ಮತ್ತೊಬ್ಬ ಕವಿಯೂ ಅಲ್ಲಮಪ್ರಭುವಿನ ಬಗ್ಗೆ ಕಾವ್ಯ ರಚನೆ ಮಾಡಿದ್ದಾನೆ . ಇನ್ನು ಚಾಮರಸನು ರಚಿಸಿರುವ ಪ್ರಭುಲಿಂಗಲೀಲೆಯು ತಮಿಳು, ಮರಾಠಿ ಮುಂತಾದ ಭಾಷೆಗಳಿಗೆ ಬಲು ಹಿಂದೆಯೇ ಅನುವಾದಗೊಂಡು ಪ್ರಖ್ಯಾತವಾಗಿದ್ದಿತು .ಈ ಮಹಾಕವಿಗಳಲ್ಲದೆ ,ಅಲ್ಲಮಪ್ರಭುವಿನ ಬಗ್ಗೆ ಪ್ರಾಸಂಗಿಕವಾಗಿ ಬರೆಯದ ವೀರಶೈವ ಸಾಹಿತ್ಯವೇ ಇಲ್ಲವೆನ್ನಬಹುದು. ಇದೆಲ್ಲಕ್ಕಿಂತಲೂ ಮುಖ್ಯವಾಗಿ, ಸ್ವತಃ ಅಲ್ಲಮಪ್ರಭುವೇ ಅತನ ಕಾಲದ ಬಲು ದೊಡ್ಡ ಸಾಹಿತ್ಯಚೇತನವಾಗಿದ್ದನೆನ್ನುವುದು, ಮತ್ತು ಅವನವೇ ಆದ ಅನೇಕ ವಚನಗಳು ಉಪಲಬ್ಧವಿರುವುದು ,ಅವನ ವ್ಯಕ್ತಿತ್ವವನ್ನು ಗ್ರಹಿಸಲು ತುಂಬಾ ಉಪಯುಕ್ತ ಮಾರ್ಗವಾಗಿದೆ .ಇಡಿಯ ವಚನ ಸಾಹಿತ್ಯದಲ್ಲಿಯೇ , ಸಾಹಿತ್ಯದ ಪರಿಭಾಷೆಯನ್ನು ಸರಿಯಾದ ಮಾರ್ಗದಲ್ಲಿ ದುಡಿಸಿಕೊಂಡವರಲ್ಲಿ ಅಕ್ಕಮಹಾದೇವಿ ಮತ್ತು ಅಲ್ಲಮಪ್ರಭು ಇಬ್ಬರೂ ಅಪ್ರತಿಮರು .
ಚಾಮರಸನು ಅಲ್ಲಮನ ತಂದೆ ತಾಯಿಗಳನ್ನು ನಿರಹಂಕಾರ ,ಸುಜ್ಞಾನಿಗಳೆಂದು ಕರೆಯುತ್ತಾನೆ , ನಂತರ ಮಾಯಾದೇವಿಯ ತಂದೆತಾಯಿಗಳನ್ನು ಮಮಕಾರ, ಮೋಹಿನಿಯರೆಂದು ಕರೆಯುವುದನ್ನು ಕಂಡಾಗ ಇವೆಲ್ಲವೂ ವಾಸ್ತವವಲ್ಲದ , ಕವಿಯ ಭಾವನಾತ್ಮಕ ರೂಪಕಗಳೆನಿಸದೆ ಇರದು. ಹರಿಹರ ಮಹಾಕವಿಯು ಅಲ್ಲಮನ ತಂದೆತಾಯಿಗಳ ಹೆಸರುಗಳನ್ನೆ ಪ್ರಾಸ್ತಾಪಿಸದೆ ಅಲ್ಲಮನ ತಂದೆಯು ಬಳ್ಳಿಗಾವಿಯ ನಾಗವಾಸಾಧಿಪನಾಗಿದ್ದನೆಂದು ವಿವರಿಸುವನು. ನಾಗವಾಸಾಧಿಪನೆಂದರೆ ಅರಮನೆಯ ಅಂತಃಪುರದ ಸಂಗೀತ, ನರ್ತನಗಳ ವಲಯದ ಅಧಿಕಾರಿಯೆಂದೇ ಅರ್ಥ ಬರುವುದರಿಂದ ,ಅಲ್ಲಮನು ಒಬ್ಬ ಕಲಾವಿದನ ಮಗನಾಗಿದ್ದನೆಂದು ಭಾವಿಸಬಹುದು. ಮತ್ತು ಅಂದಿನ ಕಾಲಮಾನದಲ್ಲಿ ನಟರಿಗೆ, ನಟುವಾಂಗದ ವೃತ್ತಿಯವರಿಗೆ ಸಾಮಾಜಿಕ ಮನ್ನಣೆಯೂ ಇರಲಿಲ್ಲವೆಂಬುದು ಗಮನಾರ್ಹವಾದುದು .
ಅಲ್ಲಮನ ಯವ್ವನಕಾಲದ ಪ್ರೇಮ, ಕಾಮ, ವ್ಯಾಮೋಹಗಳ ಚಿತ್ರಗಳನ್ನು ಹರಿಹರಮಹಾಕವಿಯೂ , ಚಾಮರಸನೂ ಕಟ್ಟಿ ಕೊಡುವ ರೀತಿಗಳು ತುಂಬಾ ವಿಭಿನ್ನವಾಗಿವೆ. ಅತ್ಯಂತ ಸುಂದರನೂ , ಅಪ್ರತಿಮ ಮದ್ದಲಿಗನೂ, ಆಕರ್ಷಕಯುವಕನೂ ಆಗಿದ್ದ ಅಲ್ಲಮನನ್ನು ಶಿವದೇವಾಲಯದಲ್ಲಿ , ಮದ್ದಳೆ ಬಾರಿಸುತ್ತಿರುವ ಸಮಯದಲ್ಲಿ ಕಾಮಲತೆಯು ಆಕಸ್ಮಿಕವಾಗಿ ಸಂಧಿಸುತ್ತಾಳೆ. ಅವನನ್ನು ಕಂಡ ಕೂಡಲೇ ಅವನಲ್ಲಿ ಅನುರಕ್ತಳಾಗಿ ; ಕಾಮವಶಳಾಗಿ ಮೂರ್ಛಿತಳಾಗುತ್ತಾಳೆ. ಅಲ್ಲಮನ ಅವಸ್ಥೆಯೂ ಸಹ ಅದೇ ಪರಿಯಾಗುತ್ತದೆ .ಕಾಮಲತೆಯಂತಹ ಮಿಂಚಿನ ಮೋಹನಾಂಗಿಯನ್ನು ಕಂಡು,ಅಲ್ಲಮನು ವಿವಶನಾಗುತ್ತಾನೆ. ಇವರಿಬ್ಬ ಸ್ಥಿತಿಯನ್ನು ಮನಗಂಡ ಸಖಿಯರು ಇವರ ಮಿಲನಕ್ಕೆ ಅವಕಾಶ ಕಲ್ಪಿಸುತ್ತಾರೆ . ಅಲ್ಲಿಂದ ಅಲ್ಲಮ ಮತ್ತು ಕಾಮಲತೆಯರು ಇಹದ ಸಮಸ್ತವನ್ನೂ ಮರೆತು, ಏಕ ದೇಹಿಗಳಂತೆ,ಕಾಲ ದೇಶಾತೀತರಾಗಿ ,ಲೋಕದ ಮರವೆಯಲ್ಲಿ ಕಾಲ ಕಳೆಯುತ್ತಿರುವಾಗ ,ಕಾಮಲತೆಯು ಜ್ವರ ಪೀಡಿತೆಯಾಗಿ ಆಕಸ್ಮಿಕವಾಗಿ ಮರಣ ಹೊಂದುತ್ತಾಳೆ. ಇದರಿಂದ ವಿಚಲಿತನಾದ ಅಲ್ಲಮನು ವಿರಹ ಜ್ವಾಲೆಯಲ್ಲಿ ಬೇಯುತ್ತಾ, ಮರುಳನಂತೆ ಅಲೆಯುತ್ತಾ,ತಿರುಗುತ್ತಿರುವಾಗ . ಊರ ಹೊರಗೆ ಹೂತು ಹೋದ ಪ್ರಾಚೀನ ಶಿವಾಲಯವೊಂದರ ಶಿಖರದ ತುದಿಯು ,ಕಾಲಬೆರಳ ತುದಿಗೆ ತಗುಲಿ, ಕುತೂಹಲಗೊಂಡು ಅಗೆಯ ತೊಡಗಿದಾಗ ಇಡಿಯ ಶಿವಾಲಯ ಗೋಚರವಾಗುತ್ತದೆ. ಅದರೊಳಗೆ ಪ್ರವೇಶಿಸಿದಾಗ ಅಲ್ಲಿ ಶಿವಯೋಗದಲ್ಲಿದ್ದ ಅನಿಮಿಷ ದೇವನ ದರ್ಶನವಾಗಿ ,ಅವನ ಕೈಯ್ಯಲ್ಲಿದ್ದ ಅತ್ಮಲಿಂಗವು ಅಲ್ಲಮಪ್ರಭುವಿನ ಕೈಗೆ ಬಂದು ಸೇರುತ್ತದೆ .ಇದರಿಂದಾಗಿ ಇಬ್ಬರ ನಡುವೆ ಗುರು ಶಿಷ್ಯ ಸಂಭಂಧವೇರ್ಪಡುತ್ತದೆ. ತಕ್ಷಣ ಅನಿಮಿಷದೇವನು ಶಿವಾಧೀನನಾಗುತ್ತಾನೆ . ನಂತರ ಅಲ್ಲಮನ ಎಲ್ಲ ಮೋಹ ಮಮತೆಗಳು ಅಳಿದು , ಜಗತ್ತಿನ ನಶ್ವರತೆ; ವಿಶ್ವಕಾರಣದ ಶಾಶ್ವತತೆ ಅರಿವಿಗೆ ಬಂದು ಅನಂತ ಜ್ಞಾನಿಯಾಗುತ್ತಾನೆ. ಇದು ಹರಿಹರ ಮಹಾಕವಿಯು ಕಟ್ಟಿಕೊಡುವ ಅಲ್ಲಮನ ಪರಿವರ್ತನೆಯ ಚಿತ್ರಣ .
ಚಾಮರಸನು ಹೇಳುವ ಕತೆಯೇ ಬೇರೆ . ಅಲ್ಲಮನು ಸಾಕ್ಷಾತ್ ಶಿವಾಂಶ ಸಂಭೂತನಾದುದರಿಂದ, ಕಾಮಾದಿ ಅರಿಷಡ್ವರ್ಗಗಳು ಅವನನ್ನು ಸೋಂಕುವುದೇ ಇಲ್ಲ. ಬನವಸೆಯ ಮಧುಕೇಶ್ವರ ಮಂದಿರದಲ್ಲಿ ಶಿವನೆದುರಿನಲ್ಲಿ ಮದ್ದಳೆಯ ಮಹಾ ಯೋಗದಲ್ಲಿ ತಲ್ಲೀನನಾಗಿದ್ದ ಅಲ್ಲಮನನ್ನು ಆ ಊರಿನ ರಾಜನ ಮಗಳು, ಮಾಯಾದೇವಿ ಕಂಡು ವಿಭ್ರಾಂತಿಗೊಳಗಾಗುತ್ತಾಳೆ, ಅವನನ್ನು ಮೋಹಿಸಿ ,ಕಾಮಿಸುತ್ತಾಳೆ. ಇಲ್ಲಿ ಚಾಮರಸನ ಪ್ರಕಾರ ಪಾರ್ವತೀ ದೇವಿಯ ಮಾಯೆಯ ಅಂಶವೇ ಅಲ್ಲಮನನ್ನು ಜಯಿಸಲು ಭೂಲೋಕದಲ್ಲಿ ಮಾಯಾದೇವಿಯಾಗಿ , ಮಮಕಾರ, ಮೋಹಿನಿಯರ ಮಗಳಾಗಿ ಜನಿಸಿರುತ್ತಾಳೆ.ಇದನ್ನು ಅರಿತ ಅಲ್ಲಮನು , ಅಂತರ್ಧಾನನಾಗಿ , ಅರಣ್ಯವನ್ನು ಸೇರುತ್ತಾನೆ . ಹಿಂಬಾಲಿಸಿದ ಮಾಯೆಗೆ , ಪರವಶನಾಗದೆ ಶಾಶ್ವತ ನಿಲುವನ್ನು ವಿವರಿಸುತ್ತಾನೆ .ಹೀಗೆ ಇಬ್ಬರು ಮಹಾ ಕವಿಗಳು ಅಲ್ಲಮನನ್ನು ವಿಭಿನ್ನ ವಾಗಿ ಕಟ್ಟಿ ಕೊಡುತ್ತಾರೆ.
ಹರಿಹರ, ಚಾಮರಸರ ಕಾವ್ಯಗಳ ನಾಯಕನಾಗಿ ತೋರಿ ಬರುವ ಅಲ್ಲಮಪ್ರಭುವು, ನಂತರ ಶೂನ್ಯ ಸಂಪಾದನೆಕಾರರ ಕೃತಿಯಲ್ಲಿ ಅಸಾಮಾನ್ಯ ವ್ಯಕ್ತಿತ್ವದವನಾಗಿ ಚಿತ್ರಿತನಾಗಿದ್ದಾನೆ.ಅಲ್ಲಮನ ವಚನಗಳು ಮತ್ತು ಸಮಕಾಲೀನ ಶರಣರ ವಚನಗಳನ್ನೇ , ರತ್ನಮಾಲೆಯಂತೆ ಕೋದು ,ಸಂದರ್ಭಕ್ಕೆ ಅನುಗುಣವಾಗಿ ಕೆಲವು ವಚನಗಳನ್ನು ಸೇರಿಸಿ , ಶಿವಗಣ ಪ್ರಸಾದಿ ಮಹದೇವಯ್ಯಗಳು ಮೊದಲ ಶೂನ್ಯ ಸಂಪಾದನೆಯನ್ನು ರಚಿಸಿದರು. ನಂತರ ಗೂಳೂರು ಸಿದ್ದವೀರಣ್ಣೊಡೆಯರುಮೂರನೆಯದಾಗಿ ಗುಮ್ಮಳಾಪುರದ ಸಿದ್ದಲಿಂಗದೇವರು ಅಂತಿಮವಾಗಿ ಕೆಂಚವೀರಣ್ಣೊಡೆಯರುಹೀಗೆ ನಾಲ್ಕು ಶೂನ್ಯ ಸಂಪಾದನೆಗಳು ಅಲ್ಲಮ ಪ್ರಭುವಿನ ಜೀವನ ಚಿತ್ರಣ ನೀಡುವಲ್ಲಿ ಇಂದು ನೆರವಾಗಿವೆ.
ಇಪ್ಪತ್ತನೆಯ ಶತಮಾನದಲ್ಲಿ ಅಲ್ಲಮಪ್ರಭುವಿನ ಚಿತ್ರಣವನ್ನು ಪುನರ್ರೂಪಿಸುವಲ್ಲಿ ಎಚ್.ತಿಪ್ಪೇರುದ್ರಸ್ವಾಮಿಯವರು ಪರಿಪೂರ್ಣದೆಡೆಗೆ ಕಾದಂಬರಿಯ ಮೂಲಕ ಅನನ್ಯವಾಗಿ ಪ್ರಯತ್ನಿಸಿದ್ದಾರೆ. ಬಿ.ಪುಟ್ಟಸ್ವಾಮಯ್ಯನವರು ಅಲ್ಲಮಪ್ರಭುವಿನ ಬಗೆಗೆ ಅದೇ ಹೆಸರಿನ ಕಾದಂಬರಿಯನ್ನು ರಚಿಸಿರುವುದಲ್ಲದೆ, ಹನ್ನೆರಡನೆಯ ಶತಮಾನದ, ರಾಜಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ,ಹೀಗೆ ಸಮಸ್ತ ಮುಖಗಳನ್ನೊಳಗೊಂಡ ಆರು ಕಾದಂಬರಿಗಳಲ್ಲಿ, ಅಲ್ಲಮನನ್ನು ಅತ್ಯಂತ ವಿಶಿಷ್ಟವಾಗಿ ಚಿತ್ರಿಸುತ್ತಾರೆ.ಹೀಗೆ ಎಷ್ಟೆಲ್ಲಾ ಮಹನೀಯರಿಂದ ಪೂಜನೀಯನಾದ ಅಲ್ಲಮಪ್ರಭುವಿನ ವ್ಯಕ್ತಿತ್ವವು ಕಡೆಗೂ ನಿಗೂಢವೇ ಆಗುತ್ತದೆ . ಅವನ ವಚನಗಳಂತೆ, ಅವನ ವ್ಯಕ್ತಿತ್ವದಂತೆ.

Comments
Post a Comment