ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Friday, March 18, 2011

ಕುಮಾರವ್ಯಾಸ


ಕುಮಾರವ್ಯಾಸ ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬ. ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬ ಎಂದರೆ ತಪ್ಪಾಗಲಾರದು. ಕುಮಾರವ್ಯಾಸನ ಮೂಲ ಹೆಸರು ನಾರಣಪ್ಪ. "ಗದುಗಿನ ನಾರಣಪ್ಪ" ಎಂದು ಸಾಮಾನ್ಯವಾಗಿ ಕುಮಾರವ್ಯಾಸನನ್ನು ಗುರುತಿಸಲಾಗುತ್ತದೆ. ಈತನ ಕಾವ್ಯ ನಾಮ ಕುಮಾರವ್ಯಾಸ. ವ್ಯಾಸ ಮಹಾಕವಿಯ ಸಂಸ್ಕೃತ ಮಹಾಭಾರತದ ಅತ್ಯದ್ಭುತ ಕನ್ನಡ ರೂಪವನ್ನು ರಚಿಸಿದ್ದರಿಂದ ಈ ಹೆಸರು ಕುಮಾರವ್ಯಾಸನಿಗೆ ಅನ್ವರ್ಥವಾಗಿದೆ.


ಕುಮಾರವ್ಯಾಸ ಕನ್ನಡ ಸಾಹಿತ್ಯದ ಬೆಳವಣಿಗೆಯ ಮೇಲೆ ಬಹಳಷ್ಟು ಪ್ರಭಾವ ಬೀರಿದ್ದಾನೆ. ಕುಮಾರವ್ಯಾಸ ಭಾರತವನ್ನು ಇಂದಿಗೂ ಸಹ ಕರ್ನಾಟಕದಲ್ಲಿ ಓದಲಾಗುತ್ತದೆ, ವ್ಯಾಖ್ಯಾನ ಮಾಡಲಾಗುತ್ತದೆ. ಕುಮಾರವ್ಯಾಸ ಭಾರತವನ್ನು ಓದುವ ಒಂದು ವಿಶಿಷ್ಟ ಶೈಲಿಯಾದ ಗಮಕ ಕಲೆ ಸಾಕಷ್ಟು ಪ್ರಸಿದ್ಧವಾಗಿದೆ.

ಕುಮಾರವ್ಯಾಸನು, ಕನ್ನಡ ಸಾಹಿತ್ಯದ ಬಹಳ ಹಿರಿಯರಾದ ಕವಿಗಳ ಸಾಲಿಗೆ ಸೇರುತ್ತಾನೆ. ಪಂಪ ಮತ್ತು ಹೆಸರಾಂತ ವಚನಕಾರರು ಮಾತ್ರ ಅವನಿಗೆ ಸರಿಸಾಟಿಯಾದವರು. ಅವನು, ಪಂಡಿತರು ಮತ್ತು ಪಾಮರರು ಇಬ್ಬರ ಮನಸ್ಸುಗಳನ್ನೂ ಸೆಳೆಯಬಲ್ಲವನು. ಅಂತೆಯೇ ಅವನ ಕಾವ್ಯದಲ್ಲಿ ವಿರಹಿಗಳಿಂದ ಹಿಡಿದು ವಿದ್ಯಾಪರಿಣಿತರವರೆಗೆ, ಅರಸುಗಳಿಂದ ಹಿಡಿದು ಯೋಗೀಶ್ವರರವರೆಗೆ, ಪ್ರತಿಯೊಬ್ಬರಿಗೂ ಅವರಿಗೆ ಬೇಕಾದ ಸಂಗತಿಗಳು ಹೇರಳವಾಗಿ ಸಿಗುತ್ತವೆ. ತನಗಿಂತ ಹಿಂದಿನ ಪಂಪ, ರನ್ನ, ನಾಗಚಂದ್ರ ಮುಂತಾದ ಅನೇಕ ಹಿರಿಯ ಕವಿಗಳಂತೆಯೇ ಕುಮಾರವ್ಯಾಸನೂ ಕೂಡ, ಪ್ರತಿಯೊಬ್ಬ ಓದುಗನಿಗೂ ಕೇಳುಗನಿಗೂ ಸುಪರಿಚಿತವಾದ ಕಾವ್ಯವನ್ನು ಆರಿಸಿಕೊಂಡು ಅದನ್ನು ತನ್ನ ಜೀವನದರ್ಶನದ ಹೊರಹೊಮ್ಮುವಿಕೆಯಾಗಿ ಬದಲಾಯಿಸುತ್ತಾನೆ. ಯಾಂತ್ರಿಕವಾದ 'ಮಕ್ಕಿ ಕಾ ಮಕ್ಕಿ' ಅನುವಾದದ ಬಗ್ಗೆ ಅವನು ಒಂದಿನಿತೂ ಆಸಕ್ತನಲ್ಲ. ಕಾವ್ಯದ ಕೇಂದ್ರವಸ್ತುವನ್ನು, ಪರಾಕ್ರಮದಿಂದ ಭಕ್ತಿಯ ಕಡೆಗೆ ತಿರುಗಿಸುವ ಕೆಲಸದಲ್ಲಿ ಅವನು ಯಶಸ್ವಿಯಾಗುತ್ತಾನೆ. ಈ ಕಾವ್ಯದೊಳಗೆ, ಪ್ರತಿಯೊಂದು ಕ್ಷಣದಲ್ಲಿಯೂ ಕೃಷ್ಣನ ವ್ಯಕ್ತಿತ್ವವು ಆವರಿಸಿಕೊಂಡಿದೆ. ತನ್ನ ಸುತ್ತಲಿನ, ಇಂದ್ರಿಯಾನುಭವಗಳಿಂದ ಕೂಡಿದ ಜಗತ್ತು, ಕುಮಾರವ್ಯಾಸನಿಗೆ ಚೆನ್ನಾಗಿ ಪರಿಚಯವಾಗಿದೆ. ಈ ತಿಳಿವಳಿಕೆಯು ಕವಿಯ ನಿರೂಪಣೆಗೆ ಶಕ್ತಿಯನ್ನು ಕೊಟ್ಟಿದೆ. ಪುರಾತನವಾದ ಕಥೆಯನ್ನು ಸ್ಥಳೀಯವಾದ ದೇಶ-ಕಾಲಗಳಲ್ಲಿ ಕೂಡಿಸುವ ಕೆಲಸವು ಈ ಕವಿಗೆ ಸಾಧ್ಯವಾಗಿದೆ.

  ಈ ಕವಿಯ ಜೀವನ ವಿವರಗಳ ಬಗ್ಗೆ ನಮಗೆ ತಿಳಿದಿರುವುದು ಬಹಳ ಕಡಿಮೆ. ತಿಳಿದಿರುವ ಅಷ್ಟಿಷ್ಟು ಸಂಗತಿಗಳು ಕೂಡ ವಸ್ತುಸ್ಥಿತಿ ಮತ್ತು ಕಟ್ಟುಕಥೆಗಳ ಮಿಶ್ರಣವಾಗಿದೆ. ಆದರೂ ಅವನ ವಿಜಯನಗರ ಸಾಮ್ರಾಜ್ಯದ ಏಳು ಬೀಳುಗಳನ್ನು ನೋಡಿದವನೆಂಬ ಸಂಗತಿಯು ಸ್ಪಷ್ಟವಾಗಿದೆ. ಹಾಗೆಯೇ ಅವನು ತನ್ನ ತವರೂರಾದ ಗದುಗಿನ ವೀರನಾರಾಯಣಸ್ವಾಮಿಯನ್ನು ತನ್ನ ಇಷ್ಟದೇವತೆಯಾಗಿ ಹೊಂದಿದ್ದನು. ಅವನ ಕಾವ್ಯದೊಳಗೆ ಸಿಗುವ ಆಂತರಿಕ ಪುರಾವೆಗಳನ್ನು ನೋಡಿ ಹೇಳುವುದಾದರೆ, ಅವನಿಗೆ ಸಂಸ್ಕೃತ ಮತ್ತು ಮರಾಠಿ ಭಾಷೆಗಳ ನಿಕಟ ಪರಿಚಯ ಇತ್ತು. ಅವನು ಯಾರದೇ ಆಸ್ಥಾನದ ಕವಿ ಆಗಿರಲಿಲ್ಲ. ರಾಜಾಶ್ರಯಕ್ಕಾಗಿ ಹಂಬಲಿಸಲಿಲ್ಲ. ಬಹುಪಾಲು ಪ್ರಾಚೀನ ಕವಿಗಳಲ್ಲಿ ಕಾಣಿಸದ ಗ್ರಾಮೀಣತೆಯ ಅಂಶವು, ಕುಮಾರವ್ಯಾಸನಲ್ಲಿ ಎದ್ದು ಕಾಣುತ್ತದೆ. ಅವನು ಕನ್ನಡ ಕಾವ್ಯ ಪರಂಪರೆಯ ಆಳವಾದ ಪರಿಚಯವನ್ನು ಪಡೆದಿರುವುದಕ್ಕೆ ಅವನ ಕಾವ್ಯವೇ ಸಾಕ್ಷಿ. ಆದರೂ ಅವನು ಹೊಸ ಹಾದಿಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದನು. ಅವನು ಮೂಲ ಕಥೆಗೆ ಅಂಟಿಕೊಳ್ಳುವುದು ಬಹಳ ಸ್ಥೂಲವಾದ ಚೌಕಟ್ಟಿನಲ್ಲಿ ಮಾತ್ರ. ಉಳಿದಂತೆ ಅವನ ಕಾವ್ಯದ ಶರೀರವು ಅವನದೇ ಆದ ಲೋಕದರ್ಶನ ಮತ್ತು ಜೀವನದರ್ಶನಗಳಿಗೆ ಕನ್ನಡಿಯಾಗುತ್ತದೆ. ಅವನು ಸೃಷ್ಟಿಸುವ ಪಾತ್ರಗಳು ಸದಾ ಬೆಳೆಯುತ್ತಿರುತ್ತವೆ, ಬದಲಾಗುತ್ತಿರುತ್ತವೆ. ಕವಿಯು ಅವುಗಳನ್ನು ಸಿದ್ಧವಸ್ತುಗಳೆಂದು ಭಾವಿಸುವುದಿಲ್ಲ. ಈ ಕವಿಗೆ ಇರುವುದಕ್ಕೂ ಆಗುವುದಕ್ಕೂ ಇರುವ ಮಹತ್ವದ ವ್ಯತ್ಯಾಸವು ಗೊತ್ತಿದೆ. ಸರ್ವಶಕ್ತನೆಂದು ಚಿತ್ರಿತನಾಗಿರುವ ಕೃಷ್ಣನೂ ಘಟನೆಗಳು ನಡೆಯುವ ಸಹಜ ಗತಿಗೆ ಅಡ್ಡಿ ಬರುವುದಿಲ್ಲ. ಆದ್ದರಿಂದಲೇ ಇಲ್ಲಿನ ಅನೇಕ ಪಾತ್ರಗಳಿಗೆ ಕಾರ್ಯಗಳ ಪರಿಣಾಮವು ಗೊತ್ತಿದ್ದರೂ, ಅವರು ಹಿಂಜರಿಯದೆ, ತಮ್ಮ ಭಾವನೆಗಳು ತೋರಿಸಿದ ಹಾದಿಯಲ್ಲಿ ಚಲಿಸುತ್ತಾರೆ. ಈ ಧೋರಣೆಗೆ ಕರ್ಣ ಮತ್ತು ದುರ್ಯೋಧನರು ಅತ್ಯುತ್ತಮ ಉದಾಹರಣೆಗಳು. ಈ ಎಲ್ಲ ಪಾತ್ರಗಳಿಗೂ ತೀವ್ರವಾದ ಮಾನುಷಿಕ ಭಾವನೆಗಳಿವೆ ಮತ್ತು ಅವುಗಳನ್ನು ಹೊರಹಾಕಲು ಅವರು ಹಿಂಜರಿಯುವುದಿಲ್ಲ.

ಕನ್ನಡ-ಮರಾಠಿ ದ್ವಿಭಾಷಿಕ ಪ್ರದೇಶದಲ್ಲಿ ಬದುಕಿದ್ದ ಕುಮಾರವ್ಯಾಸನು, ಕನ್ನಡ ಭಾಷೆಯ ನಾಡಿಮಿಡಿತವನ್ನು ಬಲ್ಲವನು. ಅವನು ಅದನ್ನು ತನ್ನ ಅಗತ್ಯಕ್ಕೆ ತಕ್ಕಂತೆ ಮಣಿಸಿಕೊಂಡಿದ್ದಾನೆ. ಅವನು ಆರಿಸಿಕೊಂಡಿರುವ ಛಂದೋರೂಪವಾದ ಭಾಮಿನೀ ಷಟ್ಪದಿಯು, ಕನ್ನಡದ ಅನಂತ ಸಾಧ್ಯತೆಗಳನ್ನು ತೋರಿಸಿಕೊಡಲು ಬಳಸುವ ವಾಹಕವಾಗಿ ಇಲ್ಲಿ ಬಳಕೆಯಾಗಿದೆ. ಅವನು ಭಾಷೆಯ ಭಾವಗೀತಾತ್ಮಕ, ವರ್ಣನಾತ್ಮಕ ಮತ್ತು ನಾಟಕೀಯ ಬಗೆಗಳನ್ನು ಸಮಾನ ಸಾಮರ್ಥ್ಯದಿಂದ ಬಳಸುತ್ತಾನೆ. ಹಾಗೆಯೇ ತಾನು ಬಳಸುವ ಅರ್ಥಾಲಂಕಾರಗಳಿಗಾಗಿ, ಕ್ಲೀಷೆಯಾಗಿರುವ ಕವಿಸಮಯಗಳನ್ನು ಬಳಸದೆ, ಆಡುಮಾತಿನ ಬೊಕ್ಕಸವನ್ನು ಸೂರೆ ಮಾಡುತ್ತಾನೆ.

ಈ ಕವಿಯ ಲೋಕದರ್ಶನವು ಸಮಕಾಲೀನ ಸಮಾಜದಿಂದಲೂ ರೂಪಿತವಾಗಿದೆ. ತನಗೆ ಸಮೀಪದಲ್ಲಿಯೇ ಪ್ರಚುರವಾಗಿದ್ದ ವೀರಶೈವ ಧರ್ಮ ಮತ್ತು ವಚನ ಸಾಹಿತ್ಯಗಳು ಅವನ ಮೇಲೆ ತೀವ್ರ ಪ್ರಭಾವ ಬೀರಿದಂತೆ ತೋರುವುದಿಲ್ಲ. ಆದರೂ ಅವನಿಗೆ ಅವುಗಳ ಪರಿಚಯ ಇದ್ದಿರಲೇ ಬೇಕು. ಕುಮಾರವ್ಯಾಸನಂತಹ ಕವಿಗಳು ಶಾಶ್ವತ ಮತ್ತು ತಾತ್ಕಾಲಿಕಗಳನ್ನು ಒಂದುಗೂಡಿಸಿ, ಕಾವ್ಯದ ಒಡಲೊಳಗೆ ಕಟ್ಟಿಕೊಡುವ ಕೆಲಸದಲ್ಲಿ ನಿರತರಾಗಿರುತ್ತಾರೆ.

‘ಐರಾವತ’ವು ಎಂಟು ಸಂಧಿಗಳಲ್ಲಿ, 410 ಪದ್ಯಗಳನ್ನು ಹೊಂದಿರುವ ಚಿಕ್ಕ ಕಾವ್ಯ. ಇದರಲ್ಲಿ ಕುಂತಿಯು ಮಾಡುವ ಒಂದು ವ್ರತಕ್ಕಾಗಿ, ಅರ್ಜುನನು ಇಂದ್ರನ ಐರಾವತವನ್ನೇ ಭೂಮಿಗೆ ಬರಮಾಡುವ ಕಥೆಯಿದೆ.

ಕುಮಾರವ್ಯಾಸನು ಕನ್ನಡದ ಮಹಾಕವಿಗಳಲ್ಲಿ ಒಬ್ಬನೆನ್ನುವುದು ಸರ್ವಸಮ್ಮತವಾದ ಸಂಗತಿಯಾಗಿದೆ. 


Krupe: http://kn.wikipedia.org

No comments:

Post a Comment