ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Wednesday, March 30, 2011

ಮನ ಕಲಕುವ “ಬ್ರಹ್ಮಪುರಿಯ ಭಿಕ್ಷುಕ’!

ಮನ ಕಲಕುವ “ಬ್ರಹ್ಮಪುರಿಯ ಭಿಕ್ಷುಕ’!

ಸತ್ತೆನೆಂದೆನಬೇಡ, ಸೋತೆನೆಂದೆನಬೇಡ

ಬತ್ತಿತೆನ್ನೊಳು ಸತ್ವದೂಟೆ ಎನಬೇಡ

ಮೃತ್ಯುವೆನ್ನುವುದೊಂದು ತೆರೆ ಇಳಿತ, ತೆರೆಯೇರು

ಮತ್ತೆ ತೋರ್ಪುದು ನಾಳೆ ಮಂಕುತಿಮ್ಮ…

ಮತ್ತೆ ಮತ್ತೆ ನೆನಪಾಗುವ, ನೆನಪಾದಾಗಲೆಲ್ಲ ಆಳವಾಗಿ ಕಾಡುವ ಈ ಮೇಲಿನ ಸಾಲುಗಳನ್ನು ಬರೆದವರು ಯಾರು ಎಂದು ಬಿಡಿಸಿ ಹೇಳಬೇಕಾಗಿಲ್ಲ.

ಒಮ್ಮೆ ಡಿವಿಜಿಯವರ ಮನೆಗೊಬ್ಬ ಜಪಾನಿ ಯುವಕ ಬಂದಿದ್ದ. ಡಿವಿಜಿ ಅವನಿಗೆ ಕಾಫಿ ಕೊಟ್ಟರು. ಅದನ್ನು ಹೀರಿದ ಆ ಯುವಕ The coffee is good ಎಂದ. ಸ್ವಲ್ಪ ಕಾಲ ಮಾತುಕತೆ ನಡೆಸಿ ಹೊರಟು ನಿಂತ ಆ ಯುವಕನನ್ನು ಡಿವಿಜಿ “god bless you !’ ಎಂದು ಹರಸಿದರು. ಆದರೆ ಒಂದು ಕ್ಷಣ ಹಾಗೆಯೇ ನಿಂತ ಆ ಯುವಕ “ನಿಮಗೆ ದೇವರಲ್ಲಿ ಹೇಗೆ ನಂಬಿಕೆ ಸಾಧ್ಯ? ನೀವು ಅವನನ್ನು ಕಂಡಿದ್ದೀರ?’ ಎಂದು ಪ್ರಶ್ನಿಸಿದ. “The coffee is good ‘ ಎಂದಿರಲ್ಲ, ಅದರಲ್ಲಿರುವ goodness, ನೀವು ಸಾವಿರಾರು ಮೈಲು ಆಚೆ ಇರುವವರು ಇದುವರೆಗೆ ನನ್ನನ್ನು ಕಾಣದಿದ್ದವರು ಕಾಣಬೇಕೆಂದು ವಿಶ್ವಾಸದಿಂದ ಬಂದಿರಲ್ಲ; ಆ goodness, ಈ ಎಲ್ಲ, goodness, ದೇವರು’ ಎಂದರು ಡಿವಿಜಿ. ಆ ಮಾತನ್ನು ಕೇಳಿ ಮತ್ತೆ ಒಳಕ್ಕೆ ಬಂದ ಯುವಕ, ಒಂದು ಗಂಟೆ ಕುಳಿತು ತನ್ನ ತೊಡಕು- ತಾಕಲಾಟಗಳನ್ನು ಡಿವಿಜಿಯವರಲ್ಲಿ ಹೇಳಿಕೊಂಡು, ಸಮಾಧಾನವನ್ನು ಪಡೆದು ಹೊರಟ.

ಈ ದೇಶದ ಅಗ್ರಮಾನ್ಯ ಪತ್ರಕರ್ತರಲ್ಲಿ ಒಬ್ಬರೆನಿಸಿಕೊಂಡಿದ್ದ ಡಿವಿಜಿಯವರ ಬದುಕಿನಲ್ಲಿ ಸಾಕಷ್ಟು ಏರುಪೇರುಗಳನ್ನು ಕಾಣಬಹುದು. ಬಡತನ ಎಂಬುದು ಅವರ ಕುಟುಂಬದ ಸದಸ್ಯನಂತಿತ್ತು!

ಒಮ್ಮೆ ವಿಶ್ವೇಶ್ವರಯ್ಯನವರು ಡಿವಿಜಿ ಅವರೊಡನೆ ಮಾತನಾಡುತ್ತಾ “ನಾನು ನಿನ್ನ ಮನೆಗೊಂದು ಭೇಟಿ ನೀಡಬೇಕು’ ಎಂದರು. ಕೂಡಲೇ ಎದ್ದು ವಂದಿಸಿದ ಡಿವಿಜಿ “ಕ್ಷಮಿಸಬೇಕು, ತಾವು ನನ್ನ ಮನೆಗೆ ಬರಬಾರದು’ ಎಂದು ವಿನಂತಿಸಿದರು. ವಿಶ್ವೇಶ್ವರಯ್ಯನವರಿಗೆ ಅಚ್ಚರಿ, ಕೌತುಕ. ತಮ್ಮನ್ನು ಮನೆಗೆ ಬರಬೇಡಿರೆಂದು ಹೇಳಿದವರು ಯಾರೂ ಇಲ್ಲ. “ಇದೇನಿದು! ಯಾರಾದರೂ ಬರುತ್ತೇನೆನ್ನುವ ಗೆಳೆಯರನ್ನು ನೇರವಾಗಿಯೇ ತಡೆಯುವುದುಂಟೇ? ಎಂದು ತತ್್ಕ್ಷಣ ಪ್ರಶ್ನಿಸಿದ್ದರು. ಡಿವಿಜಿ ಇದೀಗ ವಿವರಿಸಿದರು “ದಿಟವೇ, ತಾವು ಕಾಲಿಟ್ಟ ಕಡೆ ಶುಭ, ಸಂಪದ, ಸೌಖ್ಯಗಳು ಬೆಳಗುತ್ತವೆ. ಆದರೆ ನನ್ನ ಕಾರಣ ಬೇರೆಯಿದೆ. ತಾವು ನನ್ನ ಮನೆಗೆ ಬಂದರೆ ತಮಗೆ ಮುರುಕಲು ಕುರ್ಚಿ-ಹರಕಲು ಚಾಪೆಗಳಲ್ಲದೆ ಬೇರೆ ಇಲ್ಲ. ನನ್ನ ಚಿಂದಿ ಬದುಕು ನಿಮಗೆ ದುಃಖ ತರುತ್ತದೆ. ನನ್ನನ್ನು ಒಳ್ಳೆಯ ಸಂಪಾದನೆಯ ತಾಣಗಳಿಗೆ ಸೇರಿಸಬೇಕೆಂದು ತಾವು ಹಿಂದೆ ಮಾಡಿದ ಪ್ರಯತ್ನಗಳೂ ನನ್ನ ಮೂರ್ಖತನವು ಅವುಗಳನ್ನೆಲ್ಲ ಒಲ್ಲೆನೆಂದ ಪರಿಯೂ ತಮಗೆ ನೆನಪಾಗಿ ಬೇಸರವಾಗುತ್ತದೆ. ಅದಕ್ಕೆಲ್ಲ ಅವಕಾಶವಾಗಬಾರದು. ಹೀಗಾಗಿ ತಾವಿದ್ದಲ್ಲಿಗೆ ನಾನು ಬಂದು ತಮ್ಮ ಯಾವ ಆದೇಶವನ್ನೂ ನಡೆಸುತ್ತೇನೆ; ಮನ್ನಿಸಬೇಕು…’ “ಹೌದು, ಹೌದು. ನೀನು ಮೂರ್ಖ, obstinate‘ ಎಂದು ನಿರುಪಾಯಕರಾದ ಮೆಚ್ಚುಗೆಯ ಪೆಚ್ಚುನಗೆಯಿಂದ ವಿಶ್ವೇಶ್ವರಯ್ಯನವರು ಮಾತು ಮುಗಿಸಿದರು.

ನಮಗೆಲ್ಲರಿಗೂ ತಿಳಿದಂತೆ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯನವರು ಪ್ರಾಮಾಣಿಕತೆ, ಪರಿಶುದ್ಧತೆ ಹಾಗೂ ನಿಸ್ವಾರ್ಥಗಳ ಪರಮಾದರ್ಶ. ಅವರು ಮೈಸೂರು ಸಂಸ್ಥಾನದ ದಿವಾನರಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ತಮ್ಮ ಬಂಧುಗಳೆಲ್ಲರನ್ನೂ ಮನೆಯ ಹಜಾರದಲ್ಲಿ ಸೇರಿಸಿ ತಾಯಿ ವೆಂಕಜ್ಜಮ್ಮನವರನ್ನು “ನೀನು ಇವರ್ಯಾರ ಪರವಾಗಿ ಕೂಡ ಶಿಫಾರಸು ಮಾಡಲು ನನ್ನ ಬಳಿ ಬರಬಾರದು’ ಎಂದು ಮಾತು ತೆಗೆದುಕೊಂಡೇ ಮುಂದಿನ ಕೆಲಸಕ್ಕೆ ಕೈ ಹಾಕಿದ ಮಹನೀಯರು. ಇಂಥ ವಿಶ್ವೇಶ್ವರಯ್ಯನವರಿಗೂ ಸವಾಲಾಗುವಂಥ ನಿಸ್ಪೃಹತೆ ಡಿವಿಜಿಯವರದು.

ಲಾಹೋರಿನ “ಟ್ರಿಬ್ಯೂನ್’ ಎಂಬ ರಾಷ್ಟ್ರಮಟ್ಟದ ಪ್ರತಿಷ್ಠಿತ ಆಂಗ್ಲ ದಿನಪತ್ರಿಕೆಯ ಸಂಪಾದಕರಾಗಲು ಅರ್ಹ ವ್ಯಕ್ತಿಗಳನ್ನು ಸೂಚಿಸಬೇಕಾಗಿ ಅದರ ಮಾಲೀಕರು ವಿಶ್ವೇಶ್ವರಯ್ಯನವರನ್ನು ಕೇಳಿದರು. ಇವರಿಗಾಗ ಮೊದಲು ಹೊಳೆದ ಹೆಸರು ಡಿ.ವಿ.ಜಿ. ಈ ಸೂಚನೆಯನ್ನು ಟ್ರಿಬ್ಯೂನ್ ಪತ್ರಿಕೆಯ ವ್ಯವಸ್ಥಾಪಕರೂ ಬಹುವಾಗಿ ಸಂತೋಷಿಸಿ ಒಪ್ಪಿದರು. ದೊಡ್ಡ ಸ್ಥಾನ, ಹೆಸರು, ಹಣ, ಸಂಪರ್ಕಗಳೆಲ್ಲ ಸಿದ್ಧಿಸುವ ಆ ಉದ್ಯೋಗವು ಅಂದು ಯಾವುದೇ ಪತ್ರಕರ್ತನಿಗೆ ಪ್ರಲೋಭನೀಯವಾಗಿತ್ತು. ಡಿವಿಜಿಯವರ ಆರ್ಥಿಕ ಪರಿಸ್ಥಿತಿಯಂತೂ ಎಂದಿನಂತೆ ತೀರಾ ಅತಂತ್ರವಾಗಿಯೇ ಇತ್ತು. ಈ ಕಾರಣದಿಂದಲಾದರೂ ಅವರು ಒಪ್ಪಿಯಾರೇ ಎಂಬ ಕುಡಿಯಾಶೆ ವಿಶ್ವೇಶ್ವರಯ್ಯನವರದು. ಆದರೆ ಡಿವಿಜಿ ಖಂಡ ತುಂಡವಾಗಿ ಈ ಅವಕಾಶವನ್ನು ನಿರಾಕರಿಸಿದರು.

‘ನಾನು ಹೇಗೋ ಹೊಟ್ಟೆ ಹೊರೆದುಕೊಳ್ಳುತ್ತೇನೆ. ಬೀದಿಯಲ್ಲಿ ಬಿದ್ದು ಒದ್ದಾಡಿ ತೊಂಡುತೊಂಡಾಗಿ ಬೆಳೆದ ಈ ಜೀವಕ್ಕೆ ಅಂಥ ದೊಡ್ಡ ಪದವಿ- ಪ್ರತಿಷ್ಠೆಗಳು ಒಗ್ಗುವುದಿಲ್ಲ’ ಎಂದಿದ್ದರು. ಈ ಮೂಲಕವಾಗಿ ಅವರು ತಮ್ಮ ಸ್ವಾತಂತ್ರ್ಯ, ನಿರ್ಭೀತಿ, ನಿಸ್ಪೃಹತೆಗಳನ್ನೂ ಕಾಯ್ದುಕೊಂಡರು. ಹೀಗಾಗಿಯೇ ಮಹಾರಾಜರಿಗಾಗಲಿ, ದಿವಾನರುಗಳಾಗಲಿ ರೆಸಿಡೆಂಟ್- ವೈಸ್್ರಾಯ್ ವರ್ಗದವರಿಗಾಗಲಿ ತಮ್ಮ ನಿಷ್ಪಾಕ್ಷಿಕವೂ ನಿಷ್ಠುರವೂ ಆದ ಅಭಿಪ್ರಾಯಗಳನ್ನು ಕೊಡಲು ಸಾಧ್ಯವಾಯಿತು.

ಗಾಂಧೀಜಿಯವರ ಬಗೆಗೆ ಗುಂಡಪ್ಪನವರಿಗೆ ತುಂಬ ಗೌರವ. ಬೆಂಗಳೂರಿಗೆ ಅವರನ್ನು ಮೊತ್ತ ಮೊದಲು (1915ರಲ್ಲಿ) ಕರೆಯಿಸಿದವರೆ ಡಿ.ವಿ.ಜಿ. ಗಾಂಧಿಯವರು ಅಂದು ಅನಾವರಣ ಮಾಡಿದ ಗೋಪಾಲಕೃಷ್ಣ ಗೋಖಲೆಯವರ ಭಾವಚಿತ್ರವು ಇಂದೂ ಡಿವಿಜಿಯವರು ಕಟ್ಟಿದ ಸಂಸ್ಥೆಯ ಸಭಾಮಂಟಪದಲ್ಲಿ ದರ್ಶನೀಯ ಮಾತ್ರವಲ್ಲ, ಅನೇಕ ರಾಜನೈತಿಕ ವಿಚಾರಗಳಲ್ಲಿ, ಸಾಮಾಜಿಕ ಕಾರ್ಯಗಳಲ್ಲಿ ಗಾಂಧಿಯವರೊಡನೆ ಡಿವಿಜಿ ಪ್ರತ್ಯಕ್ಷ- ಪರೋಕ್ಷ ರೀತಿಗಳಿಂದ ತೊಡಗಿಕೊಂಡಿದ್ದರು. ಅವರ ಪ್ರಥಮ ಕವಿತಾ ಸಂಗ್ರಹ ವಸಂತ ಕುಸುಮಾಂಜಲಿಯಲ್ಲಿಯೇ ಗಾಂಧಿಯವರ ಬಗೆಗೊಂದು ಸೀಸ ಪದ್ಯವುಂಟು. ಅಲ್ಲದೇ ಗಾಂಧೀಜಿ ತೀರಿಕೊಂಡಾಗ “ಗಾಂಧಿಜ್ಞಾಪಕ ಪದ ಸಂಗ್ರಹ’ವೆಂಬ ಮತ್ತೊಂದು ಕಂದಪದ್ಯಗಳ ಕವಿತೆಯನ್ನು ಪ್ರಕಟಿಸಿದ್ದರು. ಅಷ್ಟೇಕೆ, ಗಾಂಧಿಯವರ ಐತಿಹಾಸಿಕವಾದ ಇಪ್ಪತ್ತೊಂದು ದಿನಗಳ ದೀರ್ಘೋಪವಾಸ ಸತ್ಯಾಗ್ರಹವು ಮುಗಿದು ಅವರು ಪ್ರಾಣಾಪಾಯವಿಲ್ಲದೆ ಹೊರ ಬಂದಾಗ “ಧನ್ಯವಾದ ಸಮರ್ಪಣೆ’ ಎಂಬ ಕವಿತೆಯನ್ನು ಡಿವಿಜಿ ಬರೆದಿದ್ದಾರೆ. ಇದು ಅವರ ಉಪವಾಸ ಮುಗಿದಂದೇ ರಚಿತವಾಗಿ, ಮುದ್ರಿತವೂ ಆಗಿತ್ತು. ಟ್ಟಿಡಿ ಜ್ಟ್ಠಿ ಠ್ಡಛಿಟ್ಝ್ಛಛಡ್ಝ್ಟಿಟಿ (ಬಹಿರಂಗ ಪ್ರಕಟಣೆಯಲ್ಲವೆಂಬ) ಒಕ್ಕಣೆ ಕೂಡ ಆ ಕರಪತ್ರದ ಮೇಲೆ ಅಚ್ಚಾಗಿದೆ. “ನಮ್ಮುಸಿರ ಹೂವು, ನಮ್ಮ ಬಾಳ್ ಅವನು, ನಮ್ಮೊಬ್ಬ ಗುರು, ನರಕುಲದ ಶಿರ, ದೈವ ಸಂಪನ್ಮಾರ್ಗದರ್ಶಕಂ ಗಾಂಧಿಯಲ್ತೇ’ ಎಂದು ಅವರನ್ನೆಷ್ಟು ಬಗೆಯಲ್ಲಿ ಗೌರವಿಸಿದ್ದರೂ ಅವರ ಕೆಲವು ನಿಲುವುಗಳ ಬಗೆಗೆ ಡಿವಿಜಿಯವರ ತೀವ್ರ ವಿರೋಧವಿದ್ದಿತು. ಇದನ್ನವರು ದಾಖಲಿಸಿಯೂ ಇದ್ದಾರೆ.

ಒಮ್ಮೆ ಆಕಾಶವಾಣಿಯವರು ಗುಂಡಪ್ಪನವರನ್ನು ಗಾಂಧಿಯವರ ಉಪವಾಸಗಳನ್ನು ಕುರಿತು ಮಾತನಾಡಬೇಕಾಗಿ ಕೋರಿದಾಗ ಇವರು ಬರೆದ ಪತ್ರ ತುಂಬ ಮಾರ್ಮಿಕವಾಗಿದೆ. “ನನಗೆ ಉಪವಾಸಗಳಲ್ಲಿ ನಂಬಿಕೆಯಿಲ್ಲ. ನಾನು ಚೆನ್ನಾಗಿ ತಿಂದುಂಡು ದಷ್ಟಪುಷ್ಟವಾಗಿ ಬೆಳೆದವನು. ಅಲ್ಲದೆ, ನಾನು ಗಾಂಧಿಯವರ ಅನುಯಾಯಿಯೂ ಅಲ್ಲ. ಹೀಗಾಗಿ, ತಮ್ಮ ಆಹ್ವಾನವನ್ನು ಸ್ವೀಕರಿಸಲಾಗುತ್ತಿಲ್ಲ’.

ಸುಪ್ರಸಿದ್ಧ ಅಂಕಣಕಾರರೂ ಕನ್ನಡದ ಕಟ್ಟಾಳು ಆಗಿದ್ದ ಹಾ.ಮಾ. ನಾಯಕರು ಅದೊಮ್ಮೆ ಡಿವಿಜಿಯವರನ್ನು ಕಾಣಲು ಹೋದರು. ಆಗಷ್ಟೇ ಹಸನಾದ ಬಿಸಿ ಬಿಸಿ ಜಿಲೇಬಿಯನ್ನು ತಾವೊಲಿದ ಅಂಗಡಿಯಿಂದ ತರಿಸಿ ಇನ್ನೇನು, ತಿನ್ನುವ ಹವಣಿನಲ್ಲಿ ಗುಂಡಪ್ಪನವರಿದ್ದರು. ನಾಯಕರನ್ನು ಕಂಡೊಡನೆಯೇ ಸ್ವಾಗತಿಸಿ ಅವರಿಗೂ ಜಿಲೇಬಿಗಳನ್ನು ಕೊಟ್ಟರು. ನಾಯಕರು ರಸ ತುಂಬಿದ ಆ ಬಂಗಾರದ ಬಣ್ಣದ ಗರಿಗರಿ ಸುರುಳಿಗಳನ್ನು ಸವಿಯುತ್ತಲೇ ಕೇಳಿದರು: “ಸರ್! ಈ ಪಾಟಿ ಜಿಡ್ಡು, ಸಕ್ಕರೆ ಎಲ್ಲ ತುಂಬಿದ ಈ ತಿಂಡಿಗಳು ನಿಮ್ಮ ಆರೋಗ್ಯಕ್ಕೆ ಅಪಥ್ಯ ಅಂತ ವೈದ್ಯರು ಹೇಳಿದ್ದಾರಲ್ಲಾ! ಮತ್ತಿದು ಹೇಗೆ?’ ಡಿವಿಜಿಯವರಾದರೋ ತಮ್ಮ ಬಲಗೈಯಿಂದ ಆ ಮಧುರ ಖಾದ್ಯವನ್ನು ಲೀಲಾಜಾಲವಾಗಿ ಕಬಳಿಸುತ್ತಲೇ ಸವಿನಗುವಿನೊಡನೆ ನುಡಿದರಂತೆ: ನೋಡಿ ನಾಯಕರೆ! ಇಲ್ಲೆಲ್ಲ ಅದ್ವೈತ ಮಾಡಬಾರದು. ಆರೋಗ್ಯ ಬೇರೆ, ಬಾಯಿ ರುಚಿಯೇ ಬೇರೆ! ಇದು ಅಪ್ಪಟ ದ್ವೈತ. ಅನಾರೋಗ್ಯ ಚಿಕಿತ್ಸೆಗಾಗಿ ಕಹಿಯಾದ ಔಷಧ, ನೋಯಿಸುವ ಚುಚ್ಚುಮದ್ದು ಮತ್ತು ತೀವ್ರವಾದ ಶಸ್ತ್ರಚಿಕಿತ್ಸೆಗಳ “ಕೋಟಾ’ (quota)ನೇ ಬೇರೆ. ಜಿಲೇಬಿ, ಬೋಂಡ, ಪಕೋಡ, ಹಲ್ವಗಳಂಥ ರುಚಿ ರುಚಿಯಾದ ಪರುಠವಣೆಗಳ ಕೋಟಾನೇ ಬೇರೆ. ಎರಡನ್ನೂ ಬೆರೆಸಬಾರದು. ಅದರ ಪಾಡಿಗೆ ಅದು, ಇದರ ಪಾಡಿಗೆ ಇದು…. ಒಂದು ಮತ್ತೊಂದನ್ನು ಪ್ರಶ್ನಿಸುವಂತಿಲ್ಲ. ನನ್ನ ದೇಹದಲ್ಲಿ ಇವೆರಡಕ್ಕೂ ಬೇರೆ ಬೇರೆ ಚಾನಲ್್ಗಳೇ ಇವೆ…’

ಹಾ.ಮಾ. ನಾಯಕರು ಹತಾಶೆಯ ನಗೆ ನಕ್ಕು ಸುಮ್ಮನಾಗಿರಬೇಕು.

ಡಿವಿಜಿಯವರಲ್ಲಿ ಅಪರಿಮಿತ ಹಾಸ್ಯಪ್ರಜ್ಞೆ ಇತ್ತು. ಕೆಲವೊಮ್ಮೆ ತಮ್ಮನ್ನೇ ವಸ್ತುವಾಗಿಸಿಕೊಳ್ಳುತ್ತಿದ್ದರು. ಬನ್ನೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಏನಾದರೂ ಸಂದೇಶ ಬರೆದುಕೊಡಿ ಎಂದು ಬಂದಾಗ,

ಗುಂಡಪ್ಪನಾದೊಡೇಂ ಕುಂಡೆಯದು ನೋಯದೇ?

ಎಂದು ಬರೆದುಕೊಟ್ಟು, ತಾಕತ್ತಿದ್ದರೆ ಓದಿ ಎಂದಿದ್ದರು. ಆ ಸಂದರ್ಭದಲ್ಲಿ ಡಿವಿಜಿಯವರಿಗೆ ಮೂಲವ್ಯಾಧಿಯಾಗಿತ್ತು!

ವಿಶ್ವೇಶ್ವರಯ್ಯನವರಿಗಾಗಲಿ ಮಿರ್ಜಾ ಇಸ್ಮಾಯಿಲರಿಗಾಗಲಿ ಪುಟ್ಟಣ ಚೆಟ್ಟಿಯವರೇ ಮುಂತಾದ ಇನ್ನಿತರ ಅನೇಕ ಸಾರ್ವಜನಿಕ ಮಹನೀಯರಿಗಾಗಲಿ ರಾಜ್ಯಶಾಸ್ತ್ರ-ಅರ್ಥಶಾಸ್ತ್ರ-ಪತ್ರಿಕೋದ್ಯಮ-ಸಮಾಜಶಾಸ್ತ್ರವೇ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಪರಿಪರಿಯಾದ ಸಲಹೆ- ಸೂಚನೆಗಳನ್ನೂ ನೆರವು-ನೇರ್ಪುಗಳನ್ನೂ ಮಾಡಿಕೊಡುತ್ತಿದ್ದವರು ಡಿವಿಜಿ. ಇಂಥ ಕೆಲಸಗಳಿಗೆ ತುಂಬ ಸಮಯ- ಶ್ರದ್ಧೆ- ಅಧ್ಯಯನಗಳೂ ಮೇಲ್ಮಟ್ಟದ ವಿವೇಚನೆ- ವಿಶ್ಲೇಷಣೆಗಳೂ ಬೇಕಾಗುತ್ತಿದ್ದವು. ಈ ಎಲ್ಲ ಪರಿಶ್ರಮ- ಸಹಕಾರಕ್ಕಾಗಿ ಇಂಥ ಹಿರಿಯರು ಗುಂಡಪ್ಪನವರಿಗೆ ಗೌರವ ಧನವೆಂದು ಎಷ್ಟನ್ನೂ ಕೊಡಲು ಸಿದ್ಧವಿರುತ್ತಿದ್ದರು. ಆದರೆ, ಡಿವಿಜಿ ಮಾತ್ರ ಇವಾವುದನ್ನೂ ಒಲ್ಲೆನೆಂದು ಖಂಡ- ತುಂಡವಾಗಿ ನಿರಾಕರಿಸುತ್ತಿದ್ದರು: “ನಿಮ್ಮಂಥ ಹಿರಿಯರಿಗೆ, ಈ ತೆರನಾದ ಸಾರ್ವಜನಿಕ ಹಿತಕಾರ್ಯಗಳಿಗೆ ನೆರವಾಗುವುದೇ ಒಂದು ಸೌಭಾಗ್ಯ. ಇದಕ್ಕೆ ಮಿಗಿಲಾಗಿ ಮತ್ತೇನೂ ಬೇಡ!’ ಸೇವೆಗೆ ಪ್ರತಿಫಲವಿಲ್ಲ- ಇದು ಡಿವಿಜಿಯವರದೇ ಧ್ಯೇಯ ವಾಕ್ಯ.

ಆದರೆ ವಿಶ್ವೇಶ್ವರಯ್ಯನವರಿಗಾಗಲಿ ಮಿರ್ಜಾ ಅವರಾಗಲಿ ಇದನ್ನೊಪ್ಪಲು ಸಿದ್ಧವಿರಲಿಲ್ಲ: “ಯಾವುದೇ ಯುಕ್ತ ರೀತಿಯ ನೆರವಿಗೆ ಸೂಕ್ತ ಗೌರವ ಸಲ್ಲಬೇಕು. ಇಲ್ಲವಾದಲ್ಲಿ ಮುಂದೆ ನಿಮ್ಮಿಂದ ನಾವು ಇನ್ನಾವ ರೀತಿಯ ನೆರವನ್ನೂ ಪಡೆಯುವುದು ಕಷ್ಟವಾಗುತ್ತದೆ. ಅಲ್ಲದೆ ಇಂಥ ತಜ್ಞಸಂಭಾವನೆ- ಗೌರವ ಧನಗಳೂ ವಿವಿಧ ಸಾರ್ವಜನಿಕ ಕಾರ್ಯಗಳ ಬಜೆಟ್ಟಿನಲ್ಲಿ ಸೇರಿರುತ್ತವೆ. ಆದುದರಿಂದ ನಮ್ಮ ಮನ್ನಣೆಯನ್ನು ಒಪ್ಪಿಸಿಕೊಳ್ಳಲೇಬೇಕು’ ಎಂದು ಆಗ್ರಹಿಸುತ್ತಿದ್ದರು.

ಇದರಿಂದ ಡಿವಿಜಿ ಮತ್ತೂ ಜಾಣ್ಮೆಯ ಹಾದಿಯೊಂದನ್ನು ತುಳಿದರು. ಅದೆಂದರೆ ಈ ಎಲ್ಲ ಹಿರಿಯರಿಂದ ಧನಾದೇಶ ಪತ್ರ ರೂಪದಲ್ಲಿ (ಚೆಕ್) ಸಂಭಾವನೆಯನ್ನೇನೋ ಸ್ವೀಕರಿಸುವುದು; ಆದರೆ ಯಾವೊಂದನ್ನೂ ನಗದಾಗಿ ಪರಿವರ್ತಿಸಿಕೊಳ್ಳದೆ ಹಾಗೆಯೇ ತಮ್ಮ ಪೆಟ್ಟಿಗೆಯಲ್ಲಿ ಶಾಶ್ವತವಾಗಿ ಉಳಿಸಿಕೊಳ್ಳುವುದು!

ಹೀಗೆ ದಶಕಗಳ ಕಾಲ ಈ “ಜಾಣತನ’ ಸಾಗಿತು; ಲಕ್ಷಗಟ್ಟಲೆ ಹಣ ನಗದಾಗಿಯೇ ಉಳಿಯಿತು; ಡಿವಿಜಿಯವರ ನಿಸ್ಪೃಹತೆ ಮಾತ್ರ ನಗುತ್ತಿತ್ತು. ಡಿವಿಜಿ ಕೇವಲ ಚೆಕ್ಕುಗಳನ್ನಷ್ಟೇ ಅಲ್ಲ ಯಾರ ಸ್ನೇಹವನ್ನೂ ಯಾವ ಅವಕಾಶವನ್ನೂ ಮತ್ತಾವುದೇ ಸ್ಥಾನ-ಮಾನ- ಪರಿಚಯಗಳನ್ನು ಎನ್್ಕ್ಯಾಷ್ ಮಾಡಿಕೊಳ್ಳಲಿಲ್ಲ.

ಇಂತಹ ನೂರಾರು ಘಟನೆ, ನಿದರ್ಶನಗಳನ್ನು ಡಿವಿಜಿಯವರ ಜೀವನದಲ್ಲಿ ಕಾಣಬಹುದು. ಒಂದೊಂದು ಘಟನೆಗಳು ಡಿವಿಜಿಯವರ ಪ್ರಾಮಾಣಿಕತೆ, ನಿಸ್ವಾರ್ಥತೆಯ ಧ್ಯೋತಕಗಳಾಗಿವೆ. ಅವಧಾನ ಕಲೆಯನ್ನು ನಾಡಿನ ಮೂಲೆ ಮೂಲೆಗೆ ಕೊಂಡೊಯ್ಯುತ್ತಿರುವ ಖ್ಯಾತ ಬಹುಭಾಷಾ ವಿದ್ವಾಂಸ ಶತಾವಧಾನಿ ಆರ್. ಗಣೇಶ್ ಅವರು ಈ ಘಟನೆ, ನಿದರ್ಶನಗಳನ್ನು “ಬ್ರಹ್ಮಪುರಿಯ ಭಿಕ್ಷುಕ’ ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಡಿವಿಜಿಯವರ ಜನ್ಮದಿನವಾದ ಮಾರ್ಚ್ 17ರ ಸಂದರ್ಭದಲ್ಲಿ ಬೆಂಗಳೂರಿನ ಗೋಖಲೆ ಇನ್್ಸ್ಟಿಟ್ಯೂಟ್್ನಲ್ಲಿ ಈ ಪುಸ್ತಕ ಬಿಡುಗಡೆಯಾಗಿದೆ.

ಈ ಕಾಲದಲ್ಲಿ ನ್ಯಾಯ ನೀತಿಗೆ, ಪ್ರಾಮಾಣಿಕತೆಗೆ, ಸಚ್ಚಾರಿತ್ರ್ಯಕ್ಕೆ ಯಾವ ಬೆಲೆಯೂ ಇಲ್ಲ ಎಂಬ ಸಿನಿಕತೆ ಆವರಿಸಿರುವ ಸಂದರ್ಭದಲ್ಲಿ ಡಿವಿಜಿ ಅವರಂಥವರನ್ನು ನೆನಪಿಸಿಕೊಂಡಾಗ ಮಾತ್ರ ನೈತಿಕತೆ ಎಂಬುದು ಮತ್ತೆ ಜಾಗೃತಗೊಳ್ಳಲು ಸಾಧ್ಯ. ಓದಿನ ಸವಿ ನಿಮ್ಮದಾಗಲಿ.

ಕೃಪೆ: http://pratapsimha.com/2011/03/27/gundappa/

No comments:

Post a Comment