ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Tuesday, March 22, 2011

ಅಕ್ಕಮಹಾದೇವಿ

ಅಕ್ಕಮಹಾದೇವಿಯವರನ್ನು ಶರಣ ಚಳುವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ,ಸ್ತ್ರಿವಾದಿ ಚಳವಳಿಯ ನಿಜವಾದ ಪ್ರತಿಪಾದಕಿಯಾಗಿ, ಅಕ್ಕರೆಯ ಅಕ್ಕನಾಗಿ, ಹೀಗೆ ಹಲವು ರೀತಿ ಗುರುತಿಸಬಹುದಾಗಿದೆ. ಕಿರಿಯ ವಯಸ್ಸಿನಲ್ಲಿ ಸಕಲ ಸುಖವನ್ನು ತ್ಯಜಿಸಿದ ಅಕ್ಕ, ಎದುರಿಸಿದ ಪರೀಕ್ಷೆಗಳು ಬಹಳಷ್ಟು. ಸಾಕ್ಷಾತ್ ಶಿವ ( ಮಲ್ಲಿಕಾರ್ಜುನ)ನನ್ನು ಪತಿ ಎಂದು ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ನಡೆದ ಅಕ್ಕ, ಹಲವಾರು ಭಕ್ತರಿಗೆ ಮಾದರಿಯಾಗಿದ್ದಾಳೆ.
 ಜೀವನ

ಶಿವಶರಣೆ ಅಕ್ಕಮಹಾದೇವಿಯವರು ಜನಿಸಿದ್ದು ಶಿವಮೊಗ್ಗ ಜಿಲ್ಲೆ, ಶಿಕಾರಿಪುರ-ಶಿರಾಳಕೊಪ್ಪದ ನಡುವೆ ಇರುವ ಉಡುತಡಿ ಅಥವಾ ಉಡಗಣಿ ಅಥವಾ ಉಡುಗಣಿ ಎಂದೇ ಪ್ರಸಿದ್ದವಾಗಿರುವ ಪುಟ್ಟ ಗ್ರಾಮದಲ್ಲಿ. ಇದು ಶಿಕಾರಿಪುರದಿಂದ ಸುಮಾರು 15 ಕಿ.ಮಿ. ಹಾಗೂ ಶಿರಾಳಕೊಪ್ಪದಿಂದ 4 ಕಿ.ಮಿ.ದೂರದಲ್ಲಿದೆ. ಇದೀಗ ಇದು ಪ್ರವಾಸಿ ತಾಣವಾಗಿಯೂ ಪ್ರಸಿದ್ದವಾಗಿದೆ. ಪರರ ಪಾಲಾಗಿದ್ದ ಇಲ್ಲಿರುವ ಕೌಶಿಕ ಮಹಾರಾಜರ ಕೋಟೆ ಹಾಗೂ ಅಕ್ಕನ ದೇವಸ್ಥಾನ ಇರುವ ಜಮೀನನ್ನು ಉಳಿಸಲು ಪ್ರಯತ್ನಿಸಿ, ಹೋರಾಟ ನಡೆಸಿ, ಯಶಸ್ವಿಯಾಗಿದ್ದು ಸಿರಿಗೆರೆಯ ಶ್ರೀಗಳಾಗಿದ್ದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರು ಹಾಗೂ ಹಿರೇಜಂಬೂರಿನ ಸ್ವಾತಂತ್ರ ಹೋರಾಟಗಾರ ದಿವಂಗತ ಶ್ರೀ ಶಿವನಗೌಡ ಪಾಟೀಲರು. ಇದನ್ನು ಇವರು ಉಳಿಸಿಕೊಟ್ಟ ನಂತರ ಸರಕಾರ ಇತ್ತ ಗಮನ ಹರಿಸಿ,ಅದರ ಅಭಿವೃದ್ದಿಗೆ ಮುಂದಾಗಿದೆ. ಇಂತಹ ಉಡುತಡಿಯಿಂದ ಎಲ್ಲವನ್ನೂ ತ್ಯಜಿಸಿ ಹೊರಟ ಅಕ್ಕಮಹಾದೇವಿಯವರು ಮುಂದೆಬಸವ ಕಲ್ಯಾಣದ ಅನುಭವ ಮಂಟಪದಲ್ಲಿ ಅಲ್ಲಮಪ್ರಭು, ಬಸವಣ್ಣ, ಚೆನ್ನಬಸವಣ್ಣ, ಸಿದ್ಧರಾಮೇಶ್ವರ ಮೊದಲಾದ ಶರಣರೊಡನೆ ಕಲ್ಯಾಣದ ಕ್ರಾಂತಿಯಲ್ಲಿ ತಮ್ಮನ್ನು ತೊಡಗಿಸಿದರಲ್ಲದೇ, ಚನ್ನಮಲ್ಲಿಕಾರ್ಜುನ ಎಂಬ ಅಂಕಿತದಲ್ಲಿ ವಚನ ಸಾಹಿತ್ಯಕ್ಕೆ (ಶರಣ ಸಾಹಿತ್ಯ) ತಮ್ಮದೇ ಆದ ಸಾಹಿತ್ಯಸೇವೆಯನ್ನು ಸಲ್ಲಿಸಿದ್ದಾರೆ.

ಅಕ್ಕನ ಅನುಭಾವಿಕ ಜೀವನ

ಅಕ್ಕಮಹಾದೇವಿ ಶರಣ ಚಳುವಳಿಯಲ್ಲಿ ,ಎತ್ತರದ ಚೇತನವಾಗಿ ಮೂಡಿ ಬಂದ ವ್ಯಕ್ತಿತ್ವ .ಅವರ ಇಡೀ ಜೀವನ ಕಥನ , ಐತಿಹ್ಯಗಳಿಂದ, ವಿಸ್ಮಯಗಳಿಂದ , ಪ್ರಭಾವಳಿಗಳಿಂದ ತುಂಬಿದ್ದರೂ ಸಹ, ಅವರ ಬಗ್ಗೆ ಅವರ ಸಮಕಾಲೀನ ವಚನಕಾರರೂ; ಅಕ್ಕನ ಕಾಲಕ್ಕೆ ತುಂಬಾ ಹತ್ತಿರದವನಾದ ಹರಿಹರ ಮಹಾಕವಿಯು ರಚಿಸಿರುವ 'ಮಹಾದೇವಿಯಕ್ಕಗಳ ರಗಳೆ'ಮತ್ತು ಸ್ವತಹ ಅಕ್ಕಮಹಾದೇವಿಯವರೇ ರಚಿಸುವ ವಚನಗಳೂ , ಅವರ ವ್ಯಕ್ತಿತ್ವವನ್ನು ಕಟ್ಟಿ ಕೊಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ .ಈ ಎಲ್ಲವನ್ನೂ ಗಮನಿಸಿದಾಗ ಅಕ್ಕಮಹಾದೇವಿಯವರ ಜೀವನ ಅಸಾಮಾನ್ಯವಾದ , ವೈಶಿಷ್ಟ್ಯತೆಯಿಂದ, ವೈಚಾರಿಕವಾದ, ಅನುಭಾವಪೂರ್ಣವಾದ , ನುಡಿ,ನಡೆಗಳೊಂದಾದ ಪರಿಯಲ್ಲಿರುವುದು ಕಂಡು ಬರುತ್ತದೆ .

ವಚನ ಚಳುವಳಿಯ ಸಮಯದಲ್ಲಿ , ಸಾಹಿತ್ಯದ ದೃಷ್ಟಿಯಿಂದ ಗಮನಿಸುವುದಾದರೆ ,ಅಲ್ಲಮ ಮತ್ತು ಅಕ್ಕ ,ಅಂದಿನ ಅತ್ಯಂತ ವಿಶಿಷ್ಟ ಸಂವೇದನೆಯ ವ್ಯಕ್ತಿತ್ವದವರಾಗಿ ಗಮನ ಸೆಳೆಯುತ್ತಾರೆ. ಅನುಭಾವಿಯೂ , ಕವಿಯೂ ಆಗಿದ್ದ ಅಕ್ಕಮಹಾದೇವಿಯವರ ವಚನಗಳು ,ಕನ್ನಡ ಸಾಹಿತ್ಯದ ಮೌಲಿಕ ಬರವಣಿಗೆಗಳಾಗಿವೆ .ವಚನಕಾರರಲ್ಲಿಯೇ ಅತ್ಯಂತ ಕಿರಿಯ ವಯಸ್ಸಿನ ಪ್ರತಿಭೆಯಾಗಿದ್ದರೂ ಸಹ , ವಿಶಿಷ್ಟ ಜೀವನಾನುಭವವನ್ನು ಹೊಂದಿದ ಕಾರಣದಿಂದ, ಅವರ ಬರಹಗಳು ಗಮನಾರ್ಹವಾಗಿವೆ . ಉದಾ: 'ಲೋಕದ ಚೇಷ್ಟೆಗೆ ರವಿ ಬೀಜವಾದಂತೆ, ಕರಣಂಗಳ ಚೇಷ್ಟೆಗೆ ಮನಸ್ಸು ಬೀಜ', 'ಬೆಟ್ಟದಾ ಮೇಲೊಂದು ಮನೆಯ ಮಾಡಿ , ಮೃಗಗಳಿಗೆ ಅಂಜಿದೊಡೆಂತಯ್ಯಾ' , 'ಹಸಿವಾದರೆ ಭಿಕ್ಷಾನ್ನಗಳುಂಟು, ತೃಷೆಯಾದರೆ ಕೆರೆ ಹಳ್ಳಗಳುಂಟು' ಮುಂತಾದ ವಚನಗಳು ಅವರ ಲೋಕಾನುಭವ , ಜ್ಝಾನ ಸಂಪನ್ನತೆ , ಅಭಿವ್ಯಕ್ತಿ ಸಾಮರ್ಥ್ಯಕ್ಕೆ ನಿದರ್ಶನಗಳಾಗಿವೆ .

ಶೂನ್ಯ ಸಂಪಾದನೆಕಾರರು 'ಮಹಾದೇವಿಯಕ್ಕಗಳ ಸಂಪಾದನೆ' ಎಂಬ ಒಂದು ಅಧ್ಯಾಯವನ್ನೇ ರಚಿಸಿ, ಅವರಿಗೆ ಗೌರವ ತೋರಿದ್ದಾರೆ .ಹರಿಹರ ಮಹಾಕವಿಯ ಮಹಾದೇವಿಯಕ್ಕಗಳ ರಗಳೆ, ಇಪ್ಪತ್ತನೆಯೆ ಶತಮಾನದ ನವೋದಯ ಕಾಲದ ಸಾಹಿತಿ ಎಚ್.ತಿಪ್ಪೇರುದ್ರಸ್ವಾಮಿಯವರ 'ಕದಳಿಯ ಕರ್ಪುರ' ಅಕ್ಕನವರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಸಮರ್ಥ ಬರಹಗಳು .

ಅಕ್ಕಮಹಾದೇವಿಯವರ ಜೀವನದಲ್ಲಿ ನಿರ್ಣಾಯಕ ಘಟನೆಗಳಲ್ಲಿ , ಪ್ರಮುಖವಾದವುಗಳು ಈ ಎರಡು , ಒಂದನೆಯದು: ಅಧಿಕಾರ,ಸಂಪತ್ತು, ವೈಭವ, ಆಡಂಬರ, ಭೋಗ ಜೀವನಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿ ,ಈ ಎಲ್ಲ ಬಂಧನಗಳಿಂದ ಬಿಡುಗಡೆ ಪಡೆದು ,ಸಾಮಾನ್ಯರಲ್ಲಿ ಸಾಮಾನ್ಯಳಂತೆ ಜನ ಜೀವನದಲ್ಲಿ ಬೆರೆತುದು; ಇದಕ್ಕಾಗಿ ಅರಸೊತ್ತಿಗೆಯನ್ನು ಎದುರು ಹಾಕಿಕೊಳ್ಳಲು ಹಿಂಜರಿಯದಿದ್ದುದು .ಎರಡನೆಯದು : ಶರಣ ಚಳುವಳಿಯಲ್ಲಿ ಭಾಗವಹಿಸಲು ನಿರ್ಣಯಿಸಿ , ಅನುಭವ ಮಂಟಪವನ್ನು ಪ್ರವೇಶ ಮಾಡಿದುದು , ಅಕ್ಕನವರ ಅನುಭವ ಮಂಟಪದ ಪ್ರವೇಶದ ಮೊದಲ ದಿನವನ್ನು ಸ್ಮರಿಸದ ಶರಣ ಸಾಹಿತ್ಯಕಾರನಿಲ್ಲ ,ಎನ್ನುವಷ್ಟು ಅಪೂರ್ವ ಸ್ವಾಗತ ಆಕೆಗೆ ಶರಣರಿಂದ ದೊರಕಿತು, ಅಲ್ಲಿ ಅಲ್ಲಮಪ್ರಭು ಮತ್ತು ಅಕ್ಕನವರ ನಡುವೆ ನಡೆಯಿತೆನ್ನಲಾದ ಸಂಭಾಷಣೆಯೆಂಬುದು ; ಅನುಭಾವದ ಉತ್ತುಂಗದ ಋಷಿ ವಾಣಿಯ ರೂಪದಲ್ಲಿ ವಚನಗಳಲ್ಲಿ ಸಂಗ್ರಹಿತವಾಗಿದೆ.
 ಲಿಂಗ್ಯಕ್ಯ

ಕೊನೆಗೆ ತನ್ನ ಇಷ್ಟದೈವ ಮಲ್ಲಿಕಾರ್ಜುನನಲ್ಲಿ ಶ್ರಿಶೈಲದ ಕದಳಿವನದಲ್ಲಿ ಐಕ್ಯರಾದರು ಅಕ್ಕಮಹಾದೇವಿ.

No comments:

Post a Comment