ಅಕ್ಕಮಹಾದೇವಿಯವರನ್ನು ಶರಣ ಚಳುವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ,ಸ್ತ್ರಿವಾದಿ ಚಳವಳಿಯ ನಿಜವಾದ ಪ್ರತಿಪಾದಕಿಯಾಗಿ, ಅಕ್ಕರೆಯ ಅಕ್ಕನಾಗಿ, ಹೀಗೆ ಹಲವು ರೀತಿ ಗುರುತಿಸಬಹುದಾಗಿದೆ. ಕಿರಿಯ ವಯಸ್ಸಿನಲ್ಲಿ ಸಕಲ ಸುಖವನ್ನು ತ್ಯಜಿಸಿದ ಅಕ್ಕ, ಎದುರಿಸಿದ ಪರೀಕ್ಷೆಗಳು ಬಹಳಷ್ಟು. ಸಾಕ್ಷಾತ್ ಶಿವ ( ಮಲ್ಲಿಕಾರ್ಜುನ)ನನ್ನು ಪತಿ ಎಂದು ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ನಡೆದ ಅಕ್ಕ, ಹಲವಾರು ಭಕ್ತರಿಗೆ ಮಾದರಿಯಾಗಿದ್ದಾಳೆ. ಜೀವನ ಶಿವಶರಣೆ ಅಕ್ಕಮಹಾದೇವಿಯವರು ಜನಿಸಿದ್ದು ಶಿವಮೊಗ್ಗ ಜಿಲ್ಲೆ, ಶಿಕಾರಿಪುರ-ಶಿರಾಳಕೊಪ್ಪದ ನಡುವೆ ಇರುವ ಉಡುತಡಿ ಅಥವಾ ಉಡಗಣಿ ಅಥವಾ ಉಡುಗಣಿ ಎಂದೇ ಪ್ರಸಿದ್ದವಾಗಿರುವ ಪುಟ್ಟ ಗ್ರಾಮದಲ್ಲಿ. ಇದು ಶಿಕಾರಿಪುರದಿಂದ ಸುಮಾರು 15 ಕಿ.ಮಿ. ಹಾಗೂ ಶಿರಾಳಕೊಪ್ಪದಿಂದ 4 ಕಿ.ಮಿ.ದೂರದಲ್ಲಿದೆ. ಇದೀಗ ಇದು ಪ್ರವಾಸಿ ತಾಣವಾಗಿಯೂ ಪ್ರಸಿದ್ದವಾಗಿದೆ. ಪರರ ಪಾಲಾಗಿದ್ದ ಇಲ್ಲಿರುವ ಕೌಶಿಕ ಮಹಾರಾಜರ ಕೋಟೆ ಹಾಗೂ ಅಕ್ಕನ ದೇವಸ್ಥಾನ ಇರುವ ಜಮೀನನ್ನು ಉಳಿಸಲು ಪ್ರಯತ್ನಿಸಿ, ಹೋರಾಟ ನಡೆಸಿ, ಯಶಸ್ವಿಯಾಗಿದ್ದು ಸಿರಿಗೆರೆಯ ಶ್ರೀಗಳಾಗಿದ್ದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರು ಹಾಗೂ ಹಿರೇಜಂಬೂರಿನ ಸ್ವಾತಂತ್ರ ಹೋರಾಟಗಾರ ದಿವಂಗತ ಶ್ರೀ ಶಿವನಗೌಡ ಪಾಟೀಲರು. ಇದನ್ನು ಇವರು ಉಳಿಸಿಕೊಟ್ಟ ನಂತರ ಸರಕಾರ ಇತ್ತ ಗಮನ ಹರಿಸಿ,ಅದರ ಅಭಿವೃದ್ದಿಗೆ ಮುಂದಾಗಿದೆ. ಇಂತಹ ಉಡುತಡ...