Friday, October 17, 2025

ತಪ್ಪುಗಳು

 ತಪ್ಪುಗಳು


----------

ಭಾಷೆಯೇ ಇಲ್ಲದ

ದೇವರನು

ಭಾಷೆಯಲಿ

ಬಂಧಿಸಿದೆ.

ಸೀಮಾತೀತನ

ತೀರ್ಥಕ್ಷೇತ್ರದಲಿ

ಸಂಧಿಸಿದೆ.

ಗುರುತಿಗಾಗಿ

ಇಟ್ಟುಕೊಂಡ

ಹೆಸರುಗಳಿಂದಲೇ

ಅವನನ್ನೂ

ಕರೆದುಕೊಂಡೆ.

ಇಷ್ಟವಾದ

ರೂಪದಲ್ಲೇ

ಪ್ರತಿಮೆಯನ್ನು

ಮಾಡಿಕೊಂಡೆ.

ಕಟ್ಟಕಡೆಗೆ

ಎಲ್ಲದರ

ಒಳಮರ್ಮದ

ಅರಿವಾದಾಗ

ನನ್ನನೇ ನಾ

ಜರಿದುಕೊಂಡೆ

ಕ್ಷಮಿಸು ಎಂದು

ಬೇಡಿಕೊಂಡೆ.

( ಶಂಕರಾಚಾರ್ಯರ ಶ್ಲೋಕದಿಂದ ಪ್ರೇರಿತ) 

        ...ಎಂ.ಎ.ಎಸ್  

ಎಂ ಎ  ಸಾದಿಕ್ ಉಲ್ಲಾ , ಶಿಕ್ಷಕರು , ಸ ಪ ಪೂ ಕಾ

ಯಳಗೋಡು,  ಚಿತ್ರದುರ್ಗ ತಾ & ಜಿ 

ರಿಟೈರ್ ಆದ ಮೇಲೆ ಹೇಗೆ ಟೈಮ್ ಪಾಸ್ ಮಾಡುತ್ತಿದ್ದೀರಿ......?"

 🥸 ರಿಟೈರ್ಡ್ ಆದ ವ್ಯಕ್ತಿಯನ್ನು ಸಹಜವಾಗಿ ಬಹಳ ಜನ ಕೇಳುತ್ತಾರೆ 👉 ರಿಟೈರ್ ಆದ ಮೇಲೆ ಹೇಗೆ ಟೈಮ್ ಪಾಸ್ ಮಾಡುತ್ತಿದ್ದೀರಿ......?",


🤠ಅದಕ್ಕೆ ನಾನು  ಕೊಟ್ಟ ಉತ್ತರ "ಟೈಮ್ ಪಾಸಾ"...? ಓಹ್, ನಿನ್ನೆಯದೆ ಒಂದು ಉದಾಹರಣೆ ಹೇಳುತ್ತೇನೆ ಕೇಳಿಸಿಕೊಳ್ಳಿರಿ ~~

ನಿನ್ನೆ ಜ್ಯುವೆಲ್ಲರೀ ಅಂಗಡಿಯೊಂದರಲ್ಲಿ ಕೇವಲ 10 ನಿಮಿಷ ಕಳೆದ ನಾನು ಮತ್ತು ನನ್ನ ಹೆಂಡತಿ ಹೊರಗಡೆ ಬಂದೆವು..!

ಕೈಯಲ್ಲಿ ದಂಡ ಕಟ್ಟುವ ಚಲನ್ ಬುಕ್ ನೊಂದಿಗೆ ಕಾರಿನ ಹತ್ತಿರ ಪೊಲೀಸ್ ಒಬ್ಬರು ನಮ್ಮನ್ನು ಕುರಿತು, ಬರ್ರಿ,..ಬರ್ರಿ...ನಿಮ್ಮಂಥವರಿಗೆ ಬುದ್ಧಿ ಹೇಳಿ ಹೇಳಿ ಸಾಕಾಗೇತಿ.....1000 ರೂಪಾಯಿ ದಂಡ ಕಟ್ರಿ ಅವಾಗ ಗೊತ್ತಾಕೇತಿ....

ಆವಾಗ ನಾನಂದೆ "ಈಗಷ್ಟೇ ಜಸ್ಟ್ ಹತ್ತೇ ನಿಮಿಷ ಒಳಗೆ ಹೋಗಿ ಹೊರಗ್ ಬಂದೇವಿ ಅಷ್ಟರಲ್ಲಿ ಸಾವಿರ ರೂಪಾಯಿ ಅಂದ್ರೆ ಹೆಂಗ,.... ಇದೊಂದ್ ಸಲ ದಯಮಾಡಿ ಬಿಟ್ಟುಬಿಡ್ರಿ"

ಆಗ ಪೊಲೀಸ್ ಎಲ್ಲರೂ ಹೇಳುದೂ ಹಿಂಗ ssss  ಯಾವಾಗ ಸಾವಿರ ರುಪಾಯ್ ದಂಡ ಕಟ್ಟತೀರಿ ಅವಾಗ ಗೊತ್ತಾಕೇತಿ

ಆಗ "ನಾನು ರಿಟೈರ್ಡ್ ಅದೇನಿ, ನನ್ನ ಬಿಳೇ ಕೂದಲಕ್ಕರ ಕಿಮ್ಮತ್ ಕೊಟ್ಟು ಬಿಟ್ ಬಿಡ್ರಿ ಅಂದೆ

ಪೊಲೀಸ್ ಮೊದಲು ಒಪ್ಪದಿದ್ರೂ ಮತ್ತೆ ನನಗೆ ಹೇಳಿದ.... ಲಕ್ಷಗಟ್ಟಲೆ ರೊಕ್ಕ ಕೊಟ್ಟು ಕಾರ್ ತಗೋತೀರಿ, ಜ್ಯುವೆಲ್ಲರೀ  ಖರೀದಿ ಮಾಡ್ತೀರಿ.. 1000 ರುಪಾಯ್ ಕಟ್ಟಾಕ  ರಿಪಿ- ರಿಪೀ ಮಾಡ್ತೀರಿ.... ನಿಮ್ಮ ವಯಸ್ಸಿಗೆ ಮರ್ಯಾದೆ ಕೊಡ್ತೀನಿ, 200 ರೂಪಾಯಿ ಕೊಟ್ಟು ಹೋಗ್ರಿ" ಅಂದ.

ನಾನು 200 ರುಪಾಯ್ ಕೊಟ್ರ ಅದಕ್ಕ ಪಾವತಿ ಕೊಡ್ತೀರಿಲ್ಲೋ ಅಂದೆ.

ಅದನ್ನು ತಿರಸ್ಕರಿಸಿದ ಅವನು ಪಾವತಿ ಬೇಕು ಅಂದರ ಕಾಯದೇಸಿರ್ 1000 ರೂಪಾಯಿ ಕೊಡರಿ ಅಂದ.

ನಾನು 200 ರುಪಾಯ್ ನೇ ಕೊಡೋದು ಅದಕ್ಕ ನೀವು ಕಾಯದೇಸೀರ್ ಪಾವತಿ ಕೊಡ್ಬೇಕು ಅಂತ ದೃಢವಾಗಿ ಹೇಳಿದೆ. 

ಪೊಲೀಸಪ್ಪನಿಗೆ ಸಿಟ್ಟು ಬಂದು ನನಗೇ ಕಾಯ್ದೆ ಬಗ್ಗೆ ಹೇಳುತ್ತೀರಾ....ಕಾರಿನ ಒಂದು ಮಿರರ್ ಗ್ಲಾಸ್ ಒಡೆದಿದೆ,...... ಹಳೇ ನಂಬರ್ ಪ್ಲೇಟ್ ತೆಗೆದು ಹೊಸಾ HSRP ಗೆ ಕನ್ವರ್ಟ್ ಆಗಿದ್ದನ್ನುಹಾಕಿಸಿಲ್ಲ ,....ಇಂಧನದ ಪೋಲ್ಯೂಷನ್ ಟೆಸ್ಟ್ 4 ತಿಂಗಳ ಹಿಂದೇ ಎಕ್ಸ್ ಪೈರ ಆಗಿದೆ. ಅದಕ್ಕೆ ಎಲ್ಲಾ ಸೇರಿ ಒಟ್ಟು  ದಂಡ 8000/- ರೂಪಾಯಿ ಆಗುತ್ತೆ ಕಟ್ಟಿರಿ ಅಂದ.

*ಆಗ ನಾನು ನನ್ನ ಹೆಂಡತಿಗೆ ಹೇಳಿದೆ ಇನ್ನು  ಪೊಲೀಸನನ್ನು ನೀನೇ ಸಂಭಾಳಿಸು ಅಂತ

ಪಕ್ಕಕ್ಕೆ ಸರಿದು ನಿಂತೆ.

ಅವಳು ತನ್ನದೇ ಆದ 

ಶೈಲಿಯಲ್ಲಿ ಪೊಲೀಸ್ ನೊಂದಿಗೆ ಚೌಕಾಸಿ ಮಾಡಲಿಕ್ಕೆ ಹತ್ತಿ ನಿಮಗೇನು ಅಕ್ಕ-ತಂಗೇರ್ ಇಲ್ಲೇನ್.. ದಯಾ - ದಾಕ್ಷಿಣ್ಯ ಇಲ್ಲೇನ್...ನನ್ನ ಜಗಾದಾಗ್ ನಿಮ್ಮ ಚಿಗವ್ವ ಇದ್ದರ ಹಿಂಗss ಮಾಡತಿ ದ್ದರೆನ್ ಅಂತ ಮತ್ತ 15-20 ನಿಮಿಷ ಜಗ್ಗಿದಳು.*

ಅಷ್ಟೊತ್ತಿಗೆ ಸಿಟಿ ಬಸ್ ಬಂದು ನಿಲ್ಲಲು ತಡಮಾಡದೆ ಅದನ್ನು ಹತ್ತಿಬಿಟ್ಟೆವು ಯಾಕೆಂದರೆ ಆ ಕಾರ್ ನಮ್ಮದು ಆಗಿರಲಿಲ್ಲ.!!!!! 

ಪಾಪ ಪೊಲೀಸಪ್ಪ ತೆರದ ಬಾಯಿಂದ ನಮ್ಮ ಕಡೆ ನೋಡುತ್ತಾ ತಲೆ ಚಚ್ಚಿಕೊಂಡ.

ನಾನು ನನ್ನ ಸ್ನೇಹಿತನಿಗೆ ಹೇಳಿದೆ, ಇದು ಟೈಮ್ ಪಾಸಿನ ಕೇವಲ ಒಂದು ಉದಾಹರಣೆ,ಇಂಥಾ ನೂರಾರು ನಮ್ಮ ಸ್ಟಾಕ್ ನಲ್ಲಿವೆ. 

  ಕೃಪೆ:  ಅನಾಮಿಕ / Whatsapp 

Friday, May 30, 2025

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

 




"ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..."
"ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..."
"ಲೋಕದ ಕಣ್ಣಿಗೆ ರಾಧೆಯೂ ಕೂಡ ..."
"ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ..." 
ಹುಚ್ಚು ಖೋಡಿ  ಮನಸು, ಅದು ಹದಿನಾರರ ವಯಸು..."
ಡಾ ಹೆಚ್ಚೆಸ್ವಿ ಅವರ, ಮನಸೂರೆಗೊಂಡ  ಈ ಮಧುರ ಭಾವ  ಗೀತೆಗಳನ್ನು ಕೇಳದ, ಗುನುಗುನಿಸದ ಸಾಹಿತ್ಯಾಸಕ್ತ ಕನ್ನಡಿಗರಿಲ್ಲ ಎಂದೇ ಹೇಳಬಹುದು. 

ಡಾ ಹೊದಿಗೆರೆ ಶಾನ್ ಭಾಗ್ ವೆಂಕಟೇಶ ಮೂರ್ತಿ(೨೩.೦೬.೧೯೪೪) ಹೆಚ್ಚೆಸ್ವಿ ಎಂದೇ ಸಾರಸ್ವತ ಲೋಕದಲ್ಲಿ ಪರಿಚಿತರು. ಕವಿ, ಕಾದಂಬರಿಕಾರ, ನಾಟಕಕಾರ, ಪ್ರಬಂಧಕಾರ, ಶಿಶು ಸಾಹಿತಿ, ಅನುವಾದಕ, ವಿಮರ್ಶಕ, ಕನ್ನಡ ಸಿನಿಮಾ ಹಾಗೂ ಕಿರುತೆರೆಯ ಧಾರಾವಾಹಿಗಳಿಗೆ  ಗೀತೆ, ಸಂಭಾಷಣಾ ರಚನೆಕಾರ... ಹೆಚ್ಚೆಸ್ವಿ ಅವರ ಹಲವು ಮುಖಗಳಿವು!ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಸಮಕಾಲೀನ ಸಂದರ್ಭದ ಮುಖ್ಯ ಕವಿ ಎಂದು ಅವರನ್ನು ಗುರುತಿಸಲಾಗಿದೆ. 

ಡಾ ಎಚ್ ಎಸ್ ವೆಂಕಟೇಶ ಮೂರ್ತಿ  ಅವರ ಮುತ್ತಜ್ಜ ಕೆಲ್ಲೋಡು ಪುಟ್ಟಪ್ಪ ಪ್ರಸಿದ್ಧ ಗಮಕಿಗಳು. ಅಜ್ಜ ಭೀಮರಾಯರು ಮೃದಂಗ ವಾದಕರು ಹಾಗೂ ನಾಟಕ ಪ್ರಿಯರು. ಹಾಗಾಗಿ ಸಾಹಿತ್ಯ, ಸಂಗೀತದ ಪ್ರೇಮ ಹೆಚ್ಚೆಸ್ವಿ ಅವರಿಗೆ ರಕ್ತಗತವಾಗಿಯೇ ಬಂದದ್ದು .

ಚಿತ್ರದುರ್ಗ ಜಿಲ್ಲೆಯ ಮಲ್ಲಾಡಿಹಳ್ಳಿಯಲ್ಲಿ ಪ್ರೌಢಶಾಲೆಯ ಕ್ರಾಫ಼್ಟ್ ಟೀಚರಾಗಿ ವೃತ್ತಿ ಆರಂಭಿಸಿದ ಹೆಚ್ಚೆಸ್ವಿ, ಬೆಂಗಳೂರಿನ ಸೇಂಟ್ ಜೋಸೆಫ್ ಕಾಮರ್ಸ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾದವರು.  ಮೆಕ್ಯಾನಿಕಲ್ ಇಂಜಿನಿಯರಿಂಗನಲ್ಲಿ ಡಿಪ್ಲೊಮಾ ಪಡೆದರೂ ಕನ್ನಡ ಸಾಹಿತ್ಯವೇ ಅವರನ್ನು ಸೆಳೆದಿದ್ದರಿಂದ ನಂತರದಲ್ಲಿ ಕನ್ನಡ ಎಂ ಎ ಮಾಡಿದರು. 
ಕಲ್ಬುರ್ಗಿಯಲ್ಲಿ ನಡೆದ ಎಂಭತ್ತೈದನೇ ಅಖಿಲ ಭ್ಹಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಡಿವಿಜಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಅವರ ಮುಡಿಯಲ್ಲಿವೆ. ಅವರ ಬಗ್ಗೆ ಇನ್ನಷ್ಟು ಮಾಹಿತಿ.

೧.ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರ ಮೊದಲ ಕವನ ಸಂಕಲನದ ಹೆಸರೇನು?  
       *'ಪರಿವೃತ್ತ' 

೨.ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ಮಹಾ ಪ್ರಬಂಧದ ವಸ್ತು ಯಾವುದು? 
       *'ಕನ್ನಡದಲ್ಲಿ ಕಥನ ಕವನಗಳು'

೩.ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರ ಎರಡು ಕಥಾ ಸಂಕಲನಗಳು ಯಾವುವು? 
       *'ಬಾನಸವಾಡಿಯ ಬೆಂಕಿ' ಮತ್ತು 'ಪುಟ್ಟಾರಿಯ ಮತಾಂತರ'

೪.ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ಅನುವಾದಿಸಿದ ಕಾಳಿದಾಸನ ಕಾವ್ಯ ಯಾವುದು? 
       *'ಋತುಸಂಹಾರ' ವನ್ನು 'ಋತುವಿಲಾಸ' ಎಂದು ಅನುವಾದಿಸಿದ್ದಾರೆ. ಈ ಕೃತಿಗೆ ಕೇಂದ್ರ ಸಾಹಿತ್ಯ  ಅಕಾಡೆಮಿ ಅನುವಾದ ಪುರಸ್ಕಾರ ಲಭಿಸಿದೆ.

೫.ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರ ಆತ್ಮಕಥನದ ಹೆಸರೇನು? 
       *'ಎಚ್ಚೆಸ್ವಿ ಅನಾತ್ಮ ಕಥನ'

೬.ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ಟಿ ಎನ್  ಸೀತಾರಾಂ ಅವರ ಯಾವ ಧಾರಾವಾಹಿಗೆ  ಶೀರ್ಷಿಕೆ ಗೀತೆ ರಚಿಸಿದ್ದಾರೆ? 
       *'ಮುಕ್ತಾ'

೭.ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರ ಮಹಾ ಕಾವ್ಯ ಯಾವುದು? 
        * 'ಬುದ್ಧ ಚರಣ'

೮.ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರ ಯಾವ ಯಾವ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಬಂದಿದೆ? 
       *ಸಿಂದಬಾದನ ಆತ್ಮಕಥೆ(ಕವನ ಸಂಕಲನ)
       *ಹರಿಗೋಲು(ಕವನ ಸಂಕಲನ)
       *ಅಗ್ನಿಮುಖಿ( ಕಾದಂಬರಿ)
       *ಒಂದು ಸೈನಿಕ ವೃತ್ತಾಂತ( ನಾಟಕ)
       *ಹೂವಿನ ಶಾಲೆ( ಮಕ್ಕಳ ಸಾಹಿತ್ಯ)

೯.ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರ ವೈಚಾರಿಕ ಪ್ರಬಂಧ ಸಂಪುಟದ ಹೆಸರೇನು?
       * 'ಈ ಮುಖೇನ'

೧೦.ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ನಿರ್ದೇಶಿಸಿದ ಸಿನಿಮಾ ಯಾವುದು?
       *'ಹಸಿರು ರಿಬ್ಬನ್'



Monday, May 5, 2025

ಒಂದು ಘಟನೆ - ಕೃಪೆ: ವಾಟ್ಸಾಪ್

 ಹರಿದುಹೋದ ಧೋತಿ ಮತ್ತು ಹರಿದ ಅಂಗಿಯನ್ನು ಧರಿಸಿದ ವ್ಯಕ್ತಿ ತನ್ನ 15-16 ವರ್ಷದ ಮಗಳ ಜೊತೆ 

ದೊಡ್ಡ ಹೋಟೆಲ್ ಗೆ ಹೋದರು. ಇಬ್ಬರೂ ಕುರ್ಚಿಯ ಮೇಲೆ ಕುಳಿತಿದ್ದನ್ನು ನೋಡಿ , ವೇಟರ್ ಬಂದು ಎರಡು ನೀರಿನ  ಲೋಟ ಇಟ್ಟು ಕೇಳಿದ. ತಮಗೇನು ಬೇಕು? ಆಗ ಆ ವ್ಯಕ್ತಿ

" ನನ್ನ ಮಗಳಿಗೆ ಹತ್ತನೇ ತರಗತಿಯಲ್ಲಿ ಜಿಲ್ಲೆಗೆ ಪ್ರಥಮ ಬಂದರೆ ನಗರದ ಅತಿದೊಡ್ಡ ಹೋಟೆಲ್ ನಲ್ಲಿ ದೋಸೆ ತಿನ್ನಿಸುತ್ತೇನೆ ಎಂದು ಭರವಸೆ ನೀಡಿದ್ದೆ.

ಇದು  ಆ ಭರವಸೆಯನ್ನು ನನ್ನ  ಮಗಳು ಈಡೇರಿಸಿದ್ದಾಳೆ. ದಯವಿಟ್ಟು ಮಗಳಿಗಾಗಿ ಒಂದು ದೋಸೆ ತನ್ನಿ. ? ವೇಟರ್ ಕೇಳಿದ " ಆಯಿತು ತಮಗೇನು ತರಬೇಕು?"   ನನ್ನ ಬಳಿ ಕೇವಲ ಒಂದು ದೊಸೆ ಸಾಕಾಗುವಷ್ಟು ಮಾತ್ರ ಹಣವಿದೆ ಅವಳಿಗಷ್ಟೆ ಕೊಟ್ಟರೆ ಸಾಕು.ಎಂದ.ಈ  ಮಾತು ಕೇಳಿ ವೇಟರ್ ನ ಮನಸು ಕರಗಿತು. ಮಾಲೀಕನ ಬಳಿ ಹೋಗಿ   ಅವನು ವ್ಯಕ್ತಿ ಮತ್ತು ಮಗಳ ಕಥೆ ಹೇಳಿದ.ಮುಂದುವರಿದು ಇವರಿಬ್ಬರಿಗೂ ನನ್ನ ಪರವಾಗಿ ತಿಂಡಿ  ನೀಡಬೇಕೆಂದು ನಿರ್ಧರಿಸಿದ್ದೇನೆ.  ನೀವು ಅವರ ಬಿಲ್ ಹಣವನ್ನು ನನ್ನ ಸಂಬಳದಿಂದ ಕಡಿತಗೊಳಿಸಬಹುದು. ಈ ಮಾತನ್ನು ಕೇಳಿದ ಹೊಟೆಲ್ ಮಾಲಿಕನಿಗೂ ಅವರಿಬ್ಬರ ಮೇಲೆ ಮರುಕವಾಯಿತು ಹಾಗೂ ವೆಯ್ಟರ್ ನ ಅಭಿಮಾನ ಕಂಡು  ಸಂತುಷ್ಟನಾಗಿ "ಅವರಿಬ್ಬರಿಗೆ  ಹೋಟೆಲ್ ಪರವಾಗಿ ಇಂದು ನಾವು ಅಭಿನಂದನಾ ಪಾರ್ಟಿ ಕೊಡೋಣ ಎಂದು ಮಾಲೀಕರು ಹೇಳಿದರು".  

ಹೋಟೆಲ್ ಮಾಲೀಕರು ಎಲ್ಲ ಸಿಬ್ಬಂದಿಯವರನ್ನು ಸೇರಿಸಿ ಟೇಬಲ್ ನ್ನು ಚೆನ್ನಾಗಿ ಅಲಂಕರಿಸಲು ಹೇಳಿದರು.ಹಾಗೂ ಬಡ ಹುಡುಗಿಯ ಯಶಸ್ಸನ್ನು ಗ್ರಾಹಕರೊಂದಿಗೆ ಸಂಭ್ರಮಿಸಿ ಅವರಿಬ್ಬರಿಗೆ ಹೊಟ್ಟೆ ತುಂಬುವಷ್ಟು ತಿಂಡಿ  ಹಾಗೂ ಸಿಹಿ ಹಂಚಿ ಆಚರಿಸಿದರು.ಜೊತೆಗೆ ಮಾಲೀಕರು   ದೊಡ್ಡ ಚೀಲದಲ್ಲಿ  ಸಿಹಿ ತಿಂಡಿ ಪ್ಯಾಕ್ ನೀಡಿ ತಮ್ಮ ನೆರೆಹೊರೆಯಲ್ಲಿ ಹಂಚಲು  ಕೊಟ್ಟರು. ಇಷ್ಟೆಲ್ಲಾ ಗೌರವ ಪಡೆದ ಅವರಿಗೆ ಹೊಟೆಲ ನವರ ಬಗ್ಗೆ ಧನ್ಯತಾಭಾವದಿಂದ ಕಣ್ಣಲ್ಲಿ ನೀರು ಜಿನುಗತೊಡಗಿತ್ತು.                                                        .

ಸಮಯ ಕಳೆಯಿತು. ಒಂದು ದಿನ ಅದೇ ಹುಡುಗಿ I.A.S. ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅದೇ ಊರಿಗೆ ಬಂದಳು. ಮೊದಲು ಆಪ್ತ ಸಹಾಯಕನನ್ನು ಅದೇ ಹೋಟೆಲ್ ಗೆ ಕಳುಹಿಸಿ, "ಕಲೆಕ್ಟರ್ ಸಾಹಿಬಾ" ತಿಂಡಿ ತಿನ್ನಲು ಬರುತ್ತಾರೆ ಎಂದು ಹೊಟೆಲ್ ಮಾಲಿಕರಿಗೆ ತಿಳಿಸುವಂತೆ ಹೇಳಿದರು. ಹೋಟೆಲ್ ಮಾಲೀಕರು ತಕ್ಷಣ  ಹೊಟೆಲ್ ಹಾಗೂ ಟೇಬಲ್ ಗಳನ್ನು ತಮ್ಮ ಸಹಾಯಕರ  ಸಹಾಯದಿಂದ ಸುಂದರವಾಗಿ ಅಲಂಕರಿಸಿದರು. ಈ ಸುದ್ದಿ ಕೇಳಿ ಇಡೀ ಹೋಟೆಲ್ ಗ್ರಾಹಕರಿಂದ ತುಂಬಿ ತುಳುಕಿತು.

ಕಲೆಕ್ಟರ್ ತನ್ನ ಪೋಷಕರೊಂದಿಗೆ ಹೋಟೆಲ್ ತಲುಪಿದರು.  ಎಲ್ಲರೂ ಅವರ ಗೌರವಕ್ಕೆ ನಿಂತರು. ಹೋಟೆಲ್ ಮಾಲೀಕರು ಅವರಿಗೆ ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.  ಅವಳು ನೇರವಾಗಿ  ಹೋಟೆಲ್ ಮಾಲೀಕ ಮತ್ತು ವೆಟರ್ ನ ಕಾಲಿಗೆ  ನಮಸ್ಕರಿಸಿ ಹೇಳಿದಳು - ' ಬಹುಶಃ ನೀವಿಬ್ಬರೂ ನನ್ನನ್ನು ಗುರುತಿಸಲಿಲ್ಲ. ದೋಸೆ ಕೊಡೋಕೆ ಅಪ್ಪನ ಬಳಿ ದುಡ್ಡಿಲ್ಲದ ಹುಡುಗಿ ನಾನು. ಆ ದಿನ ನೀವಿಬ್ಬರೂ ಮಾನವೀಯತೆಯು ಇನ್ನೂ ಇದೆ ಎನ್ನುವದಕ್ಕೆ ನೈಜ  ಉದಾಹರಣೆ ಕೊಟ್ಟಿದ್ದಿರಿ. ನನ್ನ ನೆರೆಹೊರೆಗೆ ಹಂಚಲು ಸಿಹಿತಿಂಡಿಯ ಪ್ಯಾಕ್  ನೀಡಿ ಗೌರವಿಸಿದ್ದಿರಿ.

 ನಿಮ್ಮಿಬ್ಬರಿಂದಲೇ ಇಂದು ನಾನು ಈ ಹಂತಕ್ಕೆ ಬರಲು ಪ್ರಯತ್ನ ಪಟ್ಟೆ . ನಾನು ನಿಮ್ಮಿಬ್ಬರನ್ನು ಯಾವಾಗಲೂ  ನೆನಪಿನಲ್ಲಿಟ್ಟುಕೊಳ್ಳುತ್ತೇನೆ. ಇವತ್ತು ಈ ಪಾರ್ಟಿ ನನ್ನಿಂದ. ಎಲ್ಲಾ ಗ್ರಾಹಕರು ಮತ್ತು ಹೋಟೆಲ್ ಸಿಬ್ಬಂದಿಗಳ ಬಿಲ್ ನಾನು ಕಟ್ಟುತ್ತೇನೆ.  ಇವತ್ತಿನಿಂದ ನಿಮ್ಮಿಬ್ಬರ ಸುಖ ದುಃಖಗಳಿಗೆ ನಾನೂ ಭಾಗಿ.ಎಂದು ಹೇಳಿದಳು.ಇವತ್ತು ಹೊಟೆಲ್ ಮಾಲಿಕ  ಹಾಗೂ ವೆಯ್ಟರನ ಕಣ್ಣುಗಳು ತೆವ ವಾಗಿದ್ದವು.     

 ಯಾವುದೇ ಬಡವರ ಬಡತನವನ್ನು ನೋಡಿ ಅಪಹಾಸ್ಯ ಮಾಡುವ ಬದಲು, ಅವರ ಪ್ರತಿಭೆಯನ್ನು ಸರಿಯಾಗಿ ಗೌರವಿಸಿದರೆ ಆ ಸಂತೃಪ್ತ ಭಾವ ಅವರಲ್ಲಿ ಯಾವತ್ತೂ ಹಚ್ಚಹಸುರನಾಗಿ ಇರುತ್ತದೆ.    

Sunday, April 20, 2025

ವ್ಯತಿರಿಕ್ತ' ಕಾದಂಬರಿ

 ಜೀವನದ ಧಾವಂತದಲ್ಲಿ ನಮ್ಮನ್ನು ನಾವು ಒಂದೆಡೆ ನಿಂತು ಆತ್ಮಾವಲೋಕನಕ್ಕೆ ಆಸ್ಪದ ನೀಡಬೇಕಾಗುತ್ತದೆ. 


ನಮ್ಮ ಭಾವನೆಗೆ ಅನುಗುಣವಾಗಿ ನಾವು ಇತರರನ್ನು ಸುಲಭವಾಗಿ ಅಳೆದು ಬಿಡುತ್ತೇವೆ. ಆದರೆ ನಮ್ಮನ್ನು ನಾವು ಅರಿತುಕೊಳ್ಳಲು ಹೋಗುವುದೇ ಇಲ್ಲ. ಕಲ್ಮಷ ತುಂಬಿದ ನೀರಿನಲ್ಲಿ ಯಾವುದೇ ಬಾಹ್ಯ ಘರ್ಷಣೆ ನಿಂತ ಬಳಿಕ ಕ್ರಮೇಣ ಆ ಕಲ್ಮಷಗಳೆಲ್ಲಾ ಅಡಿಗೆ ಹೋಗಿ ಮೇಲಿನ ನೀರು ತಿಳಿಯಾಗುತ್ತದೆ. ಅದು ಬಳಸಲು ಯೋಗ್ಯವಾಗುತ್ತದೆ.


✍️ *ವಿವೇಕಾನಂದ ಕಾಮತ್* 

'ವ್ಯತಿರಿಕ್ತ' ಕಾದಂಬರಿ

Wednesday, April 9, 2025

ಪರೀಕ್ಷೆಯಲ್ಲಿ ಅಂಕ ಕಡಿಮೆ ಯಾದರೇನು?......... ಜೀವನದಲ್ಲಿ ಹೆಚ್ಚು ಅಂಕ ಗಳಿಸಬಹುದಲ್ಲವೇ? - ಡಾ.ಶಶಿಕಿರಣ್ ಶೆಟ್ಟಿ, ಉಡುಪಿ

 PUC ರಿಸಲ್ಟ್ ಬಂದಿದೆ ಸಂತೋಷ 580,600 ಪ್ಲಸ್ ಅಂಕ ತೆಗೆದವರಿಗೆ ಅಭಿನಂದನೆಗಳು ಅದೂ ಸಂತೋಷ  ಪತ್ರಿಕೆ, ಟಿವಿ, ಯಲ್ಲೇ ಇರಲಿ, ವಾಟ್ಸಪ್ ಗ್ರೂಪ್ನಲ್ಲಿ, ಸೋಷಿಯಲ್ ಮಿಡಿಯಾ ಎಲ್ಲೇ ಇರಲಿ ಅವರ ಮಗ 600+, ಇವರ ಮಗಳು 610 ಅಂತೆ ಎನ್ನುವುದರ ನಡುವೆ, ಏನೂ ತಪ್ಪು ಮಾಡದ 50% ಮಾರ್ಕ್ ತೆಗೆದ, ಫೇಲ್ ಆದ ಮಕ್ಕಳನ್ನು ಕೇಳುವವರಿಲ್ಲ ನೋಡಿ😥😥.....

ಇನ್ನೇಷ್ಟೋ ಕಡೆ ನೀನು ವೇಸ್ಟ್ ಬಾಡಿ, ನಮ್ಮ ಮರ್ಯಾದೆ ತೆಗೆದೆ, ನಮ್ಮ ಶಾಲೆಗೆ ಕಪ್ಪು ಚುಕ್ಕೆ, ದನ ಮೇಯಿಸು, ಸಾಯ್ಬಾರದಿತ್ತಾ😥, ಅವರ ಮಗ ನೋಡು,ಇವರ ಮಗಳನ್ನು ನೋಡು ಮುಂತಾದ ಚುಚ್ಚು ನುಡಿ ಇದು ಬೆಳೆಯುವ ಸಿರಿ ಯೊಂದನ್ನು ಮೊಳಕೆಯಲ್ಲೇ ಚಿವುಟುವ ಸಮಾಜ, ಬಾಂದವರು, ಒಡಹುಟ್ಟಿದವರು, ತಂದೆ ತಾಯಿ ಒಮ್ಮೆ ಇವರ ಬಗ್ಗೆ ಯೋಚಿಸ ಬಾರದೇಕೆ??

5 ಬೆರಳು ಒಂದೇ ರೀತಿ ಆಗಲು ಸಾಧ್ಯವಿಲ್ಲ ಎನ್ನುವ ಸತ್ಯ ನಮಗೇಕೆ ಅರ್ಥವಾಗುವುದಿಲ್ಲ?, ಸಮಾಜದಲ್ಲಿ ಯಶಸ್ವೀ ವ್ಯಕ್ತಿ ಆಗಬೇಕಾದರೆ rank ಬರುವುದು ಅನಿವಾರ್ಯವೇ? ಟಾಟಾ ಬಿರ್ಲಾ, ಅದಾನಿ, ಅಂಬಾನಿ, ಸಚಿನ್ ತೆಂಡೂಲ್ಕರ್ ನಂತಹ rank ಬಾರದ ಅದೆಷ್ಟು ಯಶಸ್ವೀ ವ್ಯಕ್ತಿ ಗಳಿಲ್ಲವೇ?...👌🙏🙏

ಬನ್ನಿ ಸ್ವಲ್ಪ ಬದಲಾಗೋಣ...

🌹1) ಕಡಿಮೆ ಅಂಕ ಬಂದ ಮಕ್ಕಳನ್ನು ಪ್ರೀತಿ ಯಿಂದ ಮಾತಾಡೋಣ

🌹2) ಅವರಲ್ಲಿ ಧೈರ್ಯ ತುಂಬೋಣ

🌹3) ಪರ್ಯಾಯ ಆಯ್ಕೆ ಗಳ ಬಗ್ಗೆ ತಿಳಿ ಹೇಳೋಣ

🌹4)ಎರಡನೇ ಯತ್ನದಲ್ಲಿ ಯಶಸ್ವೀ ಯಾದವರ ಕಥೆ ಹೇಳೋಣ..

🌹5) 1 ವರ್ಷ sslc ಮಾತ್ರ ಹೋಗಿದ್ದು ಜೀವನ ಇನ್ನೂ ಇದೆ ಎನ್ನುವ ಸತ್ಯ ತಿಳಿ ಹೇಳೋಣ..

🌹6) ಅವರಲ್ಲಿರುವ ಟ್ಯಾಲೆಂಟ್ ಅನ್ನು ಗುರುತಿಸೋಣ...


ಒಟ್ಟಲ್ಲಿ ರೆಕ್ಕೆ ಮುರಿದ ಹಕ್ಕಿಗೆ ಉಪಚಾರಿಸಿ ಹೊಸರೆಕ್ಕೆ ಕಟ್ಟಿ ಆಗಸಕ್ಕೆ ಹಾರಿ ಬಿಡೋಣ 🙏🙏...

ಕೊನೆಗೊಂದು ಎಲ್ಲೊ ಓದಿದ ಕಥೆಯೊಂದನ್ನು ಹೇಳುತ್ತೇನೆ ಕೇಳಿ.. ಅಪ್ಪ ಈಗಷ್ಟೇ ತಂದ ಹೊಸ ಕಾರಿನ ಕೆಂಪು ಪೈಂಟ್ ಮೇಲೆ ಚಿಕ್ಕ ಮಗ ಕಲ್ಲಲ್ಲಿ ಏನೋ ಗೀಚುತಿದ್ದ ಸಿಟ್ಟಲ್ಲಿದ್ದ ಅಪ್ಪ ಅಲ್ಲೇ ಇದ್ದ ಕಬ್ಬಿಣದ ರೋಡ್ ಅಲ್ಲಿ ಮಗನ ಕೈಗೆ ಹೊಡೆದನಂತೆ ಮಗನ ಕೈ ಫ್ರಾಕ್ಚರ್ ಆಗಿತ್ತು🥱, ಆಸ್ಪತ್ರೆ ಗೆ ಕೊಂಡು ಹೋದರೆ ಹೊಡೆತ ಜೋರಾಗಿ ಬಿದ್ದಿದ್ದರಿಂದ ಹೆಬ್ಬೆರಳು ಪುಡಿ ಪುಡಿ ಆಗಿದ್ದು ಮಗು ವಿನ ಹೆಬ್ಬೆರಳು ಕತ್ತರಿಸಬೇಕು ಎಂದು ಬೆರಳು ಕತ್ತರಿಸಿದರಂತೆ 😥.. ಅಪ್ಪ ಬೇಸರದಿಂದ ಮನೆಗೆ ಬಂದರೆ ಕೆಂಪು ಕಾರ್ ಮೇಲೆ ಅಪ್ಪ ಈ ಲವ್ ಯು ಎಂದು ಕಲ್ಲಲ್ಲಿ ಗೀಚಿದ್ದ ಮಗ.. ಅಲ್ಲಿ ರಕ್ತ ದ ಕಲೆ ಗಳಿದ್ದವು... ಅಪ್ಪ ದುಃಖ ತಡೆಯಲಾರದೇ ಅಲ್ಲೇ ಕೂತಿದ್ದ.. ಹಿಂದೆ ನಿಂದ ಬಂದ ಮಗ ಬ್ಯಾಂಡೆಜ್ ಮಾಡಿದ್ದ ಕೈ ತೋರಿಸಿ ಹೇಳಿದನಂತೆ ಅಪ್ಪ ನೀನು ಟೆನ್ಶನ್ ತಗೋಬೇಡ ನಾನು ಬರೆಯೋದು ಎಡ ಕೈ ಯಲ್ಲಿ ಮೊನ್ನೆ ಬಲ ಕೈ ಅಲ್ಲಿ ಟ್ರೈ ಮಾಡುತಿದ್ದೆ, ಬಲ ಕೈ ಹೆಬ್ಬೆರಳು ಹೋದರೆ ಹೊಗಲಿ ಬಿಡು ಅಂದನಂತೆ😔🥱.....

ನಿಜ ಇಂತಹ ಮಕ್ಕಳ ನಿಷ್ಕಲ್ಮಶ ಪ್ರೀತಿ,ಮಮತೆ ಯನ್ನು ಅರಿಯುವ ತಂದೆ ತಾಯಿಗಳಾಗೋಣ.. ಮಾರ್ಕ್ ಕಮ್ಮಿ ಬಂತೆಂದು ಅವರ ಮುಗ್ಧ ಹೃದಯಕ್ಕೆ ನೋವು ಕೊಟ್ಟು ನಾಳೆ ಮಕ್ಕಳನ್ನು ಕಳೆದುಕೊಂಡು ಬೇಸರಿಸುವ ಮೊದಲು ಎಚ್ಚರ ದಿಂದ ಇರೋಣ.

SSLC, PUC  ಯಲ್ಲಿ ಕಡಿಮೆ ಅಂಕ ಬಂದ /ಫೇಲ್ ಆದ ಅದೆಷ್ಟೋ ವಿದ್ಯಾರ್ಥಿಗಳು ಜೀವನವೆಂಬ ಪರೀಕ್ಷೆ ಯಲ್ಲಿ ಪಾಸ್ ಆಗಿದ್ದಾರೆ, ಕೆಲವರoತು ಜೀವನದಲ್ಲಿ Rank ಬಂದಿದ್ದಾರೆ.. ಹಾಗಾಗಿ ಇದಿಷ್ಟು ನೆನಪಿರಲಿ....ಅವರಿಗೊಂದು ಅವಕಾಶ ಕೊಡಿ

ಯಾಕೆಂದರೆ....

ಪರೀಕ್ಷೆ ಯಲ್ಲಿ ಅಂಕ ಕಡಿಮೆಯಾದರೇನು?.... ಜೀವನದಲ್ಲಿ ಹೆಚ್ಚು ಅಂಕ ಗಳಿಸಬಹುದಲ್ಲವೇ?? 🙏🙏

Saturday, October 19, 2024

ಅಮ್ಮ_ಹೆಂಡತಿ_ಮಕ್ಕಳು

"ನಿವೃತ್ತಿಯಾದ ಮೊದಲ ದಿನ ನಾನು ಮೊದಲು ಮಾಡುವ ಕೆಲಸವೆಂದರೆ ನನ್ನ ಅಮ್ಮನನ್ನು

ವೃಧ್ಧಾಶ್ರಮಕ್ಕೆ ಸೇರಿಸುವುದು..."


ನನ್ನ ಮನೆಯಲ್ಲಿ  ನಾನು ಈ ಮಾತುಗಳನ್ನು ಹೇಳುತ್ತ ಹೇಳುತ್ತ ಒಂದು ವರುಷವಾಯಿತು.....

ಇನ್ನು ಈ ಕೆಲಸವನ್ನು ಮುಂದು ಹಾಕುವಂತಿಲ್ಲ...

ಯಾಕೆಂದರೆ ನಿನ್ನೆ ನನಗೆ ನಿವೃತ್ತಿ ಯಾಯಿತು...


ನನ್ನ ಹೆಂಡತಿ ಮಕ್ಕಳೆಲ್ಲ ಈ ದಿನಕ್ಕಾಗಿಯೇ ಕಾದು ಕುಳಿತವರಂತೆ ಇದ್ದಾರೆ..

ನನ್ನ ಅಮ್ಮ ಆರೊಗ್ಯವಾಗಿಯೇ ಇದ್ದವಳು,ಸುಮಾರು ಎರಡೂವರೆ ವರುಷಗಳಿಂದ ಅನಾರೋಗ್ಯಕ್ಕೆ ಬಿದ್ದಳು...

ಇತ್ತೀಚೆಗೆ ಒಂದು ವರುಷದಿಂದ 

ಮಲ ಮೂತ್ರ ವಿಸರ್ಜನೆಯ ಮೇಲೆ ಕೂಡಾ ಅವಳಿಗೆ ನಿಯಂತ್ರಣವಿಲ್ಲ...

ಬೆಳಗ್ಗೆ ರಾತ್ರಿ ಅವಳನ್ನು ನಾನು ನೋಡಿ ಕೊಳ್ಳಬಲ್ಲೆ...

ಆದರೆ ನಾನು ಕೆಲಸಕ್ಕೆ ಹೋದಾಗ ಅವಳನ್ನು ನೋಡಿ ಕೊಳ್ಳಬೇಕಾದವಳು ಇವಳೇ ... ಅಂದರೆ ನನ್ನ ಹೆಂಡತಿಯೇ...


ನನಗಾದರೂ ಅವಳು

ತಾಯಿ..ನನ್ನವಳಿಗೆ ಅವಳು ತಾಯಿಯಾ..?

ನನ್ನ  ಸಿಡುಕಿನ ನೋಟಕ್ಕೆ ಬೆದರಿ ಇವಳು ಅತ್ತೆಯ ಚಾಕರಿ ಮಾಡುತ್ತಿದ್ದಾಳೆ.

ಆದರೆ  ಇವಳ ಮುಖದಲ್ಲೊಂದು ತಿರಸ್ಕಾರದ ನೋಟ ಚಿರ ಸ್ಥಾಯಿಯಾಗಿ ನಿಂತ ಹಾಗೆ ನನಗೆ ಕಾಣಿಸುತ್ತಿದೆ..

ಇವಳಿಗಾದರೂ ಈ ಭಾವ ಸಹಜವೇ...ಹೊರಗಿನಿಂದ ಬಂದವಳು....

ಆದರೆ ನನ್ನ 

ಮಕ್ಕಳಿಗೂ ಅನಾರೋಗ್ಯದ ಅಜ್ಜಿ ಬೇಡವೆನ್ನಿಸುವುದು ನನಗೆ ದಿಗಿಲು ಹುಟ್ಟಿಸುವುದು.....

ಅಭಿಲಾಷ್ ಆದರೂ ಹುಡುಗ...ಮುಲಾಜಿಲ್ಲದೆ ಹೇಳಿದ್ದ"ಅಮ್ಮಾ ನನ್ನ ಫ್ರೆಂಡ್ಸ್ ಇರುವಾಗ ಅಜ್ಜಿಯನ್ನು ಹೊರಗೆ ಬಿಡಬೇಡ"

ಆದರೆ ನನ್ನ ಮಗಳು ಶಿಶಿರ "ಅಬ್ಬಾ  ,ಅಜ್ಜಿ ಗಬ್ಬು ನಾತ...ವ್ಯಾಕ್" ಅಂದಾಗ ಸಿಟ್ಟು ನೆತ್ತಿಗೇರಿತ್ತು...


"ಮಕ್ಕಳೇ..ಸ್ವಲ್ಪ ಕಾಲ ಸಹಿಸಿ..ನನ್ನ ಅಮ್ಮನನ್ನು ವೃದ್ಧಾಶ್ರಮಕ್ಕೆ ಸೇರಿಸುವ " ಅಂದಿದ್ದೆ...

ಹೆಂಡತಿ ಮಕ್ಕಳೇನೋ ಸುಮ್ಮನಾದರು... 


ಆದರೆ ಅಮ್ಮ ಅಂದಿನಿಂದ ಮತ್ತಷ್ಟು ಮೌನಿಯಾದಳು...

*********

ಇಂದು ನನ್ನ ನಿವೃತ್ತಿಯ ಮೊದಲ  ದಿನ .

ಅಮ್ಮನ ಪ್ರಾಃತ ವಿಧಿಗಳನೆಲ್ಲ

ಮುಗಿಸಿ ನಾವು ಹೊರಟು ನಿಂತೆವು...


ಯಾಕೋ ಹೆಂಡತಿ ಮಕ್ಕಳೂ ಹೊರಟು ನಿಂತರು...

ಅಮ್ಮನ ಮುಖದಲ್ಲಿ ಕಳೆ ಇಲ್ಲ...


"ವೃಧ್ಧಾಶ್ರಮಕ್ಕೆ ಸೇರಿಸುತ್ತೇನೆ " ಎಂದ ಮಗನ ಮಾತು ಇವಳ ಕಿವಿಗೂ ಬಿದ್ದಿರಬೇಕು.

ಬಲಿ ಪೀಠಕ್ಕೆ ಕರೆದೊಯ್ಯುವ ಮೇಕೆಯಂತೆ  ಉಸಿರೆತ್ತದೆ ಮಗ ಕರೆದಲ್ಲಿ ಬರುತ್ತಾಳೆ.

ನಾವೆಲ್ಲರೂ ಕಾರಿನಲ್ಲಿ ಕುಳಿತೆವು.


ಮಗರಾಯ ಕಾರನ್ನು ಚಲಾಯಿಸುತ್ತೇನೆ ಅಂದ.


 ಅವನಿಗೆ ಕೊಡದೆ ನಾನೇ ಕಾರನ್ನು ಚಲಾಯಿಸಿಕೊಂಡು ಬಂದೆ..


ಒಂದು ಹಂಚಿನ ಮನೆಯ ಬಳಿ ಕಾರು ನಿಲ್ಲಿಸಿದೆ..


ಹಾರನ್ ಮಾಡಿದೆ..

ಮನೆಯೊಳಗಿನಿಂದ ನನ್ನ ಗೆಳೆಯ ಓಡೋಡಿ ಬಂದ..


ನಾನು ಕಾರಿನ ಬಾಗಿಲು ತೆಗೆದು ಅಮ್ಮನನ್ನು ಕೆಳಗಿಳಿಸಿದೆ..

"ವೃದ್ಧಾಶ್ರಮ ಅಲ್ವಾ..?" ಹೆಂಡತಿ

ಬಾಯಿ ತೆಗೆದಳು...


ನಾನು ಮಾತನಾಡದೆ ಅಮ್ಮನನ್ನು ಕರೆದು ಕೊಂಡು ಮನೆಯ ಒಳಗೆ ಕರೆದು ಕೊಂಡು ಬಂದೆ...

ಒಂದು ಬೆಡ್ ರೂಂ...ಒಂದು ಹಾಲ್ ಒಂದು ಕಿಚನ್....ನನ್ನ ಗೆಳೆಯ ಸರಿಯಾದ ಚಿಕ್ಕ ಮನೆಯನ್ನೇ ಆಯ್ದು ಕೊಂಡಿದ್ದ.


..ಬಾಡಿಗೆಯ ಮನೆ...ಗೆಳೆಯ ಮನೆಯ ಕೀಲಿ ಕೈ ಕೊಟ್ಟು ಹೊರಟ..

"ಏನಿದು ಆವಾಂತರ... ಅತ್ತೆಯನ್ನು  ಇಲ್ಲಿ ನೋಡಿ ಕೊಳ್ಳುವವರು ಯಾರು?"

ನನ್ನವಳ ಪ್ರಶ್ನೆ..


"ಅವಳ ಮಗ  ನಾನು ಜೀವದಲ್ಲಿ ಇದ್ದೇನೆ"ನನ್ನ ಉತ್ತರ.

"ಅಂದರೆ ನೀವು ಇಲ್ಲಿ ನಿಂತು ಅಮ್ಮನನ್ನು ನೋಡಿ ಕೊಳ್ಳುತ್ತೀರಾ?"


"ಹಾಗೆಂದು ಕೊಳ್ಳಬಹುದು" ಎಂದೆ...


"ನಮ್ಮ ಗತಿ..?" ಹೆಂಡತಿಯ ಪ್ರಶ್ನೆ...


"ಮನೆಯ ಖರ್ಚು ನನ್ನದೇ" ನನ್ನ ಉತ್ತರ.

"ಮನೆಯಲ್ಲಿ ನೀವಿಲ್ಲದೆ ಇದ್ದರೆ ಭಯ ಅಗುತ್ತೆ".

"ಮಗ ನನಗಿಂತ ಎತ್ತರಕ್ಕೆ ಬೆಳೆದು ನಿಂತಿದ್ದಾನೆ.ಏನು ಭಯವೇ" ಅಂದೆ.


"ಅಯ್ಯೋ ನೀವಿಲ್ಲದ ಮನೆಯೆ".

ಇವಳ ಕಣ್ಣಲ್ಲಿ ಗಂಗಾ ಪ್ರವಾಹ..


ಅಮ್ಮನ ಕಣ್ಣಲ್ಲಿ ಅಶ್ರುಧಾರೆ..

ಅವಳನ್ನು ವೃದ್ದಾಶ್ರಮಕ್ಕೆ ಸೇರಿಸುತ್ತೇನೆ ಅಂದು ಕೊಂಡಿರಬೇಕು..

 ಈಗ ಅವಳ ಕಣ್ಣಲ್ಲಿ ಸಂತೋಷ ಉಕ್ಕಿ ಹರಿಯುತ್ತಿದೆ.


ಅವಳನ್ನು ಮಂಚದ ಮೇಲೆ ಮಲಗಿಸಿದೆ...


ಮಗ, ಮಗಳು, ಇವಳು ಎಲ್ಲರು  ಸ್ಥಭ್ದ ಚಿತ್ರದ ಹಾಗೆ ಮೂಗರಾಗಿದ್ದಾರೆ..


ಮಗ ಬಾಯಿ ತೆಗೆದ"ಅಪ್ಪಾ ಇದೆಲ್ಲ  ಏನು  nonsence...?

ನಾನೆಂದೆ"ಮಗಾ ನಿನಗೆ ನಿನ್ನ ಫ್ರೆಂಡ್ಸ್  ಮನೆಗೆ ಬರುವಾಗ ನನ್ನ ಅಮ್ಮ ಮನೆಯಲ್ಲಿದ್ದರೆ..ಅದು shame....ಅನ್ನಿಸುತ್ತಿತ್ತಲ್ಲ...ಅದು nonsense...


ನಾನೂ ಅಮ್ಮ ಇಲ್ಲಿರುತ್ತೇವೆ..ನೀವು ಮನೆಗೆ ಹೋಗಿ ಮಗೂ..ಚೆನ್ನಾಗಿರಿ"."ಅಪ್ಪಾ "

ಮಗಳು  ಮಾತಿಲ್ಲದೆ ನಿಂತ ಅಣ್ಣನ ಸಹಾಯಕ್ಕೆ ಬರುತ್ತಾಳೆ, "ಅಜ್ಜಿಗೆ ನೀನೊಬ್ಬನೇ ಮಗನಾ. ಮೂರು ಮಂದಿ ಮಕ್ಕಳಲ್ವಾ...ನೀನೆ ಯಾಕೆ ಅಜ್ಜಿಯನ್ನು ನೋಡಿಕೊಳ್ಳ ಬೇಕು...?"


ಇದು ಇವಳ ಮಾತಲ್ಲ...ಯಾವತ್ತೋ ಇವಳ ಅಮ್ಮನಾಡಿದ ಮಾತು..ಅದನ್ನೇ

ಉರು ಹೊಡೆದು ಹೇಳುತ್ತಿದ್ದಾಳೆ...ನನ್ನವಳು ಏನೂ ತಿಳಿಯದ ಹಾಗೆ ಕುಳಿತಿದ್ದಾಳೆ.

"ಮಗಳೇ... ನನಗಾಗ ಆರೇಳು ವರ್ಷ ಇರಬಹುದು.ಅಪ್ಪ ತೀರಿ ಹೋಗಿ ಎರಡೋ ಮೂರೋ ವರ್ಷಗಳಾಗಿತ್ತು. ... ನನಗೆ ವಾಂತಿ ಬೇಧಿ ಆರಂಭವಾಯಿತು...ನಮ್ಮದು ಹಳ್ಳಿ... ವಾಹನದ ಸೌಕರ್ಯ ಇರಲಿಲ್ಲ ಮಗಾ...ಹಳ್ಳಿಯ ನಾಟಿ ಮದ್ದು ನಾಟಲಿಲ್ಲ.


 ಮಗೂ... ನಾನು ಬದುಕುವ ಆಸೆ ಯಾರಿಗೂ ಇರಲಿಲ್ಲವಂತೆ.

 ಅರೆ ನಿರ್ಜೀವ ಸ್ಥಿತಿಯಲ್ಲಿದ್ದ ನನ್ನನ್ನು ಇದೇ ನನ್ನ ಅಮ್ಮ  ಆ  ಹೆಗಲ ಮೇಲೆ ಹಾಕಿ ಆರು ಮೈಲು ನಡೆದು ವೈದ್ಯರ ಹತ್ತಿರ ಕೊಂಡು ಹೋಗಿ ಇಂಜೆಕ್ಷನ್ ಚುಚ್ಚಿಸಿ ಮತ್ತೆ ಆರು ಮೈಲು ಹೊತ್ತು ನಡೆದು.ಬದುಕಿಸಿದಳು.


ದೇವಾ...ಇಂತಹ ಅಮ್ಮನಿಗೆ ಈಗಮಲಮೂತ್ರದ ಮೇಲೆ ನಿಯಂತ್ರಣ ಇಲ್ಲ ಮಗೂ.

ಹೆಣ್ಣಾದ ನಿನಗೂ ನಿನ್ನಮ್ಮನಿಗೂ ಇದು ಅಸಹ್ಯ ಅಂತ ಆದರೆ ,ನನ್ನ ಅಣ್ಣಂದಿರ ಹೆಂಡಂದಿರಿಗೂ ನನ್ನ ಅಮ್ಮ ಈ ವೃಧ್ದಾಪ್ಯದಲ್ಲಿ ಅಸಹ್ಯವೇ ಆಗುವಳು ಮಗೂ....


ಈ ಪ್ರಾಯದಲ್ಲಿ ಅವಳು ಯಾರಿಗಾದರೂ ಅಸಹ್ಯ ಅನ್ನಿಸಿದರೆ ಅವಳ ಮಗನಾದ ನನಗೆ ಹೇಗಾಗಬೇಡ...?

ಬೇಡ ಮಗೂ ,ನನ್ನ ಅಮ್ಮ ನನಗೆ ಅಸಹ್ಯವಲ್ಲ...ಸಾಯುವವರೆಗೆ ನಾನು ಅವಳಿಗೆ ಮಗನಂತೆ ಅಲ್ಲ... ಮಗಳಂತೆ ಅವಳ ಸೇವೆ ಮಾಡುತ್ತೇನೆ.. ನೀವು ಹೋಗಿ...ನಾನು ವಾರಕ್ಕೊಮ್ಮೆ  ಮನೆಗೆ ಬಂದು ಹೋಗುತ್ತೇನೆ....ಅಮ್ಮನಿರುವ ವರೆಗೆ ಮಾತ್ರ..."


ಹೆಂಡತಿ ಕೈ ಜೋಡಿಸುತ್ತಾಳೆ.."ಬನ್ನಿ ನಮ್ಮದು ತಪ್ಪಾಯ್ತು,ಅತ್ತೆಯನ್ನು ಅಮ್ಮ ಅಂತ ತಿಳಿದು ಕೊಳ್ಳುತ್ತೇನೆ.ನೀವಿಲ್ಲದ ಮನೆ ನನಗೆ ಮನೆಯೇ...ಹೋಗುವ ಬನ್ನಿ.. "ಅವಳಿಗೆ ಗಾಬರಿಯಾಗಿದೆ.


"ಮಕ್ಕಳೇ "

ನಾನು ಹೇಳುತ್ತೇನೆ"ಈ ಮಲ ಮೂತ್ರಗಳೆಲ್ಲ ಮಾನವನ ಜೀವನದ ಅನಿವಾರ್ಯ ಸಂಗತಿಗಳು...ಅದು ಬೇಡ ಅನ್ನಿಸಿದರೆ ಯಾವ ಹೆಣ್ಣೂ ಹೆರಲಾರಳು...ಯಾವ ದಾದಿಯೂ ಕೂಡಾ ಸೇವೆ ಸಲ್ಲಿಸಲಾರಳು .. ಯಾವ ಡಾಕ್ಟರ್ ಕೂಡಾ ಡಾಕ್ಟರ್ ಅಗಲಾರ.....


ಇನ್ನು ಬದುಕಿ ಉಳಿದರೆ ನಾನೂ ಮುದುಕನಾಗುತ್ತೇನೆ...ಆರೋಗ್ಯದ ವಿಷಯ ನನ್ನ ಕೈಯಲ್ಲಿ ಇಲ್ಲ..ನನ್ನಮ್ಮನಿಗಾದರೂ ನಾನಿದ್ದೆ...ಈಗಿನ ಮಕ್ಕಳು ನಮ್ಮ ಕೊನೆಗಾಲದಲ್ಲಿ ನಮ್ಮ ಸೇವೆ

ಮಾಡಬೇಕೆಂಬ ನಿರೀಕ್ಷೆಯೂ ತಪ್ಪೆ...

ನೀವು ಮನೆಗೆ ಹೋಗಿ... ವೃದ್ಧರಿಲ್ಲದ ಮನೆ ಸ್ವಚ್ಛ ಸುಂದರ ಮತ್ತು ನೆಮ್ಮದಿಯದ್ದು ಹೋಗಿ ಬನ್ನಿ" ಮಗ  ಕದಲಿ ಹೋದ


"ಅಪ್ಪಾ ಮಕ್ಕಳು ತಪ್ಪು ಮಾಡಿದರೆ ಕ್ಷಮಿಸಬೇಕಾದುದು,ತಪ್ಪಿದ್ದರೆ ಸರಿ ದಾರಿಯಲ್ಲಿ ನಡೆಸಬೇಕಾದುದು ಹಿರಿಯರ ನೀತಿಯಲ್ಲವೇನಪ್ಪ...ನೀವು ನಮ್ಮ ಕಣ್ಣ ತೆರೆಸಿದಿರಿ...ನಿಮ್ಮ ಅಮ್ಮನನ್ನು  ನೀವು ನೋಡಿಕೊಂಡಂತೆ ನಾವು ಕೂಡ ಅಜ್ಜಿಯನ್ನೂ , ನಿಮ್ಮಿಬ್ಬರನ್ನೂ ಕೊನೆ ಕಾಲದ ವರೆಗೆ ಪ್ರೀತಿ.. ಗೌರವದಿಂದ ನೋಡಿ ಕೊಳ್ಳುತ್ತೇವೆ.."


ಮೂವರೂ  ಅಳುತ್ತಾ ನನ್ನ ಕಾಲಿಗೆ ಬಿದ್ದರು...ನಾನೆಂದೆ "ನೀವು  ಬೀಳಬೇಕಾದುದು ಈ ಕಾಲುಗಳಿಗಲ್ಲ..ಆ ಕಾಲುಗಳಿಗೆ".


ಅಮ್ಮನಿಗೆ ಎಷ್ಟು ಅರ್ಥವಾಯಿತೋ...ಅವಳ  ಸೊಸೆಯೂ ಮೊಮ್ಮಕ್ಕಳೂ ಅವಳ ಕಡ್ಡಿಯಂತಿರುವ ಕಾಲಿಗೆ ಬೀಳುವಾಗ ಅವಳ ಒಣ ಕಣ್ಣುಗಳು ಒದ್ದೆಯಾಗಿದ್ದವು..


ಇದು ಕಥೆಯಲ್ಲ..    ನಮ್ಮ ಮುಂದಿರುವ ಹಿರಿಯ ಜೀವಗಳ ವ್ಯಥೆ.

ಬರಹ ಕೃಪೆ:   ಬರೆದವರು ಯಾರೆಂದು ತಿಳಿದಿಲ್ಲ.


ಇಂತಹ ಕಣ್ಣುತೆರೆಸುವ ಬರಹಕ್ಕೆ ನಿಮಗಿದೋ ನನ್ನ ಅನಂತಾನಂತ ಧನ್ಯವಾದಗಳು.

🌹🌹ಒಳ್ಳೆಯ ತಿಳುವಳಿಕೆ ಕೊಡುವಂತಹ ಬರಹ, ನಮ್ಮ (Generation) ಪೀಳಿಗೆಗೆ, ಮಕ್ಕಳ ಪೀಳಿಗೆಗೆ ಹಾಗೂ ಮುಂದಿನ ಎಲ್ಲಾ ಪೀಳಿಗೆಗೂ ಅನ್ವಯವಾಗುವಂತಹ ಬರಹ. ಇದನ್ನು ಬರೆದವರಿಗೂ ಹಾಗೂ ಕಳುಹಿಸಿದವರಿಗೂ ಅನಂತ ಧನ್ಯವಾದಗಳು.

“ಇಗೋ, ಬೆಂಗಳೂರು ಹೀಗಿತ್ತು”ಜಿ. ವೆಂಕಟಸುಬ್ಬಯ್ಯ -

“ ಇಗೋ , ಬೆಂಗಳೂರು ಹೀಗಿತ್ತು ” ಜಿ . ವೆಂಕಟಸುಬ್ಬಯ್ಯ   ಅರವತ್ತು ವರ್ಷಗಳ ಹಿಂದೆ ಬೆಂಗಳೂರು ಇಷ್ಟು ದೊಡ್ಡದಾಗಿರಲಿಲ್ಲ . ಆಗ ಎರಡು ಬೆಂಗಳೂರು ಇತ್ತು ...