ತಲೆನೋವಿಗೊಂದು ಮದ್ದು - ರಾಜೇಶ್ ಶ್ರೀವತ್ಸ

ತಲೆನೋವಿಗೊಂದು ಮದ್ದು 
ಸಹಪಾಠಿಗಳೊಡನೆ ಹಂಪಿಯ ಕಲಾಶಿಬಿರ ಮುಗಿಸಿ ಹೊಸಪೇಟೆಯಿಂದ ರೈಲಿನಲ್ಲಿ ಹಿಂತಿರುಗುತ್ತಿದ್ದೆ. ಬಳ್ಳಾರಿಯ ಘೋರ ಬಿಸಿಲಿಗೆ ಹದಿನೈದು ದಿನಗಳ ಕಾಲ ಬೆಂದು ಸಾಕಾಗಿ ಹೋಗಿತ್ತು. ರೈಲು ಹತ್ತಿದರೆ ಸರಿಯಾಗಿ ಕಾಲೂರಿ ನಿಲ್ಲಲೂ ಜಾಗವಿಲ್ಲ. ಅಂತೂ ಯಾವುದೋ ಊರಿನಲ್ಲಿ ನಮಗೆಲ್ಲಾ ಕೂರಲು ಸ್ಥಳ ದೊರಕಿತು. ದಣಿದಿದ್ದ ಎಲ್ಲರೂ ಕೆಲನಿಮಿಷಗಳಲ್ಲೇ ನಿದ್ದೆಗೆ ಜಾರಿದರು . ಆಗ ನನಗೆ ಶುರುವಾಯ್ತು ತಲೆ ನೋವಿನ ಕಾಟ. ತಲೆಯಮೇಲೆಲ್ಲಾ ನೂರಾರು ಮೊಳೆಗಳನ್ನು ಹೊಡೆಯುತ್ತಿರುವಂತೆ , ಆನೆ ಕಾಲಿಟ್ಟಂತೆ … ಅನುಭವಿಸಲಾಗದ ನೋವು. ಸುಖ ನಿದ್ದೆಗೆ ಜಾರಿದ ನನ್ನ ಸಹಪಾಠಿಗಳನ್ನು ನೋಡಿದಾಗಲೆಲ್ಲತಲೆನೋವು ಜಾಸ್ತಿಯಾದಂತಾಗುತ್ತಿತ್ತು. ತಲೆನೋವಿನ ಮಾತ್ರೆಗಳು ಮುಗಿದಿದ್ದು ನೆನಪಿದ್ದರೂ ಸುಮ್ಮನೆ ಕೈಚೀಲ ತಡಕಾಡಿ ಮಾತ್ರೆ ಹುಡುಕಿದ್ದಾಯ್ತು. ಕೊನೆಗೆ ಮನಸಿಲ್ಲದಿದರೂ ಒಬೊಬ್ಬರನ್ನೇ ಎಬ್ಬಿಸಿ ಮಾತ್ರೆ ಕೇಳಿದ್ದಾಯ್ತು. ಅವರೆಲ್ಲ ಮಾತ್ರೆಗೆ ತಡಕಾಡಿ ಇಲ್ಲ ಎಂದು ಹೇಳಿ ಮತ್ತೆ ನಿದ್ದೆಗೆ ಜಾರಿದ್ದಾಯ್ತು.
ಅಷ್ಟರಲ್ಲಿ ನಮ್ಮ ಹತ್ತಿರವೇ ಕುಳಿತು ಇದನೆಲ್ಲಾ ಗಮನಿಸುತ್ತಿದ್ದ ಲಂಬಾಣಿ ಅಜ್ಜಿಯೊಬ್ಬರು ಹತ್ತಿರ ಬಾ ಎಂದು ಕರೆದಂತಾಯ್ತು. ನನ್ನನ್ನೇ ಕರೆದದು ಎಂದು ಖಚಿತಪಡಿಸಿಕೊಂಡು ಅಜ್ಜಿಯ ಬಳಿ ನಡೆದೆ. (ಅವರೆಲ್ಲಾ ಚಿಕ್ಕಮಗಳೂರು ಜಿಲ್ಲೆಯ ಕಾಫಿ ಕೊಯ್ಲಿನ ಕೂಲಿ ಕೆಲಸಕ್ಕೆ ಹೊರಟವರು)
“ಏನು ತಲೆನೋವಾ? ”
“ಹೂಂ “ ಎಂದೆ ನರಳುತ್ತಾ
“ನಾನು ಮದ್ದು ಕೊಟ್ರೆ ಅಗುತ್ತಾ?”
ಎನೋ ನಾಟಿ ಔಷಧವಿರಬೇಕೆಂದು “ಹೂಂ” ಆಗುತ್ತೆ ’ ಅಂದೆ
ಅಜ್ಜಿ ಪಕ್ಕದಲ್ಲಿದ್ದ ಹುಡುಗನಿಗೆ ಔಷಧಿ ತರುವಂತೆ ಕಣ್ಸನ್ನೆ ಮಾಡಿತು. ಆ ಹುಡುಗ ಔಷಧಿ ತರಲು ಎದ್ದು ನಡೆದ .
ನಾನು ಅಜ್ಜಿಯ ಪಕ್ಕದಲ್ಲೇ ಜಾಗ ಮಾಡಿಕೊಂಡು ನರಳುತ್ತಾ, ತೂಕಡಿಸುತ್ತಾ ಕೂತು ಕೊಂಡೆ. ಎಚ್ಚರವಾದಾಗ ಅಜ್ಜಿ ಎಲೆ ಅಡಿಕೆ ಚೀಲದಿಂದ ಸ್ವಲ್ಪ ಸುಣ್ಣ ತೆಗೆದು ಕೈಮೇಲೆ ಹಾಕಿಕೊಳ್ಳುತ್ತಾ ಇತ್ತು. ಹುಡುಗ ಕೈಯ ಮರೆಯಲ್ಲಿ ಔಷಧಿ ಹಿಡಿದುಕೊಂಡು ಮುಸಿ ಮುಸಿ ನಗುತ್ತಾ ಇದ್ದ. ಹುಡುಗನಿಂದ ಔಷಧಿ ತೆಗೆದುಕೊಂಡ ಅಜ್ಜಿ ”ಇದನ್ನ ತಿಕ್ಕಿ ನಿನ್ನ ಮೂಗಿಗೆ ಹಿಡಿತೀನಿ ಜೋರಾಗಿ ಉಸಿರು ಎಳ್ಕೋ ಬೇಕು “ ಅಂತ ಹೇಳಿದರು. “ ’ಹೂಂ” ಅಂದೆ. ಅಜ್ಜಿಯ ಅಣತಿಯಂತೆ ಹುಡುಗ ನನ್ನನ್ನು ಅಲ್ಲಾಡದಂತೆ ಗಟ್ಟಿಯಾಗಿ ಹಿಡಿದ.ಯಾಕಪ್ಪಾ ಎಂದು ನಾನು ಯೋಚಿಸುವಷ್ಟರಲ್ಲಿ ಅಜ್ಜಿ ಸುಣ್ಣದೊಡನೆ ಔಷಧವನ್ನು ಅಂಗೈಲಿ ಗಸ ಗಸನೆ ಉಜ್ಜಿ “ ಜೋರ್ ಉಸ್ರೆಳಿ ಉಸ್ರೆಳಿ ” ಎಂದು ಹೇಳುತ್ತಾ ನನ್ನ ಮೂಗಿಗೆ ಅಂಗೈ ಹಿಡಿದೇ ಬಿಟ್ಟಿತು. ನಾನು ಸ್ವಲ್ಪವೂ ಯೋಚಿಸದೆ ಜೋರಾಗಿ ಉಸಿರೆಳೆದೇಬಿಟ್ಟೆ… ’ಅಯ್ಯೋ ನರಕವೇ… ವಾಕರಿಸಿದಂತಾಗಿ ಹಿಂದೆ ಸರಿಯಲು ಪ್ರಯತ್ನಿಸಿದೆ. ಆ ದಾಂಡಿಗ ಹುಡುಗ ಬಿಡಬೇಕಲ್ಲ. ಅಜ್ಜಿ “ ಇನ್ನೊಂದ್ ಸರ್ತಾ ಇನ್ನೊಂದ್ ಸರ್ತಾ ” ಎನ್ನುತ್ತಾ ತನ್ನ ಅಂಗೈಯನ್ನು ಮೂಗಿನ ಹತ್ತಿರವೇ ಹಿಡಿದು ಕೊಂಡಿತ್ತು. ಅಂತೂ ಇಬ್ಬರಿಂದಲೂ ತಪ್ಪಿಸಿಕೊಂಡು ಅಲ್ಲೇ ಕುಕ್ಕರಿಸಿದೆ. ವಾಕರಿಕೆ ಬರುತ್ತಿದ್ದರೂ ತಡೆದುಕೊಂಡು ಮುದುಡಿ ಕುಳಿತೆ. ಅಜ್ಜಿ ಬೆನ್ನು ನೇವುತ್ತಾ “ ಈಗ ಸರಿಹೋಗುತ್ತೆ ಈಗ ಸರಿಹೋಗುತ್ತೆ” ಅನುತ್ತಾ ಇತ್ತು. ೫-೬ ನಿಮಿಷದಲ್ಲಿ ತಲೆ ಹಗುರಾಗಿ ನೋವು ಮಾಯವಾಯ್ತು. ತೂಕಡಿಕೆ ಶುರುವಾಯ್ತು ಸುಖ ನಿದ್ದೆಯೂ ಬಂತು.
ಅಷ್ಟಕ್ಕೂ ಆ ಹುಡುಗ ರೈಲಿನಲ್ಲಿ ಹುಡುಕಿ ತಂದಿದ್ದೇನು? ಅಜ್ಜಿ ಸುಣ್ಣದೊಡನೆ ತಿಕ್ಕಿದ್ದು ಏನು ಅಂತೀರಾ?
’ ತಿಗಣೆ ’

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು