ಸಾವಿರದ ಸಾವಿರ ಕನಸುಗಳು.....


ಕೇಡಿಗ ಮನಸು ಕಾಣುವ ಕನಸಿನಲ್ಲಿ ನಿನ್ನ ನೆನಪುಗಳೆ ಭರಪೂರ ಉಕ್ಕಿ ನನ್ನನ್ನ ಸಂತಸಕ್ಕಿಂತ ಸಂಕಟದಲ್ಲಿ...... ಬಿಕ್ಕಿಬಿಕ್ಕಿ ಅಳುವಂತೆ ಕಾಡುತ್ತದೆ, ಎದೆಗೂಡಿನಲ್ಲಿ ಗೂಡು ಕಟ್ಟಿದ ನಿನ್ನೊಲವಿನ ಹಕ್ಕಿ..... ಅದೇಕೋ ನನ್ನೆದೆಯನ್ನೆ ಕುಕ್ಕಿಕುಕ್ಕಿ ನೋವಿನ ನೆತ್ತರನ್ನ ಉಕ್ಕಿ ಹರಿವಂತೆ ಮಾಡುತ್ತದೆ/ ಕೇದಿಗೆಯ ಘಮವೂ ಮಂದ ಸುರಗಿಯ ಪೋಣಿಸಿ ಸುರಿವ ಹೂಗಳ ಹಾರವೂ..... ಕಳೆದುಕೊಂಡಂತೆ ತನ್ನ ಚಂದ ನೀನನ್ನನ್ನಾವರಿಸಿದ್ದೀಯ, ಅದೇನೆ ಇದ್ದರೂ ನನ್ನುಸಿರ ಪ್ರೇಷಕ ಹೊಮ್ಮಿಸುವ ನೋವಿನ ಕಂಪನದ ಅಲೆಗಳು..... ನಿನ್ನೊಳಗೆ ಅಂತರ್ಧನಾಗಿ ಹೋಗಲಿ ಎಂದು ಸ್ವಪ್ನದಲ್ಲೂ ನಾನು ಶಪಿಸಲಾರೆ// ನಿನ್ನೆದೆಯ ಬೆಚ್ಛನೆಯ ಸಂಚಿತ ಖಾತೆಯಲ್ಲಿ ನಾನಿಟ್ಟಿದ್ದ ಒಲವ ದೀರ್ಘಾವಧಿ ಠೇವಣಿಗೆ.... ಒಂದೆ ಕಂತಿನಲ್ಲಿ ನೀನಿತ್ತಿರುವ ವಿರಹದ ಬಡ್ಡಿಯನ್ನ ಕೂತುಂಡರೂ ಕರಗಿಸಲು ನನಗೆ ಇದೊಂದು ಜೀವಮಾನ ಸಾಲದು!, ಕಾದು ಬಸವಳಿದ ಕಣ್ಣುಗಳದ್ದು ಖಂಡಿತಾ ತಪ್ಪಲ್ಲ ಕಂಬನಿಯನ್ನ ಹಿಡಿದಿಟ್ಟುಕೊಳ್ಳುವುದು..... ಈಗೀಗ ಅದರ ಕೈಯನ್ನೂ ಮೀರಿದ್ದು/ ಅಂಧಕಾರದೊಂದಿಗೆ ಹೊಂದಾಣಿಕೆಯೆ ಬದುಕಾಗಿದೆ.... ಮೌನಮಾತ್ರ ಮನಸಿನ ಮಾತಾಗಿದೆ, ಬಾಳು ಬೋಳಾಗದಿರಲು ಕನಸಿನ ಹಾದಿಯಂದು ತೆರೆದಿರಬೇಕು.... ಅಲ್ಲಿ ನಿರೀಕ್ಷೆಯ ಕಂದೀಲು ಹಿಡಿದು ಮನಸನ್ನಾವರಿಸಿದವರು ಜೊತೆಯಲ್ಲಿ ಹೆಜ್ಜೆ ಹಾಕಲು ಕಾದಿರಬೇಕು// ನೀನಿಲ್ಲದ ಒಂಟಿ ಬಾಳು ಭೀಕರ ನಾನೆ ಸ್ವತಃ ಕಟ್ಟಿಕೊಂಡು ಹೊಕ್ಕಂತಾಗಿದೆ..... ದುರ್ಭರ ದಟ್ಟ ಸಂಕಟದ ಕಾಡು, ನನ್ನೆದೆಯ ಭಾವವೆಲ್ಲ ಪದಗಳಾಗಿ ಹನಿದು..... ಈ ಹಾಡಿನಲ್ಲಿ ಹರಿದು ಬಂದಿದೆ ನೋಡು/ ಕೆಲವೊಮ್ಮೆ ಅನ್ನಿಸುತ್ತೆ ನಿನ್ನ ನಿರ್ಧಾರ ನಿಜವಾಗಲೂ ಸರಿಯಾಗಿಯೆ ಇತ್ತು..... ನನ್ನ ಹೆಗಲೇರಿದ್ದ ಶನಿ ನಿನ್ನನೂ ಆವರಿಸುವ ಮೊದಲೆ ನೀನಿಲ್ಲಿಂದ ಪಾರಾದೆ, ಆದರೆ ಅದೇನೆ ಇದ್ದರೂ ನಾನಂತೂ ಒಳಗೊಳಗೆ ಒಡೆದು ಚೂರಾದೆ.... ಮೌನದ ಚಿಪ್ಪಿನಲ್ಲಿ ಅಡಗಿದ್ದರೂ ನುಚ್ಚುನೂರಾದೆ// ಇಂಗಿ ಹೋದ ಕನಸಿನ ಪಸೆಯ ಕೊನೆಯ ಆರ್ದ್ರತೆಯಲ್ಲೂ ನನಗೆ.... ನಿನ್ನದೆ ಸ್ಪರ್ಶದ ಹುಡುಕಾಟವಿದೆ, ಬೆತ್ತಲೆ ಪಾದಗಳಲ್ಲಿ ನೋವಿನ ಸುಡು ಮರಳ ಮೇಲೆ ಮರುಳನಂತೆ ಹೆಜ್ಜೆ ಹಾಕಲು ನನಗಿರೋದು...... ನಿನ್ನೊಲವಿನ ಓಯಸಿಸ್ನಲ್ಲಿ ದಾಹವಾರಿಸಿಕೊಳ್ಳುವ ತೀರದ ಸುಂದರ ಸುಳ್ಳು ನಿರೀಕ್ಷೆಯ ಜೊತೆಯೊಂದೆ!/ ಮೋಹಕ ಸ್ವಪ್ನಗಳ ನಾವೆಯಲ್ಲಿ ಹುಟ್ಟು ಹಾಕುವ ಹುಚ್ಚಿನಲ್ಲಿ.... ನೀನು ಮರೆತು ಹೋದ ಚಂದದ ಗುಟ್ಟು ಬಹುಷಃ ನಾನೆ!, ಸಾವಿರದ ಸಾವಿರ ಕನಸುಗಳು ಕುಟುಕು ಜೀವ ಹಿಡಿದುಕೊಂಡಿರಲು..... ನಿರೀಕ್ಷೆಯ ಆತ್ಮಬಲವೆ ಕಾರಣ.//

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು