ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Thursday, February 25, 2016

ನೆಹರುಗೊಂದು ಪತ್ರ - ಪಲ್ಲವಿ ರಾವ್

ಪ್ರೀತಿಯ ನೆಹರೂಜಿ,ನೆಮ್ಮದಿಯಾಗಿರಬೇಕಲ್ಲ? ಕಂಗ್ರಾಜುಲೇಷನ್ಸ್.
ಅಂತೂ ಭಾರತದ ಯುವ ಜನತೆಗೆ ದೇಶವೆಂದರೆ ಭೌಗೋಳಿಕ ಇರುವಿಕೆಯೇ ಅರ್ಥಹೀನ, ಇಲ್ಲಿನ ನಂಬಿಕೆಗಳೆಲ್ಲವೂ ಅವೈಜ್ನಾನಿಕ, ಆಚರಣೆಗಳೆಲ್ಲ ತುಚ್ಚ , ಹೆಮ್ಮೆ ಪಡುವಂತದ್ದೂ ಇಲ್ಲೇನೂ ಇಲ್ಲ , ದೇಶವೆಂದರೆ ತಾಯಿ ಅನ್ನುವ ಕಲ್ಪನೆಯೇ ಬುಲ್ಶಿಟ್ ಅನ್ನುವ ಮನೋಭಾವವನ್ನು ನಿಮ್ಮ ಕನಸಿನ ವೈಜ್ನಾನಿಕ ಆಧುನಿಕ ಪಾಶ್ಚಾತ್ಯ ಶಿಕ್ಷಣ ಬಹಳ ಯಶಸ್ವಿಯಾಗಿ ಬಿತ್ತಿದೆ. ನೀವು ಬಹಳವಾಗಿ ಆರಾಧಿಸಿದ ಇತಿಹಾಸ ತಜ್ನರಿಂದ ಬರೆಸಿದ ಇತಿಹಾಸ ಈ ದೇಶದ ತರುಣರಲ್ಲಿ ಸಿನಿಕತೆಯನ್ನು,ದೇಶ ಕಾಯುವ ಸೈನಿಕರ ಬಗ್ಗೆ ತಿರಸ್ಕಾರವನ್ನೂ ಪ್ರಜಾಪ್ರಭುತ್ವದ ಬುನಾದಿಯ ಮೇಲೆ ದಾಳಿ ನಡೆಸಿದವರನ್ನೂ ಆರಾಧಿಸುವ ಮಟ್ಟಕ್ಕೆ ಬೆಳೆಸಿದೆ. ನೀವು ಇದನ್ನೇ ಬಯಸಿದ್ದೀರಿ ಅಲ್ವ? ಪ್ರತಿಯೊಂದನ್ನೂ ಪ್ರಶ್ನಿಸುವ, ತಿರಸ್ಕರಿಸುವ ಎಡಬಿಡಂಗಿ ಮನೋಭಾವವನ್ನೇ ವೈಜ್ನಾನಿಕ ಎಂದು ಅರ್ಥೈಸಿದ್ದವರಿಗೆ ಇಂದಿನ ವಿಶ್ವವಿದ್ಯಾನಿಲಯಗಳ ದಿಕ್ಕುದೆಶೆ ಇಲ್ಲದ ಭವಿಷ್ಯದ ಬಗ್ಗೆ ಕನಸು, ದೇಶದ ಬಗ್ಗೆ ಕಾಳಜಿ ಎರಡೂ ಇಲ್ಲದ ಸಿನಿಕ ಯುವಭಾರತ ಹೆಮ್ಮೆ ತಂದಿರಬೇಕು , ಕಂಗ್ರಾಜ್ಯುಲೇಷನ್ಸ್!
ನೀವು ಮತ್ತು ನಿಮ್ಮ ಕುಟುಂಬದ ಸ್ವತ್ತಾಗಿ ಹೋದ ಪಕ್ಷಕ್ಕೆ ಭಾರತದ ಬಗ್ಗೆ ಪ್ರೀತಿ, ಹೆಮ್ಮೆ ಹುಟ್ಟುವುದಾದರೂ ಹೇಗೆ? ಸದಾ ಪಾಶ್ಚಾತ್ಯ ಚಿಂತನೆ, ಅಲ್ಲಿನ ವಿದ್ಯಾಲಯಗಳ ಓದು, ಅಲ್ಲಿನದೇ ಬದುಕನ್ನು ಕಂಡ ನಿಮ್ಮವರಿಗೆ ಈ ದೇಶ ಬರಿಯ ಮೂಢನಂಬಿಕೆಗಳ , ಜಾತಿಗಳ, ತಾರತಮ್ಯದ ಆಡೊಂಬೊಲವಾಗಿಯೇ ಕಂಡಿತ್ತು. ನೀವೇನೋ ಡಿಸ್ಕವರಿ ಆಫ್ ಇಂಡಿಯ ಬರೆದುಬಿಟ್ಟಿರಿ. ಆದರೆ ನಿಮ್ಮ ಮರಿ ಮಕ್ಕಳಿಗೆ ಅದರ ಕಲ್ಪನೆಯಾದರೂ ಇದೆ ಅಂದು ಕೊಂಡಿದ್ದೀರ? ನೀವು ಅಷ್ಟೆಲ್ಲ ಕಾಳಜಿಯಿಂದ ಜತನವಾಗಿ ಅತ್ಯಂತ ಚಾಣಾಕ್ಶತನದಿಂದ ಅಡೆತಡೆಗಳನ್ನು ನಿವಾರಿಸಿ , ಕಾದಿಟ್ಟ ದೇಶಾಡಳಿತದ ಕಿರೀಟ ಕೈ ತಪ್ಪಿದ ಸಂಕಟದಲ್ಲಿ ನಿಮ್ಮದೇ ವಂಶದ ಕುಡಿ ದೇಶದ್ರೋಹಿಗಳಿಗೂ ಜೈಕಾರ ಹಾಕುತ್ತಾನೆ. ನಮಗವನ ಬಗ್ಗೆ ನಿರೀಕ್ಶೆಗಳೇನೂ ಇಲ್ಲ ಬಿಡಿ. ಎಷ್ಟಾದರೂ ಏನೂ ಬೆಳೆಯದ ಹಿಮದ ಮರುಭೂಮಿಯನ್ನೂ ಬೇರೆ ದೇಶಕ್ಕೆ ಕೊಟ್ಟರೇನೂ ತೊಂದರೆ ಇಲ್ಲ ಅಂದವರಲ್ಲವೆ ನೀವೂ? ನಿಮ್ಮ ವಾರಸುದಾರರು ನಿಮ್ಮ ಜೀನ್ಗಳಿಗೆ ನ್ಯಾಯ ಸಲ್ಲಿಸುತ್ತಿದ್ದಾರೆ ಬಿಡಿ. ಭಾರತದ ಸಾರ್ವಭೌಮತೆ ವಿಚ್ಛಿದ್ರವಾದರೂ ಚಿಂತೆ ಇಲ್ಲ, ಅವರ ಆಡಳಿತ ನಡೆಸಲು ತುಂಡು ಉಳಿದರೆ ಸಾಕು ಅನ್ನುತ್ತ ಭಾರತವನ್ನು ತುಂಡಾಗಿಸಲು ಹೋರಾಡುವವರ ಜತೆ ಧರಣಿ ಕೂರುತ್ತಿದ್ದಾರೆ. ನೀವು ಮಗಳನ್ನು ಪಟ್ಟಕ್ಕೇರಿಸಿದಾಗ ಇದನ್ನೇ ನಿರೀಕ್ಶಿಸಿದ್ದಿರೇನೋ ಅಲ್ವ?
ಸ್ವಂತತ್ರ ಹೋರಾಟಕ್ಕೆ ಪ್ರಾಣ ತೆತ್ತ ಕೋಟ್ಯಾಂತರ ಭಾರತೀಯರ ತ್ಯಾಗವೆಲ್ಲವನ್ನೂ ನಿರ್ಲಕ್ಶಿಸಿ , ಕೇವಲ ನಿಮ್ಮ ಹೆಸರನ್ನೂ, ನಿಮ್ಮ ಮುಂಬರುವ ಪೀಳಿಗೆಯ ಹೆಸರನ್ನೂ ಜನಮಾನಸದಲ್ಲಿ ಬಿತ್ತಲು , ದೇಶದ ತೆರಿಗೆ ಹಣದಲ್ಲಿ ಕಟ್ಟಲ್ಪಟ್ಟ ಪ್ರತಿ ರಾಷ್ಟೀಯ ಆಸ್ತಿಗೂ ಅದು ನಿಮ್ಮ ಸ್ವಂತ ಆಸ್ತಿಯೇನೋ ಅನ್ನುವಂತೆ ನಾಮಕರಣ ಮಾಡಿದಿರಿ. ದೇಶದ ಬಗ್ಗೆ ,ದೇಶದ ಅಖಂಡತೆಯ ಬಗ್ಗೆ ಅರಿವೇ ಇಲ್ಲದ ನಿಮ್ಮ ಮೊಮ್ಮಗನ ಹೆಂಡತಿಗಂತೂ ಇಲ್ಲಿನ ಪಾಸ್ಪೋರ್ಟ್ ಬೇಡವಾದರೂ ವಿಮಾನ ನಿಲ್ದಾಣಕ್ಕೆ ನಿಮ್ಮ ಕುಟುಂಬದ ಹೆಸರು ಬೇಕೇ ಬೇಕು. ಅಂತ ಕುಟುಂಬ ಶ್ರದ್ದೆ! ನಿಮ್ಮದೇ ಹೆಸರಿನ ವಿಶ್ವವಿದ್ಯಾನಿಲಯದಲ್ಲಿ , ನಿಮ್ಮ ಮರಿಮಗ ನೀವು( ಹೇಗಿದ್ದರೂ ಕೋಟ್ಯಾಂತರ ಇತರರನ್ನು ಯಶಸ್ವಿಯಾಗಿ ಜನರ ಮಧ್ಯದಿಂದ ಮರೆಸಿಬಿಟ್ಟಿದ್ದೀರಲ್ಲ!) ಮಧ್ಯರಾತ್ರಿ ಭಾರತಕ್ಕೆ ತಂದಿದ್ದು ಸ್ವಾತಂತ್ರ್ಯವೇ ಅಲ್ಲ, ಬಿಡುಗಡೆ ಬೇಕು ಅಂತ ವಾದಿಸುತ್ತಿದ್ದಾನೆ, ಇಡಿಯ ದೇಶದ ಪವರ್ ಆಫ್ ಅಟಾರ್ನಿಯನ್ನು ಶಾಶ್ವತವಾಗಿ ಕುಟುಂಬಕ್ಕೆ ಸೇರಿಸುವ ಪ್ಲಾನ್ ಮಾಡಿದ ನಿಮಗೆ , ಮರಿಮಗ ಸ್ವತಂತ್ರ ಭಾರತದ ಕಲ್ಪನೆಯನ್ನೇ ನಿರಾಕರಿಸುವ ಬಗ್ಗೆ ಹೊಳೆದಿರಲಿಕ್ಕಿಲ್ಲ ಅಲ್ವ? ಅಥವ ನಿಮ್ಮ ಪ್ರಕಾರ ರಾಷ್ಟ್ರವನ್ನು , ಸಾರ್ವಬೌಮತೆಯ ಕಲ್ಪನೆಯನ್ನೂ ನಿರಾಕರಿಸುವುದು ಇದೆಲ್ಲ ಮುಂದುವರೆದ , ವೈಜ್ನಾನಿಕ ಮನೋಭಾವದ ಸಂಕೇತವೇ?
ನೆಹರೂಜಿ, ಸಮಾಜವಾದದ ಮುಸುಕಿನಲ್ಲಿ , ಜಾತ್ಯತೀತತೆಯ ಹೆಸರಿನಲ್ಲಿ ಭಾರತವನ್ನೂ ಸದಾ ಜಾತಿಗಳ ಹೆಸರಿನಲ್ಲಿ, ವರ್ಗಗಳ ಹೆಸರಿನಲ್ಲಿ ಒಡೆಯುವ, ತನ್ಮೂಲಕ ಸದಾ ನಿಮ್ಮ ಕುಟುಂಬ ಅರ್ಥಾತ್ ಪಕ್ಶ ಸದಾ ಅಧಿಕಾರದಲ್ಲಿರುವ ನಿಮ್ಮ ಮಾಸ್ಟರ್ ಪ್ಲಾನ್ ಅನ್ನು ಕುಟುಂಬ ಯಶಸ್ವಿಯಾಗಿಯೇ ಆಚರಿಸುತ್ತಿದೆ. ಜಾತಿಗಳ ಲೆಕ್ಕಾಚಾರವೆಲ್ಲ ಮುಗಿದ ಮೇಲೆ ಅವರು ನಿಮ್ಮ ಮೇಲ್ಪಂಕ್ತಿಯನ್ನೇ ಅನುಸರಿಸಿ ಕೋಮುಗಳಲ್ಲಿ ತಾರತಮ್ಯದ, ಪ್ರತ್ಯೇಕತೆಯ ವಿಷಬೀಜಗಳನ್ನು ಯಶಸ್ವಿಯಾಗಿ ಬಿತ್ತಿ ಹುಲುಸಾಗಿ ಪಸಲನ್ನೂ ಪಡೆಯುತ್ತಿದ್ದರು. ಆದರೀಗ ಅದು ಅವರ ನಿಯಂತ್ರಣವನ್ನೂ ಮೀರಿ ದಾವನಲದಂತೆ ಆವರಿಸಿ ದೇಶದ ಕತ್ತು ಹಿಸುಕುತ್ತಿದೆ. ನಿಮ್ಮ ಪ್ರತ್ಯೇಕತೆಯ, ನೆಹರುವಿಯನ್ ಡಿವೈಡ್ ಅಂಡ್ ರೂಲ್ ಆಡಳಿತ ಅದೆಷ್ಟು ಯಶಸ್ವಿಯಾಗಿ ದೇಶದ ಯುವಜನತೆಯನ್ನು ನೇಣಿಗಟ್ಟುತ್ತಿದೆ ನೋಡಿದಿರ? ನಿಮ್ಮ ಯೋಚನೆಯ ಯಶಸ್ಸಿಗೆ ಎಂಥ ಅದ್ಭುತ ಫಲಿತಾಂಶ ಅಲ್ಲವೆ!
ಇದೆಲ್ಲ ಬರೆಯುತ್ತಿರಲಿಲ್ಲ ನೆಹರೂಜಿ, ಆದರೆ ನಿನ್ನೆ ನಿಮ್ಮದೇ ಪಕ್ಷದ ಅಪ್ಪಣೆಯ ಮೇರೆಗೆ ’ತೀಸ್ತಾ ಸೆಟ್ಲವಾದ್ ಅನ್ನುವ ಮಹಿಳೆ ೪ ನೆಯ ತರಗತಿಗೆ ಪಠ್ಯಪುಸ್ತಕ ಬರೆದಿದ್ದಾಳೆ. ಅದರಲ್ಲಿರುವುದು ಸಿಯಾಚಿನ್ನಲ್ಲಿ ಮಡಿದ ಯೋಧರ ಬಗ್ಗೆ ಹೆಮ್ಮೆಯಲ್ಲ ಬದಲಿಗೆ ಎಳೆಯ ಮನಸ್ಸುಗಳಲ್ಲಿ ಭಾರತ ಅನ್ನುವ ದೇಶದ ಬಗ್ಗೆ ಎಷ್ಟು ಸಾಧ್ಯವೋ ಅಷ್ಟು ಆಕ್ರೋಶವನ್ನೂ , ಅಸಮಧಾನವನ್ನೂ ಅಸಹ್ಯವನ್ನೂ ಮೂಡಿಸುವ ಬರಹಗಳು. ನೀವಿದನ್ನು ಬಯಸಿದ್ದೀರ? ತನ್ನದೇ ಮಾತೃಭೂಮಿಯ ಬಗ್ಗೆ ಹೀಯಾಳಿಕೆಯನ್ನೂ, ಇತಿಹಾಸದ ಬಗ್ಗೆ ಕೀಳರಿಮೆಯನ್ನೂ, ತನ್ನೆಲ್ಲ ಪರಂಪರೆಯ ಬಗ್ಗೆ ಅಸಹ್ಯವನ್ನೂ ಎಳೆಯ ಮನಸ್ಸುಗಳಲ್ಲಿ ಮೂಡಿಸುವ , ತನ್ಮೂಲಕ ಚಿಗುರಿನಲ್ಲೇ ದೇಶದ ಬಗ್ಗೆ ಪ್ರೀತಿ ಹೆಮ್ಮೆ ಕಾಳಜಿಯನ್ನೂ ಚಿವುಟಿ ಹಾಕುವ ಇಂತಹ ನತದೃಷ್ಟ ಉದಾಹರಣೆ ವಿಶ್ವದಲ್ಲೇಲ್ಲೂದೊರಕುವುದಿಲ್ಲ. ನಿಮಗೆ ನಿಮ್ಮ ಕುಟುಂಬಕ್ಕೆ ಈ ದೇಶ ಜನ್ಮ ನೀಡಿದ ಒಂದೇ ತಪ್ಪಿಗೆ ಇಂತಹ ಮಾತೃಘಾತುಕತನವನ್ನು ಅದೆಷ್ಟು ಯಶಸ್ವಿಯಾಗಿ ಇಷ್ಟೊಂದು ವರ್ಷ ನಡೆಸಿ ಬಿಟ್ಟಿರಲ್ಲ? ಇದಕ್ಕೇ ನೀವು ವಿದೇಶಗಳಲ್ಲಿ ವ್ಯಾಸಂಗ ನಡೆಸಿದ್ದೆ? ಜೈಲು ವಾಸ ಅನುಭವಿಸಿದ್ದೆ? ನೆಹರೂಜಿ, ನೆನಪಿಟ್ಟುಕೊಳ್ಳಿ ನಿಮ್ಮ ಸ್ವಜನ ಪ್ರೀತಿಯನ್ನೂ, ಸಂಪತ್ತನ್ನು ಕೊಳ್ಳೆ ಹೊಡೆದು ವೈಯುಕ್ತಿಕ ತಿಜೋರಿ ತುಂಬಿಸಿಕೊಳ್ಳುವ ಹವ್ಯಾಸಗಳನ್ನೂ, ಸದಾ ಉತ್ತಮ ಚಿಂತನೆಗಳಿಗೆ ಪಶ್ಚಿಮದತ್ತ ಮುಖ ಮಾಡುವ ಆತ್ಮನ್ಯೂನ್ಯತೆಯ ಹಳವಂಡಗಳನ್ನೂ ನನ್ನ ದೇಶ ಕ್ಷಮಿಸಿ ಬಿಡುತ್ತಿತ್ತು. ಆದರೆ, ಕೋಟ್ಯಾಂತರ ಎಳೆಯ ಮನಸ್ಸುಗಳಿಗೆ ದೇಶದ ವಿರುದ್ದ ಪ್ರಚೋದನೆ ನೀಡುವ, ರಾಷ್ಟ್ರದ ಕಲ್ಪನೆಯೇ ಅಸಹ್ಯ, ಕೀಳರಿಮೆ ಹಾಸ್ಯಾಸ್ಪದ ಅನ್ನಿಸುವಂತೆ ಮಾಡುವ ಈ ನಿಮ್ಮ ದೇಶವಿರೋಧಿ ಶಿಕ್ಷಣವನ್ನು , ಕೇವಲ ಒಂದು ಕುಟುಂಬದ ಅಧಿಕಾರ ದಾಹಕ್ಕೆ ಇಡಿಯ ದೇಶದ ಮಕ್ಕಳಿಗೆ ರಾಷ್ಟ್ರದ್ರೋಹೀ ಚಿಂತನೆಯ ವಿಷವುಣಿಸುವ ನಿಮ್ಮ ಪಕ್ಶದ ಮನಸ್ಥಿತಿಯನ್ನು ಕ್ಷಮಿಸಲು ಸಾಧ್ಯವೇ ಇಲ್ಲ. ನೀವೇ ತಿರುಚಿದ ಇತಿಹಾಸ ವರ್ತಮಾನದಲ್ಲಿ ನಿಮಗೆ ಪಾಠ ಕಲಿಸುವ ದಿನಗಳು ದೂರವಿಲ್ಲ. ನೀವದಲ್ಲೇ ಇರಿ, ದಯವಿಟ್ಟು ಮತ್ತೆಂದೂ ಈ ದೇಶದಲ್ಲಿ ಹುಟ್ಟಬೇಡಿ. ಇತಿ, ರೋಮಿಲಾ ಥಾಪರ್ ಓದಿದ ನಂತರವೂ ದೇಶವನ್ನು ಪ್ರೀತಿಸುವ ದೇಶವಾಸಿ .


ಪಲ್ಲವಿ ರಾವ್

No comments:

Post a Comment