Friday, April 11, 2014

ತಪ್ಪದೇ ಮತ ಚಲಾಯಿಸಿ.. ಭಾರತದ ಪ್ರಜಾಸಾರ್ವಭೌಮತ್ವವನ್ನು ಕಾಪಾಡಿ.

ಈ ಹಿಂದೆ ಕರ್ನಾಟಕದಲ್ಲಿ ಜೆಡಿಸ್, ಬಿಜೆಪಿಗೂ ಯಡಿಯೂರಪ್ಪನವರಿಗೆ ಮೋಸ ಮಾಡಿತೆಂದು ಗೋಳಿಟ್ಟು ಮಾಡಿಕೊಂಡ 'ವ್ಯಕ್ತಿ ಗತ' ಪ್ರಚಾರಕ್ಕೆ ಮರುಳಾಗಿ ಮತ ಚಲಾಯಿಸಿದ ಜನತೆ ಮುಂದಿನ ೫ ವರುಷಗಳ ಕಾಲ ಎಲ್ಲ ವಿಧದ ಆಟೋಪಗಳನ್ನೂ, ಗಣಿ- ಭೂಮಿ- ಧರ್ಮ ಹೆಸರಿನಲ್ಲಿ ಹಾಡುಹಗಲೇ ಕೊಳ್ಳೆ ಹೊಡೆಯುವುದನ್ನು ಕಣ್ಣಾರೆ ಕಂಡು ಮತವಿಟ್ಟ ಬೆರಳು ಕಚ್ಚಿಕೊಂಡರು... ಇದೀಗ ಕೇಂದ್ರದಲ್ಲೂ ಅದೇ ''ವ್ಯಕ್ತಿಗತ'' ಧೋರಣೆಯ ಜಾಹೀರಾತುಗಳು!


* ನಮ್ಮ ಮತ ಯಾವಾಗಲೂ ನಮ್ಮ 'ಕ್ಷೇತ್ರಗತ' ವಾಗಿರಬೇಕು.
* ನಮ್ಮ ಕ್ಷೇತ್ರವನ್ನು ಪ್ರತಿನಿಧಿಸಲು ಯಾರು ಸಮರ್ಥರೋ ಅವರನ್ನು ನಾವು ಗೆಲ್ಲಿಸಬೇಕು.
* ನಮ್ಮ ಕ್ಷೇತ್ರದ ಬೇಕಾದ ಸಂಪನ್ಮೂಲಗಳನ್ನು ತರುವ, ಕುಂದು ಕೊರತೆಗಳನ್ನು ಆಲಿಸುವ, ಪರಿಹರಿಸುವ, ಬೇಕಿದ್ದನ್ನು ಮುಂದಾಲೋಚಿಸುವ ಪ್ರತಿನಿಧಿ ಬೇಕಿರುವುದು.
* ಜನತಂತ್ರ ವ್ಯವಸ್ತೆ ಇರುವುದು ಹಲವರಲ್ಲಿ, ಒಬ್ಬನಲ್ಲಿರುವುದು ಸರ್ವಾಧಿಕಾರ. ವರ್ತಮಾನದಲ್ಲಿ ಲಿಬಿಯಾ, ಇರಾಕ್, ಸಿರಿಯಾ, ಉಕ್ರೇನ್ ಇತ್ಯಾದಿ ದೇಶಗಳ ಅರಾಜಕತೆಯನ್ನು ಒಮ್ಮೆ ನೆನೆಯಲೇಬೇಕು ನಾವು ( ಖಂಡಿತ ತುರ್ತ ಪರಿಸ್ತಿತಿಯ ಭಾರತವನ್ನು ಕೂಡ )
* ಕಾಂಗ್ರೆಸ್ಸು, ಬಿಜೆಪಿ, ಜೆಡಿಸ್, ಆಪ್ ಕಡೆಗೆ ಪಕ್ಷೇತರ ಯಾರಾದರು ಸರಿ ನಮ್ಮ ಕ್ಷೇತ್ರಕ್ಕೆ ದುಡಿಯುವವನ್ನು ಆಯ್ಕೆ ಮಾಡಿ... ಖಂಡಿತ ಆಯ್ಕೆಗೊಂಡ ಆ ಅರ್ಹ ಪ್ರತಿನಿಧಿ ಅವರುಗಳ ಯೋಗ್ಯ ನಾಯಕನನ್ನು ಆರಿಸುತ್ತಾನೆ..ಇದುವೇ ನೈಜ ಜನತಂತ್ರ ವ್ಯವಸ್ತೆ.
ತಪ್ಪದೇ ಮತ ಚಲಾಯಿಸಿ.. ಭಾರತದ ಪ್ರಜಾಸಾರ್ವಭೌಮತ್ವವನ್ನು ಕಾಪಾಡಿ.

- ರಾಜೇಂದ್ರ ಪ್ರಸಾದ್


Sunday, April 6, 2014

ಪ್ರಾರ್ಥನೆ ಎಂದರೆ ಆತ್ಮದ ನಿವೇದನೆ - ಶ್ರೀವತ್ಸ ಜೋಶಿ

"ಪ್ರಾರ್ಥನೆ ಎಂದರೆ ಬೇಡಿಕೆ ಅಲ್ಲ. ಪ್ರಾರ್ಥನೆ ಎಂದರೆ ಆತ್ಮದ ನಿವೇದನೆ. ನಮ್ಮಲ್ಲಿನ ದೈನ್ಯಭಾವವನ್ನು ದಿನದಿನವೂ ಒಪ್ಪಿಕೊಳ್ಳುವ ರೀತಿ. ಪ್ರಾರ್ಥನೆಯಲ್ಲಿ ಪದಗಳಿಲ್ಲದಿದ್ದರೂ ಸರಿಯೇ, ಹೃದಯ ಇರಬೇಕು. ಹೃದಯವೇ ಇಲ್ಲದೆ ಬರಿ ಪದಗಳ ಅಬ್ಬರವು ಪ್ರಾರ್ಥನೆ ಎನಿಸದು" ಎಂದಿದ್ದ ಮಹಾತ್ಮ ಗಾಂಧೀಜಿಯವರು ತಮ್ಮ ಜೀವನದುದ್ದಕ್ಕೂ ಪ್ರಾರ್ಥನೆಗೆ ಅತ್ಯಂತ ಹೆಚ್ಚು ಮಹತ್ವ ಕೊಟ್ಟವರು. ಪ್ರಾರ್ಥನೆಯ ಅತಿದೊಡ್ಡ ಪ್ರಯೋಜನವೆಂದರೆ ಮನಸ್ಸಿನ ಏಕಾಗ್ರತೆಗೆ ಅನುಕೂಲ ಆಗುವುದು. ಶಾಲೆಗಳಲ್ಲಿ ಬೆಳಗಿನ ಹೊತ್ತು ಪ್ರಾರ್ಥನೆಯ ನಂತರವೇ ಪಾಠಪ್ರವಚನ ಆರಂಭ ಎಂಬ ಕ್ರಮ ಆದಿಕಾಲದಿಂದಲೂ ಬಂದಿರುವುದು ಅದೇ ಕಾರಣಕ್ಕೆ. ವಿಪರ್ಯಾಸವೆಂದರೆ ಈಗ ಢೋಂಗಿ ಜಾತ್ಯತೀತರು ಪ್ರಾರ್ಥನೆಯ ನಿಜವಾದ ಮಹತ್ವವನ್ನರಿಯದೆ, ಅದಕ್ಕೆ ಧರ್ಮ-ಜಾತಿ-ಮತಗಳ ಲೇಪ ಹಚ್ಚಿರುವುದರಿಂದ ಎಷ್ಟೋಕಡೆ ಶಾಲೆಗಳಲ್ಲಿ ಪ್ರಾರ್ಥನೆಯೇ ಇಲ್ಲವಾಗಿದೆ

ನಾನು ಕಲಿತ ಪ್ರಾಥಮಿಕ ಶಾಲೆಯಲ್ಲಿ ವಾರದ ಆರು ದಿನಗಳಲ್ಲಿ ಒಂದೊಂದು ದಿನ ಒಂದೊಂದು ಪ್ರಾರ್ಥನೆ ಹಾಡುವ ಕ್ರಮವಿತ್ತು. ಸೋಮವಾರದ ಪ್ರಾರ್ಥನೆ "ಸ್ವಾಮಿದೇವನೆ ಲೋಕಪಾಲನೆ..." ನಾವು ಹಾಡುತ್ತಿದ್ದದ್ದು (ಬಹುಶಃ ಹೆಚ್ಚಿನೆಲ್ಲ ಶಾಲೆಗಳಲ್ಲೂ ಇದ್ದದ್ದು) ಸ್ಕೂಲ್ ಮಾಸ್ಟರ್ ಚಲನಚಿತ್ರದಲ್ಲಿ ಅಳವಡಿಸಿಕೊಳ್ಳಲಾದ ಎರಡು ಚರಣಗಳಷ್ಟೇ ಇರುವ ಹಾಡು. ಆದರೆ ಮೂಲದಲ್ಲಿ ಇದು ಸೋಸಲೆ ಅಯ್ಯ ಶಾಸ್ತ್ರಿಗಳು (1854-1934) ಎಂಬ ವಿದ್ವಾಂಸರು ರಚಿಸಿದ ಎಂಟು ಚರಣಗಳಿರುವ ಒಂದು ಸುಂದರವಾದ, ಅರ್ಥಗರ್ಭಿತ ಗೀತೆ. ನಮ್ಮೆಲ್ಲರ ಬಾಳಿಗೆ ಬೆಳಕು ನೀಡುವ ಸೂರ್ಯನ ಸ್ತುತಿ. "ಸರ್ವರಿಗೊಂದೇ ಸೂರ್ಯನಕಣ್ಣು ವಿಧವಿಧ ಸಸ್ಯಕೆ ಒಂದೇ ಮಣ್ಣು" ಎಂಬ ಕವಿವಾಣಿಯಂತೆ ಈ ಜಗಕ್ಕೆಲ್ಲ ಒಬ್ಬನೇ ಸೂರ್ಯ. ಬೆಳಕು ನೀಡುವ ಆತನಿಗೆ ನಾವೆಲ್ಲರೂ ಏಕಪ್ರಕಾರವಾಗಿ ಕೃತಜ್ಞರಾಗಿರುವುದರಲ್ಲಿ ತಪ್ಪೇನಿದೆ?

ಸೋಸಲೆ ಎಂದರೆ ಮೈಸೂರಿನ ಪಕ್ಕ ತಿರುಮಕೂಡಲು ನರಸೀಪುರದ ಒಂದು ಹಳ್ಳಿ. ಅಲ್ಲಿ ಜನಿಸಿದ ಅಯ್ಯ ಶಾಸ್ತ್ರಿಗಳು ಪ್ರಾರಂಭಿಕ ಶಿಕ್ಷಣವನ್ನು ಮನೆಯಲ್ಲಿಯೇ ಪಡೆದು ನಂತರ ಮೈಸೂರಿನಲ್ಲಿ ವ್ಯಾಕರಣ, ತರ್ಕ, ಅಲಂಕಾರಾದಿ ಶಾಸ್ತ್ರಾಧ್ಯಯನ ನಡೆಸಿದರು. ಸಾಹಿತ್ಯವಷ್ಟೇ ಅಲ್ಲದೆ ಚಿತ್ರಕಲೆ, ಸಂಗೀತದಲ್ಲೂ ಪರಿಣತಿ ಗಳಿಸಿದರು. ಅವರು ಸುಮಾರಷ್ಟು ಸಾಹಿತ್ಯಕೃತಿಗಳನ್ನು ರಚಿಸಿದ್ದಾರಾದರೂ ಕನ್ನಡಜನಮಾನಸದಲ್ಲಿ ಅಜರಾಮರವಾಗಿ ಉಳಿದದ್ದು ಈ ಪ್ರಾರ್ಧನೆಗೀತೆ.

“ಸ್ವಾಮಿ ದೇವನೆ ಲೋಕ ಪಾಲನೆ...” ಛಂದೋಬದ್ಧವಾಗಿ ರಚಿತವಾದ ಪದ್ಯ. ಮಲ್ಲಿಕಾಮಾಲೆ ಎಂಬ ಛಂದಸ್ಸು. ಒಂದೊಂದು ಸಾಲಿನಲ್ಲಿ 3,4,3,4,3,4,3,4 ಮಾತ್ರೆಗಳ ಗಣಗಳು. ಜನಪ್ರಿಯ ಶಾಲಾ ಪದ್ಯಗಳಾದ ’ನಾವು ಎಳೆಯರು ನಾವು ಗೆಳೆಯರು ಹೃದಯ ಹೂವಿನ ಹಂದರ...’, ’ಭಾರತಾಂಬೆಯೆ ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೇ...’ ಮುಂತಾದವು ಕೂಡ ಇದೇ ಲಯದಲ್ಲಿರುವವು. ಆದಿಪ್ರಾಸವೂ ಇರುವುದರಿಂದ (ಒಂದು ಚರಣದಲ್ಲಿ ಪ್ರತಿ ಸಾಲಿನ ಎರಡನೇ ಅಕ್ಷರವು ಒಂದೇ ವ್ಯಂಜನದಿಂದ ಆಗಿರುವುದು) ಕಂಠಪಾಠ ಮಾಡುವುದಕ್ಕೆ ಅನುಕೂಲ.

ಈಗ ನೀವು ಮತ್ತೊಮ್ಮೆ ನಿಮ್ಮ ಶಾಲಾದಿನಗಳನ್ನು ನೆನಪಿಸಿಕೊಳ್ಳುತ್ತ, ಶಾಲೆಯಲ್ಲಿ ಪ್ರಾರ್ಥನೆ ಮಾಡುತ್ತಿದ್ದ ಕ್ಷಣಗಳನ್ನು ಕಲ್ಪಿಸಿಕೊಳ್ಳುತ್ತ ‘ಸ್ವಾಮಿದೇವನೆ ಲೋಕಪಾಲನೆ...’ ಪದ್ಯವನ್ನು ರಾಗವಾಗಿ ಹಾಡಬಯಸುತ್ತೀರಾದರೆ, ಕಂಠಪಾಠ ಮಾಡಬಯಸುತ್ತೀರಾದರೆ ಪದ್ಯದ ಪೂರ್ಣಸಾಹಿತ್ಯ ಇಲ್ಲಿದೆ:

ಸ್ವಾಮಿದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೇ
ಪ್ರೇಮದಿಂದಲಿ ನೋಡು ನಮ್ಮನು ತೇ ನಮೋಸ್ತು ನಮೋಸ್ತುತೇ
ನೇಮಿಸೆಮ್ಮೊಳು ಧರ್ಮಕಾರ್ಯವ ತೇ ನಮೋಸ್ತು ನಮೋಸ್ತುತೇ
ಕ್ಷೇಮದಿಂದಲಿ ಪಾಲಿಸೆಮ್ಮನು ತೇ ನಮೋಸ್ತು ನಮೋಸ್ತುತೇ || ೧ ||

ದೇವ ದೇವನೆ ಹಸ್ತ ಪಾದಗಳಿಂದಲೂ ಮನದಿಂದಲೂ
ನಾವು ಮಾಡಿದ ಪಾಪವೆಲ್ಲವ ಹೋಗಲಾಡಿಸು ಬೇಗನೆ
ಕಾವರಿಲ್ಲವು ನಿನ್ನ ಬಿಟ್ಟರೆ ಸೂರ್ಯನೇ ಜಗದೀಶನೇ
ಜೀವಕೋಟಿಯು ನಿನ್ನ ಈ ಬೆಳಕಿಂದ ಜೀವಿಪುದಲ್ಲವೆ || ೨ ||

ರಾತ್ರೆನಿದ್ದೆಯ ಗೈವ ಕಾಲದಿ ನೀನೆ ನಮ್ಮನು ಕಾದೆಯೈ
ಮಿತ್ರನೆಂಬುವ ನಾಮಧೇಯವು ಸತ್ಯವಾಯಿತು ನಿನ್ನೊಳು
ಸ್ತೋತ್ರ ಮಾಡುವ ಹಾಗೆ ನಿನ್ನನ್ನು ಹಕ್ಕಿಗಳ್ ದನಿಗೈವವೈ
ಚಿತ್ರಭಾನುವೆ ನೋಡಿ ನಿನ್ನನದೆಲ್ಲಿ ಪೋದುದೊ ಕತ್ತಲೆ || ೩ ||

ಉತ್ತಮೋತ್ತಮ ನಿನ್ನ ಪಾದದ ಭಕ್ತಿಯೇ ಸ್ಥಿರವಲ್ಲವೇ
ವಿತ್ತವೆಂಬುದು ಗಾಳಿಯಲ್ಲಿಹ ದೀಪದಂದದಿ ಚಂಚಲ
ಮತ್ತರಾಗುತ ಬಿಟ್ಟು ನಿನ್ನನು ಕೆಟ್ಟ ಯೋಚನೆ ಗೈಯದಾ
ಚಿತ್ತವಂ ನಮಗಿತ್ತು ರಕ್ಷಿಸು ಪದ್ಮನಾಭ ಸುರೇಶನೇ || ೪ ||

ಆಡುವಾಗಲು ನಾವು ಭೋಜನ ಮಾಡುವಾಗಲು ಸರ್ವದಾ
ನೋಡಿ ನೀ ದಯದಿಂದ ನಮ್ಮನು ಪಾಲಿಸೈ ಭಗವಂತನೇ
ಬೇಡಿಕೊಂಬೆವು ನಮ್ಮ ದೇಹಕೆ ಸೌಖ್ಯವಂ ಬಲ ಪುಷ್ಟಿಯಂ
ನೀಡು ನಿನ್ನಯ ಪಾದಭಕ್ತಿಯನೆಂದಿಗೂ ಬಿಡಲಾರೆವು || ೫ ||

ನಿನ್ನ ದರ್ಶನಗೈವ ನೇತ್ರದ ಜನ್ಮ ಸಾರ್ಥಕವಲ್ಲವೇ
ನಿನ್ನ ಪೂಜಿಪ ಹಸ್ತವೇ ಬಲುದೊಡ್ಡದಲ್ಲವೆ ದೇವನೇ
ನಿನ್ನ ನಾಮವ ಪೇಳ್ವ ನಾಲಗೆ ಧನ್ಯವಲ್ಲವೆ ಸರ್ವದಾ
ನಿನ್ನ ಜಾನಿಪ ಚಿತ್ತವೃತ್ತಿಯೆ ಯೋಗ್ಯವಲ್ಲವೆ ಲೋಕದಿ || ೬ ||

ನೀನೆ ತಾಯಿಯು ನೀನೆ ತಂದೆಯು ನೀನೆ ನಮ್ಮೊಡನಾಡಿಯೂ
ನೀನೆ ಬಂಧುವು ನೀನೆ ಭಾಗ್ಯವು ನೀನೆ ವಿದ್ಯೆಯು ಬುದ್ಧಿಯೂ
ನೀನು ಪಾಲಿಸದಿದ್ದರೆಮ್ಮನು ಬೇರೆ ಪಾಲಿಪರಿಲ್ಲಲೈ
ದೀನಪಾಲನೆ ನಿನ್ನಧೀನದೊಳಿರ್ಪನಮ್ಮನು ಪಾಲಿಸೈ || ೭ ||

ಶ್ರೀಮುಕುಂದನೆ ಗಾಳಿಯಲ್ಲಿಯು ನೀರಿನಲ್ಲಿಯು ನೀನಿಹೇ
ಭೂಮಿಯಲ್ಲಿ ಯಮಗ್ನಿಯಲ್ಲಿಯು ಬಾನಿನಲ್ಲಿಯು ನೀನಿಹೆ
ರಾಮನೂ ನರಸಿಂಹನೂ ಪರಮಾತ್ಮ ಕೃಷ್ಣನು ನೀನೆಯೇ
ನೀ ಮಹಾತ್ಮನು ನಮ್ಮ ತಪ್ಪುಗಳೆಲ್ಲ ಮನ್ನಿಸಿ ಪಾಲಿಸೈ || ೮ ||

* * *
’ಸ್ಕೂಲ್ ಮಾಸ್ಟರ್’ ಚಿತ್ರದಲ್ಲಿನ ‘ಸ್ವಾಮಿ ದೇವನೆ ಲೋಕಪಾಲನೆ...’ ಇಲ್ಲಿದೆ. ಕಣಗಾಲ್ ಪಭಾಕರ ಶಾಸ್ತ್ರಿಯವರು ಮೂಲ ಹಾಡಿನಿಂದ ಕೆಲವು ಸಾಲುಗಳನ್ನು ಎರವಲು ಪಡೆದು, ಮತ್ತೆರಡು ಸಾಲುಗಳನ್ನು ಸೇರಿಸಿ ಮಾಡಿದ ರಚನೆಯಿದು. ಟಿ.ಜಿ.ಲಿಂಗಪ್ಪ ಅವರು ಸಂಗೀತ ನಿರ್ದೇಶಿಸಿ ಸಂಗಡಿಗರೊಂದಿಗೆ ಹಾಡಿದ್ದಾರೆ.
https://www.youtube.com/watch?v=zhIu_VjlTNQ

ಶ್ರೀ ಶ್ರೀವತ್ಸ ಜೋಶಿ


Friday, April 4, 2014

ಇವತ್ತು ದೇವರ ದಾಸಿಮಯ್ಯನ ಹುಟ್ಟುದಿನ.- ರಾಜೇಂದ್ರ ಪ್ರಸಾದ್

ಇವತ್ತು ದೇವರ ದಾಸಿಮಯ್ಯನ ಹುಟ್ಟುದಿನ...
ಆದ್ಯ ವಚನಕಾರ ದೇವರ ದಾಸಿಮಯ್ಯ, 12ನೇ ಶತಮಾನದ ವಚನ ಚಳುವಳಿಯ ಮುನ್ನಾ ನೂರು ವರ್ಷಗಳ ಹಿಂದೆಯೇ ವಚನಗಳನ್ನು ಕಟ್ಟಿದವರು.. ಪತ್ನಿ ದುಗ್ಗಳೆಯೊಂದಿಗೆ ಅನ್ಯೋನ್ಯ ದಾಂಪತ್ಯದೊಂದಿಗೆಸೀರೆ ನೇಯುವ ನೇಕಾರಿಕೆಯ ಮಾಡುತ್ತಾ
ಮುಂದೆ ಬಸವಾದಿ ಶರಣರಿಂದ 'ನೆರೆ ನಂಬೋ ನೆರೆ ನಂಬೋ ದಾಸ-ದುಗ್ಗಳೆಯಂತೆ'
ಎಂದು ಹಾಡಿಸಿಕೊಂಡ ಮಹಾನುಭಾವಿ..
ತಾನೇ ನೇಯ್ದು, ಉಟ್ಟ ಉಡುಗೆಯನ್ನು ಶಿವನಿಗೆ ದಾನಕೊಟ್ಟು 'ತವನಿಧಿಯನ್ನು' ಪಡೆದರೆಂಬುದು ದಂತಕಥೆ.
ದೇವರ ದಾಸಿಮಯ್ಯನನ್ನು ಕುರಿತು ಬ್ರಹ್ಮಶಿವ, ಹರಿಹರ,ರಾಘವಾಂಕ, ಭೀಮಕವಿ, ವಿರೂಪಾಕ್ಷ ಪಂಡಿತ, ಸಿದ್ದ ನಂಜೇಶ ಮುಂತಾದ ಕನ್ನಡ ಕವಿಕೃತಿಗಳಲ್ಲಿ ಅಲ್ಲದೇ
ಕ್ರಿ.ಶ.1148 ರ ಗೊಬ್ಬೂರಿನ ಶಾಸನ, ಕ್ರಿ.ಶ.1167ರ ಚಿಕ್ಕಮುದನೂರಿನ ಶಾಸನ, ಕ್ರಿ.ಶ.1200 ರ ಅರಸೀಕೆರೆ ಶಾಸನ, ಕ್ರಿ.ಶ.1259 ರ ಹಿರಿಯೂರಿನ ಶಾಸನಗಳಲ್ಲಿ ಉಲ್ಲೇಖಗಳಿವೆ
ನನ್ನಿಷ್ಟದ ಕೆಲವು ವಚನಗಳು
ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವ
ಒಡಲುಗೊಂಡವನೆಂದು
ನೀನೆನ್ನ ಜರಿದೊಮ್ಮೆ ನುಡಿಯದಿರ!
ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ!
ರಾಮನಾಥ.
***

ಉಂಕೆಯ ನಿಗುಚಿ ಸರಿಗೆಯ ಸಮಗೊಳಿಸಿ
ಸಮಗಾಲನಿಕ್ಕಿ ಅಣಿಯೇಳ ಮುಟ್ಟದೆ
ಹಿಡಿದ ಲಾಳಿಯ ಮುಳ್ಳು ಕಂಡಿಕೆಯ ನುಂಗಿತ್ತು.
ಈ ಸೀರೆಯ ನೆಯ್ದವ ನಾನೊ ನೀನೋ?ರಾಮನಾಥ.
***
ಬಯಲ ಬಣ್ಣವ ಮಾಡಿ;
ಸ್ವಯವ ನಿಲವ ಮಾಡಿ
ಸುಳಿವಾತನ ಬೆಡಗ ಬಲ್ಲವರಾರೈ? ರಾಮನಾಥ!
***
ನಾನೊಂದು ಸುರಗಿಯನೇನೆಂದು ಹಿಡಿವೆನು?
ಏನ ಕಿತ್ತೇನನಿರಿವೆನು?
ಜಗವೆಲ್ಲಾ ನೀನಾಗಿಪ್ಪೆ ಕಾಣಾ! ರಾಮನಾಥ.
****

Thursday, April 3, 2014

ಭಾಷೆ



- ಶಿವಪ್ರಸಾದ ಪಟ್ಟಣಗೆರೆ


ವರ್ಷಕ್ಕೊಮ್ಮೆಯ ಹಬ್ಬದಂತೆ ಕನ್ನಡವನ್ನ ಪೂಜಿಸಿ ಹಣ್ಣು ಕಾಯಿ ಮಾಡಿಸುತ್ತಾರೆ -

ಭಾಷೆಗೂ ಸಂಸ್ಕೃತಿಗೂ ಇರುವ ಸಂಬಂಧವೇನು ? ಭಾಷೆ ನಮಗರಿವಿಲ್ಲದೆ ರೂಪುಗೊಂಡದ್ದು. ಇನ್ನು ಸಂಸ್ಕೃತಿಯು ಉಳಿಕೆ,ದಾಖಲೆಯ ಅವಶೇಷ, ಬೌತಿಕ ಉಳಿಕೆ ಎಂದು ಹೇಳುವುದುಂಟು. ಭಾಷೆಯು ಆ ಜನಾಂಗವನ್ನೋ ಆ ಜನಾಂಗದ ರಚನೆ, ಸ್ವರೂಪವನ್ನೂ ಬಿಂಬಿಸುತ್ತದೆ. ಭಾಷೆ ಹೇಗೆ ಭೌತಿಕವೋ ಅಷ್ಟೇ ಮಾನಸಿಕವೂ ಕೂಡ ಹೌದು.

ಒಂದು ಭಾಷೆ ಆ ಸಂಸೃತಿಯಲ್ಲಿ ಆಗುತ್ತಿರುವ ಚಲನಶೀಲತೆ ಹಾಗೂ ಪರಿಸರದ ಬದಲಾವಣೆಗಳು ಆಧುನಿಕತೆಗಳ ಚಿತ್ರಣವನ್ನು ಸಂಪೂರ್ಣವಾಗಿ ಬಿಚ್ಚಿಡುತ್ತವೆ. ಪ್ರತೀ ಸಮುದಾಯದಲ್ಲೂ ಭಾಷೆ – ಭಾಷೆಗಳ ನಡುವಣ ತಿಕ್ಕಾಟ, ಘರ್ಷಣೆಗಳು ನಡೆಯುತ್ತಾ ಬಂದಿವೆ. ಯಾವುದೋ ಶಕ್ತಿ ರಾಜಕಾರಣಗಳು ಪ್ರಭಲತೆಗಳು ಮತ್ತೊಂದು ಭಾಷೆಯನ್ನ ಅಧೀನಗೊಳಿಸಿಕೊಳ್ಳುತ್ತಾ ಬಂದಿವೆ. ಇವುಗಳ ನಡುವೆ ತಮ್ಮ ಸ್ಥಾನದ ಉಳಿಕೆ, ವಿಸೃತತೆ ಇವುಗಳ ಬಗಗೆಗಿನ ಸಂಘರ್ಷಗಳು ಇಂದಿಗೂ ಆಗುತ್ತಲೇ ಇವೆ.

ಈ ಹಿನ್ನೆಲೆಯಲ್ಲಿ ಒಂದು ಭಾಷೆ ಕೀಳಿರಿಮೆಗೆ ಈಡಾಗಿ ಪ್ರಧಾನ ಭಾಷೆಯನ್ನು ಅನುಸರಿಸುವ ದಿಕ್ಕಿನತ್ತ ಸಾಗುತ್ತಿದೆ. ಸಮಾಜಶಾಸ್ತ್ರದ ಹಿನ್ನೆಲೆಯಲ್ಲಿ ಹೇಳುವುದಾದರೆ ಸಾಂಸೃತಿಕ ಹಿಂಬೀಳುವಿಕೆಯು ನಮಗೆ ಅರಿವಿಲ್ಲದಂತೆ ಜರುಗಿದೆ. ಇವುಗಳನ್ನೇ ಶುದ್ಧ ಅಥವಾ ಶಿಷ್ಟ ಎಂಬ ಭಾಷೆಯ ಮುಖಗಳನ್ನ ರೂಪಿಸಿ ಭಾಷೆಯನ್ನ ಸರಿಗಟ್ಟುವಂತಹ ವ್ಯತಿರಿಕ್ತ ಪರಿಣಾಮಗಳೂ ಸಾಗುತ್ತಿವೆ. ಇವೆಲ್ಲವೂ ಭಾಷೆಯ ಬಗೆಗಿನ ಆರೋಪಗಳು ಮತ್ತು ದೋಷಗಳೂ ಹೌದು.

ಉದಾಹರಣೆಗೆ – ದೇವತೆಗಳೆಲ್ಲಾ ಶಿಷ್ಟ ಭಾಷೆಯನ್ನು ಸಂವಹಿಸುತ್ತಾರೆ. ಸಂಸೃತವನ್ನು ಮಾತನಾಡುತ್ತಾರೆಂಬ ಆರೋಪಗಳಿಗೆ ವಿರುದ್ಧವಾಗಿ ದೆಸೀಯ ಪ್ರಾದೇಶಿಕ ಭಾಷೆಗಳ ಹಿನ್ನೆಲೆಯಲ್ಲಿಯೂ,ನಾಟಕದ ಹಿನ್ನೆಯಲ್ಲಿ ತಮ್ಮ ಆಡು ಬಾಷೆಯ ರೂಪಕ ಮತ್ತು ವಾಹಕಗಳನ್ನು ನೀಡಿ ತಮ್ಮ ಭಾಷಾ ಸಾಂಸೃತಿಕ ಚೈಕಟ್ಟುಗಳನ್ನ ಬಿಂಬಿಸಿದ್ದಾರೆ. ಈ ಕಾರಣದಿಂಧ ಬ್ರಹ್ಮನೂ ಇಲ್ಲಿ ಬೊಮ್ಮನಾಗುತ್ತಾನೆ, ಶಿವ ಸುರಪಾನಗಳನ್ನ ಕುಡಿದು ತಮಟೆಗಳೊಡನೆ ತಾನು ತಕದಿಮಿಸುತ್ತಾನೆ.

ಅಷ್ಟೇ ಅಲ್ಲದೇ ಭಾಷೆಯನ್ನು ಸೂಚಕವಾಗಿರಿಸಿಕೊಂಡ ಸನ್ನಿವೇಷಗಳೂ ಆಗಿವೆ. ತನ್ನ ಭಾಷೆಯ ತುಳಿತವೋ, ಕಡಗಣನೆಯೋ ಆ ಭಾಷೆಯು ತನ್ನ ಶ್ರೇಷ್ಠತೆಯನ್ನ ತೋರ್ಪಡಿಸಿಕೊಳ್ಳುವ ಮುಖಾಂತರ ಆ ಭಾಷೆ ತನ್ನನು ತಾನು ಬಿಂಬಿಸಲೆತ್ನಿಸಿದೆ. ಈ ಹಿನ್ನೆಲೆಯಲ್ಲಿ ಹಲವು ಸಾದ್ಯತೆಗಳು ಸಹ ಸಫಲಗೊಂಡಿವೆ.
ಉದಾ – ದ್ಯಾವನೂರರ ಭಾಷೆ ಭಾಷೆ. ದೇವನೂರರ ಕುಸುಮಬಾಲೆ

ಭಾಷೆಯ ಮೇಲೆ ಸಂಸ್ಕೃತಿಯನ್ನ ಹೇರುವಂತದ್ದು

ನಾನಿನ್ನು ಹತ್ತನೇ ತರಗತಿಯಲ್ಲಿದ್ದೆ.ಆಗತಾನೆ ಹೊಸದಾಗಿ ಬಂದಿದ್ದ ಇಂಗ್ಲೀಷ್ ಶಿಕ್ಷಕ ನಮ್ಮನ್ನೆಲ್ಲಾ ಖೈದಿಗಳಂತೆ ನೋಡುತ್ತಾ ಇಂಗ್ಲೀಷ್ ಭಾಷೆಯ ಹೇರಿಕೆಯನ್ನ ಮಾಡಲೆತ್ನಿಸಿದ್ದರು. ಇನ್ನು ಆಗತಾನೆ ಇಂಗ್ಲೀಷ್ ಕಲಿಯುತ್ತಿದ್ದ ನಮಗೆ ಇಂಗ್ಲೀಷ್ ಮತ್ತಷ್ಟೂ ಭಯವನ್ನು ಉಂಟು ಮಾಡಲು ಸಾಧ್ಯವಾಯಿತು. ಆ ಶಿಕ್ಷಕರೊಂದಿಗೆ ಮಾತನಾಡಬೇಕಾದರೆ ಖಡ್ಡಾಯವಾಗಿ ಇಂಗ್ಲೀಷಿನಲ್ಲೆ ಮಾತನಾಡಬೇಕಿತ್ತು ಇಲ್ಲದಿದ್ದರೆ ದಂಡವನ್ನು ತೆರಬೇಕಾಗಿತ್ತು. ಇನ್ನೂ ದುರಂತವೆಂದರೆ ಮದ್ಯದಲ್ಲಿ ಒಂದು ಕನ್ನಡ ಪದವನ್ನು ಬಳಸಿದರೆ ಒಂದು ಪದಕ್ಕೆ ಇಂತಿಷ್ಟು ದಂಡತೆರಬೇಕೆಂದು ನಿಗದಿ ಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನಮ್ಮ ಸಂದೇಹ, ಗೊಂದಲಗಳನ್ನ ವ್ಯವಹರಿಸಲು ಆ ಶಿಕ್ಷಕರೊಂದಿಗೆ ಸಾಧ್ಯವಾಗಲೇ ಇಲ್ಲ. ಇದಕ್ಕೆ ಹೆದರಿ ನಾವು ಅವರೊಂದಿಗೆ ಮಾತನಾಡಲೇ ಇಲ್ಲ. ಇದು ಒಂದು ಭಾಷೆಯನ್ನೋ ಒಂದು ಸಂಸೃತಿಯನ್ನೋ ಹೇರುವಂತ ದುಷ್ಟ ದರಿದ್ರ ಪದ್ದತಿ.

ಸ್ಥಿತಿ :: ಲಯ

ಅನ್ಯ ಸಾಂಸ್ಕೃತಿಕ ಸಂಗತಿಗಳು ಕನ್ನಡಭಾಷೆಯಲ್ಲಿ ಅಚಾನಕ್ಕಾಗಿ ಕಾಣಿಸಿಕೊಳ್ಳುತ್ತಲೇ ಇವೆ. ಇದು ಜೀವನ ಶೈಲಿಯ ಬದಲಾವಣೆ ಹಾಗೂ ಈಗಿನ ತುರ್ತು ಕೂಡ ಹೌದು. ಕೆಲವೊಮ್ಮೆ ಭಾಷೆಗಿಂತ ಬದುಕು ಮುಖ್ಯವಾಗಿಬಿಡುತ್ತೆ. ಈ ಹಿನ್ನೆಲೆಯಲ್ಲಿ ಭಾಷೆಯನ್ನು ಉಳಿಸುವ ಪ್ರಯೋಗಿಸುವ ಸಾದ್ಯತೆಗೂ ಗೌಣ. ಇನ್ನು ಭಾವನೆಗಳಿಗೆ ಅಂಡಿಸಿಕೊಂಡ ಕನ್ನಡಿಗರಿಗೆ ಮಾತ್ರ ಭಾಷೆಯ ಬಗ್ಗೆ ಸದಾ ಹೋರಾಡುವ ತವಕ. ವಾರಕ್ಕೊಮ್ಮೆಯ ವರ್ಷಕ್ಕೊಮ್ಮೆಯ ಹಬ್ಬದಂತೆ ಕನ್ನಡವನ್ನ ಪೂಜಿಸಿ ಹಣ್ಣುಕಾಯಿ ಮಾಡಿಸುತ್ತಾರೆ. ಇನ್ನಿತರೆ ದಿನಗಳಲ್ಲಿ ಪರ ಭಾಷೆಯನ್ನ ತಮ್ಮ ದೈನಂದಿನ ಉಪಹಾರದಂತೆ ಯಥೇಚ್ಚವಾಗಿ ಸೇವಿಸುತ್ತಾ ರಕ್ತಗತಗೊಳಿಸಿಕೊಳ್ಳುತ್ತಾರೆ. ಇದು ಚಾಲ್ತಿಯಲ್ಲಿರುವ NON – POLLUTED vehicle . ಇಷ್ಟೇ ಅಲ್ಲದೆ ಈಗತಾನೆ ಚಿಗುರುತ್ತಿರುವ ಚಿಗುರೆಲೆಗಳಿಗೂ ಮುಂದೆಂದೂ ಬಳಸದಂತೆ ಭದ್ರ ಬುನಾದಿಗಳನ್ನ ಹಾಕಿಬಿಟ್ಟಿದ್ದೇವೆ. ಇಲ್ಲಿಗೆ ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು.

Saturday, March 29, 2014

ಋಗ್ವೇದ ಮಂಡಲ -೧, ಸೂಕ್ತ - ೧೬೧ರಲ್ಲಿ ಉಚಥ್ಯ ಋಷಿವರೇಣ್ಯರು ತಮ್ಮ ಸಂಶೋಧನಾ ಅನುಭವವನ್ನು ಗಣಕೀಕರಿಸಿ ಇಂತೆಂದಿದ್ದಾರೆ:

       

             "ಆಹುಸ್ತೇ ತ್ರೀಣಿ ಬಂಧನಾನಿ ತ್ರೀಣಿತ ಆಹುರ್ದಿವಿ ಬಂಧನಾನಿ ತ್ರೀಣ್ಯಪ್ಸು ತ್ರೀಣ್ಯಂತಃ ಸಮುದ್ರೇ "||

ಎಂಬುದು ಉಚಥ್ಯರ ಅಭಿಮತ. ಅದರ ಸೂತ್ರದ ಒಟ್ಟು ಸರಳ ಅರ್ಥ ಹೀಗಿದೆ- ಪ್ರಪಂಚದ ಎಲ್ಲಾ ಆಗುಹೋಗುಗಳಿಗೂ ಮುಖ್ಯವಾಗಿ ೩ ಕಾರಣವಿರುತ್ತದೆ. ಆ ಕಾರಣವೆಂಬುದೇ ಈ ಜೀವನಬಂಧನ. ಅಂದರೆ ಕರ್ಮ + ಋಣ + ಯೋಗ ಎಂಬ ಮೂರರಿಂದಾಗಿ ಜೀವ ಜಗತ್ತು ನಿರಂತರವಾಗಿರುತ್ತದೆ. ಆ ಬಂಧನ ಬಿಡಿಸಿಕೊಳ್ಳುವ ಜಾಣ್ಮೆಯನ್ನು ಜೀವಿಗಳು ತಪ್ಪಿಯೂ ಮಾಡಲಾರವು. ಹಾಗಾಗಿಯೇ ಜೀವ = ನೀರು, ಕಾಲ = ಮಧ್ಯ, ಆದಿ, ಅಂತ್ಯ. ಮಾರ್ಗ ಸಮಯೋಜಿತವಾದ ಜೀವನ ಸಾಗರ ಅಥವಾ ಸಮುದ್ರ. ಅದರ ಸಂಖ್ಯಾ ಮೊತ್ತವೇ ಕರ್ಮ. ಅದರ ಶೇಷವೇ ಯೋಗ. ಗುಣಿತವೇ ಋಣಗಳಾಗಿ ವ್ಯವಹರಿಸುತ್ತದೆ. ಗುಣಿತ ಮೂಲವ್ಯಾವುದು? ಮೊತ್ತವ್ಯಾವುದು? ಅರಿವಿಲ್ಲ ಜೀವಿಗಳಿಗೆ! ಹಾಗಾಗಿ ಅಸಂಖ್ಯಾತವೆಂದಿದೆ. ಅದಕ್ಕೊಂದು ಸೂತ್ರ ಅಳವಡಿಸಲ್ಪಟ್ಟಿದೆ. ಆ ಸಮೀಕರಣ ಅರ್ಥ ಮಾಡಿಕೊಂಡಲ್ಲಿ ಮಾನವ ಜೀವನ ಸಾರ್ಥಕ. ಆತನು ದೇವತ್ವಕ್ಕೇರುವುದ ಖಂಡಿತ. ಆದರೆ ಅರ್ಥ ಮಾಡಿಕೊಳ್ಳಲು, ಅಧ್ಯಯನ ಮಾಡಲು ನಿಮಗೆ ಪುರುಸೊತ್ತು ಇದೆಯೇ? ಇಲ್ಲ. ಕಾರಣ ನಮ್ಮ ಈಗಿನ ಸ್ಥಿತಿ. ನಾವೇ ವಿಧಿಸಿಕೊಂಡ ಜೀವನ ವಿಧಾನ. ನಮ್ಮ ಶಿಕ್ಷಣ ಪದ್ಧತಿ, ನಮ್ಮ ಧನದಾಹ, ನಮ್ಮ ಅತೀ ದುರಾಸೆ, ನಮ್ಮ ಮೂರ್ಖತನ, ನಮ್ಮ ಹುಚ್ಚು ಕಲ್ಪನೆ. ಇದಕ್ಕೆಲ್ಲಾ ಕಾರಣ ಬ್ರಿಟಿಷರು ನಮಗೆ ಮಾಡಿದ ಮೋಸ. ಬುದ್ಧಿಜೀವಿಗಳೆಂಬ ಸೋಗಲಾಡಿ ಲದ್ದಿಗಳಿಗೆ ಇದು ಅರ್ಥವಾಗಲಾರದು. ಅದಕ್ಕಾಗಿ ನಮ್ಮ ಹಿಂದಿನ ಜೀವನ ಪದ್ಧತಿಯ ಬಗ್ಗೆ ಸ್ವಲ್ಪ ಬರೆದು ನಂತರ ಸಮೀಕರಣದ ಬಗ್ಗೆ ಬರೆಯುತ್ತೇನೆ. ಏಕೆಂದರೆ ಆಗಲಾದರೂ ಸಮೀಕರಣ ನಮಗೆ ಸುಲಭವಾದೀತು.

        ಹದಿನೆಂಟನೆಯ ಶತಮಾನದ ಪೂರ್ವದಲ್ಲಿ ನಮಗೆ ಸಂಪೂರ್ಣ ಸ್ವಾತಂತ್ರ್ಯವಿತ್ತು. ನಮ್ಮನ್ನು ನಾವೇ ಆಳಿಕೊಳ್ಳುತ್ತಿದ್ದೆವು. ಏಕೆಂದರೆ ಆಗ ನಮಗೆ ತೃಪ್ತಿಯಿತ್ತು, ಜೀವನದರಿವಿತ್ತು, ದುರಾಸೆ ಇರಲಿಲ್ಲ, ಮಹತ್ವಾಕಾಂಕ್ಷೆ ಇರಲಿಲ್ಲ, ಉತ್ತಮ ವಿಧ್ಯೆಯಿತ್ತು. ಅದರ ಕೆಲ ಮುಖ್ಯ ಧ್ಯೇಯ ಗಮನಿಸಿ -
·        ಮಾತೃದೇವೋ ಭವ
·        ಪಿತೃ ದೇವೋ ಭವ
·        ಆಚಾರ್ಯ ದೇವೋ ಭವ
·        ಅತಿಥಿ ದೇವೋ ಭವ
·        ಸಹನಾವವತು | ಸಹನೌಭುನಕ್ತು | ಸಹ ವೀರ್ಯಂ ಕರವಾವಹೈ | 
ತೇಜಸ್ವಿನಾವಧೀತಮಸ್ತು | ಮಾದ್ವಿಷಾವಹೈ ||
·        ಸಂಗ  ಚ್ಛಧ್ವಂ ಸಂ ವದಧ್ವಂ ಸಂ ವೋ ಮನಾಂಸಿ ಜಾನತಾಂ | 
ದೇವಾ ಭಾಗಂ ಯಥಾ ಪೂರ್ವೇ ಸಂಜಾನಾನಾ ಉಪಾಸತೇ ||
·        ಸಮಾನೋ ಮಂತ್ರಃ ಸಮಿತಿಃ ಸಮಾನೀ ಸಮಾನಂ ಮನಃ ಸಹ ಚಿತ್ತಮೇಷಾಮ್ | 
ಸಮಾನಂ ಮಂತ್ರಮಭಿಮಂತ್ರಯೇ ವಃ ಸಮಾನೇನ ವೋ ಹವಿಷಾ ಜುಹೋಮಿ ||
·        ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ವಃ | 
ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ ||
·        ಕೃಣ್ವಂತೋ ವಿಶ್ವಮಾರ್ಯಂ ||
·        ಆ ನೋ ಭದ್ರಾಃ ಕ್ರತವೋ ಯಂತು ವಿಶ್ವತಃ
·        ಗಾವೋ ವಿಶ್ವಸ್ಯ ಮಾತರಃ
· ಸ್ವಸ್ತಿ ಪ್ರಜಾಭ್ಯಃ ಪರಿಪಾಲಯಂತಾಂ ನ್ಯಾಯೇನ ಮಾರ್ಗೇಣ ಮಹೀಂ ಮಹೀಶಾಃ | ಗೋಬ್ರಾಹ್ಮಣೇಭ್ಯೋ ಶುಭಮಸ್ತು ನಿತ್ಯಂ ಲೋಕಾಃ ಸಮಸ್ತಾಃ ಸುಖಿನೋ ಭವಂತು ||

       ಹೀಗೆ ಉದಾಹರಿಸುತ್ತಾ ಹೋದರೆ ನಾವೆಷ್ಟು ವಿಶಾಲ ಹೃದಯಿಗಳು ಎಂಬುದು ಅರ್ಥವಾಗುತ್ತದೆ. ಆಗ ಇದ್ದುದ್ದು ಕೂಡು ಕುಟುಂಬ. ಒಬ್ಬ ಯಜಮಾನ, ಅವನೇ ಇಡೀ ಕುಟುಂಬದ ಪಾಲನೆ, ಪೋಷಣೆಗೆ ಜವಾಬ್ದಾರ. ಆಗಲೂ ದುಡಿಮೆ ಇತ್ತು. ಕುಟುಂಬ ಪೋಷಣೆ ಇತ್ತು. ಜನ ತೃಪ್ತರಾಗಿ ಬದುಕುತ್ತಿದ್ದರು. ನಿಧಾನವಾಗಿ ಬ್ರಿಟಿಷರು ಬಿತ್ತಿದ ವಿಷಬೀಜವು ನಮ್ಮ ಕುಟುಂಬ ವ್ಯವಸ್ಥೆಯನ್ನೇ ಒಡೆಯಿತು. ಯಜಮಾನಿಕೆ ಪದ್ಧತಿಯು ದಾಸ್ಯವೆಂದು ಬಿಂಬಿಸಿದರು. ಈಗ ಗಂಡ, ಹೆಂಡತಿ, ಮಕ್ಕಳು, ಎಲ್ಲರೂ ದುಡಿಮೆಯ ಯಂತ್ರಗಳಾಗುತ್ತಿದ್ದಾರೆ. ದುಡಿದು ದುಡಿದು ಸಾಯುತ್ತಿದ್ದಾರೆ. ಹಾಗಾಗಿ ಪುರುಸೊತ್ತಿಲ್ಲ. ಈಗ ಬಾಂಧವ್ಯಕ್ಕೆ ಬೆಲೆಯಿಲ್ಲ, ಗೌರವವಿಲ್ಲ. ಹಣ ಮಾತ್ರ ಲೋಕದ ಎಲ್ಲವೂ ಆಗಿದೆ. ಆದರೆ ತೃಪ್ತಿ ಇಲ್ಲ. ಹಿಂದೆ ತೃಪ್ತಿಯಿತ್ತು, ಪೂರ್ಣ ಸ್ವಾತಂತ್ರ್ಯವಿತ್ತು. ನೀವು ದುಡಿದ ಸಂಪತ್ತು ನಿಮ್ಮದಾಗಿತ್ತು. ಆದರೆ ಈಗ ನೀವು ದುಡಿದ ಹಣ ನಿಮ್ಮದಲ್ಲ. ನಿಮ್ಮದು ಎಂಬ ಭ್ರಾಂತಿಯಲ್ಲಿ ಇದ್ದೀರಷ್ಟೆ. ಈಗ ನಿಮ್ಮನ್ನು ನೀವು ಆಳಿಕೊಳ್ಳುತ್ತಿಲ್ಲ. ಇದು ಒಂದು ರೀತಿಯ "ಭಯಂಕರ ದಾಸ್ಯ". ಆದರೆ ಭ್ರಾಂತಿ, ಹುಚ್ಚಿನ ಅತಿರೇಕದಲ್ಲಿರುವ ನಿಮಗೆ ಅರ್ಥವಾಗುತ್ತಿಲ್ಲವಷ್ಟೆ.
     
ಹಿಂದೆ "ನಮ್ಮ ಹಿರಿಯರಿಗೆ ಸಾವಿರಾರು ಎಕರೆ ಜಮೀನಿತ್ತು". ಈ ವಾಕ್ಯ ದೇಶದ ೭೦% ಜನ ಹೇಳುತ್ತಾರೆ. ಈಗ ಅವರು ಸತ್ತರೆ ಹುಗಿಯಲು 3x6 ಅಡಿ ಜಾಗವಿಲ್ಲದವರ ಸಂಖ್ಯೆ ೨೦ ಕೋಟಿ. ಇವರಿಗೆ ಒಂದಿಂಚು ಭೂಮಿಯೂ ಇಲ್ಲ. ಇನ್ನು ೪೫ ಕೋಟಿ ಜನರಿಗೆ ಅಡಿಲೆಕ್ಕದಲ್ಲಿ ಎಲ್ಲೋ ಸ್ವಲ್ಪ ಜಮೀನಿರಬಹುದು. ಆದರೆ ಅದರ ಪೂರ್ಣ ಸ್ವಾತಂತ್ರ್ಯವಿಲ್ಲ. ಪ್ರತಿ ವರ್ಷ ನೀವು ನಿಮ್ಮ ಪಂಚಾಯಿತಿಗೆ ಅಥವಾ ನಗರಸಭೆಗೆ ಸ್ಥಳ ಬಾಡಿಗೆ ಅರ್ಥಾತ್ ಕಂದಾಯ ಕಟ್ಟಿದರೆ ಮಾತ್ರ ನಿಮ್ಮದದು. ಇಲ್ಲವಾದರೆ ನಿಮ್ಮದಲ್ಲ. ಬ್ಯಾಂಕಿನಲ್ಲಿ ಹಣ ಇಟ್ಟರೆ ಅದು ಲೆಕ್ಕಬದ್ಧವಾಗಿದ್ದರೆ ಮೊತ್ತ ಮಾತ್ರ ನಿಮ್ಮದು. ಬಡ್ಡಿ ಬಂದಾಗ ಅದಕ್ಕೂ ತೆರಿಗೆ ಕಟ್ಟಲೇಬೇಕು. ಉಳಿಕೆ ಮೊತ್ತ ನಿಮ್ಮದು. ಅದೂ ಬ್ಯಾಂಕ್ ದಿವಾಳಿಯಾಗುವವರೆಗೆ. ಬರೇ ಲೆಕ್ಕದ ರೂಪದ ಹಣ. ಅದಕ್ಕೆ ಬೆಲೆ ಇದೆಯೆಂದು ತಿಳಿದಿರಾ?

೧೯೪೫ನೇ ಇಸವಿಯಲ್ಲಿ ನೀವು ಬ್ಯಾಂಕಿನಲ್ಲಿ ಒಂದು ಲಕ್ಷ ಇಟ್ಟಿದ್ದರೆ ಅದು ಈಗ ಕೇವಲ ೧,೧೪೦ ರೂಪಾಯಯಾಗಿ ಪರಿವರ್ತನೆಯಾಗಿದೆ. ಹಣದ ಹಿಂಜರಿತ ಅಥವಾ ಮೌಲ್ಯಕ್ಷಯವೆಂದು ಹೇಳುತ್ತಾರೆ. ಹಾಗಾದರೆ ನಿಮ್ಮ ಹಣವೆಲ್ಲಿ ಹೋಯ್ತು? ಚಿಂತಿಸಿ. ಕೇವಲ ೨% ಅಂದರೆ "ಜೀವಚ್ಛವ" ಎನ್ನುತ್ತಾರೆ ಅರ್ಥವಾಯ್ತೇ? ಈಗ ಮಾನವ ಬರೇ ಜೀವಚ್ಛವ. ಆದರೆ ಅರ್ಥ ಮಾಡಿಕೊಳ್ಳಲಾರ. ಅಸಹಾಯಕ, ಗುಲಾಮ, ಮೂರ್ಖನಾಗಿಯೇ ಬದುಕುತ್ತಿದ್ದಾನೆ. ಅದರಂತೆ ಮುಂದಿನ ಒಗಟು ಸಾಲನ್ನು ಅರ್ಥಮಾಡಿಕೊಂಡರೆ ಉಚಥ್ಯರ ಅಭಿಪ್ರಾಯ ನಿಮಗಾಗುವುದು. ಅದನ್ನು ಸಂಖಲೀಕರಣ ಎಂಬ ಸೂತ್ರದಡಿಯಲ್ಲಿ ಬರೆದಿರುತ್ತೇನೆ.

ಮೂರರೊಳಗೇಳು ಇನ್ನೆರಡು ಲೋಕದ ಸೂತ್ರವಿದೆ
ತೋರಮುತ್ತಿನ ಬಣ್ಣ ಬಿಳಿಯಹುದೇ ನಿಜವಲ್ಲ
ಜಾರು ತರ ಮೂರು ಮೂರೆಂದು ಬಣ್ಣವಿದೆ ಅದರಲಿ
ತೋರುವುದು ಬಿಳಿಯಾಗಿ ಅದರೊಳಗಡಕವಿದೆ ಸಂಖ್ಯೆ, ಪ್ರಮಾಣ, ಘನ, ಶಕ್ತಿ, ವೀರ್ಯಗಳೂ || ೧ ||

ಮೊದಲೇರಡು ಇನ್ನು ಮೇಲೇಳು ಗುಣಕದಲಿ ಉದ್ಧತವು ಸಮುದ್ರ
ಚದುರಂಗದಾ ಲೆಕ್ಕದಲಿ ಕವಡೆ, ಪಕ್ಷಿಯು, ಹರಿಣ, ಮತ್ಸ್ಯವು ಕೂಡ
ಎದುರಲಿ ಕಾಂಬ ಲೆಕ್ಕದ ಮೊತ್ತವೇ ಮಹಿಯೊಳಗೆ ಹುಟ್ಟಿದಾ ಜೀವಿಯಾ ಲೆಕ್ಕ
ವಿದು ಅವಕನ್ನ, ಕಾಲ, ಬಟ್ಟೆಯ ಮೊತ್ತವೇ ಮಿತ್ತಿಹುದು ನೀನದರ ಗುಣಕ ದಂಕವು ಕೇಳು ಮನುಜಾ || ೨ ||

ಲೋಕವಿದೆ ಮೇಲೇಳು ಅದರೊಳು ಗಂಧರ್ವವನು ಕಳೆ
ದೇಕದಲಿ ಭಾಜಿಸಿರೆ ಅಶನವು ಅಶನಿಶಕ್ತಿಯ ಬಲ ವಜ್ರ
ದಂಕೆಯಲಿ ಅಶ್ವಬಲವಿದೆ ಮೂರನೆಯ ಲೋಕದಾಡಂಬರದಿ
ಶಾಖ ಸಖನ ಸಖನಂಕೆಯನು ಗುಣಿಸಿ ಯಮನೊಳು ಕಳೆಯೆ ಕಾಲಗಂಧರ್ವಾ || ೩ ||

ಕಿರಣಪಾತವು ನೈಮಿಷದ ಮೊದಲೆರಡು ಮತ್ತೊಂಬತ್ತು ಇನ್ನೆರಡು
ಕಾರಣವಿದೆ ಜನುಮ ಜನುಮಕೆ ಕರ್ಮವಿದೆ ಭೋಗ್ಯಕೆ ಯಮನದಕೆ
ವರಣವಿತ್ತಿಹ ಜೀವಿ ಕೇಳ್ ವರುಣಪಾಶದ ಬಂಧದಲಿ ಸಿಲುಕಿಹೆ ನೀನು
ಚರಣ ಸಂಖ್ಯೆಯ ಋಣದ ಕಾರಣ ಅಶನ ಭದ್ರತೆ ದೇವನೀವನು ಜನಿಜನಿತಜಾನಿತ್ರವೆಲ್ಲಾ || ೪ ||

ಓಡಿ ಬದುಕುವೆನೆಂಬಾಸೆ ಬಿಡು ಉಣು ನೀ ನಿನ್ನಯ ಕರ್ಮ
ಕೂಡಿ ಕಳೆವನು ಚಿತ್ರಕಾರನು ದಿವಿಯ ಬಂಧನ ಉಂಡಾ
ದೊಡೆ ಕೊನೆಯ ಲೆಕ್ಕವ ಪೇಳ್ವೆ ಜಿಗೀಷದೊಳು ಆಮಿಷದ
ಪಡೆದೇಳು ಆರರ ಮೂರರಲಿ ಅನುಭೋಗ ಓಷಧೀ ಇಳಾಗ್ರಸಿಷ್ಠವದೂ || ೫ ||

ಅದಕೆ ಹೊಂದಿ ಬಂದಿಹೆ ಈ ಶರೀರ ನಿನ್ನದಲ್ಲವು ಮಾತಾಪಿತರು
ಇದಕೆ ಋಣವಿದೆ ದ್ವಿಗುಣ ಮಾತ್ರವದು ಹೊಂದಿದೆ ಜ್ಞಾನ ನಿನ್ನದಲ್ಲಾ
ಅದಕೆ ಋಣ ಸಲ್ಲವು ಮುಂದಿನ ಋಣದ ಮೊತ್ತದ ಏಳು ಭಾಗವು ಈ
ಗದಕೆ ಕೂಡಿಸಿದೆ ನಿನ್ನಯ ಜೀವನ ಯಾವದಾ ಯೋಜನೆದಳತೆ ಬದುಕು ಅಲ್ಲಿಯವರೆಗೆಂಬೇ || ೬ ||


        ಈ ನಾಲ್ಕು ಸಾಲಿನ ಪದ್ಯಗಳು ಕನ್ನಡದಲ್ಲಿದ್ದರೂ ಗೂಡಾರ್ಥದಲ್ಲಿ ಅಡಕವಾಗಿದೆ. ಅದನ್ನು ಸಂಖಲೀಕರಣ ಸೂತ್ರವೆಂಬ ಗಣಿತ ಸೂತ್ರದಂತೆ ಶಬ್ದಗಳಿಗೆ ಅಕ್ಷರ ಸಂಜ್ಞೆಯನ್ನು ಕೊಟ್ಟು ಅಂಕಾದಿ ರೂಪು ಕೊಡುವುದು ಇದರ ರಹಸ್ಯ. ಒಂದು ಜೀವಿಯು ಭೂಮಿಯಲ್ಲಿ ಹುಟ್ಟಿ ಏನೇನು ಏನಕ್ಕೇನು ಮಾಡಬಹುದು ಎಂಬುವುದು ಈ ಆರು ಸೂತ್ರಗಳಲ್ಲಿ ನಿಖರವಾಗಿ ಕಂಡುಹಿಡಿಯಬಹುದು. ಇದು ಋಗ್ವೇದದ ೧ನೇ ಮಂಡಲದ ೧೬೩ನೇ ಸೂಕ್ತದಲ್ಲಿ ಅಳವಡಿಸಿದ್ದಾರೆ ಉಚಥ್ಯರು! ಅದನ್ನು ಅಧ್ಯಯನ ಮಾಡಿ ಅರ್ಥ ಮಾಡಿಕೊಂಡಲ್ಲಿ ಜಗದೆಲ್ಲವೂ ಎಷ್ಟು ಸರಳ ಸುಸೂತ್ರವೆಂಬರಿವು ನಿಮಗಾಗುತ್ತದೆ.

ಇಂತು
- ಕೆ. ಎಸ್. ನಿತ್ಯಾನಂದ
ಅಗಸ್ತ್ಯಾಶ್ರಮ ಗೋಶಾಲೆ
ಬಂದ್ಯೋಡ್, ಕಾಸರಗೋಡು

ಕವಿತೆ

ರಾಜಶೇಖರ ಬಂಡೆ
ಹಸಿದಿಹ ಒಡಲು ಹರಿಯದ ಕಡಲು
ನಿಶ್ಚಲ ಮೌನದ ಬೇಗೆಯಿದು
ಹರಿದಿಹ ಉಡುಪು ಬಡವನ ಕುರುಹು
ನಿತ್ಯವು ಇರಿಯುವ ನೋವು ಇದು

ಬಿಗಿವುದು ಕಂಠ ಗುನುಗುವ ಹೊತ್ತಿಗೆ
ಬಡವನ ಎದೆಗದೆ ಶಾಶ್ವತವು
ಹಾಡುವ ಕಂಗಳ ಅಂಚಲಿ ಮೂಡುವ
ಹನಿಗಳಿಗೂನು ಇದೆ ಹರಿವು

ದಿನದಿನದಲ್ಲೂ ಹುಟ್ಟುವ ಪೈರಿಗೆ
ಎರೆದುದು ರಕುತದ ಕೆಂಗಣವು
ಮೊಳೆಯುವ ಮೊದಲೇ ಚಿವುಟುವ ದೈವವೆ
ನಿನಗಿದೊ ಬಡವನ ಬಿಸಿಕಾವು

ಮನೆಮನೆಯಲ್ಲೂ ಬೆಳಗುವ ದೀಪ
ನೆತ್ತರನುಂಡೇ ಹೊಳೆಯುವುದು
ಯಾರನು ಕೇಳದೆ ಕವಿಯುವ ಇರುಳು
ಇವನೆದೆಗಾಸರೆಯಾಗುವುದು

ಭೋರ್ಗರೆಯುವ ಬಿಸಿ ರಕ್ತದ ಕಣಗಳು
ಜೊಯ್ಯನೆ ನರದೊಳಗಿಳಿಯುವವು
ಧಿಮಿಧಿಮಿ ಎನ್ನುವ ಹೆಜ್ಜೆಯ ಸದ್ದಿಗೆ
ಸಕಲವು ಗಡಗಡ ನಡುಗುವುವು.

ರಾಶೇಕ್ರ

Friday, March 28, 2014

ಅಲ್ಪಸಂಖ್ಯಾತೆ ರೇವತಿ ರಂಗಪ್ರವೇಶ



ಲೈಂಗಿಕ ಅಲ್ಪ­ಸಂಖ್ಯಾತೆ ಎ. ರೇವತಿ ತಮ್ಮದೇ ಆತ್ಮಕಥೆ ‘ಬದುಕು ಬಯಲು’ ನಾಟಕದ ಮೂಲಕ ರಂಗ­ಪ್ರವೇಶ ಮಾಡಲಿದ್ದಾರೆ.

ರೇವತಿ ಅವರ ಆತ್ಮಕಥೆ ‘ದಿ ಟ್ರೂತ್ ಎಬೌಟ್‌ ಮಿ’ ಅನ್ನು ಇಂಗ್ಲಿಷಿ­ನಲ್ಲಿ ಪೆಂಗ್ವಿನ್ ಪ್ರಕಾಶನ ಪ್ರಕಟಿಸಿತ್ತು. ಈ ಕೃತಿ­ಯನ್ನು ‘ಬದುಕು ಬಯಲು’ ಹೆಸರಿನಲ್ಲಿ ಕನ್ನಡಕ್ಕೆ ಲೇಖಕಿ ದು. ಸರಸ್ವತಿ ಅನುವಾದಿ­ಸಿದ್ದಾರೆ.

ಶಿವಮೊಗ್ಗ ಜಿಲ್ಲೆ ಹೆಗ್ಗೋಡಿನ ‘ಜನಮನದಾಟ’ ತಂಡ­ದಲ್ಲಿ ಮಾರ್ಚ್‌ 5­­ರಿಂದ ರಿಹರ್ಸಲ್‌ ಆರಂಭಿಸಿ­ರುವ ರೇವತಿ, ತಮ್ಮದೇ ಆತ್ಮಕಥೆಯ ನಾಟಕ ರೂಪಕ್ಕೆ ಬಣ್ಣ ಹಚ್ಚುತ್ತಿರುವ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ್ದಾರೆ.

* ರಂಗ ಪ್ರವೇಶದ ಆಸೆ ಮೊಳೆತದ್ದು ಹೇಗೆ?
–ಬಾಲ್ಯದಲ್ಲೇ ನನಗೆ ಅಭಿನಯದ ಬಗ್ಗೆ ಒಲವಿತ್ತು. ಶಾಲೆಯಲ್ಲಿ ನಾಟಕ­ಗಳಲ್ಲಿ ಅಭಿನಯಿಸಿದ್ದೆ. ‘ಸಂಗಮ’­ದಲ್ಲಿ­ದ್ದಾಗ ಲೈಂಗಿಕ ಅಲ್ಪಸಂಖ್ಯಾತರ ಸಮಸ್ಯೆ­ಗಳನ್ನು ಕಲೆ ಮೂಲಕ ಜನರಿಗೆ ಸುಲಭ­ವಾಗಿ ತಲುಪಿ­ಸಬಹುದು ಎಂಬುದನ್ನು ಅರಿತಿದ್ದೆ.
‘ಬದುಕುಬಯಲು’ ನಾಟಕ ನೋಡಿ­ದಾಗ, ನನ್ನ ಪಾತ್ರ­ವನ್ನು ಬೇರೆ ಯಾರೋ ಅಭಿನಯಿಸುವು­ದ­ಕ್ಕಿಂತ ನಾನೇ ಅಭಿನಯಿಸಿದರೆ ಹೇಗೆ ಅಂತ ಪ್ರಶ್ನಿಸಿ­ಕೊಂಡೆ. ಈ ವಿಚಾರವನ್ನು ನಿರ್ದೇಶಕ ನೀನಾಸಂ ಗಣೇಶ್ ಅವ ರೊಂದಿಗೆ ಹಂಚಿ­ಕೊಂಡೆ.  ಅವರು ತಮ್ಮ ತಂಡಕ್ಕೆ ನನಗೆ ಪ್ರವೇಶ ನೀಡಿದರು.

* ನಿಮ್ಮದೇ ಆತ್ಮಕಥೆಯಲ್ಲಿ ನೀವೇ ಅಭಿನಯಿಸು­ತ್ತಿರು­ವುದು ಹೇಗನ್ನಿಸುತ್ತೆ?
–ಖುಷಿ ಅನ್ನಿಸುತ್ತೆ. ‘ನೀನಾಸಂ’ಗೆ ಬರಬೇಕು ಅಂತ ತುಂಬಾ ಸಲ ಅಂದು­ಕೊಂಡಿದ್ದೆ. ಆದರೆ, ಅದು ಈ  ರೀತಿ ಈಡೇರಿದೆ. ನಾಟಕದಲ್ಲಿ ರೇವತಿ ಪಾತ್ರ­ವನ್ನು ನಾನೇ ಮಾಡುತ್ತಿರುವುದರಿಂದ ಭಾವನೆಗಳನ್ನು ಸರಾಗವಾಗಿ ಅಭಿವ್ಯಕ್ತಿಪಡಿಸಲು ಸಾಧ್ಯ­ವಾ­ಗು­ತ್ತಿದೆ.

* ಲೈಂಗಿಕ ಅಲ್ಪಸಂಖ್ಯಾತರ ಸಮಸ್ಯೆ­ಗಳ ಬಿಂಬಕ್ಕೆ ರಂಗ­­ಮಾಧ್ಯಮವನ್ನೇ ಆಯ್ಕೆ ಮಾಡಿದ್ದು ಏಕೆ?
–ಮಾತು, ಬರಹಕ್ಕಿಂತ ರಂಗ­ಭೂಮಿ ಮೂಲಕ ಸುಲಭವಾಗಿ ಜನ­ರನ್ನು ತಲು­ಪ­­ಬಹುದು. ಲೈಂಗಿಕ ಅಲ್ಪ­ಸಂಖ್ಯಾತರ ಬಗ್ಗೆ ಸಮಾಜ­ದಲ್ಲಿ ಇನ್ನೂ ಆರೋಗ್ಯ­ಕರ ಮುಕ್ತಭಾವ ಬಂದಿಲ್ಲ. ಈ ಮೊದಲು ‘ಬದುಕು­ಬಯಲು’  ನಾಟಕ ನೋಡಿದ ಅನೇಕರು ಪೂರ್ವ­ಗ್ರಹ­ ಬಿಟ್ಟು ನಮ್ಮನ್ನು ಸಾಮಾನ್ಯ­­­ರಂತೆಯೇ ನೋಡುವಂತಾ­ಗಿದೆ. ಈ ಬದಲಾವಣೆ  ಸಾಧ್ಯ­ವಾಗಿದ್ದು ನಾಟಕ­ದಿಂ ದಲೇ. ಹಾಗಾಗಿ, ರಂಗಭೂಮಿಯನ್ನೇ ಆಯ್ದು­ಕೊಂಡೆ.

* ನಾಟಕದ ಸಂದೇಶವೇನು?
–ಲೈಂಗಿಕ ಅಲ್ಪಸಂಖ್ಯಾತರೂ  ಮನುಷ್ಯರೇ. ಅವರಲ್ಲೂ ಮನಸ್ಸಿದೆ ಎನ್ನುವ ಸಂದೇಶ ಸಮಾಜಕ್ಕೆ ತಲುಪ­ಬೇಕು.

* ‘ಜನಮನದಾಟ’ ತಂಡದ ಜತೆ ನಿಮ್ಮ ಒಡನಾಟ  ಹೇಗಿದೆ?
–ತಂಡದಲ್ಲಿ ನಾನೂ ಸೇರಿದಂತೆ ಒಟ್ಟು 13 ಮಂದಿ ಇದ್ದೇವೆ. ಇಲ್ಲಿ ನನ್ನನ್ನು ಎಲ್ಲರೂ ಹೆಣ್ಣೆಂದೇ ಗುರು­ತಿಸು­ತ್ತಾರೆ. ಇತರ ಮಹಿ­ಳೆ­­ಯ­ರೊಂದಿಗೆ ಹೇಗೆ ಇರು ತ್ತಾರೋ ನನ್ನ ಜತೆಯೂ ಹಾಗೇ ಇರು­ತ್ತಾರೆ. ಇದು ನನಗೆ ಸಂತಸ ನೀಡಿದೆ ಎಂದು ಮಾತು ಮುಗಿಸಿದರು ರೇವತಿ.
‘ಬದುಕು ಬಯಲು’ ನಾಟಕ  58 ಪ್ರದರ್ಶನ ಕಂಡಿದೆ. ರೇವತಿ ಅಭಿ­ನಯದ ನಾಟಕ ಏ. 18ರಿಂದ ಪ್ರದ­ರ್ಶನವಾಗಲಿದೆ. ಜುಲೈನಲ್ಲಿ ಬೆಂಗ­ಳೂ­ರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟ­ಕದ 100ನೇ ಪ್ರದರ್ಶನ ನಡೆಯಲಿದೆ.  ನಾಟಕ ಪ್ರದರ್ಶನ–ಮಾಹಿತಿಗೆ ಮೊಬೈಲ್: 99002 57750
ಏನಂತಾರೆ ನಿರ್ದೇಶಕರು?
‘ರೇವತಿ ನಮ್ಮ ತಂಡಕ್ಕೆ ಬರುತ್ತೇನೆ ಅಂದಾಗ ಆಶ್ಚರ್ಯ, ಸಂತಸ ಒಟ್ಟಿಗೇ ಆಯಿತು. ಅವರು ನಮ್ಮ ಜತೆ ಬಂದಿ­ದ್ದಾರೆ ಅನ್ನೋದಕ್ಕಿಂತ ಅವರ ಜತೆಯೇ ನಾವಿದ್ದೇವೆ ಅನ್ನೋದು ಸೂಕ್ತ.  ನಾಟ­ಕದ ರಿಹರ್ಸಲ್‌ನಲ್ಲಿ ಅವರು ಇತರ­ರಂತೆ ಅಭಿ­ನ­ಯಿಸಲು ಪ್ರಯ­ತ್ನಿ­ಸುತ್ತಿದ್ದರು.
ಆದರೆ, ನಿಮ್ಮದೇ ಪಾತ್ರ. ಹಾಗಾಗಿ, ಅಭಿನಯ ಬೇಡ. ನೀವು ಇರು­ವಂತೆಯೇ ಇದ್ದರೆ ಚೆನ್ನ ಎಂದೆ. ಅದನ್ನ­ವರು ತಿದ್ದಿ­ಕೊಂಡು ಸಹಜ­ವಾಗಿಯೇ ನಾಟಕ­ದಲ್ಲಿ ತಮ್ಮನ್ನು ತೊಡಗಿಸಿ­ಕೊಂಡಿದ್ದಾರೆ. ಕನ್ನಡ ರಂಗಭೂಮಿ­ಯಲ್ಲಿ ಲೈಂಗಿಕ ಅಲ್ಪ-­ಸಂಖ್ಯಾತೆ­ಯೊಬ್ಬರು ಪೂರ್ಣ ಪ್ರಮಾಣದ ನಾಯಕಿಯಾಗಿ ಬಹುಶಃ ಇದೇ ಮೊದಲ ಬಾರಿ ಅಭಿನ­ಯಿ­ಸು­ತ್ತಿ­ದ್ದಾರೆ ಎನ್ನುತ್ತಾರೆ  ನಿರ್ದೇಶಕ ಎಂ. ಗಣೇಶ.

- ಮಂಜು ಶ್ರೀ . ಎಂ.ಕಡಕೋಳ
  ಸೌಜನ್ಯ : ಪ್ರಜಾವಾಣಿ

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......