ಪ್ರಾರ್ಥನೆ ಎಂದರೆ ಆತ್ಮದ ನಿವೇದನೆ - ಶ್ರೀವತ್ಸ ಜೋಶಿ

"ಪ್ರಾರ್ಥನೆ ಎಂದರೆ ಬೇಡಿಕೆ ಅಲ್ಲ. ಪ್ರಾರ್ಥನೆ ಎಂದರೆ ಆತ್ಮದ ನಿವೇದನೆ. ನಮ್ಮಲ್ಲಿನ ದೈನ್ಯಭಾವವನ್ನು ದಿನದಿನವೂ ಒಪ್ಪಿಕೊಳ್ಳುವ ರೀತಿ. ಪ್ರಾರ್ಥನೆಯಲ್ಲಿ ಪದಗಳಿಲ್ಲದಿದ್ದರೂ ಸರಿಯೇ, ಹೃದಯ ಇರಬೇಕು. ಹೃದಯವೇ ಇಲ್ಲದೆ ಬರಿ ಪದಗಳ ಅಬ್ಬರವು ಪ್ರಾರ್ಥನೆ ಎನಿಸದು" ಎಂದಿದ್ದ ಮಹಾತ್ಮ ಗಾಂಧೀಜಿಯವರು ತಮ್ಮ ಜೀವನದುದ್ದಕ್ಕೂ ಪ್ರಾರ್ಥನೆಗೆ ಅತ್ಯಂತ ಹೆಚ್ಚು ಮಹತ್ವ ಕೊಟ್ಟವರು. ಪ್ರಾರ್ಥನೆಯ ಅತಿದೊಡ್ಡ ಪ್ರಯೋಜನವೆಂದರೆ ಮನಸ್ಸಿನ ಏಕಾಗ್ರತೆಗೆ ಅನುಕೂಲ ಆಗುವುದು. ಶಾಲೆಗಳಲ್ಲಿ ಬೆಳಗಿನ ಹೊತ್ತು ಪ್ರಾರ್ಥನೆಯ ನಂತರವೇ ಪಾಠಪ್ರವಚನ ಆರಂಭ ಎಂಬ ಕ್ರಮ ಆದಿಕಾಲದಿಂದಲೂ ಬಂದಿರುವುದು ಅದೇ ಕಾರಣಕ್ಕೆ. ವಿಪರ್ಯಾಸವೆಂದರೆ ಈಗ ಢೋಂಗಿ ಜಾತ್ಯತೀತರು ಪ್ರಾರ್ಥನೆಯ ನಿಜವಾದ ಮಹತ್ವವನ್ನರಿಯದೆ, ಅದಕ್ಕೆ ಧರ್ಮ-ಜಾತಿ-ಮತಗಳ ಲೇಪ ಹಚ್ಚಿರುವುದರಿಂದ ಎಷ್ಟೋಕಡೆ ಶಾಲೆಗಳಲ್ಲಿ ಪ್ರಾರ್ಥನೆಯೇ ಇಲ್ಲವಾಗಿದೆ

ನಾನು ಕಲಿತ ಪ್ರಾಥಮಿಕ ಶಾಲೆಯಲ್ಲಿ ವಾರದ ಆರು ದಿನಗಳಲ್ಲಿ ಒಂದೊಂದು ದಿನ ಒಂದೊಂದು ಪ್ರಾರ್ಥನೆ ಹಾಡುವ ಕ್ರಮವಿತ್ತು. ಸೋಮವಾರದ ಪ್ರಾರ್ಥನೆ "ಸ್ವಾಮಿದೇವನೆ ಲೋಕಪಾಲನೆ..." ನಾವು ಹಾಡುತ್ತಿದ್ದದ್ದು (ಬಹುಶಃ ಹೆಚ್ಚಿನೆಲ್ಲ ಶಾಲೆಗಳಲ್ಲೂ ಇದ್ದದ್ದು) ಸ್ಕೂಲ್ ಮಾಸ್ಟರ್ ಚಲನಚಿತ್ರದಲ್ಲಿ ಅಳವಡಿಸಿಕೊಳ್ಳಲಾದ ಎರಡು ಚರಣಗಳಷ್ಟೇ ಇರುವ ಹಾಡು. ಆದರೆ ಮೂಲದಲ್ಲಿ ಇದು ಸೋಸಲೆ ಅಯ್ಯ ಶಾಸ್ತ್ರಿಗಳು (1854-1934) ಎಂಬ ವಿದ್ವಾಂಸರು ರಚಿಸಿದ ಎಂಟು ಚರಣಗಳಿರುವ ಒಂದು ಸುಂದರವಾದ, ಅರ್ಥಗರ್ಭಿತ ಗೀತೆ. ನಮ್ಮೆಲ್ಲರ ಬಾಳಿಗೆ ಬೆಳಕು ನೀಡುವ ಸೂರ್ಯನ ಸ್ತುತಿ. "ಸರ್ವರಿಗೊಂದೇ ಸೂರ್ಯನಕಣ್ಣು ವಿಧವಿಧ ಸಸ್ಯಕೆ ಒಂದೇ ಮಣ್ಣು" ಎಂಬ ಕವಿವಾಣಿಯಂತೆ ಈ ಜಗಕ್ಕೆಲ್ಲ ಒಬ್ಬನೇ ಸೂರ್ಯ. ಬೆಳಕು ನೀಡುವ ಆತನಿಗೆ ನಾವೆಲ್ಲರೂ ಏಕಪ್ರಕಾರವಾಗಿ ಕೃತಜ್ಞರಾಗಿರುವುದರಲ್ಲಿ ತಪ್ಪೇನಿದೆ?

ಸೋಸಲೆ ಎಂದರೆ ಮೈಸೂರಿನ ಪಕ್ಕ ತಿರುಮಕೂಡಲು ನರಸೀಪುರದ ಒಂದು ಹಳ್ಳಿ. ಅಲ್ಲಿ ಜನಿಸಿದ ಅಯ್ಯ ಶಾಸ್ತ್ರಿಗಳು ಪ್ರಾರಂಭಿಕ ಶಿಕ್ಷಣವನ್ನು ಮನೆಯಲ್ಲಿಯೇ ಪಡೆದು ನಂತರ ಮೈಸೂರಿನಲ್ಲಿ ವ್ಯಾಕರಣ, ತರ್ಕ, ಅಲಂಕಾರಾದಿ ಶಾಸ್ತ್ರಾಧ್ಯಯನ ನಡೆಸಿದರು. ಸಾಹಿತ್ಯವಷ್ಟೇ ಅಲ್ಲದೆ ಚಿತ್ರಕಲೆ, ಸಂಗೀತದಲ್ಲೂ ಪರಿಣತಿ ಗಳಿಸಿದರು. ಅವರು ಸುಮಾರಷ್ಟು ಸಾಹಿತ್ಯಕೃತಿಗಳನ್ನು ರಚಿಸಿದ್ದಾರಾದರೂ ಕನ್ನಡಜನಮಾನಸದಲ್ಲಿ ಅಜರಾಮರವಾಗಿ ಉಳಿದದ್ದು ಈ ಪ್ರಾರ್ಧನೆಗೀತೆ.

“ಸ್ವಾಮಿ ದೇವನೆ ಲೋಕ ಪಾಲನೆ...” ಛಂದೋಬದ್ಧವಾಗಿ ರಚಿತವಾದ ಪದ್ಯ. ಮಲ್ಲಿಕಾಮಾಲೆ ಎಂಬ ಛಂದಸ್ಸು. ಒಂದೊಂದು ಸಾಲಿನಲ್ಲಿ 3,4,3,4,3,4,3,4 ಮಾತ್ರೆಗಳ ಗಣಗಳು. ಜನಪ್ರಿಯ ಶಾಲಾ ಪದ್ಯಗಳಾದ ’ನಾವು ಎಳೆಯರು ನಾವು ಗೆಳೆಯರು ಹೃದಯ ಹೂವಿನ ಹಂದರ...’, ’ಭಾರತಾಂಬೆಯೆ ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೇ...’ ಮುಂತಾದವು ಕೂಡ ಇದೇ ಲಯದಲ್ಲಿರುವವು. ಆದಿಪ್ರಾಸವೂ ಇರುವುದರಿಂದ (ಒಂದು ಚರಣದಲ್ಲಿ ಪ್ರತಿ ಸಾಲಿನ ಎರಡನೇ ಅಕ್ಷರವು ಒಂದೇ ವ್ಯಂಜನದಿಂದ ಆಗಿರುವುದು) ಕಂಠಪಾಠ ಮಾಡುವುದಕ್ಕೆ ಅನುಕೂಲ.

ಈಗ ನೀವು ಮತ್ತೊಮ್ಮೆ ನಿಮ್ಮ ಶಾಲಾದಿನಗಳನ್ನು ನೆನಪಿಸಿಕೊಳ್ಳುತ್ತ, ಶಾಲೆಯಲ್ಲಿ ಪ್ರಾರ್ಥನೆ ಮಾಡುತ್ತಿದ್ದ ಕ್ಷಣಗಳನ್ನು ಕಲ್ಪಿಸಿಕೊಳ್ಳುತ್ತ ‘ಸ್ವಾಮಿದೇವನೆ ಲೋಕಪಾಲನೆ...’ ಪದ್ಯವನ್ನು ರಾಗವಾಗಿ ಹಾಡಬಯಸುತ್ತೀರಾದರೆ, ಕಂಠಪಾಠ ಮಾಡಬಯಸುತ್ತೀರಾದರೆ ಪದ್ಯದ ಪೂರ್ಣಸಾಹಿತ್ಯ ಇಲ್ಲಿದೆ:

ಸ್ವಾಮಿದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೇ
ಪ್ರೇಮದಿಂದಲಿ ನೋಡು ನಮ್ಮನು ತೇ ನಮೋಸ್ತು ನಮೋಸ್ತುತೇ
ನೇಮಿಸೆಮ್ಮೊಳು ಧರ್ಮಕಾರ್ಯವ ತೇ ನಮೋಸ್ತು ನಮೋಸ್ತುತೇ
ಕ್ಷೇಮದಿಂದಲಿ ಪಾಲಿಸೆಮ್ಮನು ತೇ ನಮೋಸ್ತು ನಮೋಸ್ತುತೇ || ೧ ||

ದೇವ ದೇವನೆ ಹಸ್ತ ಪಾದಗಳಿಂದಲೂ ಮನದಿಂದಲೂ
ನಾವು ಮಾಡಿದ ಪಾಪವೆಲ್ಲವ ಹೋಗಲಾಡಿಸು ಬೇಗನೆ
ಕಾವರಿಲ್ಲವು ನಿನ್ನ ಬಿಟ್ಟರೆ ಸೂರ್ಯನೇ ಜಗದೀಶನೇ
ಜೀವಕೋಟಿಯು ನಿನ್ನ ಈ ಬೆಳಕಿಂದ ಜೀವಿಪುದಲ್ಲವೆ || ೨ ||

ರಾತ್ರೆನಿದ್ದೆಯ ಗೈವ ಕಾಲದಿ ನೀನೆ ನಮ್ಮನು ಕಾದೆಯೈ
ಮಿತ್ರನೆಂಬುವ ನಾಮಧೇಯವು ಸತ್ಯವಾಯಿತು ನಿನ್ನೊಳು
ಸ್ತೋತ್ರ ಮಾಡುವ ಹಾಗೆ ನಿನ್ನನ್ನು ಹಕ್ಕಿಗಳ್ ದನಿಗೈವವೈ
ಚಿತ್ರಭಾನುವೆ ನೋಡಿ ನಿನ್ನನದೆಲ್ಲಿ ಪೋದುದೊ ಕತ್ತಲೆ || ೩ ||

ಉತ್ತಮೋತ್ತಮ ನಿನ್ನ ಪಾದದ ಭಕ್ತಿಯೇ ಸ್ಥಿರವಲ್ಲವೇ
ವಿತ್ತವೆಂಬುದು ಗಾಳಿಯಲ್ಲಿಹ ದೀಪದಂದದಿ ಚಂಚಲ
ಮತ್ತರಾಗುತ ಬಿಟ್ಟು ನಿನ್ನನು ಕೆಟ್ಟ ಯೋಚನೆ ಗೈಯದಾ
ಚಿತ್ತವಂ ನಮಗಿತ್ತು ರಕ್ಷಿಸು ಪದ್ಮನಾಭ ಸುರೇಶನೇ || ೪ ||

ಆಡುವಾಗಲು ನಾವು ಭೋಜನ ಮಾಡುವಾಗಲು ಸರ್ವದಾ
ನೋಡಿ ನೀ ದಯದಿಂದ ನಮ್ಮನು ಪಾಲಿಸೈ ಭಗವಂತನೇ
ಬೇಡಿಕೊಂಬೆವು ನಮ್ಮ ದೇಹಕೆ ಸೌಖ್ಯವಂ ಬಲ ಪುಷ್ಟಿಯಂ
ನೀಡು ನಿನ್ನಯ ಪಾದಭಕ್ತಿಯನೆಂದಿಗೂ ಬಿಡಲಾರೆವು || ೫ ||

ನಿನ್ನ ದರ್ಶನಗೈವ ನೇತ್ರದ ಜನ್ಮ ಸಾರ್ಥಕವಲ್ಲವೇ
ನಿನ್ನ ಪೂಜಿಪ ಹಸ್ತವೇ ಬಲುದೊಡ್ಡದಲ್ಲವೆ ದೇವನೇ
ನಿನ್ನ ನಾಮವ ಪೇಳ್ವ ನಾಲಗೆ ಧನ್ಯವಲ್ಲವೆ ಸರ್ವದಾ
ನಿನ್ನ ಜಾನಿಪ ಚಿತ್ತವೃತ್ತಿಯೆ ಯೋಗ್ಯವಲ್ಲವೆ ಲೋಕದಿ || ೬ ||

ನೀನೆ ತಾಯಿಯು ನೀನೆ ತಂದೆಯು ನೀನೆ ನಮ್ಮೊಡನಾಡಿಯೂ
ನೀನೆ ಬಂಧುವು ನೀನೆ ಭಾಗ್ಯವು ನೀನೆ ವಿದ್ಯೆಯು ಬುದ್ಧಿಯೂ
ನೀನು ಪಾಲಿಸದಿದ್ದರೆಮ್ಮನು ಬೇರೆ ಪಾಲಿಪರಿಲ್ಲಲೈ
ದೀನಪಾಲನೆ ನಿನ್ನಧೀನದೊಳಿರ್ಪನಮ್ಮನು ಪಾಲಿಸೈ || ೭ ||

ಶ್ರೀಮುಕುಂದನೆ ಗಾಳಿಯಲ್ಲಿಯು ನೀರಿನಲ್ಲಿಯು ನೀನಿಹೇ
ಭೂಮಿಯಲ್ಲಿ ಯಮಗ್ನಿಯಲ್ಲಿಯು ಬಾನಿನಲ್ಲಿಯು ನೀನಿಹೆ
ರಾಮನೂ ನರಸಿಂಹನೂ ಪರಮಾತ್ಮ ಕೃಷ್ಣನು ನೀನೆಯೇ
ನೀ ಮಹಾತ್ಮನು ನಮ್ಮ ತಪ್ಪುಗಳೆಲ್ಲ ಮನ್ನಿಸಿ ಪಾಲಿಸೈ || ೮ ||

* * *
’ಸ್ಕೂಲ್ ಮಾಸ್ಟರ್’ ಚಿತ್ರದಲ್ಲಿನ ‘ಸ್ವಾಮಿ ದೇವನೆ ಲೋಕಪಾಲನೆ...’ ಇಲ್ಲಿದೆ. ಕಣಗಾಲ್ ಪಭಾಕರ ಶಾಸ್ತ್ರಿಯವರು ಮೂಲ ಹಾಡಿನಿಂದ ಕೆಲವು ಸಾಲುಗಳನ್ನು ಎರವಲು ಪಡೆದು, ಮತ್ತೆರಡು ಸಾಲುಗಳನ್ನು ಸೇರಿಸಿ ಮಾಡಿದ ರಚನೆಯಿದು. ಟಿ.ಜಿ.ಲಿಂಗಪ್ಪ ಅವರು ಸಂಗೀತ ನಿರ್ದೇಶಿಸಿ ಸಂಗಡಿಗರೊಂದಿಗೆ ಹಾಡಿದ್ದಾರೆ.
https://www.youtube.com/watch?v=zhIu_VjlTNQ

ಶ್ರೀ ಶ್ರೀವತ್ಸ ಜೋಶಿ


Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು