ಅಲ್ಪಸಂಖ್ಯಾತೆ ರೇವತಿ ರಂಗಪ್ರವೇಶ
ಲೈಂಗಿಕ ಅಲ್ಪಸಂಖ್ಯಾತೆ ಎ. ರೇವತಿ ತಮ್ಮದೇ ಆತ್ಮಕಥೆ ‘ಬದುಕು ಬಯಲು’ ನಾಟಕದ ಮೂಲಕ ರಂಗಪ್ರವೇಶ ಮಾಡಲಿದ್ದಾರೆ.
ರೇವತಿ ಅವರ ಆತ್ಮಕಥೆ ‘ದಿ ಟ್ರೂತ್ ಎಬೌಟ್ ಮಿ’ ಅನ್ನು ಇಂಗ್ಲಿಷಿನಲ್ಲಿ ಪೆಂಗ್ವಿನ್ ಪ್ರಕಾಶನ ಪ್ರಕಟಿಸಿತ್ತು. ಈ ಕೃತಿಯನ್ನು ‘ಬದುಕು ಬಯಲು’ ಹೆಸರಿನಲ್ಲಿ ಕನ್ನಡಕ್ಕೆ ಲೇಖಕಿ ದು. ಸರಸ್ವತಿ ಅನುವಾದಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಹೆಗ್ಗೋಡಿನ ‘ಜನಮನದಾಟ’ ತಂಡದಲ್ಲಿ ಮಾರ್ಚ್ 5ರಿಂದ ರಿಹರ್ಸಲ್ ಆರಂಭಿಸಿರುವ ರೇವತಿ, ತಮ್ಮದೇ ಆತ್ಮಕಥೆಯ ನಾಟಕ ರೂಪಕ್ಕೆ ಬಣ್ಣ ಹಚ್ಚುತ್ತಿರುವ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ್ದಾರೆ.
* ರಂಗ ಪ್ರವೇಶದ ಆಸೆ ಮೊಳೆತದ್ದು ಹೇಗೆ?
–ಬಾಲ್ಯದಲ್ಲೇ ನನಗೆ ಅಭಿನಯದ ಬಗ್ಗೆ ಒಲವಿತ್ತು. ಶಾಲೆಯಲ್ಲಿ ನಾಟಕಗಳಲ್ಲಿ ಅಭಿನಯಿಸಿದ್ದೆ. ‘ಸಂಗಮ’ದಲ್ಲಿದ್ದಾಗ ಲೈಂಗಿಕ ಅಲ್ಪಸಂಖ್ಯಾತರ ಸಮಸ್ಯೆಗಳನ್ನು ಕಲೆ ಮೂಲಕ ಜನರಿಗೆ ಸುಲಭವಾಗಿ ತಲುಪಿಸಬಹುದು ಎಂಬುದನ್ನು ಅರಿತಿದ್ದೆ.
‘ಬದುಕುಬಯಲು’ ನಾಟಕ ನೋಡಿದಾಗ, ನನ್ನ ಪಾತ್ರವನ್ನು ಬೇರೆ ಯಾರೋ ಅಭಿನಯಿಸುವುದಕ್ಕಿಂತ ನಾನೇ ಅಭಿನಯಿಸಿದರೆ ಹೇಗೆ ಅಂತ ಪ್ರಶ್ನಿಸಿಕೊಂಡೆ. ಈ ವಿಚಾರವನ್ನು ನಿರ್ದೇಶಕ ನೀನಾಸಂ ಗಣೇಶ್ ಅವ ರೊಂದಿಗೆ ಹಂಚಿಕೊಂಡೆ. ಅವರು ತಮ್ಮ ತಂಡಕ್ಕೆ ನನಗೆ ಪ್ರವೇಶ ನೀಡಿದರು.
* ನಿಮ್ಮದೇ ಆತ್ಮಕಥೆಯಲ್ಲಿ ನೀವೇ ಅಭಿನಯಿಸುತ್ತಿರುವುದು ಹೇಗನ್ನಿಸುತ್ತೆ?
–ಖುಷಿ ಅನ್ನಿಸುತ್ತೆ. ‘ನೀನಾಸಂ’ಗೆ ಬರಬೇಕು ಅಂತ ತುಂಬಾ ಸಲ ಅಂದುಕೊಂಡಿದ್ದೆ. ಆದರೆ, ಅದು ಈ ರೀತಿ ಈಡೇರಿದೆ. ನಾಟಕದಲ್ಲಿ ರೇವತಿ ಪಾತ್ರವನ್ನು ನಾನೇ ಮಾಡುತ್ತಿರುವುದರಿಂದ ಭಾವನೆಗಳನ್ನು ಸರಾಗವಾಗಿ ಅಭಿವ್ಯಕ್ತಿಪಡಿಸಲು ಸಾಧ್ಯವಾಗುತ್ತಿದೆ.
* ಲೈಂಗಿಕ ಅಲ್ಪಸಂಖ್ಯಾತರ ಸಮಸ್ಯೆಗಳ ಬಿಂಬಕ್ಕೆ ರಂಗಮಾಧ್ಯಮವನ್ನೇ ಆಯ್ಕೆ ಮಾಡಿದ್ದು ಏಕೆ?
–ಮಾತು, ಬರಹಕ್ಕಿಂತ ರಂಗಭೂಮಿ ಮೂಲಕ ಸುಲಭವಾಗಿ ಜನರನ್ನು ತಲುಪಬಹುದು. ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆ ಸಮಾಜದಲ್ಲಿ ಇನ್ನೂ ಆರೋಗ್ಯಕರ ಮುಕ್ತಭಾವ ಬಂದಿಲ್ಲ. ಈ ಮೊದಲು ‘ಬದುಕುಬಯಲು’ ನಾಟಕ ನೋಡಿದ ಅನೇಕರು ಪೂರ್ವಗ್ರಹ ಬಿಟ್ಟು ನಮ್ಮನ್ನು ಸಾಮಾನ್ಯರಂತೆಯೇ ನೋಡುವಂತಾಗಿದೆ. ಈ ಬದಲಾವಣೆ ಸಾಧ್ಯವಾಗಿದ್ದು ನಾಟಕದಿಂ ದಲೇ. ಹಾಗಾಗಿ, ರಂಗಭೂಮಿಯನ್ನೇ ಆಯ್ದುಕೊಂಡೆ.
* ನಾಟಕದ ಸಂದೇಶವೇನು?
–ಲೈಂಗಿಕ ಅಲ್ಪಸಂಖ್ಯಾತರೂ ಮನುಷ್ಯರೇ. ಅವರಲ್ಲೂ ಮನಸ್ಸಿದೆ ಎನ್ನುವ ಸಂದೇಶ ಸಮಾಜಕ್ಕೆ ತಲುಪಬೇಕು.
* ‘ಜನಮನದಾಟ’ ತಂಡದ ಜತೆ ನಿಮ್ಮ ಒಡನಾಟ ಹೇಗಿದೆ?
–ತಂಡದಲ್ಲಿ ನಾನೂ ಸೇರಿದಂತೆ ಒಟ್ಟು 13 ಮಂದಿ ಇದ್ದೇವೆ. ಇಲ್ಲಿ ನನ್ನನ್ನು ಎಲ್ಲರೂ ಹೆಣ್ಣೆಂದೇ ಗುರುತಿಸುತ್ತಾರೆ. ಇತರ ಮಹಿಳೆಯರೊಂದಿಗೆ ಹೇಗೆ ಇರು ತ್ತಾರೋ ನನ್ನ ಜತೆಯೂ ಹಾಗೇ ಇರುತ್ತಾರೆ. ಇದು ನನಗೆ ಸಂತಸ ನೀಡಿದೆ ಎಂದು ಮಾತು ಮುಗಿಸಿದರು ರೇವತಿ.
‘ಬದುಕು ಬಯಲು’ ನಾಟಕ 58 ಪ್ರದರ್ಶನ ಕಂಡಿದೆ. ರೇವತಿ ಅಭಿನಯದ ನಾಟಕ ಏ. 18ರಿಂದ ಪ್ರದರ್ಶನವಾಗಲಿದೆ. ಜುಲೈನಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕದ 100ನೇ ಪ್ರದರ್ಶನ ನಡೆಯಲಿದೆ. ನಾಟಕ ಪ್ರದರ್ಶನ–ಮಾಹಿತಿಗೆ ಮೊಬೈಲ್: 99002 57750
ಏನಂತಾರೆ ನಿರ್ದೇಶಕರು?
‘ರೇವತಿ ನಮ್ಮ ತಂಡಕ್ಕೆ ಬರುತ್ತೇನೆ ಅಂದಾಗ ಆಶ್ಚರ್ಯ, ಸಂತಸ ಒಟ್ಟಿಗೇ ಆಯಿತು. ಅವರು ನಮ್ಮ ಜತೆ ಬಂದಿದ್ದಾರೆ ಅನ್ನೋದಕ್ಕಿಂತ ಅವರ ಜತೆಯೇ ನಾವಿದ್ದೇವೆ ಅನ್ನೋದು ಸೂಕ್ತ. ನಾಟಕದ ರಿಹರ್ಸಲ್‌ನಲ್ಲಿ ಅವರು ಇತರರಂತೆ ಅಭಿನಯಿಸಲು ಪ್ರಯತ್ನಿಸುತ್ತಿದ್ದರು.
ಆದರೆ, ನಿಮ್ಮದೇ ಪಾತ್ರ. ಹಾಗಾಗಿ, ಅಭಿನಯ ಬೇಡ. ನೀವು ಇರುವಂತೆಯೇ ಇದ್ದರೆ ಚೆನ್ನ ಎಂದೆ. ಅದನ್ನವರು ತಿದ್ದಿಕೊಂಡು ಸಹಜವಾಗಿಯೇ ನಾಟಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕನ್ನಡ ರಂಗಭೂಮಿಯಲ್ಲಿ ಲೈಂಗಿಕ ಅಲ್ಪ-ಸಂಖ್ಯಾತೆಯೊಬ್ಬರು ಪೂರ್ಣ ಪ್ರಮಾಣದ ನಾಯಕಿಯಾಗಿ ಬಹುಶಃ ಇದೇ ಮೊದಲ ಬಾರಿ ಅಭಿನಯಿಸುತ್ತಿದ್ದಾರೆ ಎನ್ನುತ್ತಾರೆ ನಿರ್ದೇಶಕ ಎಂ. ಗಣೇಶ.
- ಮಂಜು ಶ್ರೀ . ಎಂ.ಕಡಕೋಳ
ಸೌಜನ್ಯ : ಪ್ರಜಾವಾಣಿ
Comments
Post a Comment