Sunday, September 8, 2013

ಶಿಶಿರದ ಮೊದಲಲ್ಲಿ ಬೀಳುವ - ರಾಜೇಂದ್ರ ಪ್ರಸಾದ್

ಶಿಶಿರದ ಮೊದಲಲ್ಲಿ ಬೀಳುವ
ರಾತ್ರಿಮಳೆ ಹೊತ್ತಲ್ಲಿ
ಇವಳು ಪ್ರಳಯ ಸ್ವರೂಪಿ..
ನಾನೋ ಬಯಲು ಸೀಮೆಯ
ಬಿಸಿಲು ಕುದುರೆ!

ಖುರಪುಟದ ನಾದ
ನದಿ ಹರಿಯೋ
ಶಬ್ದ ಸಂಕರಕ್ಕೆ
ಭೂವ್ಯೋಮಗಳು ಒಂದಾದ
ಸಿಡಿಲ ಸಂಭ್ರಮ

ಧೋ..ಧೋ.. ಸುರಿವ ಮಳೆ
Sri Rajendra Prasad (RP)
ಭೋರ್ಗೆರೆವ ಗಂಡುಹೊಳೆ
ಹಾಗೆ ಸಣ್ಣಗೆ ಮೀಟಿದಂತೆ
ವೀಣೆ ತಂತಿ ತಾನ.

ದಾರಿಯುದ್ದ ಮುತ್ತಿನಧರ
ಕಚ್ಚಿದ ಮಧ್ಯಪಾನ
ಗಮ್ಯವೋ ಮುಳುಗೆದ್ದ
ಸಮಸ್ತ ತೀರ್ಥಸ್ನಾನ

ಮುಗಿಯುತ್ತಲೇ ಇಲ್ಲ
ದಂಡಯಾತ್ರೆ..
ಹರಿವ ನದಿಗೆ ಮೈಯೆಲ್ಲಾ ಕಾಲು
ಸುರಿವ ಮಳೆಗೆ ಮೈಯೆಲ್ಲಾ ಜೀವ

ಹಗಲು ಹಕ್ಕಿ ಹಾಡುವ ಹೊತ್ತಿಗೆ
ಅವಳು ಕೊಚ್ಚಿಹೋದ ಭತ್ತದ ಗದ್ದೆ
ನಾನು ನೆರೆ ನಿಂತ ಹೆಬ್ಬಳ್ಳ.. - ಆರ್.ಪಿ.

ಭೂಮಿಗೀತ ಬ್ಲಾಗಿಂದ,




ನನಗೂ ಕೆಲವು ಆಸೆಗಳಿದ್ದೋ - ರಾಜೇಂದ್ರ ಪ್ರಸಾದ್

Rajendra Prasad ( RP)

ನನಗೂ ಕೆಲವು ಆಸೆಗಳಿದ್ದೋ

ಸಿಕ್ಕರೆ ಮಂಟೇಸ್ವಾಮಿಯಂತ ಗುರು ಸಿಕ್ಕಬೇಕು
ಆದರೆ ಸಿದ್ದಪ್ಪಾಜಿಯಂತ ಶಿಷ್ಯ ಆಗಬೇಕು

ಸಿಕ್ಕರೆ ಬುದ್ಧನಂತ ಗುರು ಸಿಕ್ಕಬೇಕು
ಆದರೆ ಮಹಾಕಶ್ಯಪನಂತ ಶಿಷ್ಯ ಆಗಬೇಕು

ಸಿಕ್ಕರೆ ಬೋಧಿಧರ್ಮನಂತ ಗುರು ಸಿಕ್ಕಬೇಕು
ಆದರೆ ದಾಜ಼ು ಹುಇಕೆಯಂತ ಶಿಷ್ಯ ಆಗಬೇಕು

ಸಿಕ್ಕರೆ ಯಮನಂತ ಗುರು ಸಿಕ್ಕಬೇಕು
ಆದರೆ ನಚಿಕೇತನಂತ ಶಿಷ್ಯ ಆಗಬೇಕು

ಸಿಕ್ಕರೆ ಕೃಷ್ಣನಂತ ಗುರು ಸಿಕ್ಕಬೇಕು
ಆದರೆ ಅಭಿಮನ್ಯುನಂತ ಶಿಷ್ಯ ಆಗಬೇಕು

ಆದರೂ ನಾನು ದ್ರೋಣನಿರದ ಏಕಲವ್ಯನೇ ಆದೆ. ಗುರು ನನಗೆ ಅಮೂರ್ತನಾಗೇ ಉಳಿದುಬಿಟ್ಟ...

ಭೂಮಿಗೀತ ಬ್ಲಾಗಿಂದ,

ಗಣಪತಿ ಹಬ್ಬ - ಶತಾವಧಾನಿ ಆರ್‌. ಗಣೇಶ್‌


ಮೊನ್ನೆ ರಸ್ತೆಯ ಬದಿಗೆ ಚೌಕಾಸಿ ದರದಲ್ಲಿ
ತಂದು ಕಟ್ಟಿದ್ದ ಬಾಳೆಯ ಕಂದನು
ನಿನ್ನೆಮಟ್ಟಿಗೆ ಮಾತ್ರ ಮಂದಾಸನದ ಪಾತ್ರ
ವಹಿಸಿದ್ದ ಕುರ್ಚಿಯಿಂದೀಗ ಕಳಚಿ
ಊಟಕ್ಕೆ ತಕ್ಕಮಟ್ಟಿಗೆ ಒದಗಬಹುದಾದ
ಎಲೆಗಳನ್ನೂ ಅವುಗಳಿಂದ ಕಿತ್ತು 
ಉಳಿದಸ್ಥಿಪಂಜರವ ಹಿತ್ತಿಲ್ಲೆಸೆವಾಗ
ಯಾವುದೋ ನಂಟನ್ನು ನುಲಿದ ಭಾವ.
ಬತ್ತಿ ಬಾಡಿದ್ದ ನಿರ್ಮಾಲ್ಯವನು ಹೂಗಿಡದ
ಪಾತಿಗಳಿಗೆಸೆವಾಗಲೇನೊ ಅರಕೆ.
ನಿನ್ನೆಗಳ ನೆನಪೆಲ್ಲ ನಾಳೆಹೂಗಳಿಗೆಂದು
ಗೊಬ್ಬರದ ಗತಿಗಾಣುತಿರುವ ಹಾಗೆ.
ಹತ್ತುಹಲವರು ಬಂದು ತಳಿದ ಮಂತ್ರಾಕ್ಷತೆಯ
ಕಾಳು ಚೆಲ್ಲಾಡಿ ತುಸು ರೂಪಗೆಟ್ಟು
ಆಕಳಿಸಿ ಮೈಚಾಚಿ ತೂಕಡಿಪ ರಂಗೋಲಿ-
ಗರಿವಿಲ್ಲ ಪೊರಕೆ-ಮೊರಗಳ ಜೋಗುಳ.
'ಮಣೆಯ ಮೇಲಿರುವ ರಂಗೋಲಿಯನ್ನಾದರೂ
ಮಂಚದಡಿ ಎತ್ತಿಡೋ! ಭದ್ರವಾಗಿ
ನಾಲ್ಕು ದಿನವಾದರೂ ನಿನ್ನ ದುಡಿಮೆಯ ಸಾಕ್ಷಿ
ಬಣ್ಣಬಣ್ಣದ ಧೂಳಿನಲ್ಲುಳಿಯಲಿ'
ಎನ್ನುವಮ್ಮನ ಮಾತು ಕಿವಿಯನಾಳುತ್ತಿರಲು
ನೆಲವ ಸಾರಿಸುತಲಿದೆ ಕೈಯ ಕೂಲಿ
ದೀಪದೆಣ್ಣೆಯ ಜಿಡುª, ಗಂಧ-ಕುಂಕುಮ ಸೇರಿ
ಮಡಿಯ ಮೈಲಿಗೆಯೊಳಿದೆ ಗಾರೆಗಚ್ಚು.
ರಜತಪೂಜಾಪಾತ್ರ-ಪರಿಕರಗಳನ್ನೆಲ್ಲ
ಮತ್ತೆ ತೊಳೆದೆತ್ತಿಡುವ ಜತನದಲ್ಲಿ
ಗಂಧ-ಕುಂಕುಮಹರಿದ್ರಾಚೂರ್ಣಚೈತನ್ಯ
ನೆನಪಾಗಿ ನಿಂತ ಬರಿಬಟ್ಟಲುಗಳು
ಮತ್ತಷ್ಟು ಹೊಳೆದರೂ ಮನದುಂಬಲಾರದಿವೆ
ಶತಾವಧಾನಿ ಡಾ ಆರ್ ಗಣೇಶ್', 
ಸಿರಿಯಿದ್ದು ಸೊಗವಿರದ ನಗರದಂತೆ.
ಮಂಟಪಕೆ ತಂದಿದ್ದ ಸಿಂಗರದ ಸಾಮಗ್ರಿ
ಕೆಲಸದಿಂದ ನಿವೃತ್ತರೆನುವ ಹಾಗೆ,
ಯುದಟಛಿದಲಿ ಗೆದ್ದರೂ ಸಂಧಿಯಲಿ ಸೋತಿರುವ
ಸೈನಿಕರ ಹಾಗೆ; ತಣ್ಣನೆಯ ಬೇಗೆ.
ತಡೆಯೆ ಜಲಮಾಲಿನ್ಯ, ಕೆರೆಯಾಗಿರೆ ಬಕೆಟ್ಟು
ನಿನ್ನೆಯೆ ವಿಸರ್ಜಿಸಿದ ವಿಘ್ನರಾಜ
ಬಣ್ಣಬಣ್ಣದ ಮಣ್ಣಮೈ ಮೆತ್ತಗಾದರೂ
ತುಸುವಾದರೂ ಮಾಸದಿರುವ ತೇಜ.
ನಿನ್ನೆ ಸಂಭ್ರಮವೆಲ್ಲ ಕನಸಾಗಿ ಕರಗುತಿರೆ
ನೆನಪು ನೀರಾಗುತಿರೆ, ನಲವು ಮುಳುಗೆ;
ಕರಗದಿಹನಿಂದಿಗೂ ಸ್ನೇಹವರ್ಣವಿಲಿಪ್ತ-
ನೆನ್ನ ನೆಳಲೊಡನೆ ತಿಳಿಯಾದ ಜಲದಿ.
ಮಂಟಪದ ಶೂನ್ಯತೆ ಶ್ರುತಿಯಾಗೆ ಮನೆಯಲ್ಲಿ
ಏನೊ ಭಣಭಣ; ತಾಳ ತಪ್ಪುತ್ತಿದೆ .
ಇಂಥ ತುಟ್ಟಿಯ ದಿನಗಳಲ್ಲಿಯೂ ಆತ್ಮೀಯ-
ರಾದ ನಂಟರು ಬಂದು ತೆರಳಿದಂತೆ.



Tuesday, August 20, 2013

ಕುವೆಂಪು

ಇಲ್ಲಿ ಯಾರೂ ಮುಖ್ಯರಲ್ಲ ;
 ಯಾರೂ ಅಮುಖ್ಯರಲ್ಲ ಯಾವುದೂ ಯಃಕಶ್ಚಿತವಲ್ಲ - ಕುವೆಂಪು

Thursday, August 15, 2013

ಟೊಟೊ ಪುರಸ್ಕಾರ 2014 - ಕನ್ನಡ ಸೃಜನಶೀಲ ಸಾಹಿತ್ಯ

ಟೊಟೊ ಪುರಸ್ಕಾರ 2014 - ಕನ್ನಡ ಸೃಜನಶೀಲ ಸಾಹಿತ್ಯ


ಟೊಟೊ ಪುರಸ್ಕಾರ 2014
ಕನ್ನಡ ಸೃಜನಶೀಲ ಸಾಹಿತ್ಯ
ಪ್ರವೇಶಗಳನ್ನು ಸಲ್ಲಿಸಲು ಆಹ್ವಾನ


ಸೃಜನಶೀಲ ಯುವ ಬರಹಗಾರರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಸ್ಥಾಪಿತವಾದ ಟೊಟೊ ಪುರಸ್ಕಾರವುಕಳೆದ ಮೂರು ವರ್ಷದಿಂದ ಕನ್ನಡಕ್ಕೂ ವಿಸ್ತಾರಗೊಂಡಿದೆ ಪ್ರಶಸ್ತಿಯನ್ನು ಟೊಟೊ ಫಂಡ್ಸ್ ದಿ ಆರ್ಟ್ಸ್ (Toto Funda the Arts TFAಸಂಸ್ಥೆಯು ಸ್ಥಾಪಿಸಿ ನಿರ್ವಹಿಸುತ್ತಿದೆ.
ಕನ್ನಡದ ಸೃಜನಶೀಲ ಯುವ ಬರಹಗಾರರಿಗೆ ಮೀಸಲಾದ 2014 ನೇ ಸಾಲಿನ ಟೊಟೊ ಪುರಸ್ಕಾರಕ್ಕಾಗಿ ಟೊಟೊಫಂಡ್ಸ್ ದಿ ಆರ್ಟ್ಸ್ ಸಂಸ್ಥೆಯು ಪ್ರವೇಶಗಳನ್ನು ಆಹ್ವಾನಿಸುತ್ತಿದೆಪುರಸ್ಕಾರಕ್ಕಾಗಿ ಬರಹಗಳನ್ನು ಕಳುಹಿಸುವವರು18 ರಿಂದ 29 ವರ್ಷ ವಯಸ್ಸಿನವರಾಗಿರಬೇಕುಅಂದರೆನೀವು  ಜನವರಿ 1984  ನಂತರ ಹುಟ್ಟಿದವರಾಗಿದ್ದಲ್ಲಿಮಾತ್ರ  ಪುರಸ್ಕಾರಕ್ಕೆ ಪ್ರವೇಶಗಳನ್ನು ಕಳಿಸಲು ಅರ್ಹರುಕಥೆಕವಿತೆ ಮತ್ತು ನಾಟಕ  ಮೂರರಲ್ಲಿಯಾವುದೇ ಪ್ರಕಾರದಲ್ಲಿಯಾದರೂ ಪ್ರವೇಶಗಳನ್ನು ಕಳಿಸಬಹುದು ಎಲ್ಲ ಪ್ರಕಾರಗಳಿಂದ ಒಬ್ಬರನ್ನುಪುರಸ್ಕಾರಕ್ಕಾಗಿ ಆಯ್ಕೆ ಮಾಡಲಾಗುತ್ತದೆ ಆಯ್ಕೆಯನ್ನು ಕನ್ನಡದ ಹಿರಿಯ ಬರಹಗಾರರ ಸಮಿತಿಯುಮಾಡಲಿದೆಪುರಸ್ಕೃತರು 30,000 ರೂಪಾಯಿಗಳ ನಗದು ಬಹುಮಾನವನ್ನು ಪಡೆಯುವರು.
ಪ್ರವೇಶಗಳನ್ನು ಕಳುಹಿಸಲು ಕೊನೆಯ ದಿನಾಂಕ: 15 ಸೆಪ್ಟೆಂಬರ್ 2013
ಈ ಕೊನೆಯ ದಿನಾಂಕದ ನಂತರ ಬಂದ ಪ್ರವೇಶಗಳನ್ನು ಪರಿಗಣಿಸುವುದಿಲ್ಲ. ಭಾರತದಲ್ಲಿ ವಾಸಿಸುವ ಭಾರತೀಯನಾಗರಿಕರು ಮಾತ್ರ  ಪುರಸ್ಕಾರಕ್ಕೆ ಪ್ರವೇಶಗಳನ್ನು ಕಳಿಸಬಹುದು 
ಪ್ರತಿ ಪ್ರವೇಶವು 7500 ಶಬ್ದಗಳನ್ನು ಮೀರಬಾರದುಕವಿತೆಗಳನ್ನು ಕಳುಹಿಸುವವರು 6 ರಿಂದ 10 ಕವಿತೆಗಳನ್ನುಕಳಿಸಬಹುದುಕಥೆಗಳನ್ನು ಕಳಿಸುವವರು ಒಂದಕ್ಕಿಂತ ಹೆಚ್ಚು ಕತೆಗಳನ್ನು ಕಳಿಸಬಹುದು - ಆದರೆ ಎಲ್ಲ ಕತೆಗಳೂಸೇರಿ 7500 ಶಬ್ದಗಳನ್ನು ಮೀರಬಾರದುನೀವು ಎಲ್ಲ ಮೂರು ಪ್ರಕಾರಗಳಲ್ಲಿಯೂ ಪ್ರವೇಶಗಳನ್ನುಕಳುಹಿಸಬಹುದುಆದರೆ ಪ್ರತಿಯೊಂದು ಪ್ರಕಾರಕ್ಕೂ ಪ್ರತ್ಯೇಕವಾದ ಪ್ರವೇಶಗಳನ್ನು ಕಳಿಸಬೇಕುಉದಾಹರಣೆಗೆನೀವು ಎಲ್ಲ ಮೂರೂ ಪ್ರಕಾರಗಳಿಗೆ ಪ್ರವೇಶಗಳನ್ನು ಕಳಿಸಬಯಸಿದರೆನಿಮ್ಮ ಕವಿತೆಗಳನ್ನು ಮೊದಲಪ್ರವೇಶವಾಗಿಯೂಕತೆಗಳನ್ನು ಎರಡನೆಯ ಪ್ರವೇಶವಾಗಿಯೂನಾಟಕವನ್ನು ಮೂರನೆಯ ಪ್ರವೇಶವಾಗಿಯೂಕಳಿಸಬೇಕುಪ್ರತಿಯೊಂದು ಪ್ರವೇಶದ ಮಿತಿ 7500 ಶಬ್ದಗಳು.
ಈಗಾಗಲೇ ಪುಸ್ತಕರೂಪದಲ್ಲಿ ಪ್ರಕಟವಾಗಿರುವ ಕೃತಿಗಳನ್ನು ಪುರಸ್ಕಾರಕ್ಕಾಗಿ ಕಳಿಸುವಂತಿಲ್ಲಪತ್ರಿಕೆಗಳಲ್ಲಿಪ್ರಕಟವಾಗಿರುವ ಬಿಡಿ ಕಥೆಕವಿತೆನಾಟಕಗಳನ್ನು ಕಳುಹಿಸಬಹುದು.
ನೀವು ಸಲ್ಲಿಸುವ ಪ್ರತಿ ಪ್ರವೇಶದ ಜೊತೆಗೆ ನಿಮ್ಮ ಹುಟ್ಟಿದ ದಿನಾಂಕಕೃತಿಯು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದರೆಪ್ರಕಟನೆಯ ವಿವರಗಳನ್ನು ನಮೂದಿಸಿಇದು ನಿಮ್ಮದೇ ಸ್ವಂತ ಸೃಜನಶೀಲ ಕೃತಿಯೆಂಬುದನ್ನು ದೃಢೀಕರಿಸಿದಲಿಖಿತ ಹೇಳಿಕೆಯನ್ನು ಲಗತ್ತಿಸಬೇಕುಜೊತೆಗೆ ನಿಮ್ಮ ಅಂಚೆಯ ವಿಳಾಸಈಮೇಲ್ ವಿಳಾಸಫೋನ್ನಂಬರುಗಳು (ಚರ ಮತ್ತು ಸ್ಥಿರ ದೂರವಾಣಿ ಸಂಖ್ಯೆಗಳುಹಾಗೂ ನಿಮ್ಮ ಸ್ವವಿವರಗಳುಳ್ಳ ಚಿಕ್ಕ ಬಯೋಡಾಟಾಕೂಡ ಪ್ರತ್ಯೇಕ ಹಾಳೆಯ ಮೇಲೆ ಬರೆದು ಕಳಿಸಿ.
ನಿಮ್ಮ ಪ್ರವೇಶಗಳನ್ನು ಸಾದಾ ಅಂಚೆಯ ಮೂಲಕ ಅಥವಾ ಕುರಿಯರ್ ಮೂಲಕ  ಕೆಳಗೆ ಕೊಟ್ಟಿರುವ ವಿಳಾಸಕ್ಕೆಕಳಿಸಿರಿಜಿಸ್ಟರ್ಡ್ ಪೋಸ್ಟ್ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಕಳಿಸಬೇಡಿಹಸ್ತಪ್ರತಿಗಳನ್ನು ಹಾಳೆಯ ಒಂದೇಮಗ್ಗಲಿಗೆ ಕಂಪ್ಯೂಟರ್ ಬಳಸಿ ಅಥವಾ ಟೈಪ್ ಮಾಡಿ ಕಳಿಸಬೇಕುಹಸ್ತಪ್ರತಿಯಲ್ಲದೇ ನೀವು ಈಮೇಲ್ ಮೂಲಕಕೂಡ ಪ್ರವೇಶಗಳನ್ನು ಕಳಿಸಬಹುದುಕನ್ನಡ ಅಕ್ಷರಗಳಿಗೆ ಬರಹ/ನುಡಿ ಮಾತ್ರ ಬಳಸಿಕೇವಲ ಈಮೇಲ್ ಮೂಲಕಮಾತ್ರ ಬಂದ ಪ್ರವೇಶಗಳನ್ನು ಪರಿಗಣಿಸಲಾಗುವುದಿಲ್ಲಮುದ್ರಿತ ಪ್ರತಿ ಕಳಿಸುವುದು ಕಡ್ಡಾಯಪುರಸ್ಕಾರದಕುರಿತು ಯಾವುದೇ ಫೋನ್ ಕರೆಗಳನ್ನು ಸ್ವೀಕರಿಸಲಾಗುವುದಿಲ್ಲ.
ಪ್ರವೇಶಗಳನ್ನು  ವಿಳಾಸಕ್ಕೆ ಕಳಿಸಿ:
Toto Funds the Arts (TFA)
H 301, Adarsh Gardens, 8th Block, 47th Cross,
Jayanagar, Bangalore 560 082
Phone 080 26990549

ನೀವು ಸಲ್ಲಿಸಿದ ಬರಹಗಳನ್ನು ಹಿಂತಿರುಗಿಸಲಾಗುವುದಿಲ್ಲಪುರಸ್ಕಾರವನ್ನು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿಹಾಗೂ ವೆಬ್ಸೈಟಿನಲ್ಲಿ (http://totofundsthearts.blogspot.com)   ಪ್ರಕಟಿಸಲಾಗುವುದು ಬಗ್ಗೆ ಯಾವುದೇಪತ್ರ ವ್ಯವಹಾರ ಮಾಡಲಾಗುವುದಿಲ್ಲಪುರಸ್ಕಾರದ ಕುರಿತು ಟಿ.ಎಫ್. ಆಯ್ಕೆ ಸಮಿತಿಯ ನಿರ್ಧಾರವೇಅಂತಿಮವಾದುದು ಮತ್ತು ಇದನ್ನು ಯಾವ ಬಗೆಯಲ್ಲೂ ಪ್ರಶ್ನಿಸಲಾಗದುಅಗತ್ಯವಾದಲ್ಲಿ ನೀವು ಸಲ್ಲಿಸಿದ ಬರಹಗಳಆಯ್ದ ಭಾಗಗಳನ್ನು ಅಂತರ್ಜಾಲ ತಾಣದಲ್ಲಿ ಅಥವಾ ಸಂಸ್ಥೆಯ ವೃತ್ತಪತ್ರದಲ್ಲಿ ಪುರಸ್ಕಾರದ ಪ್ರಚಾರಕ್ಕೆಬಳಸಿಕೊಳ್ಳುವ ಹಕ್ಕು ಟಿ.ಎಫ್..ಗೆ ಇದೆಉಳಿದಂತೆ ಕೃತಿಯ ಪೂರ್ತಿ ಹಕ್ಕುಸ್ವಾಮ್ಯವು ಬರಹಗಾರರದೇಆಗಿರುತ್ತದೆ.

ಟಿ.ಎಫ್.ಸಂಸ್ಥೆಯು ಆಂಗಿರಸ ‘ಟೊಟೊ’ ವೆಲ್ಲಾನಿಯ ಸ್ಮರಣಾರ್ಥ 2004 ರಲ್ಲಿ ಸ್ಥಾಪಿತವಾಯಿತುಕಲೆಗಳ ಬಗ್ಗೆಗಾಢವಾದ ಆಸಕ್ತಿಯನ್ನಿರಿಸಿಕೊಂಡಿದ್ದ ಟೊಟೊರವರ ಅಕಾಲಿಕ ಮರಣವು ಅವರ ಕುಟುಂಬ ಮತ್ತು ಸ್ನೇಹಿತರನ್ನು ಸಂಸ್ಥೆಯ ಸ್ಥಾಪನೆಗೆ ಪ್ರೇರೇಪಿಸಿತು ಮೂಲಕ ಯುವ ಪ್ರತಿಭೆಗಳಿಗೆ ತಮ್ಮ ಕಲಾತ್ಮಕ ಅಭಿವ್ಯಕ್ತಿಯನ್ನುಕಂಡುಕೊಳ್ಳಲು ಉತ್ತೇಜನ ಸಿಗಲೆಂಬುದು ಇದರ ಆಶಯವಾಗಿದೆ.

Friday, May 17, 2013

ಬಾಹ್ಯ ರೂಪ - ಗುರುರಾಜ ಕರ್ಜಗಿ,

1930-31ರಲ್ಲಿ ತಮಿಳುನಾಡಿನ ತಿರುಚ್ಚಿಯಲ್ಲಿ ಕನ್ನಡ ಸಂಘದವರು ಒಂದು ಕಾರ್ಯಕ್ರಮ ಆಯೋಜಿಸಿದ್ದರು. ಅದಕ್ಕೆ ಮುಖ್ಯ ಅತಿಥಿಯನ್ನಾಗಿ ಟಿ.ಪಿ. ಕೈಲಾಸಂರ ಅವರನ್ನು ಆಹ್ವಾನಿಸಿದ್ದರು. ಹಿಂದಿನ ರಾತ್ರಿ ಬೆಂಗಳೂರಿನಿಂದ ಹೊರಟು ಮರುದಿನ ಇನ್ನೂ ಬೆಳಗಾಗುವುದರೊಳಗೆ ರೈಲಿನಿಂದ ತಿರುಚ್ಚಿಯನ್ನು ತಲುಪಿದರು ಕೈಲಾಸಂ.
ಸಾಮಾನ್ಯವಾದ ದಿನದಲ್ಲೇ ತಮ್ಮ ವೇಷಭೂಷಣಗಳ ಬಗ್ಗೆ ಅಷ್ಟೊಂದು ಗಮನ ನೀಡದ ಕೈಲಾಸಂ, ರಾತ್ರಿ ಪ್ರವಾಸದಲ್ಲಿ ತಮಗೆ ಅನುಕೂಲವೆನಿಸಿದ ಬಟ್ಟೆ ಧರಿಸಿದ್ದರು. ಅವರು ರೈಲಿನಿಂದ ಇಳಿದಾಗ ಅವರ ವೇಷ ವಿಚಿತ್ರವಾಗಿತ್ತು. ಸ್ಯಾಂಡೋ ಬನಿಯನ್, ಕೊಳೆಯಾಗಿದ್ದ ಲುಂಗಿ, ಹೆಗಲಿಗೊಂದು ಕೈ ಚೀಲ.
ಕೆಳಗಿಳಿದು ಕತ್ತು ತಿರುಗಿಸಿ ಅತ್ತಿತ್ತ ನೋಡಿದರು. ಸಂಘಟಕರಾರಾದರೂ ಬಂದಿರಬಹುದೇ ಎಂದು ಹುಡುಕಾಡಿದರು. ಯಾರೂ ಕಾಣಲಿಲ್ಲ. ಮನದಲ್ಲೇ ಅವರನ್ನು ಶಪಿಸಿ ತಾವೇ ಏನಾದರೂ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಹೊರನಡೆದರು. ಆಗ ಯಾರೋ ಇವರ ಹೆಗಲ ಮೇಲೆ ಒಂದು ಕೋಲನ್ನು ಇಟ್ಟಂತಾಯಿತು. ತಿರುಗಿ ನೋಡಿದರೆ ಒಬ್ಬ ದೀರ್ಘದೇಹಿ ನಿಂತಿದ್ದಾರೆ.
ಘಿಗರಿಗರಿ ಮಲ್ ಪಂಚೆ, ಉದ್ದ ಕ್ಲೋಸ್ ಕಾಲರ್ ಉಲ್ಲನ್ ಕೋಟು, ತಲೆಗೆ ಜರೀಪೇಟ, ಕಣ್ಣಿಗೆ ಕಪ್ಪು ಕನ್ನಡಕ. ಒಟ್ಟಿನಲ್ಲಿ ಅತ್ಯಂತ ಶ್ರಿಮಂತರ ಠೀವಿ. ಕೈಯಲ್ಲಿಯ ಬೆತ್ತವನ್ನು ತೋರಿಸುತ್ತಾ ತಮಿಳಿನಲ್ಲಿ ಹೇಳಿದರು, `ಏ ಕೂಲಿ, ಬಾ ಇ್ಲ್ಲಲಿ', ನಂತರ ತಮ್ಮ ಹಾಸಿಗೆ ಸುರುಳಿ ಮತ್ತು ಸೂಟಕೇಸನ್ನು ತೋರುತ್ತ,  `ಇವೆರಡನ್ನೂ ಹೊರಗಡೆ ತೆಗೆದುಕೊಂಡು ಬಂದು ನಮ್ಮ ಕಾರಿನಲ್ಲಿ ಇಡಬೇಕು.ಎಷ್ಟು ಕೊಡಬೇಕು ಈಗಲೇ ಹೇಳು. ಹೊರಗೆ ಹೋಗಿ ತಗಾದೆ ಮಾಡಬೇಡ'  ಎಂದು ಗಡುಸಾಗಿ ಹೇಳಿದರು.
 ಗುರುರಾಜ ಕರ್ಜಗಿ
ಕೈಲಾಸಂ ನಗುತ್ತ,  `ಹಾಗೆ ಆಗಲಿ ಸ್ವಾಮಿ. ನಾನು ತಕರಾರು ಮಾಡುವವನೇ ಅಲ್ಲ. ಜನ ನನ್ನ ಸೇವೆಯಿಂದ ತೃಪ್ತಿ ಪಟ್ಟು ಎಷ್ಟು ಕೊಟ್ಟರೂ ನನಗೆ ಸರಿಯೇ. ನೀವೇ ಏನಾದರೂ ತಿಳಿದು ಕೊಡಿ'  ಎಂದು ಅವರು ಕೋಲಿನಿಂದ ತೋರಿಸಿದ ಟ್ರಂಕನ್ನು ಸಲೀಸಾಗಿ ಒಂದೇ ಝಟಕಿಗೆ ಎತ್ತಿ ತಲೆಯ ಮೇಲೆ ಇಟ್ಟುಕೊಂಡರು. ತಮ್ಮ ಚೀಲವನ್ನು ಸರಿಯಾಗಿ ಏರಿಸಿಕೊಂಡು, ಇನ್ನೊಂದು ಕೈಯಿಂದ ಹಾಸಿಗೆ ಸುರುಳಿಯನ್ನು ಎತ್ತಿ, ಮೊಳಕಾಲಿನ ಮೇಲೆ ಇರಿಸಿಕೊಂಡು ನಂತರ ಮತ್ತೊಮ್ಮೆ ಹ್ಞೂಂಕರಿಸಿ ಎತ್ತಿ ಬಗಲಿಗೆ ಸೇರಿಸಿ ಹಿಡಿದುಕೊಂಡರು. ಆಮೇಲೆ ಹಿಂತಿರುಗಿ ತಮ್ಮನ್ನು ಬೆರಗುಗಣ್ಣಿಂದ ನೋಡುತ್ತಿದ್ದ ಚೆಟ್ಟಿಯಾರರಿಗೆ,  `ಬನ್ನಿ ಸ್ವಾಮಿ, ಹೋಗೋಣ'  ಎಂದವರೇ ಸರಸರನೇ ನಡೆದುಬಿಟ್ಟರು.
ಇವರನ್ನು ಹಿಂಬಾಲಿಸಿ ಓಡುವುದು ಚೆಟ್ಟಿಯಾರರಿಗೆ ತುಂಬ ಕಷ್ಟವಾಯಿತು.  ಸಾವಕಾಶ, ಸಾವಕಾಶ  ಎನ್ನುತ್ತ ಉಸಿರುಬಿಗಿಹಿಡಿದು ಓಡಿದರು. ಸ್ಟೇಷನ್ನಿನ ಹೊರಗೆ ಒಂದು ದೊಡ್ಡ ಕಾರು ಬಂದು ನಿಂತಿತು. ಅದರಿಂದ ಇಳಿದ ಕೆಲವರು ಚೆಟ್ಟಿಯಾರರನ್ನು ನೋಡಿ ಸಂಭ್ರಮದಿಂದ ಓಡಿಬಂದರು, ಅವರನ್ನು ಕಾರಿನಲ್ಲಿ ಕೂಡ್ರಿಸಿದರು. ಅಷ್ಟರಲ್ಲಿ ಕೈಲಾಸಂ ಅವರ ಸಾಮಾನುಗಳನ್ನು ಕಾರಿನ ಡಿಕ್ಕಿಯಲ್ಲಿರಿಸಿದ್ದರು. ಬಂದವರು ಚೆಟ್ಟಿಯಾರರಿಗೆ ಹೇಳುತ್ತಿದ್ದರು,  `ಸಾರ್ ತಮಗೆ ಸ್ವಾಗತ ಸರ್. ನಾವು ಕನ್ನಡ ಸಂಘದ ಕಾರ್ಯಕರ್ತರು. ತಾವೇ ಇಂದಿನ ಕಾರ್ಯಕ್ರಮಕ್ಕೆ ಅಧ್ಯಕ್ಷರಲ್ಲವೇ. ಅದಕ್ಕೇ ತಮ್ಮನ್ನು ಎದುರುಗೊಳ್ಳಲು ಬಂದಿದ್ದೇವೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ  ಟಿ.ಪಿ. ಕೈಲಾಸಂ ಅವರೂ ಇದೇ ರೈಲಿನಿಂದ ಬರುವವರಿದ್ದರು. ಅವರನ್ನೂ ನೋಡಿಕೊಂಡು ಬರುತ್ತೇವೆ'  ಎನ್ನುವ ಹೊತ್ತಿಗೆ ಕೈಲಾಸಂ ಚೆಟ್ಟಿಯಾರರ ಬಳಿಗೆ ಬಂದರು.
`ಎಷ್ಟಯ್ಯೊ ನಿನ್ನ ಕೂಲಿ'  ಎಂದು ಚೆಟ್ಟಿಯಾರ್ ಕೇಳುವಾಗ ಕಾರ್ಯಕರ್ತರು ಇವರನ್ನು ನೋಡಿ ಬಿಳಿಚಿಕೊಂಡರು,  `ಅಯ್ಯಯ್ಯೋ ಇದೇನು ಸಾರ್. ತಾವು ಕೂಲಿಯ ಹಾಗೆ, ಇವನ್ನೇಕೆ ಹೊತ್ತುಕೊಂಡು ಬಂದಿರಿ'  ಎಂದು ಗಾಬರಿಯಿಂದ ಚೆಟ್ಟಿಯಾರರ ಕಡೆಗೆ ತಿರುಗಿ,  `ಸಾರ್, ಇವರೇ ಕೈಲಾಸಂ. ಇಂದಿನ ಕಾರ್ಯಕ್ರಮದ ಮುಖ್ಯ ಅತಿಥಿ'  ಎಂದರು.
ಆಗ ಕೈಲಾಸಂ ತಮ್ಮ ಟ್ರೇಡ್‌ಮಾರ್ಕ್ ಸಿಗಾರ್ ಹಚ್ಚಿ ಹೊಗೆ ಎಬ್ಬಿಸಿ ಚೆಟ್ಟಿಯಾರರ ಕಡೆಗೆ ಕೈ ಚಾಚಿ ` ಹೌದು ಸರ್, ನಾನೇ ಕೈಲಾಸಂ, ಬಿ.ಎ., ಎ.ಆರ್.ಸಿ (ಲಂಡನ್), ಎಫ್.ಆರ್.ಜಿ..ಎಸ್ (ಲಂಡನ್) ಅತ್ಯಂತ ಉನ್ನತ ಶಿಕ್ಷಣ ಪಡೆದ ಕೂಲಿ. ಇಂದು ತಾವೇ ಅಧ್ಯಕ್ಷರು. ನಾವಿಬ್ಬರೂ ಈ ರೀತಿ ಭೆಟ್ಟಿಯಾಗುವುದು ಆಶ್ಚರ್ಯಕರವಾದ ರೀತಿಯಲ್ಲವೇ'  ಎಂದರು. ಮುಂದೆ ಇಡೀ ದಿನ ಚೆಟ್ಟಿಯಾರರು ಪೆಚ್ಚಾಗಿಯೇ ಇದ್ದರು. ಬಾಹ್ಯರೂಪದಿಂದ, ಚರ್ಯೆಯಿಂದ ಮನುಷ್ಯನ ಗುಣವನ್ನು, ಮಟ್ಟವನ್ನು ಅಳೆಯುವುದು ತುಂಬ ಅಪಾಯಕಾರಿ.

Krupe_ Prajavani Daily News Paper

Wednesday, May 8, 2013

ಹಳ್ಳಿಯ ಲೆಕ್ಕಗಳು - ಮಾ.ಕೃ.ಮಂಜು


ಹಳೆಯ ಹಳ್ಳಿಯ ಲೆಕ್ಕಗಳು

ತೂಕ ಹಾಗೂ ಅಳತೆಗೆ ಸಂಬಂಧಿಸಿದಂತೆ
ಹಿಂದೆ ತೂಕವನ್ನು "ರೂಪಾಯಿ"ಗಳಿಂದಲೇ ಕಂಡುಕೊಂಡಿದ್ದು ನಮಗೆ ಕಂಡುಬರುತ್ತದೆ. ೨೪ ಬೆಳ್ಳಿ "ರೂಪಾಯಿ"ಗಳ ತೂಕವನ್ನು ಒಂದು "ಸೇರು" ಎಂದು ಮಾಡಿಕೊಂಡಿದ್ದರಿಂದ, ಅದರ ಅಳತೆಗೆ ತಕ್ಕಂತೆ " ಸೇರಿ"ನ ಸೃಷ್ಟಿಯಾಗಿರುವುದನ್ನು ನಾವು ಗಮನಿಸುತ್ತೇವೆ. ಹೀಗೆ "ಪಾವು", "ಚಟಾಕು", "ಗಜ", "ಅಂಗುಲ", "ಮೈಲಿ", "ಹರಿದಾರಿ" "ಎಕರೆ" ಮುಂತಾದ ಅಳತೆಮಾನಗಳು ಹಾಗೂ "ತೊಲ", "ಪಲ್ಲ", "ಖಂಡುಗ" ಮುಂತಾದ ತೂಕಮಾನಗಳು ಬಂದು ಸೇರಿಕೊಂಡಿವೆ. ಉದಾಹರಣೆಗೆ, ಒಂದು ಸೇರು ಎಂದರೆ, ೨೪ ಬೆಳ್ಳಿ "ರೂಪಾಯಿ"ಗಳ ತೂಕ ಅಥವಾ ನಾಲ್ಕು "ಪಾವು" ಎಂದೂ ಹಾಗೂ ಒಂದು "ಗಜ" ಎಂಬುದನ್ನು ಮೂರು "ಅಡಿ" ಎಂದು ಹೇಳಲಾಗುತ್ತದೆ. ಇವುಗಳ ಪ್ರಕಾರ ತೂಕ ಹಾಗು ಅಳತೆಗಳನ್ನು ನಾವು ಈ ರೀತಿ ವಿಂಗಡಿಸಬಹುದಾಗಿದೆ.
೧ ಬೆಳ್ಳಿ ರೂಪಯಿ ತೂಕ = ೧ ತೊಲ
೧ ಪಾವು = ೪ ಚಟಾಕು
೧ ಸೇರು = ೪ ಪಾವು ಅಥವ ೨೪ ಬೆಳ್ಳಿ ರೂಪಯಿಗಳ ತೂಕ
೧ ಇಬ್ಬಳಿಗೆ = ಐದೂವರೆ ಸೇರು (ದೊಡ್ದ ಇಬ್ಬಳಿಗೆಯಾದರೆ ೬ ಸೇರು)
೧ ಪಲ್ಲ = ೧೦೦ ಸೇರು
೧ ಕೊಳಗ = ೨ ಇಬ್ಬಳಿಗೆ ಅಥವ ೧೧ ಸೇರು
೧ ಖಂಡುಗ = ೪೦ ಇಬ್ಬಳಿಗೆ ಅಥವ ೨೦ ಕೊಳಗ
೧ ಅಡಿ = ೧೨ ಅಂಗುಲ ಅಥವ ಇಂಚು
೧ ಗಜ = ೩ ಅಡಿ ಅಥವ ೩೬ ಅಂಗುಲ
೧ ಗುಂಟೆ = ೨೨೦ ಚದರ ಗಜ
೧ ಎಕರೆ = ೪೦ ಗುಂಟೆ
೧ ಮೈಲಿ = ೮ ಫರ್ಲಾಂಗು
೧ ಹರಿದಾರಿ = ೪ ಮೈಲಿ
೧ ಗಾವುದ = ೧೨ ಹರಿದಾರಿ
ನಾನು ನೋಡಿದಂತೆ ಸಣ್ಣವನಾಗಿದ್ದಾಗ, ಅಪ್ಪ ಶಾಲಾ ಯೂನಿಫಾರಂ ಬಟ್ಟೆ ಹಾಕಲು ಅಂಗಡಿಗೆ ಕರೆದುಕೊಂಡು ಹೋಗುತ್ತಿದ್ದದ್ದು ಹಾಗೂ ಅಲ್ಲಿ ಬಟ್ಟೆಯನ್ನು ಗಜದಲ್ಲೇ ಅಳತೆ ಮಾಡುತ್ತಿದ್ದದ್ದು ನನಗೆ ನೆನಪಿದೆ. ಇನ್ನು ಭತ್ತದ ನಾಟಿಗೂ ಮೊದಲು ಪೈರಿನ ಹೊಟ್ಟಿಲಿಗೆ ಬಿತ್ತನೆ ಭತ್ತದ ಅಳತೆಯನ್ನು ಸೇರಿನಲ್ಲಿ ಈಗಲೂ ಅಳೆದು ಉಪಯೋಗಿಸುವುದು ಸಾಮಾನ್ಯವಾಗಿದೆ. ಹಳ್ಳಿಗಳಲ್ಲಿ ಒಂದು ಎಕರೆಗೆ ಸುಮಾರು ಮೂವತ್ತು ಸೇರು ಬಿತ್ತನೆ ಭತ್ತವನ್ನು ಉಪಯೋಗಿಸುತ್ತಾರೆ. ಇನ್ನು ತೂಕದಲ್ಲಿ ನೋಡಿದರೆ, ಬೆಣ್ಣೆ, ತುಪ್ಪ ಮುಂತಾದ ಖಾದ್ಯಗಳನ್ನು "ಸೇರು", "ಪಾವು" ಎಂದೇ ತೂಗುವುದು ವಾಡಿಕೆಯಾಗಿತ್ತು. ಅದಕ್ಕಾಗಿಯೇ ತೂಕದ ಕಲ್ಲುಗಳನ್ನು ಉಪಯೋಗಿಸುತ್ತಿದ್ದರು. ಉದಾಹರಣೆಗೆ,
ಅಚ್ಚೇರು ಬೆಣ್ಣೆ = ಅರ್ಧ ಸೇರು ಬೆಣ್ಣೆ = ೧೨ ಬೆಳ್ಳಿ ರೂಪಾಯಿಗಳ ತೂಕ ಅಥವ ೨ ಪಾವು
ಅರ್ಪಾವು ತುಪ್ಪ = ಅರ್ಧ ಪಾವು ತುಪ್ಪ
ಹಳ್ಳಿ ಅಳತೆಯಲ್ಲಿ ಕಾಣಬಹುದಾದ ಇನ್ನೊಂದು ವಿಷೇಶ ಎಂದರೆ, ಸೇರು, ಪಾವು, ಇಬ್ಬಳಿಗೆ, ಕೊಳಗ ಹೀಗೆ ಯಾವುದನ್ನೇ ಉಪಯೋಗಿಸಿ ಭತ್ತ, ರಾಗಿ ಅಥವಾ ಬೇರೆ ಯಾವುದೇ ಧಾನ್ಯಗಳನ್ನು ಅಳೆಯುವಾಗ "ಹೆಚ್ಚಲಿ" ಎಂಬ ಪದವನ್ನು ಸಾಮಾನ್ಯವಾಗಿ ಉಪಯೋಗಿಸುತ್ತಿರುತ್ತಿದ್ದರು. ಅದಕ್ಕೆ ಎರಡು ಕಾರಣಗಳಿವೆ. ಮೊದಲನೆಯದಾಗಿ ಧಾನ್ಯ ಹಾಗೇ ಹೆಚ್ಚಲಿ ಎಂಬುದು. ಎರಡನೆಯದಾಗಿ ೭, ೧೧ ಮತ್ತು ೧೭ ಸಂಖ್ಯೆಗಳು ಅಶುಭ ಹಾಗು ಅವುಗಳನ್ನು ಉಪಯೋಗಿಸಬಾರದೆಂಬ ನಂಬಿಕೆ. ಈ ಕಾರಣಗಳಿಂದ, "ಆರು" ಆದ ನಂತರ "ಹೆಚ್ಚಲಿ" ನಂತರ "ಎಂಟು" ಎಂದೂ, ಹತ್ತಾದ ನಂತರ "ಹೆಚ್ಚಲಿ" ನಂತರ "ಹನ್ನೆರಡು ಎಂದೂ, "ಹದಿನಾರು" ಆದ ನಂತರ "ಹೆಚ್ಚಲಿ" ನಂತರ "ಹದಿನೆಂಟು" ಎಂದೂ ಬಳಸುತ್ತಿದ್ದರು. ಹೀಗೆ ಏಳು, ಹನ್ನೊಂದು ಮತ್ತು ಹದಿನೇಳು ಸಂಖ್ಯೆಗಳನ್ನು ಉಪಯೋಗಿಸುತ್ತಿರಲಿಲ್ಲ. ಹಾಗೇ ಕೆಲವು ಸಂಖ್ಯೆಗಳನ್ನು ಶುಭ ಸಂಖ್ಯೆಗಳೆಂದು ನಂಬಿ ಉಪಯೋಗಿಸುತ್ತಿದ್ದದ್ದೂ ಉಂಟು. ಅವು ಯಾವುವೆಂದರೆ, ಐದು, ಒಂಬತ್ತು ಮತ್ತು ಹನ್ನೆರಡು.
ಹಣಕ್ಕೆ ಸಂಬಂಧಿಸಿದಂತೆ
ಈ ಮೊದಲೇ ಹೇಳಿದಂತೆ ಹಿಂದೆ "ಕಾಸು"ಗಳು ಬಹುಪಾಲು ಎಲ್ಲಾ ಅಳತೆಗಳಲ್ಲೂ ಪ್ರಧಾನ ಪಾತ್ರ ವಹಿಸುತ್ತಿದ್ದದ್ದು ನಮಗೆ ಕಾಣುತ್ತದೆ. ಮೂರು ಕಾಸಿನ ಒಂದು ಬಿಲ್ಲೆ, ಇಂಥ ನಾಲ್ಕು ಬಿಲ್ಲೆಗಳು ಸೇರಿದರೆ ಹನ್ನೆರಡು "ಕಾಸು" ಅಥವಾ ಒಂದು "ಆಣೆ"ಯಾಗುತ್ತದೆ. ಇಂದಿನ "ನಾಲ್ಕಾಣೆ", "ಎಂಟಾಣೆ", "ಹನ್ನೆರಡಾಣೆ", "ಹದಿನಾರಾಣೆ"ಗಳು ಈ ಹಿನ್ನಲೆಯಿಂದಲೇ ಬಂದಿರುವುದು ನಮಗೆ ತಿಳಿದ ಸಂಗತಿಯಾಗಿದೆ. ಈಗಲೂ ನಾವು ಈ "ಆಣೆ"ಗಳನ್ನು ಉಪಯೋಗಿಸುತ್ತೇವೆ. ಇದರ ಪ್ರಕಾರ ನಾವು ನಾಣ್ಯಗಳನ್ನು ಈ ಕೆಳಗೆ ಹೇಳಿರುವ ರೀತಿ ವಿಂಗಡಿಸಬಹುದಾಗಿದೆ.
ಚಲಾವಣೆಯಲ್ಲಿದ್ದ ನಾಣ್ಯಗಳು ಮತ್ತು ಉಪಯೋಗಿಸುತ್ತಿದ್ದ ಲೋಹಗಳು:
೧ ಕಾಸು (ತಾಮ್ರ)
೩ ಕಾಸು (ತಾಮ್ರ)
೬ ಕಾಸು (ನಿಕ್ಕಲ್)
೧ ಆಣೆ = ೧೨ ಕಾಸು (ನಿಕ್ಕಲ್)
೨ ಆಣೆ = ೨೪ ಕಾಸು (ನಿಕ್ಕಲ್)
೪ ಆಣೆ (ಬೆಳ್ಳಿ)
೮ ಆಣೆ (ಬೆಳ್ಳಿ)
೧ ರೂಪಾಯಿ = ೧೯೨ ಕಾಸು (ಬೆಳ್ಳಿ)
ಜೊತೆಗೆ ನಾಣ್ಯವಲ್ಲದಿದ್ದರೂ "ದುಡ್ಡು", "ಪಾವಲಿ" "ಹಣ ಅಥವ ವರಹ" ಹಾಗು "ದುಗ್ಗಾಣಿ" ಎಂಬ ಪದಗಳು ವ್ಯವಹಾರಿಕವಾಗಿ ಉಪಯೋಗಿಸಲ್ಪಡುತ್ತಿದ್ದವು. ಇವುಗಳನ್ನು "ಕಾಸು" ಮತ್ತು "ಆಣೆ"ಗಳಲ್ಲಿ ಹೇಳಬಹುದಾದರೆ:
೧ ದುಡ್ಡು = ೪ ಕಾಸು
೧ ಪಾವಲಿ = ೪ ಆಣೆ
೧ ಹಣ ಅಥವ ವರಹ= ೪ ಆಣೆ ಪಾವಲಿ
೧ ದುಗ್ಗಾಣಿ = ೮ ಕಾಸು ಅಥವಾ ೨ ದುಡ್ಡು ಎಂದು ಹೇಳಲಾಗುತ್ತಿತ್ತು.
ಈಗಿನ ಖೋಟಾ ನೋಟುಗಳು ಇರುವಂತೆ, ಹಿಂದೆಯೂ ನಾಣ್ಯಗಳ ನಕಲು ಮಾಡಲಾಗುತ್ತಿತ್ತು. ಬೆಳ್ಳಿಕಾಸಿನ ನಕಲನ್ನು "ಸೀಸ"ದಲ್ಲಿ ಮಾಡುತ್ತಿದ್ದರು. ಆದುದರಿಂದ, ನಾಣ್ಯವನ್ನು ಚಿಮ್ಮಿಸಿ ಅದರ ಶಬ್ಧದ ಆಧಾರದ ಮೇಲೆ ಅದು "ಬೆಳ್ಳಿ" ಅಥವ "ಸೀಸ"ದಿಂದ ಮಾಡಲ್ಪಟ್ಟಿದೆ ಎಂಬುದನ್ನು ಗುರುತಿಸುತ್ತಿದ್ದರು. "ಹಣ", "ವರಹ" ಎಂಬ ಪದಗಳನ್ನು ಸಾಮಾನ್ಯವಾಗಿ ಮದುವೆ ಮುಂತಾದ ಸಮಾರಂಭಗಲ್ಲಿ ಹೆಚ್ಚು ಉಪಯೋಗಿಸುತ್ತಿದ್ದರು. ಮದುವೆಗಳಲ್ಲಿ ನೀಡುವ ಉಡುಗೊರೆಯ ಹಣದ (ಮುಯ್ಯಿ) ಪಟ್ಟಿ ಬರೆಯುವಾಗ "ವಧುವಿಗೆ ಸೋದರಮಾವನಿಂದ ನಾಲ್ಕು ವರಹ" ಅಥವಾ "ವರನಿಗೆ ಚಿಕ್ಕಪ್ಪನಿಂದ ಹತ್ತು ಹಣ" ಎಂದು ಹೇಳುತ್ತಿದ್ದರು. ಕೆಲವು ಭಾಗಗಳಲ್ಲಿ "ಆಗ", "ಅಡ್ಡ" ಮುಂತಾದ ಪದಗಳನ್ನು ಈ ಕೆಳಗಿನ ಅರ್ಥದಲ್ಲಿ ಉಪಯೋಗಿಸುತ್ತಿದ್ದರು.
ಆಗ = ಒಂದು
ಅಡ್ಡ = ಎರಡು
ದುಡ್ಡು = ನಾಲ್ಕು
ದುಗ್ಗಾಣಿ = ಎಂಟು

http://makrumanju.blogspot.in/search/label/%E0%B2%95%E0%B2%A8%E0%B3%8D%E0%B2%A8%E0%B2%A1%20%E0%B2%B8%E0%B2%BE%E0%B2%B9%E0%B2%BF%E0%B2%A4%E0%B3%8D%E0%B2%AF%2F%20%E0%B2%AE%E0%B2%BE%E0%B2%B9%E0%B2%BF%E0%B2%A4%E0%B2%BF

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......