ಹಳ್ಳಿಯ ಲೆಕ್ಕಗಳು - ಮಾ.ಕೃ.ಮಂಜು


ಹಳೆಯ ಹಳ್ಳಿಯ ಲೆಕ್ಕಗಳು

ತೂಕ ಹಾಗೂ ಅಳತೆಗೆ ಸಂಬಂಧಿಸಿದಂತೆ
ಹಿಂದೆ ತೂಕವನ್ನು "ರೂಪಾಯಿ"ಗಳಿಂದಲೇ ಕಂಡುಕೊಂಡಿದ್ದು ನಮಗೆ ಕಂಡುಬರುತ್ತದೆ. ೨೪ ಬೆಳ್ಳಿ "ರೂಪಾಯಿ"ಗಳ ತೂಕವನ್ನು ಒಂದು "ಸೇರು" ಎಂದು ಮಾಡಿಕೊಂಡಿದ್ದರಿಂದ, ಅದರ ಅಳತೆಗೆ ತಕ್ಕಂತೆ " ಸೇರಿ"ನ ಸೃಷ್ಟಿಯಾಗಿರುವುದನ್ನು ನಾವು ಗಮನಿಸುತ್ತೇವೆ. ಹೀಗೆ "ಪಾವು", "ಚಟಾಕು", "ಗಜ", "ಅಂಗುಲ", "ಮೈಲಿ", "ಹರಿದಾರಿ" "ಎಕರೆ" ಮುಂತಾದ ಅಳತೆಮಾನಗಳು ಹಾಗೂ "ತೊಲ", "ಪಲ್ಲ", "ಖಂಡುಗ" ಮುಂತಾದ ತೂಕಮಾನಗಳು ಬಂದು ಸೇರಿಕೊಂಡಿವೆ. ಉದಾಹರಣೆಗೆ, ಒಂದು ಸೇರು ಎಂದರೆ, ೨೪ ಬೆಳ್ಳಿ "ರೂಪಾಯಿ"ಗಳ ತೂಕ ಅಥವಾ ನಾಲ್ಕು "ಪಾವು" ಎಂದೂ ಹಾಗೂ ಒಂದು "ಗಜ" ಎಂಬುದನ್ನು ಮೂರು "ಅಡಿ" ಎಂದು ಹೇಳಲಾಗುತ್ತದೆ. ಇವುಗಳ ಪ್ರಕಾರ ತೂಕ ಹಾಗು ಅಳತೆಗಳನ್ನು ನಾವು ಈ ರೀತಿ ವಿಂಗಡಿಸಬಹುದಾಗಿದೆ.
೧ ಬೆಳ್ಳಿ ರೂಪಯಿ ತೂಕ = ೧ ತೊಲ
೧ ಪಾವು = ೪ ಚಟಾಕು
೧ ಸೇರು = ೪ ಪಾವು ಅಥವ ೨೪ ಬೆಳ್ಳಿ ರೂಪಯಿಗಳ ತೂಕ
೧ ಇಬ್ಬಳಿಗೆ = ಐದೂವರೆ ಸೇರು (ದೊಡ್ದ ಇಬ್ಬಳಿಗೆಯಾದರೆ ೬ ಸೇರು)
೧ ಪಲ್ಲ = ೧೦೦ ಸೇರು
೧ ಕೊಳಗ = ೨ ಇಬ್ಬಳಿಗೆ ಅಥವ ೧೧ ಸೇರು
೧ ಖಂಡುಗ = ೪೦ ಇಬ್ಬಳಿಗೆ ಅಥವ ೨೦ ಕೊಳಗ
೧ ಅಡಿ = ೧೨ ಅಂಗುಲ ಅಥವ ಇಂಚು
೧ ಗಜ = ೩ ಅಡಿ ಅಥವ ೩೬ ಅಂಗುಲ
೧ ಗುಂಟೆ = ೨೨೦ ಚದರ ಗಜ
೧ ಎಕರೆ = ೪೦ ಗುಂಟೆ
೧ ಮೈಲಿ = ೮ ಫರ್ಲಾಂಗು
೧ ಹರಿದಾರಿ = ೪ ಮೈಲಿ
೧ ಗಾವುದ = ೧೨ ಹರಿದಾರಿ
ನಾನು ನೋಡಿದಂತೆ ಸಣ್ಣವನಾಗಿದ್ದಾಗ, ಅಪ್ಪ ಶಾಲಾ ಯೂನಿಫಾರಂ ಬಟ್ಟೆ ಹಾಕಲು ಅಂಗಡಿಗೆ ಕರೆದುಕೊಂಡು ಹೋಗುತ್ತಿದ್ದದ್ದು ಹಾಗೂ ಅಲ್ಲಿ ಬಟ್ಟೆಯನ್ನು ಗಜದಲ್ಲೇ ಅಳತೆ ಮಾಡುತ್ತಿದ್ದದ್ದು ನನಗೆ ನೆನಪಿದೆ. ಇನ್ನು ಭತ್ತದ ನಾಟಿಗೂ ಮೊದಲು ಪೈರಿನ ಹೊಟ್ಟಿಲಿಗೆ ಬಿತ್ತನೆ ಭತ್ತದ ಅಳತೆಯನ್ನು ಸೇರಿನಲ್ಲಿ ಈಗಲೂ ಅಳೆದು ಉಪಯೋಗಿಸುವುದು ಸಾಮಾನ್ಯವಾಗಿದೆ. ಹಳ್ಳಿಗಳಲ್ಲಿ ಒಂದು ಎಕರೆಗೆ ಸುಮಾರು ಮೂವತ್ತು ಸೇರು ಬಿತ್ತನೆ ಭತ್ತವನ್ನು ಉಪಯೋಗಿಸುತ್ತಾರೆ. ಇನ್ನು ತೂಕದಲ್ಲಿ ನೋಡಿದರೆ, ಬೆಣ್ಣೆ, ತುಪ್ಪ ಮುಂತಾದ ಖಾದ್ಯಗಳನ್ನು "ಸೇರು", "ಪಾವು" ಎಂದೇ ತೂಗುವುದು ವಾಡಿಕೆಯಾಗಿತ್ತು. ಅದಕ್ಕಾಗಿಯೇ ತೂಕದ ಕಲ್ಲುಗಳನ್ನು ಉಪಯೋಗಿಸುತ್ತಿದ್ದರು. ಉದಾಹರಣೆಗೆ,
ಅಚ್ಚೇರು ಬೆಣ್ಣೆ = ಅರ್ಧ ಸೇರು ಬೆಣ್ಣೆ = ೧೨ ಬೆಳ್ಳಿ ರೂಪಾಯಿಗಳ ತೂಕ ಅಥವ ೨ ಪಾವು
ಅರ್ಪಾವು ತುಪ್ಪ = ಅರ್ಧ ಪಾವು ತುಪ್ಪ
ಹಳ್ಳಿ ಅಳತೆಯಲ್ಲಿ ಕಾಣಬಹುದಾದ ಇನ್ನೊಂದು ವಿಷೇಶ ಎಂದರೆ, ಸೇರು, ಪಾವು, ಇಬ್ಬಳಿಗೆ, ಕೊಳಗ ಹೀಗೆ ಯಾವುದನ್ನೇ ಉಪಯೋಗಿಸಿ ಭತ್ತ, ರಾಗಿ ಅಥವಾ ಬೇರೆ ಯಾವುದೇ ಧಾನ್ಯಗಳನ್ನು ಅಳೆಯುವಾಗ "ಹೆಚ್ಚಲಿ" ಎಂಬ ಪದವನ್ನು ಸಾಮಾನ್ಯವಾಗಿ ಉಪಯೋಗಿಸುತ್ತಿರುತ್ತಿದ್ದರು. ಅದಕ್ಕೆ ಎರಡು ಕಾರಣಗಳಿವೆ. ಮೊದಲನೆಯದಾಗಿ ಧಾನ್ಯ ಹಾಗೇ ಹೆಚ್ಚಲಿ ಎಂಬುದು. ಎರಡನೆಯದಾಗಿ ೭, ೧೧ ಮತ್ತು ೧೭ ಸಂಖ್ಯೆಗಳು ಅಶುಭ ಹಾಗು ಅವುಗಳನ್ನು ಉಪಯೋಗಿಸಬಾರದೆಂಬ ನಂಬಿಕೆ. ಈ ಕಾರಣಗಳಿಂದ, "ಆರು" ಆದ ನಂತರ "ಹೆಚ್ಚಲಿ" ನಂತರ "ಎಂಟು" ಎಂದೂ, ಹತ್ತಾದ ನಂತರ "ಹೆಚ್ಚಲಿ" ನಂತರ "ಹನ್ನೆರಡು ಎಂದೂ, "ಹದಿನಾರು" ಆದ ನಂತರ "ಹೆಚ್ಚಲಿ" ನಂತರ "ಹದಿನೆಂಟು" ಎಂದೂ ಬಳಸುತ್ತಿದ್ದರು. ಹೀಗೆ ಏಳು, ಹನ್ನೊಂದು ಮತ್ತು ಹದಿನೇಳು ಸಂಖ್ಯೆಗಳನ್ನು ಉಪಯೋಗಿಸುತ್ತಿರಲಿಲ್ಲ. ಹಾಗೇ ಕೆಲವು ಸಂಖ್ಯೆಗಳನ್ನು ಶುಭ ಸಂಖ್ಯೆಗಳೆಂದು ನಂಬಿ ಉಪಯೋಗಿಸುತ್ತಿದ್ದದ್ದೂ ಉಂಟು. ಅವು ಯಾವುವೆಂದರೆ, ಐದು, ಒಂಬತ್ತು ಮತ್ತು ಹನ್ನೆರಡು.
ಹಣಕ್ಕೆ ಸಂಬಂಧಿಸಿದಂತೆ
ಈ ಮೊದಲೇ ಹೇಳಿದಂತೆ ಹಿಂದೆ "ಕಾಸು"ಗಳು ಬಹುಪಾಲು ಎಲ್ಲಾ ಅಳತೆಗಳಲ್ಲೂ ಪ್ರಧಾನ ಪಾತ್ರ ವಹಿಸುತ್ತಿದ್ದದ್ದು ನಮಗೆ ಕಾಣುತ್ತದೆ. ಮೂರು ಕಾಸಿನ ಒಂದು ಬಿಲ್ಲೆ, ಇಂಥ ನಾಲ್ಕು ಬಿಲ್ಲೆಗಳು ಸೇರಿದರೆ ಹನ್ನೆರಡು "ಕಾಸು" ಅಥವಾ ಒಂದು "ಆಣೆ"ಯಾಗುತ್ತದೆ. ಇಂದಿನ "ನಾಲ್ಕಾಣೆ", "ಎಂಟಾಣೆ", "ಹನ್ನೆರಡಾಣೆ", "ಹದಿನಾರಾಣೆ"ಗಳು ಈ ಹಿನ್ನಲೆಯಿಂದಲೇ ಬಂದಿರುವುದು ನಮಗೆ ತಿಳಿದ ಸಂಗತಿಯಾಗಿದೆ. ಈಗಲೂ ನಾವು ಈ "ಆಣೆ"ಗಳನ್ನು ಉಪಯೋಗಿಸುತ್ತೇವೆ. ಇದರ ಪ್ರಕಾರ ನಾವು ನಾಣ್ಯಗಳನ್ನು ಈ ಕೆಳಗೆ ಹೇಳಿರುವ ರೀತಿ ವಿಂಗಡಿಸಬಹುದಾಗಿದೆ.
ಚಲಾವಣೆಯಲ್ಲಿದ್ದ ನಾಣ್ಯಗಳು ಮತ್ತು ಉಪಯೋಗಿಸುತ್ತಿದ್ದ ಲೋಹಗಳು:
೧ ಕಾಸು (ತಾಮ್ರ)
೩ ಕಾಸು (ತಾಮ್ರ)
೬ ಕಾಸು (ನಿಕ್ಕಲ್)
೧ ಆಣೆ = ೧೨ ಕಾಸು (ನಿಕ್ಕಲ್)
೨ ಆಣೆ = ೨೪ ಕಾಸು (ನಿಕ್ಕಲ್)
೪ ಆಣೆ (ಬೆಳ್ಳಿ)
೮ ಆಣೆ (ಬೆಳ್ಳಿ)
೧ ರೂಪಾಯಿ = ೧೯೨ ಕಾಸು (ಬೆಳ್ಳಿ)
ಜೊತೆಗೆ ನಾಣ್ಯವಲ್ಲದಿದ್ದರೂ "ದುಡ್ಡು", "ಪಾವಲಿ" "ಹಣ ಅಥವ ವರಹ" ಹಾಗು "ದುಗ್ಗಾಣಿ" ಎಂಬ ಪದಗಳು ವ್ಯವಹಾರಿಕವಾಗಿ ಉಪಯೋಗಿಸಲ್ಪಡುತ್ತಿದ್ದವು. ಇವುಗಳನ್ನು "ಕಾಸು" ಮತ್ತು "ಆಣೆ"ಗಳಲ್ಲಿ ಹೇಳಬಹುದಾದರೆ:
೧ ದುಡ್ಡು = ೪ ಕಾಸು
೧ ಪಾವಲಿ = ೪ ಆಣೆ
೧ ಹಣ ಅಥವ ವರಹ= ೪ ಆಣೆ ಪಾವಲಿ
೧ ದುಗ್ಗಾಣಿ = ೮ ಕಾಸು ಅಥವಾ ೨ ದುಡ್ಡು ಎಂದು ಹೇಳಲಾಗುತ್ತಿತ್ತು.
ಈಗಿನ ಖೋಟಾ ನೋಟುಗಳು ಇರುವಂತೆ, ಹಿಂದೆಯೂ ನಾಣ್ಯಗಳ ನಕಲು ಮಾಡಲಾಗುತ್ತಿತ್ತು. ಬೆಳ್ಳಿಕಾಸಿನ ನಕಲನ್ನು "ಸೀಸ"ದಲ್ಲಿ ಮಾಡುತ್ತಿದ್ದರು. ಆದುದರಿಂದ, ನಾಣ್ಯವನ್ನು ಚಿಮ್ಮಿಸಿ ಅದರ ಶಬ್ಧದ ಆಧಾರದ ಮೇಲೆ ಅದು "ಬೆಳ್ಳಿ" ಅಥವ "ಸೀಸ"ದಿಂದ ಮಾಡಲ್ಪಟ್ಟಿದೆ ಎಂಬುದನ್ನು ಗುರುತಿಸುತ್ತಿದ್ದರು. "ಹಣ", "ವರಹ" ಎಂಬ ಪದಗಳನ್ನು ಸಾಮಾನ್ಯವಾಗಿ ಮದುವೆ ಮುಂತಾದ ಸಮಾರಂಭಗಲ್ಲಿ ಹೆಚ್ಚು ಉಪಯೋಗಿಸುತ್ತಿದ್ದರು. ಮದುವೆಗಳಲ್ಲಿ ನೀಡುವ ಉಡುಗೊರೆಯ ಹಣದ (ಮುಯ್ಯಿ) ಪಟ್ಟಿ ಬರೆಯುವಾಗ "ವಧುವಿಗೆ ಸೋದರಮಾವನಿಂದ ನಾಲ್ಕು ವರಹ" ಅಥವಾ "ವರನಿಗೆ ಚಿಕ್ಕಪ್ಪನಿಂದ ಹತ್ತು ಹಣ" ಎಂದು ಹೇಳುತ್ತಿದ್ದರು. ಕೆಲವು ಭಾಗಗಳಲ್ಲಿ "ಆಗ", "ಅಡ್ಡ" ಮುಂತಾದ ಪದಗಳನ್ನು ಈ ಕೆಳಗಿನ ಅರ್ಥದಲ್ಲಿ ಉಪಯೋಗಿಸುತ್ತಿದ್ದರು.
ಆಗ = ಒಂದು
ಅಡ್ಡ = ಎರಡು
ದುಡ್ಡು = ನಾಲ್ಕು
ದುಗ್ಗಾಣಿ = ಎಂಟು

http://makrumanju.blogspot.in/search/label/%E0%B2%95%E0%B2%A8%E0%B3%8D%E0%B2%A8%E0%B2%A1%20%E0%B2%B8%E0%B2%BE%E0%B2%B9%E0%B2%BF%E0%B2%A4%E0%B3%8D%E0%B2%AF%2F%20%E0%B2%AE%E0%B2%BE%E0%B2%B9%E0%B2%BF%E0%B2%A4%E0%B2%BF

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು