ಬಾಹ್ಯ ರೂಪ - ಗುರುರಾಜ ಕರ್ಜಗಿ,

1930-31ರಲ್ಲಿ ತಮಿಳುನಾಡಿನ ತಿರುಚ್ಚಿಯಲ್ಲಿ ಕನ್ನಡ ಸಂಘದವರು ಒಂದು ಕಾರ್ಯಕ್ರಮ ಆಯೋಜಿಸಿದ್ದರು. ಅದಕ್ಕೆ ಮುಖ್ಯ ಅತಿಥಿಯನ್ನಾಗಿ ಟಿ.ಪಿ. ಕೈಲಾಸಂರ ಅವರನ್ನು ಆಹ್ವಾನಿಸಿದ್ದರು. ಹಿಂದಿನ ರಾತ್ರಿ ಬೆಂಗಳೂರಿನಿಂದ ಹೊರಟು ಮರುದಿನ ಇನ್ನೂ ಬೆಳಗಾಗುವುದರೊಳಗೆ ರೈಲಿನಿಂದ ತಿರುಚ್ಚಿಯನ್ನು ತಲುಪಿದರು ಕೈಲಾಸಂ.
ಸಾಮಾನ್ಯವಾದ ದಿನದಲ್ಲೇ ತಮ್ಮ ವೇಷಭೂಷಣಗಳ ಬಗ್ಗೆ ಅಷ್ಟೊಂದು ಗಮನ ನೀಡದ ಕೈಲಾಸಂ, ರಾತ್ರಿ ಪ್ರವಾಸದಲ್ಲಿ ತಮಗೆ ಅನುಕೂಲವೆನಿಸಿದ ಬಟ್ಟೆ ಧರಿಸಿದ್ದರು. ಅವರು ರೈಲಿನಿಂದ ಇಳಿದಾಗ ಅವರ ವೇಷ ವಿಚಿತ್ರವಾಗಿತ್ತು. ಸ್ಯಾಂಡೋ ಬನಿಯನ್, ಕೊಳೆಯಾಗಿದ್ದ ಲುಂಗಿ, ಹೆಗಲಿಗೊಂದು ಕೈ ಚೀಲ.
ಕೆಳಗಿಳಿದು ಕತ್ತು ತಿರುಗಿಸಿ ಅತ್ತಿತ್ತ ನೋಡಿದರು. ಸಂಘಟಕರಾರಾದರೂ ಬಂದಿರಬಹುದೇ ಎಂದು ಹುಡುಕಾಡಿದರು. ಯಾರೂ ಕಾಣಲಿಲ್ಲ. ಮನದಲ್ಲೇ ಅವರನ್ನು ಶಪಿಸಿ ತಾವೇ ಏನಾದರೂ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಹೊರನಡೆದರು. ಆಗ ಯಾರೋ ಇವರ ಹೆಗಲ ಮೇಲೆ ಒಂದು ಕೋಲನ್ನು ಇಟ್ಟಂತಾಯಿತು. ತಿರುಗಿ ನೋಡಿದರೆ ಒಬ್ಬ ದೀರ್ಘದೇಹಿ ನಿಂತಿದ್ದಾರೆ.
ಘಿಗರಿಗರಿ ಮಲ್ ಪಂಚೆ, ಉದ್ದ ಕ್ಲೋಸ್ ಕಾಲರ್ ಉಲ್ಲನ್ ಕೋಟು, ತಲೆಗೆ ಜರೀಪೇಟ, ಕಣ್ಣಿಗೆ ಕಪ್ಪು ಕನ್ನಡಕ. ಒಟ್ಟಿನಲ್ಲಿ ಅತ್ಯಂತ ಶ್ರಿಮಂತರ ಠೀವಿ. ಕೈಯಲ್ಲಿಯ ಬೆತ್ತವನ್ನು ತೋರಿಸುತ್ತಾ ತಮಿಳಿನಲ್ಲಿ ಹೇಳಿದರು, `ಏ ಕೂಲಿ, ಬಾ ಇ್ಲ್ಲಲಿ', ನಂತರ ತಮ್ಮ ಹಾಸಿಗೆ ಸುರುಳಿ ಮತ್ತು ಸೂಟಕೇಸನ್ನು ತೋರುತ್ತ,  `ಇವೆರಡನ್ನೂ ಹೊರಗಡೆ ತೆಗೆದುಕೊಂಡು ಬಂದು ನಮ್ಮ ಕಾರಿನಲ್ಲಿ ಇಡಬೇಕು.ಎಷ್ಟು ಕೊಡಬೇಕು ಈಗಲೇ ಹೇಳು. ಹೊರಗೆ ಹೋಗಿ ತಗಾದೆ ಮಾಡಬೇಡ'  ಎಂದು ಗಡುಸಾಗಿ ಹೇಳಿದರು.
 ಗುರುರಾಜ ಕರ್ಜಗಿ
ಕೈಲಾಸಂ ನಗುತ್ತ,  `ಹಾಗೆ ಆಗಲಿ ಸ್ವಾಮಿ. ನಾನು ತಕರಾರು ಮಾಡುವವನೇ ಅಲ್ಲ. ಜನ ನನ್ನ ಸೇವೆಯಿಂದ ತೃಪ್ತಿ ಪಟ್ಟು ಎಷ್ಟು ಕೊಟ್ಟರೂ ನನಗೆ ಸರಿಯೇ. ನೀವೇ ಏನಾದರೂ ತಿಳಿದು ಕೊಡಿ'  ಎಂದು ಅವರು ಕೋಲಿನಿಂದ ತೋರಿಸಿದ ಟ್ರಂಕನ್ನು ಸಲೀಸಾಗಿ ಒಂದೇ ಝಟಕಿಗೆ ಎತ್ತಿ ತಲೆಯ ಮೇಲೆ ಇಟ್ಟುಕೊಂಡರು. ತಮ್ಮ ಚೀಲವನ್ನು ಸರಿಯಾಗಿ ಏರಿಸಿಕೊಂಡು, ಇನ್ನೊಂದು ಕೈಯಿಂದ ಹಾಸಿಗೆ ಸುರುಳಿಯನ್ನು ಎತ್ತಿ, ಮೊಳಕಾಲಿನ ಮೇಲೆ ಇರಿಸಿಕೊಂಡು ನಂತರ ಮತ್ತೊಮ್ಮೆ ಹ್ಞೂಂಕರಿಸಿ ಎತ್ತಿ ಬಗಲಿಗೆ ಸೇರಿಸಿ ಹಿಡಿದುಕೊಂಡರು. ಆಮೇಲೆ ಹಿಂತಿರುಗಿ ತಮ್ಮನ್ನು ಬೆರಗುಗಣ್ಣಿಂದ ನೋಡುತ್ತಿದ್ದ ಚೆಟ್ಟಿಯಾರರಿಗೆ,  `ಬನ್ನಿ ಸ್ವಾಮಿ, ಹೋಗೋಣ'  ಎಂದವರೇ ಸರಸರನೇ ನಡೆದುಬಿಟ್ಟರು.
ಇವರನ್ನು ಹಿಂಬಾಲಿಸಿ ಓಡುವುದು ಚೆಟ್ಟಿಯಾರರಿಗೆ ತುಂಬ ಕಷ್ಟವಾಯಿತು.  ಸಾವಕಾಶ, ಸಾವಕಾಶ  ಎನ್ನುತ್ತ ಉಸಿರುಬಿಗಿಹಿಡಿದು ಓಡಿದರು. ಸ್ಟೇಷನ್ನಿನ ಹೊರಗೆ ಒಂದು ದೊಡ್ಡ ಕಾರು ಬಂದು ನಿಂತಿತು. ಅದರಿಂದ ಇಳಿದ ಕೆಲವರು ಚೆಟ್ಟಿಯಾರರನ್ನು ನೋಡಿ ಸಂಭ್ರಮದಿಂದ ಓಡಿಬಂದರು, ಅವರನ್ನು ಕಾರಿನಲ್ಲಿ ಕೂಡ್ರಿಸಿದರು. ಅಷ್ಟರಲ್ಲಿ ಕೈಲಾಸಂ ಅವರ ಸಾಮಾನುಗಳನ್ನು ಕಾರಿನ ಡಿಕ್ಕಿಯಲ್ಲಿರಿಸಿದ್ದರು. ಬಂದವರು ಚೆಟ್ಟಿಯಾರರಿಗೆ ಹೇಳುತ್ತಿದ್ದರು,  `ಸಾರ್ ತಮಗೆ ಸ್ವಾಗತ ಸರ್. ನಾವು ಕನ್ನಡ ಸಂಘದ ಕಾರ್ಯಕರ್ತರು. ತಾವೇ ಇಂದಿನ ಕಾರ್ಯಕ್ರಮಕ್ಕೆ ಅಧ್ಯಕ್ಷರಲ್ಲವೇ. ಅದಕ್ಕೇ ತಮ್ಮನ್ನು ಎದುರುಗೊಳ್ಳಲು ಬಂದಿದ್ದೇವೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ  ಟಿ.ಪಿ. ಕೈಲಾಸಂ ಅವರೂ ಇದೇ ರೈಲಿನಿಂದ ಬರುವವರಿದ್ದರು. ಅವರನ್ನೂ ನೋಡಿಕೊಂಡು ಬರುತ್ತೇವೆ'  ಎನ್ನುವ ಹೊತ್ತಿಗೆ ಕೈಲಾಸಂ ಚೆಟ್ಟಿಯಾರರ ಬಳಿಗೆ ಬಂದರು.
`ಎಷ್ಟಯ್ಯೊ ನಿನ್ನ ಕೂಲಿ'  ಎಂದು ಚೆಟ್ಟಿಯಾರ್ ಕೇಳುವಾಗ ಕಾರ್ಯಕರ್ತರು ಇವರನ್ನು ನೋಡಿ ಬಿಳಿಚಿಕೊಂಡರು,  `ಅಯ್ಯಯ್ಯೋ ಇದೇನು ಸಾರ್. ತಾವು ಕೂಲಿಯ ಹಾಗೆ, ಇವನ್ನೇಕೆ ಹೊತ್ತುಕೊಂಡು ಬಂದಿರಿ'  ಎಂದು ಗಾಬರಿಯಿಂದ ಚೆಟ್ಟಿಯಾರರ ಕಡೆಗೆ ತಿರುಗಿ,  `ಸಾರ್, ಇವರೇ ಕೈಲಾಸಂ. ಇಂದಿನ ಕಾರ್ಯಕ್ರಮದ ಮುಖ್ಯ ಅತಿಥಿ'  ಎಂದರು.
ಆಗ ಕೈಲಾಸಂ ತಮ್ಮ ಟ್ರೇಡ್‌ಮಾರ್ಕ್ ಸಿಗಾರ್ ಹಚ್ಚಿ ಹೊಗೆ ಎಬ್ಬಿಸಿ ಚೆಟ್ಟಿಯಾರರ ಕಡೆಗೆ ಕೈ ಚಾಚಿ ` ಹೌದು ಸರ್, ನಾನೇ ಕೈಲಾಸಂ, ಬಿ.ಎ., ಎ.ಆರ್.ಸಿ (ಲಂಡನ್), ಎಫ್.ಆರ್.ಜಿ..ಎಸ್ (ಲಂಡನ್) ಅತ್ಯಂತ ಉನ್ನತ ಶಿಕ್ಷಣ ಪಡೆದ ಕೂಲಿ. ಇಂದು ತಾವೇ ಅಧ್ಯಕ್ಷರು. ನಾವಿಬ್ಬರೂ ಈ ರೀತಿ ಭೆಟ್ಟಿಯಾಗುವುದು ಆಶ್ಚರ್ಯಕರವಾದ ರೀತಿಯಲ್ಲವೇ'  ಎಂದರು. ಮುಂದೆ ಇಡೀ ದಿನ ಚೆಟ್ಟಿಯಾರರು ಪೆಚ್ಚಾಗಿಯೇ ಇದ್ದರು. ಬಾಹ್ಯರೂಪದಿಂದ, ಚರ್ಯೆಯಿಂದ ಮನುಷ್ಯನ ಗುಣವನ್ನು, ಮಟ್ಟವನ್ನು ಅಳೆಯುವುದು ತುಂಬ ಅಪಾಯಕಾರಿ.

Krupe_ Prajavani Daily News Paper

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು