Monday, September 9, 2013

ನೀನು ಯಾರು..? - -ಶರತ್ ಚಕ್ರವರ್ತಿ.

ನೀನು ಯಾರು..?
ಅವಳೆಂದಳು ನೀನು ಯಾರು..?
ನನ್ನದೂ ಅದೇ ಪ್ರಶ್ನೆ ; ನಾನು ಯಾರು
ಎದುರಿದೇ ಕನ್ನಡಿ, ಕಣ್ಣಿಗೆ ಕಣ್ಣು ಕೀಲಿಸಿದ್ದೇನೆ
ಕನ್ನಡಿಯೊಳಗಿನ ಕಣ್ಣುಗಳು ಕೂಡ ಹುಡುಕುತ್ತಿವೆ ; ಅದೇನನ್ನೊ
ಮತ್ತೆ ನನ್ನನ್ನೇ ಪ್ರಶ್ನಿಸುತ್ತಿವೆ ; ನೀನು ಯಾರು?

ಕೈಯಿವೆ ಕಾಲಿವೆ ಪಾದಗಳಿಲ್ಲ
ಅಯ್ಯೋ ಪಾದಗಳಿಲ್ಲವ? ಹಾಗಾದರೇ ಪ್ರೇತವೇ?
ಪ್ರೇತಕ್ಕೆ ಪಾದಗಳಿರುವುದಿಲ್ಲವಂತೆ
ಅವ್ವ ಹೇಳಿದ್ದಳು.
ಕಣ್ಣುಗಳಿವೆ, ಮಸ್ತಕದ ಪುರಾವೆಯೂ ಇಲ್ಲ
ಅಲ್ಲೆಲ್ಲಾ ಮುಳ್ಳು ಪೊದೆಗಳು ಒಂದಷ್ಟು ಬಾಡಿದ ಹೂಗಳು
ಸವೆದ ರಸ್ತೆ ಮುರಿದ ಸೌಧಗಳು

ಅರರೇ ಕಿವಿಗಳೆಲ್ಲಿ ಹೋದವು ವಿಶಾಲ ಹಣೆ
ಹಣೆಬರಹಗಳು…?
ಹುಡುಕಬೇಕಾದ ಕಣ್ಣುಗಳು ಪೊದೆಯ ಮರೆಯ ಬೆದೆಗೆ ದೃಷ್ಟಿನೆಟ್ಟಿವೆ.
ಹಸಿ ಹಸಿಯಾಗಿ ಬಿಸುಪುಗೊಂಡ ಕನಸುಗಳು
ಬಿಸಿಯಾಗಿ ಬೆವರುತ್ತಿವೆ ಆ ಕಣ್ಣುಗಳಲ್ಲಿ
ಅದನು ಕಂಡು ಒಂದಷ್ಟು ಲಲನೆಯರು ಛೇಡಿಸುತ್ತಿದ್ದಾರೆ
ಮುಜುಗರ ; ಬೆತ್ತಲಾದಂತೆ
ಇದ್ದೆಲ್ಲಾ ತೆರೆಗಳ ಮೀರಿದಂತೆ
ನಿಧಾನವಾಗಿ ತಲೆಬುರುಡೆ ರೂಪ ಪಡೆಯುತ್ತಿದೆ
ಪಾದಗಳು ಮೂಡತೊಡಗಿವೆ
 ಶ್ರೀ ಶರತ್ ಚಕ್ರವರ್ತಿ
ಅಸ್ಥಿತ್ವ ಆಕಾಶ ಎರಡು ದಕ್ಕಿವೆ
ನನ್ನೊಳಗೆ ನನ್ನತನವೆದ್ದಿದೆ
ನೆರಳು ಕೂಡ ಈಗ ಪಾದದಡಿಯಲ್ಲೆ
ಗಂಟಲಲಿ ಶ್ವಾಸ ಕಲೆಹಾಕಿ ನಾನೆಂದೆ

“ನಾನು ನಾನೇ”.

ಮುಖ ಗಂಟಿಕ್ಕಿದ್ದವಳು
ನೆಲಬಿರಿವಂತೆ ನಕ್ಕು ನುಡಿದಳು
“ದಡ್ಡ ನೀ ನನಗ್ಯಾರೆಂದು ಹೇಳು”
ಒಮ್ಮೆಲೆ ತೆರೆಗಳು ಕವುಚಿಬಿದ್ದವು
ನಾನೀಗ ನಿರ್ಲಿಪ್ತ.

-ಶರತ್ ಚಕ್ರವರ್ತಿ.

ಭ್ರಮಾನಿರತ ಬ್ಲಾಗಿಂದ,

ಮಹಾಕವಿ ಮಲಗಿದ್ದಾನೆ - ಬೇಲೂರು ರಘುನಂದನ


ಮಹಾಕವಿ ಮಲಗಿದ್ದಾನೆ
ಮುಂಜಾವಿನ ಹಸುರರವಿ
ಹೆಸರಿರದ ಉಸಿರನು
ಜಗಕೆ ಹಂಚಲು
ಇವನ ಬಳಿ ಕಳಿಸಿದ್ದಾನೆ

ಶ್ರೀ ಬೇಲೂರು ರಘುನಂದನ್
ಕಾಡಿನ ಉನ್ಮಾದಕೆ
ಭುವಿ ಗಗನದ ಮಿಲನಕ್ಕೆ
ಹೂಮಳೆಯ ಸ್ಕಲನ
ಜೀವ ಹುಟ್ಟುವ ನೆಲದಿ
ಗಟ್ಟಿಯಾಗಿ ಬದುಕ
ಗುಟ್ಟು ಹೇಳಲು
ಮಹಾ ಕವಿ ಮಲಗಿದ್ದಾನೆ

ಮಣ್ಣು ಕಣ್ಣಾಗಿ ಕಣ್ಣು ಹಣ್ಣಾಗಿ
ನೀರ ಹೀರಿ ನೆರನ್ನೇ ಕೊಡುವ
ಹಸುರ ಎಲೆಯಾಗಿ
ಕಲೆಯ ಹೊಳೆಯಾಗಿ
ಕಾರುಣ್ಯದ ಕತೆಯ ಹೇಳುವ
ಗುರುವಾಗಿ ಮಹಾಕವಿ ಮಲಗಿದ್ದಾನೆ

Sunday, September 8, 2013

ವಚನ - ಶ್ರೀ ಬೇಲೂರು ರಘುನಂದನ್

ವಚನ - 205

ಹೊಸತು ಎಂದು ಏನ ಬರೆದರೂ,
ಹೊಸತರಂತೆ ಕಾಣುತ್ತಿಲ್ಲ.
ಅವರಿವರು ಕುಣಿದ ನೆಲದ ಮೇಲೆ,
ಮತ್ತೆ ಕುಣಿಯಲೂ ಮನಸಿಲ್ಲ.
ರಸ ಕಸ ಹೊಸತೆಂದು ರಚನೆಗೆ
ಪದವಿತ್ತೊಡೆ,ಅಳುಕು ತಪ್ಪುತ್ತಿಲ್ಲ.
ಬರೆದುದನೆ ಬರೆವುದ ಬಿಡಿಸಿ,
ಹೊಸದಾರಿಗೆ ಹೆಸರಿಟ್ಟು ಕೆಸರಲ್ಲಿ
ಅರಳುವ ಕಮಲದ ನಿತ್ಯ ಕಿಶೋರತೆಯ
ಹೇಳಿಕೊಡಯ್ಯ ಶ್ವೇತಪ್ರಿಯ ಗುರುವೆ.

ಬೇಲೂರು ರಘುನಂದನ್
3.6.2013

-----------------------------------------------------------------


ವಚನ - 206

ಪ್ರಸ್ತದ ದಿನ ಹಸ್ತಮೈಥುನ ಮಾಡಿಕೊಂಡರೆ,
ರುಸ್ತುಮನೆಂದುಕೊಂಡ ಹೆಣ್ಣು ಕುಸಿದ ಕಡಲು.
ಮನಸು ಮೆಚ್ಚದೆ ದೇಹವನು ಕಚ್ಚಿ ಕೊಚ್ಚಲು ಹೋದರೆ,
ದೊಡ್ಡ ಹಾಸಿಗೆಯಲ್ಲೂ ಗಂಡು ಚಿಕ್ಕ ಹುಳವು.
ಮನಸು ಮಾಂಸ ಒಂದಾದರೇ ಮಾತ್ರ
ಶುಚಿಯೂ ರುಚಿಯೂ ಕುಶಿಯೂ ಕೊನೆಗೆ ಫಲವೂ
ಅಲ್ಲವೇ ಶ್ವೇತಪ್ರಿಯ ಗುರುವೆ.

----------------------------------------------------------------
ವಚನ - 212

ಶ್ರೀ ಬೇಲೂರು ರಘುನಂದನ್
ಕಟ್ಟುವ ಕನಸು ಕಾಣುವ ವಿಸ್ತಾರಕ್ಕೆ ರೆಕ್ಕೆ ಬಿಚ್ಚಿ ಚಾಚುವ ಹಕ್ಕಿಗೆ,
ಮೇಲೆ ಹಾರಿದಷ್ಟೂ ಗುಂಡು ಗೋಳ ಚಿಕ್ಕದು ದೃಷ್ಟಿಯೋ ದೊಡ್ಡದು.
ಮಣ್ಣ ಹುಡಿ ಇಟ್ಟಿಗೆಯ ಅಚ್ಚಿಗೆ ಸೋಕದಂತೆ ಸಾಕುವ ಈ ಮಣ್ಣ ಪಕ್ಷಿಗೆ,
ಅಣು ಪರಮಾಣು ಕಣವೆಲ್ಲ ಕಲೆಯ ರಂಗಶಾಲೆಯಲಿ ಹೊಸ ಪಾಠ ಹೊಸ ತಾಲೀಮು.
ಕಣ್ಣು ಬಿಟ್ಟು ಆಗಸದ ಅಟ್ಟ ಏರುವ ನಮ್ಮೂರಿನ ಕಾಜಣದ ಹಕ್ಕಿಗೆ ಕಂಡಿದೆಲ್ಲಾ ಹಸುರು,
ನೋಡಿದ್ದೆಲ್ಲಾ ಜೀವದುಸಿರು ಎಂದೂ ಬಯಸದು ಹಾರುವ ಕಲೆಗೆ ಹೆಸರು
ಶ್ವೇತಪ್ರಿಯ ಗುರುವೆ.


-ಬೇಲೂರು ರಘುನಂದನ್
27.8.2013

-

ಒಂದು ಪೋರ್ಟ್ ಮಾಟಂ'ನ ಸುತ್ತ.. - ಶರತ್ ಚಕ್ರವರ್ತಿ.



ಅದ್ಯಾವ ಸಿಂಡ್ರೆಲಾ ಬಿಟ್ಟು ಹೋದ ಚಪ್ಪಲಿಯೋ
ಒಂಟಿಯಾಗಿ ನೇತಾಡುತ್ತಿದೆ ಚಮ್ಮಾರನರಮನೆಯಲ್ಲಿ
ಅದರ ಬೆನ್ನಿಗೆ ಬೆನ್ನು ಕೊಟ್ಟು ಕುಳಿತು
ಕಾಲ್ಬೆರಳರಲಿ ಎದೆಮೆಟ್ಟಿ ಜುಟ್ಟುಹಿಡಿದು
ಸ್ವಾಟೆ ಸಿಗಿಳಿ ಹೊಲಿಗೆಹಾಕುತ್ತಿದ್ದಾನವನು
ಕಣಿ ಹೊಡೆಯಲು ಬಂದು
ಬೀಡಿ ಊಪುತ್ತಿದ್ದ ಮುದುಕನ ಕನ್ನಡಕದ ಮೇಲಿನ ಧೂಳು
ರಸ್ತೆಗೆ ದೃಷ್ಟಿನೆಟ್ಟು ಸಾಂದ್ರತೆಯ ಸೋಗಿನಲ್ಲಿದೆ
ಒಳಗಿದ್ದ ಮಂದಗಣ್ಣು ಅದರರಿವಿಲ್ಲದೇ
ಮಗಳ ಭವಿಷ್ಯತ್ತನ್ನು ತಡಕಾಡುತ್ತಿವೆ
ಮುತ್ತಿಡುವ ಪೈಪೋಟಿಯಲ್ಲಿ ಕಚ್ಚಾಡುವ ನೊಣಗಳ
ಕಂಡು ನಾಚಿ ಕೆಂಪೇರುತ್ತಿದೆ ಟೀ ಲೋಟ
 ಶ್ರೀ ಶರತ್ ಚಕ್ರವರ್ತಿ
ತನ್ನೊಳಗಿರುವುದು ಮಧುರಸವೆಂದೆ ಅದರ ಭ್ರಮೆ
ಬೀಡಿ ಹೊಗೆಬಿಟ್ಟ ಬಾಯಿಗೆ
ಬಿಸಿಯಾರಿದ ಟೀ ಮೇಲಿನ ತಾತ್ಸಾರದಿಂದ ತುಟಿ ಒಣಗಿದೆ
ಮೈಸುಟ್ಟುಕೊಂಡು ಮಜಕೊಡುವ ಬೀಡಿ ಕಿಟ್ಟವಾಗಿ ಉದುರಿದಾಗ
ಮೈ ಹೊಲಿಸಿಕೊಂಡು ಹೊರಬಿದ್ದ ಮೆಟ್ಟಿಗೆ ಬಿಡುಗಡೆಯ ಭಾಗ್ಯ
; ಐವತ್ತು ರೂಪಾಯಿ ಜಾಮೀನಿನ ಹೊರೆ
ಮುಸಿ ಮುಸಿ ನಗುತ್ತಿದ್ದ ಗಾಂಧಿಯನ್ನೊಪ್ಪಿಸಿ
ಮೆಟ್ಟಿನ್ಹೆಣ ಬಿಡಿಸಿಕೊಂಡು ಮನೆಗೆ ಹೊರಟೆ.

ಭ್ರಮಾನಿರತ ಬ್ಲಾಗಿಂದ,


ಸ್ವಗತ ಲಹರಿ - ರಾಜೇಂದ್ರ ಪ್ರಸಾದ್,

ಆಗಷ್ಟೇ ನಿಂತ ಮಳೆಯ ಮಣ್ಣಿನ ದೂರದಲ್ಲಿ ಎಲ್ಲೋ ಷಡ್ಜ ಶಬ್ದ..
ಎದೆಯೊಳಗೆ ಅದೆಷ್ಟೋ ಸಾವಿರ ನದಿಗಳು ಧುಮ್ಮುಕ್ಕಿ
ಕಣ್ಣುಗಳಲಿ ತುಂಬುತ್ತಿವೆ....
ಅತೃಪ್ತ ಕತ್ತಲೆಯ ಆತ್ಮದ ಮೌನವೊಂದು ಸುನಾಮಿಯಾಗಿ
ನನ್ನಾವರಿಸಲಿ..
ತಥಾಗತನ ಕೈಯಿಂದ ಕಪಾಲಮೋಕ್ಷಕ್ಕೆ ಕಾದಿದ್ದೇನೆ!!!


ನನ್ನ ಕಲ್ಪನೆಯ ಮಿತಿಗೆ ಸಿಕ್ಕಿಕೊಂಡಿರುವ ನಿನ್ನ ಬಿಡಿಸಲು
ಯತ್ನಿಸುವೆ .... ಒಮ್ಮೆ ನಕ್ಕಿಬಿಡು ಆ ಶಬ್ದದಲೆಗಳಲು ಎದೆತೀರದೊಳು ಬಡಿದೇಳಿಸುವ
ಭಾವಗಳಲಿ ತೊಯ್ದು ಬಿಡುವೆ.... ಕಲ್ಪನೆಯ ಕಾಲದಾಚೆಗೆ!
ರಾಜೇಂದ್ರ ಪ್ರಸಾದ್  ( RP)


ಎಲ್ಲರೂ ಅವರವರ ಸತ್ಯವ ಹೇಳುತ್ತಾರೆ..
ಕೇಳಿಸಿಕೊಳ್ಳಬೇಕು.
ಒಳಗಣ್ಣಿನಲಿ ನಾವು
ನಮ್ಮ ಸತ್ಯವ ಕಂಡುಕೊಳ್ಳಬೇಕು...


ಹೂವನ್ನು ಶ್ರೀಚಕ್ರ
ಎಂದುಕೊಂಡ ಶಾಕ್ತೇಯ
ಶಿಲಾಕೆ ಸ್ಪರ್ಶಕೆ ಗರ ಬಡಿದು ನಿಂತ
ಪರಾಗ ದೂರದ ಮಾತು.

ಭೂಮಿಗೀತ ಬ್ಲಾಗಿಂದ, 


ಶಿಶಿರದ ಮೊದಲಲ್ಲಿ ಬೀಳುವ - ರಾಜೇಂದ್ರ ಪ್ರಸಾದ್

ಶಿಶಿರದ ಮೊದಲಲ್ಲಿ ಬೀಳುವ
ರಾತ್ರಿಮಳೆ ಹೊತ್ತಲ್ಲಿ
ಇವಳು ಪ್ರಳಯ ಸ್ವರೂಪಿ..
ನಾನೋ ಬಯಲು ಸೀಮೆಯ
ಬಿಸಿಲು ಕುದುರೆ!

ಖುರಪುಟದ ನಾದ
ನದಿ ಹರಿಯೋ
ಶಬ್ದ ಸಂಕರಕ್ಕೆ
ಭೂವ್ಯೋಮಗಳು ಒಂದಾದ
ಸಿಡಿಲ ಸಂಭ್ರಮ

ಧೋ..ಧೋ.. ಸುರಿವ ಮಳೆ
Sri Rajendra Prasad (RP)
ಭೋರ್ಗೆರೆವ ಗಂಡುಹೊಳೆ
ಹಾಗೆ ಸಣ್ಣಗೆ ಮೀಟಿದಂತೆ
ವೀಣೆ ತಂತಿ ತಾನ.

ದಾರಿಯುದ್ದ ಮುತ್ತಿನಧರ
ಕಚ್ಚಿದ ಮಧ್ಯಪಾನ
ಗಮ್ಯವೋ ಮುಳುಗೆದ್ದ
ಸಮಸ್ತ ತೀರ್ಥಸ್ನಾನ

ಮುಗಿಯುತ್ತಲೇ ಇಲ್ಲ
ದಂಡಯಾತ್ರೆ..
ಹರಿವ ನದಿಗೆ ಮೈಯೆಲ್ಲಾ ಕಾಲು
ಸುರಿವ ಮಳೆಗೆ ಮೈಯೆಲ್ಲಾ ಜೀವ

ಹಗಲು ಹಕ್ಕಿ ಹಾಡುವ ಹೊತ್ತಿಗೆ
ಅವಳು ಕೊಚ್ಚಿಹೋದ ಭತ್ತದ ಗದ್ದೆ
ನಾನು ನೆರೆ ನಿಂತ ಹೆಬ್ಬಳ್ಳ.. - ಆರ್.ಪಿ.

ಭೂಮಿಗೀತ ಬ್ಲಾಗಿಂದ,




ನನಗೂ ಕೆಲವು ಆಸೆಗಳಿದ್ದೋ - ರಾಜೇಂದ್ರ ಪ್ರಸಾದ್

Rajendra Prasad ( RP)

ನನಗೂ ಕೆಲವು ಆಸೆಗಳಿದ್ದೋ

ಸಿಕ್ಕರೆ ಮಂಟೇಸ್ವಾಮಿಯಂತ ಗುರು ಸಿಕ್ಕಬೇಕು
ಆದರೆ ಸಿದ್ದಪ್ಪಾಜಿಯಂತ ಶಿಷ್ಯ ಆಗಬೇಕು

ಸಿಕ್ಕರೆ ಬುದ್ಧನಂತ ಗುರು ಸಿಕ್ಕಬೇಕು
ಆದರೆ ಮಹಾಕಶ್ಯಪನಂತ ಶಿಷ್ಯ ಆಗಬೇಕು

ಸಿಕ್ಕರೆ ಬೋಧಿಧರ್ಮನಂತ ಗುರು ಸಿಕ್ಕಬೇಕು
ಆದರೆ ದಾಜ಼ು ಹುಇಕೆಯಂತ ಶಿಷ್ಯ ಆಗಬೇಕು

ಸಿಕ್ಕರೆ ಯಮನಂತ ಗುರು ಸಿಕ್ಕಬೇಕು
ಆದರೆ ನಚಿಕೇತನಂತ ಶಿಷ್ಯ ಆಗಬೇಕು

ಸಿಕ್ಕರೆ ಕೃಷ್ಣನಂತ ಗುರು ಸಿಕ್ಕಬೇಕು
ಆದರೆ ಅಭಿಮನ್ಯುನಂತ ಶಿಷ್ಯ ಆಗಬೇಕು

ಆದರೂ ನಾನು ದ್ರೋಣನಿರದ ಏಕಲವ್ಯನೇ ಆದೆ. ಗುರು ನನಗೆ ಅಮೂರ್ತನಾಗೇ ಉಳಿದುಬಿಟ್ಟ...

ಭೂಮಿಗೀತ ಬ್ಲಾಗಿಂದ,

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......