Tuesday, September 18, 2012


ಗಣಪತಿ ಅಂದರೆ ಕಡಲೆ, ಗಣಪತಿ ಅಂದರೆ ಅಮ್ಮ ಮಾಡುತ್ತಿದ್ದ ಹಬ್ಬದ ಅಡುಗೆ... ನಾನಲ್ಲೇ ಬಾಕಿ.... ನೀವೂ ಸ್ವಲ್ಪ ಸಿಹಿಯನ್ನ ನಾಳೆ ಮನೆಯಲ್ಲಿ ಮಾಡಿ ಮಕ್ಕಳಿಗೆ ಹಾಕಿ!

ಹಬ್ಬದ ಶುಭ ಸಂಭ್ರಮ

ಕಾಡುವ ನನ್ನೂರ ಹಳೆಯ ದಿನಗಳು.....



ಇತರರಿಗೆ ವಿಕ್ಷಿಪ್ತವೆನಿಸುವ ಅನೇಕ ಒಳ ಆಸೆಗಳು ನನ್ನೊಳಗಿವೆ. ಉದಾಹಾರಣೆಗೆ ಶತಾಬ್ದಿ ತುಂಬಿದ ರೈಲಿನ ಎರಡನೆ ದರ್ಜೆಯ ಡಬ್ಬಿಯಲ್ಲಿ ಮೂಗಲ್ಲಿ ಹಾಡುತ್ತಾ ಭಿಕ್ಷೆ ಬೇಡಬೇಕು! ರಾಜಧಾನಿ ಎಕ್ಸ್'ಪ್ರೆಸ್ಸಿನಲ್ಲಿ ಟಿಕೆಟ್ ಇಲ್ಲದೆ ಅದರ ಎಲ್ಲ ಮಜಾ ಅನುಭವಿಸುತ್ತಲೆ ಪ್ರಯಾಣಿಸಬೇಕು! ಪಾಸ್'ಪೋರ್ಟ್ ವೀಸಾದ ಹಂಗಿಲ್ಲದೆ ದರಿದ್ರ ಅಮೇರಿಕಾದಲ್ಲಿ ಅಂಡಲೆಯಬೇಕು ಹೀಗೆ...ಇದೇ ಸರಣಿಯ ಭಾಗವಾಗಿ ಬೀದಿ ಬದಿಯ ಫುಟ್ಪಾತ್ ದೇವರಲ್ಲಿ ಮೂರ್ಕಾಸಿನ ನಂಬಿಕೆ ಇಲ್ಲದಿದ್ದರೂ ಇವತ್ತು ಆದಷ್ಟು ದೇವಸ್ಥಾನ ಸುತ್ತಿ ಚೌತಿಯ ಪ್ರಸಾದವನ್ನ ಸಿಕ್ಕಷ್ಟು ತಿಂದು ತೇಗಬೇಕು ಅನ್ಕೊಂಡಿದ್ದೇನೆ. ದೇವರಲ್ಲಿ ನಂಬಿಕೆ ಇಲ್ದಿದ್ರೇನು ಪ್ರಸಾದದಲ್ಲಿ ಭಕ್ತಿ ನಿಷ್ಠೆಯ ಮನಪೂರ್ವಕ ನಂಬುತ್ತೇನೆ! ಚಿಕ್ಕಂದಿನಲ್ಲಿ ನಮ್ಮೂರ ಗಣಪತಿಕಟ್ಟೆಯ ತಂತ್ರಿಗಳ ಸಂಕಷ್ಟಿ ಪ್ರಸಾದಕ್ಕೂ ಹೀಗೆ ಬೇಷರತ್ತಾಗಿ ಶರಣಾಗ್ತಿದ್ದೆ.

ನನ್ನಜ್ಜ ನಿಂದ ಅನೇಕ ಆಸಕ್ತಿಕರ ಚಟಗಳು ನನಗೂ ದಾಟಿವೆ. ಸಮಯ ಸಿಕ್ಕಾಗಲೆಲ್ಲ ಯಕ್ಷಗಾನದ ಸವಿ ಅನುಭವಿಸುದರಲ್ಲಿ ನಿಸ್ಸೀಮರಾಗಿದ್ದ ಅಜ್ಜನ ಈ ಕಲಾ ರಸಿಕತೆಯಲ್ಲಿ ನನಗೂ ಒಂದು ಪಾಲು ರಕ್ತಗತವಾಗಿ ಹರಿದು ಬಂದಿದೆ. ಯಕ್ಷಗಾನ ಮೇಳಗಳು ತೀರ್ಥಹಳ್ಳಿಯಲ್ಲಿ ಬೀಡು ಬಿಟ್ಟಾಗ ಅಜ್ಜ ತಮ್ಮ ರಜೆಗಾಗಿ ಬಸ್ ಕಂಪನಿಯಲ್ಲಿ ಕಂಭ ಕಂಭಕ್ಕೂ ಕೈ ಮುಗಿಯುತ್ತಾ ಪರದಾಡುತ್ತಿದ್ದರು. ಹತ್ತು ಹದಿನೈದು ದಿನಗಳ ಮುಂದೆಯೇ ಬುಮ್ಬರುವ ಮೇಳಗಳ ಪ್ರಚಾರ ಆಗಿರುತ್ತಿದ್ದರಿಂದ ಸಿಗುವ ರಜೆಗಳನ್ನ ಅದಕ್ಕೆ ತಕ್ಕಂತೆ ಅಜ್ಜ ಹೊಂದಿಸಿ ಕೊಳ್ಳುತ್ತಿದ್ದುದೂ ಇತ್ತು. ಇತ್ತೀಚೆಗಷ್ಟೆ ವೆಂಕಟೇಶ್ವರ ಟಾಕೀಸಿನಲ್ಲಿ ನೋಡಿರುತ್ತಿದ್ದ ಭೂತದ ಸಿನೆಮಾದ ಗುಂಗಿನಲ್ಲೆ "ಎಲ್ಲಿ ಬೇಗ ಉಂಡು ಮುಗಿಸಿದರೆ ಒಬ್ಬನೆ ಕೈ ತೊಳೆಯಲು ಹಿತ್ತಲಿಗೆ ಹೋಗಬೇಕಾಗುತ್ತದಲ್ಲ !" ಎಂದು ವಿನಾಕಾರಣ ರಾತ್ರಿಯೂಟದಲ್ಲಿ ಬಟ್ಟಲಿಗೆ ಬಡಿಸಿದ್ದ ಅನ್ನವನ್ನು ಇನ್ನಷ್ಟು ನುರಿಸುತ್ತ ಸಾಧ್ಯವಾದಷ್ಟು ಊಟದ ಅವಧಿಯನ್ನ ವಿಸ್ತರಿಸುತ್ತಿದ್ದೆ. ಆದರೆ ದರಿದ್ರದ್ದು ನಮ್ಮ ಮನೆಗೆ ಕೇವಲ ಕೂಗಳತೆಯ ದೂರದಲ್ಲಿದ್ದ ಗುಡ್ಡದ ಮೇಲಿನ ವಿಶಾಲ ಮೈದಾನದಲ್ಲಿ ಅದಾಗಲೆ ಚಂಡೆ ಬಾರಿಸಿ ಭಾಗವತರು ಗಂಟಲು ಸರಿಪಡಿಸಿಕೊಳ್ಳಲು ಆರಂಭಿಸಿಯಾಗಿರುತ್ತಿತ್ತು. 'ಅಕ್ಕಿ ಮೇಲೆ ಆಸೆ...ನೆಂಟರ ಮೇಲೆ ಪ್ರೀತಿ' ಎಂಬಂತಹ ಉಭಯ ಸಂಕಟದ ಸ್ಥಿತಿ. ಯಾವುದೆ ಮೇಳಗಳು ನಮ್ಮೂರಿನಲ್ಲಿ ಆಟ ಇಟ್ಟುಕೊಳ್ಳಲು ಬಯಸಿದರೆ ಇಲ್ಲಿಯೆ ಎಂಬಂತೆ ಖಾಯಂ ಸ್ಥಳ ನಿಗದಿಯಾಗಿತ್ತು. ಯಕ್ಷಗಾನದ ಉಗ್ರಾಭಿಮಾನಿಯಾಗಿದ್ದ ನನ್ನಜ್ಜನ ಬಾಲವಾಗಿ 'ಆಟ' ನೋಡಲು ಹೋಗೋದು ನನಗೆ ಬಲು ಪ್ರಿಯವಾಗಿದ್ದ ಹವ್ಯಾಸವಾಗಿತ್ತು, ಹಾಗೆಯೆ ಅಲ್ಲಿಗೆ ಬಂದಿರುತ್ತಿದ್ದ ಅಂಗಡಿಗಳಿಂದ ಚುರುಮುರಿ ಗೋಳಿಬಜೆ ಕೊಡಿಸುತ್ತಾರಲ್ಲ ಎನ್ನುವ ಮೇಲಾಕರ್ಷಣೆ ಬೇರೆ. ರಾತ್ರಿ ಒಂಬತ್ತೂವರೆ ಹತ್ತರ ಸುಮಾರಿಗೆ ಭಾಗವತರ ಗಟ್ಟಿ ಕಂಠದಲ್ಲಿ "ಗಜವದನ ಬೇಡುವೆ"ಯಿಂದ ಆರಂಭವಾಗುತ್ತಿದ್ದ ಪ್ರಸಂಗಗಳು ದುಷ್ಟ ಸಂಹಾರವಾಗಿ ಮುಗಿಯುವಾಗ ಚುಮು ಚುಮು ಛಳಿಯ ಮುಂಜಾನೆ ಮೂಡಣದಲ್ಲಿ ಕಣ್ಣಿನ ಪಿಸರು ಜಾರಿಸುತ್ತಾ ಸೂರ್ಯ ಆಕಳಿಸುತ್ತಾ ಬರುವ ಹೊತ್ತಗಿರುತ್ತಿತ್ತು. ಇಡಿ ರಾತ್ರಿಯ ಪ್ರಸಂಗಗಳಲ್ಲಿ ಹಾಸ್ಯ ಪಾತ್ರಗಳ ಅಭಿನಯದ ಹೊರತು ಇನ್ನೆಲ್ಲ ಪಾತ್ರಗಳ ನಟನೆಗೆ ನಿದ್ರೆಯ ಕಾಂಪ್ಲಿಮೆಂಟ್ ಕೊಡುತ್ತ, ರಕ್ಕಸ ಪಾತ್ರಗಳು ಬಂದಾಗ ಬೆಚ್ಚಿ ಸುತ್ತಿಕೊಂಡಿರುತ್ತಿದ್ದ ಶಾಲಿನಲ್ಲೆ ಇನ್ನಷ್ಟು ಮುದುಡುತ್ತ, ನಡುನಡುವೆ ಅಜ್ಜ ಕೊಡಿಸುವ ತಿಂಡಿಗಳಿಗೆ ಎಮ್ಮೆಯಂತೆ ಮೆಲುಕು ಹಾಕುತ್ತ ನಾನೂ ಯಕ್ಷಗಾನ ನೋಡುತ್ತಿದ್ದೆ!

ಪೆರ್ಡೂರು ಮೇಳ, ಧರ್ಮಸ್ಥಳ ಮೇಳ, ಸುರತ್ಕಲ್ ಮೇಳ, ಕಟೀಲು ಮೇಳ, ಮಂದಾರ್ತಿ ಮೇಳ ಹೀಗೆ ಶ್ರಾವಣದ ನಂತರ ಒಂದಾದರೊಂದರಂತೆ ಎಲ್ಲ ಮೇಳಗಳೂ ನಮ್ಮೂರಿಗೆ ಲಗ್ಗೆಯಿಡುತ್ತಿದ್ದವು. ನಮ್ಮೂರಿಗೆ ಯಕ್ಷಗಾನ ಮೇಳ ಬಂದಿರುವ ಬಾತ್ಮಿ ಮೊದಲು ತಿಳಿಯುತ್ತಿದ್ದುದು ನಮ್ಮಂತ ಕಿರಿಯರಿಗೆ. ತುಳು ಕನ್ನಡ ಎರಡೂ ಭಾಷೆಗಳಲ್ಲಿ ಪ್ರದರ್ಶನ ಕಾಣುತ್ತಿದ್ದ ಯಕ್ಷಗಾನಗಳಿಗೆ ಆಗೆಲ್ಲ ತೀರ್ಥಹಳ್ಳಿಯ ಸುತ್ತಮುತ್ತ ವಿಪರೀತ ಅಭಿಮಾನಿಗಳಿದ್ದರು. ಸುತ್ತಮುತ್ತಲ ಹಳ್ಳಿಗಳಿಂದ ಎತ್ತಿನ ಗಾಡಿ ಕಟ್ಟಿಕೊಂಡು, ಬಸ್ಸು ಮಾಡಿಕೊಂಡು ಬಂದು ನಿದ್ದೆಗೆಟ್ಟು ಯಕ್ಷಗಾನವನ್ನ ನೋಡುವಷ್ಟು ಹುಚ್ಚು ಅಭಿಮಾನಿಗಳಿಗೂ ಆಗೆಲ್ಲ ಕೊರತೆಯಿರಲಿಲ್ಲ. ನಮ್ಮದು ತಾಲೂಕು ಕೇಂದ್ರವಾಗಿದ್ದರಿಂದ ಹೋಲಿಕೆಯಲ್ಲಿ ಸುತ್ತಮುತ್ತಲ ಹಳ್ಳಿಗರಿಗಿಂತ ನಾವುಗಳು ಕೊಂಚ ಆಧುನಿಕರಾಗಿದ್ದೆವು, ಆ ಬಗ್ಗೆ ನಮ್ಮೊಳಗೊಳಗೆ ಕೊಂಚ ಧಿಮಾಕೂ ಇತ್ತೆನ್ನಿ, ಆದರೆ ಯಕ್ಷಗಾನದ ಕಲಾರಸಿಕತೆಯ ವಿಚಾರದಲ್ಲಿ ಈ ನವ ನಾಗರೀಕ ಹಾಗೂ ಶುಡ್ಸ್ಧ ಹಳ್ಳಿಗರಾಗಿದ್ದ ನಮ್ಮಿಬ್ಬರಲ್ಲೂ ಯಾವುದೆ ವ್ಯತ್ಯಾಸ ಇರಲೆ ಇಲ್ಲ.

ತೀರ್ಥಹಳ್ಳಿ ಒಂತರಾ ಪೂರ್ಣಚಂದ್ರ ತೇಜಸ್ವಿಯವರ ಮಾಯಾಲೋಕದ ಪಡಿಯಚ್ಚು. ಸುತ್ತಲೂ ಬೆಟ್ಟಗಳಿಂದ ಆವೃತ್ತವಾಗಿದ್ದು ಸ್ವತಹ ತಾನೇ ನಡುವಿನ ಗುಡ್ಡ ಸಮುಚ್ಚಯದ ಮೇಲೆ ಹರಡಿ ಕೊಂಡಿರುವ ತೀರ್ಥಹಳ್ಳಿ ಪಟ್ಟಣದ ಚಿತ್ರಕ್ಕೆ ಕಟ್ಟು ಹಾಕಿಸಿದಂತಹ ನೋಟ ಕಾಣಬೇಕೆಂದಿದ್ದರೆ ಸುತ್ತಮುತ್ತಲಿನ ಯಾವುದಾದರೂ ಗುಡ್ಡ ಹತ್ತಿ ನಿಂತರಾಯಿತು. ಅಮಾಯಕ ಮಗುವಿಗೆ ಬೆಳ್ಳಿಯ ಉಡಿದಾರ ಕಟ್ಟಿದಂತೆ ಕಾಣುವ ತುಂಗೆಯ ಮಂದ ಹರಿವು, ಅದರ ನಡುವಿನ ಕಮಾನು ಸೇತುವೆ, ಇನ್ನೂ ಕಣ್ಣು ಕಿರಿದುಗೊಳಿಸಿ ನೋಡಿದರೆ ಹೊಳೆವ ಹೊಳೆ ಮಧ್ಯದ ರಾಮಮಂಟಪವೂ ನಿಮ್ಮ ಕಣ್ಣಿಗೆ ಬಿದ್ದೀತು. ಭಾರತದ ಎಲ್ಲ ಊರುಗಳ ಜನ್ಮಕ್ಕೆ ಪೌರಾಣಿಕ ಕಥೆಯೊಂದು ಲಂಗೋಟಿಯಂತೆ ಅಂಟಿಕೊಂಡಿರುವ ಹಾಗೆಯೆ ನಮ್ಮೂರಿಗೂ ಒಂದು ಸ್ಥಳಪುರಾಣ ತಗಲಿ ಹಾಕಿಕೊಂಡಿದೆ. ತಂದೆ ಜಮದಗ್ನಿಯ ಆಜ್ಞೆಯಂತೆ ಹೆತ್ತಬ್ಬೆ ರೇಣುಕೆಯ ಕುತ್ತಿಗೆಯನ್ನ ತನ್ನ ಪರಶುವಿನಿಂದ ಕಡಿದ ರಾಮ, ಅನಂತರ ಸಂತುಷ್ಟ ತಂದೆಯಿಂದ ವರದ ರೂಪದಲ್ಲಿ ತಾನೇ ಕಡಿದಿದ್ದ ತಾಯನ್ನೂ-ಕೋಪದ ಉರಿಗಣ್ಣಲ್ಲಿ ತಂದೆ ಸುಟ್ಟಿದ್ದ ಅಣ್ಣಂದಿರನ್ನೂ ಮರಳಿ ಪಡೆದನಂತೆ. ಆದರೆ ಕೊಡಲಿಗೆ ಅಂಟಿದ್ದ ರಕ್ತದೊಂದಿಗೆ ತಲೆಗೆ ಮಾತೃ ಹತ್ಯಾದೋಷವೂ ಅಂಟಿತ್ತಲ್ಲ? ಅದನ್ನು ಕಳೆದು ಕೊಳ್ಳಲು ಪುಣ್ಯಕ್ಷೇತ್ರ ಯಾತ್ರೆಗೆ ಹೊರಟನಂತೆ. ನೀರು ಕಂಡಲ್ಲೆಲ್ಲ ಅದೆಷ್ಟೇ ತಿಕ್ಕಿ ತಿಕ್ಕಿ ತೊಳೆದರೂ ಕೊಡಲಿಯ ಅಂಚಿಗೆ ಮೆತ್ತಿದ್ದ ಇನ್ನೊಂಚೂರು ಹನಿ ನೆತ್ತರು ಹೋಗಲೆ ಇಲ್ಲವಂತೆ. ದಾರಿಯಲ್ಲಿ ದಣಿದವ ತುಂಗೆಯ ಕಲ್ಲುಸಾರದ ಮೇಲಿನ ಬಂಡೆಯೊಂದರ ಮೇಲೆ ಮೈ ಚಾಚಿ ಮಲಗಿದನಂತೆ. ಆಗ ಅವನ ಹಿಡಿತ ಮೀರಿ ಪರಶು ಬಂಡೆಗಳ ಮೇಲೆ ಉರುಳಿ ಬಿದ್ದು ಗಟ್ಟಿ ಬಂಡೆ ಬಿರುಕು ಬಿಟ್ಟಿತು! ( ದಯವಿಟ್ಟು ನೀವಿದನ್ನು ನಂಬಲೇ ಬೇಕು?!).ಹೀಗೆ ಅಲ್ಲಿ ಉಂಟಾದ ಹೊಂಡದೊಳಗೆ ಹರಿವ ತುಂಗೆ ಮಡುಗಟ್ಟಿ ನಿಂತಳಂತೆ. ರಾಮ ತನ್ನ ಕೊಡಲಿ ಮೇಲೆತ್ತಿ ನೋಡುತ್ತಾನೆ, ಎನ್ ಆಶ್ಚರ್ಯ! ತುಂಗೆಯ ನೀರು ಸೋಕಿ ಕೊಡಲಿ ಮೇಲೆ ಉಳಿದಿದ್ದ ರಕ್ತದ ಕಲೆ ಮಂಗಮಾಯ!!! ಇದರಿಂದ ಚಕಿತನಾದ ಪರಶುರಾಮ ಆ ಸ್ಥಳಕ್ಕೆ ತಾನೆ ''ಪರಶುರಾಮ ಕೊಂಡ' ಎಂದು ಹೆಸರಿಟ್ಟನಂತೆ. ಸಾಲದ್ದಕ್ಕೆ ನದಿ ದಡದಲ್ಲೊಂದು ಶ್ರೀರಾಮೇಶ್ವರ ಲಿಂಗ ಪ್ರತಿಷ್ಠಾಪಿಸಿ ಆರಾಧಿಸಿದನಂತೆ. ಇಂದಿಗೂ ಕೆಳದಿಯ ದೊರೆಗಳು ಕಟ್ಟಿಸಿರುವ ರಾಮೇಶ್ವರ ದೇವಸ್ಥಾನ ಇಲ್ಲಿದ್ದು ಪ್ರತಿ ವರ್ಷ ಜಾತ್ರೆಯ ದಿನ ಇಲ್ಲಿನ ತುಂಗಾಸ್ನಾನ, ಅದರಲ್ಲೂ ರಾಮ ಕೊಂಡದಲ್ಲಿ ಮುಳುಗು ಹಾಕಲು ರಾಮೇಶ್ವರನ ಭಕ್ತಕೋಟಿ ಮುಗಿಬೀಳುತ್ತದೆ.

ಮಳೆಯ ಭೀಕರ ಹೊಡೆತದೊಂದಿಗೆ ತುಂಗೆಯ ರುದ್ರ ನರ್ತನವನ್ನು ನಾನು ಬಾಲ್ಯದುದ್ದಕ್ಕೂ ಕಂಡಿದ್ದೆ. ೧೯೮೨ರ ಶ್ರಾವಣ ಮಾಸದಲ್ಲಿ ನಾನು ಹುಟ್ಟಿದ್ದ ಹೊತ್ತಿನಲ್ಲಿ ವಿಪರೀತ ಮಳೆಯಿಂದ ಪ್ರವಾಹ ಉಕ್ಕೇರಿ ತೀರ್ಥಹಳ್ಳಿ ತತ್ತರಿಸಿ ಹೋಗಿತ್ತಂತೆ. ಹತ್ತಿರದ ಭೀಕರ ಪ್ರವಾಹದ ದಾಖಲೆ ಆ ಊರಲ್ಲಿ ಅದೇನೆ. ಹೊಳೆ ಮಧ್ಯದ ರಾಮಮಂಟಪದ ಮೇಲೆ ಎರಡಾಳು ನೀರು ನಿಂತದ್ದು ಆ ವರ್ಷವೆ ಅಂತೆ. ಅಂದು ನಿಂತಿದ್ದ ನೀರಿನ ಗುರುತನ್ನು ಗುರುತಿಟ್ಟಿಸಿರೋದನ್ನ ಅಲ್ಲಿನ ಪುತ್ತಿಗೆ ಮಠದ ಗೋಡೆಯ ಮೇಲೆ ಇವತ್ತೂ ನೋಡಬಹುದು. ಬದುಕಿರುವ ಯಾವುದನ್ನೂ ಗಂಗೆ ಮುಳುಗಿಸಲಾರಳು ಎಂಬುದು ಪ್ರಸಿದ್ಧ ನಂಬಿಕೆ. ಆದರೆ ತುಂಗೆಗೆ ಅಂತಹ ಯಾವುದೇ ಮಡಿವಂತಿಕೆ ಇದ್ದಂತಿಲ್ಲ. ನಾ ಹುಟ್ಟಿದ ಸಮಯದಷ್ಟಲ್ಲದಿದ್ದರೂ ಅನಂತರವೂ ಮಳೆಗಾಲದಲ್ಲಿ ಅತಿ ಹೆಚ್ಚಿದ್ದ ಪ್ರವಾಹಗಳನ್ನು ಅನೇಕ ಬಾರಿ ಕಂಡಿದ್ದೆ. ತನ್ನ ನಿಲುಕಿಗೆ ಸಿಕ್ಕಿದ್ದನ್ನೆಲ್ಲ ದೋಚುವ ದುರಾಸೆಯ ಹೆಣ್ಣಂತೆ ಮೈತುಂಬಿಕೊಂಡು ಕೆಂಪಗೆ ಹರಿಯುತ್ತಾ ಸಿಕ್ಕ ಸಿಕ್ಕವರನ್ನೆಲ್ಲ ತನ್ನ ಒಡಲೊಳಗೆ ಸೆಳೆದು ಆಕೆ ಹರಿಯುವುದನ್ನು ಬೆರಗುಗಣ್ಣುಗಳಿಂದ ದಿಟ್ಟಿಸಿದ್ದೇನೆ. ಮಳೆಯಿರದ ಉಳಿದ ಕಾಲದಲ್ಲೂ ಆಕೆ ಸಾಚ ಏನಲ್ಲ! ಆಕೆಯ ದುರಹಂಕಾರದ ಸೊಕ್ಕಿನ ಸುಳಿಗಳಿಗೆ ಸಿಕ್ಕಿಸಿ, ಅವಳೆದೆಯ ಮೇಲೆ ಈಜಲು ಹೋದವರನ್ನ ಶಾಶ್ವತವಾಗಿ ಅಪ್ಪಿ ಕೊಳ್ಳುವುದರಲ್ಲಿ ನಿಸ್ಸೀಮೆ ಆಕೆ. ಅದಕ್ಕೆ ಇತ್ತೀಚಿನ ಪ್ರಸಿದ್ಧ ಉದಾಹಾರಣೆಯೆಂದರೆ ಉದಯೊನ್ಮುಖ ಗಾಯಕ ಜಿ ವಿ ಅತ್ರಿಯವರ ಕೌಟುಂಬಿಕ ದುರ್ಮರಣ.

ನಮ್ಮ ಮನೆಯ ಹಿತ್ತಲಿನಿಂದ ದಿಟ್ಟಿಸಿದರೆ ಮಂಟಪದ ಟೊಪ್ಪಿ ತೊಟ್ಟ ಆನಂದಗಿರಿಯೂ ಅದಕ್ಕೆ ಸರತೊಡಿಸಿದಂತೆ ಕಾಣುತ್ತಿದ್ದ "ತುಂಗಾ ಕಾಲೇಜು" ಕಾಣುತ್ತಿತ್ತು. ಅದರ ಬಲ ಮಗ್ಗುಲಿನಲ್ಲಿ ತುಸುವೆ ದೂರ ಗೊಂಬೆಗಳಂತೆ ಕಾಣುತ್ತಿದ್ದ ಒಂದು ಪುಟ್ಟ ಹಳ್ಳಿಯನ್ನೂ ಕಾಣಬಹುದಿತ್ತು, ಬಹುಷಃ ಅದು ಇಂದಾವರವೋ ಬೋಬ್ಬಿಯೋ ಇರಬೇಕು. ಆಗಿನ್ನೂ ನಾನು ಎರಡನೆ ತರಗತಿಯಲ್ಲಿದ್ದೆ. ಕನ್ನಡ ಪುಸ್ತಕದ ಮೊದಲನೆ ಪಾಠವೇ 'ನಮ್ಮೂರು'ಎಂದಿತ್ತು. ಅದರ ಸಕಲ ವಿವರಗಳೂ ಚಿತ್ರ ಬಿಡಿಸಿದಂತೆ ಇಂದಾವರದಲ್ಲಿ ಕಾಣುತ್ತಿತ್ತು! ಸಿಕ್ಕ ಸಿಕ್ಕದ್ದನೆಲ್ಲ ಓದಿ ಬಾಯಿಪಾಠ ಮಾಡಿಕೊಳ್ಳುವ ವಿಶಿಷ್ಟವೂ-ವಿಪರೀತವೂ ಆದ ಚಟ ನನಗಿದ್ದ ದಿನಗಳವು. ನಿತ್ಯ ಚಡ್ಡಿ ಜಾರಿಸಿ ನಿಂತು ಮನೆ ಹಿಂದಿನ ಚರಂಡಿಯಲ್ಲಿ ಮೈ ನೀರನ್ನು ಧಾರೆಧಾರೆಯಾಗಿ ಜಲಪಾತದಂತೆ ಹೊರತಳ್ಳುತ್ತ ಕಣ್ಣಿಗೆ ಬೀಳುತ್ತಿದ್ದ 'ಆ ನಮ್ಮೂರಿನ' ಮಿನಿಯೇಚರನ್ನು ಕಣ್ತುಂಬಿಕೊಳ್ಳುತ್ತಾ ರಾಗವಾಗಿ 'ನಮ್ಮೂರು'ಪಾಠವನ್ನ ದೊಡ್ಡ ದನಿಯಲ್ಲಿ ಅರಚುತ್ತ ದೊಡ್ಡವರಿಂದ ಉಗಿಸಿಕೊಳ್ಳುತ್ತಿದ್ದೆ.

ನಾನು ಶಾಶ್ವತವಾಗಿ ಊರು ಬಿಟ್ಟೆ ಹದಿನೈದು ವರ್ಷಗಳಾಗುತ್ತ ಬಂತು. ಪುಟ್ಟಹುಡುಗನಾಗಿ ಆಗ ನಾನು ಕಂಡಿದ್ದ ಊರಿಗೂ-ಈಗಿನ ತೀರ್ಥಹಳ್ಳಿಗೂ ವಿಪರೀತ ವ್ಯತ್ಯಾಸವಿದೆ. ಕಮಾನು ಬಸ್ ನಿಲ್ದಾಣವಿದ್ದ, ಸೋಮವಾರದ ಸಂತೆಗೆ ವಿಪರೀತ ಜನಸೇರುತ್ತಿದ್ದ, ಗಾಂಧೀ ಚೌಕದಲ್ಲಿ ಮೂರು ಮಾರ್ಕಿನ ಬೀಡಿ ವ್ಯಾನಿನ ಮೇಲೆ ದಿಲೀಪ ಮಾಡುತ್ತಿದ್ದ ಮಾದಕ ನೃತ್ಯವನ್ನು ಬಾಯಿ ಬಾಯಿ ಬಿಟ್ಟುಕೊಂಡು ನೋಡುತ್ತಿದ್ದ, ಸಿನೆಮ ಬಿಡುವ ಸಮಯದಲ್ಲಿ ಪ್ರವಾಹದಂತೆ ಟಾಕೀಸಿನಿಂದ ಜನ ಹೊರ ಬರುತ್ತಿದ್ದ ಆ ತೀರ್ಥಹಳ್ಳಿ ಅದೆಲ್ಲೋ ಕಳೆದೆ ಹೋಗಿದೆ. ತೇಜಸ್ವಿ ಕಥೆಗಳ ಮುಡಿಗೆರೆಯಂತೆ ಆಗ ಊರಿನ ಏಕೈಕ ಬಹುಮಹಡಿ ಕಟ್ಟಡವಾಗಿದ್ದ 'ಅಲಂಕಾರ್ ಪ್ಲಾಜ'ದ ಟರೆಸಿನ ಮೇಲೆ ನಿಂತು ಕೆಳಗೆ ಹಣಕಿದರೆ ಟೆಲಿಫೋನ್, ಕೇಬಲ್, ಕರೆಂಟಿನ ವಯರುಗಳ ಕಿಷ್ಕಿಂದೆಯಲ್ಲಿ ಬಲವಾಗಿ ಬಿಗಿಸಿಕೊಂಡು ನರಳುತ್ತಿದ್ದ ಪ್ರಾಣಿಯಂತೆ ಇಡೀ ಊರು ಕಾಣುತ್ತಿತ್ತು. ತೇಜಸ್ವಿಯವರೇ ಹೇಳುತ್ತಿದ್ದಂತೆ ಕಟ್ಟಿಂಗ್ ಪ್ಲೇಯರ್ ಒಂದು ಕೈಯಲ್ಲಿ-ವಯರುಗಳ ಕಂತೆ ಇನ್ನೊಂದು ತೋಳಲ್ಲಿ ತೂಗುಹಾಕಿಕೊಂಡು; ಅಣ್ಣಾತೆಗಳಂತೆ ಕಾಣುತ್ತಿದ್ದ, ನೆಲ ನೋಡದೆ ಆಕಾಶದ ಉದ್ದಗಲಕ್ಕೂ ಹರಡಿರುತ್ತಿದ್ದ ತಮ್ಮ ತಮ್ಮ ವಯರುಗಳ ಯೋಗಕ್ಷೇಮದ ಕುರಿತೆ ಚಿಂತಿತರಾಗಿ ಅವನ್ನೆ ದಿಟ್ಟಿಸುತ್ತ ಸಾಗುವ ಮೇಲಿನ ಮೂರೂ ವರ್ಗಗಳ ಮೆಂಟಲ್'ಗಳಂತಹ ಮೆಕ್ಯಾನಿಕ್ ಗಳನ್ನ ಅಡಿಗಡಿಗೂ ಊರ ತುಂಬಾ ಕಾಣಬಹುದಾಗಿತ್ತು.


ಬಸ್ಟ್ಯಾಂಡ್ ಮಯೂರ ಹೋಟೆಲಿನ ಮಸಾಲೆ ದೋಸೆ, ಮಸೀದಿ ರಸ್ತೆಯ ಅಂಚಿನಲ್ಲಿ ಸಂಜೆ ಕೆಪ್ಪ ಶೆಣೈಯ ರುಚಿ ರುಚಿಯಾಗಿರುತ್ತಿದ್ದ ಬೋಂಡ, ಗಾಯತ್ರಿಭವನದ ನೊರೆನೊರೆ ಕಾಫಿ, ವಸಂತ ವಿಹಾರದ ಬನ್ಸ್-ಕಡಲೆ ಗಸಿ ಇವೆಲ್ಲ ಇಂದು ಹಾಗೆಯೆ ಉಳಿದುಕೊಂಡಿಲ್ಲ. ನಾಲ್ಕಾಣೆಗೆ ಸಿಗುತ್ತಿದ್ದ ನೀರ್'ಐಸು, ಎಂಟಾಣೆಗೆ ಸಿಗುತ್ತಿದ್ದ ಹಾಲ್'ಐಸುಗಳ ಅಭಿಮಾನಿಗಳು ಇಲ್ಲಿನ ಆಟದ ಮೈದಾನಗಳಿಂದ ಮರೆಯಾಗಿ ಕುಲ್ಫಿ-ಕೋನ್ ಐಸುಗಳ ಹೊಸ ತಲೆಮಾರು ಕಾಣಿಸಿಕೊಳ್ಳುತಿವೆ. ಸ್ವಾತಂತ್ರ್ಯದಿನ ಹಾಗು ಗಣರಾಜ್ಯೋತ್ಸವಗಳಂದು ಊರಲ್ಲಿನ ಮೂರು ಟಾಕೀಸುಗಳಲ್ಲಿ ಅಸಂಬದ್ಧವಾಗಿ ತೋರಿಸುತ್ತಿದ್ದ ತಲೆಬುಡವಿಲ್ಲದ ಮೂರೇಮೂರು ರೀಲನ್ನು ನೋಡಲು ಕಾತರಿಸಿ ಓಡುತ್ತಿದ್ದ ಶಾಲಾಮಕ್ಕಳ ಜಾಗ ಆ ಎರಡು ದಿನಗಳೂ ಕೇವಲ ಶಾಸ್ತ್ರಕ್ಕೆ ಶಾಲೆಗೆ ಹೋಗಿ ಮರಳಿ ಮನೆ ಸೇರಿ ವಿಡಿಯೋ ಗೇಂ ಆಡಲು ಹಂಬಲಿಸುವ ಮಕ್ಕಳು ಭರ್ತಿಮಾಡುತ್ತಿದ್ದಾರೆ. ಮೂರು ದಿನಗಳ ಜಾತ್ರೆಯಲ್ಲೂ ಮೊದಲಿನ ರಂಗಿಲ್ಲ, ಈಗ ಬೀಡಿವ್ಯಾನ್ ಮೇಲೆ ದಿಲೀಪ ಹೆಣ್ಣುವೇಷ ಧರಿಸಿ ಕುಣಿಯುವುದಿಲ್ಲ, ಕವಿತಾ ಹೋಟೆಲಿನ ಗೋಡೆಯ ಮೇಲೆ ಯಾರೂ ನಸೀಮ ಬೀಡಿ ಸೇದುತ್ತ ಸುರುಳಿ ಸುರುಳಿ ಹೊಗೆ ಬಿಡುವ ಫೋಸ್ ಕೊಡುವ ತೆಳುಮೀಸೆಯ ರಾಜ್ ಕುಮಾರ್, ಕಮಲ ಹಾಸನ್, ಜಿತೇಂದ್ರ, ರಜನಿಕಾಂತ್'ರ ಜಾಹಿರಾತನ್ನು ಚಿತ್ರಿಸುವುದಿಲ್ಲ, ಮೊಬೈಲ್ ಸಿಗ್ನಲ್ ಗಳ ನಡುವೆ ಸಂಬಂಧಗಳು ಸದ್ದಿಲ್ಲದಂತೆಸೊರಗುತಿವೆ, 'ನೇರ-ದಿಟ್ಟ-ನಿರಂತರ' ಹಾಗು 'ಉತ್ತಮ ಸಮಾಜಕ್ಕಾಗಿ' ನಾಯಿ ಉಚ್ಚೆ ಹೊಯ್ದರೂ ಸುದ್ದಿ ಮಾಡುವವರ ನಡುವೆ ಇಲ್ಲಿನವರ ಏಕೈಕ ಟೈಮ್ ಪಾಸ್ ಆಗಿದ್ದ ಗಾಸಿಪ್ ಪ್ರಸರಣೆಗೆ ಕೊಕ್ಕೆಬಿದ್ದಿದೆ, ಒಬ್ಬರಿಗೊಬ್ಬರು ಪರಿಚಿತರೆ ಆಗಿರುತ್ತಿದ್ದ ಸಣ್ಣ ಊರಲ್ಲಿ ಆಧುನಿಕತೆಯ ಹವೆ ವಿಪರೀತ ಬೀಸಿ ಎಲ್ಲರೂ ಪರಸ್ಪರ ಅಪರಿಚಿತರಾಗುತ್ತಿದ್ದರೆ .ಒಟ್ಟಿನಲ್ಲಿ ಚಂದದ ಊರೊಂದು ನಿಧಾನವಾಗಿ ತನ್ನ ಭಾರಕ್ಕೆ ತಾನೆ ಕುಸಿಯುತ್ತಾ ಸಾಯುತ್ತಿದೆ.

ಡೊಳ್ಳು ಹೊಟ್ಟೆಯವನ ನೆನಪಲ್ಲಿ.....




ಬಾಲ್ಯದಲ್ಲಿ ಹೆಚ್ಚು ಕಾತರದಿಂದ ನಾನು ನಿರೀಕ್ಷಿಸುತ್ತಿದ್ದುದು ಕೇವಲ ಎರಡನ್ನು. ಮೊದಲನೆಯದು ಶಾಲೆಗೆ ಸಿಗುತ್ತಿದ್ದ ಅರ್ಧ ವಾರ್ಷಿಕ ಹಾಗೂ ವಾರ್ಷಿಕ ರಜಾ ದಿನಗಳಾದರೆ, ಎರಡನೆಯದು ಶ್ರಾವಣದ ನಂತರ ಸಾಲಾಗಿ ದಾಂಗುಡಿಯಿಟ್ಟು ಬರುತ್ತಿದ್ದ ಹಬ್ಬಗಳು. ಮೊದಲನೆಯ ನಿರೀಕ್ಷೆ ಅಮ್ಮನ ಜೊತೆ ಮೂಡುಬಿದ್ರೆಯಲ್ಲಿದ್ದ ಅವರ ತವರಿಗೆ ಹೋಗಿ ಮಜವಾಗಿ ಶಾಲೆಯ ಆತಂಕವಿಲ್ಲದೆ ದಿನಗಳನ್ನ ಕಳೆಯಬಹುದು ಎನ್ನುವ ಕಾರಣಕ್ಕಾದರೆ. ಎರಡನೆಯದು ಶುದ್ಧ ಬಾಯಿ ಚಪಲಕ್ಕಾಗಿ! ಹಬ್ಬದ ನೆಪದಲ್ಲಿ ಅಪರೂಪಕ್ಕೆ ತಿನ್ನಲು ಸಿಗುತ್ತಿದ್ದ ಭಕ್ಷ್ಯಗಳನ್ನ ಬಕಾಸುರನಂತೆ ಕಬಳಿಸಲು ಮನಸು ಸದಾ ಹಾತೊರೆಯುತ್ತಲೇ ಇರುತ್ತಿತ್ತು. ಮಕ್ಕಳ ಬಾಯಿ ಚಪಲದ ಅರಿವಿದ್ದ ಅಮ್ಮ ಪ್ರತಿ ಹಬ್ಬಕ್ಕೂ ಎರಡು ಬಗೆಯ ಪಲ್ಯ, ಕೋಸಂಬರಿ. ಒಂದು ಹುಳಿಯನ್ನ ಅಥವಾ ಚಿತ್ರಾನ್ನ, ಚಟ್ತಂಬೋಡೆ, ಹಪ್ಪಳ ಹಾಗೂ ಎಲ್ಲಕ್ಕೂ ಮುಖ್ಯವಾಗಿ ಪಾಯಸ ಮಾಡಿಯೆ ಮಾಡುತ್ತಿದ್ದರು. ವರ್ಷಕ್ಕೊಮ್ಮೆ ನಾಗರ ಪಂಚಮಿಗೆ ಅರಿಸಿನದೆಲೆಯ ಕಡಬು,ಚೌತಿಗೆ ಅತಿರಸ, ದೀಪಾವಳಿಯ ಸಂದರ್ಭದಲ್ಲಿ ಹೋಳಿಗೆ ಮೆಲ್ಲಲಿಕ್ಕೆ ಸಿಗುತ್ತಿತ್ತು. ಹೀಗಾಗಿ ಹಬ್ಬಗಳೆಂದರೆ ಅತಿ ನಿರೀಕ್ಷೆ ಆಗೆಲ್ಲ ನನಗೆ.

ನಾವು ಸಾಮಾನ್ಯವಾಗಿ ಎಲ್ಲಾ ಹಬ್ಬಗಳನ್ನೂ ಬಿಡದೆ ಆಚರಿಸುತ್ತಿದ್ದರೂ ನಾಗರ ಪಂಚಮಿ, ನವರಾತ್ರಿ ಹಾಗೂ ದೀಪಾವಳಿಗೆ ಹೆಚ್ಚಿನ ಮಹತ್ವ ಕೊಡುತ್ತಿದ್ದೆವು. ದಕ್ಷಿಣ ಕನ್ನಡ ಮೂಲದವರಾದ ನಮ್ಮದು ಸೌರ ಯುಗಾದಿ. ಹೀಗಾಗಿ ಊರವರೆಲ್ಲರೂ ಹಬ್ಬ ಮಾಡಿಯಾದ ಹದಿನೈದನೆ ದಿನಕ್ಕೆ ನಮ್ಮ ಮನೆಯಲ್ಲಿ ವರ್ಷವೂ ಯುಗಾದಿ ಕುಂಟಿಕೊಂಡು ಬರಲೋ? ಬೇಡವೋ? ಎಂಬಂತೆ ಬರುತ್ತಿತ್ತು ಅಂತ ಬಾಲ್ಯದುದ್ದಕ್ಕೂ ನನಗೆ ಅದರ ಮೇಲೆ ಸಿಟ್ಟೋ ಸಿಟ್ಟು! ಆದರೆ ಚೌತಿಯೆಂದರೆ ಒಂದು ವಿಚಿತ್ರ ಆಕರ್ಷಣೆಯಿತ್ತು ನನಗೆ.


ಮೊದಲನೆಯದಾಗಿ ಅದು ಡೊಳ್ಳುಹೊಟ್ಟೆಯ ಗಣಪತಿಯ ಜನ್ಮದಿನ. ಆನೆಯ ಆಕಾರಕ್ಕೆ ಮನ ಸೋತಿದ್ದ ನನಗೆ ಗಣಪತಿಯೆಂದರೆ ಇನ್ನೆಲ್ಲರಿಗಿಂತ ಚೂರು ಜಾಸ್ತಿಯೆ ಪ್ರೀತಿ. ಗಣಪತಿಗೆ ಆನೆಮುಖ ಬಂದ ಕಥೆಯನ್ನ ಅಮ್ಮ ನನಗೆ ಮಲಗಿಸುವಾಗ ಹೇಳುತ್ತಿದ್ದರು. ಜೊತೆಗೆ ಪ್ರತಿ ತಿಂಗಳೂ ಅಮ್ಮ ಮಾಡುತ್ತಿದ್ದ ಸಂಕಷ್ಟಹರವೃತದ ಕಾರಣ ಗಣಪತಿ ಇನ್ನಷ್ಟು ಆಪ್ತನಾಗಿದ್ದ. ತಿಂಗಳ ಈ ವೃತ ಹಿಡಿದವರು ಹಗಲಿಡಿ ಉಪವಾಸ ಇರಬೇಕಿದ್ದು ಅದು ಸಾಧ್ಯವಾಗದಿದ್ದರೆ ಅಕ್ಕಿ ಹೊರತು ಇನ್ನುಳಿದ ಧಾನ್ಯಗಳನ್ನ ಬಳಸಿ ಲಘು ಉಪಹಾರವನ್ನ ದಿನದ ಮಧ್ಯದಲ್ಲೊಮ್ಮೆ ಮಾಡಿಕೊಂಡು ಹೊಟ್ಟೆಯನ್ನ ತಣಿಸಿಕೊಳ್ಳಬಹುದಾಗಿತ್ತು. ಅಮ್ಮ ನ್ಯಾಯಬೆಲೆ ಅಂಗಡಿಯಿಂದ ತಂದ ಗೋಧಿಯ ಹಿಟ್ಟಿನಲ್ಲಿ ಅಂದು ತಮಗಾಗಿ ಮಾತ್ರ ಚಪಾತಿ ಮಾಡಿಕೊಳ್ಳುವುದಿತ್ತು ಅದಕ್ಕೆ ನಂಚಿಕೊಳ್ಳಲಿಕ್ಕೆ ಪಚ್ಚ ಬಾಳೆ ಹಣ್ಣಿನ ರಸಾಯನ. ರಾತ್ರಿ ಎಲ್ಲರೂ ಮಧ್ಯಾಹ್ನದ ಸಾರನ್ನೆ ಕಲಸಿ ಉಂಡರೂ. ಅಮ್ಮ ವೃತದ ಕಾರಣ ಬೇರೆ ಅಡುಗೆ ಮಾಡಿಕೊಂಡು ಚಂದ್ರೋದಯದ ನಂತರ ಬೇರೆ ಊಟ ಮಾಡುತ್ತಿದ್ದರು. ಸಾಮಾನ್ಯವಾಗಿ ಹೀರೆಕಾಯಿ ಸಾರು ಹಾಗು ಅದರ ಸಿಪ್ಪೆಯ ಚಟ್ನಿ ಅವರ ಊಟದಲ್ಲಿ ಇದ್ದೆ ಇರುತ್ತಿತ್ತು. ಅದೆರಡರ ರುಚಿಗೆ ಮಾರು ಹೋಗಿದ್ದ ನಾನೂ ಬುದ್ದಿ ತಿಳಿದಲ್ಲಿಂದ ಈ ಮಹತ್ವದ ಕಾರಣಗಳಿಗಾಗಿ ಅಮ್ಮನೊಂದಿಗೆ ಉಪವಾಸ ಮಾಡುವ ಕಳ್ಳ ಮಾರ್ಜಾಲವಾದೆ! ವೃತದ ದಿನಗಳಲ್ಲಿ ಸಂಜೆ ಹಣ್ಣುಕಾಯಿ ಮಾಡಿಸಲಿಕ್ಕೆ ಗಣಪತಿಕಟ್ಟೆಗೂ ಹೋಗುವ ಪರಿಪಾಠವಿದ್ದು ಅಲ್ಲಿ ತಂತ್ರಿಗಳು ನೈವೇದ್ಯಕ್ಕಾಗಿಯೇ ಮನೆಯಿಂದ ಮಾಡಿ ತಂದಿರುತ್ತಿದ್ದ ಕಡಲೆ ಉಸುಲಿ, ಸಿಹಿ ಸಜ್ಜಿಗೆ, ಕೋಸಂಬರಿ ಈ ವೃತ ಪ್ರೀತಿಯನ್ನ ನನ್ನಲ್ಲಿ ಇನ್ನಷ್ಟು ಉದ್ದೀಪಿಸುತ್ತಲೂ ಇದ್ದವು. ಯಾವಾಗ ಪೂಜೆ ಮುಗಿಯಲಿಲ್ಲ ಬಾಳೆಎಲೆಯ ಕೀತಿನಲ್ಲಿ ತಂತ್ರಿಗಳ ಮಗ ಲಕ್ಷ್ಮೀಶ ಈ ರುಚಿಯಾದ ಪ್ರಸಾದ ವಿತರಿಸಲಿಲ್ಲ ಎಂದೆ ಮನ ನಿರೀಕ್ಷಿಸುತ್ತಿತ್ತು. ಪೂಜೆ ಸಾಂಗವಾಗಿ ಸಾಗುತ್ತಿರುವಾಗ ಕ್ಷಣವೊಂದು ಯುಗವಾದಂತೆ ಭಾಸವಾಗಿ ಈ ದೀರ್ಘ ಪೂಜಾ ಪದ್ಧತಿಯನ್ನ ನಾನು ಮನಸಾರೆ ದ್ವೇಷಿಸುತ್ತಿದ್ದೆ. ನಮ್ಮಂತಹ ಭಕ್ತಗ್ರೇಸರರ ಗೊಣಗಾಟ ಅದೇನೆ ಇದ್ದರೂ ಅದಕ್ಕೆ ಸೊಪ್ಪು ಹಾಕದ ತಂತ್ರಿಗಳು ಸಾವಕಾಶವಾಗಿ ಪ್ರತಿಯೊಂದು ಮಂತ್ರವನ್ನೂ ಗಟ್ಟಿಯಾಗಿ ಬಿಡಿಸಿ ಬಿಡಿಸಿ ಉಚ್ಚರಿಸುತ್ತಾ ಮಧ್ಯೆ ಮಧ್ಯೆ ವಾಡಿಕೆಯಂತೆ ತಮ್ಮ ಮಗನ ಮೇಲೆ ದೊಡ್ಡ ದ್ವನಿಯಲ್ಲಿ ರೇಗುತ್ತಾ, ಸಣ್ಣ ಪುಟ್ಟ ತಪ್ಪುಗಳಿಗೂ ಜಾಗಟೆ ಹೊಡೆಯುವ-ಗಂಟೆ ಬಾರಿಸುವ ಹುಡುಗರಿಗೆ ಮಾತಿನಲ್ಲೆ ಬಾರಿಸುತ್ತಾ ಈ ದೀರ್ಘಾವಧಿಯನ್ನು ಇನ್ನಷ್ಟು ವಿಸ್ತರಿಸಿ ನನ್ನ ಚಡಪಡಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತಿದ್ದರು.

ಮನೆಯಲ್ಲಿ ಹಬ್ಬದ ಊಟಕ್ಕೆ ಅಮ್ಮ ಮಾಡುತ್ತಿದ್ದ ಸುವರ್ಣಗೆಡ್ಡೆಯ ಸಾರು, ಕೆಸುವಿನದಂಟಿನ ಪಲ್ಯ ಹಾಗೂ ಚಟ್ಟೆಸೊಪ್ಪಿನ ಪಲ್ಯವೆಂದರೆ ನನಗೆ ಬಾಯಲ್ಲಿ ನೀರೂರುತ್ತಿತ್ತು. ಆದರೆ ಅನಿವಾರ್ಯವಾಗಿ ಹಬ್ಬಗಳು ಬರುವ ತನಕ ಈ ತವಕಗಳನ್ನೆಲ್ಲ ಒತ್ತಾಯಪೂರ್ವಕವಾಗಿ ಹಿಡಿದಿಡಲೇ ಬೇಕಿತ್ತಲ್ಲ! ಅದು ಯಾವಾಗಲೂ ಹಾಗೆಯೆ. ಉಳಿದೆಲ್ಲ ದಿನಗಳಲ್ಲಿ ಅನ್ನಕ್ಕೊಂದು ಬಗೆಯ ಸಾರು, ಸಾಮಾನ್ಯವಾಗಿ ಬೇಳೆ ಸಾರು ಅಥವಾ ಟೊಮ್ಯಾಟೋ ಸಾರು. ಅಪರೂಪಕ್ಕೊಮ್ಮೊಮ್ಮೆ ಪಲ್ಯವನ್ನೂ ಕಾಣುತ್ತಿದ್ದ ನಮಗೆ ದೊಡ್ಡ ವೈಭೋಗವೆಂದರೆ ಚಟ್ಟೆಸೊಪ್ಪಿನ ಅಥವಾ ಹುರುಳಿಯ ಚಟ್ನಿ ಮಾತ್ರ. ಆಷಾಢದ ಆರಂಭದಲ್ಲಿ ಪತ್ರೊಡೆ, ಕೊಟ್ಟೆ ಕಡುಬು ಮಾಡುವುದಿತ್ತು. ಮಳೆಗಾಲದಲ್ಲಿಯಂತೂ ಮನೆಯಲ್ಲಿ ಸೌತೆಯ ಸಾರಿಲ್ಲದ ದಿನಗಳಿರುತ್ತಿರಲಿಲ್ಲ.

ಆಗೆಲ್ಲ ಅಪರೂಪಕ್ಕೊಮ್ಮೆ ಹಳ್ಳಿಯ ನೆಂಟರಿಂದ ಒದಗಿ ಬರುತ್ತಿದ್ದ ಕಳಲೆ (ಎಳೆ ಬಿದಿರು ), ಬಾಳೆದಿಂಡು, ದೀಗುಜ್ಜೆ ಹಾಗೂ ಕೆಸುವಿನ ದಂಟು-ಗೆಡ್ಡೆ-ಎಲೆ ಈ ಏಕತಾನತೆಯನ್ನ ಕಳೆಯುತ್ತಿದ್ದವು. ಉಳಿದಂತೆ ಮನೆಯ ಹಿತ್ತಲಲ್ಲಿ ಅಮ್ಮನೆ ಬೆಳೆಸಿದ ಬಸಳೆ, ಬೊಂಬಾಯಿ ಬಸಳೆ, ತೊಂಡೆ, ಚಪ್ಪರದ ಬೀನ್ಸ್, ಹರವೆ, ಪಪ್ಪಾಯಿ ಕಾಯಿ ನಮ್ಮ ನಿತ್ಯದ ಅಗತ್ಯಗಳಿಗೆ ಒದಗಿ ಬರುತ್ತಿದ್ದವು. ತೀರ ಸ್ವಂತ ಬೆಳೆಯಲಿಕ್ಕಾಗದ ಈರುಳ್ಳಿ-ಟೊಮ್ಯಾಟೊಗಳನ್ನಷ್ಟೆ ಅಮ್ಮ ಸೋಮವಾರದ ಸಂತೆಯಲ್ಲಿ ಚೌಕಾಸಿ ಮಾಡಿ ಸಾಧ್ಯವಾದಷ್ಟು ಸಸ್ತಾ ಬೆಲೆಗೆ ಖರೀದಿಸುತ್ತಿದ್ದರು. ಆಗೆಲ್ಲ ಅಮ್ಮನ ಬಾಲವಾಗಿರುತ್ತಿದ್ದ ನನಗೆ ಈ ಚೌಕಾಸಿ ಮಾಡುವ ಗುಣ ಸಹಜವಾಗಿ ದಾಟಿಕೊಂಡಿದೆ. ಮನೆಯಲ್ಲಿಯೆ ಮೆಣಸಿನ ಸಸಿ ಹಾಕಿರುತ್ತಿದ್ದು ಅದನ್ನೆ ಅಡುಗೆಗೆ ಉಪಯೋಗಿಸಿ ಹೆಚ್ಚಿನದನ್ನು ಮಜ್ಜಿಗೆ ಮೆಣಸಾಗಿಸಿ ಒಣಗಿಸಿ ಇಟ್ಟುಕೊಳ್ಳುತ್ತಿದ್ದರು. ಅಜ್ಜನಿಗೆ ಊಟಕ್ಕೆ ಕರಿದ ಮಜ್ಜಿಗೆ ಮೆಣಸಿದ್ದರೆ ಖುಷಿಯೋ ಖುಷಿ. ಬೇಸಗೆಯಲ್ಲಿ ಅಮ್ಮ ಮಾಡಿಟ್ಟ ಹಪ್ಪಳ-ಸಂಡಿಗೆಗಳು, ಹಾಕಿಟ್ಟ ಮಾವಿನ ಮಿಡಿ-ದೊಡ್ಲಿ ಕಾಯಿ (ಹೇರಳೆ ಕಾಯಿ) ಉಪ್ಪಿನ ಕಾಯಿಗಳು ವರ್ಷದುದ್ದ ನಮ್ಮೆಲ್ಲರ ಊಟದ ರುಚಿ ಹೆಚ್ಚಿಸುತ್ತಿದ್ದವು.


ಹೀಗಾಗಿ ಸಿಹಿ ಊಟದ ಹಬ್ಬಗಳು ಸದಾ ತಮ್ಮ ಆಕರ್ಷಣೆಯನ್ನ ಉಳಿಸಿಕೊಂಡಿರುತ್ತಿದ್ದುದು ಸಹಜ. ಹಬ್ಬಗಳಲ್ಲಿ ಅಮ್ಮ ಸಾಮಾನ್ಯವಾಗಿ ಮಾಡುತ್ತಿದ್ದುದು ಸಾಬಕ್ಕಿ ಅಥವಾ ಕಡಲೆಬೇಳೆ ಪಾಯಸವನ್ನ. ನನಗೆ ಅನ್ನದೊಂದಿಗೆ ಪಾಯಸವನ್ನೇ ಬರಗೆಟ್ಟವನಂತೆ ಕಲಸಿಕೊಂಡು ಸೊರ ಸೊರ ನೆಕ್ಕುವ ವಿಲಕ್ಷಣ ಅಭ್ಯಾಸವಿತ್ತು. ಚಿಕ್ಕಂಮ್ಮಂದಿರು ಇದನ್ನ ನೋಡಿ ಹೇಸಿಕೊಳ್ಳುತ್ತಿದ್ದರೆ . ಅಮ್ಮ ಮಾತ್ರ ಪ್ರೀತಿಯಿಂದ ನನ್ನ ಎಲೆಗೆ ಒಂದು ಸೌಟು ಪಾಯಸ ಹೆಚ್ಚೆ ಬಡಿಸುತ್ತಿದ್ದರು. ಚೌತಿಗೆ ನಮ್ಮ ಮನೆಯಲ್ಲಿ ಗಣಪತಿ ಕೂರಿಸುವ ಸಂಪ್ರದಾಯವಿರಲಿಲ್ಲ. ಒಮ್ಮೆ ಕೂರಿಸಿಒದರೆ ಬಿಡದೆ ಇಪ್ಪತ್ತೊಂದು ವರ್ಷ ಕೂರಿಸಲೆಬೇಕಂತೆ!. ಜೊತೆಗೆ ಮಡಿ ಚೂರೂ ತಪ್ಪ ಬಾರದಂತೆ ಅನ್ನುವ ಕಾರಣದಿಂದ ಅಮ್ಮ ಮನೆಯಲ್ಲಿ ಗಣಪತಿ ಕೂರಿಸಲು ಒಪ್ಪುತ್ತಿರಲಿಲ್ಲ. ಗೌರಿ ಪೂಜೆಗೆ ಅವರ ಚೌತಿಯ ಸಂಭ್ರಮ ಮುಗಿದು ಹೋಗುತ್ತಿತ್ತು. ಮಧ್ಯಾಹ್ನದ ಸಿಹಿ ಊಟವೆ ಹಬ್ಬವನ್ನ ಆಚರಿಸಿದ್ದಕ್ಕೊಂದು ಗುರುತು.

ನಿತ್ಯ ಸಂಜೆ ಮಣ್ಣಲ್ಲಿ ಆಡಿ ಸೊಕ್ಕಿ ಬರುತ್ತಿದ್ದ ನನ್ನನ್ನ ನನ್ನ ಒಡ್ದ ಇಚ್ಛೆಗೆ ವಿರುದ್ಧವಾಗಿ ನೀರಿನ ಹಿತ್ತಲಿನ ನೀರು ಟ್ಯಾಂಕಿಯ ಬಳಿ ಉಜ್ಜಿಉಜ್ಜಿ ಕೈ ಕಾಲು ಮುಖ ತೊಳೆಯುವಂತೆ ಅಮ್ಮ ಒತ್ತಾಯಿಸುತ್ತಿದ್ದರು. ಅದಾದ ಮೇಲೆ ಚಿಕ್ಕಮ್ಮಂದಿರ ಜೊತೆ ಒಂದರ್ಧ ಗಂಟೆ ತಾಳ ಕುಟ್ಟಿಕೊಂಡು ಭಜನೆಗಳನ್ನ ಕಿರುಚುತ್ತಿದ್ದೆ. "ಮೊದಲೊಂದಿಪೆ ನಿನಗೆ ಗಣನಾಥ"ನಿಂದ ಆರಂಭಿಸಿ ಆಯಾದಿನಕ್ಕೆ ತಕ್ಕಂತೆ ಅನ್ವಯಿಸುವ ದೇವರನ್ನೆಲ್ಲ ಪ್ರತಿ ಸಂಜೆ ನಮ್ಮ ಮೂಗು ರಾಗದ ಅಬ್ಬರದೊಂದಿಗೆ ಇಳಿಸಂಜೆಯ ನಸುಗತ್ತಲಲ್ಲಿ ಬೆದರಿಸಿ ಬೆಚ್ಚಿಬೀಳಿಸುತ್ತಿದ್ದೆವು.. ಅದಾದ ನಂತರ ಮಂಗಳದ ಕೊನೆಯ ಸಾಲು ಹಾಡಿದ್ದೆ ತಡ ಮೂರು ಸುತ್ತು ನಿಂತಲ್ಲೆ ತಿರುಗಿ ದೇವರ ಮನೆಯೊಳಗೆ ಜೀವಾವಧಿ ಶಿಕ್ಷೆಗೊಳಪಟ್ಟು ಸಜಾ ಬಂಧಿಗಲಾಗಿದ್ದ ಸಮಸ್ತ ದೈವಗಳಿಗೂ ಒಂದು ಉದ್ದಂಡ ನಮಸ್ಕಾರ ಹೊಡೆದು ಎದುರು ಮನೆ "ಬಪಮ" ಕೊಡುವ ಗಣಪತಿ ಕಡ್ಲೆಗಾಗಿ ಅವರ ಮನೆಗೆ ನಿಟ್ಟೋಟ ಹೂಡುತ್ತಿದ್ದೆ. ಅಲ್ಲಿಗೆ ನಾನು ತಲುಪುವ ಸಮಯ ದೀರ್ಘವಾದಷ್ಟೂ "ಗಣಪತಿ ಕಡಲೆ"ಯ ಆಕ್ಷಾಂಶಿ ಪ್ರತಿಸ್ಪರ್ಧಿಗಳು ಹೆಚ್ಚಾಗುವ ಸಂಭವ ಸದಾ ಇರುತ್ತಿದ್ದರಿಂದ ಆ ಅಪಾಯದಿಂದ ಪಾರಾಗಲು ಹೀಗೆ ಓಡಿ ಶೀಘ್ರ ಗಮ್ಯ ತಲುಪಿಕೊಳ್ಳುವುದು ಅನಿವಾರ್ಯವೇ ಆಗಿತ್ತು. ಹೀಗೆ ಗಣಪತಿ ನಿತ್ಯದ ಬದುಕಿನಲ್ಲಿ ಹಾಸು ಹೊಕ್ಕಾಗಿದ್ದ.

ಇನ್ನು ಗಣಪತಿ ಹಬ್ಬದ ಸಂಜೆ ಈ ಕಾರ್ಯಕ್ರಮಗಳ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ ಆಗುತ್ತಿತ್ತು. ಊರಲ್ಲಿ ಕೂರಿಸಿರುತ್ತಿದ್ದ ಗಣಪತಿಗಳಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ನೋಡಿಕೊಂಡು ಅದೆಷ್ಟು ಲಭ್ಯವೋ ಅಷ್ಟು ಪ್ರಸಾದವನ್ನ ಮುಕ್ಕಲು ಹೊರಟ ನನ್ನದೆ ವಯಸ್ಸಿನ ಪಟಾಲಮ್ಮಿನಲ್ಲಿ ನಾನೂ ಮನಪೂರ್ವಕವಾಗಿ ಸೇರಿಕೊಳ್ಳುತ್ತಿದ್ದೆ. ಜಿಟಿಜಿಟಿ ಹನಿಯುವ ಮಳೆಯಲ್ಲಿಯೆ ನಮ್ಮ ಈ ದಿಗ್ವಿಜಯ ಯಾತ್ರೆ ನಿರಾತಂಕವಾಗಿ ಸಾಗುತ್ತಿತ್ತು. ತೀರ್ಥಹಳ್ಳಿಯಲ್ಲಿ ಬಸ್'ಸ್ಟಾಂಡ್ ರಿಕ್ಷಾ ಚಾಲಕರ ಸಂಘ ಕೆಳ ಸ್ಟ್ಯಾಂಡಿನಲ್ಲಿ, ಕುರುವಳ್ಳಿಯ ಯುವಕ ಸಂಘ ಕುರುವಳ್ಳಿಯ ತುಂಗಾ ತೀರದಲ್ಲಿ, ಕೆಇಬಿ ನೌಕರರ ಸಂಘ ತಮ್ಮ ಕಚೇರಿಯ ಆವರಣದಲ್ಲಿ, ರಥಬೀದಿ ಯುವಕರ ಸಂಘ ರಾಮೇಶ್ವರ ದೇವಸ್ಥಾನದ ತೇರು ಕೊಟ್ಟಿಗೆ ಎದುರಲ್ಲಿ, ಛತ್ರಕೇರಿಯ ಯುವಕರ ಸಂಘ ರಾಮದೇವರ ಗುಡಿ ರಸ್ತೆಯಲ್ಲಿ ಸಾರ್ವಜನಿಕ ಗಣಪತಿಯಿಡುವುದು ವಾಡಿಕೆಯಾಗಿತ್ತು. ಮಧ್ಯೆ ತೀರ್ಥಹಳ್ಳಿಯಲ್ಲಿ ಮಿತ್ರಾ ಹೆರಾಜೆಯವರು ಸರ್ಕಲ್ ಇನ್ಸ್'ಪೆಕ್ಟರ್ ಆಗಿದ್ದಾಗ ಸಾಮರಸ್ಯದ ಏಕೈಕ ಸಾರ್ವಜನಿಕ ಗಣಪತಿ ಇಡುವಂತೆ ಈ ಎಲ್ಲಾ ಸಂಘದವರನ್ನು ಪುಸಲಾಯಿಸಿ ಕೆಳ ಕಾಲ ಒಂದೇ ಗಣಪತಿಯನ್ನ ಸಂಸ್ಕೃತಿ ಮಂದಿರದ ಆವರಣದಲ್ಲಿ ಇಡಿಸಿದ್ದೂ ಉಂಟು. ಆದರೆ ಅವೆಲ್ಲ ಹೆಚ್ಚು ಕಾಲ ಬಾಳಿಕೆ ಬರದೆ ಜನ ಅತ್ತ ಅವರ ವರ್ಗಾವಣೆಯಾಗುತ್ತಿದ್ದಂತೆ ಮತ್ತೆ ಹಳೆಯ ಚಾಳಿಗೆ ಹೊರಳಿಕೊಂಡರು.


ನಮ್ಮ ಪಟಾಲಂ ಈ ಎಲ್ಲಾ ಸಾರ್ವಜನಿಕ ಗಣಪತಿ ಪೆಂಡಾಲುಗಳಿಗೂ ದಾಳಿಯಿಟ್ಟು ಕೊಟ್ಟ ಕೊನೆಗೆ ಗಣಪತಿಕಟ್ಟೆಯ ತಂತ್ರಿಗಳ ಹಬ್ಬದ ಸ್ಪೆಷಲ್ ಪ್ರಸಾದ ಪಡೆದೆ ಮನೆಯ ಹಾದಿ ಹಿಡಿಯುತ್ತಿತ್ತು. ಹಬ್ಬದ ಪ್ರಸಾದ ಹಂಚುವಲ್ಲಿ ಲಕ್ಷ್ಮೀಶ ಅನಗತ್ಯ ಜುಗ್ಗತನ ಮೆರೆಯುತ್ತಿದ್ದ. ಶಾಲೆಯಲ್ಲಿ ನಮಗಿಂತ ಎರಡು ವರ್ಷ ಹಿರಿಯನಾಗಿದ್ದ ಆತ ಅಲ್ಲಿ ಎಷ್ಟೇ ಮಂಗಾಟ ಆಡುತ್ತಿದ್ದರೂ ದೇವಸ್ಥಾನದಲ್ಲಿ ಮಾತ್ರ ಹುಸಿ ಗಾಂಭೀರ್ಯ ಮೆರೆಯುತ್ತಿದ್ದ!. ಅವನ ಪ್ರಕಾರ ನಮ್ಮಂತ ಚಿಕ್ಕವರಿಗೆ ಅಷ್ಟು ಪ್ರಸಾದ ಧಾರಾಳ ಸಾಕು(?). ದೊಡ್ಡವರಿಗೆ ಕೈ ಬಿಚ್ಚಿ ಪ್ರಸಾದ ನೀಡುವ ಆತ ನಮ್ಮಂತ ಚಡ್ಡಿ ಪೈಲ್ವಾನರ ಎಳೆ ಕೀತಿನ ಸರದಿ ಬಂದಾಗ ಯಾಂತ್ರಿಕವಾಗಿ ಕೈ ಗಿಡ್ಡ ಮಾಡುತ್ತಿದ್ದ! ಈ "ತಾರತಮ್ಯ" ನೀತಿಯನ್ನ ಕೆಂಗಣ್ಣಿನಿಂದಲೇ ನೋಡುತ್ತಾ ನಮ್ಮ ಸಿಟ್ಟನ್ನೆಲ್ಲಾ ಒಳಗೊಳಗೇ ಕಷ್ಟಪಟ್ಟು ನುಂಗಿಕೊಳ್ಳುತ್ತಿದ್ದೆವು. ಇಲ್ಲದ ಪಕ್ಷದಲ್ಲಿ ಸಿಗುತ್ತಿದ್ದ ಅರೆಕಾಸಿನ ಪ್ರಸಾದದ ಪ್ರಮಾಣದಲ್ಲಿಯೂ ಖೋತವಾಗುವ ಅಪಾಯವಿರುತ್ತಿತ್ತು. "ಇದು ಪ್ರಸಾದ, ಊಟ ಅಲ್ಲ?!" ಅಂತ ಹೆಚ್ಚಿನ ಅನುದಾನಕ್ಕಾಗಿ ಬೇಡಿಕೆಯಿಡುತ್ತಿದ್ದ ಕಿರಿಯರಿಗೆ ಲಕ್ಷ್ಮೀಶ ಮುಲಾಜಿಲ್ಲದೆ ಹೇಳುತ್ತಿದ್ದುದು ಆಗೆಲ್ಲ ಸಾಮಾನ್ಯವಾಗಿರುತ್ತಿತ್ತು!. ಆ ಕ್ಷಣ ಅವನು ನಮ್ಮ ಕಣ್ಣಿಗೆ ಶತ್ರು ದಂಡಿನ ಸೇನಾಪತಿಯಂತೆ ಗೋಚರಿಸುತ್ತಿದ್ದ. ಈಗ ತಂತ್ರಿಗಳು ಕಾಲವಾದ ನಂತರ ಅವನೇ ಗಣಪತಿಯ ಮುಖ್ಯ ಅರ್ಚಕನಾಗಿದಾನಂತೆ. ಪ್ರಸಾದ ಸೇವೆಯೂ ಸಂಪ್ರದಾಯದಂತೆ ನಡೆದು ಬರುತ್ತಿದೆ ಅನ್ನುವ ಮಾಹಿತಿ ಬಂದಿದೆ. ಊರಿಗೆ ಹೋದಾಗ ಒಂದು ಕೈ ನೋಡಬೇಕು. ಈಗ ಹೇಗೂ ನಾನು ದೊಡ್ಡವನಾಗಿದೀನಲ್ಲ! ಜಾಸ್ತಿ ಪ್ರಸಾದ ತಿನ್ನೋಕೆ ಅರ್ಹತೆ ಬಂದಿದ್ದರೂ ಬಂದಿರಬಹುದು?!


ಈಗಲೂ ಅಷ್ಟೆ ನನಗೆ ಗಣಪತಿ ಎಂದರೆ ಒಂದು ಮುಷ್ಠಿ ಹೆಚ್ಚಿಗೆಯೇ ಪ್ರೀತಿ. ಇಂದು ನನಗೆ "ದೇವರು" ಎಂಬ ಕಲ್ಪನೆಯಲ್ಲಿ ಅರೆ ಕಾಸಿನ ನಂಬಿಕೆಯೂ ಇಲ್ಲ. ನಾನು ದೇವಸ್ಥಾನಗಳ ಹೊಸ್ತಿಲು ತುಳಿಯದೇನೆ ಅದೆಷ್ಟೋ ವರ್ಷಗಳಾದವು. ಆದರೂ ನನ್ನ ಮನೆಯಲ್ಲಿ ಹಬ್ಬವುಂಟು! ನಾನೂ ಪೇಟೆಯಿಂದ ವರ್ಷವೂ ಚಂದ ಕಂಡ ಗಣಪತಿ ಮೂರ್ತಿಯನ್ನ ಕೊಂಡು ತರುತ್ತೇನೆ. ಆದರೆ ಹಬ್ಬದ ನಂತರ ವಿಸರ್ಜಿಸದೆ ಶೋಕೇಸಿನಲ್ಲಿ ಗಣಪನನ್ನ ಕೂಡಿ ಹಾಕುತ್ತೇನೆ! ಹಬ್ಬದ ಸವಿ ಈಗ ಮೊದಲಿನಷ್ಟಿಲ್ಲ ನಿಜ. ಅದೆಲ್ಲ ಅಮ್ಮನ ಅಡುಗೆ, ಬಪಮನ ಗಣಪತಿ ಕಡ್ಲೆ, ತಂತ್ರಿಗಳ ಪ್ರಸಾದ ಹಾಗೂ ಲಕ್ಷ್ಮೀಶನ ಜುಗ್ಗತನದಲ್ಲಿಯೇ ಪಾಸ್ ಆಗಿ ಉಳಿದು ಹೋಗಿವೆ.

Monday, September 17, 2012

ಒಂದು ರಕ್ತ ಚರಿತೆ.....



ನಮ್ಮೂರಲ್ಲಿ ವರ್ಷಕ್ಕೊಂದು ಜಾತ್ರೆ, ಮೂರು ವರ್ಷಕ್ಕೊಮ್ಮೆ ಮಾರಿಜಾತ್ರೆ, ವರ್ಷಕ್ಕೆ ಮೂರು ಗಣಪತಿ ಪೆಂಡಾಲಿನ ಆರ್ಕೆಸ್ಟ್ರಾ, ವರ್ಷಕ್ಕೊಂದು ಆಯುಧಪೂಜೆಯ ರಸಮಂಜರಿ, ಶ್ರಾವಣದ ನಂತರ ಸಾಲಾಗಿ ಬರುವ ಎಲ್ಲಾ ಹಬ್ಬಗಳೊಂದಿಗೆ ಊರಿನ ಸಮಸ್ತ ಚೌಡಿ, ಭೂತರಾಯ ಹಾಗೂ ನಾಗಬನಗಳಿಗೆ ಅವುಗಳ ಯೋಗ್ಯತಾನುಸಾರ ಆಗಾಗ ಪಾನಕ-ಪನಿವಾರ, ಪ್ರಾಣಿ ಬಲಿಯ ಸೇವೆ ಸಲ್ಲಿಸುತ್ತಾ ತಮ್ಮ ಎಲ್ಲಾ ಕಷ್ಟ ನಷ್ಟಗಳೊಂದಿಗೆ ಸುಖವಾಗಿದ್ದರು! ಅಥವಾ ಕನಿಷ್ಠ ಸುಖವಾಗಿರುವ ಫೋಜು ಕೊಟ್ಟುಕೊಳ್ಳುತ್ತಾ ಓಡಾಡಿ ಕೊಂಡಿರುತ್ತಿದ್ದರು. ಜಡ್ಡು ಜಾಪತ್ರೆಯಾದಾಗಲೆಲ್ಲ ಸರಕಾರಿ ಜೆ ಸಿ ಧರ್ಮಾಸ್ಪತ್ರೆ ಹೋಗುತ್ತಿದ್ದುದಷ್ಟೇ ನಿಷ್ಠೆಯಿಂದ ಮಾರಿ, ಚೌಡಿ ಭೂತರಾಯನಿಗೂ ಹರಕೆ ಹೊರುತ್ತಿದ್ದರು. ತಮ್ಮ ಆಹಾರಕ್ರಮಕ್ಕನುಗುಣವಾಗಿ ಕುಂಬಳದಿಂದ ಕೋಳಿಯವರೆಗೂ ನಂಬಿದ ದೈವದ ಹರಕೆ ಸಲ್ಲಿಸುತ್ತಾ ಬಹಿರಂಗವಾಗಿ ಅವರವರ ಅಂತಸ್ತಿಗೆ ತಕ್ಕಂತೆ ಕುರಿಯಿಂದ ಕೋಣದವರೆಗೂ ಈ ಹರಕೆಯ ರೂಪದಲ್ಲಿ ದೇವರಿಗೆ ತೋರಿಸುತ್ತಿದ್ದ ಅಮಿಷದಲ್ಲಿ ಬದಲಾವಣೆಯಾಗುತ್ತಿತ್ತು. ಮಾರಿ ಒಲಿದರೆ ಸಕಲ ಸಮಸ್ಯೆಗಳೂ ಪರಾರಿ ಎಂಬ ಅನುಗಾಲದ ಅಲ್ಲಿನವರ ನಂಬಿಕೆ ಇನ್ನೂ ಬದಲಾಗಿಲ್ಲ. ಈ ಮಾರಿಜಾತ್ರೆ ಅಥವಾ ಭೂತ ಬಲಿಯ ಕಾಲಕ್ಕೆ ಹಿಂದುಗಳಷ್ಟೇ ಆ ಬಲಿ ಪ್ರಾಣಿಗಳನ್ನ ಮಾರುವ ಮುಸಲ್ಮಾನರೂ, ಕಡಿದ ಪ್ರಾಣಿಗಳ ಚರ್ಮಗಳ ಗುತ್ತಿಗೆ ಹಿಡಿಯುತ್ತಿದ್ದ ಬ್ಯಾರಿಗಳು, ಜಾತ್ರೆಯ ನೆಪದಲ್ಲಿ ಬರುವ ನೆಂಟರ ನಾಲಗೆ ರುಚಿ ತಣಿಸಲು ಊರ ಜನ ಹೆಚ್ಚು ಮೀನು ಕೊಳ್ಳುವುದರಿಂದ ಗಿರಾಕಿಗಳಿಂದ ಅದನ್ನ ಮಾರುವ ಕ್ರಿಸ್ತುವರು ಹಾಗೂ ಜಾತ್ರೆಯ ಪೆಂಡಾಲಿಗೆ ಮೈಕಿನ ಉಸ್ತುವಾರಿ ವಹಿಸುತ್ತಿದ್ದ ಜೈನರು ಹೀಗೆ ಎಲ್ಲರೂ ಆರ್ಥಿಕವಾಗಿ ಸಂತೃಪ್ತರಾಗುತ್ತಿದ್ದರಿಂದ ಈ ಆಚರಣೆಗಳಿಗೆ ಒಂದು ಸಾಮೂಹಿಕ ಸ್ವರೂಪವೂ ಪ್ರಾಪ್ತವಾಗಿತ್ತು. ಈ ಎಲ್ಲಾ ಕಾರಣಗಳಿಂದ ಸುತ್ತಮುತ್ತಲ ಕಾರ್ಕಳ, ಸಾಗರ, ಮಂಗಳೂರು ಹಾಗೂ ಶಿರಸಿಗಳಂತೆ ಇಲ್ಲಿನ ಮಾರಿಜಾತ್ರೆಯೂ ಒಂದು ಮಟ್ಟಿಗೆ ಪ್ರಸಿದ್ಧವಾಗಿತ್ತು.


ಮಾರಿಜಾತ್ರೆ ಸಾಮಾನ್ಯವಾಗಿ ಮೂರು ದಿನ ನಡೆಯುವಂತದ್ದು. ಇತ್ತೀಚಿಗೆ ವೈದಿಕ ಆಚರಣೆಗಳು ಅಲ್ಲಿ ಪ್ರಾಮುಖ್ಯತೆ ಪಡೆಯುತ್ತಿವೆಯಾದರೂ, ಮಾರಿಜಾತ್ರೆಯಲ್ಲಿ ನಾನು ಕಂಡಂತೆ ಮಹತ್ಹ್ವವಿರುತ್ತಿದ್ದುದು ಕೇವಲ ಅವೈದಿಕ ಆರಾಧನಾ ಕ್ರಮಗಳಿಗೆ. ಇನ್ನೇನು ಮಾರಿಜಾತ್ರೆಗೆ ಒಂದು ವಾರ ಇದೆಯೆನ್ನುವಾಗ ಊರಿನ ಕುಳವಾಡಿ ತಮಟೆ ಬಾರಿಸಿಕೊಂಡು ಊರೆಲ್ಲ ಮಾರಿ ಸಾರುತ್ತಾ ಸುತ್ತು ಬರುತ್ತಿದ್ದ. ಈ ಸಾರುವಿಕೆಯ ಜೊತೆಗೆ ಊರ ಉಳ್ಳವರಿಂದ ವೀಳ್ಯ ಹಾಗೂ ಚಿಲ್ಲರೆಕಾಸನ್ನೂ ಭಿಡೆಯಿಲ್ಲದೆ ಬಾಯಿ ಬಿಟ್ಟು ಕೇಳಿಯೇ ವಸೂಲು ಮಾಡುತ್ತಿದ್ದ. ಅವನ ಹಿಂದೆಯೆ ಹೊಲೆಯರ ಕೆರಿಯವರು ಆ ಬಾರಿ ಮಾರಿಗೆ ಬಲಿಕೊಡಲಿಕ್ಕಿರುವ ಹೋತವನ್ನ ಹೂಮಾಲೆ ಹಾಕಿ ದರದರ ಮನೆಮನೆ ಬಾಗಿಲಿಗೂ ಎಳೆದು ತರುತ್ತಿದ್ದರು. ತನ್ನ ಮುಂದಿನ ದುರ್ವಿಧಿಯ ಸುಳಿವು ಇನ್ನೂ ಹತ್ತಿರದ ಆ ಮೂಢ ಹೋತ ತನ್ನ ಕುತ್ತಿಗೆಗೆ ಹಾಕಿರುವ ಚಂಡು ಹೂವಿನ ಹಾರವನ್ನೆ ಕಿತ್ತುತಿನ್ನಲು ಹವಣಿಸುತ್ತಾ ತಮಟೆ ಬಾರಿಸುವವನ ಹಿಂದೆಯೇ ಒಲ್ಲದ ಮನಸ್ನಿಂದ ಒತ್ತಾಯಕ್ಕೊಳಗಾಗಿ ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಾ ಹಿಂಬಾಲಿಸುತ್ತಿತ್ತು. ಅದು ಮನೆ ಬಾಗಿಲಿಗೆ ಬಂದಾಗ ಬ್ರಾಮ್ಹಣರಿಂದ ಹಿಡಿದು ಶೂದ್ರಾತಿಶೂದ್ರರವರೆಗೂ ಎಲ್ಲರೂ ಅದರ ತಲೆಗೆ ಎಳ್ಳೆಣ್ಣೆ ಹನಿಸಿ ಜೊತೆಗಿರುತ್ತಿದ್ದ ಇನ್ನೊಬ್ಬನ ಕೈಯಲ್ಲಿರುತ್ತಿದ್ದ ಕ್ಯಾನಿಗೆ ಕುಡ್ತೆ ಎಣ್ಣೆ ಸುರಿಯೋದು ಖಡ್ಡಾಯವಾಗಿತ್ತು . ಅದರೊಂದಿಗೆ ಮಾರಿ ಜಾತ್ರಾ ವಂತಿಗೆಯನ್ನೂ ನಗದಿನ ರೂಪದಲ್ಲಿ ನೀಡಬೇಕಿತ್ತು. ಹೀಗೆ ನೀಡಿದ ಹಣದಲ್ಲಿ ಮಾರಿಬಲಿಯ ಊಟದ ಖರ್ಚು ವೆಚ್ಚಗಳನ್ನು ನಿಭಾಯಿಸಲಾಗುತ್ತಿತ್ತು. ಮಾರಿ ಸಾರಿದ ನಂತರ ಊರಲ್ಲಿದ್ದವರ್ಯಾರೂ ಜಾತ್ರೆ ಮುಗಿಯುವವರೆಗೂ ಊರು ಬಿಟ್ಟು ಹೊರಗೆ ತೆರಳುವಂತಿರಲಿಲ್ಲ, ಹಾಗೊಂದು ವೇಳೆ ಹೋಗಿದ್ದರೂ ಕತ್ತಲಾಗುವ ಮುನ್ನ ಮರಳಿ ಊರು ಸೇರಿಕೊಳ್ಳಲೆ ಬೇಕಿತ್ತು.

. ತೀರ್ಥಹಳ್ಳಿಯ ಮಾರಿಗುಡಿ ಊರಿನ ನಡುಮಧ್ಯದಲ್ಲಿದೆ. ಇಲ್ಲಿಗೆ ಕಣ್ಣಳತೆಯಲ್ಲಿ ಊರಿನ ಲೂರ್ದುಮಾತೆಯ ಇಗರ್ಜಿಯಿದ್ದರೆ, ಊರಿನ ಎರಡೂ ಮಸೀದಿಗಳು ಇಲ್ಲಿಗೆ ಕೇವಲ ಕೂಗಳತೆಯ ದೂರದಲ್ಲಿವೆ. ಮಾರಿಯಮ್ಮನ ಭಕ್ತಕೋಟಿ ಸದಾ ಈ ಇಕ್ಕಟ್ಟಿನ ಗುಡಿಯಲ್ಲಿ ಇರುಕಿಕೊಂಡಿರುತ್ತಿದ್ದ ಕಾರಣ ಅಲ್ಲಿನ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಹಗಲಿಡಿ ವಿಪರೀತ ಹೂವು-ಹಣ್ಣುಗಳ ವ್ಯಾಪಾರ ಎಡೆಬಿಡದೆ ಬಿರುಸಿನಿಂದ ನಡೆಯುತ್ತಿತ್ತು. ಹಾಗೆ ನೋಡಿದಾರೆ ಊರಿನ ಮುಖ್ಯ ಆಕರ್ಷಣೆಯಾದ ರಾಮೇಶ್ವರ, ಮಠದೊಳಗೆ ವಿರಾಜಮಾನರಾಗಿರುವ ರಾಘವೇಂದ್ರ ಸ್ವಾಮಿಗಳು, ತಂತ್ರಿಗಳ ನಿಗದಲ್ಲಿರುವ ಗಣಪತಿ ಕಟ್ಟೆಯ ಗಣಪ, ರಥಬೀದಿಯಂಚಿನಲ್ಲಿರುವ ಶ್ರೀರಾಮಚಂದ್ರ, ಕೋದಂಡರಾಮ, ಸೊಟ್ಟಮುಖದ ಹನುಮನಂತಹ ಶಿಷ್ಟದೇವರುಗಳೆಲ್ಲ ಮಂಕೋ ಮಂಕು. ಇಷ್ಟುದ್ದ ನಾಲಗೆ ಕಳೆದು ಕೊಂಡು ದೊಡ್ಡದೊಡ್ಡ ಕಣ್ಣು ಬಿಡುತ್ತಿರುವ ಬೆಳ್ಳಿ ಮುಖವಾಡದ ಮಾರಮ್ಮನದ್ದು ಊರಿನಲ್ಲಿ ಒಂದು ತೂಕವಾದರೆ ಈ ಹೆಣ್ಣು ದೇವರ ಮುಂದೆ ಪುರುಷ ಪ್ರತಾಪಿ ದೈವಗಳ ಪುಂಗಿಯೆಲ್ಲ ಪೂರ್ಣ ಬಂದ್! . ಪುರುಷಪ್ರಧಾನ ದೇವರುಗಳಿಗಿಂತ ಈ ಸ್ತ್ರೀದೇವರ ಹಿಂಬಾಲಕರ ಸಂಖ್ಯೆ ಯಾವಾಗಲೂ ಹೆಚ್ಚಾಗಿರುತ್ತಿದ್ದುದು ಬಹಿರಂಗ ಗುಟ್ಟು!
ನಮ್ಮ ಮನೆಯಿದ್ದುದು ಊರಿನ ಸೂಪ್ಪುಗುಡ್ಡೆ ಬಡಾವಣೆಯಲ್ಲಿ. ಅದರ ಕಟ್ಟಕಡೆಯ ತುದಿಯಂಚಿನಲ್ಲಿ ಇರುವ ಆಚಾರಿಗಳ ಮನೆಯಲ್ಲಿ ಮಾರಿ ಗೊಂಬೆ ತಯಾರಾಗುತ್ತಿತ್ತು. ಆ ಬೊಂಬೆ ಕೊರೆಯುವುಇದು ಆ ಮನೆತನಕ್ಕೆ ಬಂದ ವಂಶ ಪಾರಂಪರ್ಯದ ಹಕ್ಕು. ನಾವು ಚಡ್ಡಿ ಪೈಲ್ವಾನರಾಗಿದ್ದ ಕಿರಿಯರು ಆಚಾರಿಗಳು ಬಟ್ಟೆ ಕಟ್ಟಿ ಮರೆಯಲ್ಲೆ ಮರವೊಂದಲ್ಲಿ ಕೆತ್ತುತ್ತಿದ್ದ ಮಾರಮ್ಮ ಹಾಗೂ ಅವಳ ಗಂಡನ ಮೂರ್ತಿಯನ್ನ ದಿನವೂ ಕದ್ದುಕದ್ದು ನೋಡುತ್ತಿದ್ದೆವು. ಎರಡು ಚಕ್ರದ ಕೈ ಗಾಡಿಯ ಮೇಲೆ ಸೊಂಟದಿಂದ ಮೇಲೆ ಕೂತಂತೆ ಕೆತ್ತಿರುತ್ತಿದ್ದ ಮಾರಿ ಬೊಂಬೆಗಳನ್ನ ಸೀರೆ-ಪಂಚೆ ಉಡಿಸಿ ಅಲಂಕರಿಸಿ ಜಾತ್ರೆಯ ಮೊದಲನೆದಿನ ದೇವಸ್ಥಾನಕ್ಕೆ ಕೊಂಬು ಕಹಳೆಗಳೊಂದಿಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತಿತ್ತು. ದೇವಸ್ಥಾನದ ಮುಂದಿರುವ ಮಾತಂಗಿಗುಡಿಯ ಎದುರು ಆ ಮೂರ್ತಿಗಳ ಸಮಕ್ಷಮದಲ್ಲಿ ಊರು ಸುತ್ತು ಬರಿಸಿರುತ್ತಿದ್ದ ಬಲಿಯ ಹೋತವನ್ನ ಪೂಜೆಯ ಭಂಡಾರ ಬಳಿದು ಮಾರಿಯ ಕಟುಕ ಉದ್ದನೆಯ ಕತ್ತಿಯಿಂದ ಒಂದೇ ಹೊಡೆತಕ್ಕೆ ಕಡಿದು ಮುಂದ-ರುಂಡ ಎರಡು ಮಾಡುತ್ತಿದ್ದ. ಅನಿರೀಕ್ಷಿತವಾಗಿ ವಧೆಯಾಗುತ್ತಿದ್ದ ಹೋತದ ದೇಹಡ ಕಡಿದ ಕುತ್ತಿಗೆಯಿಂದ ರಕ್ತದ ಓಕುಳಿ ಕಾರಂಜಿಯಂತೆ ಚಿಮ್ಮುತ್ತಲೆ ಹೋತದ ಮುಂದ ಕೆಳಗುರುಳುತ್ತಿತ್ತು. ಈ ಕೈಂಕರ್ಯವನ್ನ ನೋಡುವ ಉಮೇದಿನೊಂದಿಗೆ ಅಲ್ಲಿಗೆ ದಾಂಗುಡಿಯಿಡುತ್ತಿದ್ದ ನಮ್ಮಂತ ಕಿರಿಯರಿಗೆ ವಿಲವಿಲ ಒದ್ದಾಡುವ ಅದನ್ನ ನೋಡುವಾಗ ಚಡ್ಡಿ ಒದ್ದೆಯಾಗುತ್ತಿದ್ದುದೂ ಇಟ್ಟು. ಹೀಗೆ ಕಡಿದ ಹೋತದ ತಲೆಗೆ ಅದರದ್ದೆ ಮುಂಗಾಲೊಂದನ್ನ ಬಾಯಲ್ಲಿ ಸಿಕ್ಕಿಸಿದಂತೆ ಮಾತಂಗಿ ಗುಡಿಯ ಮುಂದೆಯೆ ಇರಿಸಿ ಅದರ ಮೇಲೆ ದೊಡ್ಡದೊಂದು ಹಣತೆಯಿಟ್ಟು ದೊಡ್ಡ ಬತ್ತಿಯ ದೀಪವನ್ನ ಮೂರುದಿನವೂ ಬಿಡದೆ ಉರಿಸಲಾಗುತ್ತಿತ್ತು. ದೇವಸ್ಥಾನಕ್ಕೆ ಆ ಮೂರುದಿನವೂ ಹೋಗುವಾಗ ಈ ಭಯಾನಕ ದೃಶ್ಯವನ್ನು ಕಂಡು ನಾವು ಬೆಚ್ಚಿ ಬೀಳುತ್ತಿದ್ದೆವು.


ದೇವರನ್ನ ಪೂಜಿಸಿ ಭಂಡಾರ ಕೊಂಡೊಯ್ದು ಮಾರಿಯ ಭಕ್ತಕೋಟಿ ತಮ್ಮ ಆಹಾರ ಕ್ರಮಕ್ಕೆ ತಕ್ಕಂತೆ ಭಂಡಾರ ಹಚ್ಚಿದ ಕುಂಬಳವನ್ನೋ, ಇಲ್ಲಾ ಹರಕೆಯ ಕೋಳಿಯನ್ನೋ ಮನೆಯಲ್ಲಿಯೆ ಕಡಿದು ಮಾರಿಯನ್ನ ಸಂತೃಪ್ತಗೊಳಿಸಿ ಎಡೆಯಿಟ್ಟು ಅಂದು ಊಟ ಮುಗಿಸುತ್ತಿದ್ದರು.ಮಾರಿಗೆ ಫಾರಂ ಕೋಳಿಗಳು ನಿಶಿದ್ಧವಂತೆ, ಹೀಗಾಗಿ ನಾಟಿ ಕೋಳಿ ಸಾಕಿದ ಮಂದಿಗೆ ಜಾತ್ರೆಯಲ್ಲಿ ಭರ್ಜರಿ ಬೇಡಿಕೆ. ಕೆಲವರಂತೂ ಜಾತ್ರೆಗೂ ಮೊದಲೆ ಹೇಳಿ ಮುಂಗಡವಾಗಿ ಕೋಳಿ ಪಿಳ್ಳೆಗಳನ್ನ ಬುಕ್ ಮಾಡುವುದನ್ನ ಶಾಲೆಗೆ ಹೋಗುವ ಹಾದಿಯಲ್ಲಿ ಕಾಣುತ್ತಿದ್ದೆವು. ಕೋಳಿ ಸಾಕುವ ಬೂಬಮ್ಮ ಬಾಯಮ್ಮಗಳು ಜಾತ್ರೆಗೆ ಇನ್ನೂ ವರ್ಷಕ್ಕೆ ಮೊದಲೆ ಮೊಟ್ಟೆ ಎಣಿಸಿ ಎಣಿಸಿ ಮುಂದಿನ ಹಂಗಾಮಿನಲ್ಲಿ ಆಗುವ ವ್ಯಾಪಾರದ ಕನಸು ಕಾಣುತ್ತಲೇ ದಿನ ದೂಕುತ್ತಿರುತ್ತಿದ್ದರು. ಈ ವ್ಯಾಪಾರದ ಲೆಕ್ಖಾಚಾರದಲ್ಲಿಯೆ ಅವರ ಭವಿಷ್ಯದ ಕೆಲವು ಸಾಂಸಾರಿಕ ಯೋಜನೆಗಳು ರೂಪುಗೊಳ್ಳುತ್ತಿದ್ದುದೂ ಉಂಟು. ಮಾರಿಗೆ ಈ ಕೋಳಿಗಳ ನಡುವೆ ವರ್ಣದ ಅಸ್ಪರ್ಶ್ಯತೆ ಆಚರಿಸುವ ಅನಿವಾರ್ಯತೆ ಏನಿತ್ತು ಅಂತ ಇಂದಿಗೂ ನನಗೆ ಅರ್ಥವಾಗಿಯೇ ಇಲ್ಲ! ಅಲ್ಲಿಗೆ ಜಾತ್ರೆಯ ಎರಡನೆ ದಿನ ಮುಗಿಯುತ್ತಿತ್ತು. ಮೂರನೆ ದಿನ ಊರಲ್ಲೆಲ್ಲ ಮಾರಿ ಬಿಡುವ ಗಡಿಬಿಡಿ. ಮಾರಿಯ ಗಂಡ-ಹೆಂಡಿರ ಬೊಂಬೆಯನ್ನ ಪೂಜೆಯ ನಂತರ ಎಳೆದೊಯ್ದು ಊರ ಗಡಿ ದಾಟಿಸಿ ಮಾರಿಯ ಹೆಸರಲ್ಲಿ ಕಡಿದ ಏಳೆಂಟು ಹೋತಗಳ ಮಾಂಸದಡುಗೆಯನ್ನ ಮೂರ್ತಿ ಕೆತ್ತಿದ ಆಚಾರಿಯ ಮನೆಯಂಗಳದಲ್ಲೇ ಅಡುಗೆ ಮಾಡಿ ಮಾರಿಯ ಭಕ್ತ ಕೋಟಿಗೆ ಅಲ್ಲೆ ಸಮೀಪದಲ್ಲಿದ್ದ ದೇವಸ್ಥಾನದ ಗದ್ದೆಯಲ್ಲಿ ಹಾಕಿರುತ್ತಿದ್ದ ಪೆಂಡಾಲಿನಲ್ಲಿ ಭೂರಿ ಭೋಜನ ಏರ್ಪಡಿಸಲಾಗುತ್ತಿತ್ತು. ಕದ್ದು ಮುಚ್ಚಿ ಕಳ್ಳಿನ ಸಮಾರಾಧನೆಯೂ ಈ ಭೋಜನದಲ್ಲಿ ಆಗುತ್ತಿದ್ದರಿಂದ ಮಾರಮ್ಮನ ಮಕ್ಕಳು ಟೈಟಾಗಿ ಓಲಾಡುವುದನ್ನ ಪುಕ್ಕಟೆಯಾಗಿ ನೋಡಿ ಎಂಜಾಯ್ ಮಾಡಬಹುದಾಗಿತ್ತು.

ಒಮ್ಮೆ ಊರು ದಾಟಿಸಿದ ಮಾರಿಯ ಬೊಂಬೆಯ ಜೊತೆ ಮೊಂಡು ಹಿಡಿಸೂಡಿ (ಪೊರಕೆ), ಹರಿದ ಚಾಪೆ , ಮುರಿದ ಕಡಗೋಲನ್ನೂ ಸಂಪ್ರದಾಯದಂತೆ ಇಡುತ್ತಿದ್ದರು. ಮಾರಿ ಬ್ರಾಮ್ಹಣ ಕನ್ಯೆಯಾಗಿದ್ದಳಂತೆ. ಅವಳನ್ನ ಸುಳ್ಳುಜಾತಿ ಹೇಳಿ ಯಾಮಾರಿಸಿದ ಹೊಲೆಯನೊಬ್ಬ ಮದುವೆಯಾದನಂತೆ. ಈ ಜೋಡಿಯ ಸುಖ ಸಂಸಾರಕ್ಕೆ ಮೂವರು ಮಕ್ಕಳೂ ಆದರಂತೆ. ಕೊನೆಯ ಕಿರಿಯ ಅಪ್ಪನೊಂದಿಗೆ ಹೋಗಿದ್ದಾಗಲೋಮ್ಮೆ ಅಪ್ಪ ಚಕ್ಕಳ ಸುಳಿದು ಎಕ್ಕಡ ಹೊಲೆಯುತ್ತಿದ್ದುದರ ವರದಿಯನ್ನ ಅಮ್ಮನಿಗೆ ಒಪ್ಪಿಸಿದನಂತೆ. ಈ ವಿಶ್ವಾಸ ದ್ರೋಹದ ಕಥೆ ಕೇಳಿ ಗಂಡನ ಜಾತಿಯ ರಹಸ್ಯ ಅರಿತ ಮಾರಿ ಕ್ಷುದ್ರಳಾಗಿ ತನ್ನ ಕೈಗತ್ತಿಯಿಂದ ತನ್ನವೇ ಮೂರೂ ಸಂತಾನಗಳನ್ನ ಕೊಚ್ಚಿ ಹಾಕಿದಳಂತೆ. ಮನೆಗೆ ಮರಳುತ್ತಿದ್ದ ಅವಳ ಗಂಡ ತನ್ನ ಹೆಂಡಿರ ಈ ರೌದ್ರಾವತಾರ ಕಂಡು ಕಂಗಾಲಾಗಿ ಓಟ ಕಿತ್ತನಂತೆ. ಇವಳೂ ಛಲ ಬಿಡದೆ ಕತ್ತಿ ಜಳಪಿಸುತ್ತಾ ಅವನ ಬೆನ್ನು ಹತ್ತಿದಳಂತೆ.ಓಡಿ ಓಡಿ ಸುಸ್ತಾದ ಆತ ಎದುರಲ್ಲಿ ಬರುತ್ತಿದ್ದ ಕೋಣವೊಂದರ ಒಳಗೆ ತೂರಿದನಂತೆ. ಗಂಡನ ಕಪಟ ವೇಷ ಅರಿತ ಮಾರಿಯನ್ನ ಸಂತೃಪ್ತಗೊಳಿಸಲಿಕ್ಕೆ ಮಾರಿಯ ಸೇವಕಿಯೂ, ಅವಳ ಗಂಡನ ಉಪಪತ್ನಿಯೂ ಆದ ಮಾತಂಗಿ ಆ ಕೋಣವನ್ನ ಮಾರಿಯೆದುರೆ ಕಡಿದ ನಂತರ ಮಾರಮ್ಮ ಸಂತೃಪ್ತಗೊಂಡಳಂತೆ! ಮಾರಿಜಾತ್ರೆಯ ಈ ಕಥೆಯನ್ನ ಅಮ್ಮ ರಾತ್ರಿ ಅಪ್ಪಿಕೊಂಡು ಮಲಗಿ ನಿದ್ದೆ ಬರಿಸಲಿಕ್ಕಂತ ನನಗೆ ಹೇಳಿದ್ದರಾದರೂ ನಾನು ಹೆದರಿ ಕಂಗಾಲಾದವ ಅವರನ್ನ ಇನ್ನಷ್ಟು ಅಪ್ಪಿ ಹಿಡಿದು ನಿದ್ದೆ ಬಾರದಷ್ಟು ಭಯಭೀತನಾಗಿದ್ದೆ. ತೀರ್ಥಹಳ್ಳಿಯಲ್ಲೂ ಮೊದಲು ಕೋಣವನ್ನೇ ಮಾರಿಗೆ ಬಲಿ ನೀಡುತ್ತಿದ್ದರಂತೆ ಆದರೆ ಈಗ ಅದನ್ನೆ ಹೋತಕ್ಕೆ ಬದಲಿಸಿ ಕೊಂಡಿದ್ದಾರೆ ಅಂತಲೂ ಅಮ್ಮ ಹೇಳುತ್ತಿದ್ದರು.


ಮಾರಿಜಾತ್ರೆ ಬಂತೆಂದರೆ ನಮಗೆ ಕಿರಿಯರಿಗೆ ಮೂರು ಕಾರಣಕ್ಕೆ ಪರಮಾನಂದವಾಗುತ್ತಿತ್ತು. ಮೊದಲನೆಯದು ಶಾಲೆಗೆ ರಜೆ ಸಿಗುತ್ತಿತ್ತು, ಎರಡನೆಯದು ಪರವೂರಿನ ನೆಂಟರು ಜಾತ್ರೆಗಂತ ಊರಿಗೆ ಬರುತ್ತಿದ್ದರು, ಬಂದವರು ಮರಳಿ ಹೋಗುವಾಗ ಮಕ್ಕಳಿಗೆ ಚಿಲ್ಲರೆ ಕಾಸು ಕೊಟ್ಟು ಹೋಗುತ್ತಿದ್ದರು! ಮುಖ್ಯವಾದ ಮೂರನೆಯ ಕಾರಣವೆಂದರೆ ಮಾರಿಗುಡಿಯ ಮುಂದೆ ರಾಜರಸ್ತೆಯಲ್ಲಿಯೆ ಪೆಂಡಾಲು ಹಾಕುವುದರಿಂದ ಊರಿನ ಮೇಲು ಬಸ್ಟ್ಯಾಂಡಿನಿಂದ ಕೆಳ ಬಸ್ಟ್ಯಾಂಡಿಗೆ ಹೋಗುವ ಸಮಸ್ತ ಬಸ್ಸುಗಳೂ ಸುತ್ತು ಬಳಸಿ ನಮ್ಮ ಮನೆಯ ಹಾದಿಯಾಗಿಯೇ ಮೂರುದಿನ ಸಾಗಬೇಕಾಗುತ್ತಿತ್ತು. ಬಸ್ಸಿನ ಚಾಲಕರೆ ನಮ್ಮಂತರ ಎಳೆಯರ ಹೀರೋಗಳೂ ಆಗಿರುತ್ತಿದ್ದ ಕಾಲವದು. ಅಲ್ಲದೆ ನನ್ನಜ್ಜನೆ ಆಗ ಡ್ರೈವರ್ ಬೇರೆ!. ಸಾಗುವ ಬಸ್ಸುಗಳಿಗೆಲ್ಲ ಕೂಗಿ-ಕಿರುಚಿ ಕೈ ಬೀಸುತ್ತಿದ್ದ ಮನೆಯಂಗಳದಿಂದಲೆ ನಮ್ಮ ಪಟಾಲಂ ಮುಂದೆ ಅಜ್ಜನ ಬಸ್ ಸಾಗುವಾಗ ಮಾತ್ರ ನಾನು ಒಂಚೂರು ಹೆಚ್ಚೇ ಎದೆಯುಬ್ಬಿಸಿ ಜಂಭದಿಂದ ಜಿಗಿದಾಡಿ ಅಗತ್ಯಕ್ಕಿಂತ ಹೆಚ್ಚು ಗದ್ದಲವೆಬ್ಬಿಸುತ್ತಾ ಕೈ ಬೀಸುತ್ತಿದ್ದೆ! ಮಾರಿಗೆ, ಮಾರಿಜಾತ್ರೆಗೆ ತೀರ್ಥಹಳ್ಳಿಯಲ್ಲಿ ಇನ್ನೂ ಅಷ್ಟೆ ಪ್ರಾಮುಖ್ಯತೆ ಇದೆ ಅಂದುಕೊಂಡಿದ್ದೇನೆ. ಊರಿನ ರಸ್ತೆ ಅಗಲೀಕರಣಗೊಳ್ಳುವಾಗ ಗಾಂಧಿಚೌಕದ ಮೂಲೆಯಲ್ಲಿದ್ದ ಗಣಪತಿಕಟ್ಟೆಗೂ ಬುಲ್ಡೋಜರ್ ಹರಿಸಿದ್ದ ಸ್ಥಳಿಯಾಡಳಿತ ನಡು ರಸ್ತೆಗೆ ಚಾಚಿಕೊಂಡಿರುವ ಮಾರಿ ಮತ್ತವಳ ಸಖಿ ಮಾತಂಗಿಯ ಕೂದಲನ್ನೂ ಕೊಂಕಿಲ್ಲ. ಅವರ ಸುದ್ದಿಗೆ ಹೋಗದೆ ಸುಮ್ಮನಿರುವ ಸರಕಾರದ ಈ ನಡೆ ನನ್ನಲ್ಲಿ ನಿಜಕ್ಕೂ ವಿಸ್ಮಯ ಹುಟ್ಟಿಸಿದ್ದು ಸುಳ್ಳಲ್ಲ. ಕನಿಷ್ಠ ದೇವರ ಮಟ್ಟದಲ್ಲಾದರೂ ಸ್ತ್ರೀ ಪ್ರಾಬಲ್ಯವಿದ್ದು ಪುರುಷ ದೇವರುಗಳೆ ಮೀಸಲಾತಿಗಾಗಿ ಅಂಗಲಾಚುತ್ತಾ ಪರಿತಪಿಸುವುದನ್ನ ನೋಡುವಾಗ ತುಟಿಯಂಚಿನಲ್ಲಿ ಒಂದು ತುಂಟ ನಗು ಸುಳಿಯುತ್ತಿದೆ .

Saturday, September 15, 2012

ಬೈಟು ಮಸಾಲೆ ದೋಸೆ.....




ಚಿಕ್ಕಂದಿನಲ್ಲಿ ನನಗೆ ವಿಪರೀತ ತಿನ್ನುವ ರಾವು ಬಡಿದುಕೊಂಡಿತ್ತು. ಚಂದ-ಬಣ್ಣಬಣ್ಣವಾಗಿ ಕಂಡದ್ದೆಲ್ಲ ಕೊಂಡು ತಿನ್ನುವ ಚಪಲ ನನಗಾಗ. ಆದರೆ ನನ್ನ ಚಡ್ಡಿಯ ಜೇಬು ಒಂದು ಬದಿ ತೂತಾಗಿರುತ್ತಿದ್ದರೆ, ಇನ್ನೊದು ಬದಿ ಖಾಲಿ ಹೊಡೆಯುತ್ತಿತ್ತು. ಇನ್ನು ಹಿರಿಯರೋ, ಯಾರೂ ಅಂಗಡಿ ತಿಂಡಿಗಳನ್ನ ಕೊಡಿಸುತ್ತಲೇ ಇರಲಿಲ್ಲ. ಅಂಗಡಿ ತಿಂಡಿ ತಿಂದರೆ ಆರೋಗ್ಯ ಹುಷಾರು ತಪ್ಪುತ್ತದೆ ಅನ್ನೋದು ಅವರ ಅನುಗಾಲದ ಪಲ್ಲವಿ. ಮನೆಯ ಖರ್ಚುವೆಚ್ಚಗಳನ್ನ ಇರುತ್ತಿದ್ದ ಅಲ್ಪ ಆದಾಯದಲ್ಲೆ ಸರಿದೂಗಿಸುವ ತಂತಿ ಮೇಲಿನ ನಡಿಗೆಯನ್ನ ಮಾಡುವ ಕಾರಣಕ್ಕಾಗಿಯೆ ಬಹುಷಃ ಈ ಸಿದ್ಧ ಎಚ್ಚರಿಕೆಯನ್ನ ಕೊಟ್ಟುಕೊಟ್ಟೆ ಹೊರಗಡೆ ಅಂಗಡಿಗಳ ಮುಂದೆ ಹುಟ್ಟುತ್ತಿದ್ದ ನಮ್ಮಂತಾ ಹಟಮಾರಿ ಮಕ್ಕಳ ತೀರದ ಬೇಡಿಕೆಗಳಿಂದ ಆಗಬಹುದಾಗಿದ್ದ ಸಂಭಾವ್ಯ ಮುಜುಗರಗಳಿಂದ ದೊಡ್ಡವರು ತಪ್ಪಿಸಿಕೊಳ್ಳುವ ಹರ ಸಾಹಸವಾಗಿತ್ತು ಅಂತಾ ಈಗ ಅನ್ನಿಸುತ್ತೆ. ನಮ್ಮ ಮನೆಯಲ್ಲಿ ತೀರ ಹೊಟ್ಟೆ ಬಿರಿಯುವಷ್ಟಲ್ಲದಿದ್ದರೂ ಹೊಟ್ಟೆ ತುಂಬುವಷ್ಟು ಊಟಕ್ಕೆ ಕೊರತೆಯಿರಲಿಲ್ಲ. ನಮ್ಮ ಮನೆ ಅಗತ್ಯಗಳಿಗೆ ಕೇವಲ ಒಂದೆರಡು ಕುಡ್ತೆ ಕರೆದ ಹಾಲನ್ನ ಉಳಿಸಿ ಕೊಂಡ ಅಮ್ಮ ಉಳಿದ ಎಲ್ಲವನ್ನೂ ಮಾರಿ ಮನೆಖರ್ಚಿಗೆ ನಾಲ್ಕು ಕಾಸು ಹೊಂದಿಸುತ್ತಿದ್ದರು. ಅದೂ ಸಾಲದೆ ಬರುತ್ತಿದ್ದರಿಂದ ಹೊಲಿಗೆ ಯಂತ್ರವನ್ನ ಇಟ್ಟುಕೊಂಡು ಯಾರ್ಯಾರದ್ದೋ ಸೀರೆಗಳಿಗೆ ಫಾಲ್ ಹಾಕಿಯೋ, ಇನ್ಯಾರದ್ದೋ ಲಂಗಕ್ಕೆ-ಬ್ಲೌಸಿಗೆ ಅಂಚು ಹೊಲೆದೋ ಇನ್ನೊಂದು ಮೂರು ಕಾಸನ್ನ ಕೂಡುತ್ತಿದ್ದರು. ಪ್ರತಿ ಸಂಜೆ ಮನೆಯ ಜಗಲಿಯ ಮೂಲೆಯಲ್ಲಿದ್ದ ಹೊಲಿಗೆ ಮಿಶೀನಿನ ಎದುರು ಸ್ಟೂಲೊಂದರಲ್ಲಿ ಕೂತು ದಪ್ಪ ಕನ್ನಡಕವೊಂದನ್ನ ಏರಿಸಿಕೊಂಡು ಅವರು ತನ್ಮಯರಾಗಿ ಬೀಳುವ ಹೊಲಿಗೆಯನ್ನೇ ದಿಟ್ಟಿಸುತ್ತಾ, ಯಾಂತ್ರಿಕವಾಗಿ ಮಿಷನ್ನಿನ ಪೆಡಲನ್ನು ತನ್ಮಯರಾಗಿ ತುಳಿಯುತ್ತಿರುವ ಚಿತ್ರ ಹಾಗೆಯೆ ನಿಶ್ಚಲವಾಗಿ ಕಟ್ಟುಹಾಕಿದ ಚಿತ್ರದಂತೆ ನನ್ನ ಮನಸಿನ ಭಿತ್ತಿಯ ಕೀಳಲಾರದ ಮೊಳೆಗೆ ಭದ್ರವಾಗಿ ತೂಗುಬಿದ್ದಿದೆ.

ಅಷ್ಟಕ್ಕೂ ಆಗ ಶಿವಮೊಗ್ಗದ "ಶ್ರೀಗಜಾನನ ಮೋಟರ್ ಸರ್ವಿಸ್"ನಲ್ಲಿ ಡ್ರೈವರ್ ಆಗಿದ್ದ ನಮ್ಮಜ್ಜನಿಗೆ ಬರುತ್ತಿದ್ದ ಪಗಾರವಾದರೂ ಎಷ್ಟು? ಪಿಎಫ್ ವಗೈರೆಗಳೆಲ್ಲ ಕಳೆದನಂತರ ಸುಮಾರು ನಾಲ್ಕುನೂರ ಐವತ್ತಿತ್ತೇನೊ. ಕಳೆದ ಶತಮಾನದ ಎಂಭತ್ತರ ದಶಕದ ಅಂತ್ಯದ ದಿನಗಳವು. ಮದುವೆ ಮಾಡಿ ಕೊಟ್ಟರೂ ತವರಿಗೆ ಮರಳಿ ಬಂದು ಠಿಕಾಣಿ ಹಾಕಿರುವ ಮಗಳು-ಮತ್ತವಳ ಸಂತಾನ ನಾನು, ಇನ್ನುಳಿದಂತೆ ಐದು ಮಕ್ಕಳು, ಹೆಂಡತಿ ಇವರೆಲ್ಲರ ಊಟ ಬಟ್ಟೆಯ ಖರ್ಚು ಕಳೆದು ತನ್ನ ಸಣ್ಣಪುಟ್ಟ ಶೋಕಿಗಳಿಗೂ ಅದರಲ್ಲೆ ನಾಲ್ಕು ಕಾಸು ಉಳಿಸಿಕೊಂಡು ಸಂಬಳದ ಸಣ್ಣ ಪಾಲೊಂದನ್ನ ಅವರು ಆರ್'ಡಿ ಕಟ್ಟುತ್ತಿದ್ದರು. ಮುಂದೆ ಇನ್ನು ಮೂರು ಹೆಣ್ಣು ಮಕ್ಕಳ ಮದುವೆ ಮಾಡುವ ಜವಾಬ್ದಾರಿತೂ ಹೆಗಲ ಮೇಲಿತ್ತಲ್ಲ. ಹೀಗಾಗಿ ಅನಿವಾರ್ಯವಾಗಿ ಕೈಹಿಡಿತದಲ್ಲೇ ಖರ್ಚು-ವೆಚ್ಚಗಳನ್ನ ನಿಭಾಯಿಸುವ ಅನಿವಾರ್ಯತೆ ಅವರಿಗಿತ್ತು. ಹಾಗೆ ನೋಡಿದರೆ ಅಜ್ಜನಿಗೆ ಚಟಗಳೇನೂ ಇರಲಿಲ್ಲ. ನನ್ನಜ್ಜ ಧೂಮಪಾನಿಯಲ್ಲ. ಆದರೆ ಕುಡಿತದ ಶೋಕಿ ಚೂರಿತ್ತು, ಆದರೂ ತನ್ನ ಸ್ವಂತ ಖರ್ಚಿನಲ್ಲಿ ಅವರು ಕೊಂಡು ಕುಡಿದಿದ್ದನ್ನ ನಾಕಾಣೆ! ಯಾರೊ ಸಹುದ್ಯೋಗಿಗಳು ಕೊಡಿಸಿದ್ದಾರೆ ಅಪರೂಪಕ್ಕೊಮ್ಮೆ ಏರಿಸಿರಬಹುದಷ್ಟೆ. ಆಗಾಗ ನಶ್ಯ ಏರಿಸುವ ಸುಖ ಅನುಭವಿಸುವುದನ್ನ ಕಂಡಿದ್ದೆನಾದರೂ ಅದು ನಿರಂತರ ಹವ್ಯಾಸವೇನೂ ಆಗಿರಲಿಲ್ಲ. ಮನೆಗೆ ಬಂದಾಗಲೆಲ್ಲ ಬೆನ್ನಿಗೆ ಕೈ ಕಾಲಿಗೆ ತೆಂಗಿನೆಣ್ಣೆ ಮಾಲೀಸು ಮಾಡಿಸಿಕೊಂಡು ಬಿಸಿಬಿಸಿ ನೀರಲ್ಲಿ ಮೀಯುವ ಚಟ ಮಾತ್ರಾ ಸ್ವಲ್ಪ ಹೆಚ್ಚೇ ಇತ್ತು ಅವರಿಗೆ. ನಾವು ಕಿರಿಯರ್ಯಾರಾದರೂ ನಮ್ಮ ಪುಟ್ಟ ಪುಟ್ಟ ಕೈಗಳಿಂದ ಅವರು ಸಾಕು ಸಾಕು ಅನ್ನುವ ವರೆಗೂ ಬೆನ್ನಿಗೆ ಎಣ್ಣೆ ಹಚ್ಚಿ ತಿಕ್ಕ ಬೇಕಿತ್ತು. ಎಣ್ಣೆ ಹಚ್ಚಿದ ಉಪಕಾರಕ್ಕೆ ಅವರು ಒಂದು ಚೂರು ಚಿಕ್ಕಿ ದಯಪಾಲಿಸುತ್ತಿದ್ದರು ಅನ್ನೋದೇ ನಮ್ಮ ಅಂದಿನ ನಿಷ್ಕಾಮಕರ್ಮಕ್ಕೆ ಪ್ರೇರಕ ಶಕ್ತಿ! ಅದಾದ ಮೇಲೆ ಕಟ್ಟಿ ಕೊಂಡಿರುತ್ತಿದ್ದ ಬರೀ ಲಂಗೋಟಿಯಲ್ಲೆ ಮನೆ ಹಿತ್ತಲಿನಲ್ಲಿದ್ದ ತೆಂಗಿನ ಮರವನ್ನ ಏಣಿಯಿಟ್ಟು ಹತ್ತಿ ಅದರ ಕಸ ಕಿತ್ತು, ಹುಳ ಹುಪ್ಪಡಿ ಕೂರದಂತೆ ಅದರ ಮಡಿಲುಗಳ ಬುಡದಲ್ಲಿ ಅಲ್ಲಲ್ಲಿ ಉಪ್ಪು ತುಂಬಿ, ಪಕ್ಕದಲ್ಲಿದ್ದ ಗೊಬ್ಬರದ ಗುಂಡಿಯನ್ನೊಮ್ಮೆ ಮೇಲೆ ಕೆಳಗೆ ಮಾಡಿ ಹೊಸ ಸೊಪ್ಪು ತುಂಬಿ, ಹೊಸತಾಗಿ ಹಿತ್ತಲಲ್ಲಿ ಎರಡು ಗಿಡ ನೆಟ್ಟು, ಹಿಂದೆ ನೆಟ್ಟಿದ್ದ ಗಿಡಗಳ ಯೋಗಕ್ಷೇಮ ವಿಚಾರಿಸಿಕೊಳ್ಳುವ ಹೊತ್ತಿಗೆ ಅವರ ಬೆವರು ಬಸಿದು ಹೋಗಿರುತ್ತಿತ್ತು. ಅಲ್ಲಿಂದ ನೇರ ಕೊಟ್ಟಿಗೆಗೆ ಧಾವಿಸಿ ತಮ್ಮ ನೆಚ್ಚಿನ ದನಗಳಿಗಷ್ಟು ಅಟ್ಟದಿಂದ ಹುಲ್ಲೆಳೆದು ಹಾಕಿ ಅವುಗಳ ಗಂಗೆದೊಗಳು ತುರಿಸಿ ಅಲ್ಲಲ್ಲಿ ಅವಕ್ಕೆ ಅಂಟಿರಬಹುದಾದ ಉಣುಗನ್ನ ಕಿತ್ತು ಹಾಕುವ ಕಾಯಕ ಮಾಡುತ್ತಿದ್ದರು. ಅಷ್ಟಾಗುವಾಗ ಅಮ್ಮ ಹಂಡೆಯಲ್ಲಿ ಕುದಿಕುದಿ ನೀರು ತಯಾರಿಟ್ಟಿರುತ್ತಿದ್ದರು ಅಲ್ಲಿಗೆ ಅಜ್ಜನ ಮಹಾ ಮಜ್ಜನಕ್ಕೆ ವೇದಿಕೆ ಸಿದ್ಧ ವಾಗಿರುತ್ತಿತ್ತು. ಈ ಸ್ನಾನದ ಮಧ್ಯದಲ್ಲೊಮ್ಮೆ ಅಜ್ಜಿಗೆ ಅವರು ಬೆನ್ನುಜ್ಜಲು ಕೂಗು ಹಾಕೊದಿತ್ತು. ಅಜ್ಜಿ ಆಗ ಏನಾದರೂ ಕೆಲಸದಲ್ಲಿ ವ್ಯಸ್ಥವಾಗಿದ್ದರೆ ಆ ಹೊಣೆ ನನ್ನ ಅಥವಾ ಕಿರಿ ಚಿಕ್ಕಮನ ಕೈಗೆ ಬೀಳುತ್ತಿತ್ತು. ಬಿಡಿಸಿದ್ಸ ಕಾಯಿ ಜುಟ್ಟಿನಲ್ಲಿ ಅವರ ಎಣ್ಣೆಮಯ ಬೆನ್ನನ್ನು ಉಜ್ಜಿ ಉಜ್ಜಿ ಕುದಿ ನೀರನ್ನ ನಾವು ಚೋಪುತ್ತಿದ್ದೆವು. ಅಲ್ಲಿಗೆ ಅಜ್ಜ ಸಂತೃಪ್ತ ಸಂತೃಪ್ತ. ಮತ್ತರ್ಧ ಘಂಟೆ ಅದೇ ಹಬೆಯ ಮತ್ತಿನಲ್ಲಿ ಹಂಡೆ ಎದುರಿನ ಮಣೆಯ ಮೇಲೆ ಕೂತು ಮೆಲ್ಲ ಮೆಲ್ಲ ಮೀಯುತ್ತಾ, ತನ್ನ ಈ ಶೋಕಿಗೆ ಅಜ್ಜಿಯಿಂದ ಪದೆಪದೆ ಅಣಗಿಸಿಕೊಳ್ಳುತ್ತಾ ಅಂತೂ ಹಂಡೆಯ ಕೊನೆಹನಿ ನೀರು ಖಾಲಿಯಾಗುತ್ತಲೂ ಅಜ್ಜನ ಸ್ನಾನ ಕೊನೆಗೂ ಮುಗಿಯುತ್ತಿತ್ತು.


ಅಜ್ಜನ ಕಂಪನಿ ಇದ್ದದು ಸಾಗರದಲ್ಲಿ. ಅವರ ನಿತ್ಯದ ರೂಟು ಇದ್ದದ್ದು ಶಿವಮೊಗ್ಗದಿಂದ ಉಡುಪಿಗೆ. ಕಂಪನಿಯ ಗ್ಯಾರೇಜು ಶಿವಮೊಗ್ಗ ಹೊರವಲಯದ ತೀರ್ಥಹಳ್ಳಿ ರಸ್ತೆಯಲ್ಲಿತ್ತು. ಹತ್ತು ದಿನ ಅಥವಾ ಹದಿನೈದು ದಿನಕ್ಕೊಮ್ಮೆ ಅಜ್ಜ ಮನೆಗೆ ಬರುವುದಿತ್ತು. ಉಳಿದ ದಿನಗಳಲ್ಲಿ ಗ್ಯಾರೇಜಿನ ಮರದ ಬೆಂಚೆ ಅವರ ಶಯನ ತೂಲಿಕಾ ತಲ್ಪ. ಬೆಳಗ್ಯೆ ಐದು ಮೂವತ್ತಕ್ಕೆ ಶಿವಮೊಗ್ಗ ಬಿಡುತ್ತಿದ್ದ ಅವರ ಬಸ್ಸು "ವಿನಯ" ಮಧ್ಯಾಹ್ನ ಉಡುಪಿ ಮುಟ್ಟಿ ಅಲ್ಲಿಂದ ಎರಡೂವರೆಗೆ ಮರಳಿ ಹೊರಟು ರಾತ್ರಿ ಏಳೂವರೆಯ ಸುಮಾರಿಗೆ ಶಿವಮೊಗ್ಗ ಮುಟ್ಟುತಿದ್ದರು. ಹೋಲಿಕೆಯಲ್ಲಿ ಈ ಹೆಗಡೇರ ಬಸ್ಸು ಇನ್ನಿತರ ಮಿನಿ ಬಸ್ಸುಗಳಾದ "ಲಾವಣ್ಯ" "ಗಜೇಂದ್ರ"ಗಳಿಗಿಂತ ವೇಗದಲ್ಲಿ ನಿಧಾನ ಎಂಬ ಆರೋಪ ಹೊತ್ತಿದ್ದರೂ ಸುರಕ್ಷತೆಗೆ ಹೆಸರುವಾಸಿಯಾಗಿತ್ತು. ತಮ್ಮ ಸರ್ವಿಸಿನ ಉದ್ದಕ್ಕೂ ಅವರ ಸೇವಾವಧಿಯ ದಾಖಲೆಯಲ್ಲಿ ಅಫಘಾತದ ಕರಿಚುಕ್ಕೆಯಿಲ್ಲ. ಈ ಐದು ತಾಸಿನ ಒಮ್ಮುಖ ಪ್ರಯಾಣದಲ್ಲಿ ಅವರು ಎರಡು ಕಡೆ ಪ್ರಯಾಣಿಕರ "ಚಾ-ಕಾಪಿ"ಯ ನಿಲುಗಡೆ ನೀಡುತ್ತಿದ್ದರು. ಸಾಮಾನ್ಯವಾಗಿ ಈ ನಿಲುಗಡೆ ಬಸ್ಸಿನ ಚಾಲಕ ಹಾಗೂ ನಿರ್ವಾಹಕರ ಮರ್ಜಿಗೆ ಒಳಪಟ್ಟಿರುತ್ತಿತ್ತು. ಅಜ್ಜ ಒಂದು ನಿಲುಗಡೆ ತೀರ್ಥಹಳ್ಳಿಯಲ್ಲಿ ಅವರ ಗೆಳೆಯ ಕಾರಂತರ ಬಸ್ಟ್ಯಾಂಡ್ ಮಯೂರ ಹೋಟೆಲಿನ ಎದುರು ಕೊಡುತ್ತಿದ್ದರೆ, ಇನ್ನೊಂದನ್ನ ಸೋಮೇಶ್ವರದಲ್ಲಿ ಘಾಟಿ ಇಳಿವಲ್ಲಿದ್ದ ಕಾಮತರ ಮನೆ ಹೋಟೆಲಿನಲ್ಲಿ ಕೊಡುತ್ತಿದ್ದರು.

ಅಮ್ಮ ಚಳಿ-ಮಳೆ ಲೆಕ್ಖಿಸದೆ ರಾತ್ರಿ ಅದೆಷ್ಟೇ ಹೊತ್ತಿಗೆ ಹಾಸಿಗೆ ಸೇರಿದ್ದರೂ ಪ್ರತಿನಿತ್ಯ ನಸುಕಿನ ಐದಕ್ಕೆ ಹಾಸಿಗೆ ಬಿಟ್ಟೆದ್ದು, ಬೆಳಗಿನ ತಿಂಡಿಗೂ ಮೊದಲೆ ಅನ್ನ-ಸಾರನ್ನು ತರಾತುರಿಯಲ್ಲಿ ತಯಾರಿಸಿ ಅಜ್ಜನ ಮಧ್ಯಾಹ್ನದ ಬುತ್ತಿಯನ್ನ ತಯಾರಿಸಿ ಕಟ್ಟಿಟ್ಟು ಬಿಡುತ್ತಿದ್ದರು. ನೀರಿನ ಬಾಟಲಿ-ಚಾದ ಬಾಟಲಿ ಜೊತೆಗೆ ಬಟ್ಟೆಯ ಕೈ ಚೀಲವೊಂದರಲ್ಲಿ ಹಾಕಿಟ್ಟ ಆ ಊಟದ ಬುತ್ತಿಯನ್ನ ಮೊದಮೊದಲಿಗೆ ನನ್ನ ಚಿಕ್ಕಮ್ಮಂದಿರು ಬೆಳಗ್ಯೆ ಸಂಜೆ ಬಸ್ಟ್ಯಾಂಡ್'ಗೆ ಹೋಗಿ ತಲುಪಿಸಿ ಬರುತ್ತಿದ್ದರು. ಹೊತ್ತಿಗೊಬ್ಬರಂತೆ ಚಿಕ್ಕಮ್ಮಂದಿರು ಈ ಕೆಲಸವನ್ನ ಹಂಚಿಕೊಂಡು ಮಾಡುವ ಪೈಪೋಟಿಯ ಹಿಂದಿದ್ದ "ರಾಜರಹಸ್ಯ" ಏನೆಂಬುದು ಅರಿವಾದ ನಂತರ ನಾನೂ ಈ ಅನ್ನ ಹೊರುವ ಪುಣ್ಯ ಕಾರ್ಯದಲ್ಲಿ ಯಾರೂ ಬಯಸದೆ ಬಂದ(?) ಪಾಲುದಾರನಾದೆ. ಅಮ್ಮನ ಕಟ್ಟುನಿಟ್ಟಿಗೆ ಎದುರಾಡಲಾಗದೆ ತಮ್ಮ ಬೇಡಿಕೆ ಪಟ್ಟಿಗಳನ್ನೆಲ್ಲ ಒಳಗೊಳಗೇ ಅದುಮಿಡುತ್ತಿದ್ದ ಅವರಿಬ್ಬರಿಗೂ ಅಜ್ಜನ ಮುಂದೆ ಅವನ್ನ ಇಟ್ಟು ಮಂಜೂರು ಮಾಡಿಸಿಕೊಳ್ಳೋದು ಅಷ್ಟು ಕಷ್ಟವಾಗುತ್ತಿರಲಿಲ್ಲ. ಮೊದಮೊದಲು ಪ್ರತಿ ಬಾರಿ ಇಂತಹ ಬೇಡಿಕೆ ಬಂದಾಗಲೂ ಸಿಟ್ಟಾದಹಾಗೆ ವಾಡಿಕೆಯಂತೆ ನಟಿಸುತ್ತಿದ್ದ ಅಜ್ಜ. ಇನ್ನೇನು ಸ್ಟಿಯರಿಂಗ್ ಮುಂದಿನ ತಮ್ಮ ಸಿಂಹಾಸನದಲ್ಲಿ ವಿರಾಜಮಾನರಾಗುವ ಹೊತ್ತಲ್ಲಿ ಏನೋ ದೊಡ್ಡ ಯೋಜನೆಯೊಂದನ್ನು ಮಂಜೂರು ಮಾಡುವ ಪ್ರಧಾನಮಂತ್ರಿಯ ಗೆಟಪ್ಪಿನಲ್ಲಿ ಚಿಕ್ಕಮಂದಿರ ಚಿಲ್ಲರೆ ಬೇಡಿಕೆಗಳನ್ನೆಲ್ಲ ಕ್ಷಣಮಾತ್ರದಲ್ಲಿ ತಮ್ಮ ಜೇಬಿಗೆ ಕೈ ಇಳಿಸಿ ದಯಪಾಲಿಸಿ ಬಿಡುತ್ತಿದ್ದರು! ಅದಕ್ಕೂ ಮೊದಲು ಅವರಿಗೆ ಕಾರಂತರ ಹೋಟೆಲಿನ ಮಸಾಲೆದೋಸೆ ಅಥವಾ ಗೋಲಿಬಜೆಯ ಸಮಾರಾಧನೆ ನೊರೆನೊರೆ ಕಾಫಿಯೊಂದಿಗೆ ಆಗುತ್ತಿತ್ತು. ಇವೆರಡರ ಆಕರ್ಷಣೆಗೆ ಬಲಿಯಾದ ಚಿಕ್ಕಮ್ಮಂದಿರು ಅಪ್ಪನಿಗೆ ಬುತ್ತಿ ಹೊರಲು ಪೈಪೋಟಿ ನಡೆಸುವಾಗ ನಾನು ಎರಡನೆ ಕಾರಣಕ್ಕೆ ಮಾತ್ರ ಮನಸೋತಿದ್ದೆ. ಹಣ ಎಂಬ ಕ್ಷುಲ್ಲಕ ವಸ್ತುವಿನ ಮೌಲ್ಯ ಆಗಿನ್ನೂ ನನ್ನ ಮಡ್ಡ ತಲೆಗೆ ಏರಿರಲಿಲ್ಲವಲ್ಲ.

ಬಸ್ಸೊಂದು ತನ್ನ ಪ್ರಯಾಣದ ಮಧ್ಯೆ ಹೀಗೆ ಹೋಟೆಲಿನ ಮುಂದೆ ವಿರಾಮಾಕ್ಕೆ ನಿಂತಾಗ ಆಗುವ ವ್ಯಾಪಾರಕ್ಕೆ ಬದಲಾಗಿ ಹೋಟೆಲಿನ ಮಾಲೀಕ ಬಸ್ಸಿನ ಚಾಲಕ ಹಾಗೂ ನಿರ್ವಾಹಕರಿಗೆ ಪುಡಿಗಾಸು ಹಾಗೂ ಉಚಿತ ಕಾಫಿ-ತಿಂಡಿ ಒದಗಿಸುತ್ತಿದ್ದರು. ಆ ಉಚಿತ ತಿಂಡಿಯನ್ನ ಅಜ್ಜ ಬುತ್ತಿ ಕೊಂಡೊಯ್ಯುವ ನಮಗೆ ತಿನ್ನಿಸುತ್ತಿದ್ದರು. ಬೆಳಗ್ಯೆ ಗ್ಯಾರೇಜಿನ ತಮ್ಮ ಕೋಣೆಯಲ್ಲಿಯೇ ಕಾಸಿದ ಕಣ್ಣ ಚಹಾ (ಹಾಲು ಹಾಕದ ಚಹಾದ ಕಷಾಯ) ಹಾಗೂ ಒಣಗಿದ ಒಂದು ಬನ್ನನ್ನಷ್ಟೆ ಹೊಟ್ಟೆಗೆ ಹಾಕಿರುತ್ತಿದ್ದ ಆ ಜೀವ ನಿಜವಾದ ಬೆಳಗಿನ ತಿಂಡಿಯನ್ನ ಕಾಣುತ್ತಿದ್ದುದೆ ಸೋಮೇಶ್ವರದ ಕಾಮತರ ಮನೆ ಹೋಟೆಲನ್ನ ಮುಟ್ಟಿದಾಗ. ಆ ನಡುವೆ ಮೂರೂ ಮುಕ್ಕಾಲು ಘಂಟೆ ತಗಲುತ್ತಿದ್ದ ನೂರಾ ಹತ್ತು ಕಿಲೋಮೀಟರಿನ ಧೀರ್ಘ ಪ್ರಯಾಣಕ್ಕೆ ಅವರಿಗೆ ಬಲ ಸಿಗುತ್ತಿದ್ದುದು ಶಿವಮೊಗದ್ದಲ್ಲಿ ಕುಡಿದಿರುತ್ತಿದ್ದ ಕಣ್ಣ ಚಾ ಹಾಗೂ ಕಾರಂತರ ಹೋಟೆಲಿನ ಅರ್ಧ ಕಾಫಿಯಿಂದ ಮಾತ್ರ! ಈ ಹಸಿದ ಹೊಟ್ಟೆ ಹೊತ್ತೇ ಅವರು ನಿತ್ಯ ಸಾವಕಾಶವಾಗಿ ಪ್ರಯಾಣಿಕರಿಂದ ಕಿಕ್ಕರಿದು ತುಂಬಿದ ಬಸ್ಸನ್ನ ಕಡಿದಾದ ರಸ್ತೆಯ ಆಗುಂಬೆ ಘಾಟಿಯಲ್ಲಿಳಿಸುತ್ತಿದ್ದರು.

ಕಾರಂತರ ಹೋಟೆಲಿಗೆ ಹೋಗುವ ಬುತ್ತಿ ಯಾತ್ರೆಯಲ್ಲಿ ನಾನೂ ಬಾಲವಾದ ನಂತರ ನನಗೂ ಬೈಟು ಮಸಾಲೆ ದೋಸೆ ಸವಿಯುವ ಭಾಗ್ಯ ಲಭ್ಯವಾಯಿತು. ಮಸಾಲೆ ದೋಸೆ ಸಿಗುತ್ತಿದ್ದುದು ಅರ್ಧವೆ ಆದರೂ ಚಟ್ನಿ ಮಾತ್ರ ಮೂರ್ನಾಲ್ಕು ಬಾರಿ ಕೇಳಿ ಹಾಕಿಸಿಕೊಳ್ಳುತ್ತಿದ್ದೆ! ಕಾಫಿಗೆ ತುಂಬಾ ನೊರೆ ಬೇಕೇಬೇಕು ಅಂತ ನಾವಿಬ್ಬರೂ ಹಟ ಹಿಡಿಯುತ್ತಿದ್ದರಿಂದ ಅಡುಗೆ ಭಟ್ಟರು ಕೈಪಾತ್ರೆಯಲ್ಲಿ ಎತ್ತಿಎತ್ತಿ ಹೊಡೆದು ನೊರೆ ಎಬ್ಬಿಸಿಯೆ ಕಾಫಿ ಕೊಡುತ್ತಿದ್ದರು. ನೋರೆಯಿಲ್ಲದ ಕಾಫಿ ಕಾಫಿಯೇ ಅಲ್ಲ ಅನ್ನೋದು ನಮ್ಮ ಒಕ್ಕೊರಲ ಅಭಿಪ್ರಾಯವಾಗಿತ್ತು. ನಾವು ಬರಗೆಟ್ಟವರಂತೆ ದೋಸೆ ಮುಕ್ಕುತ್ತಿದ್ದದ್ದನ್ನ ಅಜ್ಜ ಅಕ್ಕರೆ ತುಂಬಿದ ಮಮತೆಯ ಕಂಗಳಿಂದ ದಿಟ್ಟಿಸುತ್ತಾ ಅರ್ಧ ಕಾಫಿ ಕುಡಿದು ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು! ಮನೆಯ ಏಕತಾನತೆಯ ತಿಂಡಿ ತಿನುಸುಗಳ ನಡುವೆ ನಮಗೆ ಸಿಗುತ್ತಿದ್ದ ಏಕೈಕ ಹೊರಗಿನ ತಿಂಡಿ ಎಂದರೆ ಇದೊಂದೆ.

ಇಂದು ಅದನ್ನೆಲ್ಲ ನೆನೆದರೆ ಅದೇ ಮಸಾಲೆ ದೋಸೆಗಾಗಿ ಒಂದು ಕಾಲದಲ್ಲಿ ಚಡಪಡಿಸುತ್ತಿದ್ದ ನನ್ನ ಕರಳು ಚುರುಕ್ ಎನ್ನುತ್ತದೆ. ತಾನು ಉಪವಾಸವಿದ್ದು ನಮ್ಮೆಲ್ಲರ ಹೊಟ್ಟೆ ತುಂಬಿಸಿದ್ದ ಅಜ್ಜ ಹಾಗೂ ಅಮ್ಮನ ತ್ಯಾಗಕ್ಕೆ ಕಣ್ತುಂಬಿ ಬರುತ್ತದೆ. ಬೆಳಗ್ಯೆ ಕಟ್ಟಿಕೊಟ್ಟ ಅನ್ನ ನೂರು ಕಿಲೋಮೀಟರ್ ದೂರದ ಉಡುಪಿ ಮುಟ್ಟುವಾಗ ಆರಿ ಸೆಖೆಗೆ ಹಳಸಿ ಹೋಗಿದ್ದರೂ, ಸಂಜೆಯ ಬುತ್ತಿ ಅರವತ್ತು ಕಿಲೋಮೀಟರ್ ದೂರದ ಶಿವಮೊಗ್ಗ ಮುಟ್ಟುವಾಗ ಆರಿ ತಣ್ಣಗಾಗಿ ಹೋಗಿದ್ದರೂ ಅಜ್ಜ ಅದನ್ನೆ ತಿಂದು ತಮ್ಮ ಎಲ್ಲಾ ಸುಖಗಳನ್ನ ನಮಗೆ ದಾಟಿಸಿ ಕಷ್ಟದಲ್ಲಿ ಬಾಳುವುದನ್ನೆ ಮನಪೂರ್ವಕವಾಗಿ ಆಯ್ದುಕೊಂಡಿದ್ದರು. ಇಂದು ನನ್ನಜ್ಜ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಸೇರಿದ್ದಾರೆ. ಅಮ್ಮ ಅವರನ್ನ ಮೊದಲಿನ ಅದೇ ಮುತುವರ್ಜಿಯಿಂದ ಅಷ್ಟೆ ಅಸ್ಥೆ ವಹಿಸಿ ನೋಡಿಕೊಳ್ಳುತ್ತಿದ್ದಾರೆ. ನಾವೆ ಅನ್ನದ ಬೆನ್ನು ಹತ್ತಿ ರುವ ಪಿಳ್ಳೆನೆವ ಹೇಳುತ್ತಾ ದೂರದ ಊರುಗಳಲ್ಲಿ ಗಾಣದೆತ್ತಿನಂತೆ ದುಡಿಯುತ್ತಾ ನಮ್ಮ ನೈತಿಕ ಜವಾಬ್ದಾರಿಗಳಿಂದ ನುಣುಚಿ ಕೊಳ್ಳುತ್ತಿದ್ದೆವೇನೋ ಅನ್ನುವ ಅಪರಾಧಿ ಪ್ರಜ್ಞೆ ಈ ನಡುವೆ ಎಡಬಿಡದೆ ಕಾಡುತ್ತಿದೆ.

Friday, September 14, 2012

ಬಿಡೆನು ನಿನ್ನ ಪಾದ.......


( ಒಂದು ಸೀಮೆಯ ಎಣ್ಣೆ ಪುರಾಣ! )

ಮಳೆ ನಾಡೂ ಆಗಿದ್ದ ಮಲೆನಾಡಿನ ತೀರ್ಥಹಳ್ಳಿ ಒಂಥರಾ ಬಸಿರಾದ ಮೋಡಗಳ ಹೆರಿಗೆ ಮನೆ. ಪರವೂರಿಗೆ ಮದುವೆ ಮಾಡಿಕೊಟ್ಟಿದ್ದರೂ ಮನೆ ಮಗಳಂದಿರಾದ ಮುಗಿಲ ಸುಂದರಿಯರು ತಪ್ಪದೆ ತಮ್ಮ ಪ್ರತಿ ಹೆರಿಗೆಗಾಗಿಯೂ ತಪ್ಪದೆ ತವರನ್ನೆ ಹುಡುಕಿಕೊಂಡು ಬಂದು ಮುಟ್ಟುತ್ತಿದ್ದರು. ಹೀಗಾಗಿ ಅಲ್ಲಿ ನಿರಂತರ ವರ್ಷದ ಎಂಟು ತಿಂಗಳೂ ಮಳೆಯದ್ದೆ ಕಾರುಬಾರು. ಅವರ ಹೆರಿಗೆ ಮಾಡಿಸುವ ಸೂಲಗಿತ್ತಿಯರಾಗುವ ನಿರಂತರ ಕೆಲಸಕ್ಕೆ ಮಾನಸಿಕವಾಗಿ ಸಿದ್ಧರಾಗಿರುತ್ತಿದ್ದ ಇಲ್ಲಿನ ಸತ್ಪ್ರಜೆಗಳು ತಮ್ಮ ಎಲ್ಲಾ ಸಣ್ಣತನಗಳ ಸಹಿತ ಮಳೆಯನ್ನೂ ಮನೆಯ ಸದಸ್ಯನಂತೆಯೆ ಪರಿಗಣಿಸಿ ಅದರ ಬಗ್ಗೆ ಪರಮ ನಿರ್ಲಕ್ಷ್ಯ ವಹಿಸುವುದನ್ನು ರೂಢಿ ಮಾಡಿಕೊಂಡಿದ್ದರು. ಅಪರೂಪಕ್ಕೆ ಬರುವ ನೆಂಟರಿಗೆ ಮಾತ್ರ ತಾನೆ ವಿಶೇಷ ಮರ್ಯಾದೆ? ದಿನ ಬಿಟ್ಟು ದಿನ ಬರುವವಳು ಮನೆ ಮಗಳೇ ಆಗಿರಲಿ ಏನೀಗ? ಅನ್ನೋ ಉದಾಸೀನತೆ ಅದು. ಮಳೆಗೆ ಕ್ಯಾರೆ ಅನ್ನದೆ ತೀರ್ಥಹಳ್ಳಿ ತನ್ನ ಸೀಮಿತ ಪ್ರಪಂಚದಲ್ಲಿ ಸದಾ ತನ್ಮಯವಾಗಿಯೇ ಇರುವುದನ್ನು ಅಭ್ಯಾಸ ಮಾಡಿಕೊಂಡಿತ್ತು. ಎಲ್ಲರ ಮನೆಗೂ ಇಂದಿನಂತೆ ಅಡುಗೆ ಅನಿಲ ಸಂಪರ್ಕ ಇದ್ದಿಲ್ಲದ ದಿನಗಳವು. ಅಂದಿಗೆ ಅದು ಕೇವಲ ಉಳ್ಳವರ ಸೊತ್ತಾಗಿದ್ದು, ಮೇಲ್ಮಧ್ಯಮವರ್ಗ ಕರೆಂಟಿನ ಜೊತೆ ಸೀಮೆ ಎಣ್ಣೆಯನ್ನೂ ಹೊಂದಿಸಿಕೊಂಡು ಹೇಗೋ ಕಾಳಿಬೋಳಿ ಮಾಡಿ ಕಾಲ ಹಾಕುತ್ತಿದ್ದರೆ, ಬಡವರ್ಗ ಕೇವಲ ಸೀಮೆ ಎಣ್ಣೆಗೆ ಶರಣು ಹೋಗಿರುತ್ತಿತ್ತು. ಸರಕಾರಿ ನ್ಯಾಯ ಬೆಲೆ ಅಂಗಡಿಯ ಸೀಮೆ ಎಣ್ಣೆ ವಿತರಕ ಪದ್ಮನಾಭ ಪಟ್ಟಣದ "ವಿನೀತ" (ಈ ವಿನೀತ ಭಾವ ನೀರ ಮೇಲಿನ ಗುಳ್ಳೆಯಂತೆ ಸೀಮೆ ಎಣ್ಣೆ ಕೊಡುವ ದಿನಕ್ಕೆ ಮಾತ್ರ ಸೀಮಿತ ಅನ್ನೋದು ಗಮನಾರ್ಹ) ಪ್ರಜೆಗಳ ಪಾಲಿಗೆ ಸೀಮೆ ಎಣ್ಣೆ ಸ್ಟಾಕ್ ಇರುವ ಎರಡು ಮೂರು ದಿನ ಸಾಕ್ಷಾತ್ ಧರೆಗಿಳಿದ ಭಗವಂತನೆ ಆಗಿರುತ್ತಿದ್ದ.

ನೊರೆನೊರೆ ಸೀಮೆಎಣ್ಣೆಯನ್ನ ಆತ ಮೊಗೆ ಮೊಗೆದು ಕೊಡುವಾಗ ಕ್ಷೀರ ಸಾಗರದಿಂದ ಆತ ಅಮೃತವನ್ನೇ ಮೊಗೆದು ತಮ್ಮ ಬಾಟಲು-ಕ್ಯಾನುಗಳಿಗೆ ಯಥಾಶಕ್ತಿ ತುಂಬುತ್ತಿದ್ದಾನೇನೋ(?) ಎನ್ನುವಂತೆ ಭಕ್ತಿ ಪರವಶರಾಗಿ ಅವನ ಟೆಂಪರ್ವರಿ ಭಕ್ತ ಕೋಟಿ ಅರ್ಧ ನಿಮೀಲಿತ ಕಣ್ಣುಗಳಿಂದಲೆ ಆ ಪುಣ್ಯ ಕಾರ್ಯವನ್ನ ದಿಟ್ಟಿಸುತಿದ್ದರು. ತಮ್ಮ ಕ್ಯಾನಿನ ಸರದಿ ಬಂದ ಆ ಶುಭ ಸಮಯದಲ್ಲಿ ಕಳೆದ ನಾಲ್ಕಾರು ಘಂಟೆಗಳ ಕಾಲ ಕೇವಲ ಹತ್ತು ಲೀಟರ್ ಸೀಮೆಎಣ್ಣೆಗಾಗಿ ಅಂಗಡಿಯ ಅಂಗಳ ದಾಟಿ ರಸ್ತೆಯಾಚೆ ಮುಂದೆ ಹೋಗಿದ್ದ ಉದ್ದಾನುದ್ದಾ ಸಾಲಿನಲ್ಲಿ ನಿಂತು ಜಾತಕ ಪಕ್ಷಿಯಂತೆ ಕಾತರಿಸಿದ್ದ ಕಾಲು ನೋವೆಲ್ಲ ಅವರಿಗೆ ಮರೆತೆ ಹೋಗಿರುತ್ತಿತ್ತು. ಸೀಮೆಎಣ್ಣೆಗೆ ಪೈಪೋಟಿ ಕೊಡುವಂತೆ ಎಣ್ಣೆ ಸುರಿಯುತ್ತಿದ್ದ ವಿತರಕನ ಎಣ್ಣೆಮುಖವೂ ಆ ಒಂದು ಕ್ಷಣ ಪ್ರಪಂಚದಲ್ಲಿಯೆ ಪರಮ ಸುಂದರವಾಗಿ ಅವರ ಸೋತು ಸುಣ್ಣವಾದ ಕಣ್ಣಿಗೆ ಕಾಣಿಸುತ್ತಿತ್ತು. ಇನ್ನೂ ಅವನ ಕೃಪಾ ಕಟಾಕ್ಷ ಗಿಟ್ಟಿಸಿ ನಾಲ್ಕಾರು ಹಾನಿ ಹೆಚ್ಚು ಹಾಕಿಸಿ ಕೊಳ್ಳುವ ತವಾಕ ದಲ್ಲಿ ಕೆಲವರಂತೂ ಆವನ ಮುಂದೆ ವಿಪರೀತ ವಿನಯ ನಟಿಸುತ್ತಿದ್ದರು. ಅದೇನೆ ಇದ್ದರು ಆತ ಲೀಟರಿನಲ್ಲಿ ಕನಿಷ್ಠ ಹತ್ತರಲ್ಲೊಂದು ಭಾಗ ಮುಲಾಜಿಲ್ಲದೆ ದೋಖಾ ಹಾಕುತ್ತಿದ್ದ. ಅದರರಿವಿಲ್ಲದ ಈ ಮುಗ್ಧರು ಅಂತಹ ಯಕಶ್ಚಿತ್ ಮೋಸಕ್ಕೆಲ್ಲ ತಾವು ತಲೆಕೆಡಿಸಿಕೊಳ್ಳದೆ ಬರುವ ತಿಂಗಳು ಮತ್ತೆ ಯಾವತ್ತು ಮತ್ತೆ ಈ ಕ್ಯೂ ನಿಲ್ಲಬೇಕು? ಅಲ್ಲಿಯವರೆಗೂ ಈ ತಿಂಗಳ ಕೋಟಾವನ್ನ ಹೇಗೆ ಸಂಭಾಳಿಸಿಕೊಳ್ಳಬೇಕು ಅಂತ ಮನದಲ್ಲಿಯೇ ಲೆಕ್ಖ ಹಾಕುತ್ತಾ ಮನೆಯ ಹಾದಿ ಹಿಡಿಯುತ್ತಿದ್ದರು. ಈ ಸಭ್ಯತೆಯ ಸೋಗೆಲ್ಲ ಕೇವಲ ಆ ಮೂರು ಪವಿತ್ರ ದಿನಗಳೊಂದಿಗೆ ಮುಗಿದು ಹೋಗಿ ಮುಂದಿನ ಕೋಟಾದ ದಿನ ತಡವಾದನ್ತೆಲ್ಲ (ಅದು ಹೇಗೊ ಪ್ರತಿ ತಿಂಗಳೂ ಸೀಮೆಎಣ್ಣೆ ತೀರ್ಥಹಳ್ಳಿಗೆ ತಡವಾಗಿಯೆ ಬರುತ್ತಿತ್ತು! ಎಂದೂ ಸರಿಯಾದ ತಾರೀಕಿಗೆ ಬಂದದ್ದೆ ಇಲ್ಲ. ಅದೊಂಥರಾ ಭಾರತೀಯ ರೈಲಿನಂತೆ! ) ವಿತರಕನ ಅಕ್ಕ-ಅಮ್ಮನನ್ನೂ ಬಿಡದೆ ಮನೆಯಲ್ಲೆ ಕೂತು ಅವನ ಎಲ್ಲಾ ಕುಟುಂಬಸ್ಥರ ಜನ್ಮವನ್ನ ಬಾಯಿ ಸೋಲುವವರೆಗೂ ಜಾಲಾಡುತ್ತಿದ್ದರು.ಬಾಯಿ ಸೋತ ನಂತರ ಸುಮ್ಮನಾಗದೆ ವಿಧಿಯಿರುತ್ತಿರಲಿಲ್ಲ!

ಶಾಲೆಗೇ ಹೋಗುವ ಮಕ್ಕಳು ತಮ್ಮ ಪೋಷಕರ ಪ್ರತಿನಿಧಿಗಳಾಗಿ ಮೊದಲಿಗೆ ತಮ್ಮತಮ್ಮ ಕ್ಯಾನ್'ಗಳೊಂದಿಗೆ ಬಂದು ತಮ್ಮ ಸಹ ಸ್ಪರ್ಧಿ ಗಳೊಡನೆ ಕುಸ್ತಿ ಮಾಡಿಯಾದರೂ ಸರಿ ಸಾಲಿನಲ್ಲಿ ಆದಷ್ಟು ಮುಂದಿನ ಜಾಗವನ್ನ ಖಾತ್ರಿ ಮಾಡಿಕೊಳ್ಳುತ್ತಿದ್ದರು. ಭವ್ಯ ಭಾರತದ ಮುಂದಿನ ಭವಿಷ್ಯವಾದ ಅವರಿಗೆ ಮುಂದಿನ ಹೋರಾಟದ ಬದುಕಿಗೆ ಇದೊಂದು ಪ್ರಶಸ್ತ ರಂಗತಾಲೀಮಿನ ಸ್ಥಳವಾಗಿರುತ್ತಿತ್ತು. ಇಲ್ಲಿ ಜಯಿಸಿದವನು ಎಲ್ಲೂ ಜಯಿಸಬಹುದು ಎನ್ನುವ ಆತ್ಮ ವಿಶ್ವಾಸವನ್ನದು ಮೂಡಿಸುತ್ತಿತ್ತು. ಮನೆಗೆದ್ದವ ತಾನೆ ಮಾರು ಗೆಲ್ಲುವುದು! ಇಷ್ಟಾಗಿಯೂ ಕೆಲವರಿಗೆ ಸಾಲಿನ ಬಾಲದ ಕಡೆಯಿಂದ ಮೊದಲನೆಯವರಾಗುವುದರಿಂದ ತಪ್ಪಿಸಿಕೊಳ್ಳೋಕೆ ಆಗ್ತಲೇ ಇರಲಿಲ್ಲ! ಇನ್ನು ಮಕ್ಕಳ ಹಿಂದೆಯೆ ಧಾವಿಸಿ ಬರುತ್ತಿದ್ದ ಹಿರಿಯರು ಕ್ಷಣಕಾಲ ತಮ್ಮ ಸಾಂಸಾರಿಕ ತಾಪತ್ರಯಗಳನ್ನೆಲ್ಲ ಮರೆತು, ದುಃಖ-ದುಮ್ಮಾನಗಳನ್ನೆಲ್ಲ ನಿಯಂತ್ರಣಕ್ಕೆ ತಂದುಕೊಂಡು ಮುಂದಿನ ಮೂರು ಘಂಟೆಗಳ ಕಾಲ ಸಾಲಿನಲ್ಲಿಯೆ ನಿರ್ಲಿಪ್ತರಾಗಿ ನಿಂತು ತಮ್ಮ ಪಾಲಿಗೆ ಬರುವ ಪಂಚಾಮೃತಕ್ಕಾಗಿ ಕಾಯುವ ಮನಸ್ಥಿತಿಯನ್ನ ಮೈಗೂಡಿಸಿ ಕೊಳ್ಳುತ್ತಿದ್ದರು. ಅದೊಂತರಾ ಧ್ಯಾನಸ್ತ ಸ್ಥಿತಿ.

ಅಂದಮಾತ್ರಕ್ಕೆ ಹೀಗೆ ಬಂದು ಸಾಲು ನಿಂತ ಎಲ್ಲರಿಗೂ ಸೀಮೆ ಎಣ್ಣೆ ಅಂದೆ ಸಿಗಬೇಕೆಂಬ ನಿಯಮವೇನೂ ಇಲ್ಲ! ಮಧ್ಯದಲ್ಲಿಯೆ ಸೀಮೆಎಣ್ಣೆಯ ಸ್ಟಾಕ್ ಮುಗಿದು ಹೋಗಬಹುದು. ಅಥವಾ ಈ ಸಾರಿ ಕೆಲವೊಂದು ನಿರ್ದಿಷ್ಟ ಸರಣಿ ಸಂಖ್ಯೆಯ ಕಾರ್ಡುದಾರರಿಗೆ ತಡವಾಗಿ ವಿತರಿಸಬೇಕು ಎನ್ನುವ ಸರಕಾರಿ ಸುತ್ತೋಲೆ ಬಂದಿರಬಹುದು, ಹೀಗೆ ಅಂತ ಹೇಳೋಕಾಗಲ್ಲ! ಇಂತಹ ಅನಿರೀಕ್ಷಿತ ಕಂಟಕಗಳು ಎದುರಾಗದಿರಲಿ ಅಂತ ಆ ಜಗನ್ನಿಯಾಮಕನಲ್ಲಿ ಮೊರೆಯಿಡುವುದನ್ನು ಬಿಟ್ಟು ಈ ಬಡಪಾಯಿ ಹುಲು ಮಾನವರಿಗೆ ಬೇರೆ ಇನ್ನೇನನ್ನೂ ಮಾಡಲಾಗುತ್ತಿರಲಿಲ್ಲ. ಹೀಗಾಗಿಯೆ ಬಹುಷಃ ಊರಿನ ಎಲ್ಲರೂ ತಪ್ಪದೆ ಸಂಕಷ್ಟಹರವೃತ, ಏಕಾದಶಿ ಉಪವಾಸ, ಮಾಂಸಹಾರಿಗಳಾಗಿದ್ದರೆ ನಿರ್ದಿಷ್ಟ ದಿನಗಳಂದು ಸಸ್ಯಾಹಾರಕ್ಕೆ ಕಟಿಬದ್ಧತೆ ಹಾಗೂ ಗೊತ್ತು ಪಡಿಸಿದ ದಿನ ಗೊತ್ತು ಪಡಿಸಿದ ದೇವಸ್ತಾನಕ್ಕೆ ತಪ್ಪದೆ ಹೋಗಿ ಭಗವಂತನಿಗೆ ಹಣ್ಣು ಕಾಯಿ ಮಾಡಿಸಿ ದೀನವಾಗಿ ಅಡ್ಡಬಿದ್ದು ಆರ್ತವಾಗಿ ಮೊರೆಯಿಡುವುದನ್ನು ರೂಢಿಸಿಕೊಂಡಿದ್ದರು. ಜನರಲ್ಲಿ ಆಸ್ತಿಕ ಭಾವವನ್ನ ಜಾಗೃತವಾಗಿಡುವಲ್ಲಿ ಸೀಮೆ ಎಣ್ಣೆಯ ಪಾತ್ರ ಹಿರಿದಾಗಿರುತ್ತಿತ್ತು. ಎನ್ ಮಾಡ್ತೀರಿ ಸೀಮೆಎಣ್ಣೆ ಎಂಬ ಮಾಯಾ ಲೋಕದ ವಸ್ತುವಿಗಾಗಿ ಜನ ಬೇಕಿದ್ದರೆ ನ್ಯಾಯ ಬೆಲೆ ಅಂಗಡಿಯವರೆಗೂ ತೆವಳಿ ಬರಲೂ ಸಿದ್ಧರಾಗಿದ್ದ ಆ ಕಾಲದಲ್ಲಿ ಈ ಹರಕೆ ಉಪಾವಾಸ ವನವಾಸಗಳೆಲ್ಲ ಯಾವ ಲೆಕ್ಖ! ಹೀಗಿದ್ದೂ ಅವರು ನಂಬಿದ್ದ ಭಗವಂತ ತಾನು ಕಲ್ಲು ಎನ್ನುವುದನ್ನು ಕಾಲಕಾಲಕ್ಕೆ ಸೀಮೆಎಣ್ಣೆಯ ಅನಾವೃಷ್ಟಿ ಸೃಷ್ಟಿಸಿ ಸಾಬೀತು ಪಡಿಸುತ್ತಿದ್ದ. ಇದರಲ್ಲಿ ಸೀಮೆ ಎಣ್ಣೆ ವಿತರಕ ಪದ್ಮನಾಭನ ಕೈವಾಡ ಇರೋದು ಎಲ್ಲರಿಗೂ ಸ್ಪಷ್ಟವಿದ್ದರೂ ಇದೆಲ್ಲ ತಮ್ಮ ಜನ್ಮಜನ್ಮಾಂತರದ ಕರ್ಮ ಎಂದು ನಿಡುಸುಯ್ದು ತಮ್ಮ ದುರ್ವಿಧಿಯನ್ನ ಅನುಭವಿಸುವುದನ್ನೇ ಎಲ್ಲರೂ ಅಭ್ಯಾಸ ಮಾಡಿಕೊಂಡಿದ್ದರು. ತಾವೊಂದು ಬಗೆದರೆ ವಿಧಿ ತೀರ್ಥಹಳ್ಳಿಯ ನಾಗರೀಕರ ಪಾಲಿಗೆ ಪ್ರತಿ ತಿಂಗಳೂ ಇನ್ನೇನನ್ನೋ ಬಗೆದಿರುತ್ತಿತ್ತು.

ಆಗಾಗ ಕೈ ಕೊಡುವ ಕರೆಂಟು. ಸದಾ ಮಳೆಯ ರೇಜಿಗೆ ಇರೋದರಿಂದ ಹಸಿ ಕಟ್ಟಿಗೆಯಲ್ಲಿಯೇ ಹಂಡೆಯ ನೀರು ಕಾಯಿಸುವ ಹಣೆಬರಹ. ಅಡುಗೆಯ ಒಲೆಗೂ ಅದರಲ್ಲಿಯೆ ಹೊಂದಿಸಿಕೊಂಡು ತಿಂಗಳು ಪೂರ್ತಿ ಸಂಭಾಳಿಸ ಬೇಕಾಗುತ್ತಿದ್ದ ಕರ್ಮ, ಮನೆಯ ಅಡುಗೆಯ ಹೊಣೆ ಹೊತ್ತ ಹೆಂಗಸರಿಗಂತೂ ಪ್ರತಿ ತಿಂಗಳ ಕೊನೆ ದಿನಗಳನ್ನ ದೂಡುವುದು ಪರಮ ಹಿಂಸೆಯಾಗಿ ಪರಿಣಮಿಸುತ್ತಿತ್ತು. ತೀರ್ಥಹಳ್ಳಿಯಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಇದ್ದ ಹಂಡೆ ಒಲೆ ಈ ಕಾಲದಲ್ಲಿ ಮಂಗಮಾಯವಾಗಿದೆ. ಆ ಜಾಗದಲ್ಲಿ ಬಾಯ್ಲರ್- ಗೀಸರ್- ಗ್ಯಾಸ್ ಗೀಸರ್'ಗಳು ಪ್ರತಿಷ್ಟಾಪಿತವಾಗಿವೆ . ಫೋನು ಮಾಡಿ ಮುಂಗಡ ಕಾದರಿಸಿದ ವಾರಕ್ಕೆಲ್ಲ ಅಡುಗೆ ಅನಿಲ ತಪ್ಪದೆ ಮನೆ ಬಾಗಿಲಿಗೆ ಬರುವುದರಿಂದ ಬಹುಷಃ ಸೀಮೆಎಣ್ಣೆ ವಿತರಿಸುವ ನ್ಯಾಯ ಬೆಲೆ ಅಂಗಡಿಗೆ ಮೊದಲಿನ ಗ್ಲಾಮರ್ ಕೂಡ ಉಳಿದಿಲ್ಲ. ದುರಂತವೆಂದರೆ ಇಂದಿನ ಮಕ್ಕಳಿಗೆ ಈ "ಸೀಮೆಎಣ್ಣೆ " ಅಂದರೆ ಏನು? ಆನ್ನೋದರ ಅರಿವೆ ಇಲ್ಲ. ಕಾಲ ನಿಜಕ್ಕೂ ಬದಲಾಗಿದೆ. ಇಪ್ಪತ್ತು ವರ್ಷಗಳಲ್ಲಿ ಅದೆಷ್ಟು ಬದಲಾವಣೆಯ ಗಾಳಿ ಬೀಸಿದೆ ಅನ್ನೋದನ್ನ ಯೋಚಿಸುವಾಗ ವಿಸ್ಮಯವಾಗುತ್ತದೆ.

ಮಳೆಯ ನೆನಪಲ್ಲಿ....



ಮಳೆಯೆಂದರೆ ನನಗ್ಯಾಕಷ್ಟು ಇಷ್ಟ? ಅನ್ನುವ ಪ್ರಶ್ನೆಗೆ ನನ್ನ ಬಳಿಯೆ ಖಚಿತ ಉತ್ತರವಿಲ್ಲ. ಆದರೆ ಮನೋವೈಜ್ಞಾನಿಕ ನೆಲೆಯಲ್ಲಿ ಇದನ್ನ ವಿಶ್ಲೇಷಿಸಬಲ್ಲೆ. ನಾನು ಹುಟ್ಟಿದ್ದ ವರ್ಷ ಅತಿವೃಷ್ಟಿಯಾಗಿತ್ತು. ತುಂಗೆ ಅಪಾಯದ ಮಟ್ಟ ಮೀರಿ ಹರಿದು ತೀರ್ಥಹಳ್ಳಿಯಲ್ಲಿನ ನದಿಪಾತ್ರದಲ್ಲಿ ಸಾಕಷ್ಟು ಆಸ್ತಿ-ಜೀವ ಹಾನಿಯಾಗಿತ್ತು. ತುಂಗಾತೀರದ ಛತ್ರಕೇರಿ, ರಥಬೀದಿಗಳಲ್ಲಿನ ಜನರನ್ನ ಸ್ಥಳಾಂತರಿಸಿದ್ದರೆ ಸೇತುವೆಯಾಚೆಯ ಕುರುವಳ್ಳಿ ಹಾಗೂ ಬೊಮ್ಮರಸಯ್ಯನ ಅಗ್ರಹಾರದ ನಿವಾಸಿಗಳನ್ನೂ ಮನೆ ಬಿಡಿಸಲಾಗಿತ್ತು. ನಾನಿನ್ನೂ ತೀರ್ಥಹಳ್ಳಿಯಲ್ಲಿದ್ದಾಗಲೊಮ್ಮೆ ಅಡುಗೆ ಕೆಲಸದಲ್ಲಿ ಸಹಾಯ ಮಾಡಲು ಕಲ್ಲು ಸಾರದಾಚೆಯ ಪುತ್ತಿಗೆ ಮಠಕ್ಕೆ ಹೋಗಿದ್ದೆ. ಅಲ್ಲಿ ೧೯೮೨ರ ಅಗೊಸ್ತು ೨೬ರಂದು ದೊಡ್ಡ ನೆರೆ ಬಂದಾಗ ನೀರು ಇಲ್ಲಿಗೆ ಮುಟ್ಟಿತ್ತು ಅಂತ ನೆಲ ಮಹಡಿಯ ಸೂರಿನ ಹತ್ತಿರ ಬಾಣದ ಗುರುತು ಹಾಕಿ ಬರೆದಿದ್ದನ್ನ ಓದಿದಾಗ ಗಾಬರಿಯಾಗಿದ್ದೆ. ಏಕೆಂದರೆ ಅಂದೇ ನನ್ನ ಹುಟ್ಟಿನ ದಿನ.

ಬಹುಷಃ ಹುಟ್ಟುವ ಕ್ಷಣದಲ್ಲಿ ಧಾರಾಕಾರ ಮಳೆಯ ಇರುಳಿದ್ದಿರಬೇಕು, ಗುಡುಗಿನ ಆರ್ಭಟದ ಸದ್ದನ್ನ ಕಿವಿ ತುಂಬಿಸಿ ಕೊಂಡೆ ನಾನು ಕಷ್ಟಮಯಯೂ-ಠಕ್ಕಮಯವೂ ಆದ ಈ ಸುಂದರ ಪ್ರಪಂಚಕ್ಕೆ ಉರುಳಿ ಬಿದ್ದೆನೇನೋ. ನನ್ನ ಅಳುವಿನ ಆರ್ಭಟ ಮಳೆಯ ಆರ್ಭಟದ ಮುಂದೆ ಸೋತು ಸಪ್ಪಗಾಗಿ ಮಳೆಯ ಏಕತಾನವನ್ನ ಕೇಳುತ್ತಾ ಪ್ರಪಂಚದಲ್ಲಿ ಬಾಳುವ ಕಲೆಯ ತರಗತಿಗೆ ಭರ್ತಿಯಾದೆನೇನೋ. ಅದಕ್ಕೇನೆ ನನಗೆ ಮಳೆ ಹಾಗೂ ಕತ್ತಲೆಯೆಂದರೆ ಅಗತ್ಯಕ್ಕಿಂತ ಜಾಸ್ತಿ ಆಪ್ತತೆ ಅನ್ನಿಸುತ್ತದೆ. ಬಾಲ್ಯದುದ್ದಕ್ಕೂ ಆತ್ಮಸಖನಂತೆ ಮಳೆ ಬದುಕನ್ನ ಆವರಿಸಿತ್ತು. ಬೆಳೆಯುತ್ತಾ ಬಂದಂತೆ ಪಿರಿಪಿರಿಗುಟ್ಟುವ ಮಳೆ ಕೆಲವೊಮ್ಮೆ ರೇಜಿಗೆ ಹುಟ್ಟಿಸುತ್ತಿದ್ದುದೂ ಸುಳ್ಳಲ್ಲ. ಶಾಲೆಗೇ ಹೋಗುವಾಗ ನನ್ನ ಹತ್ತಿರ ಇದ್ದದು ಒಂದೇ ಜೊತೆ ಸಮವಸ್ತ್ರ. ವಾರವಿಡೀ ಒಂದನ್ನೇ ಒಗೆಯದೆ ಹಾಕಿಕೊಲ್ಲುವುದಂತೂ ಅಸಾಧ್ಯದ ಮಾತು ಅದನ್ನ ಒಗೆದು ಹಾಕಿದರೆ ಒಣಗಲು ಆ ತೆವದಿಂದ ಕೂಡಿದ ವಾತಾವರಣದಲ್ಲಿ ಕನಿಷ್ಠ ಮೂರ್ನಾಲ್ಕು ದಿನಗಳಾದರೂ ಬೇಕೆ ಬೇಕು. ಆದರೆ ಅದಕ್ಕೆ ಅವಕಾಶವೆಲ್ಲಿ? ಹಿಡಿದ ಮಳೆ ಕ್ಷಣವಾದರೂ ಬಿಟ್ಟರೆ ತಾನೇ ಆ ಆಲೋಚನೆ. ಹೀಗಾಗಿ ಮಳೆಯಲ್ಲಿ ಇನ್ನೂ ಒದ್ದೆಯಾಗಿಯೇ ಇರುತ್ತಿದ್ದ ಹಸಿ ಚಡ್ಡಿಗಳನ್ನ ಹಾಕಿ ಹಾಕಿ ಸೊಂಟದ ಸುಟ್ಟ ಫಂಗಸ್ ಖಾಯಮಾಗಿ ಆಗುತ್ತಿದ್ದವು. ಇದು ಸಾಲದು ಎಂಬಂತೆ ಅಂಗಿ ಬಟ್ಟೆಯ ಮೇಲೆ ನೀರ ಕಲೆ ಉಳಿದು ಕಪ್ಪುಕಪ್ಪು ಚುಕ್ಕಿಗಳಾಗಿ ಉಳಿದು ಬಿಡುತ್ತಿತ್ತು. ಆಗೆಲ್ಲಾ ವಿಪರೀತ ಸಿಟ್ಟು ಉಕ್ಕುತ್ತಿತ್ತು ಮಳೆಯ ಮೇಲೆ.

ಅಮ್ಮ ಬೆಳಗ್ಯೆ ಸಂಜೆ ಕರೆದು ಬಾಟಲುಗಳಲ್ಲಿ ಹಾಕಿಟ್ಟ ಹಾಲನ್ನ ಕೊಡೋದಕ್ಕೆ ಹೋಗಲೂ ಮಳೆಯ ಕಾಟ. ಒಂದು ಕಂಬಳಿ ಕೊಪ್ಪೆಗೆ ಹೊಂದುವ ಒಳಗೆ ಜಾಡಿ ಹಾಕಿಟ್ಟ ಪ್ಲಾಸ್ಟಿಕ್ಕಿನ ಗೊಬರೊಂದು ನನಗಾಗಿ ಮಾಡಿಟ್ಟಿದ್ದರು ಕೊಡೆ, ರೈನ್'ಕೋಟ್ ಯಾವೊಂದರ ಕಲ್ಪನೆಯೂ ಇಲ್ಲದ ದಿನಗಳವು. ನಾನು ಈ ಗೊಬರೊಳಗೆ ಅಡಗಿಕೊಂಡು ಮನೆಮನೆಗೂ ಹೋಗಿ ಹಾಲನ್ನ ತಲುಪಿಸಿ ಬರುತ್ತಿದ್ದೆ. ಹಾಕಿರುತ್ತಿದ್ದ ಹವಾಯಿ ಚಪ್ಪಲಿಯ ಕೃಪೆಯಿಂದ ಬೆನ್ನಿನ ಭಾಗದಲ್ಲಿ ಕೆಸರು ಸಿಡಿದು ರಾಡಿಯಾಗಿರುತ್ತಿತ್ತು. ಮಳೆಯೆಂದರೆ ಮನೆಯ ಸುತ್ತ ವಿಪರೀತ ಎರೆಹುಳ(ನಕ್ರು), ಮಳೆಯೆಂದರೆ ಕತ್ತಲಲ್ಲಿ ಮಲಗುವ ಹೊತ್ತಲ್ಲಿ ಗೊಂಕರು ಕಪ್ಪೆಗಳ ನಿರಂತರ ಡ್ರೊಂಕ್ ಡ್ರೊಂಕ್ ಗಾಯನ, ಮಳೆಯೆಂದರೆ ಮನೆಯ ಅಂಗಳ-ಹಿತ್ತಲಲ್ಲೆಲ್ಲ ಜಾರುವ ಪಾಚಿ ಹಾವಸೆಯ ಕಾಟ, ಮಳೆಯೆಂದರೆ ಕರೆಂಟು ಕೈಕೊಡುವ ಸಂಜೆಗಳು, ಮಳೆಯೆಂದರೆ ಸಂಜೆ ಚಾದ ಜೊತೆ ಸವಿಯಲಿಕ್ಕೆ ಹಲಸಿನ ಹಪ್ಪಳ, ಮಳೆಯೆಂದರೆ ಅಪರೂಪದ ಅರಿಶಿನದೆಲೆಯ ಕಡುಬು ಬೆಳಗಿನ ತಿಂಡಿಗೆ, ಮಳೆಯೆಂದರೆ ಬೆಚ್ಚಗೆ ಮೆಂತೆ ಗಂಜಿ ಕುಡಿಯಲಿಕ್ಕೊಂದು ಪಿಳ್ಳೆನೆವ, ಮಳೆಯೆಂದರೆ ಸುಟ್ಟ ಹಲಸಿನ ಬೋಳೆಗಳನ್ನ ಉಪ್ಪು ಸೇರಿಸಿ ಕಟುಂ-ಕುಟುಂ ತಿನ್ನುವ ಸುಖ, ಮಳೆಯೆಂದರೆ ಹೊಳೆ ಉಕ್ಕಿ ಹರಿಯುವ ನೆಪಕ್ಕೆ ಶಾಲೆಗೇ ಸಿಗುತ್ತಿದ್ದ ನಿರಾಯಾಸ ರಜೆ, ಮಳೆಯೆಂದರೆ ಊಟಕ್ಕೆ ಕಳಲೆಯ ಪಲ್ಯ, ಮಳೆಯೆಂದರೆ ಮನೆ ಸುತ್ತಲ ಹೂಗಿಡಗಳಿಗೆ ನೀರು ಹಾಕುವ ಕೆಲಸಕ್ಕೆ ಮಾಫಿ, ಮಳೆಯೆಂದರೆ ಮಾಡಿನ ಮೂಲೆಯಿಂದ ಸುರಿವ ನೀರಧಾರೆಯಲ್ಲಿ ಆಡುವ ಚಪಲ, ಮಳೆಯೆಂದರೆ ನೋಟು ಬುಕ್ಕಿನ ಹಾಳೆಗಳಲ್ಲಿ ದೋಣಿ ಮಾಡಿ ಹಳ್ಳದ ನೀರಲ್ಲಿ ಬಿಡುವ ಖುಷಿ , ದೊಡ್ಡವರ ಕಣ್ಣಿಗೆ ಅದು ಬಿದ್ದರೆ ನೋಟು ಬುಕ್ಕಿನ ಹಾಳೆಯನ್ನ ಹರಿದು ಹಾಳು ಮಾಡಿದ್ದಕ್ಕೆ ಬೆನ್ನ ಮೇಲೆ ಉಚಿತ ಬಹುಮಾನ...... ಹೀಗೆ ಮಳೆಗೆ ವಿವಿಧ ಮುಖ. ದುಃಖದೊಂದಿಗೆ ಸಮಪಾಲಿನ ಸುಖ. ಹೀಗಾಗಿ ನನ್ನದೂ ಮಳೆಯದೂ ಒಂಥರಾ ಗಂಡ-ಹೆಂಡಿರ ಸಂಬಂಧ!

ನೋವಲ್ಲಿ ಅಳುವಾಗ ಮಳೆ ಬಂದರೆ ಕಣ್ಣೀರು ಯಾರಿಗೂ ಕಾಣಿಸೋದೆ ಇಲ್ಲ, ಇದು ಆಗಾಗ ಉಪಯೋಗಕ್ಕೆ ಬಂದದ್ದೂ ಇದೆ. ಅಮ್ಮ ಹಾಗು ಮನೆಯನ್ನ ಬಿಟ್ಟು ಕಾರ್ಕಳಕ್ಕೆ ಹೋದಾಗ, ಕೊನೆಯ ಬಾರಿ ಊರನ್ನ ಶಾಶ್ವತವಾಗಿ ತೊರೆದು ಬೆಂಗಳೂರು ಪಾಲಾದಾಗ ಇತ್ತ ನನ್ನ ಕಣ್ಣು ಮಂಜಾದ ಹಾಗೆ ಅತ್ತ ಆಗಸದ ಎದೆಯೂ ಭಾರವಾಗಿ ಸುರಿದ ನೆನಪಿದೆ. ಈಗ ಊರಲ್ಲಿ ಅಷ್ಟು ಮಳೆ ಇಲ್ಲವಂತೆ. ಹಾಸ್ಟೆಲ್ಲಿನಲ್ಲಿ ಮುಸುಗು ಹೊದ್ದು ಮನೆಯ ನೆನಪಾದಾಗಲೆಲ್ಲ ಮಲಗಿಯೇ ಬಿಕ್ಕಳಿಸುವಾಗ ಹೊರಗಿನ ಜೋರು ಮಳೆಯ ಸದ್ದಿನೊಂದಿಗೆ ನನ್ನ ಅಳುವಿನ ಸದ್ದೂ ಕರಗಿ ಹೋಗಿ "ಹುಡುಗನಾಗಿಯೂ ಅಳ್ತಾನೆ" ಎನ್ನೋ ಇತರರ ಗೇಲಿಯಿಂದ ನನ್ನ ಅದೆಷ್ಟೋ ಸಾರಿ ಪಾರು ಮಾಡಿತ್ತು ಈ ಜೋರು ಮಳೆ. ಮಳೆಯ ದಿನಗಳಲ್ಲಿ ಉಕ್ಕಿ ಹರಿವ ತುಂಗೆಯ ಒಡಲನ್ನ ಹಿರಿಯರೊಂದಿಗೆ ಕಮಾನು ಸೇತುವೆ ಮೇಲೆ ನಿಂತು ದಿಟ್ಟಿಸುತಿದ್ದ ನೆನಪೆ ಒಂಥರಾ ಭಯ ಹುಟ್ಟಿಸುತ್ತಿತ್ತು. ಬೇರೆ ಕಾಲದಲ್ಲಿ ಮನೆಗೆ ಬಂದ ದೂರದೂರುಗಳ ನೆಂಟರನ್ನ ವಾಯುವಿಹಾರಕ್ಕೆ ನದಿ ತೀರಕ್ಕೆ ಕರೆದೊಯ್ದಾಗ ಏನೂ ಅರಿಯದ ಮಳ್ಳಿಯಂತೆ ಪಕ್ಕದಲ್ಲಿಯೇ ಹರಿಯುವ ತುಂಗೆ ಇವಳೇನಾ ಎನ್ನುವ ಪ್ರಶ್ನೆ ಮನಸಿನಲ್ಲೇಳುತ್ತಿತ್ತು. ಅವಳ ಅಂದಿನ ರೌದ್ರಾವತಾರಕ್ಕೆ ನಡುಕ ಹುಟ್ಟುತ್ತಿತ್ತು. ಇಂದು ತುಂಗೆಗೆ ಮೊದಲ ಬಲವಿಲ್ಲ, ಮರಗಳೆಲ್ಲ ಕಡಿವ ಪಾಪಿಗಳ ಪಾಲಾದ ಮಲೆನಾಡಿನಲ್ಲಿ ಮೊದಲಿನಷ್ಟು ಮಳೆಯೂ ಇಲ್ಲ. ಮಳೆಯೂ ಈಗ ಬರಿ ನೆನಪಷ್ಟೆ.

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......