RSS (ರಾಷ್ಟ್ರೀಯ ಸ್ವಯಂಸೇವಕ ಸಂಘ) ತನ್ನ 100 ನೇ ವರ್ಷದ ಸಂಭ್ರಮವನ್ನು ದೇಶದಾದ್ಯಂತ ಆಚರಿಸುತ್ತಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಆ ಪಕ್ಷವನ್ನು ಬೆಂಬಲಿಸುವ ಹಲವಾರು ಇತರ ಚಿಕ್ಕಪುಟ್ಟ ಪಕ್ಷಗಳು, ಚಿಕ್ಕಪುಟ್ಟ ಸಂಘಟನೆಗಳು ಹಾಗೂ ಚಿಕ್ಕಪುಟ್ಟ ಗುಂಪುಗಳು RSS ಅನ್ನು ಕಟುವಾಗಿ ವಿರೋಧಿಸುತ್ತಿವೆ,ನಿಂದಿಸುತ್ತಿವೆ ಮತ್ತು ಅದರ ನಾಗಾಲೋಟಕ್ಕೆ ಕಡಿವಾಣ ಹಾಕುವ ಮಾತುಗಳನ್ನಾಡುತ್ತಿವೆ!
ಈ ಸಂದರ್ಭದಲ್ಲಿ RSS ಹೆಸರಿಗೆ ಸಾಕಷ್ಟು ಹೋಲಿಕೆಯಿರುವ ಇನ್ನೊಂದು ಸಂಘಟನೆ DSS (ದಲಿತ ಸಂಘರ್ಷ ಸಮಿತಿ) ನೆನಪಾಗುತ್ತದೆ.
RSS ಗೆ 100 ವರ್ಷ ತುಂಬಿರಬಹುದು. ಆದರೆ DSS ಇತಿಹಾಸವೂ ಕಡಿಮೆಯೇನಿಲ್ಲ. ಕಳೆದ ವರ್ಷವಷ್ಟೇ ಅದಕ್ಕೆ 50 ವರ್ಷ ತುಂಬಿದೆ! ಆದರೆ ಅದರ 50 ನೇ ವರ್ಷದ ಸಂಭ್ರಮಾಚರಣೆ ಮಾತ್ರ ತೀರಾ ನೀರಸವಾಗಿತ್ತು. ಏಕೆಂದರೆ ಅದಾಗಲೇ ಹಲವಾರು ಚೂರುಗಳಾಗಿ ಒಡೆದು ಹೋಗಿರುವುದರಿಂದ ಪ್ರಚಾರವೇ ಇಲ್ಲದೆ ಅದರ ಸುವರ್ಣ ಸಂಭ್ರಮ ಮುಗಿದುಹೋಗಿತ್ತು :-(
ಶಿಕ್ಷಣ-ಸಂಘಟನೆ-ಹೋರಾಟ ಎನ್ನುವ ಮೂರು ಪ್ರಮುಖ ವಿಷಯಗಳನ್ನು ಮೂಲ ಮಂತ್ರವಾಗಿಸಿಕೊಂಡು ಎರಡು-ಮೂರು ದಶಕಗಳ ಕಾಲ ಸಮರ್ಥವಾಗಿಯೇ ಅದು ಮುಂದುವರಿಯಿತು. ಆದರೆ ಆ ನಂತರದಲ್ಲಿ ನಿಧಾನವಾಗಿ ವೈಯುಕ್ತಿಕ ಲಾಭ, ವೈಯುಕ್ತಿಕ ಪ್ರತಿಷ್ಠೆ, ಪಕ್ಷರಾಜಕೀಯ ಮುಂತಾದ ವಿಚಾರಗಳಲ್ಲಿ ಪರಸ್ಪರ ಭಿನ್ನಾಭಿಪ್ರಾಯ ತಲೆದೋರಿ ಛಿದ್ರವಾಗುತ್ತಾ ಬಂತು. ಇಂದು ರಾಜ್ಯದಲ್ಲಿ DSS ಅಸ್ತಿತ್ವದಲ್ಲಿದ್ದರೂ ಸಹ ಅದರ ಹಿನ್ನೆಲೆ, ಇತಿಹಾಸ, ಸಾಧನೆ ಮುಂತಾದ ಯಾವ ವಿಚಾರಗಳೂ ಸ್ವತಃ ದಲಿತ ಯುವಕರಿಗೇ ತಿಳಿದಿಲ್ಲ!
ಒಂದು ಕಾಲದಲ್ಲಿ DSS ಒಂದು ವಿಚಾರವನ್ನು/ವಿವಾದವನ್ನು/ಹೋರಾಟವನ್ನು ಕೈಗೆತ್ತಿಕೊಂಡಿತು ಎಂದರೆ ಅದು ತಾರ್ಕಿಕ ಅಂತ್ಯವನ್ನು ಕಂಡಿತು ಎಂದೇ ಅರ್ಥ. ನಗರ, ಪಟ್ಟಣಗಳಲ್ಲಷ್ಟೇ ಅಲ್ಲದೆ ಹಳ್ಳಿ ಹಳ್ಳಿಗಳಲ್ಲೂ DSS ಖದರ್ ಹಾಗಿತ್ತು!
ಆದರೆ ಬರಬರುತ್ತಾ ಬಹುತೇಕ ನಾಯಕರು ಒಂದು ಪಕ್ಷದ ಪರ, ಕೆಲವು ನಾಯಕರ ಪರ ಕೆಲಸ ಮಾಡುವುದರಲ್ಲಿ ಮಗ್ನರಾದರು. ದಲಿತಪರ ಹೋರಾಟಗಳಿಗಿಂತಾ ಆಂತರಿಕ ಹೋರಾಟಗಳೇ ಹೆಚ್ಚಾದವು. ಕೊನೆಗೆ ಅನೇಕ ಬಣಗಳಾಗಿ ಒಡೆದು ಹೋಳಾಗುವ ಮುಖಾಂತರ ನೂರಾರು ಸಂಘಟನೆಗಳಲ್ಲಿ ಅದೂ ಒಂದು ಎನ್ನುವಂತಾಯಿತು.
RSS ಮುಖವಾಣಿ ಎನ್ನಲಾಗುವ 'ಆರ್ಗನೈಸರ್' ಪತ್ರಿಕೆಯಂತೆಯೇ DSS ಕೂಡ 'ಪಂಚಮ' ಎನ್ನುವ ತನ್ನದೇ ಆದ ಪತ್ರಿಕೆಯೊಂದನ್ನು ಹೊಂದಿತ್ತು. ಪಂಚಮ ಪತ್ರಿಕೆಯು ದಲಿತ ಲೇಖಕರಿಗೆ, ದಲಿತರ ಆಕ್ರೋಶ, ನೋವು, ದುಗುಡ, ದುಮ್ಮಾನಗಳಿಗೆ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತಿತ್ತು. RSS ಮುಖವಾಣಿ ಎನ್ನಲಾಗುವ 'ಆರ್ಗನೈಸರ್' ಈಗಲೂ ಇದೆ. DSS ನ ಪಂಚಮ ಮಾತ್ರ ಎಲ್ಲಿಯೂ ಕಾಣಿಸುತ್ತಿಲ್ಲ!
ಹಾಗೆ ನೋಡಿದರೆ ಪ್ರಬಲವಾಗಿ ಬೆಳೆಯಲು RSS ಗಿಂತಲೂ DSS ಗೇ ಹೆಚ್ಚು ಅವಕಾಶಗಳಿದ್ದವು. ಪ್ರತಿ ನಿತ್ಯ ಹೋರಾಟಕ್ಕೆ ಬೇಕಾದ ಒಂದಿಲ್ಲೊಂದು ವಿಚಾರಗಳು ಅದಕ್ಕೆ ದೊರೆಯುತ್ತಿದ್ದವು. ರಾಜ್ಯದಾದ್ಯಂತ ಲಕ್ಷಾಂತರ ಜನ ಕಾರ್ಯಕರ್ತರು ರಾತ್ರಿ ಹಗಲೆನ್ನದೆ DSS ಗಾಗಿ ದುಡಿಯಲು ಹೆಗಲು ಕೊಟ್ಟು ನಿಂತಿದ್ದರು. ಹಳ್ಳಿ ಹಳ್ಳಿಗಳಲ್ಲಿ ಕಾರ್ಯಕರ್ತರ ಪಡೆ ಸಿದ್ಧವಾಗಿತ್ತು. ಕೇವಲ ಕರ್ನಾಟಕವಷ್ಟೇ ಅಲ್ಲದೆ, ರಾಷ್ಟ್ರಮಟ್ಟದಲ್ಲೂ ಅತ್ಯಂತ ಕ್ರಿಯಾಶೀಲ ಚಳುವಳಿ ಎನ್ನುವ ಹೆಗ್ಗಳಿಕೆಯನ್ನು DSS ಅದಾಗಲೇ ಪಡೆದುಕೊಂಡಿತ್ತು!
ಆದರೆ ಕಾಂಗ್ರೆಸ್ ಪಕ್ಷ ಮತ್ತದರ ನಾಯಕರುಗಳು DSS ನ ದಾರಿ ತಪ್ಪಿಸಿದರು. ತಮ್ಮ ಪರವಾದ ಹೋರಾಟಗಳಿಗೆ ಅವರನ್ನು ಬಳಸಿಕೊಳ್ಳತೊಡಗಿದರು. DSS ನ ಒಬ್ಬೊಬ್ಬ ನಾಯಕರೂ ಕಾಂಗ್ರೆಸ್ಸಿನ ಒಬ್ಬೊಬ್ಬ ನಾಯಕರ ಬೆಂಬಲಿಗರಾಗಿ ಗುರುತಿಸಿಕೊಳ್ಳುವುದರಲ್ಲೇ ಹೆಚ್ಚು ಆಸಕ್ತಿ ತೋರಿಸತೊಡಗಿದರು. ಅದೆಷ್ಟೋ ಕಡೆಗಳಲ್ಲಿ DSS ಚಳುವಳಿಯು ಕಾಂಗ್ರೆಸ್ ನಾಯಕರ ಪರವಾದ ಚಳುವಳಿಯಾಗಿ ಬದಲಾಯಿತು. ಇದರಿಂದಾಗಿ ಮೂಲ ಉದ್ದೇಶಕ್ಕೆ ನಿಷ್ಠರಾಗಿ ಉಳಿದ ಮುಖಂಡರುಗಳು ನಿಧಾನವಾಗಿ ಚಳುವಳಿಯಿಂದಲೇ ಹಿಂದೆ ಸರಿದರು. ಅವರ ಮುಂದಿನ ಪೀಳಿಗೆಯನ್ನೂ DSS ಒಳಗೆ ಕಳಿಸಲಿಲ್ಲ.
DSS ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದು ತಪ್ಪೇ? RSS ಬಿಜೆಪಿಯನ್ನು ಬೆಂಬಲಿಸುತ್ತಿಲ್ಲವೇ? ಹೀಗೆ ನೀವು ಕೇಳಬಹುದು. ಆದರೆ ಬಿಜೆಪಿ RSS ಪ್ರೇರಿತವಾಗಿಯೇ ಹುಟ್ಟಿದ ಪಕ್ಷ. ಆ ಪಕ್ಷವೂ ಸಂಘಪರಿವಾರದ್ದೇ ಒಂದು ಭಾಗ. ಬಿಜೆಪಿಗೆ ಪ್ರಧಾನ ಸಂಘಟನಾ ಕಾರ್ಯದರ್ಶಿಗಳನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಅಧಿಕೃತವಾಗಿಯೇ ಕಳಿಸುತ್ತದೆ. ಆದರೆ DSS ಮತ್ತು ಕಾಂಗ್ರೆಸ್ ನಡುವಿನ ಸಂಬಂಧ ಹಾಗಲ್ಲ. ಕಾಂಗ್ರೆಸ್ ಬ್ರಿಟಿಷರ ಮೂಲದ ಒಂದು ಪಕ್ಷವೇ ಹೊರತೂ DSS ಮೂಲದ್ದಲ್ಲ.
ಹೀಗಿರುವಾಗ ಕಾಂಗ್ರೆಸ್ ಪರವಾಗಿ ಹೋರಾಟ ಮಾಡುವುದು DSS ನಾಯಕರ ಕೆಲಸವಾಗಬಾರದಾಗಿತ್ತು. ಅಷ್ಟೇ ಅಲ್ಲದೆ ಕರ್ನಾಟಕದಲ್ಲಿ DSS ಮುಖಾಂತರವೇ ಒಂದು ರಾಜಕೀಯ ಪಕ್ಷವನ್ನು ಹುಟ್ಟು ಹಾಕಿ ಸ್ವಂತ ಬಲದಿಂದ ಅಧಿಕಾರಕ್ಕೇರುವಷ್ಟು ಶಕ್ತಿ ದಲಿತ ಸಂಘರ್ಷ ಸಮಿತಿಗಿತ್ತು. ಆದರೆ ಇದ್ಯಾವುದನ್ನೂ ಮಾಡದಂತೆ ಕಾಂಗ್ರೆಸ್ ಪಕ್ಷ ಉಪಾಯವಾಗಿ ಅವರನ್ನು ತಡೆದು ನಿಲ್ಲಿಸಿಬಿಟ್ಟಿತು!
ಒಂದು ಉದಾಹರಣೆ ಕೊಡುವುದಾದರೆ: ದೇವನೂರು ಮಹಾದೇವ ಅವರನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸ್ಥಾಪಕರಲ್ಲಿ ಒಬ್ಬರು ಎಂದೂ ಗುರುತಿಸಲಾಗುತ್ತದೆ. ಆದರೆ ಈಗ ಅವರು ದಲಿತ ಸಂಘರ್ಷ ಸಮಿತಿಯ ಪರವಾಗಿ ಎಷ್ಟು ಸಕ್ರಿಯರಾಗಿದ್ದಾರೆ? ಕಾಂಗ್ರೆಸ್ ಪರವಾಗಿ ಎಷ್ಟು ಸಕ್ರಿಯರಾಗಿದ್ದಾರೆ? ಗಮನಿಸಿದರೆ ತಿಳಿಯುತ್ತದೆ.
ಇದಿಷ್ಟೇ ಅಲ್ಲದೆ 'ಕರ್ನಾಟಕ ಸರ್ವೋದಯ ಪಕ್ಷ' ಮುಂತಾದ ಹಲವಾರು ಹೆಸರಿನಲ್ಲಿ ಏನೇನೋ ಮಾಡುತ್ತಿರುವಂತೆ ನಟಿಸುತ್ತಾರೆ. ಆದರೆ ಚುನಾವಣಾ ಹತ್ತಿರ ಬರುತ್ತಿದ್ದಂತೆಯೇ ತಮ್ಮ ಬೆಂಬಲಿಗರೆಲ್ಲರನ್ನೂ ಕಾಂಗ್ರೆಸ್ ಬಾಗಿಲಿಗೆ ಕರೆದುಕೊಂಡುಹೋಗಿ ನಿಲ್ಲಿಸುತ್ತಾರೆ!
ಮೊನ್ನೆ ತಾನೇ ಅವರು "RSS ಗೆ ನೂರಾಯಿತಂತೆ ಹೌದಾ!" ಎಂದು ದೊಡ್ಡ ಲೇಖನವೊಂದನ್ನು ಬರೆದು ಎಲ್ಲ ಕಾಂಗ್ರೆಸ್ ನಾಯಕರ ಮುಖಾಂತರ ಅದನ್ನು ಹಂಚಿಸಿದರು. ಆದರೆ ಕಳೆದ ವರ್ಷವಷ್ಟೇ ಐವತ್ತು ವರ್ಷ ಪೂರ್ತಿಗೊಳಿಸಿದ DSS ಕುರಿತು ಅವರು ಎಷ್ಟು ಲೇಖನಗಳನ್ನು ಬರೆದರು? ಎಷ್ಟು ಭಾಷಣಗಳನ್ನು ಮಾಡಿದರು? ಎಷ್ಟು ಚರ್ಚೆಗಳನ್ನು ಮಾಡಿದರು? ಬಹುತೇಕ ಇಲ್ಲವೇ ಇಲ್ಲ ಎನ್ನುವಷ್ಟು!!
ಫೇಸ್ ಬುಕ್, ವಾಟ್ಸಪ್ ಗಳಲ್ಲಿ ಅವರಿವರು ಬರೆದ ಸಣ್ಣಪುಟ್ಟ ಬರಹಗಳನ್ನೆಲ್ಲಾ ಸೇರಿಸಿ "RSS ಆಳ ಅಗಲ" ಎನ್ನುವ ಪುಸ್ತಕವೊಂದನ್ನು ಬರೆದು, PDF ಮಾಡಿ ಕಾಂಗ್ರೆಸ್ ಕಾರ್ಯಕರ್ತರ ಮೂಲಕ ಉಚಿತವಾಗಿ ಹಂಚಿಸಿದರು. ಆದರೆ ಅದೇ ಸಮಯವನ್ನು ಮತ್ತು ಬುದ್ಧಿಶಕ್ತಿಯನ್ನು ಉಪಯೋಗಿಸಿಕೊಂಡು ಅವರೇಕೆ "DSS ಆಳ ಅಗಲ" ಎನ್ನುವ DSS ಪರವಾದ ಪುಸ್ತಕವನ್ನು ಬರೆಯಲಿಲ್ಲ? ಸ್ವತಃ ಸ್ಥಾಪಕರಲ್ಲಿ ಒಬ್ಬರು ಎಂದು ಹೇಳಿಕೊಳ್ಳುವವರೇ DSS ಕುರಿತು ಅಷ್ಟೊಂದು ನಿರಾಸಕ್ತಿ ತೋರಿಸುವಾಗ, ಇನ್ನು ಉಳಿದವರ ಬಗ್ಗೆ ಹೇಳಲಿಕ್ಕೇನಿರುತ್ತದೆ?
ಕಳೆದ ಒಂದೆರಡು ವರ್ಷಗಳಿಂದ ಒಳಮೀಸಲಾತಿ ಕುರಿತು ದಲಿತ ಸಮುದಾಯದಲ್ಲಿ ದೊಡ್ಡದಾದ ಕಂದಕವೇ ಏರ್ಪಟ್ಟಿದೆ. ದಲಿತರ ಅಸ್ಮಿತೆ, ದಲಿತರ ಧ್ವನಿ, ದಲಿತರ ಕವಿ, ದಲಿತರ ಸಾಹಿತಿ ಎಂದೇ ಬಿಂಬಿಸಿಕೊಳ್ಳುವ ದೇವನೂರು ಮಹಾದೇವ ಅವರು ಅಂತಹ ಒಡಕನ್ನು ಸರಿಪಡಿಸಲು ಏನೇನು ಮಾಡಿದ್ದಾರೆ? ಎಷ್ಟು ಹೇಳಿಕೆಗಳನ್ನು ಕೊಟ್ಟಿದ್ದಾರೆ? ಎಷ್ಟು ಬಣಗಳನ್ನು ಕರೆದು ಕೂರಿಸಿ ಮಾತನಾಡಿಸಿ, ಸಮಾಧಾನಿಸಿ ಕಳಿಸಿದ್ದಾರೆ? ಬಹುಶಃ ಇಲ್ಲವೇ ಇಲ್ಲ ಎನ್ನುವಷ್ಟು!
ದೇವನೂರು ಮಹಾದೇವ ಅವರನ್ನು ಹತ್ತಿರದಿಂದ ನೋಡಿದವರು ಹೇಳುವ ಪ್ರಕಾರ "ದಲಿತರ ಪರವಾದ ಕಾರ್ಯಕ್ರಮಗಳಿಗೆ ಆಹ್ವಾನಿಸಿದರೆ ವಯಸ್ಸಿನ ಕಾರಣ, ಆರೋಗ್ಯದ ಕಾರಣವನ್ನು ಮುಂದೊಡ್ಡಿ ತಪ್ಪಿಸಿಕೊಳ್ಳುತ್ತಾರೆ. ಆದರೆ ಬಿಜೆಪಿ ವಿರುದ್ಧದ ಅಥವಾ RSS ವಿರುದ್ಧದ ಅಥವಾ ಕಾಂಗ್ರೆಸ್ ನಾಯಕರ ಪರವಾದ ಕಾರ್ಯಕ್ರಮಗಳಿಗೆ ಆಹ್ವಾನಿಸಿದರೆ ಲಗುಬಗೆಯಿಂದ ಎದ್ದು ಬರುತ್ತಾರೆ!"
RSS ಏಕೆ ನೂರಾಗಿ ನೂರೊಂದರತ್ತ ಮುನ್ನುಗ್ಗುತ್ತಿದೆ ಮತ್ತು DSS ಏಕೆ ನೂರರಲ್ಲಿ ಒಂದಾಯಿತು ಎನ್ನುವುದಕ್ಕೆ ಬಹುಶಃ ಇದೊಂದೇ ಉದಾಹರಣೆ ಸಾಕು ಎನಿಸುತ್ತದೆ.
No comments:
Post a Comment