Friday, October 31, 2025

ಅಹಾ ! ನೀರೆ - ವಿನಾಯಕ

 *ಅಹಾ ! ನೀರೆ !*


   ೧


ಎಲ್ಲಿ ನೋಡಿದಲ್ಲೆಲ್ಲ ನೀರೇ ನೀರು ! 

ತಾನೇ ತಾನಾಗಿ ಮೆರೆಯುವ ಮೊರೆಯುವ ನೀರು ! 

ನನೆಕೊನೆಯಿಲ್ಲದ, ಚಿರಂಜೀವಿಯಾದ ನೀರು !

ಮುಗಿಲನಣಕಿಸುವ ದಟ್ಟನೀಲಿಯಾದ ನೀರು ! 

ಅಹಾ ! ನೀರೆ ! ನಿನ್ನ ಸೌಭಾಗ್ಯವೇ ಸೌಭಾಗ್ಯ !

ನಿನ್ನ ಚಿರಂಜೀವಿ ಪಟ್ಟವೇ ಪಟ್ಟ !


ತಬ್ಬುತಿರುವೆ ಬ್ರಹ್ಮಾಂಡವನೆಲ್ಲ ಸುತ್ತಿ ! 

ನಿನ್ನ ತೋಳ್ ತೆಕ್ಕೆಗೆ ಸಿಕ್ಕಿ ಪುಡಿಪುಡಿಯಾದವು ಖಂಡಖಂಡಗಳು ! 

ಇಂದ್ರನು ಬಂದಿಲ್ಲಿ ಮಳೆಗರೆಯಲಾರ : 

ಮಳೆಯ ಮೂಲಮಂತ್ರವನ್ನು ಕಲಿಯುವನಿಲ್ಲಿ ಬಂದು ! 

ವಾಯುವು ಬಂದಿಲ್ಲಿ ಬೀಸಲಾರ,-

ಈಸಬಹುದು ಬೇಕಾದರೆ ಮನಬಂದತ್ತ ! 

ಅಹಾ! ನೀರೆ ! ಅಂತಪಾರವಿಲ್ಲದ ನೀರೆ ! 

ದೇವರು ನಿನ್ನಳಿಯ ! ದೇವತೆಗಳು ನಿನ್ನಣುಗರು ! 

ಸರಿಯಿಲ್ಲ ನಿನ್ನ ವೈಭವಕೆ ! ಸಾಟಿಯಿಲ್ಲ ನಿನ್ನ ಮೈಸಿರಿಗೆ !


ಅಹಾ ! ನೀರೆ ! ದಿಕ್ಕಿಲ್ಲದ ಮಿಕ್ಕಿಲ್ಲದ ನೀರೆ ! 

ಯಾರಲ್ಲಿ ನಿಂತಿತು ನಿನ್ನ ನೀರು ? 

ಯಾರೆದೆಯನ್ನು ಹರಿಸಲಿಲ್ಲ ನೀರು ನೀರಾಗಿ ? 

ಸಾವಿಲ್ಲ ನೋವಿಲ್ಲ ನಿನಗೆ,- 

ಮರಣದಂಥ ಹರಣಗಳು ಚರಿಸುತಿಹವು 

ನಿನ್ನ ತಿಮಿಂಗಿಲತಿಮಿರೋದಕದಲ್ಲಿ ;


ಪ್ರಳಯ ಕಾಲದಿ ಎದ್ದೇಳುವವು ! 

ಲಾಲನೆ-ಪಾಲನೆಯಿಲ್ಲ ನಿನಗೆ,-

ನಿನ್ನ ಕ್ಷಾರೋದಕದಲ್ಲಿ ಪವಡಿಸಿದ ಕ್ಷೀರಸಾಗರಶಾಯಿ,-

ಸೃಷ್ಟಿಪಾಲಕ ತಾನು ! 

ಹುಟ್ಟಿಲ್ಲ ಮುಟ್ಟಿಲ್ಲ ನಿನಗೆ,-

ಮತ್ಸ್ಯಕೂರ್ಮಗಳಾಗಿ ನಿನ್ನ ತೊಡೆಯಲಾಡಿದ ದೇವ -

ಸೃಷ್ಟಿಕರ್ತನು ತಾನು ! 

ತ್ರಿಪುಟರಹಿತನಾಗಿರುವೆ, ಓ ! ಸಮುದ್ರರಾಜ ! 

ಓ ! ಸ್ವಯಂಭೂ !


~ *ವಿನಾಯಕ*

{'ಸಮುದ್ರ ಗೀತಗಳು' ಕವನ‌ಸಂಕಲನ}

No comments:

Post a Comment

ಅಹಾ ! ನೀರೆ - ವಿನಾಯಕ

 *ಅಹಾ ! ನೀರೆ !*    ೧ ಎಲ್ಲಿ ನೋಡಿದಲ್ಲೆಲ್ಲ ನೀರೇ ನೀರು !  ತಾನೇ ತಾನಾಗಿ ಮೆರೆಯುವ ಮೊರೆಯುವ ನೀರು !  ನನೆಕೊನೆಯಿಲ್ಲದ, ಚಿರಂಜೀವಿಯಾದ ನೀರು ! ಮುಗಿಲನಣಕಿಸುವ ದಟ್ಟ...