ಬಿರು ಮಧ್ಯಾಹ್ನ ಮೈಗಂಟಿದ ಶರಟಿನಿಂದೇಳೊ.... - ಶರತ್ ಚಕ್ರವರ್ತಿ

ಬಿರು ಮಧ್ಯಾಹ್ನ
ಮೈಗಂಟಿದ ಶರಟಿನಿಂದೇಳೊ ಹಬೆ ಹತ್ತಿಡಲು
ಗಂಟಲಿಗೆ ಅರೆಪಾವು ಮಜ್ಜಿಗೆ
ಸುರಿದುಕೊಳ್ಳುವಾಗೊಂದು ದಿಗಿಲು ಹುಟ್ಟಿಕೊಳ್ಳುತ್ತದೆ
ಓಟಬಿದ್ದು ಹೊರಬಂದರೇ
ಸೂರ್ಯನಿರುವಲ್ಲಿ ಸೂರ್ಯನೆ ಇದ್ದು,
-ಶರತ್ ಚಕ್ರವರ್ತಿ
ಮೋಡಗಳಿರುವಲ್ಲಿ ಅವುಗಳಿರದೇ
ಎದುಸುರು ಮತ್ತೂ ಏರುತ್ತದೆ
ಭೂಮಿಗೇನು ಬೆಂಕಿ ಬಿದ್ದಲ್ಲವಲ್ಲ
ಎಂದು ಸಾವರಿಸಿಕೊಳ್ಳುತ್ತೇನೆ
ಅಲ್ಲೆಲ್ಲೋ ಡ್ಯಾಮು ಬಿರಿಯಿತಂತೆ
ಎಂದು ಕೇಳುವಾಗ ತಣ್ಣಗೇ ಇದ್ದವನು
ಡ್ಯಾಮಿನ ಅಂಚಿಗೆ ಕಟ್ಟಿದ್ದ ಕಪ್ಪೆಗೂಡ ನೆನೆದು
ಮತ್ತೆ ಧಿಗಿಲಾಗುತ್ತೇನೆ
ಡ್ಯಾಮಿನಲ್ಲೆ ನೀರೆ ಇರಲಿಲ್ಲ,
ಖಾಲಿಯದ್ದು ಬಿರಿದಿದೆ ಬಿಡು
ಎಂದವರು ಸುಮ್ಮನಿರಿಸಿದ್ದರೂ
ತಮಟೆಯ ಹೊಡೆತ ನಿಲ್ಲುವುದೇ ಇಲ್ಲ
ಬಾಲ್ಯಗೆಳೆಯನೊಬ್ಬ ಕನಸಿಗೆ ಬಂದಾಗ
ಸಂತಸ ನಳನಳಿಸಿ
ಹತ್ತಿರ ಹೋಗಿ ಆಲಂಗಿಸಿಕೊಳ್ಳುತ್ತೇನೆ
ಅಪ್ಪಿಕೊಂಡಮೇಲೆ ನೆನಪಾಗುತ್ತದೆ ಅವನಿಂದ ಕದ್ದು
ಜೋಬಲ್ಲಿಟ್ಟುಕೊಂಡಿರೊ ಸವೆದ ಬಳಪ
ಅಪ್ಪಿದಾಗ ಅವನೆದೆಗೆ ಚುಚ್ಚಬಹುದೆಂದು
ಹುಷಾರಿಯಾಗುತ್ತಾ
ಮೆಲ್ಲಗೆ ಅಪ್ಪುಗೆ ಬಿಡಿಸಿಕೊಂಡು
ಮುಖಮರೆಮಾಚುತ್ತಾ ಹೊರಟೆಬಿಡುತ್ತೇನೆ
ಅದೆಷ್ಟೊ ಹೊತ್ತು ಹೋತ್ತೊಯ್ತದ ಮೇಲೆ
ಅವನಿಗೆ ಮೀಸೆಯಿದ್ದದ್ದು ನೆನಪಾಗುತ್ತದೆ
ನನ್ನ ಗಡ್ಡವನ್ನ ಸವರಿಕೊಂಡು
ನಗುವಾಗ ಬಿಕನಾಸಿ ಕಣ್ಣೀರು ಬಂದೇಬಿಡುತ್ತದೆ
ಕಾಲಾತಿಕಾಲದಲ್ಲಿ ಜಂಗಮನ ಮೇಲೆ
ಬೀಸಿದ ಕಲ್ಲು ನೆನಪಾಗಿ
ಪಾಪ ಎಂದುಕೊಳ್ಳುವಷ್ಟರಲ್ಲೆ ಅವನು
ಕಲ್ಲಿಡಿದು ಬೆನ್ನಿಂದೆಯೆ ಇರುವುದು ಕಾಣುತ್ತದೆ
ಓಡಿ ಓಡಿ ಬಯಲದಾರಿಗೆ ಬಂದರೆ
ನಡುರೋಡಲ್ಲೆ ನುಲಿದುಕೊಂಡ ಹಾವುಗಳು
ಸರಸ ಬಿಟ್ಟು ನನ್ನೆಡೆಗೆ ನೋಡುತ್ತವೆ
ಹೊಂಚು ಹಾಕುತ್ತಿದ್ದ ಮುಂಗುಸಿಯೂ
ನನ್ನ ನೋಡಿ ಕೆಕ್ಕರಿಸುತ್ತದೆ
ಸಂಬಂಧವಿಲ್ಲದ ವ್ಯವಹಾರಕ್ಕೆ ತಲೆ ಹಾಕಿದೆನೆ
ಎಂದುಕೊಂಡಾಗ
ಕಾಲಿನಲ್ಲಿ ತಾಕತ್ತಿಲ್ಲದಿದ್ದರೂ ತಲೆ ಓಡು ಎನ್ನುತ್ತದೆ
ಓಡಿಸಿಯೇ ಓಡಿಸುತ್ತದೆ, ಮತ್ತೆಲ್ಲೋ ಕೂರು ಎಂದೇಳುತ್ತದೆ
ಕೂರುವ ಮುನ್ನ ಚುಂಚಿ ನುಗ್ಗಿದಂತಾಗಿ
ನಿದ್ದೆಗೆಡುತ್ತದೆ.
ಆದರೂ ತಮಟೆ ಬಡಿಯುತ್ತಲೇ ಇರುತ್ತದೆ,
ಅದು ಕಾಲನ ಕಯ್ಯ ಢಮರುಗವಿರುಬಹುದ
ಎಂಬ ಎರಡಲುಗಿನ ಗರಗಸವೊಂದು ಮೆದುಳ
ಕತ್ತರಿಸುತ್ತಲೇಯಿದೆ.



Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು