ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Wednesday, April 10, 2013

ಸರಳ ಹಾಗೂ ಸುಲಭ ಕಲಿಕಾ ಚಟುವಟಿಕೆಗ - ಸುನಿತಾ ಸ. ಶಿ.


ಸರಳ ಹಾಗೂ ಸುಲಭ ಕಲಿಕಾ ಚಟುವಟಿಕೆಗಳು

Everything is easy when you are busy. But nothing is easy when you are lazy. ಎಂಬಂತೆ ಪ್ರತಿಯೊಬ್ಬ ವ್ಯಕ್ತಿಯು ಪ್ರಾಮಾಣಿಕತೆ, ನಿಷ್ಠೆಯಿಂದ ಕಾರ್ಯವನ್ನು ನಿರ್ವಹಿಸಿದಾಗ ಮಾತ್ರ ಎಲ್ಲ ಕಾರ್ಯಗಳಲ್ಲಿ ಯಶಸ್ಸು ಕಾಣುತ್ತೇವೆ. ಸೋಮಾರಿತನದಿಂದ ವರ್ತಿಸಿದರೆ ಯಾವ ಕಾರ್ಯಗಳು ಸಿದ್ಧಿಸುವುದಿಲ್ಲ. ಪರಿಚಿತ ಹಾಗೂ ಸುರಕ್ಷಿತವಾದ ಮನೆಯನ್ನು ಬಿಟ್ಟು ಅಪರಿಚಿತವಿರುವ ಹೊಸ ಸ್ಥಳವಾದ ಶಾಲೆಗೆ ಹೋಗಲು ಜೊತೆಗೆ ಶಾಲೆಯ ಶಿಸ್ತು ನಿಯಮಗಳಿಗೆ ಹೊಂದಿಕೊಳ್ಳಲು ಕಷ್ಟವಾಗಿ ಮಗು ಹೆದರಿ ಶಾಲೆಗೆ ಹೋಗಲು ನಿರಾಕರಿಸುವುದು ಅಸಹಜವಲ್ಲ. ಅಲ್ಲದೇ ಎಲ್ಲರ ಕಣ್ಮಣಿಯಾಗಿ ಆಕರ್ಷಣೆಯ ಕೇಂದ್ರವಾಗಿ ರಾಜನಂತೆ ಮೆರೆಯುವ ಮಗುವಿಗೆ ಶಾಲೆಯಲ್ಲಿ ನೂರರಲ್ಲಿ ಒಬ್ಬನಾಗಲು ಇಷ್ಟವಾಗುವುದಿಲ್ಲ. ಆದರೆ ಸ್ವಲ್ಪ ಸಮಯದಲ್ಲೇ ಹೊಂದಿಕೊಂಡು ಶಾಲೆಗೆ ಹೋಗಲು ಪ್ರಾರಂಭಿಸುತ್ತಾರೆ. ಹೊಸ ಅನುಭವಗಳು ಸ್ನೇಹಿತರು ಆಟಪಾಠಗಳಲ್ಲಿ ತೊಡಗುತ್ತಾರೆ. ಕೆಲವು ಸಲ ಕೆಲ ಮಕ್ಕಳು ಸಾಕಷ್ಟು ಸಮಯದ ನಂತರ ಶಾಲೆಗೆ ಹೋಗುವುದಿಲ್ಲ ಎಂದು ಹೇಳುತ್ತಾರೆ.ಕಾರಣ ಕೇಳಿದರೆ ನನಗೆ ಗೊತ್ತಿಲ್ಲ. ನನಗೆ ಹೆದರಿಕೆ ಎಂಬ ಉತ್ತರ ಸಿಗುತ್ತದೆ.ಶಾಲೆಗೆ ಹೋಗದೇ ಹಠ ಮಾಡುತ್ತಾರೆ.ಬಲವಂತ ಮಾಡಿದರೆ ಅತ್ತು ರಂಪಾಟ ಮಾಡುತ್ತಾರೆ.ಶಿಕ್ಷೆಗೂ ಹೆದರುವುದಿಲ್ಲ.ಈ ವರ್ತನೆಗಳಿಗೆ ಕಾರಣ ಶಾಲೆಯಲ್ಲಿರಬಹುದು.ಮನೆಯಲ್ಲಿರಬಹುದು.ಅಥವಾ ಮಗುವಿನಲ್ಲೇ ಇರಬಹುದು.ಅದನ್ನು ಪತ್ತೆ ಹಚ್ಚುವ ಕೆಲಸದ ಜವಾಬ್ದಾರಿ ಶಿಕ್ಷಕರದ್ದಾಗಿದೆ.ತರಗತಿಯ ಹಾಗೂ ಶಾಲೆಯ ವಾತಾವರಣ ಆಕರ್ಷಕವಾಗಿದ್ದಾಗ ಮಾತ್ರ ಉತ್ತಮ ಗುಣಾತ್ಮಕ ಶಿಕ್ಷಣ ನೀಡಲು ಸಾಧ್ಯ.ತರಗತಿಯಲ್ಲಿ ಶಿಕ್ಷಕರು ತಮ್ಮ ವೇಳಾಪಟ್ಟಿಯಂತೆ ಪಾಠ ಟಿಪ್ಪಣೆಯನ್ನು ಸಿದ್ಧಪಡಿಸಿಕೊಂಡು ಉತ್ತಮ ಕಲಿಕೋಪಕರಣಗಳ ಜೊತೆಗೆ ಪಾಠಬೋಧನೆಯಲ್ಲಿ ತೊಡಗಿದಾಗ ಆ ಕಲಿಕೆಯಲ್ಲಿ ತರಗತಿಯ ಎಲ್ಲಾ ಮಕ್ಕಳೂ ಭಾಗವಹಿಸುವವರ ಸಂಖ್ಯೆ ಅತೀ ಕಡಿಮೆ. ನಾವು ಇಲ್ಲಿ ತಲೆಯನ್ನು ಕೆಡಿಸಿಕೊಳ್ಳುವುದು ಭಾಗವಹಿಸದ ಮಕ್ಕಳ ಬಗ್ಗೆ.ಅಂತಹ ಮಕ್ಕಳಿಗೆ ಇಷ್ಟವಾದ ಚಟುವಟಿಕೆಯನ್ನು ಮಾಡುವ ಮೂಲಕ ಕಲಿಕೆಯಲ್ಲಿ ತೊಡಗಿಸಬೇಕು.ಅಂತಹ ಮಕ್ಕಳ ಒಂದು ಗುಂಪು ಮಾಡಿ, ಆ ಮಕ್ಕಳನ್ನು ದುಂಡಾಗಿ ಕೂಡಿಸಿ ಆಟಗಳ ನಿಯಮಗಳನ್ನು ಹೇಳಬೇಕು.ಮಕ್ಕಳಿಗೆ ಆಟವೆಂದರೆ ತುಂಬಾ ಇಷ್ಟ.ಪ್ರತಿಯೊಂದು ಮಗುವಿನಲ್ಲೂ ಕುತೂಹಲ ತುಂಬಿರುತ್ತದೆ. ಕುತೂಹಲಕ್ಕಿಂತ ಬೇರೆ ಶಿಕ್ಷಕರಿಲ್ಲ ಎಂಬಂತೆ ಮಗು ಚಟುವಟಿಕೆಯಲ್ಲಿ ಸಂಪೂರ್ಣವಾಗಿ ತನ್ನನ್ನು ತೊಡಗಿಸಿಕೊಂಡಿದ್ದನ್ನು ನಾವು ಕಾಣುತ್ತೇವೆ. ಅಂತಹ ಕೆಲವು ಅನುಭವಗಳು ನಮ್ಮ ತರಗತಿಗಳು ಕಂಡು ಬರುತ್ತವೆ. ನನಗಾದ ಕೆಲವು ಅನುಭವಗಳನ್ನು ನಾನಿಲ್ಲಿ ಹಂಚಿಕೊಂಡಿದ್ದೇನೆ.
ಯಾವುದೇ ಒಂದು ಪದವನ್ನು ಹೇಳಲು ತಿಳಿಸುವುದು.ಆನಂತರಇನ್ನೊಂದು ವಿದ್ಯಾರ್ಥಿನಿ ಆ ಪದವನ್ನು ಹೇಳಿ ತನ್ನದೊಂದು ಹೊಸ ಪದವನ್ನು ಹೇಳಬೇಕು. ಹೀಗೆ ಮುಂದುವರೆದಾಗ ತರಗತಿಯಲ್ಲಿ ಒಂದು ವಿದ್ಯಾರ್ಥಿನಿಯು (ಲಕ್ಷ್ಮೀ) ಸುಮಾರು 34 ಪದಗಳನ್ನು ನೆನಪಿನಲ್ಲಿಟ್ಟುಕೊಂಡು ಹೇಳಿದಳು.ಅವಳು ನಿಜವಾಗಿಯೂ ತನ್ನ ಹೆಸರನ್ನೇಜೋರಾಗಿ ಹೇಳಲು ಹಿಂಜರಿಯುತ್ತಿದ್ದಳು. ಆದರೆ ಈ ಚಟುವಟಿಕೆಯಲ್ಲಿ ಭಾಗವಹಿಸಿದ್ದನ್ನು ನೋಡಿ ನಿಜಕ್ಕೂ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಅಗಾಧವಾದದ್ದು ಎಂಬುದು ತಿಳಿಯಿತು.ಈ ವಿಷಯವನ್ನು ತಿಳಿದ ನಮ್ಮ ಶಾಲೆಯ ಪ್ರತಿಯೊಬ್ಬ ಶಿಕ್ಷಕರೂ ಆಶ್ಚರ್ಯಚಕಿತರಾದರು.ತರಗತಿಯ ಇನ್ನುಳಿದ ವಿದ್ಯಾರ್ಥಿನಿಯರೂ ಆಶ್ಚರ್ಯಚಕಿತರಾದರು.ಇನ್ನೊಂದು ಚಟುವಟಿಕೆ ಹಾಡಿನ ಬಂಡಿಯ ವಿಧಾನದಲ್ಲೇ ಪದಗಳ ಬಂಡಿ. ಎರಡು ಗುಂಪು ಮಾಡಿ ಒಂದೊಂದು ಪದವನ್ನುಹೇಳಲು ತಿಳಿಸಿ ಕೊನೆಯ ಅಕ್ಷರದಿಂದ ಮತ್ತೊಂದು ಪದವನ್ನು ಹೇಳುತ್ತಾ 1 ಗಂಟೆಯವರೆಗೆ ಆಟವನ್ನು ಮುಂದುವರೆಸಿದರು
.ಈ ಚಟುವಟಿಕೆಯಲ್ಲಿ ಪ್ರತಿಯೊಂದು ಮಗು ಪಾಲ್ಗೊಂಡಿದ್ದು ನೂರಕ್ಕಿಂತ ಹೆಚ್ಚು ಪದಗಳು ಸಂಗ್ರಹವಾದವು. ಇದೇ ರೀತಿ ಒಂದೊಂದು ಅಕ್ಷರ ಕೊಟ್ಟು (ಉದಾ: ಕ,ಕಾ, ಶ, ಪ್ರಾ, ಕ್ಷನೀ, ಔ) ಆ ಅಕ್ಷರಗಳಿಂದ ಪ್ರಾರಂಭವಾಗುವ ಶಬ್ದಗಳನ್ನು ಬರೆಯಿರಿ ಎಂದಾಗ ಪಾಠದಲ್ಲಿ ಬಂದಿರದ ಎಷ್ಟೊಂದು ಪದಗಳನ್ನು ನಾನು ನೋಡಿದೆ. ಈ ಚಟುವಟಿಕೆಯಲ್ಲಿ ಮಕ್ಕಳ ಕುತೂಹಲ ಪಾಲ್ಗೊಳ್ಳುವಿಕೆ ಕಂಡು ಸಂತೋಷವಾಯಿತು.
ಅದಕ್ಕೆ ಸ್ವಾಮಿ ವಿವೇಕಾನಂದರು ಶಿಕ್ಷಕರಿಗೆ ಈ ರೀತಿ ಹೇಳುತ್ತಾರೆ.ಮಗು ತಾನೇ ತನ್ನ ಶಿಕ್ಷಣವನ್ನು ಪಡೆಯುತ್ತದೆ .ಗುರು ತಾನು ಕಲಿಸುತ್ತಿರುವುದು ಎನ್ನುವುದರಿಂದ ಎಲ್ಲವನ್ನೂ ಹಾಳು ಮಾಡುವನು.ಎಲ್ಲಾ ಜ್ಞಾನವೂ ಮಗುವಿನ ಮೆದುಳಿನಲ್ಲಿದೆ.ಅದನ್ನು ಜಾಗೃತಗೊಳಿಸಬೇಕಿದೆ ಅದಷ್ಟೇ ಗುರುವಿನ ಕೆಲಸ. ಸ್ವಂತ ಬುದ್ಧಿಶಕ್ತಿಯ ಸಹಾಯದಿಂದ ಕೈ,ಕಾಲು, ಕಿವಿ, ಕಣ್ಣುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುವುದು ಹೇಗೆಂಬುದನ್ನು ಮಕ್ಕಳು ಕಲಿಯುವಂತೆ ಮಾಡಬಹುದು. (Teacher is a facilitator) ಎಂಬುದನ್ನು ಇಲ್ಲಿ ಒಪ್ಪಿಕೊಳ್ಳಬೇಕಾದ ಸಂಗತಿಯಾಗಿದೆ.
ಸೂಕ್ಷ್ಮ ಬೋಧನೆಯು ಅತ್ಯಂತ ನವೀನ ರೀತಿಯ ಶೋಧನೆಯಾಗಿದ್ದು ಶಿಕ್ಷಕರು ತಮ್ಮ ಬೋಧನಾ ವಿಧಾನದಲ್ಲಿ ಹೆಚ್ಚಿನ ಕೌಶಲ್ಯ ಮತ್ತು ನೈಪುಣ್ಯತೆಯನ್ನು ಸಾಧಿಸಲು ಸತತ ಪ್ರಯತ್ನ ಮಾಡುವಂತೆ ಪ್ರೇರೇಪಿಸಿ ತರಬೇತಿ ಮತ್ತು ಹಿಮ್ಮಾಹಿತಿ (Feedback) ನೀಡಿ ಮುಂದುವರೆಯುವಂತೆ ಮಾಡುತ್ತದೆ. ಸೂಕ್ಷ್ಮ ಬೋಧನೆಯು ಅತ್ಯಂತ ಕಡಿಮೆ ನಿಗದಿತ ಅವಧಿಯಲ್ಲಿ ನಿಗದಿತ ವಿದ್ಯಾರ್ಥಿಗಳಿಗೆ ಒಂದೇ ಕೌಶಲ್ಯವನ್ನು ಉಪಯೋಗಿಸಿ ಚಿಕ್ಕ ಪಾಠಯೋಜನೆಯನ್ನು ತಯಾರಿಸಿ ಒಂದು ಪರಿಕಲ್ಪನೆಯನ್ನು ಕಲಿಸುವಕ್ರಿಯೆಯಾಗಿದೆ.ಇದು ಸಾಮಾನ್ಯ ವರ್ಗ ಕೋಣೆಯ ಬೋಧನೆಯಾಗಿದೆ.ಒಂದೇ ನಾಟಕವನ್ನು ಆಯ್ದುಕೊಂಡು ಒಂದೊಂದು ಬೋಧನಾ ಹಂತಗಳಿಗೆ ಅನುಗುಣವಾಗಿ ಪಾಠವನ್ನು ಸಿದ್ಧಪಡಿಸಿಕೊಂಡು ಒಂದೇಕೌಶಲ್ಯವನ್ನು ಪರಿಪೂರ್ಣವಾಗಿ ತಿಳಿಸುವುದೇ ಸೂಕ್ಷ್ಮ ಬೋಧನೆಯ ಹಂತವಾಗಿದೆ.ಇಲ್ಲಿ ಬೋಧಿಸುವ ಶಿಕ್ಷಕರ ಧ್ವನಿಯ ಏರಿಳಿತ, ಹಾವಭಾವ, ನಡುವಳಿಕೆ, ನಟನೆ, ಓದುವ ಕೌಶಲ್ಯ, ಕಪ್ಪು ಹಲಗೆ ಕೌಶಲ್ಯ, ಪ್ರಶ್ನೆ ಕೇಳುವ ಕೌಶಲ್ಯಗಳನ್ನು ಮಕ್ಕಳು ಗಮನಿಸುತ್ತಾರೆ.ಪ್ರತಿಯೊಬ್ಬ ಶಿಕ್ಷಕರೂ ಸೂಕ್ಷ್ಮಬೋಧನೆಯನ್ನು ಅಳವಡಿಸಿಕೊಂಡು ಪಾಠ ಬೋಧನೆಯಲ್ಲಿ ತೊಡಗಿದರೆ ಯಶಸ್ವೀ ಪರಿಣಾಮಕಾರಿ ಬೋಧನಾ ಕಲಿಕಾ ಪ್ರಕ್ರಿಯೆಗಳು ಸಾಧ್ಯ.ಈ ರೀತಿ ಇಂಗ್ಲಿಷ್ ಭಾಷಾ ಚಟುವಟಿಕೆಗಳನ್ನು ಕನ್ನಡ ಭಾಷಾ ಚಟುವಟಿಕೆಗಳಲ್ಲಿ ಬಳಸಿಕೊಂಡರೆ ಉತ್ತಮ ಬೋಧನಾ ಫಲಿತಾಂಶ ಬರುತ್ತದೆ ಎನ್ನುವುದು ನನ್ನ ಅಭಿಪ್ರಾಯವಾಗಿದೆ.
ಸುನಿತಾ ಸ. ಶಿ.
ಬಾ.ಸ.ಕಿ.ಪ್ರಾ. ಶಾಲೆ ಮುದನೂರ (ಕೆ)
ಇದು ಮೊದಲು ಬಾಲಸ್ನೇಹಿ ಶಾಲೆ ವಾರ್ತಾಪತ್ರ 37 ಫೆಬ್ರವರಿ 2013 ಯಲ್ಲಿ ಪ್ರಕಟವಾಗಿದೆ. ಇದನ್ನು ಇಲ್ಲಿ ಸಂಪಾದಿಸಿ ಅಳವಡಿಸಿಕೊಳ್ಳಲಾಗಿದೆ
ಸಂಪಾದನೆ : ಜೈಕುಮಾರ್ ಮರಿಯಪ್ಪ

No comments:

Post a Comment