ಸಂತನಾಗುವ ಪರಿ
ಶೇಖ್ ರ‌್ಯೂಗಾರಿ ಬಹುದೊಡ್ಡ ಸೂಫೀ ಸಂತ. ಅವನ ತಿಳುವಳಿಕೆ, ಚಿಂತನೆಗಳನ್ನು ವಿವರಿಸುವ ರೀತಿ ಅನನ್ಯವಾಗಿದ್ದವು. ಆಗಿನ ಕಾಲದ ಎಲ್ಲ ಸಂತರೂ ಅವನನ್ನು ತುಂಬ ಗೌರವಿಸುತ್ತಿದ್ದರು. ಆತ ಸಾಮಾನ್ಯವಾಗಿ ಹೆಚ್ಚು ಮಾತನಾಡುವವನಲ್ಲ.
ಆದರೆ ಮಾತನಾಡಿದ ಪ್ರತಿಯೊಂದು ವಾಕ್ಯವೂ ಅರ್ಥಗರ್ಭಿತವಾಗಿರುತ್ತಿತ್ತು. ಅವನ ಶಿಷ್ಯರಾಗಬೇಕೆಂದು ಅನೇಕ ಜನ ತರುಣರು ಅಪೇಕ್ಷೆಪಡುತ್ತಿದ್ದರು. ಶಿಷ್ಯರನ್ನು ಆಯ್ದುಕೊಳ್ಳುವುದರಲ್ಲಿ ಶೇಖ್ ತುಂಬ ಕಾಳಜಿ ವಹಿಸುತ್ತಿದ್ದ. ಅವನು ಅವರನ್ನು ಬಹಳ ಪರೀಕ್ಷೆ ಮಾಡಿ ತನ್ನಲ್ಲಿ, ತನ್ನ ಚಿಂತನೆಗಳಲ್ಲಿ ಪೂರ್ಣ ನಂಬಿಕೆ ಇದ್ದವರನ್ನು ಮಾತ್ರ ಆರಿಸಿಕೊಳ್ಳುತ್ತಿದ್ದ.
ಮನಸ್ಸು ತಯಾರಾಗಿರದಿದ್ದರೆ ಆ ತರುಣರ ವಯಸ್ಸೂ ಹಾಳು ಮತ್ತು ಸಂತತ್ವ ಹೃದಯಕ್ಕಿಳಿಯಲಾರದು. ಆದ್ದರಿಂದ ಬಂದವರಿಗೆ ಪರೀಕ್ಷೆಗಳನ್ನು ಕೊಟ್ಟು ಅವರ ನಿಷ್ಠೆಯನ್ನು, ಧೃಡಮನಸ್ಸನ್ನು ಪರೀಕ್ಷಿಸುತ್ತಿದ್ದ. ಹೀಗಿರುವಾಗ ಒಬ್ಬ ತರುಣ ಶೇಖ್ ಬಳಿಗೆ ಬಂದು ತನ್ನನ್ನು ಶಿಷ್ಯನನ್ನಾಗಿ ತೆಗೆದುಕೊಳ್ಳಬೇಕೆಂದು ಕೇಳಿಕೊಂಡ. ತರುಣ ಬುದ್ಧಿವಂತ. ಸಾಕಷ್ಟು ತಯಾರಿ ಮಾಡಿಕೊಂಡೇ ಬಂದಿದ್ದಾನೆ ಎಂದು ತಿಳಿಯುತ್ತಿತ್ತು.
ಯಾವ ಪರೀಕ್ಷೆ ಮಾಡಿದರೂ ಆತ ಅದರಲ್ಲಿ ತೇರ್ಗಡೆಯಾದ. ಆದರೂ ಶೇಖ್ ತರುಣನನ್ನು ಒಪ್ಪಿಕೊಳ್ಳದೇ ಒಂದು ವಾರದ ನಂತರ ತನ್ನನ್ನು ಬಂದು ಕಾಣಬೇಕೆಂದೂ ಆಗ ತೀರ್ಮಾನ ಮಾಡುವುದಾಗಿಯೂ ಹೇಳಿ ಕಳುಹಿಸಿದ. ಶೇಖ್‌ನ ಹಿರಿಯ ಶಿಷ್ಯರಿಗೆ ಇದು ತುಂಬ ಆಶ್ಚರ್ಯವೆನಿಸಿತು.
ಎಲ್ಲ ಪರೀಕ್ಷೆಗಳಲ್ಲೂ ಉತ್ತೀರ್ಣನಾದ ಈ ಬುದ್ಧಿವಂತನನ್ನು ಗುರುಗಳು ತೆಗೆದುಕೊಳ್ಳಬಹುದಾಗಿತ್ತು ಎನ್ನಿಸಿತು. ಎರಡು ದಿನಗಳ ನಂತರ ಶೇಖ್ ತನ್ನ ಅತ್ಯಂತ ಶ್ರಿಮಂತ ಸ್ನೇಹಿತನೊಬ್ಬನನ್ನು ಕರೆದ. ಅವನ ಖ್ಯಾತ ಉದ್ದಿಮೆಯಲ್ಲಿ ಈ ತರುಣನಿಗೊಂದು ಮುಖ್ಯವಾದ ಹುದ್ದೆಯನ್ನು ಕೊಡುವಂತೆಯೂ, ಅದಕ್ಕೆ ಹೆಚ್ಚಿನ ಸಂಬಳವನ್ನು ನೀಡಬೇಕೆಂದೂ ತಿಳಿಸಿದ. ಸ್ನೇಹಿತ ಮರು ಮಾತನಾಡಲಿಲ್ಲ.
ಮರುದಿನವೇ ತರುಣನನ್ನು ಕರೆಸಿ ಅವನ ಪರೀಕ್ಷೆ ಮಾಡಿದ ನೆಪ ಮಾಡಿ ಕೆಲಸಕ್ಕೆ ನಿಯಮಿಸಿಕೊಂಡ. ಹುಡುಗನಿಗೆ ಬಲು ಆಶ್ಚರ್ಯ. ಇಷ್ಟು ಅನಾಯಾಸವಾಗಿ ಕೆಲಸ ಸಿಕ್ಕೀತೆಂದು ಆತ ಊಹಿಸಿರಲಿಲ್ಲ. ಅದರಲ್ಲೂ ಇಷ್ಟು ದೊಡ್ಡ ಸಂಬಳವನ್ನು ಯಾವ ಅನುಭವವೂ ಇಲ್ಲದ ತನಗೆ ಯಾರು ಕೊಟ್ಟಾರು. ತುಂಬ ಸಂತೋಷದಿಂದ ಕೆಲಸ ಒಪ್ಪಿಕೊಂಡ.
ಅವನು ಕೆಲಸಕ್ಕೆ ಸೇರಿದ ಮರು ದಿನವೇ ಶೇಖ್ ಅವನನ್ನು ಬರ ಹೇಳಿದ. ಅನುಮಾನಿಸುತ್ತಲೇ ತರುಣ ಬಂದ. ಶೇಖ್, `ಮಗೂ, ನೀನು ನನ್ನ ಶಿಷ್ಯತ್ವವನ್ನು ಅಪೇಕ್ಷಿಸಿ ಬಂದಿದ್ದೀಯಾ. ನಾನೂ ತುಂಬ ಆಲೋಚನೆ ಮಾಡಿದೆ. ಕೆಲವು ಪರೀಕ್ಷೆಗಳನ್ನು ಮಾಡಿದೆ. ಎಲ್ಲದರಲ್ಲೂ ನೀನು ಯಶಸ್ವಿಯಾಗಿರುವೆ.
ನಾಳೆಯಿಂದಲೇ ನೀನು ಆಶ್ರಮಕ್ಕೆ ಬಂದು ಸೇರಿಕೋ~ ಎಂದ. ತರುಣ ಶೇಖ್‌ನ ಕಣ್ಣುಗಳನ್ನು ನೋಡದಾದ. ತಲೆ ತಗ್ಗಿಸಿ ಹೇಳಿದ, `ಸ್ವಾಮೀ, ನಾನು ತಮ್ಮ ತೀರ್ಮಾನಕ್ಕಾಗಿ ಎರಡು ದಿನ ಕಾಯ್ದೆ. ತಾವು ಏನೂ ಹೇಳಲಿಲ್ಲ. ಹಾಗಾದರೆ ನಾನು ನಿಮ್ಮ ಅಪೇಕ್ಷಿತ ಮಟ್ಟಕ್ಕೆ ಬಂದಿಲ್ಲವೆಂದು ನಿರಾಶನಾದೆ.
ನಿನ್ನೆಯ ದಿನವೇ ಬಹುದೊಡ್ಡ ಉದ್ದಿಮೆಯೊಂದು ನನ್ನನ್ನು ಕೆಲಸಕ್ಕೆ ಸೇರಿಸಿಕೊಂಡಿದೆ. ನನ್ನ ಪರಿವಾರದ ಹಿತದೃಷ್ಟಿಯಿಂದ ಅದು ಒಳ್ಳೆಯದೆಂದು ಒಪ್ಪಿಕೊಂಡಿದ್ದೇನೆ~ ಎಂದ. ಶೇಖ್ ನಕ್ಕು ಹೇಳಿದ, `ಮಗೂ ಯಾವ ಕೆಲಸ ದೊರೆಯಲಿಲ್ಲವೆಂದು ಸಂತನಾಗುವುದು ಸಲ್ಲದು. ಎಲ್ಲವಿದ್ದರೂ ಅದನ್ನು ತೊರೆದು ಬರುವುದು ಸಂತತ್ವ.
ಅದಕ್ಕೆ ಬುದ್ಧಿಯ ಚತುರತೆ ಬೇಡ, ಹೃದಯದ ನಿಷ್ಕಲ್ಮಷತೆ ಬೇಕು~ ಎಂದ. ಸಾಧುವಾಗುವುದು ಸಂತನಾಗುವುದು ಪ್ರಪಂಚದಿಂದ ವಿಮುಖನಾಗುವುದಲ್ಲ. ಬದಲಾಗಿ ಜೀವನದ ಜೀವಾಂತರಂಗದಲ್ಲಿ ಹೋಗುವುದು, ಸುತ್ತಮುತ್ತಲಿನ ಜನರ ಮನೋಧರ್ಮ ಬದಲಾಯಿಸುವುದು. ಆಸೆಗಳನ್ನು, ಆಕರ್ಷಣೆಗಳನ್ನು ಗೆಲ್ಲದ ಹೊರತು ಈ ಗುರಿ ಸಾಧ್ಯವಿಲ್ಲ.
Comments
Post a Comment