ಅರಣ್ಯಪರ್ವ: ೦೪. ನಾಲ್ಕನೆಯ ಸಂಧಿ

ಸೂ. ಭಜಿಸಿದನು ನರನಿಂದ್ರಕೀಲದೊ
ಳಜ ಸುರಾರ್ಚಿತ ಚರಣ ಕಮಲನ
ತ್ರಿಜಗದಧಿಪತಿಯನು ಮಹಾನಟರಾಯ ಧೂರ್ಜಟಿಯ

ಕೇಳು ಜನಮೇಜಯ ಧರಿತ್ರೀ
ಪಾಲ ಪಾಂಡು ಕುಮಾರರಟವಿಯ
ಪಾಳಿಯಲಿ ಪರುಠವಿಸಿದರು ಪದಯುಗ ಪರಿಭ್ರಮವ
ಲೋಲಲೋಚನೆ ಸಹಿತ ತತ್ಕುಲ
ಶೈಲದಲಿ ತದ್ವಿಪಿನದಲಿ ತ
ತ್ಕೂಲಪತಿಗಳ ತೀರದಲಿ ತೊಳಲಿದರು ಬೇಸರದೆ ೧

ಫಳ ಮೃಗಾವಳಿ ಸವೆದುದಿನ್ನೀ
ಹಳುವು ಸಾಕಿನ್ನೊಂದರಣ್ಯ
ಸ್ಥಳವ ನೋಡಲಿ ಕಟಕ ನಡೆಯಲಿ ವಿಪ್ರಸಂಕುಲದ
ಸುಲಭವೀ ವನವೆಂದು ತಮ್ಮೊಳು
ತಿಳಿದು ಪಾರ್ಥ ಯುಧಿಷ್ಠಿರರು ಮುನಿ
ಕುಲ ಸಹಿತ ನಲವಿಂದ ಹೊಕ್ಕರು ದ್ವೈತಕಾನನವ ೨

ಅರಸ ಕಳುಹಿದ ದೂತನಾ ಗಜ
ಪುರವ ಹೊಕ್ಕು ತದೀಯ ವಾರ್ತಾ
ಭರದ ವಿವರವನರಿದು ಬಂದನು ಕಂಡನವನಿಪನ
ಕುರುನೃಪಾಲನ ಮದವನಾತನ
ಸಿರಿಯನಾತನ ಬಲುಹನಾತನ
ಪರಿಯನರುಹಿದನಬುಜಮುಖಿ ಪವನಜರು ಕಳವಳಿಸೆ ೩

ಮೂದಲಿಸಿದಳು ದ್ರುಪದ ತನುಜೆ ವೃ
ಕೋದರನನರ್ಜುನನವನಿಪ
ನಾದಿಯಾದೈವರನು ಕೌರವನೃಪನ ಪತಿಕರಿಸಿ
ಆದೊಡಿದೆ ಕುರುರಾಜ ವಂಶ
ಚ್ಛೇದ ಧೀರ ಕುಠಾರವೆನುತ ವೃ
ಕೋದರನು ತೂಗಿದನು ಗದೆಯನು ಗಾಢಕೋಪದಲಿ ೪

ಏಕಿದೇಕೆ ವೃಥಾ ನಿಶಾಟ
ವ್ಯಾಕರಣ ಪಾಂಡಿತ್ಯವಕಟ ವಿ
ವೇಕ ರಹಿತನೆ ನೀ ವೃಕೋದರ ದ್ರುಪದ ಸುತೆಯಂತೆ
ಸಾಕು ಸಾಕೈ ತಮ್ಮ ಸತ್ಯವೆ
ಸಾಕು ನಮಗೆ ಮದೀಯ ಪುಣ್ಯ
ಶ್ಲೋಕತೆಯನುಳುಹೆಂದು ಗಲ್ಲವ ಹಿಡಿದನನಿಲಜನ ೫

ಅರಸಿ ನಿನ್ನಯ ಶೋಕವಹ್ನಿಯೊ
ಳುರಿವುದರಿನೃಪಜಲಧಿ ಕೇಳಂ
ಬುರುಹಲೋಚನೆ ನಿನ್ನ ಲೋಚನವಾರಿ ಪೂರದಲಿ
ಕುರುನೃಪಾಲನ ಸತಿಯ ಶೋಕ
ಸ್ಫುರದನಲನುಜ್ವಲಿಸುವುದು ರಿಪು
ವಿರಚಿತದ ವಿಪರೀತಕಿದು ವಿಪರೀತವಹುದೆಂದ ೬

ಆ ಸಮಯದಲಿ ಬಂದನಗ್ಗದ
ಭೂಸುರ ಶ್ರೀಕಂಠನೋ ಪ
ದ್ಮಾಸನನ ಪಲ್ಲಟವೊ ಕಮಲಾಂಬಕನ ಚುಂಬಕವೊ
ಭಾಸುರ ಕ್ರತುಶತದ ರೂಪ ವಿ
ಳಾಸವೊ ಶ್ರುತಿಕೋಟಿ ಕನ್ಯಾ
ವಾಸಭವನವೊ ದೇವ ವೇದವ್ಯಾಸ ಮುನಿರಾಯ ೭

ಹಾ ಮಹಾ ದೇವಾಯಿದಾರು ಮ
ಹಾ ಮುನೀಶ್ವರರೆನುತ ಮುನಿಪ
ಸ್ತೋಮವೆದ್ದುದು ಧರ್ಮನಂದನನವರಿಗಿದಿರಾಗಿ
ಪ್ರೇಮ ಪುಳಕದ ನಯನ ಸಲಿಲದ
ರೋಮಹರ್ಷದ ಸತ್ಯಭಾವದ
ಭೂಮಿಪತಿ ಮೈಯಿಕ್ಕಿದನು ಮುನಿವರನ ಚರಣದಲಿ ೮

ವಿವಿಧ ಮುನಿಗಳ ಗೋತ್ರನಾಮ
ಪ್ರವರ ಸಹಿತಭಿವಾದ ಕರ್ಮೋ
ತ್ಸವವ ಕೈಕೊಳುತನಿಬರನು ಮನ್ನಿಸಿದನುಚಿತದಲಿ
ಯುವತಿ ಪದಕೆರಗಿದೊಡೆ "ಭೂಯಾತ್
ತವ ಮನೋರಥ" ವೆನುತ ನಸುನಗು
ತವನಿಪಾಲನ ಪರ್ಣಶಾಲೆಗೆ ಮುನಿಪನೈತಂದ ೯

ಇದೆ ಪವಿತ್ರ ಪಲಾಶ ಪತ್ರದ
ಲುದಕವರ್ಘ್ಯಾಚಮನ ಪಾದ್ಯ
ಕ್ಕಿದೆ ವಿಮಳ ದರ್ಭೋಪರಚಿತಾಸನ ವಿಳಾಸದಲಿ
ಇದನು ಕಾಂಚನ ಪಾತ್ರಜಲವೆಂ
ದಿದು ವರಾಸನವೆಂದು ಕೈಕೊಂ
ಬುದು ಯಥಾ ಸಂಭವದಲೆಂದನು ಧರ್ಮನಂದನನು ೧೦

ಈ ಪವಿತ್ರೋದಕವಲೇ ದೋ
ಷಾಪಹರ ದರ್ಭಾಸನದಲಿಂ
ದೀ ಪೃಥಿವಿ ಸರ್ವಾಧಿಪತ್ಯವು ಸೇರುವುದು ನಿನಗೆ
ಭೂಪಕೇಳೈ ಜೇನುನೊಣದ ಮ
ಧೂಪಚಯವವಕಿಲ್ಲಲೇ ಸ
ರ್ವಾಪಹಾರವು ಪರರಿಗಾ ಕೌರವನ ಸಿರಿಯೆಂದ ೧೧

ಒಡಲು ಬೀಳಲಿ ಮೇಣು ತಮ್ಮದಿ
ರಡವಿಯಲಿ ಹಾಯಿಕ್ಕಿ ಹೋಗಲಿ
ಮಡದಿ ಮುನಿಯಲಿ ಬಸಿದು ಬೀಳಲಿ ಧರಣಿ ಕುರುಪತಿಗೆ
ಎಡೆಯಲುಳಿವಿವರಾಗು ಹೋಗಿನ
ಗೊಡವೆಯೆನಗಿಲ್ಲೆನ್ನ ಸತ್ಯದ
ನುಡಿಗೆ ಹಾದರವಿಲ್ಲದಂತಿರೆ ಕರುಣಿಸುವುದೆಂದ ೧೨

ಬಾಧೆಯುಂಟೇ ನಿನ್ನ ಸತ್ಯಕೆ
ಸಾಧಿಸುವುದವಧಿಯನು ನಿನ್ನ ವಿ
ರೋಧಿಗಳಿಗೆ ನಿವಾಸವಹುದು ಕೃತಾಂತಲೋಕದಲಿ
ಆಧಿಪತ್ಯ ಭ್ರಮಿತರಲಿ ರಾ
ಜ್ಯಾದಿಯಲಿ ಕಡೆಗೊಂಡಿರಖಿಲ ನಿ
ರೋಧವನು ಕಡನನು ಸವೃದ್ಧಿಕವಾಗಿ ಕೊಡಿಯೆಂದ ೧೩

ಆವುದರಿದಿವರಿಗೆ ಭವತ್ಕರು
ಣಾವಲೋಕನವುಂಟು ಪುನರಪಿ
ದೇವಕೀ ನಂದನನಲೊದಗುವ ಮೇಲು ನೋಟದಲಿ
ಈ ವಿಪತ್ತೇಸರದು ಪಾಂಡವ
ಜೀವಿಗಳು ನೀವಿಬ್ಬರಿರಲೆಂ
ದಾ ವಿಭಾಂಡಕ ಶೌನಕಾದಿಗಳೆಂದರಾ ಮುನಿಗೆ ೧೪

ಕರೆಸಿ ದ್ರುಪದಾತ್ಮಜೆಯ ಕಂಬನಿ
ಯೊರತೆಯಾರಲು ನುಡಿದನಾಕೆಯ
ಕರಣದಲಿ ಕಿವಿಗೊಂಡ ಕಳಕಳವನು ವಿಭಾಡಿಸಿದ
ಧರಣಿಪತಿಗೇಕಾಂತ ಭವನದೊ
ಳೊರೆದನೀಶ್ವರ ವಿಷಯ ಮಂತ್ರಾ
ಕ್ಷರವನಂಗೋಪಾಂಗ ಮುದ್ರಾಶಕ್ತಿಗಳು ಸಹಿತ ೧೫

ಇದು ಮಹೀಶರ ಶೋಕಹರವಿಂ
ತಿದು ವಿರೋಧಿಬಲ ಪ್ರಭಂಜನ
ವಿದು ಸಕಲ ಪುರುಷಾರ್ಥ ಸಾಧನವಖಿಳ ದುರಿತಹರ
ಇದು ಮಹಾಧಿವ್ಯಾಧಿಹರವಿಂ
ತಿದನು ನೀ ಕೊಳ್ಳರ್ಜುನಂಗೊರೆ
ವುದು ರಹಸ್ಯದೊಳೆಂದು ಮುನಿ ಕರುಣಿಸಿದನರಸಂಗೆ ೧೬

ಪಾರ್ಥ(ಪಾ: ಪ್ರಾರ್ಥ)ನೈದುವುದಿಂದ್ರ ಕೀಲದೊ
ಳರ್ಥಿಸಲಿ ಶಂಕರನನಖಿಳ
ಸ್ವಾರ್ಥ ಸಿದ್ಧಿಗೆ ಬೀಜವಿದು ಬೇರೊಂದು ಬಯಸದಿರು
ವ್ಯರ್ಥರವದಿರು ನಿನ್ನ ಹಗೆಯ ಕ
ದರ್ಥನದೊಳಿನ್ನೇನು ಜಗಕೆ ಸ
ಮರ್ಥನೊಬ್ಬನೆ ಶಂಭು ಕೃಪೆ ಮಾಡುವನು ನಿನಗೆಂದ ೧೭

ಇಂದುಮುಖಿಯನು ಭೀಮನನು ಯಮ
ನಂದನನರ್ಜುನನ ಯಮಳರ
ನಂದು ಕೊಂಡಾಡಿದನು ಮೈದಡವಿದನು ಮೋಹದಲಿ
ಬಂದು ಸಂದಣಿಸಿದ ಮುನಿ ದ್ವಿಜ
ವೃಂದವನು ಮನ್ನಿಸಿ ನಿಜಾಶ್ರಮ
ಮಂದಿರಕೆ ಮುದದಿಂದ ಬಿಜಯಂಗೈದನಾ ಮುನಿಪ ೧೮

ಅರಸ ಕೇಳೈ ಮುನಿಪನತ್ತಲು
ಸರಿದನಿತ್ತಲು ಪಾರ್ಥನನು ನೃಪ
ಕರೆದು ವೇದವ್ಯಾಸನಿತ್ತುಪದೇಶ ವಿಸ್ತರವ
ಅರುಹಿದನು ಕೈಲಾಸ ಸೀಮಾ
ವರುಷದಲ್ಲಿಹುದಿಂದ್ರ ಕೀಲದ
ಗಿರಿ ಮಹೇಶ ಕ್ಷೇತ್ರವಲ್ಲಿಗೆ ಹೋಗು ನೀನೆಂದ ೧೯

ಅಲ್ಲಿ ಭಜಿಸುವದಮಳ ಗಿರಿಜಾ
ವಲ್ಲಭನನಾಮ್ನಾಯ ಜಿಹ್ವೆಗೆ
ದುರ್ಲಭನನಧಿ ದೈವವನು ಬ್ರಹ್ಮೇಂದ್ರ ಭಾಸ್ಕರರ
ಬಲ್ಲೆನೆಂಬರ ಬಹಳ ಗರ್ವವ
ಘಲ್ಲಿಸುವ ಗಡ ತನ್ನ ಭಕ್ತರು
ಬಲ್ಲಿದರು ತನಗೆಂಬ ಬೋಳೆಯರರಸನಿಹನೆಂದ ೨೦

ಏಳು ನೀ ಪ್ರತ್ಯೂಷದಲಿ ಶಶಿ
ಮೌಳಿ ಮೈದೋರಲಿ ತದೀಯ ಶ
ರಾಳಿಗಳು ಸಿದ್ಧಿಸಲಿ ಸೇರಲಿ ಶಿವನ ಕೃಪೆ ನಿನಗೆ
ಸೋಲದಿರು ಸುರಸತಿಯರಿಗೆ ಸ
ಮ್ಮೇಳವಾಗದಿರವರೊಡನೆ ಕೈ
ಮೇಳವಿಸುವುದು ಕಾಮವೈರಿಯ ಚರಣಕಮಲದಲಿ ೨೧

ಮುಗ್ಗದಿರು ಮಾಯೆಯಲಿ ಮದದಲಿ
ನೆಗ್ಗದಿರು ರೋಷದ ವಿಡಂಬದ
ಲಗ್ಗಳೆಯತನದಿಂದಹಂಕೃತಿ ಭರದಿ ಮೆರೆಯದಿರು
ಅಗ್ಗಿಸದಿರಾತ್ಮನನು ಲೋಭದೊ
ಳೊಗ್ಗದಿರು ಲಘುವಾಗದಿರು ಮಿಗೆ
ಹಿಗ್ಗದಿರು ಹೊಗಳಿಕೆಗೆ ಮನದಲಿ ಪಾರ್ಥ ಕೇಳೆಂದ ೨೨

ಆಡದಿರಸತ್ಯವನು ಕಪಟವ
ಮಾಡದಿರು ನಾಸ್ತಿಕರೊಡನೆ ಮಾ
ತಾಡದಿರು ಕೆಳೆಗೊಳ್ಳದಿರು ವಿಶ್ವಾಸಘಾತಕರ
ಖೋಡಿಗಳೆಯದಿರಾರುವನು ಮೈ
ಗೂಡದಿರು ಪರವಧುವಿನಲಿ ರಣ
ಖೇಡನಾಗದಿರೆಂದು ನುಡಿದನು ನೃಪತಿಯರ್ಜುನಗೆ ೨೩

ಕ್ರೂರರಿಗೆ ಶಠರಿಗೆ ವೃಥಾಹಂ
ಕಾರಿಗಳಿಗತಿ ಕುಟಿಲರಿಗೆಯುಪ
ಕಾರಿಯಪಘಾತರಿಗೆ ಭೂತದ್ರೋಹಿ ಜೀವರಿಗೆ
ಜಾರರಿಗೆ ಜಡರಿಗೆ ನಿಕೃಷ್ಟಾ
ಚಾರರಿಗೆ ಪಿಸುಣರಿಗೆ ಧರ್ಮವಿ
ದೂರರಿಗೆ ಕಲಿಪಾರ್ಥ ಕೇಳ್ ಪರಲೋಕವಿಲ್ಲೆಂದ ೨೪

ಭ್ರಾತೃ ಮಿತ್ರ ವಿರೋಧಿಕಗೆ ಪಿತೃ
ಮಾತೃಘಾತಿಗೆ (ಪಾ: ಮಾತೃವಿಘಾತಿಗೆ) ಖಳನಿಗುತ್ತಮ
ಜಾತಿನಾಶಕನಿಂಗೆ (ಪಾ: ಜಾತಿನಾಶಕಂಗೆ) ವರ್ಣಾಶ್ರಮ ವಿದೂಷಕಗೆ
ಜಾತಿಸಂಕರಕಾರಗಾ ಕ್ರೋ
ಧಾತಿರೇಕಗೆ ಗಾಢ ಗರ್ವಿಗೆ
ಭೂತವೈರಿಗೆ ಪಾರ್ಥ ಕೇಳ್ ಪರಲೋಕವಿಲ್ಲೆಂದ ೨೫

ಸ್ವಾಮಿಕಾರ್ಯ ವಿಘಾತಕಂಗತಿ
ಕಾಮುಕಗೆ ಮಿಥ್ಯಾಪವಾದಿಗೆ
ಭೂಮಿದೇವ ದ್ವೇಷಿಗತ್ಯಾಶಿಗೆ ಬಕವ್ರತಿಗೆ
ಗ್ರಾಮಣಿಗೆ ಪಾಷಂಡಗಾತ್ಮ ವಿ
ರಾಮಕಾರಿಗೆ ಕೂಟಸಾಕ್ಷಿಗೆ
ನಾಮಧಾರಿಗೆ ಪಾರ್ಥ ಕೇಳ್ ಪರಲೋಕವಿಲ್ಲೆಂದ ೨೬

ಅದರಿನಾವಂಗುಪಹತಿಯ ಮಾ
ಡದಿರು ಸಚರಾಚರದ ಚೈತ
ನ್ಯದಲಿ ನಿನ್ನನೆ ಬೆರಸಿ ಕಾಬುದು ನಿನ್ನ ತನುವೆಂದು
ಬೆದರದಿರು ಬಲುತಪಕೆ ಶೂಲಿಯ
ಪದಯುಗವ ಮರೆಯದಿರು ಹರಿಯನು
ಹೃದಯದಲಿ ಪಲ್ಲಟಿಸದಿರು ಸುಖಿಯಾಗು ಹೋಗೆಂದ ೨೭

ಕರುಣಿಸಲಿ ಕಾಮಾರಿ ಕೃಪೆಯಿಂ
ವರ ಮಹಾಸ್ತ್ರವನಿಂದ್ರ ಯಮ ಭಾ
ಸ್ಕರ ಹುತಾಶನ ನಿರುತಿ ವರುಣ ಕುಬೇರ ಮಾರುತರು
ಸುರರು ವಸುಗಳು ಸಿದ್ಧ ವಿದ್ಯಾ
ಧರ ಮಹೋರಗ ಯಕ್ಷ ಮನು ಕಿಂ
ಪುರುಷರೀಯಲಿ ನಿನಗೆ ವಿಮಳ ಸ್ವಸ್ತಿವಾಚನವ ೨೮

ಎನೆ ಹಸಾದವೆನುತ್ತೆ ಯಮ ನಂ
ದನಗೆ ಭೀಮಂಗೆರಗಿದನು ಮುನಿ
ಜನಕೆ ಮೈಯಿಕ್ಕಿದನು ಮುಳುಗಿದನಕ್ಷತೌಘದಲಿ
ವನಜಮುಖಿ ಮುನಿ ವಧುಗಳಾಶೀ
ರ್ವಿನುತ ದಧಿ ದೂರ್ವಾಕ್ಷತೆಯನು
ಬ್ಬಿನಲಿ ಕೈಕೊಳುತನಿಬರನು ಮನ್ನಿಸಿದನುಚಿತದಲಿ ೨೯

ನೆನೆಯದಿರು ತನುಸುಖವ ಮನದಲಿ
ನೆನೆ ವಿರೋಧಿಯ ಸಿರಿಯನೆನ್ನಯ
ಘನತರದ ಪರಿಭವವ ನೆನೆ ನಿಮ್ಮಗ್ರಜರ ನುಡಿಯ
ಮುನಿವರನ ಮಂತ್ರೋಪದೇಶವ
ನೆನೆವುದಭವನ ಚರಣ ಕಮಲವ
ನೆನುತ ದುರುಪದಿಯೆರಗಿದಳು ಪಾರ್ಥನ ಪದಾಬ್ಜದಲಿ ೩೦

ಹರನ ಚರಣವ ಭಜಿಸುವೆನು ದು
ರ್ಧರ ತಪೋನಿಷ್ಠೆಯಲಿ ಕೇಳೆಲೆ
ತರುಣಿ ಪಾಶುಪತಾಸ್ತ್ರವಾದಿಯ ದಿವ್ಯಮಾರ್ಗಣವ
ಪುರಹರನ ಕೃಪೆಯಿಂದ ಪಡೆದಾ
ನರಿಗಳನು ಸಂಹರಿಸಿ ನಿನ್ನಯ
ಪರಿಭವಾಗ್ನಿಯ ನಂದಿಸುವೆ ನಿಲ್ಲೆಂದನಾ ಪಾರ್ಥ ೩೧

ಬಿಗಿದ ಬತ್ತಳಿಕೆಯನು ಹೊನ್ನಾ
ಯುಗದ ಖಡುಗ ಕಠಾರಿ ಚಾಪವ
ತಗೆದನಳವಡೆಗಟ್ಟಿ ಬದ್ದುಗೆದಾರ ಗೊಂಡೆಯವ
ದುಗುಡ ಹರುಷದ ಮುಗಿಲ ತಲೆಯೊ
ತ್ತುಗಳಿಗಿಟ್ಟೆಡೆಯಾಗಿ ಗುಣ ಮೌ
ಳಿಗಳ ಮಣಿ ಕಲಿಪಾರ್ಥ ಬೀಳ್ಕೊಂಡನು ನಿಜಾಗ್ರಜನ ೩೨

ಹರಡೆ ವಾಮದೊಳುಲಿಯೆ ಮಧುರ
ಸ್ವರದಲಪಸವ್ಯದಲಿ ಹಸುಬನ
ಸರ ಸಮಾಹಿತಮಾಗೆ ಸೂರ್ಯೋದಯದ ಸಮಯದಲಿ
ಹರಿಣ ಭಾರದ್ವಾಜನುಡಿಕೆಯ
ಸರಟ ನಕುಲನ ತಿದ್ದುಗಳ ಕು
ಕ್ಕುರನ ತಾಳಿನ ಶಕುನವನು ಕೈಕೊಳುತ ನಡೆತಂದ ೩೩

ನೀಲಕಂಠನ ಮನದ ಬಯಕೆಗೆ
ನೀಲಕಂಠನೆ ಬಲಕೆ ಬಂದುದು
ಮೇಲುಪೋಗಿನ ಸಿದ್ಧಿ ದೈತ್ಯಾಂತಕನ ಬುದ್ಧಿಯಲಿ
ಕಾಲಗತಿಯಲಿ ಮೇಲೆ ಪರರಿಗೆ
ಕಾಲಗತಿಯನು ಕಾಬೆನೈಸಲೆ
ಶೂಲಧರನೇ ಬಲ್ಲನೆನುತೈತಂದನಾ ಪಾರ್ಥ ೩೪

ಅರಸ ಕೇಳೈ ಬರುತ ಭಾರತ
ವರುಷವನು ದಾಂಟಿದನು ತಂಪಿನ
ಗಿರಿಯ ತಪ್ಪಲನಿಳಿದಿನಾ ಹರಿವರುಷ ಸೀಮೆಯಲಿ
ಬೆರಸಿದನು ಬಳಿಕುತ್ತರೋತ್ತರ
ಸರಣಿಯಲಿ ಸೈನಡೆದು ಹೊಕ್ಕನು
ಸುರರ ಸೇವ್ಯವನಿಂದ್ರಕೀಲ ಮಹಾ ವನಾಂತರವ ೩೫

ಗಿಳಿಯ ಮೃದು ಮಾತುಗಳ ಮರಿಗೋ
ಗಿಲೆಯ ಮಧುರ ಧ್ವನಿಯ ಹಂಸೆಯ
ಕಳರವದ ಮರಿ ನವಿಲ ಕೇಕಾ ರವದ ನಯಸರದ
ಮೆಲುದನಿಯ ಪಾರಿವದ ತುಂಬಿಯ
ಲಲಿತ ಗೀತದ ವನ ವನದ ಸಿರಿ ಬಗೆ
ಗೊಳಿಸಿತೈ ಪೂರ್ವಾಭಿಭಾಷಣದಲಿ ಧನಂಜಯನ ೩೬

ಸೊಂಪೆಸೆವ ಕೋಗಿಲೆಯ ಸರ ದೆಸೆ
ತಂಪೆಸೆವ ತಂಬೆಲರ ಹುವ್ವಿನ
ಜೊಂಪವನು ಜೊಂಪಿಸುವ ಮರಿದುಂಬಿಗಳ ಮೇಳವದ
ಪೆಂಪೊಗುವ ತಾವರೆಗೊಳಂಗಳ
ತಂಪಿನೊದವಿನ ವನದ ಸೊಗಸಿನ
ಸೊಂಪು ಸೆಳೆದುದು ಮನವನೀತನನರಸ ಕೇಳೆಂದ ೩೭

ಚಾರುತರ ಪರಿಪಕ್ವ ನವ ಖ
ರ್ಜೂರ ರಸಧಾರಾ ಪ್ರವಾಹ ಮ
ನೋರಮೇಕ್ಷು ವಿಭೇದ ವಿದ್ರುಮರಸದ ದಾಳಿಂಬ
ಭೂರಿ ಜಂಬ ಮಧೂಕ ಪನಸ
ಸ್ಫಾರ ರಸಪೂರಾನುಕಲಿತ ವಿ
ಹಾರ ಸುರಮಹಿಳಾಭಿರಂಜಿಸುವಖಿಳ ವನಭೂಮಿ ೩೮

ವಿಲಸದಭ್ರದಲಿಹ ಮಹಾ ತರು
ಕುಲದಿನಮರನದೀಸ್ತನಂಧಯ
ಫಲರಸದ ಸವಿಗಳಲಿ ದಿಕ್ಕೂಲಂಕಷೋನ್ನತಿಯ
ಸುಳಿವ ಪರಿಮಳ ಪವನನಿಂ ಕಂ
ಗೊಳಿಸಿತರ್ಜುನ ಕಾಮ್ಯ ಸಿದ್ಧಿ
ಸ್ಥಳದೊಳಂತರ್ಮಿಥುನ ಕಾನನವರಸ ಕೇಳೆಂದ ೩೯

ಇಲ್ಲಿ ನಿಲ್ಲರ್ಜುನ ತಪೋವನ
ಕಿಲ್ಲಿ ನೆಲೆ ಶ್ರುತಿಯುವತಿ ಸೂಸುವ
ಚೆಲ್ಲೆಗಂಗಳ ಮೊನೆಗೆ ಮೀಸಲುಗುಡದ ಮೈಸಿರಿಯ
ದುರ್ಲಲಿತದಷ್ಟಾಂಗ ಯೋಗದ
ಕೊಲ್ಲಣಿಗೆಯಲಿ ಕೂಡದಪ್ರತಿ
ಮಲ್ಲ ಶಿವನ ಕ್ಷೇತ್ರವಿದೆಯೆಂದುದು ನಭೋನಿನದ ೪೦

ಧರಣಿಪನ ಬೀಳ್ಕೊಂಡು ಮಾರ್ಗಾಂ
ತರದೊಳಾರಡಿಗೈದು ಹೊಕ್ಕನು
ಹರನ ಕರುಣಾ ಸಿದ್ಧಿ ಸಾಧನವೆನಿಪ ಗಿರಿವನವ
ಮರುದಿವಸದುದಯದಲಿ ಮಿಂದನು
ಸರಸಿಯಲಿ ಸಂದ್ಯಾಭಿಮುಖದಲಿ
ತರಣಿಗರ್ಘ್ಯವನಿತ್ತು ದೇವವ್ರಜಕೆ ಕೈಮುಗಿದ ೪೧

ವಿನುತ ಶಾಂಭವ ಮಂತ್ರಜಪ ಸಂ
ಜನಿತ ನಿರ್ಮಲ ಭಾವಶುದ್ಧಿಯ
ಮನದೊಳರ್ಜುನನೆತ್ತಿ ನಿಂದನು ದೀರ್ಘ ಬಾಹುಗಳ
ನೆನಹು ನೆಮ್ಮಿತು ಶಿವನನಿತರದ
ನನೆಕೊನೆಯ ತೆರಳಿಕೆಯ ತೊಡಚೆಯ
ಮನದ ಸಂಚಲವೀಚುವೋದುದು ಕಲಿ ಧನಂಜಯನ ೪೨

ಮುಗುಳುಗಂಗಳ ಮೇಲು ಗುಡಿದೋ
ಳುಗಳ ಮಿಡುಕುವ ತುಟಿಯ ತುದಿಗಾ
ಲುಗಳ ಹೊರಿಗೆಯ ತಪದ ನಿರಿಗೆಯ ನಿಷ್ಪ್ರಕಂಪನದ
ಬಿಗಿದ ಬಿಲ್ಲಿನ ಬೆನ್ನ ಬತ್ತಳಿ
ಕೆಗಳ ಕಿಗ್ಗಟ್ಟಿನ ಕಠಾರಿಯ
ಹೆಗಲಡಾಯುಧ ಹೊಸತಪಸಿ ತೊಡಗಿದನು ಬಲುತಪವ ೪೩

ಅರಸ ಕೇಳೈ ವಿಪ್ರವೇಷವ
ಧರಿಸಿ ಧರೆಗಿಳಿದನು ಸುರೇಶ್ವರ
ತರಹರಿಸದೀ ಮಾತನೆಂದನು ನಿಜಕುಮಾರಂಗೆ
ಮರಿಚ ಮೌಕ್ತಿಕ ಲೋಹ ಹೇಮಾ
ಭರಣ ಚರ್ಮ ದುಕೂಲ ಮಿಳಿ ಹಾ
ದರಿಯ ಹೂವಿನ ದಂಡೆಗೇಕನಿವಾಸವೇಕೆಂದ ೪೪

ಆವ ಸೇರಿಕೆ ಜಪಕೆ ಚಾಪ ಶ
ರಾವಳಿಗೆ ಶಮೆ ದಮೆಗೆ ಖಡ್ಗಕಿ
ದಾವ ಸಮ್ಮೇಳನ ವಿಭೂತಿಗೆ ಕವಚ ಸೀಸಕಕೆ
ಆವುದಿದರಭಿಧಾನ ತಪವೋ
ಡಾವರಿಗ ವಿದ್ಯಾ ಸಮಾಧಿಯೊ
ನೀವಿದೆಂತಹ ಋಷಿಗೆಳೆಂಬುದನರಿಯೆ ನಾನೆಂದ ೪೫

ಕಂದೆರೆದು ನೋಡಿದನು ನೀವೇ
ನೆಂದರೆಯು ಹೃದಯಾಬ್ಜ ಪೀಠದ
ಲಿಂದುಮೌಳಿಯನಿರಿಸಿ ಮೆಚ್ಚಿಸುವೆನು ಸಮಾಧಿಯಲಿ
ಇಂದಿನೀ ಬಹಿರಂಗ ಚಿಹ್ನೆಯ
ಕುಂದು ಹೆಚ್ಚಿಸಲೇನು ಫಲವೆನ
ಲಂದು ತಲೆದೂಗಿದನು ಸುರಪತಿ ತೋರಿದನು ನಿಜವ ೪೬

ಮಗನೆ ನಿನ್ನಯ ಮನದ ನಿಷ್ಠೆಗೆ
ಸೊಗಸಿದೆನು ಪಿರಿದಾಗಿ ಹರನಿ
ಲ್ಲಿಗೆ ಬರಲಿ ಕರುಣಿಸಲಿ ನಿನ್ನ ಮನೋಭಿವಾಂಛಿತವ
ಹಗೆಗೆ ಹರಿವಹುದೆಂದು ಸುರ ಮೌ
ಳಿಗಳ ಮಣಿ ಸರಿದನು ವಿಮಾನದ
ಲಗಧರನ ಮೈದುನನ ಮಹಿಮೆಯನಿನ್ನು ಕೇಳೆಂದ ೪೭





ಕೃಪೆ :  http://gaduginabharata.blogspot.in/
Contributors

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು