ಕೊಕ್ಕರೆ ಹಾರಾಟ, ಏರೊಡೈನಮಿಕ್ಸ್‌ ಮತ್ತು ಟೀಮ್‌ವರ್ಕ್‌ - *ಶ್ರೀವತ್ಸ ಜೋಶಿ

ನಮ್ಮ ಕನ್ನಡನಾಡಿನ ಬೆಳ್ಳೂರಿಗೆ ಹಿಂಡುಹಿಂಡಾಗಿ ಕೊಕ್ಕರೆಗಳು ವಲಸೆ ಬರುತ್ತವೆ (ಹಾಗಾಗಿಯೇ ಅದಕ್ಕೆ ಕೊಕ್ಕರೆ ಬೆಳ್ಳೂರು ಎಂಬ ಹೆಸರು) ಅಂತ ಕರ್ನಾಟಕದ ಶಾಲೆಹುಡುಗ ಪರಿಸರಶಾಸ್ತ್ರವನ್ನು ಕಲಿತರೆ, ದೂರದ ಕೆನಡಾ ದೇಶದ ಎನ್‌ವಿರಾನ್ಮೆಂಟಲ್‌ ಸೈನ್ಸ್‌ ಸ್ಟೂಡೆಂಟ್‌ ಸಹ Canadian Geese(ಕೊಕ್ಕರೆಯನ್ನು ಹೋಲುವ ಪಕ್ಷಿ) ಚಳಿಗಾಲದಲ್ಲಿ ದಕ್ಷಿಣದ ಪ್ರದೇಶಗಳಿಗೆ ಎಮಿಗ್ರೇಟ್‌ ಆಗುವ ಬಗ್ಗೆ ಕಲಿಯು ತ್ತಾನೆ.

ಅದೇನು ಮಹಾ ವಿಷಯವೆ? ಹಕ್ಕಿಗಳ ವಲಸೆ ಬಗ್ಗೆ ನಾವೆಲ್ಲರೂ ಶಾಲೆ ಕಾಲೇಜಲ್ಲಿ ಎಷ್ಟೊಂದು ಓದಿ ತಿಳಿದಿಲ್ಲವೆ? ಆಹಾರವನ್ನು ಹುಡುಕಿ ಕೊಂಡು, ಸಂತಾನೋತ್ಪತ್ತಿಗಾಗಿ, ಋತುಮಾನಬದಲಾವಣೆಯಿಂದ - ಹೀಗೆ ಪಕ್ಷಿವಲಸೆಯ ವಿವಿಧ ಕಾರಣಗಳನ್ನೂ ತಿಳಿದುಕೊಂಡಿರುತ್ತೇವೆ ನಮ್ಮಲ್ಲಿನ ಸಲೀಂ ಆಲಿ ಅನುಯಾಯಿಗಳು. ಇರಲಿ, ಸಂಗತಿ ಅದಲ್ಲ - ಕೊಕ್ಕರೆ ಗುಂಪು ತನ್ನ ವಲಸೆ ಹಾರಾಟದ ವೇಳೆ ಇಂಗ್ಲಿಷ್‌ನ V ಅಕ್ಷರ ದ ಮಾದರಿಯಲ್ಲಿ ಹಾರುತ್ತದಲ್ಲ ಅದರ ಹಿಂದಿನ ಸ್ವಾರಸ್ಯವೇನು, ಪ್ರಕೃತಿಯ ಆ ಸೋಜಿಗದಲ್ಲಿ ಏನಿದೆ ನಾವು ಕಲಿಯುವಂಥದು - ಇದು ಈವಾರದ ವಿಚಿತ್ರಾನ್ನದ ಹೂರಣ!

ಬನ್ನಿ, ಸೈಬರ್‌ ಆಕಾಶದಲ್ಲಿ ಕೊಕ್ಕರೆ ಗುಂಪಿನಂತೇ ಹಾರಾಡಿ ತಿಳಿದುಕೊಳ್ಳೋಣ.



* * *

ಸಂಜೆಯ ಹೊಂಬಿಸಿಲಲ್ಲಿ , ವರ್ಣರಂಜಿತ ಮೇಘಗಳ ಬ್ಯಾಕ್‌ಡ್ರಾಪ್‌ನಲ್ಲಿ ಹಿತವಾದ ಗಾಳಿ ಬೀಸುತ್ತಿರಲು... ದೂರದಲ್ಲೊಂದು ಹಕ್ಕಿಗಳ ಹಿಂಡು ಹಾರುತ್ತಿದ್ದರೆ... ಕವಿಹೃದಯದವರಿಗೆ ಒಡನೆಯೇ ಕಲ್ಪನೆಗಳು ಗರಿಕೆದರಿ ‘ಹಕ್ಕಿ ಹಾರುತಿವೆ ನೋಡಿದಿರಾ...’ ಎಂದು ಕವಿತೆ ಉದಿಸಬಹುದು. ಅಥವಾ ‘ಹಾರುತಿರೆ ಬಾನಾಡಿಗಳು... ಎದೆಯಲ್ಲಿ ಸಂತಸದ ಹೊನಲು...’ ಎಂದೆನಿಸಬಹುದು. ಪರಂತು ಕವಿ ಹೃದಯಿ ಗಳಲ್ಲದ ಆದರೆ ಪರಾಮರ್ಶಕ ಸ್ವಭಾವಿಗಳಿಗೆ? ಯಾಕೆ ಆ ಹಕ್ಕಿಗಳು ಅದೇ ಪ್ಯಾಟರ್ನ್‌ನಲ್ಲಿ ಹಾರಬೇಕು, ಏನಿರಬಹುದು ಅದರ ಹಿಂದಿನ ವೈಜ್ಞಾನಿಕ ಕಾರಣ ಎಂಬ ಕುತೂಹಲ!

ಇದೆ, ಕೊಕ್ಕರೆ ಗುಂಪಿನ V ಅಕ್ಷರದಾಕಾರದ ರಚನೆಯ ಹಿಂದೆ ಏಕ್‌ದಂ ಅನುಕರಣೀಯವಾದ ತತ್ವಸಿದ್ಧಾಂತವೇ ಅಡಗಿದೆ! ಬಾನಲ್ಲಿ ಹಾರುವ ಆ ಪಕ್ಷಿಗಳಿಂದ ಭುವಿಯಲ್ಲಿನ ಹುಲುಮಾನವರಾದ ನಾವು ಕಲಿಯತಕ್ಕ ನೀತಿಪಾಠವಿದೆ. ಇದನ್ನು ವಿಜ್ಞಾನಿಗಳು, ಪಕ್ಷಿತಜ್ಞರು ಸಂಶೋಧನೆಗಳ ಮೂಲಕ ಪುಷ್ಟೀಕರಿಸಿದ್ದಾರೆ.

ಸಂಗತಿ 1 : ಕೊಕ್ಕರೆಗಳು ಒಂದರ ಹಿಂದೆ ಇನ್ನೊಂದು ಅಥವಾ ಒಂದರ ಪಕ್ಕ ಇನ್ನೊಂದು ಹೀಗೆ ಉದ್ದ ಅಥವಾ ಅಡ್ಡ ಸರಳರೇಖೆಯಲ್ಲಿ ಹಾರದೆ V ಅಕ್ಷರದಾಕಾರದಲ್ಲೇ ಹಾರುವುದರಿಂದ ಏನಾಗುತ್ತದೆಯೆಂದರೆ ಮುಂದಿರುವ ಹಕ್ಕಿಯ ರೆಕ್ಕೆಬಡಿತದಿಂದ ಉಂಟಾದ ನಿರ್ವಾತದಿಂ ದ ಹಿಂದಿನ ಹಕ್ಕಿಯ ಹಾರುವಿಕೆಗೆ ನಿರಾಯಾಸವಾಗಿ ‘ಲಿಫ್ಟ್‌’ ಸಿಗುತ್ತದೆ; ಅದರ ರೆಕ್ಕೆ ಬಡಿತದಿಂದ ಅದರಹಿಂದಿನದಕ್ಕೆ - ಹೀಗೆ ಕ್ರಮಬದ್ಧ ಸಂಚಲನೆಯಿಂದಾಗಿ ಇಡೀ ಗುಂಪಿಗೆ ಶಕ್ತಿಯ ಉಳಿತಾಯವಾಗುತ್ತದೆ. ಒಬ್ಬಂಟಿಯಾಗಿ ಹಾರುವುದಕ್ಕಿಂತ ಸುಮಾರು 70% ಅಧಿಕ ದೂರ ವನ್ನು ಗುಂಪು ಕ್ರಮಿಸಬಲ್ಲದಂತೆ! ಅದೇ ಬೇಕಾಬಿಟ್ಟಿಯಾಗಿ ಅಡ್ಡಾದಿಡ್ಡಿಯಾಗಿ ಅವು ಹಾರುತ್ತಿದ್ದರೆ? ಅರ್ಧದಷ್ಟೂ ದೂರ ಸಾಗಲಾರವು.
ನೀತಿ 1 : ಸಮಾನ ಮನಸ್ಕ, ಸಾಮಾನ್ಯ ಉದ್ದೇಶವಿರುವ ಜನರು ಒಬ್ಬೊಬ್ಬರಾಗಿ ಶ್ರಮಿಸದೆ ಗುಂಪಿನಲ್ಲಿ ಪರಸ್ಪರ ನೆರವಾಗಿ ಮುನ್ನಡೆದರೆ ಯೋಜಿತ ಗುರಿಯನ್ನು ಕಡಿಮೆ ಪ್ರಯಾಸದಲ್ಲಿ, ಕಡಿಮೆ ಸಮಯದಲ್ಲಿ ಸಾಧಿಸಬಹುದು!

There is a lesson to be learnt by human beingಸಂಗತಿ 2 : ಅಕಸ್ಮಾತ್‌ ಹಕ್ಕಿಯಾಂದು ಗುಂಪಿನಿಂದ ಪ್ರತ್ಯೇಕಗೊಂಡರೆ, ಒಂಟಿಯಾಗಿ ಹಾರುವ ಭಾರ ಅದಕ್ಕೆ ಒಡನೆಯೇ ಗೊತ್ತಾಗುತ್ತದೆ. ಆದಷ್ಟು ಬೇಗನೆ ಅದು ಗುಂಪನ್ನು ಕೂಡಿಕೊಂಡು ‘ಹಾರಾಟದ ಶಕ್ತಿಯ ಉಳಿತಾಯ’ ಲಾಭವನ್ನು ಪಡೆಯಲಾರಂಭಿಸುತ್ತದೆ.
ನೀತಿ 2 : ಕೊಕ್ಕರೆಯಷ್ಟಾದರೂ ಬುದ್ಧಿ ನಮ್ಮಲ್ಲಿದ್ದದ್ದೇ ಆದರೆ ನಾವೂ ಸಮುದಾಯದಿಂದ, ಸಮಾಜದಿಂದ ಅನವಶ್ಯಕವಾಗಿ ಪ್ರತ್ಯೇಕಗೊಳ್ಳ ದೆ, ಮುನ್ನಡೆಯುತ್ತಿರುವ ಇತರರನ್ನು ಅನುಸರಿಸುತ್ತೇವೆ. ಇತರರ ನೆರವನ್ನು ಪಡೆದಂತೆಯೇ ನಮ್ಮ ಕೈಲಾದಷ್ಟು ಇತರರಿಗೆ ನೆರವಾಗಲು ಸಿದ್ಧ ರಿರುತ್ತೇವೆ.

ಸಂಗತಿ 3 : V ಅಕ್ಷರದಾಕಾರದಲ್ಲಿ ಪ್ರಯಾಣದುದ್ದಕ್ಕೂ ಒಂದೇ ಕೊಕ್ಕರೆ ಮುಂಚೂಣಿಯಲ್ಲಿರುತ್ತದೆಂದೇನೂ ಇಲ್ಲ. ಅಸಲಿಗೆ ಏರೊಡೈನ ಮಿಕ್‌ ಫಾರ್ಮೇಶನ್‌ನಲ್ಲಿ ಅಗ್ರನಾಯಕನಾದ ಹಕ್ಕಿಗೆ ಹಾರಾಟಶಕ್ತಿಯಲ್ಲಿ ಯಾವೊಂದು ಉಳಿತಾಯವೂ ಇಲ್ಲ (ವಿವರಣೆಗೆ ಸಂಗತಿ 1ನ್ನು ನೋಡಿ). ಹಾಗಾಗಿ ಅದಕ್ಕೆ ಬೇಗ ದಣಿವಾಗುತ್ತದೆ. ಆಗ ಗುಂಪಿನ ಇನ್ನೊಂದು ಹಕ್ಕಿಯು ಮುಂಚೂಣಿಗೆ ಬಂದು ದಣಿದಿದ್ದ ಹಕ್ಕಿ ಹಿಂಭಾಗ ಕ್ಕೆ ಬರುತ್ತದೆ. ಸಾವಿರಾರು ಮೈಲಿಗಳ ಪ್ರಯಾಣದಲ್ಲಿ ಹೀಗೆ ಗುಂಪಿನ ಎಲ್ಲ ಹಕ್ಕಿಗಳೂ ಪಾಳಿಯಲ್ಲಿ ಟೀಮ್‌ಲೀಡ್‌ ಪಾತ್ರ ನಿರ್ವಹಿಸುತ್ತವೆ.
ನೀತಿ 3 : ತಂಡಕ್ಕೆ ನಾಯಕನಾಗುವುದು, ಕಷ್ಟಕರ ಜವಾಬ್ದಾರಿ ವಹಿಸುವುದು - ಇವನ್ನು ತಂಡದ ಎಲ್ಲರೂ ಸರದಿಯಾಗಿ ನಿರ್ವಹಿಸಿದರೆ ಬಹಳ ಲಾಭವಿದೆ. ಗುಂಪಿನ ಪ್ರತಿಯಾಬ್ಬ ಸದಸ್ಯನ ವೈಯಕ್ತಿಕ ಪ್ರತಿಭೆ, ಸಾಮರ್ಥ್ಯ ಮತ್ತು ಸಂಪನ್ಮೂಲಗಳಿಗೆ ಬೆಲೆಯಿದೆ, ಅವುಗಳ ಸದು ಪಯೋಗವಾದರೆ ಎಲ್ಲರಿಗೂ ಒಟ್ಟಾರೆಯಾಗಿ ಲಾಭವೇ ಆಗುತ್ತದೆ. ಅಧಿಕಾರಲಾಲಸೆಯಿಂದ ಕುರ್ಚಿಗಂಟಿಕೊಳ್ಳುವ ಕೊಬ್ಬಿದ ಮಂದಿ, ಹಾಗೆಯೇ ಜವಾಬ್ದಾರಿಯಿಂದ ನುಣುಚಿ ಹಿಂದಿನಬೆಂಚುಗಳಿಗೆ ಸೀಮಿತವಾಗುವ ಮೈಗಳ್ಳರೂ ಯಕ್ಕಶ್ಚಿತ್‌ ಕೊಕ್ಕರೆಗಳಿಂದ ಕಲಿಯಬೇಕಾದ್ದು ಬಹಳವಿದೆ!

ಸಂಗತಿ 4 : V ಆಕಾರದಲ್ಲಿ ಹಿಂದಿನ ಭಾಗದಲ್ಲಿರುವ ಕೊಕ್ಕರೆಗಳು ಒಂದುವಿಧದ ’ಹೂಂ’ಕಾರ ಮಾಡಿ ತಂಡಕ್ಕೆ ಉತ್ತೇಜನ ಕೊಡುತ್ತವೆ.
ನೀತಿ 4 : ಯಾವುದೇ ತಂಡದಲ್ಲೂ ಪ್ರತಿಯಾಂದು ಸಾಧನೆಗೂ ತಂಡದ ಇತರರಿಂದ ಅಪರಿಮಿತ ಪ್ರೋತ್ಸಾಹ ಸಿಕ್ಕಿದರೆ ಆ ತಂಡ ವಿಜಯ ದತ್ತ ದಾಪುಗಾಲು ಹಾಕುತ್ತದೆ. ತಂಡದ ಸದಸ್ಯರ ವೈಯಕ್ತಿಕ ಮೌಲ್ಯಗಳನ್ನು ಗೌರವಿಸುವ, ಕ್ರಿಯಾಶೀಲತೆಯನ್ನು ಉತ್ತೇಜಿಸುವ ಮಾತು, ಚರ್ಯೆಗಳು ಅಲ್ಲೊಂದು ಪಾಸಿಟಿವ್‌ ಶಕ್ತಿ ಕ್ಷೇತ್ರವನ್ನು ನಿರ್ಮಾಣ ಮಾಡುತ್ತವೆ ಎಂದರೆ ಅತಿಶಯೋಕ್ತಿಯಲ್ಲ. ಮತ್ತೆ ಅನಿಲ್‌ಕುಂಬ್ಳೆ ಯಾಗಲೀ ಹರ್ಭಜನ್‌ ಸಿಂಗ್‌ ಆಗಲೀ ಎದುರಾಳಿತಂಡದ ದೈತ್ಯವಿಕೆಟ್‌ಅನ್ನು ಉರುಳಿಸಿದಾಗ ‘ಹೈ-ಫೈವ್‌’ಮಾಡಲು ಇಡೀ ತಂಡ ಒಂದೇ ಕಡೆ ಜಮಾಯಿಸುವುದು ಇನ್ನೇನಕ್ಕೆ?

ಸಂಗತಿ 5 : ಗುಂಪಿನ ಯಾವುದೇ ಕೊಕ್ಕರೆಗೆ ಗಾಯವಾಯಿತು ಅಥವಾ ಅನಾರೋಗ್ಯ ಕಾಡಿತು ಎಂದಿರಲಿ, ಆಗ ಇನ್ನೆರಡು ಕೊಕ್ಕರೆಗಳು ಅದನ್ನು ಗುಂಪಿಂದ ಪ್ರತ್ಯೇಕಿಸಿ ನೆಲದವರೆಗೂ ಅನುಸರಿಸಿ ಅದರ ಜತೆಯಲ್ಲೇ ಇದ್ದು ಆರೈಕೆಮಾಡಿ ಮತ್ತೆ ಅದಕ್ಕೆ ಹಾರುವ ಶಕ್ತಿ ಬರುವ ತನಕವೂ ಕಾದುಕುಳಿತು ಆಮೇಲೆ ಮೂರೂ ಸೇರಿ ಪ್ರಯಾಣ ಮುಂದುವರಿಸುತ್ತವೆ.
ನೀತಿ 5 : ಕೊಕ್ಕರೆಗಳೇ ಹಾಗೆ ಮಾಡುತ್ತವೆಂದ ಮೇಲೆ ’ಜ್ಞಾನವಂತರೂ, ವಿವೇಚನಾಶಕ್ತಿಯುಳ್ಳವರೂ’ ಆದ ನಾವು ಒಬ್ಬರ ದೈನ್ಯಾವಸ್ಥೆ ಯಲ್ಲಿ ಅವರ ಕೈಹಿಡಿದು ಸಾಂತ್ವನ ಹೇಳಿ ಹುಮ್ಮಸ್ಸು ಮೂಡಿಸುವುದು ಕರ್ತವ್ಯವಲ್ಲವೇ? ಸುಖ-ಕಷ್ಟಗಳೆರಡರಲ್ಲೂ ಜತೆಯಾಗಿರುವುದೇ ಸ್ವಚ್ಛ ಸ್ನೇಹದ ಸಂಕೇತವಲ್ಲವೇ?

* * *

It is a splender to watch Geese flying in V formation ಮುಂದಿನ ಸಲ ನೀಲಾಕಾಶದಲ್ಲಿ V ಅಕ್ಷರದಾಕಾರದ ಹಕ್ಕಿಹಿಂಡನ್ನು ಕಂಡಾಗ ಆ Vಹಂಗಮಗಳ ಬಗೆಗಿನ Vಚಿತ್ರಾನ್ನ ಲೇಖನ ನಿಮ್ಮ ನೆನಪಿ ಗೆ ಬರುತ್ತದೆ. ಜತೆಯಲ್ಲೇ, ಪ್ರಕೃತಿಮಾತೆ ಹಕ್ಕಿಗಳ ಮೂಲಕ ನಮಗೆ ಕಲಿಸುವ ನೀತಿಪಾಠದ ರಿವಿಜನ್‌ ಮನಸ್ಸಲ್ಲೇ ಆಗಿಹೋಗುತ್ತದೆ. ಮತ್ತೆ, ವಿಚಿತ್ರಾನ್ನದ ಎಂದಿನ ಚಾಳಿಯಿಂದಾಗಿ ಬೆಳ್ಳೂರು, ನಮ್ಮೂರು, ನಿಮ್ಮೂರು, ಹಕ್ಕಿ, ನವಿಲುಗರಿ, ಗುಬ್ಬಚ್ಚಿ, ಪಾರಿವಾಳ, ಗಿಣಿ ಕಚ್ಚಿದ ಪೇರಳೆ, ಚೈತ್ರದಲ್ಲಿ ಹಾಡುವ ಕೋಗಿಲೆ... ಎಲ್ಲ ನೆನಪಾಗುತ್ತವೆ.

ಏನ್ಮಾಡೋದು, ಕೊಕ್ಕರೆಗಳಂತೇ ನೆನಪುಗಳದೂ ಬೆಚ್ಚಗಿನ ಗೂಡಿನತ್ತ ಸಹಸ್ರಾರು ಯೋಜನಗಳ ಹಾರಾಟ. ಅಲ್ಲವೇ?

ನಿಮ್ಮ ಪತ್ರದ ನಿರೀಕ್ಷೆಯಲ್ಲಿ, - srivathsajoshi@yahoo.com


Courtesy: http://m.oneindia.in/kannada/column/vichitranna/2005/290305hakki.html

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು