ಮಾವಿನ ಹಣ್ಣಿನ ಕಥೆ
ನಮ್ಮ ಮಾವಿನ ಹಣ್ಣಿಗೆ ಬಹಳ ದೊಡ್ಡ ಇತಿಹಾಸವಿದೆ. ಈ ಹಣ್ಣಿನ ಮರ ನಮ್ಮ ದೇಶದಲ್ಲಿದ್ದು ಸುಮಾರು ನಾಲ್ಕು ಸಾವಿರ ವರ್ಷಗಳಾದುವಂತೆ. ಕ್ರಿಸ್ತಪೂರ್ವ ನಾಲ್ಕನೇ ಶತಮಾನದಲ್ಲಿ ಅಲೆಕ್ಸಾಂಡರ ನಮ್ಮ ದೇಶಕ್ಕೆ ಬಂದಾಗ ಅವನಿಗೆ ಈ ಹಣ್ಣು ತುಂಬ ಇಷ್ಟವಾಗಿತ್ತಂತೆ.
ಇನ್ನೊಂದು ದಂತಕಥೆಯ ಪ್ರಕಾರ, ಮಾವಿನ ಹಣ್ಣನ್ನು ಲಂಕೆಯಿಂದ ನಮ್ಮ ದೇಶಕ್ಕೆ ತಂದದ್ದು ಆಂಜನೇಯನಂತೆ. ಅಶೋಕವನದಲ್ಲಿ ಸೀತೆಯನ್ನು ಕಂಡು ಉಂಗುರವನ್ನು ಕೊಟ್ಟ ಮೇಲೆ ಸಂತೋಷದಿಂದ ಮರದಿಂದ ಮರಕ್ಕೆ ಹಾರಿ ಸಿಕ್ಕ ಹಣ್ಣುಗಳನ್ನೆಲ್ಲ ತಿಂದನಂತೆ.
ಎಲ್ಲಕ್ಕಿಂತ ಮಾವಿನಹಣ್ಣು ತುಂಬ ಪ್ರಿಯವಾಗಿದ್ದರಿಂದ ಅದರ ಬೀಜಗಳನ್ನು ನಮ್ಮ ದೇಶಕ್ಕೆ ತಂದು ಹಾಕಿದನಂತೆ. ಇನ್ನೊಂದು ಕಥೆಯಂತೆ, ಪಾರ್ವತಿ-ಪರಮೇಶ್ವರರ ಮದುವೆಯಾದದ್ದು ಮಾವಿನ ಮರದ ಕೆಳಗೆ. ಆದ್ದರಿಂದಲೇ ಮನೆಯಲ್ಲಿ ಯಾವುದೇ ಶುಭ ಸಮಾರಂಭ ನಡೆದರೆ ಮಾವಿನ ಎಲೆಗಳಿಂದ ಅಲಂಕಾರ ಮಾಡುತ್ತಾರೆಂದು ಹೇಳುತ್ತಾರೆ.
ಬೌದ್ಧಧರ್ಮದಲ್ಲೂ ಮಾವಿನ ಮರಕ್ಕೆ ವಿಶೇಷ ಸ್ಥಾನವಿದೆ. ಬುದ್ಧನ ಜಾತಕ ಕಥೆಗಳಲ್ಲಿ ಇದರ ಪ್ರಸ್ತಾಪ ಬರುತ್ತದೆ. ಬುದ್ಧ ಎಷ್ಟೋ ಜನ್ಮಗಳ ಹಿಂದೆ ಮಹಾಕಪಿಯಾಗಿ ಜನ್ಮ ಎತ್ತಿದ್ದ.
ಅವನ ಜೊತೆಗೆ ಎಂಬತ್ತು ಸಾವಿರ ಕಪಿಗಳು ಇದ್ದವು. ರಾಜನಾದ ಮಹಾಕಪಿಯ ಜೊತೆಗೆ ಉಳಿದ ಕೋತಿಗಳು ಗಂಗಾತೀರದ ದಟ್ಟ ಕಾಡಿನಲ್ಲಿ ಒಂದು ಬೃಹತ್ ಮಾವಿನ ಮರದ ಮೇಲೆ ವಾಸವಾಗಿದ್ದವು. ಮಹಾಕಪಿ ಉಳಿದ ಕೋತಿಗಳಿಗೆ, `ಈ ಹಣ್ಣು ವಿಶೇಷವಾದದ್ದು.
ಇದರ ಒಂದು ಹಣ್ಣೂ ನೆಲದ ಮೇಲೆ ಬೀಳದ ಹಾಗೆ ನೋಡಿಕೊಳ್ಳಿ. ಒಂದು ಬಾರಿ ಮನುಷ್ಯರಿಗೆ ಮಾವಿನಹಣ್ಣಿನ ರುಚಿ ಗೊತ್ತಾಯಿತೋ ಅವರು ಈ ಹಣ್ಣಿಗಾಗಿ ನಮ್ಮನ್ನೆಲ್ಲ ನಾಶಮಾಡಲು ಹಿಂಜರಿಯುವವರಲ್ಲ~ ಎಂದು ಹೇಳಿದನಂತೆ. ಕೋತಿಗಳು ಹಾಗೆಯೇ ನೋಡಿಕೊಂಡವು.
ಆದರೆ, ಒಂದು ದಿನ ಮಾತ್ರ ಪೂರ್ತಿಯಾಗಿ ಮಾಗಿದ ಹಣ್ಣು ತೊಟ್ಟು ಕಳಚಿ ನದಿಯ ನೀರಿನಲ್ಲಿ ಬಿತ್ತು. ತೇಲುತ್ತ ಮುಂದೆ ಸಾಗಿತು. ಕೆಳಹರಿವಿನಲ್ಲಿ ಕಾಶೀನಗರದ ರಾಜ ಬ್ರಹ್ಮದತ್ತ ಗಂಗಾನದಿಯಲ್ಲಿ ಸ್ನಾನ ಮಾಡುತ್ತಿದ್ದ. ಈ ಹಣ್ಣು ತೇಲುತ್ತ ಅವನ ಕೈ ಸೇರಿತು.
ಇದೇನು ಬಣ್ಣದ ಹಣ್ಣು ಎಂದು ತೆಗೆದುಕೊಂಡು ತೀರಕ್ಕೆ ಬಂದು ಅದನ್ನು ಹಿಂಡಿ ರಸವನ್ನು ಬಾಯಿಯಲ್ಲಿ ಹಾಕಿಕೊಂಡ. ಪರಮಾನಂದವಾಯಿತು. ಇಂಥ ಹಣ್ಣನ್ನು ಎಂದೂ ಕಂಡಿರಲೂ ಇಲ್ಲ, ಸವಿದೂ ಇರಲಿಲ್ಲ. ತನ್ನ ಮಂತ್ರಿಗಳಿಗೆ, ಅಧಿಕಾರಿಗಳಿಗೆ ಈ ಹಣ್ಣಿನ ಮರವನ್ನು ಕಂಡು ಹಿಡಿದು ಅಂಥ ಮರವನ್ನಾಗಲೀ, ಬೀಜವನ್ನಾಗಲೀ ತನ್ನ ರಾಜ್ಯಕ್ಕೆ ತರಬೇಕೆಂದು ಆಜ್ಞೆ ಮಾಡಿದ.
ಎಷ್ಟೋ ದಿನಗಳ ನಂತರ ರಾಜನ ದೂತರು ಗಂಗಾನದಿಯ ಪ್ರವಾಹಕ್ಕೆ ವಿರುದ್ಧವಾಗಿ ನಡೆದು ಬಂದು ಕಾಡಿನಲ್ಲಿದ್ದ ಈ ಮರವನ್ನು ಕಂಡರು. ಮರದ ತುಂಬ ಹಣ್ಣುಗಳು. ಸುದ್ದಿ ತಿಳಿದು ರಾಜ ಬಂದ. ಮರದ ಮೇಲೆ ತುಂಬಿಕೊಂಡಿದ್ದ ಕೋತಿಗಳನ್ನು ನೋಡಿದ.
ಈ ಕೋತಿಗಳೆಲ್ಲ ಹಣ್ಣುಗಳನ್ನು ತಿಂದುಬಿಡುತ್ತವೆ ಎಂದುಕೊಂಡು ಈ ಕೋತಿಗಳನ್ನು ಓಡಿಸಿ ಇಲ್ಲವೇ ಕೊಂದುಬಿಡಿ ಎಂದು ಆಜ್ಞೆ ಮಾಡಿದ. ತನ್ನ ಪರಿವಾರದವರು ಸಾಯಬಾರದೆಂದು ಮಹಾಕಪಿ ನದಿಯ ತುದಿಯವರೆಗೂ ಚಾಚಿಕೊಂಡಿದ್ದ ಕೊಂಬೆಯೊಂದನ್ನು ಏರಿ ಆ ಕಡೆಗೆ ಹಾರಿತು.
ನಂತರ ಉದ್ದವಾದ ಕೋಲನ್ನು ತಂದು ಅದಕ್ಕೆ ಕಟ್ಟಿ ಕೋತಿಗಳಿಗೆಲ್ಲ ಅದರ ಮೂಲಕ ಇನ್ನೊಂದು ದಂಡೆಗೆ ಹೋಗಲು ಹೇಳಿತು. ಆ ಕೋಲು ಕೊಂಚ ಗಿಡ್ಡವಾದ್ದರಿಂದ ತನ್ನ ದೇಹವನ್ನೇ ಸೇತುವೆಯಂತೆ ಚಾಚಿ ಹಿಡಿದುಕೊಂಡಿತು. ಕೋತಿಗಳೆಲ್ಲ ಆ ಕಡೆಗೆ ಸಾಗಿದವು. ಆದರೆ ದೇವದತ್ತನೆಂಬ ಕೋತಿ ಮಹಾಕಪಿಯ ಮೇಲೆ ಸಿಟ್ಟಿನಿಂದ ದಾಟುವಾಗ ಅದರ ಬೆನ್ನನ್ನು ಒತ್ತಿ ತುಳಿದು ಮುರಿದುಬಿಟ್ಟಿತು. ಆದರೂ ಎಲ್ಲ ಕೋತಿಗಳೂ ದಾಟುವವರೆಗೆ ಮಹಾಕಪಿ ನೋವನ್ನು ತಾಳಿಕೊಂಡು ನಂತರ ಕುಸಿದು ಬಿದ್ದಿತು.
ಈ ಮಹಾಕಪಿಯ ತ್ಯಾಗ ಬುದ್ಧಿಯನ್ನು ಕಂಡು ರಾಜ ಬ್ರಹ್ಮದತ್ತ ಅದನ್ನು ಅರಮನೆಗೆ ತಂದು ಶುಶ್ರೂಷೆ ಮಾಡಿದ. ಅದು ಫಲಕಾರಿಯಾಗದೇ ಮಹಾಕಪಿ ಸತ್ತು ತನ್ನ ಅವತಾರ ಮುಗಿಸಿತು. ರಾಜ ಬ್ರಹ್ಮದತ್ತ ಆ ಕಪಿಯ ನೆನಪಿಗಾಗಿ ಮಾವಿನಗಿಡದ ಕೆಳಗೆ ಒಂದು ದೇವಸ್ಥಾನ ಕಟ್ಟಿಸಿದ. ಹೀಗೆ ಮಾವಿನ ಹಣ್ಣಿನ ಮರದ ಕಥೆ ಬೆಳೆಯುತ್ತದೆ.
ಇದರ ತಾತ್ಪರ್ಯವಿಷ್ಟೇ. ನಾವು ಬಳಸುವ ಪ್ರತಿಯೊಂದು ವಸ್ತುವಿಗೆ ಒಂದು ಅದ್ಭುತ ಇತಿಹಾಸ, ಕತೆ ಇರುತ್ತದೆ. ಅದನ್ನು ತಿಳಿದು ಗಮನಿಸಿದಾಗ ಆ ವಸ್ತುವಿನ ಬಗ್ಗೆ ಗೌರವ, ಪ್ರೀತಿ ಬರುತ್ತದೆ. ಮಾವಿನ ಹಣ್ಣು ತಿನ್ನುವಾಗ ಈ ಕಥೆಗಳು ಜ್ಞಾಪಕವಾದರೆ ಹಣ್ಣಿನ ರುಚಿ ಹೆಚ್ಚುತ್ತದೆ.
Comments
Post a Comment