Sunday, September 30, 2012

ವಲಿ.... (ಭಾಗ-4)


ಮಹಮದನ ನೂತನ ಧರ್ಮದ ವಿರುದ್ಧ ನಡೆದ ಅನೇಕ ಆರಂಭಿಕ ದ್ವೇಷಪೂರಿತ ಹೋರಾಟಗಳು ಇತಿಹಾಸಕಾರರಿಂದ ದಾಖಲಿಸಲ್ಪಟ್ಟಿವೆ. ಅವುಗಳಲ್ಲಿ ಪ್ರಸಿದ್ಧಿ ಪಡೆದ ಕಥೆಯೊಂದು ಹೀಗಿದೆ.... 'ಮುಸಬ್ ಇಬ್ನ ಒಮೈರ್' ಎಂಬ ಪ್ರಸಿದ್ಧ ಖುರೈಷಿ ಬುಡಕಟ್ಟಿನ ಯುವ ವ್ಯಕ್ತಿಯೊಬ್ಬ ಅಲ್ ಅಕ್ರಮನ ಮನೆಯಲ್ಲಿ ನಡೆಯುತ್ತಿದ್ದ ಮಹಮದನ ಮತ ಭೋದನೆಯಿಂದ ಪ್ರಭಾವಿತನಾಗಿ ಅವನ ಧರ್ಮಕ್ಕೆ ಮತಾಂತರಗೊಂಡ. ಅವನ ಈ ಉದ್ಧಟ ನಡುವಳಿಕೆಯಿಂದ ಕುಪಿತಗೊಂಡ ಅವನ ಹತ್ತಿರದ ಸಂಬಂಧಿಕರು ಅವನ ವಿರುದ್ಧ ಬಹಿಷ್ಕಾರ ಹಾಕಿದರು, ಅದರಲ್ಲೂ ಈ ಬಗ್ಗೆ ವಿಪರೀತ ನೊಂದುಕೊಂಡ ಆತನ ತಾಯಿ ತನ್ನ ನಿಲುವಿಗೆ ವಿರುದ್ಧವಾಗಿ ಮಗ ಮತಾಂತರಗೊಂಡದ್ದರಿಂದ ಮಗ ಹಾಗೂ ಮಹಮದನ ಮೇಲೆ ಕೆರಳಿ ಕೆಂಡವಾದಳು. ಅವಳ ಈ ಕೋಪ ಮಗನನ್ನು ಗೃಹಬಂಧನದಲ್ಲಿರುವ ಮೂಲಕ ಪರ್ಯಾವಸನಗೊಂಡಿತು. ಆದರೆ ಆತ ಅದು ಹೇಗೊ ಅಲ್ಲಿಂದ ತಪ್ಪಿಸಿಕೊಂಡು ಹೋಗಿ ಅಬಿಸೀನಿಯಕ್ಕೆ ಓಡಿಹೋದ. ಅಲ್ಲಿಂದ ಕೆಲಕಾಲದ ಬಳಿಕ ಆತ ಮೆಕ್ಕಾಗೆ ಹಿಂದಿರುಗಿದಾಗ ಆತನ ಆರ್ಥಿಕ ಹಾಗೂ ಸಾಮಾಜಿಕ ಪರಿಸ್ಥಿತಿ ತೀರಾ ಶೋಚನೀಯವಾಗಿತ್ತು. ಆದರೆ ಮಗನ ಬಗ್ಗೆ ಕಠಿಣ ನಿಲುವು ತೆಳೆದಿದ್ದ ತಾಯಿ ಆತನನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಲಿಲ್ಲ, ಹೀಗಾಗಿ ವಿಧಿಯಿಲ್ಲದೆ ಆತ ಕ್ಯಾರವಾನ್ ಒಂದರ ಹಿಂದೆ ಅಲೆಮಾರಿಯಾಗಿ ಎತ್ತಲೊ ಹೋಗಬೇಕಾಯಿತು. ಇದಾಗಿ ಎರಡುವರ್ಷಗಳ ನಂತರ ಆತ ಮರಳಿ ಮೆಕ್ಕಾಕ್ಕೆ ಬಂದ. ಆಗಲೂ ಅವನ ಪರಿಸ್ಥಿತಿ ಹೆಚ್ಚು ಸುಧಾರಿಸಿರಲಿಲ್ಲ. ಈ ಸಾರಿ ಆತನ ಕಡೆಗೆ ಕೊಂಚ ಮೃದುವಾಗಿದ್ದ ಆತನ ತಾಯಿ ಹಳೆಯ ಮಮತೆಯಿಂದ "ಈಗಲೂ ನೀನು ಸ್ವ-ಮತ ಭ್ರಷ್ಟನಾಗಿದ್ದೀಯ?" ಎಂದು ಪ್ರಶ್ನಿಸಿದಳು. ಆತ "ನಾನು ಸತ್ಯಧರ್ಮವಾದ ಇಸ್ಲಾಮನ್ನು ಹಾಗೂ ಪ್ರವಾದಿಯನ್ನು ಹಿಂಬಾಲಿಸುತ್ತಿದ್ದೇನೆ!" ಎಂದು ಉತ್ತರಿಸಿದ. "ಬಾಳಿನ ಉದ್ದಕ್ಕೂ ಹೀಗೆಯೆ ಶೋಚನೀಯ ಸ್ಥಿತಿಯಲ್ಲೆ ಕಾಲ ಹಾಕಬೇಕೆನ್ನುವುದೆ ನಿನ್ನ ಅಂತಿಮ ನಿರ್ಧಾರವ?" ಎಂದಾಕೆ ಮರಳಿ ಪ್ರಶ್ನಿಸಿದಳು. ತನ್ನನ್ನು ಈಕೆ ಮತ್ತೆ ಗೃಹ ಬಂಧನಕ್ಕೆ ಒಳಪಡಿಸಬಹುದು ಎಂಬ ಆತಂಕಕ್ಕೆ ಒಳಗಾದ ಆತ "ಏನು ಒಬ್ಬ ಶ್ರದ್ಧಾವಂತ ಮುಸ್ಲೀಮನನ್ನು ಧರ್ಮ ತ್ಯಜಿಸಲು ನೀನು ಆಮಿಷ ಒಡ್ಡುತ್ತಿದ್ದೀಯ! ಹಾಗೊಂದು ವೇಳೆ ನನ್ನನ್ನು ಇಚ್ಛೆಗೆ ವಿರುದ್ಧವಾಗಿ ಬಂಧನಕ್ಕೆ ಒಳಪಡಿಸಿದೆಯಾದಲ್ಲಿ ನಾನು ನಿನ್ನನ್ನು ಕೊಲ್ಲಲೂ ಹೇಸುವುದಿಲ್ಲ?!" ಎಂದು ಆವೇಶದಿಂದ ಕೂಗಿದ. ತಾಯಿಯೂ ಕನಲಿ "ತೊಲಗು! ಹಾಗಿದ್ದಲ್ಲಿ ಕ್ಷಣ ಮಾತ್ರವೂ ನನ್ನೆದುರು ನಿಲ್ಲಬೇಡ!!" ಎಂದು ಕೂಗಿದಳು. ಆತ ದುಃಖತಪ್ತನಾಗಿ " ಅಮ್ಮಾ,ನಿನಗೆ ಕರುಣಾಮೃತವಾದ ಉಪದೇಶ ನೀಡುತ್ತೇನೆ ಕೇಳು. ದೇವರೊಬ್ಬನೇ ಮಹಮದ್ ಆತನ ಸೇವಕ ಹಾಗೂ ಪ್ರವಾದಿ ಎನ್ನುವುದನ್ನ ನುಡಿದು ನರಕದಿಂದ ಪಾರಾಗು" ಎಂದು ನುಡಿದಾಗ ಆಕೆಗೆ ಕೋಪ ಕಟ್ಟೆಯೊಡೆದು " ನಿನ್ನ ಸೈತಾನ ಧರ್ಮಕ್ಕೆ ಸೇರುವ ಬೆಪ್ಪಳಾಗಲಾರೆ! ತೊಲಗು ಇಲ್ಲಿಂದ, ಇಂದಿಗೆ ನೀ ನನ್ನ ಪಾಲಿಗೆ ಸತ್ತೆ" ಎಂದು ಚೀರಿದಳು. ಮಹಮದ್ ಆರಂಭದಲ್ಲಿ ಆರ್ಥಿಕವಾಗಿ ಹಿಂದುಳಿದಿದ್ದ ಸಮಾಜದ ಕೆಳವರ್ಗದ ಮಂದಿಯನ್ನ ತನ್ನ ಪ್ರಭಾವಲಯದೊಳಗೆ ಮೆಕ್ಕಾದ ಸುತ್ತಮುತ್ತ ಸೆಳೆದುಕೊಳ್ಳುವ ಪ್ರಯತ್ನಮಾಡಿದ. ಅನಂತರ ಖುರೈಶಿಗಳಲ್ಲಿ ಪ್ರತಿಷ್ಠಿತವಾದವರತ್ತ ತನ್ನ ಮೋಹಜಾಲ ಬೀಸಲು ಆರಂಭಿಸಿದ. ಹೀಗೊಮ್ಮೆ ಖುರೈಶಿಗಳಲ್ಲೇ ಉನ್ನತ ವರ್ಗದವನಾಗಿದ್ದ ಅಲ್ ವಾಲಿಬನೊಡನೆ ಧಾರ್ಮಿಕ ಚರ್ಚೆಯಲ್ಲಿ ತೊಡಗಿಕೊಂಡಿದ್ದಾಗ ಅಬ್ದುಲ್ಲಾ ಇಬ್ನ ಉಮ್ಜ್ ಮಕ್ತೂಮ್ ಎಂಬ ಅಂಧ ವ್ಯಕ್ತಿಯೊಬ್ಬ ನಡುವೆ ಬಾಯಿಹಾಕಿ ತನಗೂ ಖುರಾನನ್ನು ತಿಳಿಹೇಳಬೇಕೆಂದು ಕೋರಿದ. ಆದರೆ ಆ ಕ್ಷಣ ಕೋಪಕ್ಕೆ ತುತ್ತಾದ ಮಹಮದ್ ಅವನ್ನು ಕಡೆಗಣಿಸಿ ಗಡುಸಾಗಿ ಮಾರುತ್ತರವನ್ನಿತ್ತ. ಆದರೆ ಕೆಲಹೊತ್ತಿನ ನಂತರ ತನ್ನ ಈ ಹೀನ ನಡುವಳಿಕೆಗೆ ಸ್ವತಃ ನಾಚಿಕೆಪಟ್ಟುಕೊಂಡು 'ಯಾವ ದೇವರು ಒಬ್ಬ ಕುರುಡನನ್ನು ಸೃಷ್ಠಿಸಿದ್ದಾನೊ ಅವನನ್ನು ನಾನು ಕಡೆಗಣಿಸಿದ್ದು ತಪ್ಪು, ತೋರಿಕೆಯ ಸಿರಿವಂತನ ಎದುರು ಅವನನ್ನು ಅನಾದರಿಸಬಾರದಿತ್ತು ಎಂದು ಗೋಳಾಡಿದಾಗ ಸಂತೈಸುವ ದೈವವಾಣಿ ಅವನಿಂದಲೆ ಹೊರಬಂತು. ಹಾಗೆ ಹೊರ ಹೊಮ್ಮಿದ್ದೆ ಸುರಾ 80/1-11 ಎನ್ನುತ್ತಾನೆ ಇತಿಹಾಸಕಾರ ಮ್ಯೂರ್. ಈ ಘಟನೆಯ ಮುಖಾಂತರ ದೀನ ದಲಿತರ ಬಗ್ಗೆ ಉದಾತ್ತ ಭಾವನೆಯೊಂದು ಮಹಮದನ ಹೃದಯವನ್ನು ಹೊಕ್ಕು ಪ್ರಕಾಶಿಸಿತು ಎನ್ನಬಹುದು. ಇದೆ ಸಮಯದಲ್ಲಿ ಆತನ ಮತಪ್ರಚಾರದ ದಿಕ್ಕು ಅರಬೇತರರಾದ ಗ್ರೀಕ್ ಸಮುದಾಯಕ್ಕೆ ಸೇರಿದ ಕ್ರೈಸ್ತರ ಕಡೆಗೆ ತಿರುಗಿತು. ಗುಲಾಮನಾಗಿ ಅರಬ್ಬಿ ಬೆದಾವಿನ್ ಬುಡಕಟ್ಟಿಗೆ ಮಾರಲ್ಪಟ್ಟಿದ್ದ ಸಿನಾನನ ಮಗ ಸಾಹೇಬ್ ಎಂಬ ಗ್ರೀಕನೊಬ್ಬ ಈ ಹೊತ್ತಿಗೆ ಇಸ್ಲಾಂ ಸ್ವೀಕರಿಸಿದ. ಮೆಕ್ಕಾದ ಪ್ರಮುಖ ವ್ಯಕ್ತಿಯಾಗಿದ್ದ ಇಬ್ನ ಜುಡಾನನ ಗುಲಾಮನಾಗಿದ್ದ ಅಪ್ಪಟ ಬಿಳಿಯ ಜನಾಂಗದ ಇವನಿಂದ ಕ್ರೈಸ್ತಧರ್ಮದ ಹಲವು ಒಳಮರ್ಮಗಳನ್ನು ಮಹಮದ್ ಅರಿತು ಬಳಸಿಕೊಳ್ಳಲು ಸಾಧ್ಯವಾಯಿತು, ಅದನ್ನೆ ಸುರಾ 4/164-183ರಲ್ಲಿ ಕಾಣಬಹುದು ಎನ್ನುತ್ತಾನೆ ಇತಿಹಾಸಕಾರ ಮ್ಯೂರ್. ಕುರಾನಿನಲ್ಲಿ ಒಟ್ಟು ಇಪ್ಪತೈದು ಪ್ರವಾದಿಗಳ ಹೆಸರು ಪ್ರಸ್ತಾಪವಾಗಿದೆ. ಅವರಲ್ಲಿ ಮಹಮದ್, ನೂರ್. ಇಬ್ರಾಹಿಮ್, ಜೀಸಸ್ ಹಾಗೂ ಮೂಸಾ ಈ ಐವರಿಗೆ ಪ್ರಬಲ ಆತ್ಮಸ್ಥೈರ್ಯವಿರುತ್ತದೆ ಎನ್ನಲಾಗಿದೆ. ದಿನ ಕಳೆದಂತೆ ಹೊಸತಾಗಿ ಮತಾಂತರಿತವಾಗಿದ್ದ ದೀನ, ದಲಿತ ಹಾಗೂ ಗುಲಾಮರ ಮೇಲೆ ಧರ್ಮನಿಷ್ಠ ಖುರೈಷಿಗಳ ಕೆಂಗಣ್ಣು ಬಿಟ್ಟು ಅವರನ್ನು ಹಿಡಿದು ದೈಹಿಕವಾಗಿ ಹಿಂಸಿಸುವುದು, ಸೆರೆಮನೆಗೆ ತಳ್ಳುವುದು, ಹನಿ ನೀರನ್ನೂ ಕೊಡದೆ ಸುಡುಬಿಸಿಲಿನಲ್ಲಿ ನಿಲ್ಲಿಸಿ ವಿಧಿಯಿಲ್ಲದೆ ಮರಳಿ ಮಾತೃಧರ್ಮಕ್ಕೆ ಬರುವಂತೆ ಮಾಡುವುದು ಹೀಗೆ ಅನೇಕ ಕುಟಿಲೋಪಾಯಗಳನ್ನು ಅವರು ಹೂಡತೊಡಗಿದರು. ಈ ಬಗೆಯ ಹಿಂಸೆ ಅನುಭವಿಸಿದವರಲ್ಲಿ ಒಬ್ಬನಾಗಿದ್ದ ಬಿಲಾಲ್ ಎಂಬ ಗುಲಾಮ ಮಾತ್ರ ಸುತಾರಾಂ ಅದಕ್ಕೆ ಒಪ್ಪದೆ ತನ್ನ ಮಾಲೀಕ ಪರಿಪರಿಯಾಗಿ ದೈಹಿಕವಾಗಿ ಹಿಂಸಿಸಿದರೂ 'ಅಹಾದ್ ಅಹಾದ್' ಅಂದರೆ ಅರಬ್ಬಿಯಲ್ಲಿ 'ದೇವರೊಬ್ಬನೆ...ಒಬ್ಬನೇ ದೇವರು' ಎಂದು ಕಷ್ಟದಲ್ಲಿದ್ದರೂ ಜಪಿಸಹತ್ತಿದ. ಅವನ ಬಾಯಿಯಿಂದ ಹೊರಬರುತ್ತಿದ್ದ ಈ ಶಬ್ದಗಳನ್ನು ಆಲಿಸಿದ ಅದೆ ದಾರಿಯಲ್ಲಿ ಸಾಗುತ್ತಿದ್ದ ಅಬು ಬಕರ್ ಈ ಶೋಷಣೆಗೆ ಮನನೊಂದು ಕರುಣೆಯಿಂದ ಅವನ ಒತ್ತೆ ಹಣ ಪಾವತಿಸಿ ಅವನನ್ನು ಗುಲಾಮಗಿರಿಯಿಂದ ಬಿಡಿಸಿದ. ಇತ್ತ ಮಹಮದನ ಮತಾನುಯಾಯಿಗಳ ಪರಿಸ್ಥಿತಿ ಹೀಗೆ ಹದಗೆಡುತ್ತಿದ್ದರೆ ಅತ್ತ ಮಹಮದ್ ಮಾತ್ರ ಕ್ಷೇಮದಿಂದಿದ್ದ. ಅವನ ದೊಡ್ಡಪ್ಪ ಅಬು ತಾಲಿಬನ ರಕ್ಷಣೆಯಲ್ಲಿ ಅವನನ್ನು ಮುಟ್ಟುವ ಧೈರ್ಯ ಯಾವ ಖುರೈಶಿಗಳಿಗೂ ಹುಟ್ಟಿರಲಿಲ್ಲ. ಅಬು ತಾಲಿಬ್ ವಯಕ್ತಿಕವಾಗಿ ಇಸ್ಲಾಮಿಗೆ ಮತಾಂತರಿತನಾಗಿರದಿದ್ದರೂ ಮಹಮದನ ಪ್ರಭಾವಕ್ಕೆ ಒಳಗಾಗಿದ್ದಂತೂ ಸತ್ಯ. ಅಲ್ಲದೆ ಅನಾಥನಾಗಿದ್ದ ಮಹಮದನ ಮೇಲೆ ಆತನಿಗೆ ಪ್ರೀತಿ ವಾತ್ಸಲ್ಯ ಅಪಾರವಾಗಿದ್ದ ಕಾರಣ ಆತನ ರಕ್ಷಣೆ ತನ್ನ ಹೊಣೆಗಾರಿಕೆ ಎಂಬಂತೆ ಆತ ವರ್ತಿಸುತ್ತಿದ್ದ. ಅದೆ ರೀತಿ ಪ್ರತಿಷ್ಠಿತ ಖುರೈಶಿ ವರ್ಗಗಳ ಭರ್ತ್ಸನೆಗಳಿಂದ ಅಬು ಬಕರ್ ಮಹಮದನನ್ನು ಪಾರುಮಾಡುತ್ತಿದ್ದ. ಒಂದು ಕುಟುಂಬ ಮತಾಂತರಿತವಾದರೆ ಇಷ್ಟವೋ- ನಷ್ಟವೋ ಅವರ ಸಂಬಂಧಿ ಕುಟುಂಬಸ್ತರು ಒಲ್ಲದ ಮನಸ್ಸಿನಿಂದಲಾದರೂ ನೆರವು ಸಹಕಾರಗಳನ್ನು ಜಾರಿಯಲ್ಲಿ ಇಟ್ಟುಕೊಂಡೆ ಇರುತ್ತಿದ್ದರು. ಆದರೆ ಒಂದಿಡಿ ಬುಡಕಟ್ಟಿಗೆ ಬುಡಕಟ್ಟೆ ಮತಾಂತರವಾದರೆ ಮಾತ್ರ ಅದರ ವಿರೋಧಿ ಬುಡಕಟ್ಟಿನವರಿಂದ ಹಲ್ಲೆಗೆ ಒಳಗಾಗುವ ಸಂದರ್ಭಗಳೆ ಹೆಚ್ಚಾಗಿದ್ದವು. ಹೀಗಾಗಿ ಸ್ವತಃ ತಾನು ಸುರಕ್ಷಿತನಾಗಿದ್ದರೂ ತನ್ನನ್ನು ನಂಬಿ ಬಂದವರ ಸುರಕ್ಷತೆಯ ಬಗ್ಗೆ ಸಹಜವಾಗಿ ಮಹಮದ್ ಆತಂಕಿತನಾಗಿದ್ದ. ಹೀಗಾಗಿ ಅವರಲ್ಲಿ ಆನೇಕರಿಗೆ ಸುರಕ್ಷತೆಯ ದೃಷ್ಟಿಯಿಂದ ಪ್ರಾಣವುಳಿಸಿಕೊಳ್ಳಲು ಅಬಿಸೀನಿಯಾಕ್ಕೆ ವಲಸೆ ಹೋಗುವ ಸಲಹೆ ನೀಡಿದ. ಆಗಿನ ಕಾಲದ ಅಬಿಸೀನಿಯದಲ್ಲಿ ಧಾರ್ಮಿಕ ಸಹಿಷ್ಣುತೆ ನೆಲೆಸಿದ್ದುದೆ ಅದಕ್ಕೆ ಕಾರಣ. ಅಲ್ಲದೆ ಅಲ್ಲಿಗೆ ವಲಸೆ ಹೋಗುವುದು ಸಾಮಾನು ಸರಂಜಾಮುಗಳ ಸಾಗಣೆಯ ದೃಷ್ಟಿಯಿಂದ ಸುಲಭದ್ದಾಗಿತ್ತು. ಹೀಗೆ ಆತನ ಆದೇಶದಂತೆ ಆರಂಭದಲ್ಲಿ ಮಹಮದನ ಸ್ವಂತ ಪುತ್ರಿ ರೋಕೈಯಾ ಹಾಗೂ ಆಕೆಯ ಪತಿ ಒತ್ಥಮಾನನೂ ಸೇರಿದಂತೆ ಹನ್ನೊಂದು ಮಂದಿ ವಲಸೆಹೋದರು. ಇದೆ ಮೊತ್ತ ಮೊದಲ 'ಹಿಜ್ರಾ' ಎಂದು ಕರೆಯಲಾಯಿತು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಕಿ. ಈ ವಲಸೆ ಆರಂಭವಾದ ಮೊದಲ ನಾಲ್ಕು ವರ್ಷಗಳಲ್ಲಿ ಮಹಮದನಿಗೆ ಕುರಾನ್ ಸಂದೇಶಗಳು ಸುಮಾರು ಇಪ್ಪತ್ತು ಸುರಾಗಳ ಮೂಲಕ ಹೊರಬಂದವು ಎನ್ನುತ್ತಾನೆ ಇತಿಹಾಸಕಾರ ಮ್ಯೂರ್. ಈ ಎಲ್ಲಾ ಸುರಾಗಳಲ್ಲಿ ಮಹಮದ್ 'ಸ್ವರ್ಗ-ನರಕಗಳ ಸ್ಥಿತಿಗತಿಗಳು, ಪುನರುತ್ಥಾನ (ಇಸ್ಲಾಮಿನಲ್ಲಿ ಪುನರ್ ಜನ್ಮದ ಕಲ್ಪನೆ ಇಲ್ಲ ಅನ್ನುವುದನ್ನು ಗಮನಿಸಿ), ಅಂತಿಮ ತೀರ್ಪಿನ ದಿನ, ಧರ್ಮ ಬದ್ಧರು- ನೀಚರು, ಯಕ್ಷ- ಬೇತಾಳ- ಪಿಶಾಚಿಗಳು ಹೀಗೆ ವಿವಿಧ ಸಂಗತಿಗಳನ್ನು ಮಹಮದನ ಉದ್ದೇಶಕ್ಕೆ ಅನುಗುಣವಾಗಿ ಚಾಕಚಾಕ್ಯತೆಯಿಂದ ನುಡಿಯುವ ಚಿತ್ರಣದ ವಿವರಣೆ ತುಂಬಿದೆ ಅನ್ನುತ್ತಾನೆ' ಇತಿಹಾಸಕಾರ ಮ್ಯೂರ್. (ಇನ್ನೂ ಇದೆ...)

Truth...


I was your love once, you stay in my heart ever since / me really can not say.... you just remain there only hence?, but the holy truth will not get rub from our past.... // It may be your will though, i choose this way.... you may now with your new heart, myself is still sat in the bank of my eye drops bay / i do accept the fact that me do have none meaning in your dictionary now, well, how can i too do the same .... you know? my sole loved you just a sake of love ! // I was your love once, you stay in my heart ever since / me really can not say.... you just remain there only hence?, but truth will not get rub from our past.... yes that I was your love once! //

Saturday, September 29, 2012

ವಲಿ....(ಭಾಗ-3)

ಈ ಧಾರ್ಮಿಕ ಗುಪ್ತಸಂಘದ ಸದಸ್ಯರು ತಾವು ಕೇವಲ ಧಾರ್ಮಿಕ ಕಾರಣಗಳಿಂದ ಮಾತ್ರ ಹೀಗೆ ಮತಾಂತರಿತಗೊಂಡಿದ್ದೇವೆ ಎಂದು ಬಿಂಬಿಸುತ್ತಿದ್ದರೂ ಗುಲಾಮಗಿರಿಯೆಂಬ ನರಕದಿಂದ ಪಾರಾಗುವುದೆ ಬಹುತೇಕರ ಒಳ ಉದ್ದೇಶವಾಗಿತ್ತು. ಅಲ್ಲದೆ ಇಸ್ಲಾಮಿನಲ್ಲಿ ಪಾಪ- ಪುಣ್ಯಗಳಿಗೆ ಅತಿ ಹೆಚ್ಚಿನ ಮಹತ್ವವನ್ನು ನೀಡಿ, ಪುಣ್ಯವಂತರು ಸ್ವರ್ಗವಾಸಿಗಳಾಗುತ್ತಾರೆ ಹಾಗೂ ಪಾಪಿಗಳು ನರಕದ ಉರಿಜ್ವಾಲೆಯಲ್ಲಿ ಬೆಂದುಹೋಗುತ್ತಾರೆ ಎಂದು ನಂಬಿಕೆ ಹುಟ್ಟಿಸಿದ್ದು ಕೂಡ ಅತಿಹೆಚ್ಚಿನ ಸಂಖ್ಯೆಯ ಅನಕ್ಷರಸ್ತ ಬಡ ಅರಬ್ಬೀ ಧರ್ಮಭೀರುಗಳು ಮತಾಂತರವಾಗಿ ನರಕದ ಜ್ವಾಲೆಯಿಂದ ಪಾರಾಗಲು ಮಾಡಿದ್ದ ಲೌಕಿಕ ಪ್ರಯತ್ನವೆ ಅನ್ನುವುದು ಇತಿಹಾಸಗಾರ ಮಾರ್ಗೊಲಿಯತ್ತನ್ನ ಅನಿಸಿಕೆ. ಮಹಮದ್ ತನ್ನ ನೂತನ ಧರ್ಮಾನುಯಾಯಿಗಳಿಗೆ 'ಸಲಾಂ ಆಲೈಕುಂ' ಅಂದರೆ ಅರಬ್ಬಿಯಲ್ಲಿ 'ಶಾಂತಿಯಿರಲಿ ನಿನ್ನ ಮೇಲೆ"ಎಂಬ ಪರಸ್ಪರ ಹಾರೈಕೆಗಳ ವಿನಿಮಯದ ಆಚರಣೆ ಜಾರಿಗೆ ತರಲು ಅದಾಗಲೆ ಅಂತಹ ಹಾರೈಕೆಗಳ ಹಿನ್ನೆಲೆಯಿದ್ದ ಯಹೂದಿ ಹಾಗೂ ಕ್ರೈಸ್ತ ಧರ್ಮಗಳ ಪ್ರಭಾವದ ಕಾರಣದಿಂದಲೆ ಅನ್ನುವುದು ಮಾರ್ಗೊಲಿಯತ್ತನ್ನ ಹೇಳಿಕೆ. ಮಹಮದನ ಇಸ್ಲಾಮನ್ನು ಅಪ್ಪಿಕೊಂಡವರನ್ನ 'ಮುಸ್ಲಿಂ' ಇಲ್ಲವೆ 'ಹನೀಫಾ'ರೆಂದು ಕರೆಯಲಾಯಿತು. ಹೀಬ್ರೂ ಭಾಷೆಯಲ್ಲಿ 'ಹನೀಫಾ' ಎಂದರೆ 'ಆಷಾಢಭೂತಿ' ಎಂದೂ ಸಿರಿಯಾಕ್ ಭಾಷೆಯಲ್ಲಿ 'ಪಾಷಂಡಿ' ಎಂಬರ್ಥ ಬರುತ್ತದೆ. ಸಿರಿಯಾಕಿನಲ್ಲಿ 'ಮುಸ್ಲಿಂ' ಎಂದರೆ 'ವಿಶ್ವಾಸಘಾತುಕ' ಎಂದರ್ಥ! ಹಾಗೆ ನೋಡಿದರೆ ಇಸ್ಲಾಮಿಗಿಂತಲೂ ಹಿಂದೆಯೆ ಅರೇಬಿಯಾದಲ್ಲಿ ಏಕದೈವಾರಾಧಕರಿದ್ದು ಅವರನ್ನೂ ಸಹ 'ಹನೀಫಾ'ರೆಂದೆ ಕರೆಯಲಾಗುತ್ತಿತ್ತು, ಅನಂತರ ಇಸ್ಲಾಂ ಅನುಯಾಯಿಗಳಿಗೂ ಇದೆ ಹಣೆಪಟ್ಟಿ ಮುಂದುವರೆಯಿತಷ್ಟೆ. ಇದು ಮಹಮದನ ಧರ್ಮವಿರೋಧಿಗಳು ಕುಚೋದ್ಯದಿಂದ ಗೇಲಿಮಾಡಲು ಕೊಟ್ಟಿರಬಹುದಾದ ಹೆಸರಾಗಿರುವ ಸಾಧ್ಯತೆಯೂ ಇದೆ ಎನ್ನುವ ಇತಿಹಾಸಕಾರ ಮ್ಯೂರ್ ಹಂಗಿಸುವ ಅರ್ಥದಲ್ಲಿ ಹೀಗೆ ಕರೆಯಲಾಯಿತು ಎಂದಿದ್ದಾನೆ. ಆದರೆ ಮುಂದಿನ ದಿನಗಳಲ್ಲಿ ಮಹಮದ್ ಅದನ್ನೆ ಮುಸಲ್-ಉಲ್-ಇಮಾನ್ ಎಂದು ಉಚ್ಚರಿಸಿ ಹೊಸತೆ ಗೌರವಾರ್ಹವಾದ ಅ ರ್ಥಕಲ್ಪಿಸುವುದರಲ್ಲಿ ಸಫಲನಾದ. ಒಂದುದಿನ ಧೈರ್ಯ ಮಾಡಿ ಮಹಮದ್ ಕಾಬಾದ ಬಳಿಯೆ ನಿಂತು ಬಹಿರಂಗವಾಗಿ ತನ್ನ ಮತಪ್ರಚಾರವನ್ನು ಆರಂಭಿಸಿದ. ಅಲ್ಲಿ ನೆರೆದ ಜನರ- ಜಂಗುಳಿಯನ್ನು ಉದ್ದೇಶಿಸಿ "ಅಲ್ಲಾ ಒಬ್ಬನೆ ನಿಜವಾದ ದೈವ, ಅವನ ವಿನಃ ಇನ್ಯಾವ ದೈವವಿಲ್ಲ" (ಅಲ್ಲಾ ಹೋ ಅಕ್ಬರ್) ಎಂದು ನಿರಂತರವಾಗಿ ಕೂಗಿಕೂಗಿ ಹೇಳಲು ಆರಂಭಿಸಿದ. ಅವನ ಮಾತಿನಿಂದ ರೊಚ್ಚಿಗೆದ್ದ ಅಲ್ಲಿ ನೆರೆದಿದ್ದ ಬಹುಮಂದಿ ಅವನ ಮೇಲೆ ಹಲ್ಲೆ ನಡೆಸಲು ಶುರುವಿಟ್ಟರು. ಹೀಗೆ ಆತ ಆಪತ್ತಿನಲ್ಲಿ ಸಿಲುಕಿಕೊಂಡಿರುವ ಸಂಗತಿ ಖತೀಜಾ ಕುಟುಂಬಕ್ಕೆ ತಲುಪಿತು. ಆಕೆಯ ಮೊದಲ ಗಂಡ ಅಬು ಹಾಲತ್'ನ ಮಗ ಅಲ್ ಹಾರುಥ್ ತನ್ನ ಮಲತಂದೆಯ ರಕ್ಷಣೆಗಾಗಿ ಕೂಡಲೆ ಧಾವಿಸಿದ. ನಡೆದ ಕಾದಾಟದಲ್ಲಿ ವಿರೋಧಿಗಳು ಅವನನ್ನು ಅಲ್ಲಿಯೆ ಹೊಡೆದು ಕೊಂದರು. ಹೀಗಾಗಿ ಅವನು ಇಸ್ಲಾಮಿನ ಪ್ರಪ್ರಥಮ 'ಹುತಾತ್ಮ'ನ ಪಟ್ಟ ಗಳಿಸಿಕೊಂಡ ಅನ್ನುತ್ತಾನೆ ಇತಿಹಾಸಕಾರ ಮಾರ್ಗೊಲಿಯತ್. "ತಾನು ದೇವದೂತ,ಹೊಸ ಮತವೊಂದರ ಆರಂಭಕ್ಕೆ ದೇವರು ಪ್ರೇರೇಪಿಸಿ ತನ್ನನ್ನು ಇಲ್ಲಿಗೆ ಕಳುಹಿಸಿದ್ದಾನೆ" ಎಂಬ ಮಹಮದನ ಪ್ರಚಾರವನ್ನ ಕಾಬಾದ ಮುಖ್ಯ ಆರಾಧ್ಯ ದೈವ ಹುಬಾಬ್ ಸಹಿತ ಇನ್ನುಳಿದ 360 ದೇವರ ಅಚಲ ವಿಶ್ವಾಸಿಗಳಾಗಿದ್ದ ಬಹುತೇಕ ಮೆಕ್ಕಾ ನಿವಾಸಿಗಳು ಬಲವಾಗಿ ವಿರೋಧಿಸಲು ಆರಂಭಿಸಿದರು. ತಮಾಷೆಯೆಂದರೆ ಅವರು ಆರಾಧಿಸುತ್ತಿದ್ದ ಹುಬಾಬ್ ಹೊರತುಪಡಿಸಿದ ಇನ್ನುಳಿದ ಮೂರ್ತಿಗಳಲ್ಲಿ ಅಲ್ಲಾನದ್ದೂ ಒಂದು ಪ್ರತಿಮೆ ಇತ್ತು. ಅಂದರೆ ಅಲ್ಲಾ ಇಸ್ಲಾಂ ಪೂರ್ವದಿಂದಲೂ ಜನರ ವಿಶ್ವಾಸ ಸಂಪಾದಿಸಿದ್ದ ಒಬ್ಬ ದೈವವಾಗಿದ್ದ ಹಾಗೂ ಇಸ್ಲಾಂ ಪೂರ್ವದಲ್ಲಿ ಆತನ ಕಾಬಾದಲ್ಲಿ ಅಲ್ಲಾನ ಮೂರ್ತ ಸ್ವರೂಪವಿದ್ದು ಮೂರ್ತಿಯನ್ನೆ ಅಲ್ಲಿ ನಿತ್ಯ ಪೂಜಿಸಲಾಗುತ್ತಿತ್ತು. ಅದಕ್ಕೂ ನಿತ್ಯ ಪೂಜೆ ಸಲ್ಲುತ್ತಿತ್ತು! ಜನರು ಮಹಮದನಿಗೆ ಜಿನ್ ಅಂದರೆ ದೆವ್ವ ಮೆಟ್ಟಿಕೊಂಡಿದೆ ಎಂದು ತಲೆಗೊಬ್ಬರಂತೆ ಆಡಿಕೊಳ್ಳಲು ಆರಂಭಿಸಿದರು. ಅವರ ಈ ಆಪಾದನೆ ಮಹಮದನನ್ನು ತೀವ್ರವಾಗಿ ಘಾಸಿಗೊಳಿಸಿತು. ಇದರಿಂದ ಅವನು ಬೇಸರಕ್ಕೆ ತುತ್ತಾದ. ಅದನ್ನೆ ಅವನು ಕುರಾನಿನ ಸುರಾಗಳ ಮೂಲಕ (ಸುರಾ 67/24-27) ತೋಡಿಕೊಂಡ ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಕಿ. ಸುಮಾರು ಹತ್ತುವರ್ಷಗಳವರೆಗೆ ಹೀಗೆಯೆ ವಿರೋಧಿಗಳ ನಡುವೆ ಮೆಕ್ಕಾದಲ್ಲಿಯೆ ಬಾಳಿ ಬದುಕಿದ ಮಹಮದ್ ತನ್ನ ಮತಪ್ರಚಾರ ಯಶಸ್ವಿಯಾಗಿ ಕೈಗೊಳ್ಳಲು ಮಹಮದನ ಪತ್ನಿ ಖತೀಜಳ ಅರ್ಪಣಾ ಭಾವದಿಂದ ಕೂಡಿದ ಭಕ್ತಿ ಹಾಗೂ ಆಕೆಯ ಸಂಪತ್ತಿನ ಪ್ರಭಾವದಿಂದ, ಅಲ್ಲದೆ ದೊಡ್ಡಪ್ಪ ಅಬು ತಾಲಿಬ್'ನ ಪ್ರೀತಿ ಒಲುಮೆ ವಿಶ್ವಾಸ ಹಾಗೂ ಅಬು ಬಾಕರ್'ನ ಪ್ರೇರೇಪಣಾಗುಣದಿಂದ ಹಾಗೂ ಅಂಧ ವಿಶ್ವಾಸಗಳಿಂದ ಮಾತ್ರ ಸಾಧ್ಯವಾಯಿತು ಅನ್ನೋದು ಇತಿಹಾಸಕಾರ ಮ್ಯೂರನ ಅಂಬೋಣ. ದೊಡ್ಡಪ್ಪ ಅಬುತಾಲೀಬನ ಸಮಯಪ್ರಜ್ಞೆಯಿಂದ ಅನೇಕಬಾರಿ ಖುರೈಷಿಗಳಿಂದ ಒದಗಿಬರಬಹುದಾಗಿದ್ದ ಅತಿ ಹಿಂಸೆ ಅಥವಾ ಪ್ರಾಣಹಾನಿಯಿಂದ ಮಹಮದ್ ತಪ್ಪಿಸಿಕೊಂಡ. ಆದರೆ ಅಪರೂಪವಾಗಿ ಇಸ್ಲಾಮಿಗೆ ಮತಾಂತರವಾದ ಖುರೈಶಿಗಳಲ್ಲಿ ಕೆಲವರು ತಾವು ಅಪ್ಪಿದ ಹೊಸ ಧರ್ಮಕ್ಕಾಗಿ ಸ್ವಂತ ಹೆತ್ತವರ- ಒಡಹುಟ್ಟಿದವರ ವಿರುದ್ಧವೆ ಹೋರಾಡಿದ ನಿದರ್ಶನಗಳೂ ಕಂಡುಬಂದವು. ಧರ್ಮಪ್ರಚಾರದ ಹೊತ್ತಲ್ಲಿ ಪ್ರವಚನ, ಭಾಷಣ ಇಲ್ಲವೆ ಜನರನ್ನು ಉದ್ದೇಶಿಸಿ ಮಾತನಾಡಲು ಉಧ್ಯುಕ್ತನಾಗುತ್ತಿದ್ದ ಸಂದರ್ಭಗಳಲ್ಲಿ ಮಹಮದನ ಕೆನ್ನೆ ಕೆಂಪಗಾಗುತ್ತಿತ್ತು ಮತ್ತು ಧ್ವನಿ ತಾರಕಕ್ಕೆ ಏರುತ್ತಿತ್ತು. ಆ ಕ್ಷಣ ಅವನ ನಿತ್ಯದ ನಿರ್ಲಿಪ್ತ ಸ್ವಭಾವ ಉಗ್ರವಾಗುತ್ತಿತ್ತು. ಆತ ಎಷ್ಟು ಪ್ರಬಲ ಭಾಷಣಕಾರನಾಗಿದ್ದನೊ ಅಷ್ಟೆ ಕೆಟ್ಟ ಚರ್ಚಾಪಟುವಾಗಿದ್ದನು. ತನ್ನ ಈ ನ್ಯೂನತೆಯನ್ನು ಬಹಳ ಚೆನ್ನಾಗಿ ಅರಿತಿದ್ದ ಆತ ಅಂತಹ ಪರಿಸ್ಥಿತಿಗಳಲ್ಲಿ ದೈವವಾಣಿಯ ಮೊರೆ ಹೋಗುತ್ತಿದ್ದ. ಅವಿಶ್ವಾಸಿಗಳ ಪ್ರಶ್ನೆಗಳಿಗೆ ತರ್ಕಬದ್ದ ಉತ್ತರ ನೀಡಲಾರದೆ ಅವರು ಅಲ್ಲಿಂದ ನಿರ್ಗಮಿಸುವಂತೆ ಸುರಾದ ಆಜ್ಞೆ ಪಡೆದುಕೊಂಡು ಅದನ್ನ ಪಾಲಿಸಿ ಪಾರಾಗುತ್ತಿದ್ದ ಎನ್ನುತ್ತಾನೆ ಇತಿಹಾಸಕಾರ ಮ್ಯೂರ್. ಈ ಪಲಾಯನವಾದದ ಕುರುಹು ಇಂದಿಗೂ ಇಸ್ಲಾಮಿನ ಅನುಯಾಯಿಗಳಿಗೆ ಬಳುವಳಿಯಾಗಿ ಸಂದಿರುವುದು ದುರಂತ. ಮುಂದಿನ ನಾಲ್ಕು ವರ್ಷಗಳಲ್ಲಿ ಕೇವಲ ನಲವತ್ತು ಮಂದಿಯಷ್ಟೆ ಇಸ್ಲಾಮಿಗೆ ಪರವಶವಾದರು. ಮೊದಮೊದಲು ಈ ಬಗ್ಗೆ ಉದಾಸೀನರಾಗಿದ್ದ ಮೆಕ್ಕಾದ ಖುರೈಷಿಗಳು ಕ್ರಮೇಣ ಅದನ್ನ ಅಸಹನೆಗೆ ತಿರುಗಿಸಿಕೊಂಡರು. ಅರೇಬಿಯಾದ ಅತ್ಯಂತ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕಾಬಾದ ಪ್ರಾಮುಖ್ಯತೆ ಮಹಮದನ ಧರ್ಮೊಪದೇಶದಿಂದ ಮುಕ್ಕಾದೀತು ಎಂಬ ಆತಂಕ ಅವರದ್ದಾಗಿತ್ತು. ಹೀಗೆಯೆ ಮುಂದುವರೆಯಲು ಬಿಟ್ಟರೆ ಕಾಬಾದ ಅಸ್ತಿತ್ವಕ್ಕೆ ಖಂಡಿತ ಸಂಚಕಾರ ಬರಲಿದೆ ಎಂಬುದನ್ನು ಅರಿತ ಖುರೈಷಿಗಳು ಹಿಂಸಾತ್ಮಕವಾಗಿ ಮಹಮದನ ಧರ್ಮಪ್ರಚಾರಕ್ಕೆ ಎದಿರೇಟು ಕೊಡಲು ಆರಂಭಿಸಿದರು. ಮತಾಂತರಗೊಂಡ ಒಬ್ಬನ ವಿರುದ್ಧ ಅವರು ದೌರ್ಜನ್ಯ ಎಸಗುತ್ತಿದ್ದಾಗ ಬಿಡಿಸಿಕೊಳ್ಳಲು ಬರುವ ಅಂತವನ ನೆಂಟರೂ ಅವರ ಹಿಂಸೆಗೆ ತುತ್ತಾಗಬೇಕಾಗುತ್ತಿತ್ತು, ಯಾರೊಬ್ಬರ ನೈತಿಕ ಬೆಂಬಲವೂ ಸಿಗದ ಗುಲಾಮರ ಪರಿಸ್ಥಿತಿಯಂತೂ ತೀರಾ ಶೋಚನೀಯವಾಗಿದ್ದಿತು. ಹೀಗೆ ಶುರುವಾದ ಖುರೈಷಿಗಳ ಹಿಂಸಾ ವಿನೋದದ ವಿರುದ್ಧವಾಗಿ ನೂತನ ಧರ್ಮಾನುಯಾಯಿಗಳು ಆತ್ಮರಕ್ಷಣೆಗೆ ಮುಂದಾದರು. ಅವರೂ ಹಿಂಸಾಚಾರಕ್ಕಿಳಿದರು. ಮಹಮದ್ ಹಾಗೂ ಆತನ ಅನುಯಾಯಿಗಳಿಗೆ ಅದು ಕ್ರಮೇಣ ರೂಢಿಯಾಗಿ ಸಹನೆ, ತಾಳ್ಮೆಗಳನ್ನೆಲ್ಲ ಕಿತ್ತೊಗೆದು ವಿರೋಧಿಗಳ ವಿರುದ್ಧ ನೇರಕಾರ್ಯಾಚರಣೆಗೆ ಅವರಿಳಿಯಲು ಇದರಿಂದ ಮೊದಲಾಯಿತು. ಕ್ರಿಸ್ತಶಕ 613ರ ಸುಮಾರಿಗೆ ಅದೂವರೆಗೂ ಗುಪ್ತವಾಗಿ ಸಾಗುತ್ತಿದ್ದ ಮಹಮದನ ಮತಪ್ರಚಾರ ಅನಂತರದ ದಿನಗಳಲ್ಲಿ ಅನುಯಾಯಿಗಳ ಸಂಖ್ಯೆ ವೃದ್ಧಿಸಿದಂತೆ ತೀರ ಬಹಿರಂಗಗೊಂಡಿತು. ಆತ ಖುರೈಷಿಗಳ ವಿಗ್ರಹಾರಾಧನೆಯನ್ನ ಕಟುವಾಗಿ ಖಂಡಿಸಿದ. ಅವರ ಪಿತೃಗಳೂ ವಿಗ್ರಹಾರಾಧಕರಾಗಿ ಆತ್ಮನಾಶಕ್ಕೀಡಾಗಿದ್ದಾರೆ ಎಂದು ಆತ ಹೇಳಿದಾಗ ಖುರೈಷಿಗಳು ಕೆರಳಿ ನಿಂತರು. ಮೆಕ್ಕಾದ ಹೊರವಲಯದಲ್ಲಿ ಮಹಮದನ ಬಂಟ ಸಾದ್ ಬಹಿರಂಗವಾಗಿ ನಮಾಜ್ ಮಾಡುತ್ತಿದ್ದಾಗ ಅದನ್ನು ಕಂಡು ಕೋಪಗೊಂಡ ಖುರೈಷಿಗಳು ಕಲಹಕ್ಕೆ ನಾಂದಿ ಹಾಡಿದರು, ಜಗಳ ರಕ್ತಪಾತಕ್ಕೆ ತಿರುಗಿ ಒಂಟೆಯನ್ನು ಹೊಡೆಯುವ ಮೊನೆಗೋಲಿನಿಂದ ಸಾದ್ ವಿರೋಧಿಯೋಬ್ಬನನ್ನು ಅಲ್ಲಿಯೆ ಹೊಡೆದುಸಾಯಿಸಿದ. ಇತಿಹಾಸಕಾರ ಅಲ್ ತಮೀಮಿಯ ಪ್ರಕಾರ ಇದು 'ಇಸ್ಲಾಮಿಗಾಗಿ ಚಲ್ಲಿದ ಮೊತ್ತ ಮೊದಲನೆಯ ರಕ್ತ'. ಇದೆ ಸಮಯದಲ್ಲಿ ಪ್ರಾಯಶಃ ಮಹಮದ್ ನೂತನವಾಗಿ ಮತಾಂತರವಾಗಿದ್ದ ಅಕ್ರಂ ಎಂಬಾತನ ಮನೆಯನ್ನ ಆಶ್ರಯಕ್ಕಾಗಿ ಪಡೆದುಕೊಂಡು ಅಲ್ಲಿದ್ದುಕೊಂಡೆ ಮತಪ್ರಚಾರವನ್ನು ಮುಂದುವರೆಸಿದ. ಅದು ಕಾಬಾ ಗುಡಿಯ ಹತ್ತಿರದಲ್ಲೆ ಇದ್ದು ಅಲ್ಲಿಗೆ ಹೋಗಿ ಬರುವ ಯಾತ್ರಿಕರು ಸಾಗುವ ದಾರಿಯಲ್ಲೆ ಇದ್ದುದರಿಂದ ಜನಸಾಂದ್ರತೆ ಸಹಜವಾಗಿ ಹೆಚ್ಚಿದ್ದು ಪ್ರಚಾರಕ್ಕೆ ಹೆಚ್ಚಿನ ಅವಕಾಶಗಳು ಅಲ್ಲಿದ್ದವು. ಮುಂದೆ ಇದೆ 'ಇಸ್ಲಾಮಿನ ಮನೆ' ಎಂಬ ಪಟ್ಟ ಪಡೆಯಿತು. ಇತ್ತೀಚಿಗೆ ಕಾಬಾದ ಉಸ್ತುವಾರಿ ಹೊತ್ತ ಸೌದಿ ದೊರೆಯ ಆಡಳಿತ ಕಾಬಾಕ್ಕೆ ಸನಿಹದಲ್ಲಿಯೆ ಹಜ್ ಯಾತ್ರಿಕ ಸಿರಿವಂತರಿಗಾಗಿ ದೊಡ್ಡದೊಡ್ಡ ಬಹುಮಹಡಿ ಕಟ್ಟಡಗಳನ್ನ, ಪಂಚತಾರ ಹೋಟೆಲುಗಳನ್ನ ಕಟ್ಟಿಸುವ ಹುಮ್ಮಸ್ಸಿನಲ್ಲಿ ಅಬುಬಾಕರನ ಹಾಗೂ ಖತೀಜಾಳ ಮನೆಯನ್ನ ನೆಲಸಮಗೊಳಿಸಿತ್ತು ಅಕ್ರಮನ ಮನೆಗೂ ಸ್ಮಾರಕದ ಬೆಲೆ ಅರಿಯದ ಈ ಧ್ವಂಸಕರು ಒಂದು ಮೋಕ್ಷ ಕಾಣಿಸಿದ್ದಾರೆ ಏನೇನೂ ಅಚ್ಚರಿಯಿಲ್ಲ. (ಇನ್ನೂ ಇದೆ....)

Friday, September 28, 2012

ಬಾಕಿಯುಳಿದ ಕೊನೆಯ ಹನಿ....

ಸಾಂಗತ್ಯದ ಅಗತ್ಯ ಪ್ರತಿ ಏಕಾಂತಕ್ಕೂ ಇದ್ದೆ ಇರುತ್ತದೆ ಮೌನಕ್ಕೂ ಕೆಲವೊಮ್ಮೆ ಮಾತಿನ ಸನಿಹ ಬೇಕೆನ್ನಿಸುತ್ತದೆ.... ಕಣ್ಣ ಕೊನೆಯಲ್ಲಿ ಕಾಡಿಗೆಯನ್ನೂ ಕರಗಿಸುವ ನಿರೀಕ್ಷೆಯ ಹನಿ ನಿತ್ಯ ಜಾರುವಾಗ, ಬದುಕಿನ ಮುಂದಿನ ಹಾದಿಯೆಲ್ಲ ಮಂಜಾದಂತೆ ಕಾಣಿಸಿ ಮನ ಕಂಗಾಲಾಗುತ್ತದೆ / ನನ್ನುಸಿರು ಚರ.... ಅದರೊಳಗೆ ಅಡಗಿರುವ ನಿನ್ನ ಅನುದಿನದ ಜಪದ ಆವರ್ತ ಮಾತ್ರ ಚಿರ, ಗಗನದ ತುದಿಯಂಚಿನಲ್ಲಿ ಮಡುಗಟ್ಟಿರುವ ಮೋಡದ ಎದೆಯಾಳದಲ್ಲಿ ನೋವು ತುಂಬಿ ಬಂದಾಗ ... ಇಳೆಗೆ ಮಳೆ ಖಾತ್ರಿ // ಸಾಲು ಸಾಲು ಸುಳ್ಳುಗಳ ನಡುವೆ ಸತ್ಯದ ತಲಾಶಿನಲ್ಲಿರುವ ಮನಸ ಮೂರ್ಖತನ.... ಎಷ್ಟೊಂದು ಅವಾಸ್ತವ!, ರಾಗದ ಹಂಗಿಲ್ಲದ ಈ ನನ್ನ ಮೌನ ವೇದನೆಯ ಆಲಾಪ ನಿನ್ನ ಕಿವಿ ಮುಟ್ಟಿದರೂ..... ನಿನ್ನೊಳಗಿನ ಸಂಕಟವನ್ನದು ಎಂದೂ ಕೆದಕದಿರಲಿ / ಒಬ್ಬಂಟಿತನದ ಹನಿ ನೋವೂ ನಿನ್ನನೆಂದೂ ತಟ್ಟದಿರಲಿ ವಿರಹದ ಪಸೆಯಷ್ಟೂ ನೋವು ನಿನ್ನ ಕಡೆ ತನಕ ಮುಟ್ಟದಿರಲಿ... ಕಾಲಿರದ ಕನಸುಗಳದು ಬೆಳಕಿನ ವೇಗದ ಪಯಣ ನನ್ನದೊಂದು ಕನಸಿನ ಚೂರು ಈಗಷ್ಟೇ ನಿನ್ನೆದೆಯ ಮಾಳಿಗೆ ಹೊಕ್ಕಿರಬಹುದು , ಹುಡುಕಿ ನೋಡು! // ಗಡಿಬಿಡಿಯೇನಿಲ್ಲ ಕಾಯಲು ಕೊನೆಯುಸಿರಿರುವ ತನಕ ಸಮಯವಿದೆಯಲ್ಲ ಕಾಯುತ್ತೀನಿ ಬಿಡು.... ನನಗಿನ್ನೇನು ತಾನೇ ಇದೆ ಇದಕ್ಕಿಂತಾ ಮಹತ್ತರವಾದ ಕೆಲಸ?, ಮೌನ ಕಲಕುವ ಮೌನದ ಕೊಳದಲ್ಲಿ ಏಳುವ ಪ್ರತಿ ಅಲೆಯಲ್ಲೂ ನಿನ್ನ ನೆನಪಿನ ದೋಣಿಯೇರಿ ತೇಲಿ ಹೋಗುವ ಹಂಬಲ ನನಗೆ / ನಿಡುಸುಯ್ಯುವ ಮೌನದ ಪ್ರತಿ ಉಶ್ವಾಸ ನಿಶ್ವಾಸಗಳಲ್ಲೂ ನಿನ್ನ ಉಸಿರ ಬಿಸಿ ಇನ್ನೂ ಉಳಿದಿದೆ... ಗೀಚಿದ ಅಕ್ಷರಗಳೆಲ್ಲ ತನ್ನಿಂತಾನೆ ಪದಗಳಾಗಿ ತನ್ನ ಪ್ರತಿ ಸಾಲುಗಳಲ್ಲೂ ನಿನ್ನ ನೆನಪುಗಳನ್ನೇ ಅದು ಹೇಗೊ ಪ್ರತಿಫಲಿಸುವಾಗ, ನಾನೊಂದು ನಿಶ್ಚಲ ಬಿಂಬವಷ್ಟೆ ಅಗುಳಿದಿದ್ದೇನೆ // ಕೇವಲ ಕೊನೆಯದೊಂದು ಹನಿ ಬಾಕಿಯುಳಿದಿದೆ ನಿನ್ನ ನಿರೀಕ್ಷೆಯಲ್ಲಿ..... ನನ್ನ ಕಣ್ಣಲ್ಲಿ, ಕಣ್ಣು ಕಾಯುವ ನಿನ್ನ ಹಾದಿಯಲ್ಲಿ ಕಿರು ಸದ್ದಾದರೂ ಸರಿ ಅದನ್ನಾಲಿಸಲು ಕಿವಿಯೂ ಸದಾ ಕಾತರವಾಗಿರುತ್ತದೆ / ಗಾಲವನ ಗಲ್ಲದ ಮೇಲಿನ ಮಚ್ಚೆ ನಾನು ನಿನಗಲ್ಲದೆ ಹೇಳು ಇನ್ಯಾರ ಕಣ್ಣಿಗೆ ನಾ ಕಾಣಿಸಿಯೇನು?.... ಸಿಗದ ಪದಗಳನ್ನ ಸುಮ್ಮನೆ ಕಷ್ಟ ಪಟ್ಟು ಕಟ್ಟಿ ಕೃತಕವಾಗಿಸುವುದಕ್ಕಿಂತ ಮೌನದಲ್ಲಿ ಕಣ್ಣು ದಾಟಿಸುವ ಮಾತಿಗೆ ಧ್ವನಿಯಾದರೆ ಸಾಕಲ್ಲ? //

ವಲಿ..... (ಭಾಗ-2)

ಈ ವಿಶ್ವಾಸಾರ್ಹತೆಯ ತಳಹದಿಯ ಮೇಲೆ ಅದಾಗಲೆ ಎರಡೆರಡು ಮದುವೆಯಾಗಿದ್ದು ಎರಡು ಗಂಡು ಹಾಗೂ ಒಂದು ಗಂಡು ಮಗುವನ್ನು ಹೊಂದಿದ್ದ ಖತೀಜ ಮಹಮದ್ ಮೇಲೆ ಅನುರಾಗ ಬೆಳೆಸಿಕೊಂಡು ವಿವಾಹ ಪ್ರಸ್ತಾಪವನ್ನು ಮುಂದಿಟ್ಟಳು. ಆದರೆ ಅವರಿಬ್ಬರ ನಡುವಿನ ಅಂತಸ್ತಿನ ವ್ಯತ್ಯಾಸದ ದೆಸೆಯಿಂದ ಅವಳನ್ನು ಮರುವಿವಾಹವಾಗಲು ಅಷ್ಟರಲ್ಲಿ ಯತ್ನಿಸಿ ಸೋತಿದ್ದ ಖುರೈಷಿ ಗಣ್ಯರಿಂದ ಈ ಮದುವೆಗೆ ಭಾರಿ ವಿರೋಧ ವ್ಯಕ್ತವಾಯಿತು. ಸಾಲದ್ದಕ್ಕೆ ಸುಂದರಿ ವಿಧವೆ ಖತೀಜಳ ಮುದಿತಂದೆ ಈ ಮದುವೆಗೆ ತನ್ನ ಅಸಮ್ಮತಿ ಪ್ರಕಟಿಸಿದ. ಇದರ ಹಿಂದಿನ ಹುನ್ನಾರ ಗ್ರಹಿಸಿದ ಖತೀಜ ಮದುವೆಗೆ ಮಹಮದ್'ನ ಸಮ್ಮತಿ ದೊರೆತ ನಂತರ ಉಪಾಯವಾಗಿ ಒಂದುದಿನ ಮನೆಗೆ ತನ್ನ ತಂದೆ ಹಾಗೂ ಬುಡಕಟ್ಟಿನ ಗಣ್ಯರನ್ನು ಊಟಕ್ಕಾಗಿ ಆಹ್ವಾನಿಸಿ ಅವರಿಗಾಗಿಯೆ ವಿಶೇಷವಾಗಿ ದನ ಕಡಿಸಿ ಅದರ ಮಾಂಸ ಹಾಗೂ ಮದ್ಯದ ಸಮಾರಾಧನೆಯನ್ನೆ ನಡೆಸಿ, ಅವರೆಲ್ಲ ಮತ್ತಿನಲ್ಲಿ ತೇಲುತ್ತಿದ್ದಾಗ ಕಾಟಾಚಾರಕ್ಕೆ ಅವರೆಲ್ಲರ ಸಮ್ಮತಿ ಪಡೆದು ಅಂದೆ ವಿವಾಹ ನೆರವೇರಿಸಿ ಕೊಂಡುಬಿಟ್ಟಳು! ನಶೆ ಇಳಿದು ಸ್ಮೃತಿ ತಿಳಿಯಾದ ಬಳಿಕ ನಡೆದ ಎಲ್ಲಾ ವಿದ್ಯಾಮಾನವನ್ನರಿತ ಖತೀಜಳ ತಂದೆ ಈ ವಿವಾಹವನ್ನ ವಿರೋಧಿಸಿ ಕಾಲುಕೆರೆದು ಜಗಳಕ್ಕೆ ನಿಂತ. ಆದರೆ ಬುಡಕಟ್ಟಿನ ಮುಖಂಡರ ಸಮಯಸ್ಪೂರ್ತಿಯಿಂದ ಜಗಳ ರಕ್ತಪಾತಕ್ಕೆ ತಿರುಗುವ ಮೊದಲೆ ಸಂಧಾನ-ಸಮಾಧಾನದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು. ಹೀಗೆ ನಲವತ್ತು ವರ್ಷದ ಸುಂದರಿ- ಸಿರಿವಂತ ವಿಧವೆ ಖತೀಜ ಇಪ್ಪತ್ತೈದರ ಚಲುವ ತರುಣ ಮಹಮದ್'ನ ಮಡದಿಯಾದಳು. ಅಥವಾ ನಿಜಾರ್ಥದಲ್ಲಿ ಸಂಸಾರಿಯಾದ ಮಹಮದ್ ಖತೀಜಾಳ ಪತಿಯಾದ. ಸುಖಮಯವಾಗಿ ಮುಂದಿನ ಹನ್ನೆರಡುವರ್ಷ ಸಾಗಿದ ಅವರ ಸಂಸಾರದ ಫಲವಾಗಿ ಎಂಟು ಗಂಡು ಮಕ್ಕಳೂ. ನಾಲ್ಕು ಹೆಣ್ಣುಮಕ್ಕಳೂ ಜನ್ಮತಾಳಿದರು. ಆದರೆ ದುರದೃಷ್ಟದಿಂದ ಯಾವೊಂದು ಗಂಡು ಮಗುವೂ ಬದುಕುಳಿಯಲಿಲ್ಲ. ಮದುವೆಯ ನಂತರ ಮಡದಿಯ ಅಂತಸ್ತಿಗೆ ತಕ್ಕ ಹಾಗೆ ಮಹಮದ್ ಕುರಿ ಕಾಯದೆ ಹೆಂಡತಿಯ ವ್ಯಾಪಾರದಲ್ಲಿ ಸಕ್ರಿಯನಾಗಿ ತೊಡಗಿಕೊಂಡ. 'ದೇವರು ಕರುಣಾಮಯಿ ; ತನ್ನನ್ನು ನಂಬಿದವರನ್ನೆಂದೂ ಕೈಬಿಡದೆ ಅವರ ವ್ಯವಹಾರಗಳಲ್ಲಿ ವೃದ್ಧಿ ತರುವ ಆತ... ಅವಿಶ್ವಾಸಿಗಳಿಗೆ ನಷ್ಟವನ್ನಷ್ಟೆ ಕೊಡುತ್ತಾನೆ' ಎನ್ನುತ್ತಾ ಆತ ವ್ಯಾಪಾರಕ್ಕೆ ಒಂದು ಧಾರ್ಮಿಕ ಘನತೆಯನ್ನು ಆರೋಪಿಸಿ ಆಗೋಚರವಾಗಿಯೂ ಆಗುತ್ತಿದ್ದ ಮೋಸ- ವಂಚನೆಗಳನ್ನ ಹಿಡಿತಕ್ಕೆ ತಂದ. ಹೀಗೆ ಸುಖಮಯವಾಗಿದ್ದ ಮಹಮದ್ ವಯಕ್ತಿಕ ಜೀವನಕ್ಕೆ ಕುತ್ತು ಬಂದದ್ದು ಮದುವೆಯ ಹದಿಮೂರನೆ ವರ್ಷಕ್ಕೆ ಒದಗಿಬಂದ ಕಾಬಾದ ಮರುನಿರ್ಮಾಣ ಕಾರ್ಯದಿಂದ. ಆಗ ಆತನಿಗೆ ಮೂವತ್ತೆಂಟು ವರ್ಷ ವಯಸ್ಸಾಗಿತ್ತು. ಪ್ರಾಕೃತಿಕವಾಗಿ ವಿರಳ ಮಳೆ ಕಾಣುತ್ತಿದ್ದ ಅರೇಬಿಯದಲ್ಲಿ ಕ್ರಿಸ್ತಶಕ 605ರಲ್ಲಿ ಕುಂಭದ್ರೋಣ ವರ್ಷಧಾರೆ ಸುರಿದು ಪ್ರವಾಹ ಬೀದಿಗಳಲ್ಲಿ ಉಕ್ಕಿ ಹರಿಯಿತು. ಕಾಬಾ ಗುಡಿ ಸಹಜವಾಗಿ ಜಖಂ ಆಯಿತು. ಹೀಗಾಗಿ ಗುಡಿಯ ದುರಸ್ತಿ ನಡೆಸಿ ಇನ್ನಷ್ಟು ಎತ್ತರದ ಗೋಡೆ ಹಾಗೂ ಛಾವಣಿ ನಿರ್ಮಿಸಲು ಖುರೈಷಿಗಳು ತೀರ್ಮಾನಿಸಿದರು. ಅವರ ಅದೃಷ್ಟಕ್ಕೆ ಆ ಮಳೆಗಾಲದಲ್ಲಿ ಎದ್ದಿದ್ದ ಬಿರುಗಾಳಿಗೆ ಸಿಲುಕಿ ಕೆಂಪು ಸಮುದ್ರದ ದಡಕ್ಕೆ ಬಂದು ಅಪ್ಪಳಿಸಿ ಪತನವಾದ ಗ್ರೀಕ್ ವ್ಯಾಪಾರಿ ನೌಕೆಯೊಂದು ವರದಾನದಂತೆ ಒದಗಿಬಂತು. ಇದರ ಖಚಿತ ಸುದ್ದಿ ತಿಳಿದ ಖುರೈಷಿಗಳ ಮುಖಂಡ ಅಲ್ ವಾಲಿದ್ ಅಲ್ಲಿಗೆ ಧಾವಿಸಿ ನೌಕೆಯ ಅಳಿದುಳಿದ ನಿರುಪಯುಕ್ತ ಮರ ಹಾಗೂ ಲೋಹಗಳ ಅವಶೇಷಗಳನ್ನು ಖರೀದಿಸಿದ. ಮೆಕ್ಖಾ ಸಮೀಪದ ಕೆಂಪು ಕಲ್ಲುಗಳ ಕಣಿವೆಯಿಂದ ಕಲ್ಲುಗಳನ್ನೂ ತರಿಸಿ ಬಾಕುನ್ ಎಂಬ ರೋಮನ್ ವಾಸ್ತುಶಿಲ್ಪಿಯ ಮಾರ್ಗದರ್ಶನದೊಂದಿಗೆ ಹೊಸ ಕಾಬಾದ ನಿರ್ಮಾಣ ಕಾರ್ಯ ಆರಂಭಿಸಿದ. ಗೋಡೆಗಳು ಮೇಲೆದ್ದು ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದಾಗ 'ಪವಿತ್ರ ಕಪ್ಪುಶಿಲೆ'ಯನ್ನು ಎಲ್ಲಿ, ಹೇಗೆ, ಯಾರು ಇರಿಸಬೇಕು? ಎಂಬ ನೈತಿಕ ಪ್ರಶ್ನೆ ಉದ್ಭವವಾಯ್ತು.ಈ ಶಿಲೆ ಆರು ಇಂಚು ಎತ್ತರ ಹಾಗೂ ಎಂಟಿಂಚು ಅಗಲವಾಗಿತ್ತು, ಭಕ್ತಾದಿಗಳ ಶ್ರದ್ಧಾಭಕ್ತಿಗೆ ಅದು ಒಳಗಾಗಿತ್ತು ಎನ್ನುತ್ತಾನೆ ವಿಲ್ ಡ್ಯೂರಂಟ್. ಆ ಶಿಲೆಯ ಹಣೆಬರಹ ನಿರ್ಧರಿಸುವುದು ತಮ್ಮ ಹಕ್ಕೆಂದು ಕೆಲವು ಖುರೈಷಿ ಗಣ್ಯರು ಗದ್ದಲ ತೆಗೆದರು. ಇನ್ನಿತರರು ತಮ್ಮ ಹಕ್ಕು ಮಂಡಿಸಿ ಅದನ್ನು ಬಲವಾಗಿಯೆ ವಿರೋಧಿಸಿದರು. ಈ ವಾದ ವಿವಾದ ತಾರಕಕ್ಕೇರಿ ಹೊಯ್'ಕೈ ನಡೆದು ಮತ್ತೆ ರಕ್ತದೋಕುಳಿಯಾಡುವ ಎಲ್ಲಾ ಸೂಚನೆಗಳು ಕಂಡುಬಂದಾಗ ಖುರೈಷಿಗಳಲ್ಲೆ ಹಿರಿಯನಾಗಿದ್ದವನೊಬ್ಬ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಂದು ಸಂಧಾನ ಸೂತ್ರವನ್ನೇರ್ಪಡಿಸಿದ. ಅದು ಹೀಗಿತ್ತು 'ಇಂದು ಯಾವ ವ್ಯಕ್ತಿ ಮೊತ್ತ ಮೊದಲನೆಯವನಾಗಿ ಕಾಬಾದ ಒಳಕ್ಕೆ ಹೊರಗಿನಿಂದ ಬರುತ್ತಾನೊ, ಅವನಿಗೆ ಈ ಸಮಸ್ಯೆಗೆ ಪರಿಹಾರ ಸೂಚಿಸುವ ಅಥವಾ ಅವನಿಗೆ ಕರಿಶಿಲೆಯನ್ನ ಸೂಕ್ತ ಸ್ಥಳದಲ್ಲಿರಿಸುವ ಅಧಿಕಾರ ನೀಡೋಣ" ಅನ್ನುವುದಾಗಿತ್ತು. ನೆರೆದಿದ್ದವರ ಸಮ್ಮತಿ ಆ ಸೂತ್ರಕ್ಕೆ ದೊರಕುತ್ತಿದ್ದಾಗಲೆ ಮಹಮದ್ ಮೊದಲನೆಯವನಾಗಿ ಗುಡಿಯ ಒಳ ಪ್ರವೇಶಿಸಿದ್ದು ಎಲ್ಲರ ಕಣ್ಣಿಗೂ ಬಿತ್ತು! ಆವಾಗ ಎಲ್ಲರೂ 'ಅಲ್ ಅಮೀನ್' ಮೊದಲು ಬಂದ ಹೀಗಾಗಿ ಅವನು ಸೂಚಿಸುವ ಸೂತ್ರಕ್ಕೆ ನಮ್ಮ ಸಮ್ಮತಿಯಿದೆ ಎಂದು ಸಾಮೂಹಿಕವಾಗಿ ಕೂಗಿದರು. ಅತ್ಯಂತ ಸಾವಧಾನ ಚಿತ್ತದಿಂದ ಮಹಮದ್ ಈ ಕಾರ್ಯಭಾರವನ್ನು ಒಪ್ಪಿಕೊಂಡು ಕಾರ್ಯಪ್ರವೃತ್ತನಾದ. ತಾನು ಹೂದ್ದಿದ್ದ ಬಟ್ಟೆಯನ್ನು ನೆಲಕ್ಕೆ ಹಾಸಿ ಕಪ್ಪುಶಿಲೆಯನ್ನು ಅದರ ಮೇಲಿರಿಸಿ ಖುರೈಷಿಗಳ ನಾಲ್ಕೂ ಗುಂಪಿನ ಸದಸ್ಯರನ್ನು ಕರೆದು ಬಟ್ಟೆಯ ನಾಲ್ಕು ತುದಿಗಳನ್ನು ಅವರಿಂದ ಎತ್ತಿಸಿ ಅವರೆಲ್ಲರೂ ಕೂಡಿ ಕಪ್ಪುಶಿಲೆಯನ್ನು ಗೋಡೆಯ ಬದಿಗೆ ಅಂಟಿಸುವಂತೆ ಮಾಡಿದ. ತಾನೂ ಸ್ವತಃ ಈ ಕಾರ್ಯದಲ್ಲಿ ಅವರೊಂದಿಗೆ ಸಹಕರಿಸಿದ. ಹೀಗಾಗಿ ಕಟ್ಟಡದ ಕಾರ್ಯ ಸುಗಮವಾಗಿ ಸಾಗುವಂತಾಯಿತು. ಇದೆ ಸಂದರ್ಭದಲ್ಲಿ ಒಂದು ಘಟನೆ ನಡೆಯಿತು. ಈ ಕಾರ್ಯ ಸಾಗುವಾಗ ಭಯ ಭಕ್ತಿಯಿಂದ ಖುರೈಶಿಗಳು ತಮ್ಮ ಒಳವಸ್ತ್ರವನ್ನು ತೆಗೆದು ಹೆಗಲ ಮೇಲೆ ಇಳಿಬಿಟ್ಟುಕೊಂಡಿದ್ದರು.ಮಹಮದನೂ ಹಾಗೆಯೆ ಮಾಡಿದ್ದವ ಕೊನೆಯಲ್ಲಿ ಎಡವಿ ಮುಖ ಕೆಳಗಾಗಿ ನೆಲಕ್ಕೆ ಬಿದ್ದ. ಆಗ "ನಿನ್ನ ಗುಪ್ತಾಂಗವನ್ನು ಇನ್ಯಾರಿಗೂ ತೋರಿಸಬೇಡ" ಎಂಬ ಒಂದು ಅಶರೀರವಾಣಿ ಅವನಿಗೆ ಕೇಳಿಸಿದಂತಾಯಿತು. ಆದರಿಂದ ಅಂದಿನಿಂದ ಅದನ್ನು ಯಾರೊಬ್ಬರೂ ಕಾಣಲಿಲ್ಲ ಅನ್ನುತ್ತಾನೆ ಇತಿಹಾಸಕಾರ ಅಲ್-ಮುಬಾರಕಿ. ಈ ಸಮಸ್ಯೆ ಸುರಳಿತವಾಗಿ ನೆಲೆಕಂಡರೂ ಮೆಕ್ಕಾದಲ್ಲಿ ಸೂಕ್ತ ಅಧಿಕಾರ ಕೇಂದ್ರದ ಅಭಾವ ಎದ್ದುಕಾಣುತ್ತಿತ್ತು. ಖುರೈಷಿಗಳ ಒಳ ಪಂಗಡಗಳಲ್ಲೆ ವಿಪರೀತ ಕಚ್ಚಾಟವಿದ್ದರೂ ಅದೊಂದು ಬಗೆಯ ಸಾಮರಸ್ಯವೂ ಅವರಲ್ಲಿದ್ದು ವ್ಯಾಪಾರ- ವ್ಯವಹಾರಗಳಿಗೆ ಅದರಿಂದ ಅಡ್ಡಿಯಾಗದೆ ಮೆಕ್ಕಾ ಆರ್ಥಿಕವಾಗಿ ಬಲಗೊಂಡಿತ್ತು. ಉದ್ದಿಮೆದಾರರು ದೂರದ ಸಿರಿಯಾ, ನೆರೆಯ ಇರಾಕ್ ನಡುವೆ ವ್ಯಾಪಾರ ಸಂವರ್ಧನೆ ಸಾಧಿಸಿದ್ದರು. ಕ್ರಿಸ್ತ ಶಕ 606ರಲ್ಲಿ ಪರ್ಶಿಯಾದೊಂದಿಗೆ ವ್ಯಾಪಾರಿ ಸಂಬಂಧಗಳು ಅಬು ಸಫ್ಯಾನನ ಮುಂದಾಳುತ್ವದಲ್ಲಿ ಧೃಡಗೊಂಡವು. ಹೀಗೆ ಮೆಕ್ಕಾ ಉನ್ನತಿಯತ್ತ ಸಾಗುತ್ತಿದ್ದರೆ ಇತ್ತ ಮಹಮದ್'ನ ವೈವಾಹಿಕ ಜೀವನದಲ್ಲೂ ಶಾಂತಿ ನೆಲೆಸಿತ್ತು. ಮೂವರು ಹೆಣ್ಣು ಮಕ್ಕಳಿಗೆ ವಿವಾಹ ಯೋಗ ಕೂಡಿಬಂದಿತ್ತು. ಮೊದಲನೆಯವಳಾದ ಜನಾಬ್'ಳನ್ನು ಖತೀಜಳ ತಂಗಿಯ ಮಗನಿಗೆ ಕೊಟ್ಟು ಲಗ್ನ ಕುದುರಿಸಲಾಯಿತು. ಗಮನಿಸಿ ಅರಬ್ಬಿಗಳಲ್ಲಿ ಸೋದರಿಕೆಯ ಒಳವಿವಾಹಗಳು ನಿಶಿದ್ಧವಾಗಿರಲಿಲ್ಲ, ಅಂದರೆ ಅಣ್ಣತಮ್ಮಂದಿರ ಮಕ್ಕಳು ಹಾಗೂ ಅಕ್ಕತಮ್ಮಂದಿರ ಮಕ್ಕಳು ವಿವಾಹವಾಗಬಹುದಿತ್ತು. ಅದೆ ಸಾಮಾಜಿಕ ವ್ಯವಸ್ಥೆಯನ್ನ ಜಗತ್ತಿನ ಎಲ್ಲಾ ಮುಸ್ಲೀಮರೂ ಪಾಲಿಸುತ್ತಾರೆ. ಇನ್ನಿಬ್ಬರು ಹೆಣ್ಣುಮಕ್ಕಳಾದ ರೋಶಿಯಾ ಹಾಗು ಉಮ್'ಕುಲ್'ಸುಮ್'ರನ್ನು ಅಬು ಲಹಾಬ್'ನ ಮಕ್ಕಳಾದ ಓತ್ವಾ ಹಾಗೂ ಒಬೈಬಾರಿಗೆ ಕೊಟ್ಟು ಲಗ್ನ ನೆರವೇರಿಸಲಾಯಿತು. ಮಹಮದ್ ತನ್ನ ಎಳೆಮಗ ಕಾಸಿಂ ಮರಣ ಹೊಂದಿದ ಮೇಲೆ ಅಬು ತಾಲಿಬ್'ನ ಐದು ವರ್ಷದ ಮಗ ಆಲಿಯನ್ನು ದತ್ತಕಕ್ಕೆ ತೆಗೆದುಕೊಳ್ಳುತ್ತಾನೆ. ಅಬು ತಾಲಿಬ್ ಕಡು ಬಡತನದಲ್ಲಿದ್ದುದ್ದರಿಂದ ಮಹಮದ್ ಮಗುವನ್ನು ತನ್ನ ಆಶ್ರಯಕ್ಕೆ ತೆಗೆದುಕೊಂಡು ಅವನ ಸಂಕಟವನ್ನು ಕೊಂಚ ನಿವಾರಿಸಿದನು. ಇದೆ ಅಲಿ ಮುಂದೆ ಮಹಮದನಿಗೆ ಪ್ರಾಮಾಣಿಕನಾಗಿದ್ದುಕೊಂಡು ಆತನ ಧರ್ಮಾಭಿಮಾನಿಯಾಗಿ ಮೆರೆಯಲಾರಂಭಿಸಿದ. ಅದೆ ಸಮಯದಲ್ಲಿ ಆಲಿಯಂತೆಯೇ ತನ್ನ ಕುಟುಂಬಕ್ಕೆ ಪರಕೀಯನಾಗಿದ್ದ ಹಾರಿಥಾ ಎಂಬ ವ್ಯಕ್ತಿಯ ಮಗನಾದ ಜೈದ್'ಎಂಬಾತನನ್ನೂ ಹೀಗೆಯೆ ದತ್ತು ತೆಗೆದುಕೊಳ್ಳಲಾಯಿತು. ಹಾರಿಥಾ ವಾಸ್ತವವಾಗಿ ಸಿರಿಯನ್ ಕ್ರೈಸ್ತ ಬುಡಕಟ್ಟಿಗೆ ಸೇರಿದ್ದ. ಜೈದ್ ಇನ್ನೂ ಮಗುವಾಗಿದ್ದಾಗಲೆ ಅರಬ್ಬಿ ದರೋಡೆಗಾರರ ಕೈಸೇರಿ ಗುಲಾಮಗಿರಿಗೆ ತಳ್ಳಲ್ಪಟ್ಟಿದ್ದ ಹಾಗೂ ಖತೀಜಳಿಗೆ ಗುಲಾಮನಾಗಿ ಮಾರಲ್ಪಟ್ಟಿದ್ದ. ಲಗ್ನದ ನಂತರ ಆಕೆಯ ಕೊಡುಗೆಯಾಗಿ ಜೈದ್ ಮಹಮದ್'ನಿಗೆ ಸಂದಿದ್ದ. ಮಹಮದ್ ಆತನನ್ನು ಗುಲಾಮನಾಗಿ ಪರಿಗಣಿಸದೆ ತನ್ನ ಒಡಹುಟ್ಟಿದವನಂತೆ ಕಂಡು ಕಡೆಗೊಮ್ಮೆ ತನ್ನ ದತ್ತು ಮಗನನ್ನಾಗಿ ಸ್ವೀಕರಿಸಿದ. ಆದರೆ ಕಾಲಕ್ರಮೇಣ ಹಾರಿಥಾನಿಗೆ ಕಳೆದು ಹೋಗಿದ್ದ ತನ್ನ ಮಗನ ಸುಳಿವು ಸಿಕ್ಕು ಆತ ಮಗನನ್ನು ಗುಲಾಮಗಿರಿಯಿಂದ ಬಿಡಿಸಿಕೊಳ್ಳಲು ಮೆಕ್ಕಾಗೆ ಧಾವಿಸಿದ. ಅದಕ್ಕಾಗಿ ಮಹಮದನಿಗೆ ಅಪಾರ ಒತ್ತೆಹಣ ನೀಡಲು ಆತ ತಯಾರಿದ್ದರೂ ಮಹಮದ್ ಅದನ್ನು ಒಪ್ಪದೆ ಜೈದ್'ನಿಗೆ ತಂದೆಯೊಂದಿಗೆ ಸಾಗುವ ಅಥವಾ ಸ್ವತಂತ್ರವಾಗಿ ಬಾಳುವ ಹಕ್ಕನ್ನು ನೀಡಿದ. ಜೈದ್ ಮಾತ್ರ ತಂದೆಯೊಂದಿಗೆ ಸಾಗಲು ನಿರಾಕರಿಸಿ ಮಹಮದನೆ ತನ್ನ ತಂದೆ-ತಾಯಿಯೆಂದು ಘೋಷಿಸಿಕೊಂಡು ಅಲ್ಲೆ ಉಳಿಯುವ ನಿರ್ಧಾರ ಪ್ರಕಟಿಸಿದ. ಅವನ ಈ ನಡೆಯಿಂದ ವಿಪರೀತ ಹರ್ಷಿತನಾದ ಮಹಮದ್ ಜೈದನ್ನು ಕಾಬಾದ ಕರಿಶಿಲೆಯ ಸಾಕ್ಷಿಯಾಗಿ ತನ್ನ ಉತ್ತರಾಧಿಕಾರಿಯೆಂದು ಪ್ರಮಾಣ ಮಾಡಿದ. ಅಂದಿನಿಂದ ಜೈದ್'ನನ್ನು 'ಜೈದ್ ಇಬ್ನ ಮಹಮದ್' ಅಂದರೆ ಮಹಮದನ ಮಗ ಜೈದ್ ಎಂದು ಗುರುತಿಸಲಾಯಿತು. ಮಹಮದನ ಇಚ್ಛೆಯ ಪ್ರಕಾರವೆ ಜೈದ್ ಮುಂದೆ ಉಮ್ ಐಮನ್ ಎಂಬ ಕೆಲಸದವಳೊಬ್ಬಳನ್ನು ವಿವಾಹವಾಗಬೇಕಾಯಿತು. ಇತಿಹಾಸಕಾರ ಮ್ಯೂರನ ಪ್ರಕಾರ ಆಕೆಯ ವಯಸ್ಸು ಜೈದನ ವಯಸ್ಸಿನ ಎರಡರಷ್ಟಾಗಿತ್ತು!. ಹೀಗಿದ್ದರೂ ಅವರ ವೈವಾಹಿಕ ಬದುಕಿಗೆ ಅದರಿಂದೇನೂ ತೊಂದರೆಯಾಗಲಿಲ್ಲ.'ಒಸಾಮಾ'ನೆಂಬ ಮಗ ಅವರಿಗೆ ಹುಟ್ಟಿದ. ತನ್ನ ವಯಸ್ಸು ನಲವತ್ತರ ಸಮೀಪ ಮುಟ್ಟುತ್ತಿದ್ದ ಹಾಗೆ ಮಹಮದನ ಒಳಮನಸು ತೀವ್ರವಾಗಿ ಚಡಪಡಿಸಲು ಆರಂಭಿಸಿತ್ತು. ಸ್ವಭಾವತಃ ಅಂತರ್ಮುಖಿಯಾಗಿದ್ದ ಆತ ಈಗ ಹಿಂದಿಗಿಂತಲೂ ಹೆಚ್ಚಾಗಿ ಯೋಚನಾಪರನಾಗಿ ಕಾಲ ಕಳೆಯಹತ್ತಿದ್ದ. ಈ ಪರಿಯ ಆತ್ಮಾವಲೋಕನದ ಸಮಯದಲ್ಲಿ ಆತನಿಗೆ ದೈವತ್ವ ಹಾಗೂ ಧರ್ಮದ ಕುರಿತು ಜಿಜ್ಞಾಸೆ ಒಳಗೊಳಗೆ ಮೂಡಲು ಆರಂಭಿಸಿತ್ತು. ಹೀಗೆ ಮುಕ್ಕಾದ ಸುತ್ತಲಿನ ಪರ್ವತದ ಕಣಿವೆಗಳಲ್ಲಿರುವ ಗುಹೆಗಳಲ್ಲಿ ದೀರ್ಘಕಾಲ ಏಕಾಂತದಲ್ಲಿದ್ದು ಚಿಂತಿಸಲು ಆತ ತೊಡಗಿದ. ಹೀರಾ ಪರ್ವತದಲ್ಲಿದ್ದ ಒಂದು ಗುಹೆ ಆತನಿಗೆ ಆಪ್ತವಾದ ಸ್ಥಳವಾಗಿದ್ದಿತು. ಹೀಗೆ ಏಕಾಂತದಲ್ಲಿ ಚಿಂತಿಸುತ್ತಾ ಧ್ಯಾನಾಸಕ್ತನಾಗಿ ಬಹು ಸಮಯವನ್ನ ಅಲ್ಲಿಯೆ ಕಳೆಯಲು ಆರಂಭಿಸಿದ ಕೆಲದಿನಗಳ ನಂತರ ಒಮ್ಮೆ ಅಲ್ಲಿಯೆ ತಿರುಗಾಡುತ್ತಿದ್ದಾಗ ಆಗಸದಿಂದ ಒಬ್ಬ ಯಕ್ಷನ ಗಟ್ಟಿಧ್ವನಿಯೊಂದು ಮಹಮದನಿಗೆ ಕೇಳಿಸಿದಂತಾಗಿ ಆತ ಗಾಬರಿಯಾದ. ತಲೆಯೆತ್ತಿ ನೋಡಿದಾಗ ಅತಿಮಾನುಷ ಯಕ್ಷನ ದರ್ಶನ ಅವನಿಗಾಯಿತು. ಮನೆಗೆ ಹಿಂದಿರುಗಿದ ಆತ ಪತ್ನಿ ಖತೀಜಳಲ್ಲಿ ಈ ವಿಷಯವನ್ನ ಅರಹುತ್ತಾ "ವಿಗ್ರಹಾರಾಧನೆ ಹಾಗು ಭವಿಷ್ಯವಾಣಿ ನುಡಿಯುವುದನ್ನ ನಂಬದಿರುವ ಹಾಗೂ ಅಸಹ್ಯ ಪಡುವ ನಾನೆ ಈಗ ನನಗರಿವಿಲ್ಲದ ಹಾಗೆ ಭವಿಷ್ಯ ನುಡಿವ ಜೋತಿಷಿಯಾಗುತ್ತಿದ್ದಿನೇನೊ!" ಎನ್ನುತ್ತಾ ವಿಹ್ವಲನಾದ. ಆದರೆ ಆತನ ಈ ಮಾತಿಗೆ ಸೊಪ್ಪು ಹಾಕದೆ ಖತೀಜಾ 'ಖಂಡಿತಾ ಇಲ್ಲ! ದೇವರು ನಿನಗೆ ಹಾಗಾಗಲು ಬಿಡನು" ಎಂದು ಸಮಾಧಾನಿಸಿ ಈ ಸಂಗತಿಯನ್ನ ತನ್ನ ಹಿರಿಯ ಸಂಬಂಧಿಕ ವರಾಕನಿಗೆ ತಿಳಿಸುತ್ತಾಳೆ. ಇದನ್ನು ಕೇಳಿ ಹರ್ಷಿತನಾದ ವರಾಕ "ಸಂಶಯವಿಲ್ಲ ಇದೆಲ್ಲ ಒಳ್ಳೆಯದರ ಆರಂಭ! ಆತ ದೇವರ ದಯದಿಂದ ಸತ್ಯವನ್ನಷ್ಟೆ ನುಡಿಯುತ್ತಿದ್ದಾನೆ" ಎಂದು ಪ್ರತಿಕ್ರಿಯಿಸಿದ. ಅಲ್ ವಾಕಿಡಿ, ಇಬ್ನ ಹಿಶಾಮ್ ಹಾಗೂ ಅಲ್ ತಾಬರಿಯಂತಹ ಇತಿಹಾಸಕಾರರು ಮಹಮದ್ ಯಕ್ಷ ಗೇಬ್ರಿಯಲ್'ನಿಂದ ಅಪೌರುಷೇಯವಾದ ದಿವ್ಯಜ್ಞಾನ ಪಡೆದಿದ್ದನ್ನು ದಾಖಲಿಸಿದ್ದಾರೆ. ಇವರನ್ನೆ ಉದಾಹರಿಸುತ್ತ ಇತಿಹಾಸಕಾರ ಸರ್ ವಿಲಿಯಂ ಮೊಯಿರ್ ತಮ್ಮ ಗ್ರಂಥದಲ್ಲಿ ಕೊಡುವ ಸಾರಾಂಶ ಇಷ್ಟು "ಮಹಮದ್ ತನ್ನ ಕುಟುಂಬಸ್ಥರೊಂದಿಗೆ ಒಂದೊಮ್ಮೆ ಹೀರಾಪರ್ವತದ ಗುಹೆಯಲ್ಲಿ ನಿದ್ರಿಸುತ್ತಿದ್ದಾಗ ಅಲ್ಲಿಗೆ ಗೇಬ್ರಿಯಲ್ಲನ ಪ್ರವೇಶವಾಗುತ್ತದೆ. ಅವನ ಕೈಯಲ್ಲಿ ಒಂದು ರೇಷ್ಮೆಯ ತುಂಡಿದ್ದು ಅದರಲ್ಲಿ ಅದೇನೂ ಬರೆದಿರುತ್ತದೆ. ಯಕ್ಷ ಮಹಮದನನ್ನು ಗಟ್ಟಿಯಾಗಿ ಹಿಡಿದುಕೊಂಡು 'ಓದು' ಎಂದು ಆದೇಶಿಸುತ್ತಾನೆ. ಆದರೆ ಅನಕ್ಷರಸ್ಥನಾಗಿದ್ದ ಮಹಮದ್ ಓದಲಾಗದೆ ಯಕ್ಷನ ಬಿಗಿ ಹಿಡಿತದಿಂದ ವೇದನೆ ಅನುಭವಿಸುತ್ತಾ 'ಏನನ್ನು ಓದಲಿ?' ಎಂದು ಕೇಳಲು, ಗೇಬ್ರಿಯಲ್ ದೇವರ ಹೆಸರಲ್ಲಿ ಓದು ಎಂದಾಗ ಹುಟ್ಟುವುದೆ ಖುರಾನಿನ 96ರಿಂದ 5ರವರೆಗಿನ ಸುರಾಗಳು ಅಂದರೆ ಶ್ಲೋಕಗಳು. ಅವುಗಳನ್ನಾತ ಗಟ್ಟಿಯಾಗಿ ನುಡಿದ ನಂತರ ಯಕ್ಷ ಅಲ್ಲಿಂದ ನಿರ್ಗಮಿಸಿದ ; ಅವಷ್ಟೂ ಸುರಾಗಳೂ ಮಹಮದನ ಹೃದಯದಲ್ಲಿ ಅಚ್ಚು ಹಾಕಿದಂತೆ ಅನುಭವವಾಯಿತು" ಹೀಗೆ ಕುರಾನಿನ 96ನೆ ಸುರಾದಲ್ಲಿದ್ದ 15 ಪದ್ಯಗಳು ಮಹಮದನಿಗೆ ಮೊದಲು ವ್ಯಕ್ತವಾದದ್ದು ಅಪೌರುಷೇಯವಾಣಿಯೊಂದರಿಂದ. ಹೀಗೆ ಕೆಲತಿಂಗಳುಗಳು ಕಳೆದ ನಂತರ ಯಕ್ಷ ಗೇಬ್ರಿಯಲ್ಲನ ಪುನರಾಗಮನವಾಯಿತು. ಈ ಹಂತದಲ್ಲಿ ಆದ ಮಾನಸಿಕ ತಳಮಳ ಹಾಗು ಆಂತರಿಕ ಹತಾಶೆಯಿಂದ ಮಹಮದ್ ಹತಾಶನಾಗಿಹೋಗಿ ಆತ್ಮಹತ್ಯೆಗೂ ಯೋಚಿಸಿದ್ದ ದಿನಗಳವು! ಆದರೆ ಇದ್ದಕ್ಕಿದಂತೆ ಒಂದು ದಿನ ಆಗಸದಲ್ಲಿ ಸಿಂಹಾಸನದಲ್ಲಿ ಕೂತಿದ್ದ ಗೇಬ್ರಿಯಲ್ಲನ ದರ್ಶನ ಅವನಿಗಾಯಿತು. ಯಕ್ಷ "ಓ ಮಹಮದ್! ನೀನೀಗ ದೇವರ ಪ್ರವಾದಿ ಹಾಗೂ ನಾನು ಯಕ್ಷನಾದ ಗೇಬ್ರಿಯಲ್... ಇದು ಸತ್ಯ!" ಎಂದು ಸಾರಿದ್ದನ್ನು ಮಹಮದ್ ಆಲಿಸಬೇಕಾಯಿತು. ಅವನೊಳಗೆ ಅಡಗಿದ್ದ ಗೊಂದಲಗಳನ್ನೆಲ್ಲಾ ಗೇಬ್ರಿಯಲ್ ಒಂದೊಂದಾಗಿ ಪರಿಹರಿಸಿ ಅವನನ್ನು ಮಾನಸಿಕವಾಗಿ ತಣಿಸಿದ. ಧೃಡಗೊಂಡ ಮನಸ್ಸಿನಿಂದ ಮುಂದಿನ ದಿನಗಳಲ್ಲಿ ಮಹಮದ್ ಮರಳಿ ಮರಳಿ ದೈವವಾಣಿಯ ಸಾರುವಿಕೆಯನ್ನ ಆರಂಭಿಸಿದ್ದು ಹೀಗೆ. ಇದೆ ಮುಂದೆ 'ಖುರಾನ್' ಎಂದು ಪ್ರಸಿದ್ಧವಾದ ಧರ್ಮಗ್ರಂಥವಾಯಿತು. 'ತನಗೆ ದೈವವಾಣಿಯ ಸಾಕ್ಷಾತ್ಕಾರವಾಗಿದೆ, ತಾನಿನ್ನು ಅಲ್ಲಾನ ಪ್ರವಾದಿ' ಎಂದು ಆರಂಭಿಸಿದ ಮಹಮದನ ಮತಪ್ರಚಾರಕ್ಕೆ ಮೊದಲು ಸಮ್ಮತಿಸಿ ಆತನ ಶಿಷ್ಯೆಯಾದವಳು ಸ್ವತಃ ಆತನ ಮಡದಿ ಖತೀಜಾ. ಆಕೆ ಗಂಡನನ್ನು ಪ್ರವಾದಿ ಎಂದು ಒಪ್ಪಿಕೊಂಡ ಮೇಲೆ ನಿಧಾನವಾಗಿ ಸಂಬಂಧಿಕರು, ಸ್ನೇಹಿತರು ಕುಟುಂಬದ ಆತ್ಮೀಯರು ಹೀಗೆ ಒಬ್ಬೊಬ್ಬರಾಗಿ ಆಕೆಯನ್ನು ಹಿಂಬಾಲಿಸಲಾರಂಭಿಸಿದರು. ಕುಟುಂಬದ ಸದಸ್ಯರಲ್ಲಿ ಪ್ರಮುಖವಾಗಿ ಮಹಮದನ ಸಾಕು ಮಗ ಜೈದ್, ದೊಡ್ಡಪ್ಪನ ಮಗ ಆಲಿ, ಪತ್ನಿ ಖತೀಜಾಳ ಬಂಧು ವರಾಕಾ, ಆಪ್ತ ಸ್ನೇಹಿತ ಅಬು ಬಕರ್ ಪ್ರಮುಖರು.ಅಬು ಬಕರ್ ಮಹಮದನಿಗಿಂತ ಕೇವಲ ಎರಡುವರ್ಷಕ್ಕೆ ಕಿರಿಯನಾಗಿದ್ದು ಆತನ ವಿಧೇಯ ಚುರುಕು ಬುದ್ದಿಯ ಆಪ್ತಮಿತ್ರನಾಗಿದ್ದ. ಪ್ರವಾದಿಯೊಂದಿಗೆ ಸಲುಗೆಯ ನಿಕಟ ಬಾಂಧವ್ಯ ಹೊಂದಿದ್ದ ಆತನನ್ನು ಮುಸ್ಲಿಂ ಪ್ರಪಂಚ 'ಅಸ್ ಸಿದ್ಧಿಕಿ' ಎಂದೆ ಗುರುತಿಸುತ್ತದೆ, ಅರಬ್ಬಿಯಲ್ಲಿ ಹಾಗೆಂದರೆ ಸತ್ಯವಂತ ಎಂದರ್ಥ. ವಾಸ್ತವವಾಗಿ ಅವನ ಅಸಲಿ ಹೆಸರು 'ಅಬ್ದುಲ್ಲಾ ಇಬ್ನ ಒತ್ಹಾಮನ್ ಅಬು ಕುಹಾಫಾ' ಎಂದಾಗಿದ್ದರೂ ಒಂಟೆಗಳ ಮೇಲೆ ಅವನಿಗಿದ್ದ ವಿಪರೀತ ಮೋಹ ಹಾಗೂ ಕಾಳಜಿಯ ಕಾರಣದಿಂದ ಆತನಿಗೆ ಅಬು ಬಕರ್ ಎಂಬ ಅಡ್ಡ ಹೆಸರು ಇಡಲಾಗಿತ್ತು ಅನ್ನುತ್ತಾನೆ ಇತಿಹಾಸಗಾರ ಮ್ಯೂರ್. ವ್ಯವಹಾರಸ್ಥನಾಗಿ ಅಪಾರ ಹಣಗಳಿಸಿದ್ದ ಅಬು ಬಕರ್ ತನ್ನ ಹಿತಮಿತ ಹಾಗೂ ಸೌಜನ್ಯಯುತ ಸಂಭಾಷಣೆಗಳಿಂದ ಜನಮನ ಗೆದ್ದಿದ್ದ. ತನ್ನ ನ್ಯಾಯಯುತ ನಡುವಳಿಕೆಗಳಿಂದ ತನ್ನ ಖುರೈಷಿ ಬುಡಕಟ್ಟಿನ ಮುಖಂಡರ ಸ್ನೇಹ ಗೌರವ ಸಂಪಾದಿಸಿದ್ದ. ಒಬ್ಬ ವೀರ ಪೂಜಕನಾಗಿದ್ದ ಆತ ತನ್ನ ಕೊನೆಯ ಉಸಿರಿರುವವರೆಗೂ ತಾನು ನಂಬಿದ ನಾಯಕನನ್ನು ಅತ್ಯಂತ ವಿಧೇಯನಾಗಿ ಆರಾಧಿಸಿದ. ಇಂತಹ ಅಬು ಬಕರ್'ನ ಶ್ರದ್ಧಾಪೂರ್ಣ ನಂಬಿಕೆಗೆ ಪಾತ್ರನಾದದ್ದು ಮತಪ್ರಚಾರದ ದೃಷ್ಟಿಯಿಂದ ಮಹಮದ್ ಸಾಧಿಸಿದ ಮೊತ್ತಮೊದಲ ವಿಜಯವಾಗಿತ್ತು. ಅಬು ಬಕರ್'ನ ಪ್ರಭಾವದಿಂದಲೆ ಮುಂದೆ ಐವರು ಪ್ರಮುಖ ಖುರೈಷಿ ಪ್ರಮುಖರು ನೂತನ ಧರ್ಮಾನುಯಾಯಿಗಳಾಗಳು ಸಾಧ್ಯವಾಯಿತು. ಅವರೆಂದರೆ ತನ್ನ ಹದಿನಾರನೆ ವಯಸ್ಸಿನಲ್ಲಿಯೆ ಹೊಸಧರ್ಮಕ್ಕೆ ಸೇರಿದ ಸಾದ್ ಎಂಬ ಯುವಕ, ಅಲ್ ಗುಬೈರ್ ಎಂಬ ಖತೀಜಾ ಹಾಗೂ ಮಹಮದನ ನಿಕಟ ಸಂಬಂಧಿ, ಮುಂದೆ ಮಹಮದನ ಮಗಳು ರೋಕೈಯಾಳ ಎರಡನೆ ಪತಿಯಾದ 'ಒತ್ಹಮನ್' ಎಂಬ ಯುವಕ ( ಅದಾಗಲೆ ಒತ್ವಾನನ್ನು ವಿವಾಹವಾಗಿದ್ದ ರೋಕೈಯಾ ಮುಂದೆ ಆತನಿಂದ ವಿಚ್ಚೇದಿತೆಯಾಗಿ ಈ ಒತ್ಹಮನ್'ನನ್ನು ಮರುವಿವಾಹವಾದಳು). ತಲ್ಹಾ ಎಂಬ ಅಬು ಬಕರನ ಸಂಬಂಧಿ ಹಾಗೂ ಮಹಾಮದನಿಗಿಂತ ವಯಸ್ಸಿನಲ್ಲಿ ಹತ್ತುವರ್ಷ ಕಿರಿಯನಾಗಿದ್ದ ಅಬ್ದುಲ್ ರೆಹಮಾನ್ ಎಂಬ ಯುವಕ. ಗುಲಾಮಗಿರಿಯಿಂದ ವಿಮೋಚಿತರಾಗುವ ಆಕರ್ಷಣೆಯಿಂದ ಹಲವಾರು ಗುಲಾಮರು ಮತಾಂತರಗೊಂಡರು. ಆ ಪೈಕಿ ಅಬಿಸೀನಿಯಾ ದೇಶದ ಗುಲಾಮ ಬಿಲಾಲ್ ಪ್ರಮುಖನಾದವ, ಅಬು ಬಾಕರ್ ಆತನನ್ನು ಒತ್ತೆಹಣ ನೀಡಿ ಗುಲಾಮಗಿರಿಯಿಂದ ಬಿಡಿಸಿದ ಮೇಲೆ ಆತನನ್ನು ಸಂತೋಷದಿಂದಲೆ ಮಹಮದ್ ತನ್ನ ಧರ್ಮಕ್ಕೆ ಬರಮಾಡಿಕೊಂಡ. ಇದೆ ಬಿಲಾಲ್ ಮುಂದೆ ಇಸ್ಲಾಮಿಕ್ ಪ್ರಪಂಚದ ಮೊತ್ತಮೊದಲ 'ಮುಯಾಜಿನ್' ಎಂದು ಕರೆಸಿಕೊಂಡ. ಮುಯಾಜಿನ್ ಅಂದರೆ ಅರಬ್ಬಿಯಲ್ಲಿ 'ಪ್ರಾರ್ಥನೆಗೆ ಕರೆನೀಡುವ ವ್ಯಕ್ತಿ' ಎಂದು ಅರ್ಥ ಬರುತ್ತದೆ. ಅಬ್ದುಲ್ಲಾ ಇಬ್ನ ಮಸೂದ್ ಎಂಬ ಇನ್ನೊಬ್ಬ ಮತಾಂತರಿತ ಗುಲಾಮ ಮುಂದೆ ಮಹಮದನ ಆಪ್ತಸೇವಕನಾಗಿ ಪ್ರಸಿದ್ಧಿಗಳಿಸಿದ. ಕಾಬ್ದಾಲ್ ಎಂಬ ಇನ್ನೊಬ್ಬ ಗುಲಾಮನನ್ನೂ ಈ ಪಟ್ಟಿಯಲ್ಲಿ ಹೆಸರಿಸಬಹುದು. ಈ ಬಹುತೇಕ ಮತಾಂತರಿತ ಗುಲಾಮರು ಮೂಲದಲ್ಲಿ ಒಂದೋ ಯಹೂದಿ ಅಥವಾ ಸಿರಿಯನ್ ಕ್ರೈಸ್ತರಾಗಿದ್ದು ತಮ್ಮ ಕೆಟ್ಟ ನಸೀಬಿನಿಂದ ಪಾರಾಗಿ ಗುಲಾಮಗಿರಿಯಿಂದ ಮುಕ್ತರಾಗಲು ಮತಾಂತರವಾದದ್ದು ಸಹಜ ಎನ್ನುತ್ತಾನೆ ಇತಿಹಾಸಕಾರ ಅಲ ಹಾಜ್ ಕಾಸಿಂ ಅಲಿ ಜೈರಾಜಬಿ. ಹೀಗೆ ಸ್ಥಾಪಿತವಾಗಿದ್ದ ಮಹಮದನ ನೂತನ ಧರ್ಮ ಸಾಮಾಜಿಕ ಭೀತಿಯಿಂದ ಆರಂಭದಲ್ಲಿ ಕೇವಲ ಒಂದು 'ಗುಪ್ತ ಸಂಘ'ವಾಗಿದ್ದಿತು. ಅತ್ಯಂತ ಗೌಪ್ಯವಾಗಿ ಮತಪ್ರಚಾರದ ಕಾರ್ಯಕೈಗೊಳ್ಳಲಾಗುತ್ತಿತ್ತು. ಕ್ರಮೇಣ ಇಸ್ಲಾಂ ಬಲಗೊಂಡಾದ ಮೇಲೆ ಗುಪ್ತ ಪ್ರಚಾರದ ನಿಯಮಗಳನ್ನೆಲ್ಲಾ ಬದಿಗೊತ್ತಿ ಬಹಿರಂಗ ಪ್ರಚಾರಕ್ಕೆ ಹೆಚ್ಚು ಒತ್ತುಕೊಡಲಾಯಿತು ಎನ್ನುತ್ತಾನೆ ಇತಿಹಾಸಕಾರ ಮ್ಯೂರ್. ಒಮ್ಮೆ ಯಾರಾದರೂ ಈ ಸಂಘದ ಸದಸ್ಯರಾದರೆ ಅನಂತರ ಕೊನೆಯುಸಿರು ಇರುವವರೆಗೂ ಅವರು ಅಲ್ಲಿನ ಅಜೀವ ಸದಸ್ಯರಾಗಿಯೆ ಬಾಳುವುದು ಕಡ್ಡಾಯವಾಗಿತ್ತು. ಹಾಗೊಂದು ವೇಳೆ ಇನ್ಯಾವುದೊ ಹೊಸ ನಂಬಿಕೆಗೆ ಮಾರುಹೋದರೆ ಜೀವ ತೆರಬೇಕಾಗಿದ್ದಿತು. ಇದೆ ಅತಿರೇಕದ ನಿಯಮ ಇನ್ನೂ ಇಸ್ಲಾಮಿನಲ್ಲಿ ಚಾಲ್ತಿಯಲ್ಲಿದೆ. ಇಂದಿಗೂ ಇಸ್ಲಾಮಿನಲ್ಲಿ ಈ ನಿಯಮ ಪಾಲನೆಯನ್ನು ಕಾಣಬಹುದಾಗಿದೆ. ಒಮ್ಮೆ ಮುಸ್ಲೀಮನಾಗಿ ಮತಾಂತರವಾದವನ ಪುನರ್ ಮತಾಂತರ ದುಸ್ಸಾಧ್ಯ! ( ಇನ್ನೂ ಇದೆ...)

ನೆನಪಿನ ದಂಡೆಯ ಮೇಲೆ....

ನಿನ್ನ ನೆನಪಿನ ಗಂಗೆಯಲಿ ಮಿಂದು, ನಿನ್ನ ಹಾದಿಯನೆ ಮನದ ಯಮುನೆಯ ದಡದಲ್ಲಿ ಕಾದು.... ನಿನ್ನ ವಿರಹದ ನೋವಿನ ತುಂಗೆಯನ್ನೆ ನಿತ್ಯ ಕುಡಿದು ಅನುಗಾಲದ ಮನದ ದಾಹವನ್ನ ತೀರಿಸಿ ಕೊಳ್ಳುತ್ತಿರುವ ನನಗೆ ಇಲ್ಲೇ ಮುಕ್ತಿ ಕಟ್ಟಿಟ್ಟಿರುವಾಗ, ಇನ್ನೊಂದು ಜನ್ಮ ಯಾವ ಕರ್ಮಕ್ಕೆ? / ಅಲ್ಪ ತೃಪ್ತ ನನ್ನ ಮನಕ್ಕೆ ನಿನ್ನದೊಂದು ನಿಷ್ಕಲ್ಮಶ ನಗುವಿನ ನೆನಪೆ ಸಾಕು..... ಪ್ರಾಮಾಣಿಕ ಪ್ರೀತಿಗೆ ಹೇಳು. ಇದಕ್ಕಿಂತ ಹೆಚ್ಚಿನ್ನೇನು ಬೇಕು? // ಸುಮ್ಮನಿರುವ ನನ್ನ ಮನಸನ್ನ ಮೆತ್ತಗೆ ಕೆಣಕುವ ನಿನ್ನ ನಿನಪುಗಳಿಗೆ ಹೊತ್ತು ಗೊತ್ತು ಒಂದೂ ಇಲ್ಲವ?, ಕೇವಲ ಮಾತಿನಲ್ಲಿಯೆ ಮಹಲು ಕಟ್ಟುವ ಬಯಕೆ ನನಗಿಲ್ಲ.... ಮೌನದ ಮಹತ್ತನ್ನ ಕೊನೆಯ ತನಕ ನಿನಗಾಗಿ ಕಾದು ಕೂತು ನಿರೂಪಿಸುತೀನಿ ನಾನು / ಕಿವಿಯಲ್ಲಿ ಕದ್ದು ಗಾಳಿಯುಸುರಿದ ನನ್ನೆದೆಯ ಖಾಸಗಿ ಗುಟ್ಟುಗಳನ್ನೆಲ್ಲ ನಿಜವೆಂದೆ ಭಾವಿಸಿದ್ದ.... ನನ್ನ ಮನದ ಮೂಢತನಕ್ಕೆ ನೀನು ಖಂಡಿತ ಹೊಣೆಯಲ್ಲ, ನೆನ್ನಿನಿರುಳು ಸುರಿದ ಮಳೆಗೆ ಇಂದೂ ಮತ್ತೆ ಹನಿಯಲು ಬಿಡುವಾದಲ್ಲಿ ನನ್ನ ಇರುಳ ಕಂಬನಿಗಳಿಗೆ ಒಂಟಿತನದಲ್ಲೊಂದು.... ಒಂದು ಜೊತೆಯಾದರೂ ಸಿಕ್ಕೀತೇನೋ // ಕೇವಲ ಮೌನದ ಆಸರೆಯಿದೆ ಮನದೊಳಗೆ ಹೊರಳಾಡುವ ಕಳವಳದ ಮಿಡುಕಾಟಕ್ಕೆ.... ನೆನಪುಗಳು ಹೊದಿಸಿದ ಚಾದರ ಬೇಸರವಿದೆ, ಸೂಕ್ಷ್ಮ ನನ್ನೆದೆಯ ಭಾವಗಳು... ನೀ ಮಾಡಿದ ಆಳ ಗಾಯ ಮಾಯಲು ಬಹುಷಃ ಈ ಒಂದು ಜನ್ಮವೂ ಅದಕ್ಕೆ ಸಾಲಲಾರದೇನೋ / ನನ್ನ ಮನಸ ಆಗಸದ ನೀಲಿಯಲ್ಲಿ ಗುಂಪು ಗುಂಪಾಗಿ ತೇಲುವ ನಿನ್ನ ನೆನಪುಗಳ ಮೋಡ.... ಸದಾ ಕಣ್ಣ ಹನಿಗಾಗಿಯೇ ಕೆಳಕ್ಕೆ ಹನಿಯುವುದಾದರೂ ಏಕೆ?, ಪಿಸುನುಡಿವ ಒಳ ಮನದ ಆಕ್ಷಾಂಶೆಗಳಿಗೆ ಮೌನದ ಗುಹೆಯಲ್ಲೆ ಮತ್ತೆ ಅಡಗಿಕೊಳ್ಳುವ ಮೊದಲು... ನಿನ್ನ ನೆನಪುಗಳನ್ನೊಮ್ಮೆ ಸೋಕಿ ಹೋಗುವ ಆಳದ ಆಸೆ // ಇರುಳಿಗೆ ತಂಪಿಲ್ಲ ಹಗಲಿಗೆ ಕಾವಿಲ್ಲ ನಿನ್ನ ನೆನಪಿರುವ ತನಕ ಮನಸಿಗೆ ವಿರಹದ ನೋವರಿವಿಲ್ಲ.... ನೀನಿಲ್ಲದ ಗುಂಗು ನನ್ನೊಳಗಿನ ನಾನು ಸತ್ತು ಹೋಗಿದ್ದರೂ ಈ ಹಾಳು ಕುಟುಕು ಜೀವದ ಹಂಗು, ಇನ್ನೂ ನನ್ನ ಕಾಯವನ್ನ ಕೇವಲ ಉಸಿರಾಡುವ ಕಾಷ್ಠವಾಗಿಸಿಟ್ಟಿವೆ/ ಕಾಪಿಟ್ಟ ಕನಸುಗಳಿಗೆ ಕಾದಿಟ್ಟ ನಿಧಿಯಂತಾ ಒಳಮನದ ಖುಷಿಗಳಿಗೆ.... ಅಸಲು ಮೌಲ್ಯ ಹುಟ್ಟೋದು ನೀನು ಬಂದಾಗಲೇ ತಾನೆ ಬರೋದು, ಕಾದ ಪ್ರತಿ ಕ್ಷಣದ ಕಪ್ಪ ಕಣ್ಣ ಹನಿಗಳಾಗಿಯೆ ಉದುರಿ ಹೋಗೋದು ಖಾತ್ರಿ,,,, ಆದರೆ ನೀ ಮರಳಿ ಬರುವ ಬಗ್ಗೆ ಮನಸಿಗೆ ಖಚಿತ ಮಾಹಿತಿಯಿಲ್ಲ //

ದಸರೆಯ ಗಮ್ಮತ್ತು....

ದಸರಾ ಬಂತೆಂದರೆ ಸಾಮಾನ್ಯವಾಗಿ ನಮಗೆಲ್ಲ ಬಾಲ್ಯದಲ್ಲಿ ಹೊಸ ಉಲ್ಲಾಸ ಉತ್ಸಾಹ ಚಿಗುರುತ್ತಿತ್ತು. ಸಾಮಾನ್ಯವಾಗಿ ದಸರಾ ಮಧ್ಯಂತರ ಶಾಲಾ ರಜೆಗಳ ಕಾಲದಲ್ಲಿಯೆ ಬರುತ್ತಿದ್ದರೂ ಅಪರೂಪಕ್ಕೆ ಅದರ ಹಿಂಚು ಮುಂಚಿನಲ್ಲೂ ವಿಜಯದಶಮಿಯ ದಿನ ಬೀಳುತ್ತಿದ್ದುದೂ ಉಂಟು. ಆಗೆಲ್ಲ ಶಾಲೆಗೆ ಇನ್ನೆರಡು ದಿನಗಳ ಹೆಚ್ಚುವರಿ ರಜೆ ಸಿಗುತ್ತಿದ್ದರಿಂದ ನಾನಂತೂ ದಸರಾ ರಜೆಯಲ್ಲಿ ಬಾರದೆ ರಜೆ ಮುಗಿದ ಮೇಲೆಯೆ ಬರಲಿ ಅಂತ ಕಂಡಕಂಡ ದೇವರಿಗೆಲ್ಲ ಮನಸೊಳಗೆ ಹರಕೆ ಹೊರುತ್ತಿದ್ದೆ. ನನ್ನ ಈ ಬೇಡಿಕೆ ಕೆಲವೊಮ್ಮೆ ಪೂರೈಸಿದ್ದು ಹೌದಾದರೂ ನನ್ನ ಆ ಅರ್ಜೆಂಟ್ "ರಜಾಪೇಕ್ಷಿತ" ಹರಕೆಗಳು ಸಕಾಲದಲ್ಲಿ ಸಂದು ಸಂತೃಪ್ತರಾಗುವ ಯೋಗ ಇನ್ನೂ ಯಾವ ದೇವರಿಗೂ ಕೂಡಿಬಂದಿಲ್ಲ. ವಿಷಯ ಹೀಗಿದ್ದರೂ ವರ್ಷವರ್ಷವೂ ನಾನು ಈ ಎಂದೆಂದೂ ಈಡೇರಿಸದ ಹರಕೆ ಹೊರುವುದನ್ನು ನಿಲ್ಲಿಸುತ್ತಿರಲಿಲ್ಲ, ಅಭ್ಯಾಸ ಬಲದಿಂದ ನನ್ನ ಹರಕೆಗಳನ್ನ ಕೇಳುವ ಅನಿವಾರ್ಯ ಕರ್ಮದಿಂದ ಯಾವೊಬ್ಬ ದೇವರಿಗೂ ಆಗೆಲ್ಲ ಮುಕ್ತಿಯಿರಲಿಲ್ಲ! ತೀರ್ಥಹಳ್ಳಿಯಲ್ಲಿ ದಸರಾ ಆಚರಣೆಗೆ ಶಿವಮೊಗ್ಗ ಜಿಲ್ಲೆಯಲ್ಲಿಯೆ ಒಂದು ಮೆರುಗಿತ್ತು. ಮೈಸೂರು ದಸರಾಕ್ಕೆ ಹೋಲಿಸಿದರೆ "ಸಿಂಗನ ಮುಂದೆ ರಂಗ" ಎನ್ನುವಂತಿದ್ದರೂ ಆಚರಣೆಯ ಅಚ್ಚುಕಟ್ಟುತನದಲ್ಲಿ ಯಾವ ಮೈಸೂರಿಗೂ ತೀರ್ಥಹಳ್ಳಿ ಕಡಿಮೆಯಿರಲಿಲ್ಲ. ನಮ್ಮಲ್ಲೂ ಅನೆ ಮೇಲೆ ನಾಡದೇವಿಯ ಅಂಬಾರಿ ಇರುತ್ತಿತ್ತು. ಆನೆಯ ಮುಂದೆ ಸುಮಾರು ಹತ್ತಕ್ಕೂ ಹೆಚ್ಚು ವಿವಿಧ ಸ್ತಬ್ಧ ಚಿತ್ರಗಳು ತೆವಳಿಕೊಂಡು ಸಾಗುತ್ತಿದ್ದವು. ಅವೆಲ್ಲಕ್ಕೂ ಮುಂದೆ ನಮ್ಮ ಸೇವಾಭಾರತಿಯ ಶಾಲಾ ಬ್ಯಾಂಡ್'ಸೆಟ್, ಹೋಂಗಾರ್ಡಿನವರ ಬ್ಯಾಂಡ್'ಸೆಟ್, ಕಂಗಿಲು ಕುಣಿತ, ಡೊಳ್ಳು ಕುಣಿತ, ವೀರಗಾಸೆ, ಕಂಭದ ಕಾಲು ನಡಿಗೆ, ತಟ್ಟೀರಾಯ, ಕೀಲುಕುದುರೆ ಬೇತಾಳ ಹೀಗೆ ಯಾವುದುಂಟು ಯಾವುದಿಲ್ಲ ಹೇಳಿ! ಎಲ್ಲಕ್ಕೂ ಹೆಚ್ಚಾಗಿ ವಿವಿಧ ವರ್ಣಗಳ ಹುಲಿವೇಷದ ಹಿಂದೆ ಅಲ್ಲಿ ತುಂಬಿ ತುಳುಕುತ್ತಿತ್ತು. ಅಂತೂ ಮೆರವಣಿಗೆ ಊರಿನ ರಾಜರಸ್ತೆಯುದ್ದಕ್ಕೂ ರಂಗೇರಿಸುತ್ತಾ, ಅಸಾಧ್ಯ ಗದ್ದಲವೆಬ್ಬಿಸುತ್ತಾ ಹೋಗುತ್ತಿದ್ದರೆ ಇವೆಲ್ಲಕ್ಕೂ ಕಟ್ಟ ಕೊನೆಯಲ್ಲಿ ಛತ್ರಿ ಚಾಮರಗಳೊಂದಿಗೆ ದೇವಿಯ ಮೂರ್ತಿ ಹೊತ್ತ ಭೋವಿಗಳ ಪಲ್ಲಕಿ ಸಾಗುತ್ತಿತ್ತು. ಅದರ ಹಿಂದೆ ಸಕ್ರೆಬೈಲಿನ ಆನೆ ಬಿಡಾರದಿಂದ ಬಂದಿರುತ್ತಿದ್ದ ಆನೆ ಗಜ ಗಾಂಭೀರ್ಯದಿಂದ ಅಂಬಾರಿಯಲ್ಲಿ ದೇವಿಯ ಮೂಲ ವಿಗ್ರಹ ಹೊತ್ತು ಮೆಲ್ಲಗೆ ಹೆಜ್ಜೆ ಹಾಕುತ್ತಿತ್ತು. ಮೆರವಣಿಗೆ ಶುರುವಾಗುವ ರಥಬೀದಿಯಿಂದ ಆರಂಭಿಸಿ ಕೊನೆಗೊಳ್ಳುವ ಕುಶಾವತಿಯ ನೆಹರೂ ಪಾರ್ಕಿನವರೆಗೂ ಎಲ್ಲಿ ನೋಡಿದರಲ್ಲಿ ಜನವೋ ಜನ. ಎಳ್ಳಮವಾಸ್ಯೆ ಬಿಟ್ಟರೆ ತೀರ್ಥಹಳ್ಳಿ ಅಷ್ಟು ಜನ ಪ್ರವಾಹವನ್ನ ಕಾಣುತ್ತಿದ್ದುದು ಬಹುಷಃ ವಿಜಯದಶಮಿಯ ದಿನ ಮಾತ್ರ. ಸಕ್ರೆಬೈಲಿನ ಆನೆ ಬಿಡಾರದಿಂದ ಆನೆಯನ್ನ ಹಿಂದಿನ ದಿನವೆ ತಂಪು ಹೊತ್ತಿನಲ್ಲಿ ಹೊರಡಿಸಿ ತೀರ್ಥಹಳ್ಳಿಗೆ ಅರಣ್ಯ ಇಲಾಖೆಯವರೆ ತಮ್ಮ ದೊಡ್ಡ ಲಾರಿಯಲ್ಲಿ ಹತ್ತಿಸಿಕೊಂಡು ತರುತ್ತಿದ್ದರು. ಆದರೆ ಅದ್ಯಾಕೆ ಹೆಣ್ಣು ಆನೆಗಳನ್ನೆ ತರುತ್ತಿದ್ದರು ಅಂತ ನನಗೆ ಇಂದಿಗೂ ಅರ್ಥವಾಗಿಲ್ಲ. ಒಂದೆರಡು ಸಲವಂತೂ ಇನ್ನೂ ಎಳೆಮರಿ ಜೊತೆಗಿರುವ ತಾಯಿ ಆನೆಯನ್ನ ಈ ಭೂಪರು ಮೆರವಣಿಗೆಗೆ ತಂದಿದ್ದರು! ಅಂಬಾರಿ ಹೊತ್ತ ತಾಯಿಯ ಮೇಲೆ ಊರವರೆಲ್ಲರ ಕಣ್ಣಿದ್ದರೆ.ತಾಯಿಯೊಂದಿಗೆ ಪುಟುಪುಟು ಹೆಜ್ಜೆ ಹಾಕುತ್ತಾ ಆಗಾಗ ಅಕ್ಕ ಪಕ್ಕದಲ್ಲಿನವರ ಅಂಗಿಯನ್ನೋ, ಬೀದಿಯನ್ಚಿಗೆ ಕಟ್ಟಿರುವ ತೋರನವನ್ನೋ ತನ್ನ ಕಿರು ಸೊಂಡಿಲಿನಿಂದ ಎಳೆಯುತ್ತಾ ತಾಯಿಯ ಕೆಂಗಣ್ಣಿಗೆ ಗುರಿಯಾಗುತ್ತಿದ್ದ ನಮ್ಮಷ್ಟೆ ಮಂಗಾಟ ಪ್ರಾವೀಣ್ಯತೆಯನ್ನೂ ಗಳಿಸಿದ್ದ ಮರಿಯಾನೆಯ ಮೇಲೆ ನಮ್ಮ ತದೇಕ ದೃಷ್ಟಿ ನೆಟ್ಟಿರುತ್ತಿತ್ತು. ಚೇಷ್ಟೆ ಮಾಡುವ ಮರಿಯನ್ನ ಪುಟ್ಟದೊಂದು ಗುಟುರು ಹಾಕುತ್ತಲೆ ಅಮ್ಮ ಆನೆ ನಿಯಂತ್ರಿಸುತ್ತಾ ಮೆರವಣಿಗೆಗೆ ತನ್ನ ಮಗುವಿನ ತುಂಟಾಟ ತೊಂದರೆ ತಾರದಂತೆ ಮುನ್ನೆಚ್ಚರಿಕೆ ವಹಿಸುತ್ತಿತ್ತು. ರಾಮೇಶ್ವರ ದೇವಸ್ಥಾನದ ರಥದ ಕೊಟ್ಟಿಗೆ ಎದುರು ವಿಜಯದಶಮಿಯ ಮುಂಜಾನೆ ಆನೆಯಮ್ಮನ ಮೇಕಪ್ ಶುರುವಾಗುತ್ತಿತ್ತು. ಮೊದಲಿಗೆ ಅವಳನ್ನ ಪಕ್ಕದಲ್ಲಿಯೇ ಹರಿಯುತ್ತಿದ್ದ ತುಂಗೆಯ ದಡಕ್ಕೆ ಕರೆದು ಕೊಂಡು ಹೋಗಿ ಈಜಿಸಿ ಮೀಯಿಸಲಾಗುತ್ತಿತ್ತು. ಅವಳ ಆನೆಬಿದಾರದಲ್ಲಿಯೂ ಇದೆ ತುಂಗೆ ಹರಿಯುತ್ತಲಾದ್ದರಿಂದ ಇಬ್ಬರದ್ದೂ ಒಂಥರಾ ಹಳೆ ಪರಿಚಯ.ಮನಸಾರೆ ಈಜಿ ದಡಕ್ಕೆ ಬರುತ್ತಿದ್ದ ಆನೆಯಮ್ಮನ ಕಡೆದ ಕಲ್ಲಿನಂತಹ ಕಪ್ಪುಕಪ್ಪು ಅಂಗ ಸೌಷ್ಠವ ಆಗ ಮಾತ್ರ ಕಣ್ಣಿಗೆ ರಾಚುವಂತೆ ಕಾಣುತ್ತಿತ್ತು. ಅವಳ ಕಾವಾಡಿ ನೀರಿನಲ್ಲಿ ಕರಿಬಂಡೆಯಂತೆ ಕಾಣುತ್ತಿದ್ದ ಅವಳ ಮೇಲೇರಿ ಒರಟು ತೆಂಗಿನ ಚೊಪ್ಪಿನಲ್ಲಿ ಕತ್ತ ಮಾಡಿಕೊಂಡು ಅವಳನ್ನ ಉಜ್ಜಿ ಉಜ್ಜಿ ಮೀಯಿಸುತ್ತಿದ್ದ. ಅವನ ಉಜ್ಜಾಟವೆಲ್ಲ ಆಕೆಯ ಒರಟು ಮೈಗೆ ಹಿತವಾದ ಮಾಲೀಸಿನಂತೆ ಭಾಸವಾಗುತ್ತಿತ್ತೋ ಏನೋ? ಒಂದೊಮ್ಮೆ ಈ ಉಜ್ಜಾಟದ ಭರದಲ್ಲಿ ಅವನ ಕೈಯೆಲ್ಲಾದರೂ ಆಕೆಯ ಗುಪ್ತಾಂಗಗಳ ಬಳಿ ಸುಳಿದಾಡಿದರೂ ಆಕೆ ಅದನ್ನ ಚೂರೂ ಪರಿಗಣಿಸಿ ಪ್ರತಿಭಟಿಸದೆ ಆನಂದದಿಂದ ಕಣ್ಣು ಮುಚ್ಚಿ ಕೊಂಡು ಮಜಾ ಅನುಭಿಸುತ್ತಿರುವಂತೆ ದೂರಕ್ಕೆ ತೋರುತ್ತಿತ್ತು! ಇಷ್ಟೆಲ್ಲಾ ಮೀಯಾಟ ಆಗಿ ಆಕೆ ದಡಕ್ಕೆ ಹತ್ತುವಾಗ ಅಲ್ಲಿಯೆ ನಯವಾಗಿ ಬಿದ್ದಿರುತ್ತಿದ್ದ ಹಿಟ್ಟಿನಂತಹ ಧೂಳನ್ನ ತನ್ನ ನೀಳ ಸೊಂಡಿಲಲ್ಲಿ ಒಮ್ಮೆ ಎಳೆದು ಕೊಂಡು ತನ್ನ ಬೆನ್ನು ಹಾಗು ಮೈಗಳಿಗೆ ಪೌಡರಿನಂತೆ ಎರಚಿ ಕೊಳ್ಳುತ್ತಿದ್ದಳು. ಅಲ್ಲಿಗೆ ಅಷ್ಟು ಹೊತ್ತಿನ ಅವಳ ಸ್ನಾನವೆಲ್ಲ ಮಣ್ಣು ಪಾಲಾಗುತ್ತಿತ್ತು. ಉಳಿದೆಲ್ಲಾ ಹೊತ್ತಿನಲ್ಲಿ ತನ್ನ ಮಾವುತ ಹಾಗೂ ಕಾವಾಡಿಗಳಿಗೆ ಪರಮ ವಿಧೇಯಳಾಗಿದ್ದುಕೊಂಡು ನಮ್ಮ ಕೊಟ್ಟಿಗೆಯ ಲಕ್ಷ್ಮಿಯಷ್ಟೇ ಸಾಧುವಾಗಿದ್ದ ಆಕೆ ಆ ಒಂದು ಕ್ಷಣದಲ್ಲಿ ಮಾತ್ರ ಅವರಿಬ್ಬರ ಮಾತಿಗೆ ಕವಡೆ ಕಿಮ್ಮತ್ತನ್ನೂ ಕೊಡುತ್ತಿರಲಿಲ್ಲ! ಇದನ್ನ ನೋಡುವಾಗ ನನಗೆ ಅವಳ ಸೌಂದರ್ಯ ಪ್ರಜ್ಞೆಯ ಬಗ್ಗೆಯೆ ಸಂಶಯ ಮೂಡುತ್ತಿತ್ತು. ಸಾಲದ್ದಕ್ಕೆ ಆಗಾಗ ಅಜ್ಜನೂ ಹೀಗೆ ನಶ್ಯ ಎಳೆದು ಕೊಂಡು ಸೀನಿನ ಸರಣಿಯನ್ನೆ ಹೊಮ್ಮಿಸುತ್ತಿದ್ದುದು ನೆನಪಾಗಿ. ಸೊಂಡಿಲು ಆನೆಯ ಮೂಗಲ್ಲವ? ಇಷ್ಟು ಧೂಳು ಅದರಲ್ಲಿ ಹೊಕ್ಕರೂ ಅದಕ್ಕೆ ಸೀನು ಬರಲ್ಲವಾ! ಅಂತ ತಲೆ ತುರಿಸಿ ಕೊಳ್ಳುತ್ತಿದ್ದೆ. ನಮ್ಮಜ್ಜನ ನಶ್ಯದ ಚಟದಂತೆಯೆ ಆನೆಯಮ್ಮನಿಗೆ ಧೂಳಿನ ಚಟ ಅಂತ ಲೆಕ್ಖ ಹಾಕಿದ್ದೆ ಆಗೆಲ್ಲ. ಈ ಅತಿ ಮೇಕಪ್ಪಿಗೆ ಮತ್ತೆ ದೇವಸ್ಥಾನದ ತೇರು ಕೊಟ್ಟಿಗೆಯಲ್ಲಿ ತಕ್ಕ ಶಾಸ್ತಿ ಅವಳಿಗೆ ಆಗುತ್ತಿತ್ತು ಅನ್ನೋದು ಬೇರೆ ಸಂಗತಿ. ಅಲ್ಲಿ ಬಕೆಟುಗಟ್ಟಲೆ ನೀರನ್ನ ಹೊಯ್ದು ಅವಳ ಧೂಳಿನ ತೆರೆಯಿಂದ ಮತ್ತೆ ಕರಿ ಬಣ್ಣದ ಮೈಯನ್ನ ಹೊರ ತೆಗೆಯಲಾಗುತ್ತಿತ್ತು. ಅನಂತರ ತರು ಕಟ್ಟಿಗೆಯ ಮುಂದೆ ರಾಶಿ ಹಾಕಿದ ಬೈನೆ- ಬೈಹುಲ್ಲು- ಕಬ್ಬು- ತರಕಾರಿ ಗುಡ್ಡದ ಮುಂದೆ ಅವಳು ಮಂಡಿಯೂರಿ ಮಲಗಿ ಕೊಳ್ಳುತ್ತಿದ್ದಳು. ನುರಿತ ಚಿತ್ರಕಾರರು ಕಾವಡಿಯ ಮುತುವರ್ಜಿಯಲ್ಲಿ ಅವಳ ಹಣೆ ಕೆನ್ನೆ ಕಣ್ಣಿನ ಸುತ್ತ ಹಾಗೂ ಕಂಭದಂತಹ ಕಾಲುಗಳ ಮೇಲೆ ಸುಣ್ಣದ ನೀರು ಹಾಗೂ ನೀರಿನಲ್ಲಿ ನೆನೆಸಿದ ಸೀಮೆ ಸುಣ್ಣದ ಕಡ್ಡಿ ಬಳಸಿ ರಂಗೋಲಿಯ ಚಿತ್ತರದಂತಹ ಚಿತ್ರಗಳನ್ನ ತನ್ಮಯರಾಗಿ ಬರೆಯುತ್ತಿದ್ದರು. ಚಾಮರದಂತೆ ಆಗಾಗ ಅವಳು ಬೀಸುತ್ತಿದ್ದ ಅಗಲ ಕಿವಿಗಳಿಗೂ ಈ ಚಿತ್ತಾರದ ಅಲಂಕಾರ ಸಾಗುತ್ತಿತ್ತು. ಈ ನಡುವೆ ಆಕೆಯ ಎಳೆ ಕುಮಾರ ಒಂದಷ್ಟು ತಂಟೆ ಮಾಡಿ ಅಮ್ಮನಿಂದಲೂ, ಅಮ್ಮನ ಮಾವುತನಿಂದಲೂ ನಡುನಡುವೆ ಸರದಿಯಂತೆ ಉಗಿಸಿಕೊಳ್ಳುತ್ತಿದ್ದ. ಇನ್ನು ಆನೆಯಮ್ಮ ಹೊಟ್ಟೆಗೆ ಅಲ್ಲಿ ರಾಶಿ ಹಾಕಿದ್ದ ಭಕ್ಷ್ಯಗಳನ್ನ ಎಡೆಬಿಡದೆ ಇಳಿಸಿಕೊಳ್ಳುತ್ತಲೇ ಎದ್ದು ನಿಂತು ಉಚ್ಚೆ- ಲದ್ಧಿಗಳನ್ನ ನಿರ್ದಾಕ್ಷಿಣ್ಯವಾಗಿ ಬುಟ್ಟಿಗಟ್ಟಲೆ ಉದುರಿಸಿ ಏನೂ ಆಗದವಳಂತೆ ಬಾಲವಾಡಿಸುತ್ತಿದ್ದಳು. ಇದರ ಮಧ್ಯೆಯೆ ಅವಳ ಬಾಹ್ಯ ಅಲಂಕಾರ ನಡೆಯುತ್ತಿದ್ದರೂ ಆ ಬಗ್ಗೆ ಆಕೆ ಪರಮ ನಿರ್ಲಕ್ಷ್ಯವನ್ನ ನಟಿಸುತ್ತಿದ್ದಳು. ಮಧ್ಯಾಹ್ನ ಸಮಯ ಸೂರ್ಯ ನೆತ್ತಿಗೆ ಮುಟ್ಟಲಿಕ್ಕಾದಾಗ ಅವಳ ಅನ್ನದಮುದ್ದೆಗೆ ಬೆಲ್ಲ ರಾಗಿ ಬೆರೆಸಿ ತೌಡಿನಲ್ಲಿ ಕಲಸಿದ ಮುದ್ದೆಗಳನ್ನಾಗಿಸಿ ಬೈ ಹುಲ್ಲಿನಲ್ಲಿ ಸುತ್ತಿ ಕಾವಾಡಿ ಅವಳ ಬಾಯಿಗೆ ಕೊಡುತ್ತಿದ್ದ. ಈ ಗಜ ಭೋಜನವನ್ನ ನಾವು ಬಿಟ್ಟ ಕಣ್ಣು ಬಿಟ್ಟಂತೆ ನೋಡಿ ಬೆರಗಾಗುತ್ತಿದ್ದೆವು. ಒಂದು ದಪ್ಪ ಹಾಸಿಗೆಯಂತಹ ಮೆತ್ತೆಯನ್ನ ಮಡಚಿ ಅವಳ ಬೆನ್ನಿಗೇರಿಸಿ ದನ ಕಟ್ಟುವಂತಹ ದಪ್ಪ ಹಗ್ಗದಲ್ಲಿ ಮಾವುತ ಕಾವಾಡಿ ಬಿಗಿದೆಳೆದು ಅವಳ ಹೊಟ್ಟೆಯಡಿಯಿಂದ ತಂದು ಗಟ್ಟಿಯಾಗಿ ಭದ್ರ ಕಟ್ಟುತ್ತಿದ್ದರು. ಮುಂದೆ ಅದರ ಮೇಲೆಯೆ ಅಂಬಾರಿ ಇಡಲಾಗುತ್ತಿತ್ತು. ಅವಳ ತಲೆಯಿಂದ ಇಳಿಬಿದ್ದ ಹಾಗೆ ಒಂದು ಕೆಂಪನೆ ವಸ್ತ್ರವನ್ನು ಸೊಂಡಿಲಿನಂಚಿಗೆ ಕಟ್ಟುತ್ತಿದ್ದರು. ಅದರ ಮೇಲೆ ಚಿತ್ತಾರಗಳನ್ನ ಕುಸುರಿಯಲ್ಲಿ ಕೊರೆದ ಬಂಗಾರದ ಬಣ್ಣದ ಹಿತ್ತಾಳೆ ಆಭರಣದಂತಹದ್ದೊಂದನ್ನ ಅದರ ಮೇಲೆ ಸೇರಿಸಿ ಬಿಗಿಯಲಾಗುತ್ತಿತ್ತು. ಆಮೇಲೆ ಗುಲಾಬಿ ಬಣ್ಣದ ಜರಿಯ ಅಂಚಿರುವ ರೇಶಿಮೆ ಶಾಲಿನಂತಹ ದೊಡ್ಡ ವಸ್ತ್ರವನ್ನು ಅವಳ ಎರಡೂ ಹೊಟ್ಟೆಯ ಪಕ್ಕ ನೇಲುವಂತೆ ಮೆತ್ತೆಯ ಮೇಲೆ ಹೊದಿಸಿ ಅನಂತರ ಬೆನ್ನಿನ ಮೇಲೆ ಒಂದು ದೊಡ್ಡ ಮರದ ಅಂಬಾರಿ ಕಟ್ಟಿ ಬಂದೋಬಸ್ತು ಮಾಡಲಾಯಿತೆಂದರೆ ಮಹಾರಾಣಿಯ ಅಲಂಕಾರ ಪುರಾಣ ಕಡೆಗೂ ಮುಗಿದಂತೆ. ಈ ಅಲಂಕಾರ ಸಂಭ್ರಮ ಒಂದೆಡೆ ಸಾಗುತ್ತಿದ್ದರೆ ಊರಿನ ಉದ್ದಗಲಕ್ಕೂ ಮನೆಮನೆಯ ಮುಂದೆ ಅನೇಕ ಹುಲಿವೇಷಗಳು ಕಂಡಾಪಟ್ಟೆ ಕುಣಿ ಕುಣಿದು ತಮ್ಮ ಪ್ರತಿಭೆಯನ್ನ ಮುಕ್ತವಾಗಿ ತೀರ್ಥಹಳ್ಳಿಯ ಬೀದಿದೀದಿಯುದ್ದಕ್ಕೂ ಪ್ರದರ್ಶಿಸಿ ಕಲಾರಸಿಕರಿಂದ ಕಾಸಿನ ಶಹಭಾಸ್'ಗಿರಿ ಗಿಟ್ಟಿಸುತ್ತಿದ್ದರು. ಬಾಯಲ್ಲಿ ಇಡಿ ಲಿಂಬೆಹಣ್ಣನ್ನ ಕಚ್ಚಿಕೊಂಡೆ ಕುಣಿಯೋದೇನು!, ಕುಣಿಯುತ್ತಲೇ ನೆಲಕ್ಕೆ ಹಾಕಿದ ಕಾಸನ್ನ ಕೈಯಲ್ಲಿ ಮುಟ್ಟದೆ ಕೇವಲ ಬಾಯಲ್ಲೇ ಕಚ್ಚಿ ಎತ್ತೋದೇನು!! ಕೋವಿ ಹಿಡಿದ ಬೇಟೆಗಾರನ ವೇಷದವನೊಂದಿಗೆ ಪೈಪೋಟಿಯಲ್ಲಿ ಅಬ್ಬರಿಸಿ ಬೊಬ್ಬಿರಿದು ಕುಣಿಯೋದೇನು!!! ಚುಮುಣಿ ಎಣ್ಣೆಯನ್ನ ಬಾಯಿಂದ ಉರುಟಿ ಕೈಯಲ್ಲಿ ಹಿಡಿದ ದೊಂದಿಯಿಂದ ಬೆಂಕಿಯ ಕೋಲನ್ನ ಬಾನಿನತ್ತ ಎಬ್ಬಿಸೋದೇನು!!! ಏನುಂಟು ಏನಿಲ್ಲ? ಯಾವುದನ್ನ ಕೇಳ್ತೀರಿ ಅಲ್ಲಿ! ಈ ಹುಲಿವೇಷ ಹಾಕುವವರು ಕೂಡ ಒಂದೋ ಬಂಟರ ಅಥವಾ ಬ್ಯಾರಿಗಳ ಕಲಾ ನಿಪುಣರೆ ಆಗಿರುತ್ತಿದುದೊಂದು ವಿಶೇಷ. ಅಪರೂಪಕ್ಕಲ್ಲಲ್ಲಿ ಪೂಜಾರಿ, ಪರ್ಬುಗಳೂ ಹುಲಿವೇಷ ಕುಣಿಯುವುದನ್ನ ಕಾಣಬಹುದಾಗಿತ್ತು. ಇವರ ಕಲೆಯನ್ನ ಆಸ್ವಾದಿಸಿದ ಕೆಲವು ಕಲಾಭಿಮಾನಿಗಳು ಈ ಥೆರೆವಾರಿ ಕುಣಿತದ ಕೊನೆಗೆ ಇವರ ಕುತ್ತಿಗೆಗೆ ದುಡ್ಡಿನ ಹಾರವನ್ನ ಹಾಕೋದು ಅಲ್ಲಿ ತೀರಾ ಮಾಮೂಲಿ ಪ್ರಹಸನವಾಗಿತ್ತು. ಇತ್ತಾಗಿ ದಸರೆಯ ಮೆರವಣಿಗೆಯುದ್ದಕ್ಕೂ ನೋಟಿನ ಹಾರವನ್ನ ಹೆಮ್ಮೆಯಿಂದ ಹೊತ್ತು ಕುಣಿಯುತ್ತಿರುವ ಹಿರಿ- ಮರಿ- ಕಿರಿ ಹುಲಿಗಳ ಕಿರಿಕಿರಿ ಹುಟ್ಟಿಸುವಷ್ಟು ಜಬರ್ದಾಸ್ತಾಗಿರುತ್ತಿದ್ದ ಸಾಮೂಹಿಕ ಎರ್ರಾಬಿರ್ರಿ ಕುಣಿತವನ್ನು ಕಾಣಬಹುದಾಗಿತ್ತು. ಅಂದು ನಾನು ಕಾಣುತ್ತಿದ್ದ ಹುಲಿ ವೇಷದ ಕುಣಿತದ ಮುಂದೆ ಇಂದಿನ ಸ್ಟ್ರೀಟ್ ಡ್ಯಾನ್ಸರ್ ರೇಣುಕುಮಾರನ ಕುಣಿತವೂ ಸಾಟಿಯಲ್ಲ! ಮೈತುಂಬ ಆಯಿಲ್ ಪೇಯಿಂಟಿನಿಂದ ಪಟ್ಟೆಪಟ್ಟೆ ಬಣ್ಣ ಬಳಿಸಿ ಕೊಂಡು ಸಾಕ್ಷಾತ್ ಹುಲಿಗಳಾಗಿರುತ್ತಿದ್ದ ಅವರ ಹೊಟ್ಟೆ ಭಾಗದಲ್ಲಿ ಕಪ್ಪು ಬಿಳಿ ಚುಕ್ಕಿಗಳಿರುತ್ತಿದ್ದವು. ಕೇವಲ ಬಿಗಿಯಾದ ಲಂಗೋಟಿಯಂತದ್ದನ್ನು ಕಟ್ಟಿ ಕೊಂಡಿರುತ್ತಿದ್ದ ಹುಲಿಗಳ ಹಿಂದೆ ಉದ್ದುದ್ದನೆಯ ಬಾಲವನ್ನೂ ಬಿಗಿದಿರಲಾಗುತ್ತಿದ್ದು. ಬಿಸಿಲು -ಸೆಖೆ ಯ ಆ ವಾತಾವರಣದಲ್ಲಿ ಹುಲಿವೇಷಧಾರಿಗಳ ಆ ಬಾಲ ಹೊತ್ತೆ ಬ್ಯಾಲೆನ್ಸ್ ಮಾಡಿಕೊಂಡು ಲಯಬದ್ಧವಾಗಿ ಕುಣಿಯುವ ರಣೋತ್ಸಾಹ ಇಂದಿಗೂ ನನಗೆ ಬೆರಗು ಹುಟ್ಟಿಸುತ್ತದೆ. ಇವರನ್ನ ಬಿಟ್ಟರೆ ನನಗೆ ಬೆರಗು ಅನ್ನಿಸುತ್ತಿದ್ದುದು ತಟ್ಟೀರಾಯ. ಸೊಗಸಾಗಿ ಹಲ್ಲು ಕಿರಿದು ಕೊಂಡಂತಿರುತ್ತಿದ್ದ ದೊಡ್ಡ ದೊಡ್ಡ ತಟ್ಟೀರಾಯನ ಟೊಳ್ಳು ಗೊಂಬೆಗಳನ್ನ ಅದರ ಒಳಗೆ ತೂರಿರುತ್ತಿದ್ದ ಪುಣ್ಯಾತ್ಮ ಅಷ್ಟೊಂದು ಭಾರವನ್ನ ಹೊತ್ತು ಕೊಂಡು ಬೀದಿಯುದ್ದ ಮೆರವಣಿಗೆಯಲ್ಲಿ ಸಾಗಿ ಬರುತ್ತಿದ್ದ. ಗೊಂಬೆಯ ಸೊಂಟದ ಭಾಗಧಲ್ಲಿ ಒಂದು ತೂತು ಅವನ ದಾರಿ ಕಾಣಲಿಕ್ಕಾಗಿ ಬಿಟ್ಟಿರುತ್ತಿದ್ದರು. ಇನ್ನು ಸೊಂಟದವರೆಗೆ ಕುದುರೆಯೊಳಗೆ ಹೂತು ಹೋದ ರಾಜ ರಾಣಿಯರ ಕೀಲು ಕುದುರೆ ಸವಾರಿಯ ಗೌಜಿಯೇನು, ಶಿವಮೊಗ್ಗದ ಪೊಲೀಸ್ ಪಡೆಯ ದೊಡ್ಡ ಕುದುರೆಯೂ ಆಗ ಬಂದು ಇವೆಲ್ಲವನ್ನೂ ಒಳಗೊಂಡ ಮೆರವಣಿಗೆ ಶಮಿ ವೃಕ್ಷವಿದ್ದ ಪಾರ್ಕಿಗೆ ಕುಣಿಕುಣಿಯುತ್ತಾ ಸಾಗಿ ಹೊರಟರೆ ಕಟ್ಟ ಕಡೆಗೆ ದೇವಿಯ ಮೂಲ ಮೂರ್ತಿ ಹೊತ್ತ ಗಜರಾಣಿ ಗಾಂಭೀರ್ಯದ ಹೆಜ್ಜೆಯಿಡುತ್ತಾ ಎರಡು ಕಿಲೋಮೀಟರ್ ದೂರದ ಪಾರ್ಕಿನತ್ತ ಹೆಜ್ಜೆಯಿಡುತ್ತಿತ್ತು. ಈ ದಸರ ನನ್ನ ಪಾಲಿಗೆ ನಲಿವಿಗಾಗಿ ನೆನಪಿರುವಷ್ಟೇ ನೋವಿನ ಕಾರಣಕ್ಕಾಗಿಯೂ ನೆನಪಿನಲ್ಲಿದೆ. ಮುಂದಿನ ಮುಂದುವರೆದ ಭಾಗದಲ್ಲಿ ಅದನ್ನ ಹೇಳುತ್ತೇನೆ. --

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......