Tuesday, October 15, 2013

ಗ್ರಾಹಕರ ಹಿತರಕ್ಷಣೆ: ನಿಮಗಿದು ಗೊತ್ತಿರಲಿ - ಪಿ.ಎಸ್.ಪರ್ವತಿ



                                                - ಪಿ.ಎಸ್.ಪರ್ವತಿ  , ಸಹಾಯಕ ನಿರ್ದೇಶಕರು, ವಾರ್ತಾ ಇಲಾಖೆ, ಗದಗ

  ಹಣ ನೀಡಿ ಪಡೆಯುವ ಸರಕು ಅಥವಾ ಸೇವೆಯಿಂದಾಗಿ ನಾವು ಗ್ರಾಹಕರೆನಿಸಿಕೊಳ್ಳುತ್ತೇವೆ. ಈ ರೀತಿ ಹಣ ಕೊಟ್ಟು ಪಡೆದ ಸರಕು ಅಥವಾ ಸೇವೆಗಳಲ್ಲಿ ಅದು ಕೊಟ್ಟ ಬೆಲೆಗೆ ಅನುಗುಣವಾದ ಗುಣಮಟ್ಟವನ್ನು ಹೊಂದಿರದಿದ್ದಲ್ಲಿ ಅದಕ್ಕೆ ಪರಿಹಾರ ಪಡೆಯುವ ಹಕ್ಕನ್ನು ಗ್ರಾಹಕರಿಗೆ ಕಾನೂನು ಒದಗಿಸಿದೆ. ಡಿಸೆಂಬರ್ ೨೪ ರಂದು ವಿಶ್ವ ಗ್ರಾಹಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.  ಈ ಸಂದರ್ಭದಲ್ಲಿ ಗ್ರಾಹಕರ ಹಕ್ಕುಗಳ ಜಾಗೃತಿಗಾಗಿ ಈ ಲೇಖನ            

ನಮ್ಮ ದೈನಂದಿನ ಕೆಲಸಗಳಲ್ಲಿ ನಾವು ಒಂದಿಲ್ಲೊಂದು ರೀತಿಯಲ್ಲಿ ಗ್ರಾಹಕರಾಗಿರುತ್ತೇವೆ.  ಆದರೆ ನಾವದನ್ನು ಗಮನಸಿರುವುದಿಲ್ಲ.  ಬೆಳಗಿನ ಹಲ್ಲುಜ್ಜುವ ಹಲ್ಲುಪುಡಿ ಅಥವಾ ಟೂಥ್‌ಪೇಸ್ಟ್, ಹಾಲಿನಿಂದ ಹಿಡಿದು ತಿಂಡಿ, ಊಟಕ್ಕಾಗಿ ಅಂಗಡಿಯಲ್ಲಿ ಕೊಂಡು ತಂದ ಆಹಾರ ಪದಾರ್ಥಗಳು, ಕುಡಿಯುವ ನಲ್ಲಿ ನೀರು, ಸಂಚರಿಸುವ ರಸ್ತೆ, ಬಸ್ ಸೇವೆಯಲ್ಲದೇ ಶಾಲಾ-ಕಾಲೇಜು ವಿದ್ಯಾರ್ಜನೆಗೂ ಸಹ ಶುಲ್ಕ ನೀಡಿ ಗ್ರಾಹಕರಾಗುತ್ತೇವೆ.  ಬಟ್ಟೆ ಖರೀದಿ , ನಂತರ ಹೊಲಿಯುವಿಕೆಯ ಸೇವೆ ಹಾಗೂ ವೈದ್ಯರ ಬಳಿ ಚಿಕಿತ್ಸೆಗಾಗಿ ಹೋದಾಗ ಅವರು ನೀಡುವ ಸೇವೆಗೆ ಗ್ರಾಹಕರಾಗುತ್ತೇವೆ. ದಿನನಿತ್ಯದ ಯಾವುದೇ ಕೆಲಸ-ಕಾರ್ಯ ತೆಗೆದುಕೊಂಡರೂ ನಾವು ಯಾವುದಾದರೂ ಸರಕು ಅಥವಾ ಸೇವೆಯ ಗ್ರಾಹಕರಾಗಿರುತ್ತೇವೆ.

       ಈ ರೀತಿ ಹಣ ತೆತ್ತು ಪಡೆದ ಸರಕು ಅಥವಾ ಸೇವೆಯ ಗುಣಮಟ್ಟದ ಬಗ್ಗೆ ಬಳಕೆದಾರ ಅಷ್ಟೊಂದು ಗಮನಹರಿಸುವುದಿಲ್ಲ. ಸೇವಾ ನ್ಯೂನತೆಯಾದಾಗ ಆ ಸಂದರ್ಬದಲ್ಲಿ ಸ್ವಲ್ಪ ಗೊಣಗಬಹುದೇ ವಿನಹ ಪರಿಹಾರಕ್ಕೆ ಹೋರಾಡುವುದಿಲ್ಲ.  ಇದರಿಂದಾಗಿ ಗ್ರಾಹಕ  ಕಡಿಮೆ ತೂಕದ ಅಳತೆ, ಕಲಬೆರಕೆ ಅಥವಾ ನಕಲು ವಸ್ತುಗಳ ಶೋಷಣೆಗೊಳಗಾಗುತ್ತಾನೆ. ಗ್ರಾಹಕರಿಗೆ ಯಾವುದೇ ರಕ್ಷಣೆ ಇಲ್ಲ ಎಂಬುದು ಇದರ ಅರ್ಥವಲ್ಲ.  ಬಳಕೆದಾರರ   ಅಸಹಾಯಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಸರ್ಕಾರ ಕೆಲವು ಕಾಯಿದೆ ಮತ್ತು ಕಾನೂನುಗಳನ್ನು ಜಾರಿಗೊಳಿಸಿದೆ.  ಬಳಕೆದಾರರಿಗೆ ಗುಣಮಟ್ಟದ ಸರಕುಗಳು ದೊರೆಯಲಿ ಎಂಬ ಉದ್ದೇಶದಿಂದ ಸೂಕ್ತ ಏರ್ಪಾಟು ಮಾಡಿದೆ.  ಇದಕ್ಕಾಗಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದವರೆಗೆ ಗ್ರಾಹಕರ ವೇದಿಕೆಗಳನ್ನು ರಚಿಸಿದೆ.

        ಗ್ರಾಹಕರ ರಕ್ಷಣೆಗಾಗಿ ಇರುವ ಕಾನೂನು ಹಾಗೂ ಹಕ್ಕುಗಳ ಬಗ್ಗೆ ಜನರು ಅರಿತುಕೊಂಡಾಗ ಮಾತ್ರ ಈ ಕ್ರಮಗಳು ನಿರೀಕ್ಷಿತ ಫಲ ನೀಡುತ್ತವೆ.  ಈ ಬಗ್ಗೆ ಗ್ರಾಹಕರು ಕನಿಷ್ಟ ಮಟ್ಟದ ಮಾಹಿತಿ ಹೊಂದಿರಬೇಕು.  ತಮ್ಮ ಹಕ್ಕುಗಳಿಗೆ ಚ್ಯುತಿ ಬರದಂತೆ ನಿಗಾ ವಹಿಸಬೇಕು.  ಮಾರಾಟದ ಆಕರ್ಷಕ ಕ್ರಮಗಳಿಗೆ ಮೋಸ ಹೋಗದಷ್ಟು ಜಾಗರೂಕರಾಗಿದ್ದು, ತಾಳ್ಮೆಯಿಂದ   ತಮ್ಮ ಹಕ್ಕು ಜವಾಬ್ದಾರಿ ಅರಿತುಕೊಂಡಾಗ ಶೋಷಣೆ ತಪ್ಪಿಸಲು ಸಾಧ್ಯವಾಗುತ್ತದೆ.

ಗ್ರಾಹಕರ ಹಕ್ಕು

       ಗ್ರಾಹಕರಾಗಿ ನಮಗಿರುವ ಹಕ್ಕುಗಳ ಬಗ್ಗೆ ನಾವು ಅರಿತುಕೊಳ್ಳಬೇಕು.  ಅಂದಾಗ ಮಾತ್ರ ನಾವು ನಮ್ಮ ಜವಾಬ್ದಾರಿ ನಿರ್ವಹಿಸಲು ಸಾಧ್ಯವಾಗುತ್ತದೆ.  ಸ್ಥೂಲವಾಗಿ ಹೇಳುವುದಾದಲ್ಲಿ ಗ್ರಾಹಕರಾಗಿ ನಮಗೆ ಎಂಟು ವಿಧದ ಹಕ್ಕುಗಳಿವೆ.  ಅವುಗಳೆಂದರೆ:

೧) ಮೂಲಭೂತ ಅಗತ್ಯಗಳನ್ನು ಪೂರೈಸುವ ಹಕ್ಕು   ೨)  ಸುರಕ್ಷತೆಯ ಹಕ್ಕು   ೩) ಮಾಹಿತಿ ಪಡೆಯುವ ಹಕ್ಕು  ೪) ಆಯ್ಕೆ ಹಕ್ಕು  ೫) ಕೇಳಿಸಿಕೊಳ್ಳುವ ಹಕ್ಕು   ೬) ಪರಿಹಾರ ಪಡೆಯುವ ಹಕ್ಕು  ೭) ಗ್ರಾಹಕ ಶಿಕ್ಷಣದ ಹಕ್ಕು ಹಾಗೂ ೮) ಆರೋಗ್ಯಕರ ಮತ್ತು ಸಹನೀಯ ಪರಿಸರದ ಹಕ್ಕು

       ಪರಿಹಾರ ಪಡೆಯುವ ಹಕ್ಕಿನ ಅನ್ವಯ ಭಾರತದ ಸಂಸತ್ತು ೧೯೮೬ ರಲ್ಲಿ ಗ್ರಾಹಕ ಸಂರಕ್ಷಣಾ ಅಧಿನಿಯಮ ಜಾರಿಗೆ ತಂದಿದೆ.  ಈ ಕಾನೂನಿನ ಅಡಿಯಲ್ಲಿ ನಾವು ಖರೀದಿಸಿದ ಸರಕು ದೋಷಪೂರಿತವಾಗಿದ್ದಲ್ಲಿ ಅಥವಾ ಹಣ ನೀಡಿ ಪಡೆದ ಸೇವೆಯಲ್ಲಿ ನ್ಯೂನತೆಯಿದ್ದರೆ ನಾವು ಸುಲಭವಾಗಿ ಪರಿಹಾರವನ್ನು ಪಡೆಯಬಹುದು.    ಈ ಕಾನೂನು ಅನುಷ್ಟಾನಕ್ಕೆ ತರಲು ಮೂರು ಹಂತಗಳಲ್ಲಿ ಗ್ರಾಹಕರ ನ್ಯಾಯಾಲಯಗಳನ್ನು ರಚಿಸಲಾಗಿದೆ.  ಜಿಲ್ಲಾ ಮಟ್ಟದ ಗ್ರಾಹಕರ ವೇದಿಕೆ, ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ  ಆಯೋಗ ಹಾಗೂ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ. ನಾವು ಸಾಮಾನ್ಯವಾಗಿ ನಮ್ಮ ದೂರುಗಳನ್ನು ಜಿಲ್ಲಾ ಗ್ರಾಹಕರ ವೇದಿಕೆಗೆ ಸಲ್ಲಿಸಬಹುದು.  ಈ ಗ್ರಾಹಕ ನ್ಯಾಯಾಲಯಗಳ ಶುಲ್ಕ ಬಹಳ ಕಡಿಮೆ. ತ್ವರಿತ ಇತ್ಯರ್ಥಕ್ಕೆ ಅವಕಾಶವಿರುವ ಈ ನ್ಯಾಯಾಲಯದಲ್ಲಿ ಗ್ರಾಹಕನೇ ತನ್ನ ವಾದ ಮಂಡಿಸಬಹುದು.  ಗ್ರಾಹಕ ನ್ಯಾಯಾಲಯ ಆದೇಶಿಸಿದ ಪರಿಹಾರವನ್ನು ಪ್ರತಿವಾದಿ ನಿಮಗೆ ನೀಡದಿದ್ದರೆ ಅವರಿಗೆ ದಂಡನೆ ಹಾಗೂ ಸಜೆ ವಿಧಿಸುವ ಅಧಿಕಾರ ಈ ನ್ಯಾಯಾಲಯಗಳಿಗಿದೆ. ಮೋಸ ಹೋಗಬೇಡಿ:

       ಇಂದಿನ ಮಾರುಕಟ್ಟೆ ಬಹು ಸಂಕೀರ್ಣವಾಗಿದ್ದು ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಬಹು ಜಾಗರೂಕರಾಗಿರಬೇಕಲ್ಲದೆ ಮೋಸ ಹೋಗದಂತೆ ಮುನ್ನೆಚ್ಚರಿಕೆ ವಹಿಸಬೇಕು.  ವಸ್ತುಗಳನ್ನು ಖರೀದಿಸುವ ಮುನ್ನ ಯೋಚಿಸಿ ನಿರ್ಧರಿಸಿ.  ಕೊಂಡ ಪದಾರ್ಥದೊಂದಿಗೆ ನೀಡುವ ಗ್ಯಾರಂಟಿ ಪತ್ರವನ್ನು  ಗಮನಿಸಬೇಕು.  ತಕ್ಕಡಿ ಸರಿಯಾಗಿರುವುದನ್ನು ಗಮನಿಸಲು ತೂಕದ ಕಲ್ಲುಗಳನ್ನು (ಬೊಟ್ಟುಗಳನ್ನು) ಅದಲು ಬದಲು ಮಾಡಿ. ಆಗ ಮೋಸ ಹೋಗಿದ್ದರೆ ತಿಳಿಯುತ್ತದೆ.  ತೂಕದ  ಸಾಧನಗಳನ್ನು ಕಾನೂನು ಮಾಪನ ಇಲಾಖೆ ಪ್ರತಿ ವರ್ಷ  ಸತ್ಯಾಪನೆಗೆ ಒಳಪಡಿಸಿ, ಸರಿಯಾಗಿದ್ದರೆ ಮುದ್ರೆ ಹಾಕಿ ಖಚಿತಪಡಿಸುತ್ತಾರೆ.  ಗ್ರಾಹಕರು ಇದನ್ನು ಅರಿತಿರಬೇಕು.  ಅಂಗಡಿಯಲ್ಲಿ ಯಾವ ಸರಕುಕೊಂಡರೂ, ಕೊಳ್ಳುವ ಮೊದಲು ದೋಷಗಳಿಗಾಗಿ ಅದನ್ನು ಅಂಗಡಿಯಲ್ಲೇ ಪರಿಶೀಲಿಸಿ ಕೊಂಡದ್ದಕ್ಕೆ ರಸೀದಿ ಪಡೆಯಿರಿ.  ತಕ್ಕಡಿಯ ಕೆಳಭಾಗದಲ್ಲಿ ಅಯಸ್ಕಾಂತ ಅಥವಾ ಅಳತೆ ಮಾಪನದಲ್ಲಿ ಒಳಭಾಗದಲ್ಲಿ ಯಾವುದೇ ವಸ್ತು ಅಂಟಿಸಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಿ.  ರಸೀದಿಯಿಲ್ಲದೇ ಹಣ ಕಡಿಮೆಯಾಗುತ್ತದೆ ಎಂಬ ಅಮಿಷಕ್ಕೆ ಬಲಿಯಾಗಬೇಡಿ.  ಖರೀದಿ ನಂತರ ಸರಕಿನಲ್ಲಿ ದೋಷವಿದ್ದಲ್ಲಿ ಪರಿಹಾರ ಪಡೆಯಲು ಈ ರಸೀದಿ ಬೇಕೆ ಬೇಕು.  ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಬಗ್ಗೆ ತಿಳಿದುಕೊಂಡಿರಬೇಕು.  ಅನೇಕ ತರಹದ ಕಲಬೆರಕೆಯನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದ್ದು ಅವುಗಳ ಬಗ್ಗೆ ಅರಿತುಕೊಳ್ಳುವುದು ಅಗತ್ಯ.

      ಮಾರುಕಟ್ಟೆಯಲ್ಲಿ ಈಗ ಅನೇಕ ಪೊಟ್ಟಣ ಸಾಮಗ್ರಿ ಲಭ್ಯವಾಗುತ್ತಿವೆ.  ಪೊಟ್ಟಣಗಳ ಮೇಲೆ ತಯಾರಕರ ಹೆಸರು ವಿಳಾಸ, ಪದಾರ್ಥದ ಹೆಸರು, ನಿವ್ವಳ ತೂಕ, ಪ್ಯಾಕ್ ಮಾಡಿದ ತಿಂಗಳ ವರ್ಷ ಹಾಗೂ ಗರಿಷ್ಟ ಬೆಲೆಯನ್ನು ಕಡ್ಡಾಯವಾಗಿ ಪ್ರಕಟಿಸಬೇಕು.  ಯಾವುದೇ ಕಾರಣಕ್ಕೂ ಮುದ್ರಿತ ಬೆಲೆಗಿಂತ ಹೆಚ್ಚು ಬೆಲೆಗೆ ಮಾರುವಂತಿಲ್ಲ.  ಸರಕಿನ ಗುಣಮಟ್ಟವನ್ನು ಖಾತರಿ ಮಾಡಲು ಸರ್ಕಾರವು ಐ.ಎಸ್.ಐ. ಮಾನ್ಯತೆ ನೀಡುತ್ತದೆ.  ಈ ಚಿಹ್ನೆ ಇರುವ ಸರಕನ್ನೆ ಕೊಳ್ಳಿರಿ.

       ಚಿನ್ನ , ಬೆಳ್ಳಿ ಮುಂತಾದ ಬೆಲೆ ಬಾಳುವ ವಸ್ತುಗಳನ್ನು ಖರೀದಿಸುವಾಗ ಫ್ಯಾನ್ ನಿಲ್ಲಿಸಲು ತಿಳಿಸಬೇಕು. ಇಲ್ಲವಾದಲ್ಲಿ ತೂಕ ಬದಲಾಗಬಹುದಾಗಿದೆ.  ಸೀಮೆ ಎಣ್ಣೆ ಖರೀದಿಸುವಾಗ ಲೀಟರ್  ನೆಗ್ಗಿದ್ದರೆ  ಅಥವಾ ಹಿಡಿಕೆಯಲ್ಲಿ ರಂಧ್ರವಾಗಿ ಎಣ್ಣೆ  ಸೋರಿಕೆಯಾಗುತ್ತಿದ್ದಲ್ಲಿ ಅಂತಹ ಅಳತೆ ಒಪ್ಪಬೇಡಿ.  ಮಾಪನದಲ್ಲಿ ನೊರೆ ನಿಂತರ ಎಣ್ಣೆ ಖರೀದಿಸಿ. ಅಡಿಗೆ ಅನಿಲದ ಸಿಲೆಂಡರ್ ೧೪.೨ ಕಿಲೋಗ್ರಾಂ ಅನಿಲದ ಜೊತೆಗೆ ಅದರಲ್ಲಿ ನಮೂದಿಸಿರುವ ತೂಕವಿರುವುದನ್ನು ಗಮನಿಸಬೇಕು. ಪೆಟ್ರೋಲ್ ಅಥವಾ ಡೀಸೈಲ್ ಕೊಳ್ಳುವಾಗ ಸ್ವಿಚ್ ಹಾಕಿದ ತಕ್ಷಣ ಮೀಟರ್ ಸೊನ್ನೆ (೦) ತೋರಿಸುವುದನ್ನು ಖಚಿತಪಡಿಸಿಕೊಳ್ಳಬೇಕು.  ತಂಪು ಪಾನೀಯ ಅಥವಾ ಹಣ್ಣಿನ ರಸದ ಪಾನೀಯ ಬಾಟಲ್‌ಗಳ ಮೇಲೆ ಅದನ್ನು ಪ್ಯಾಕ್ ಮಾಡಿದ ಅವಧಿ ಹಾಗೂ ಮಾರಾಟ ಬೆಲೆ ಇರಬೇಕಾದುದು ಕಡ್ಡಾಯ.

ಅಪಾರ  ಅಮಿಷ:

       ಊರಿಗೆ  ಹೊಸ ಹೊಸ ಕಂಪನಿಗಳು ಬಂದು ಗ್ರಾಹಕರಿಗೆ ಅಪಾರ ಅಮಿಷಗಳನ್ನು ತೋರಿ ವ್ಯವಹಾರ ನಡೆಸುವ ಪ್ರಸಂಗಗಳು ನಮ್ಮ ಕಣ್ಣೆದುರಿಗೆ ನಡೆಯುತ್ತಿವೆ. ಇಂತಹ ಕಂಪನಿಗಳೊಂದಿಗೆ ವ್ಯವಹಾರ ಮಾಡಿದಲ್ಲಿ ಮೋಸ ಹೋಗುವ ಸಂಭವ ಹೆಚ್ಚು.  ಇಂತಹ ಕಂಪನಿಗಳು ಹೇಳ ಹೆಸರಿಲ್ಲದೇ ದಿನ ಬೆಳಗಾಗುವುದರಲ್ಲಿ ಮಾಯವಾಗುವುದರಿಂದ ಅವರ ಮೇಲೆ ಪ್ರಕರಣ ಹಾಕುವುದಾಗಲಿ ಅಥವಾ ಪರಿಹಾರ ಪಡೆಯುವುದು ಕಷ್ಟಸಾಧ್ಯ.  ಆದ್ದರಿಂದ ಭಾರೀ ರಿಯಾಯತಿ , ಹೆಚ್ಚು ಅಮಿಷ ತೋರುವ ಕಂಪನಿಗಳ ಬಗ್ಗೆ  ಗ್ರಾಹಕರು ಸದಾ ಜಾಗೃತರಾಗಿರಬೇಕು.

       ಕೊಳ್ಳುವ ಶಕ್ತಿ ಹೆಚ್ಚಿದಷ್ಟು, ಮರುಳು ಮಾಡುವ ಜಾಹೀರಾತುಗಳಿಂದ ಕಣ್ಣಿಗೆ ಕಂಡದ್ದನ್ನೆಲ್ಲ ಖರೀದಿಸಬೇಕೆಂಬ ಚಪಲ ಹೆಚ್ಚುತ್ತದೆ.  ಮಾರುಕಟ್ಟೆ ಅಷ್ಟೇ ಅಲ್ಲ, ಪ್ರವಾಸ ಸಂದರ್ಭದಲ್ಲೂ ಪ್ರೇಕ್ಷಣೀಯ ಸ್ಥಳಗಳಲ್ಲಿ ಗ್ರಾಹಕ ಮಾರು ಹೋಗುತ್ತಾನೆ.  ಉದ್ಯಮ, ವ್ಯಾಪಾರ ಅಭಿವೃದ್ಧಿಯಾದಂತೆ ಮಾರಾಟದ ಮಾದರಿಗಳು ಬದಲಾಗುತ್ತಿವೆ. ಮಾಹಿತಿ ತಂತ್ರಜ್ಞಾನದ ಫಲವಾಗಿ ಆನ್ ಲೈನ್ ಶಾಪಿಂಗ್, ಟೆಲಿಶಾಪಿಂಗ್, ಡೈರೆಕ್ಟ್ ಸೆಲ್ಲಿಂಗ್ ಎಂಬ ಪದ್ಧತಿಗಳು ಈಗ ಚಾಲ್ತಿಯಲ್ಲಿವೆ.

       ಆದ್ದರಿಂದ ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ತನ್ನ ಬುದ್ಧಿವಂತಿಕೆ ಉಪಯೋಗಿಸಿ ಸರಿಯಾದ ಬೆಲೆ ಹಾಗೂ ಗುಣಮಟ್ಟದ ವಸ್ತುಗಳನ್ನು ಖರೀದಿಸುವುದು ಅಗತ್ಯ.  ಸಾಮಗ್ರಿ ಅಥವಾ ಸರಕು ಖರೀದಿಯಲ್ಲಿ ಕಳಪೆ ಗುಣಮಟ್ಟ, ಕಡಿಮೆ ಪ್ರಮಾಣ, ಅಶುದ್ಧತೆ ಅಥವಾ ನ್ಯೂನತೆ ಕಂಡುಬಂದಲ್ಲಿ ಗ್ರಾಹಕರು ಕೂಡಲೇ ದೂರು ನೀಡುವ ಮೂಲಕ ವಂಚನೆ ತಡೆಗಟ್ಟಲು ಮುಂದಾಗಬೇಕು.  ಸರಕಾರದ ಕಾರ್ಯಕ್ರಮದಲ್ಲಿ ಜನರ ಸಹಭಾಗಿತ್ವ ದೊರೆತಾಗ ಮಾತ್ರ ಗ್ರಾಹಕರ ಹಿತರಕ್ಷಣೆ ಸಾಧ್ಯವಾಗುತ್ತದೆ.

Krupe : http://kannadaratna.com/lekhana/consumer_rights.html

Monday, October 14, 2013

ಯುಗಾದಿ


 ಹೂದೋಟ ; ನೂರಾರು ಹೂ ಗಿಡಗಳ ನಡುವೆ
ಶ್ರೀ ಶರತ್ ಚಕ್ರವರ್ತಿ
ಬಣ್ಣ-ಆಕಾರ ಕನಿಷ್ಟ ಸುಗಂಧವೂ ಇಲ್ಲದ
ಹೂವು ಅದು ; ಹೆಸರಿಗೆ ಮಾತ್ರ
ಚಂದದ ಹಸಿರು ಬಳೆಯ ಕೈಗಳು ಮುರಿದವು
ಓರಗೆ ಹೂಗಳ ಕುತ್ತಿಗೆಯ ; ಕಟ್ಟಿದರು ಮಾಲೆಯ
ಅವಲಕ್ಷಣವೇ ಮೈತಳೆದ ಹೂ
ತಾಕಲಿಲ್ಲ ಯಾರ ಕಣ್ಣಿಗು ; ಯಾರ ಕೈಗು
ಉಸ್ಸೆಂದು ಉಸಿರು ಬಿಟ್ಟಿತು
ನಿರಾಳ ; ಮರುಕ್ಷಣ ತಲ್ಲಣ
ನನ್ನೇಕೆ ಮುರಿಯಲಿಲ್ಲ ; ಕಟ್ಟಲಿಲ್ಲ.

ಓರಗೆಯವರೊಬ್ಬರೂ ಉಳಿದಿಲ್ಲ
ಅರಳುಗಣ್ಣುಗಳ ಅರಳಿಸುತ್ತಿರೋ ಹಸುಗೂಸುಗಳನ್ನೂ
ಬಿಡಲಿಲ್ಲ ; ನನ್ನೇಕೆ ಮುಟ್ಟಲಿಲ್ಲ
ಸುತ್ತ ಹಾಡಿ ನಗುತ್ತಿದ್ದ ಗಂಧವೆಲ್ಲಾ ಮಾಲೆಯಾಗಿ
ಸೇರಿದವು ದೇವರ ಗುಡಿಗೊ
ಮತ್ಯಾರದ ಮುಡಿಗೊ ; ಸತ್ತವರೆಡೆಗೊ
ಇಲ್ಲಿ ಮತ್ತದೇ ಪ್ರಶ್ನೆ ; ನನ್ನೇಕೆ ಮುಟ್ಟಲಿಲ್ಲ

ಕುತ್ತಿಗೆ ಮುರಿಸಿಕೊಂಡು ಮಾಲೆಯಾಗಿ ಮೆರೆದು
ಕಸವಾಗಿ ಮುದುಡಿ ಕೊಳೆತು ಗಂಧ ಕಳೆದು
ದುರ್ಗಂಧವೂ ಮುಗಿಯಿತು ; ನನ್ನೇಕೆ ಮುಟ್ಟಲಿಲ್ಲ
ಪಾಲ್ಗುಣನು ಬಂದಾಗ ತಲೆಕೊಡವಿ ನಿಂತ
ಮರಗಳೆಲ್ಲ ಬೋಳು ; ಉದುರಿದೆ ನಿರ್ಗಂಧ
ಹಪಹಪಿಸಿದೆ ; ಪರಿಪರಿ ಬೇಡಿದೆ
ದಾರಿಹೋಕನೇ ಇನ್ನಾದರೂ ತುಳಿದು ಹೋಗು
ದೊರಕಲಿ ಜೀವನ್ಮುಕ್ತಿ
ಮೂಡಲ ಗಾಳಿ ಬೀಸಿದೆ
ಮತ್ತೆಲ್ಲೋ ಹಾರಿದೆ ; ಇನ್ನೂ ಯಾರು ತುಳಿದಿಲ್ಲ.

ಪಾಳಿ ನೆನೆದು ದಢಬಡಿಸಿ ಬಂದ ಚೈತ್ರನಿಗೆ
ಮೈಯೆಲ್ಲಾ ಹಸುರು ; ಇಬ್ಬನಿಯ ಬೆವರಬಿಂದು
ಗೂಡುಬಿಟ್ಟು ದಾರಿ ಮರೆತಿದ್ದ ಬಳಗವೆಲ್ಲಾ
ಹಿಂದಿರುಗಿ ಚಿಯ್-ಚುಯ್ ಗುಡುತ್ತಿವೆ
ಬರಬೇಗೆ ಕಳೆದು ಚಿಗುರೆಲೆಗೂ ಸ್ವಾಗತ
ಮತ್ತದೇ ಹೂದೋಟ ; ಮತ್ತವೇ ಹೂ ಗಿಡಗಳ ನಡುವೆ…
ಹುಡುಕಲಾರದೇ ಕೈಚೆಲ್ಲಿದ್ದೇನೆ ; ಅರ್ಥದ ವ್ಯರ್ಥವನ್ನರಿತು.



Sunday, October 13, 2013

ವೇಶ್ಯೆ

ಬೆವರಿಗೆ
ಸಾವೂ
ಒಣಗಿದಂತೆ

ಸಾಯದ
ಸಣ್ಣ ಬಾಡಿನ ದೇಹ
ತೂಕಕ್ಕಿಲ್ಲ
ಮಾರಾಟಕ್ಕಿದೆ...

Tuesday, October 8, 2013

ಕುವೆಂಪು ನೆನಪು - ಎಚ್.ಎಲ್.ನಾಗೇಗೌಡರು




ಕುವೆಂಪುರವರು ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ಬರಬೇಕಾದರೆ ಕೊಂಚ ಹೊತ್ತು ಮೌನ ತಾಳಿ ಆಮೇಲೆ ಶುರುಮಾಡುತ್ತಾರೆ. ಹಾಗೆ ಮಾಡಿ "ಮೊನ್ನೆ ಪುಟ್ಟಯ್ಯ ನಾಯ್ಕರು ಬಂದಿದ್ರು. ನಿಮ್ಮ ಶಿವಮೊಗ್ಗ ಮ್ಯೂಸಿಯಂನಲ್ಲಿ ಕೆಲವು ವಿಷಯಗಳು ದೊರೆಯಬಹುದು ಎಂದರು" ಎಂದು ಹೇಳಿದಾಗ, ನಾನು "ಯಾವ ಬಗ್ಗೆ?" ಎಂದು ಕೇಳಿದೆ.



"ಅದೇ ನನ್ನ ಕಾದಂಬರಿಗೆ ಸಾಮಗ್ರಿ ಸಂಗ್ರಹಿಸುತ್ತಿದ್ದೇನಲ್ಲ ಅದರ ಬಗ್ಗೆ. ಕೆಲವು ಒದಗಿಸಿದ್ದಾರೆ. ಮ್ಯೂಸಿಯಂನಲ್ಲಿ ತುಂಬಾ ಹಳೆಯ ಗ್ರಂಥಗಳನ್ನು ಸಂಗ್ರಹಿಸಿಟ್ಟಿದ್ದೀರಂತೆ. ಒಂದ್ಸಲ ಹೋದಾಗ ನೋಡಿಕೊಂಡು ಬರ್ತೀನಿ." ಎಂದರು.



"ಹೌದು ಇವೆ. ಹಳೆಯ ಕಡತಗಳು, ಓಲೆಗರಿಗಳು, ತಾಮ್ರ ಲಿಖಿತಗಳು ಅನೇಕ ಇವೆ. ಹುಡುಕಿದರೆ ನಿಮಗೆ ಕೆಲವು ಸಂಗತಿಗಳು ಸಿಗಬಹುದು. " ಎಂದೆ.



"ಚಿನ್ನೇಗೌಡರು ಕ್ರೈಸ್ತರಾದದ್ದು ಯಾವಾಗ ಎಂಬ ವಿಷಯ ಈಗ ಗೊತ್ತಾಗಿದೆ. ತಪ್ಪು ನಮ್ಮದು. ವೇದೋಪನಿಷತ್ತುಗಳ ಸಾರವನ್ನು ಮನೆಮನೆಗೆ ಮುಟ್ಟಿಸದೇ ಹೋದ ತಪ್ಪು ನಮ್ಮವರದು. ಕ್ರೈಸ್ತನ ಬಗ್ಗೆ ನನಗೆ ಗೌರವವಿದೆ. ಆದರೆ ಅನ್ಯಮತ ಅವಲಂಬಿಸಬೇಕೆ, ನಮ್ಮ ಮತದಲ್ಲಿ ಏನೂ ಇಲ್ಲ ಅಂತ ಹೇಳಿ! ವೇದೋಪನಿಷತ್ತುಗಳು ತಮ್ಮ ಸ್ವಂತ ಆಸ್ತಿ ಎಂದು ನಮ್ಮವರು ಮಾಡಿದ್ದು ತಪ್ಪು. ದೇವಂಗಿ ರಾಮಣ್ಣಗೌಡರು ಅವರೆಲ್ಲಾ ಕ್ರೈಸ್ತರಾಗಬೇಕು ಅಂತ ತೀರ್ಮಾನ ಮಾಡಿ ಹಾರೆ ತಗೊಂಡು ನಿಂತಿದ್ರಂತೆ, ತುಳಸೀ ಕಟ್ಟೆ ಕಿತ್ತಾಕೋದಕ್ಕೆ, ಅವರ ತಮ್ಮ ನಾಗಪ್ಪಗೌಡರು- ಈಗ್ಲೂ ಇದಾರೆ - ಕೈಲಿ ಕೋವಿ ಹಿಡಿದು ನೀವು ತುಳಸಿ ಕಟ್ಟೆ ಕಿತ್ರೆ ಬಂದೂಕಿನಲ್ಲಿ ಸುಡ್ತೀನಿ ಅಂದ್ರಂತೆ. ಆಗ ಸುಮ್ಮನಾದರು ರಾಮಣ್ಣಗೌಡರು. ಅವರು ಕ್ರೈಸ್ತಮತಕ್ಕೆ ಸೇರೋದು ನಿಂತ್ಹೋಯ್ತು. ವಿಷಯಾನೆಲ್ಲಾ ಸಂಗ್ರಹಿಸ್ತಾ ಇದ್ದೀನಿ ನನ್ನ ಕಾದಂಬರಿಗೆ. " ಎಂದರು.



"ಎಷ್ಟು ದೊಡ್ಡ ಗ್ರಂಥ ಆಗಬಹುದು? " ಎಂದೆ.



"ಬಹುಶಃ ಎಂಟು ಹತ್ತು ಸಂಪುಟಗಳಾಗಬಹುದು. ಕಳೆದ ನೂರು ವರ್ಷಗಳಲ್ಲಿ ಮಲೆನಾಡಿನಲ್ಲಿ ಮೈಸೂರಿನಲ್ಲಿ, ಇಂಡಿಯಾದಲ್ಲಿ ಪ್ರಪಂಚದಲ್ಲಿ ಏನೇನಾಯ್ತು ಎಂಬುದರ ಚಿತ್ರ ಅದರಲ್ಲಿ ಬರ್ತದೆ. ಅದು ಪೂರ್ಣದೃಷ್ಟಿಯ ಮಹಾಕಾದಂಬರಿ. ಇಡೀ ಪ್ರಪಂಚದಲ್ಲಿ ಯಾವ ಭಾಷೆಯಲ್ಲಿಯೂ ಸೃಷ್ಟಿಯಾಗದಂತಹ ಕಾದಂಬರಿ. It covers the whole universe! ಟಾಲ್ಸ್ಟಾಯ್ ಅವರ War and Peace .....? ನನಗೆ ಟಾಲ್ಸ್ಟಾಯ್ ಅವರಿಗಿಂತ ಹೆಚ್ಚು ಇಮ್ಯಾಜಿನೇಷನ್ ಉಂಟು .... " ಎಂದರು.



ಅವರು ಹೀಗೆಂದಾಗ ನನಗೆ ಅನ್ನಿಸಿತು, ಮನುಷ್ಯನ ಜಂಭ ಎಷ್ಟು ಅಂತ. ಆದರೆ ಮಾತಾಡಿದ್ದು ಕೆ.ವಿ.ಪುಟ್ಟಪ್ಪ ಅಲ್ಲ, ಅಂತಹ ಹತ್ತಾರು ಪುಟ್ಟಪ್ಪಗಳನ್ನೊಳಗೊಂಡ ಮಹಾದಾರ್ಶನಿಕ ಎಂದುಕೊಂಡಾಗ ಅವರ ಮಾತಿನ ಅರ್ಥ ಆದಂತಾಯಿತು.



"ಹಿಂದೆ ಹೇಗಿತ್ತು ಎನ್ನುವ ವಿಷಯ ಬೇಕು ನನಗೆ. ನೋಡಿ ರಸ್ತೆ (ಅವರಾಗಲೇ ಚಿಕ್ಕಮಗಳೂರು ಜಿಲ್ಲೆಯಲ್ಲಿದ್ದರು) - ಕೊಪ್ಪ ತೀರ್ಥಹಳ್ಳಿ ರಸ್ತೆ ಯಾವಾಗಾಯ್ತು, ಬಸ್ಸು ಬಂದದ್ದು ಯಾವಾಗ- ಹೀಗೆ ನನಗೆ ಅನೇಕ ವಿಷಯಗಳು ಬೇಕು. ೧೮೬೦ ರಿಂದ ಆರಂಭವಾಗಿ ೧೯೨೦ ಕ್ಕೆ ಮುಗಿಯುತ್ತೆ ಕಾದಂಬರಿ. ಈಗಿರೋ ರಸ್ತೆ ಯಾವಾಗ ಆದದ್ದು, ಹಿಂದಿನ ಕಾಲದಲ್ಲಿ ಜನರು ಹೇಗೆ ಓಡಾಡುತ್ತಿದ್ದರು - ಇವೆಲ್ಲ ಬೇಕು. ನೀವು ನಿಮಗೆ ಗೊತ್ತಾದಷ್ಟನ್ನು ಟಿಪ್ಪಣಿ ಮಾಡಿಕೊಟ್ರೆ ಸಾಕು. " ಎಂದರು.



ವಿಷಯವನ್ನು ನನಗೆ ಹಿಂದೆಯೇ ಹೇಳಿದ್ದರು. ಆದರೆ ಏನೂ ಮಾಡಿರಲ್ಲಿಲ್ಲ. ಈಗ "ಆಗಲಿ" ಎಂದೆ. ಅರವತ್ತಕ್ಕೆ ಅರುಳು ಮರುಳು ಎನ್ನುತ್ತಾರೆ. ಆದರೆ, ಮನುಷ್ಯನಿಗೆ ವಯಸ್ಸಿನಲಿ ಎಂಟು ಹತ್ತು ಸಂಪುಟಗಳ ಮಹಾಕಾದಂಬರಿ ಬರೆಯುವ ನಿರ್ಧಾರ, ನಿಜವಾಗಿಯೂ ಆಶ್ಚರ್ಯ! ವಯಸ್ಸಿನ ಇತಿಮಿತಿ ಇವರಿಗೆ ಇದ್ದಂತೆ ಕಾಣಲಿಲ್ಲ. ಹಿಂದೊಮ್ಮೆ ಕೇಳಿಯೇ ಬಿಟ್ಟಿದ್ದೆ "ವಯಸ್ಸಾಯಿತಲ್ಲ ನಿಮಗೆ, ನಿಮ್ಮ ಮೇಧಾಶಕ್ತಿ ಹೇಗಿದೆ? ಹಿಂದೆ ಇದ್ದಂತೆಯೇ ಇದೆಯೇ?" ಎಂದು. ನಾನು ವಯಸ್ಸಿಗೆ ಹೇಗಿರುತ್ತೇನೆ ಎಂದು ತಿಳಿದುಕೊಳ್ಳುವುದೂ ನನ್ನ ಉದ್ದೇಶವಾಗಿತ್ತು. "ಓಹೋ ಇದೆ. I have not lost anything" ಎಂದಿದ್ದರು. ಈಗಲೂ ಅವರಲ್ಲಿ ಕವಿಯ ದರ್ಶನ ಹಾಗೂ ಕಲ್ಪನೆಗಳಿಗೆ ಹಾಗೂ ಕೃತಿ ರಚನೆಗೆ ಯಾವ ಅಡ್ಡಿಯೂ ಬಂದಂತಿಲ್ಲ. ನರೆತ ಕ್ರಾಪು ಮೀಸೆಗಳನ್ನು ಬಿಟ್ಟರೆ ಮತ್ತೆಲ್ಲೂ ನರೆತಂತೆ ಕಾಣುವುದಿಲ್ಲ.



"ಮಲೆನಾಡಿನ ಮದುಮಗಳು ಎಷ್ಟಕ್ಕೆ ಬಂತು? " ಎಂದೆ.



"ಮಲೆಗಳಲ್ಲಿ ಮದುಮಗಳು. ಬರೀತಾ ಇದ್ದೀನಿ. ರಾಮಾಯಣ ದರ್ಶನಂ ಬರೆಯುವಾಗಲೇ ಇದನ್ನು ಬರೆಯಲು ಆರಂಭಿಸಿದ್ದೆ. ನಲವತ್ತು ಪುಟ ಅಚ್ಚಾಗಿಯೂ ಇತ್ತು..... ಪತ್ರಿಕೇಲಿ ಪ್ರಕಟವಾಗ್ತಾನೂ ಇತ್ತು. ಆದ್ರೆ ರಾಮಾಯಣ ದರ್ಶನಂ, ಕಾದಂಬರಿ ಎರಡನ್ನೂ ಒಟ್ಟಿಗೆ ಬರೆಯುವುದು, ಎರಡರಲ್ಲಿ ಬರುವ ಭಿನ್ನ ಭಿನ್ನ ಭಾವನೆಗಳನ್ನು ಒಂದೇ ಕಾಲದಲ್ಲಿ ಮೂಡಿಸುವುದು ಸರಿಯಲ್ಲ ಎಂದು ಕಾದಂಬರಿ ನಿಲ್ಲಿಸಿದೆ. ಈಗ ಮಾಡ್ತಿದ್ದೀನಿ ಇನ್ನೂ ಒಂದು ದಿನದ ಕಥೆಯೂ ಮುಗಿದಿಲ್ಲ. ಆಗಲೇ ಮುನ್ನೂರು ಪುಟ ಆಗಿದೆ. ಪಾತ್ರಗಳನ್ನು ಸೃಷ್ಟಿ ಮಾಡಿ ಬಿಟ್ಟು ಬಿಟ್ಟಿದ್ದೀನಿ. ಅವರು ಮುಂದೆ ತಮ್ಮ ಕಥೆ ಹೇಳ್ಕೊಂಡು ಹೋಗ್ತಾರೆ. ಈಗ ನನ್ನ ಕೈಯಲ್ಲಿಲ್ಲ ಕಾದಂಬರಿ, ಅವರ ಕೈಯಲ್ಲಿದೆ, ತಾಯಿ-ಮಕ್ಕಳನ್ನು ಹೆತ್ತು ಸಲಹಿದ ನಂತರ ಅವರ ಪಾಡಿಗೆ ಅವರನ್ನು ಬಿಟ್ಟು ತಾನು ನೋಡುತ್ತಿರುವಂತೆ ಆಗಿದೆ ನನ್ನ ಕಾದಂಬರಿಯ ಪಾತ್ರಗಳ ಸೃಷ್ಟಿ, ನಾನೀಗ ಅವರ ಕೈಯಲ್ಲಿದ್ದೇನೆ. I think a poet has to be not only a creator but also humble witness of the actions of the characters he creates. ಕಾದಂಬರಿ ಎಲ್ಲಿಗೆ ಮುಟ್ಟುತ್ತೆ ಅಂತ ಹೇಳಲಾರೆ . . . " ಎಂದರು.



ಮಾತುಗಳನ್ನು ಕೇಳುತ್ತ ಸ್ವಲ್ಪ ಹೊತ್ತು ಮೌನವಾಗಿ ಕುಳಿತೆ.



ಕುವೆಂಪು "ನೆನಪಿನ ದೋಣಿಯಲ್ಲಿ ..... Reminiscences ಎಂಬ ಇನ್ನೊಂದು ಗ್ರಂಥ ಬರೆಯಬೇಕಾಗಿದೆ' ಎಂದರು.



ಕುವೆಂಪು ಅವರು ಅನಾವಶ್ಯಕವಾಗಿ ಮಾತಾಡುವವರಲ್ಲ, ಇಷ್ಟು ಮಾತಾಡಿದ್ದೆ ಹೆಚ್ಚು ಎಂದು ಅಂದುಕೊಂಡು ಅವರಿಗೆ ಬೇಜಾರು ಮಾಡಬಾರದೆಂದು ಹೊರಡುವ ಸೂಚನೆ ತೋರಿಸಿದೆ. ಅವರು ಎದ್ದು ಮನೆಯೊಳಕ್ಕೆ ಹೋಗಿ ಬಂದು ಮತ್ತೆ ಕೂತರು.



"ನೀವು ಕಡೆ ಬಂದರೆ ನಿಮಗೆ ಬೇಕಾದ ವಿಷಯ ಸಂಗ್ರಹ ಮಾಡಲು ಅನುಕೂಲವಾಗುತ್ತದೆ" ಎಂದೆ.

" ಎಲ್ಲಿ? ಸಾಧ್ಯವಾಗುವುದಿಲ್ಲ. ದೇವರು ನನಗೆ ಎಷ್ಟು ಆಯುಸ್ಸು ಕೊಟ್ಟಿದಾನೋ ಕಾಣೆ. ಮಲೆಗಳಲ್ಲಿ ಮದುಮಗಳು ಮುಗಿಸಬೇಕು. ಬೆಳಗ್ಗೆ ವಾಕಿಂಗ್, ವಾಕಿಂಗ್ನಿಂದ ಬಂದ ಮೇಲೆ ಸ್ವಲ್ಪ ಹೊತ್ತು ಮಧ್ಯಾಹ್ನದವರೆಗೆ ಬರೆಯೋ ಕೆಲಸ. ಬರೆಯುವ mood ಬರಬೇಕು. ಬಂದಾಗ ಬರೆದುಬಿಡಬೇಕು.   ಎಲ್ಲಿಯೂ ಹೋಗುವಂತಿಲ್ಲ. ಕರ್ನಾಟಕ ಯೂನಿವರ್ಸಿಟಿಯವರು ಹೋದ ವರ್ಷ ನಿಮಗೆ ಡಾಕ್ಟರೇಟ್ ಕೊಡಬೇಕಾಗಿದೆ ಬನ್ನಿ ಎಂದು ಬರೆದಿದ್ದರು. ನಾನು ಈಗ ಸಾಧ್ಯವಿಲ್ಲ. ನೀವು ಕೊಡ್ಲೇಬೇಕು ಅಂತ ಇದ್ರೆ 'In Absentia' ಕೊಡಿ ಎಂದು ತಿಳಿಸಿದೆ. ಅವರು ಇಲ್ಲ ನೀವೇ ಬರಬೇಕು ,      ಇಲ್ಲಿಯೋರೆಲ್ಲ ನಿಮ್ಮನ್ನ ನೋಡ್ಬೇಕು ಅಂತ ಇದಾರೆ ಎಂದು ಬರೆದು ಒತ್ತಾಯ ಮಾಡಿದರು. ನಾನು ಅವರಿಗೆ ಉತ್ತರ ಬರೆದೆ. ನಾಲ್ಕು ಷರತ್ತುಗಳನ್ನು ಹಾಕಿದೆ; ಒಂದನೆಯದು, ಕನ್ನಡ ಅಧಿಕೃತ ಭಾಷೆಯಾಗಬೇಕು; ಎರಡನೆಯದು, ಮೈಸೂರಿನ ಹೆಸರು ಕರ್ನಾಟಕ ಎಂದಾಗಬೇಕು; ಮೂರನೆಯದು, ರಾಜ್ಯಾಂಗದ ಪ್ರಕಾರ ರಾಜ್ಯಪಾಲರ ನೇಮಕ ಆಗಬೇಕು; ನಾಲ್ಕನೆಯದು ಬೋಧನಾ ಭಾಷೆ ಕನ್ನಡ ಆಗಬೇಕು. ಇವು ನಾಲ್ಕು ಆದ ನಂತರ ಬಂದು ಸಂತೋಷದಿಂದ ಡಾಕ್ಟರೇಟ್ ಸ್ವೀಕರಿಸುತ್ತೇನೆ ಎಂದು ಹೇಳಿದೆ. ಕನ್ನಡ ಅಧಿಕೃತ ಭಾಷೆ ಆಗಬೇಕು ಅಂತ ಕಾಗದದ ಮೇಲೇನೊ ಆಗಿದೆ. ರಾಜ್ಯಾಂಗದ ಪ್ರಕಾರ ರಾಜ್ಯಪಾಲರ ನೇಮಕವೂ ಆಗುವಂತಿದೆ. ನಮಗೆ ದಾಸ್ಯದ ಮನೋಭಾವ ಹೋಗಬೇಕಾದರೆ ಬೇರೆ ರಾಜ್ಯಪಾಲರು ಬರಬೇಕು. ಈಗ ಇರುವ ಮಹಾರಾಜರೇ ಬೇರೆ ಕಡೆ ಹೋಗಿ ಮತ್ತೆ ಬೇಕಾದರೆ ಬರಲಿ. ಆಗ ಸರಿಹೋಗುತ್ತೆ. ಆದರೆ ಹಿಂದೆ ಮಹಾರಾಜರಾಗಿದ್ದವರೆ ರಾಜ್ಯಪಾಲರಾಗಿ ಮುಂದುವರಿಯುವುದು ದಾಸ್ಯ ಮನೋವೃತ್ತಿಯ ಬದಲಾವಣೆಗೆ ಸಹಾಯವಾಗುವುದಿಲ್ಲ. ನಾವು ಸೊಂಟ ಬಗ್ಗಿಸಿ ಬೆನ್ನು ಗೂನು ಮಾಡಿಕೊಂಡಿದ್ದೀವಿ. ಗೂನು ಬೆನ್ನೇ ನಮಗೆ ಲಕ್ಷಣವಾಗಿ ಕಾಣುವಷ್ಟರಮಟ್ಟಿಗೆ ನಾವು ಅದಕ್ಕೆ ಹೊಂದಿಕೊಂಡಿದ್ದೇವೆ. ನೆಟ್ಟಗೆ ನಿಂತರೆ ಎಲ್ಲಿ ಬೆನ್ನುಲುಬು ಮುರಿಯುತ್ತೋ ಎಂದು ಹೆದರಿದ್ದೇವೆ. ನಮ್ಮ ಜನರ ಅಜ್ಞಾನ, ದಾಸ್ಯ, ಸಣ್ಣ ತನಕ್ಕೆ ಎರಡು ಕಾರಣ; ಒಂದು ಗುರುಮನೆ; ಮತ್ತೊಂದು ಅರಮನೆ. ಅರಮನೆಯೇನೋ ಹೋಯಿತು ಗುರುಮನೆ ಇನ್ನೂ ಭದ್ರವಾಗಿ ಬೇರೂರಿದೆ. ಅಜ್ಞಾನಿಗಳಿಂದ ಹಣ ಕಿತ್ತು ತಿನ್ನುವ ಮಠಗಳಿಂದ ದೇಶಕ್ಕಾಗುವ ಅನಾಹುತ ಅಷ್ಟಿಷ್ಟಲ್ಲ. .... " ಎಂದರು.

ಇಷ್ಟರಲ್ಲಿ ಕುವೆಂಪು ಅವರ ಕಿರಿಯ ಮಗಳು ಕಾಫಿ ತಂದಿಟ್ಟು ಹೋದಳು. ಅದನ್ನು ಕುಡಿಯುತ್ತಾ, ಕುಡಿಯುತ್ತಾ ಅವರಿಗೆ ಹುಮ್ಮಸ್ಸು ಬಂದಂತಾಯಿತೋ ಏನೋ " ಸ್ವಾಮಿ ವಿವೇಕಾನಂದರ ಧೀರವಾಣಿ ಹಳ್ಳಿ ಹಳ್ಳಿಗಳಿಗೆಲ್ಲ ಹರಡಬೇಕು, ಷಂಡರನ್ನು ಧೀರರನ್ನಾಗಿ ಮಾಡುವ ವಾಣಿ ಅದು. ನನ್ನ ಜೀವನದಲ್ಲೇ ಅದ್ಭುತ ಬದಲಾವಣೆ ಮಾಡಿದರು ಅವರು. ಮೊನ್ನೆ ಅವರ ಶತಮಾನೋತ್ಸವ ನಡೆಯಿತಲ್ಲ, ಅದನ್ನು ಶೃಂಗೇರಿ ಮುಂತಾದ ಮಠಗಳಲ್ಲಿ ಆಚರಿಸಿದರೇನು? ಇಲ್ಲ! ಅವರಿಗೆ ವಾಣಿಯನ್ನು ಕೇಳುವ ಆಸೆಯಿಲ್ಲ. ಕೇಳಿದರೆ ಅವರ ಕಾಣಿಕೆ ಕಾಸಿಗೇ ಚಕ್ಕರ್! " ಎಂದು ಹೇಳಿ ನಕ್ಕರು.



ಹೀಗೆಂದವರು ಎದ್ದು ಒಳಗೆ ಹೋಗಿ `ವಿವೇಕಾನಂದ ಕೃತಿ ಶ್ರೇಣಿ' ಎಂಬ ಹತ್ತು ಕನ್ನಡ ಪುಸ್ತಕಗಳನ್ನು ತಂದು ಮುಂದೆ ಪೇರಿಸಿಟ್ಟರು. ಮೊದಲನೇ ಸಂಪುಟದಲ್ಲಿ ನನ್ನ ಮುನ್ನುಡಿ ಇದೆ. ಎಲ್ಲಾ ಸೇರಿ ೬೦ ರಿಂದ ೭೦ ರೂಪಾಯಿ ಆಗಬಹುದು. ಇದರ ಒಂದೊಂದು ಕಟ್ಟು ತಕ್ಕೊಂಡ್ಹೋಗಿ ಹಳ್ಳೀಲಿ ಇಟ್ಟುಬಿಡಿ. ಯಾರಾದರೂ ಇದಕ್ಕೆ ಢಿಕ್ಕಿ ಹೊಡೆದಾಗ ಡೈನಮೈಟ್ ಸಿಡಿದು ಹೋಗುತ್ತದೆ. ಆಗ ನೋಡಿ, ಇದು ಮಾಡುವ ಕೆಲಸವನ್ನು! ಎಂದು ಕುವೆಂಪು ಮಹಾವಿಧ್ವಂಸಕ ಗೂಢಾಚಾರನಂತೆ ನುಡಿದರು. "ಭೇಷ್ ನನ್ನಪ್ಪ! " ಎಂದೆ ನನಗೆ ನಾನೇ.

ವಿವೇಕಾನಂದರ ಬಗ್ಗೆ ಅಮೇರಿಕಾ ಮಹಿಳೆಯೊಬ್ಬಳು ಬರೆದಿರುವ ಉದ್ಗ್ರಂಥವೊಂದನ್ನು ಪ್ರಸ್ತಾಪಿಸುತ್ತಾ ಅದರಲ್ಲಿ ಬರುವ anecdotes ಗಳ ಬಗ್ಗೆ ಹೇಳಿದರು. ವಿವೇಕಾನಂದರ ಪ್ರಜ್ಞೆ, ಪ್ರತಿಭೆ, ಜ್ಞಾಪಕ ಶಕ್ತಿ- ಇವುಗಳನ್ನು ವರ್ಣಿಸುತ್ತಾ "ಬೇಕಾದರೆ ಇಂಗ್ಲೀಷ್ ವಿಶ್ವಕೋಶವನ್ನು ಒಮ್ಮೆ ತಿರುವು ಹಾಕಿ ಯಾವುದನ್ನು ಕೇಳಿದರೂ ಹೇಳಬಹುದಾದಷ್ಟು ಜ್ಞಾಪಕ ಶಕ್ತಿ ಇತ್ತು. ವೇದೊಪನಿಷತ್ತುಗಳು ಅವರ ಕಂಠಗತವಾಗಿದ್ದವು. ಶಕ್ತಿ ಹೇಗೆ ಬಂತು ಅಂತ ಕೇಳಿದರೆ ಅವರು ಪಾಲಿಸಿದ ಬ್ರಹ್ಮಚರ್ಯದಿಂದ ! ಒಮ್ಮೆ ಯಾರೋ ರಾಮಕೃಷ್ಣ ಪರಮಹಂಸರನ್ನು ಕೇಳಿದರಂತೆ ಶಕ್ತಿ ಹೇಗೆ ಬರುತ್ತೆ ಅಂತ. ಅದಕ್ಕೆ ಅವರು ಹೇಳಿದರು, `ಯಾರು ಕಾಯಾ, ವಾಚಾ, ಮನಸಾ ಹನ್ನೆರಡು ವರ್ಷಗಳು ಬ್ರಹ್ಮಚರ್ಯ ಪಾಲಿಸುತ್ತಾರೋ ಅವರಿಗೆ ಇದು    ಸಿದ್ಧಿಸುವುದು' ಎಂದು. " ಇದು ನನಗೂ ಸಾಧ್ಯ, ನಿಮಗೂ ಸಾಧ್ಯ " ಎಂದರು ಕುವೆಂಪು .



Krupe: http://www.kuvempu.com/nenapu14.html

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......