Thursday, September 13, 2012

ಮಲೆನಾಡಿನೊಂದಿಗೆ ಬೆಸೆದ ನನ್ನ ನಂಟಿನ ಹಿಂದಿನ ಕಥೆ....




ನನ್ನಜ್ಜ ತೀರ್ಥಹಳ್ಳಿಗೆ ಬಂದು ಮುಟ್ಟಿದ್ದು ತೀರಾ ಆಕಸ್ಮಿಕವಾಗಿ ಕಾರ್ಕಳ ತಾಲೂಕಿನ ಅಜೆಕಾರು ಬಳಿಯ ಗುಡ್ಡೆಮನೆಯಲ್ಲಿ ಅವರು ಹುಟ್ಟಿ ಬೆಳೆದದ್ದು. ಅವರಿಗೆ ಒಬ್ಬ ಅಣ್ಣ, ಒಬ್ಬಳು ಅಕ್ಕ ಹಾಗು ಒಬ್ಬ ತಮ್ಮನಿದ್ದರು. ಕಾಸರಗೋಡಿನ ಕಡೆಯ ಹೆಣ್ಣೊಬ್ಬಳನ್ನ ಮದುವೆಯಾಗಿದ್ದ ಅಣ್ಣನ ಯಜಮಾನಿಕೆಯಲ್ಲಿ ಅವರ ಮನೆ ನಡೆಯುತ್ತಿತ್ತು. ಅಜ್ಜ ಎರಡನೆ ಕ್ಲಾಸಿನವರೆಗೆ ಶಾಲೆಗೂ ಹೋಗಿದ್ದರಂತೆ. ಕನ್ನಡವನ್ನ ಸ್ಪಷ್ಟವಾಗಿ ಓದಲಿಕ್ಕೆ ಹಾಗೂ ಇಂಗ್ಲಿಷಿನಲ್ಲಿ ರುಜು ಮಾಡಲಿಕ್ಕೆ ಅವರಿಗೆ ಬರುತ್ತಿತ್ತು.. ಅಪ್ಪ-ಅಮ್ಮ ಸತ್ತ ನಂತರ ಎಳೆಯ ತಮ್ಮಂದಿರನ್ನ ಅಣ್ಣ ಬಹಳ ಮೋಕೆಯಿಂದ ಸಾಕಿದನಷ್ಟೇ ಅಲ್ಲ ತಂಗಿಗೊಂದು ಮದುವೆಯನ್ನೂ ಮಾಡಿದ್ದ. ಮನೆಯನ್ನ, ಇದ್ದ ತೋಟ-ಗದ್ದೆಯನ್ನ ಊರ್ಜಿತ ಮಾಡುವ ಕಾಲದಲ್ಲಿ ಹಾವುಕಚ್ಚಿ ಅಣ್ಣ ಕೊನೆಯುಸಿರೆಳೆದದ್ದೆ ತಡ ಅಜ್ಜ ಮತ್ತವರ ತಮ್ಮನ ಬಾಳು ನರಕವಾಯಿತು.


ಅದನ್ನ ನರಕ ಆಗ ಮಾಡಿದವರು ಸ್ವತಃ ಒಡಹುಟ್ಟಿದ ಅಕ್ಕ ಹಾಗೂ ಮನೆಹಾಳ ಭಾವ. ಕಾರಣ ಸರಳ, ಆಸ್ತಿಯ ಮೇಲಿನ ದುರಾಸೆ. ಅಣ್ಣನ ಹೆಂಡತಿ ಮರಳಿ ಕಾಸರಗೋಡಿನ ತವರು ಮನೆ ಸೇರಿಕೊಂಡಳು, ಅಲ್ಲಿಗೆ ಆಕೆಗೆ ಇಲ್ಲಿನ ಋಣ ಹರಿಯಿತು. ಇಂದಿಗೂ ನಮಗ್ಯಾರಿಗೂ ಅವರ ಸಂಪರ್ಕವಿಲ್ಲ, ಅವರೆಲ್ಲಿದ್ದರೆಂತಲೂ ಗೊತ್ತಿಲ್ಲ. ಹುಡುಕುವ ಪ್ರಯತ್ನವನ್ನ ನಾನಂತೂ ಮಾಡುತ್ತಿದ್ದೇನೆ. ಅಜ್ಜನ ಅಣ್ಣ ಸಾಯುವಾಗ ಅವರಿಗೊಂದು ಕೈಕೂಸಿತ್ತಂತೆ. ದಿನ ನಿತ್ಯದ ಅಕ್ಕ-ಭಾವನ ಕಿರುಕುಳ ಒದೆಗಳನ್ನ ಸಹಿಸಲಾಗದೆ ಕಿರಿಯರಿಬ್ಬರು ಕೈಕೈ ಹಿಡಿದುಕೊಂಡು ಮನೆ ಬಿಟ್ಟರು. ಎಲ್ಲಿಗೆ ಹೋಗಬೇಕಂತ ನಿರ್ಧರಿಸಿ ಅವರು ಹೊರಟದ್ದೇನೂ ಅಲ್ಲ. ಅಲ್ಲಿಂದ ಪಾರಾದರೆ ಸಾಕು ಅಂತ ಹೊರಟದ್ದಷ್ಟೇ.

ಆವಾಗ ಆಗುಂಬೆ ಘಾಟಿಗೆ ಈಗಿನಂತೆ ರಸ್ತೆ ಸಂಪರ್ಕ ಇರಲಿಲ್ಲ. ಕಾಲು ಹಾದಿಯೊಂದಿದ್ದು (ಕಾಲುಹಾದಿ ಈಗಲೂ ಇದೆ ಆದರೆ ನಿರ್ವಹಣೆಯಿಲ್ಲದೆ ಹಾಳುಬಿದ್ದಿದೆ.) ದಕ್ಷಿಣ ಕನ್ನಡ ಜಿಲ್ಲೆಗೆ ತೀರ್ಥಯಾತ್ರೆಗೆ ಬಂದು ಹೋಗುವ ಘಟ್ಟದ ಮೇಲಿನವರು, ವರ್ಷಕ್ಕೊಂದಾವರ್ತಿ ಸಂಭಾವನೆಗೆ ಘಟ್ಟ ಹತ್ತುತ್ತಿದ್ದ ಬಡ ಬ್ರಾಮ್ಹಣರು, ಘಟ್ಟದ ಗೌಡರ ತೋಟಗಳಿಗೆ ದುಡಿಯಲು ಇಲ್ಲಿಂದ ಆಳುಗಳನ್ನು ಕರೆದೊಯ್ಯುತ್ತಿದ್ದ ಸೇರೆಗಾರರು, ದಕ್ಷಿಣ ಕನ್ನಡದಿಂದ ಘಟ್ಟಕ್ಕೆ ಶಾಶ್ವತ ಆನ್ನ ಅರಸಿ ವಲಸೆ ಹೋಗುವವರು ಹಾಗೂ ಬೇಸಿಗೆಯಲ್ಲಿ ತಮ್ಮ ಒಣಮೀನಿಗೆ ಘಟ್ಟದಲ್ಲಿ ಗಿರಾಕಿ ಹುಡುಕುತ್ತಿದ್ದ ಸಾಹಸಿ ಬ್ಯಾರಿಗಳು ಈ ಕಾಲು ಹಾದಿಯನ್ನ ಬಳಸಿ ಕಾರ್ಕಳ ತಾಲೂಕಿನ ಸೋಮೇಶ್ವರದಿಂದ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸೇರಿಕೊಳ್ಳುತ್ತಿದ್ದರು. ಎಲ್ಲಕ್ಕೂ ತಮಾಷೆಯ ಸಂಗತಿಯೆಂದರೆ ಅದು ಅಂತರರಾಜ್ಯ ಗಡಿರೇಖೆಯೂ ಆಗಿತ್ತು. ಮದರಾಸು ಪ್ರಾಂತ್ಯಕ್ಕೆ ಸೇರಿದ್ದು ಬ್ರಿಟಿಷರ ನೇರ ಆಳ್ವಿಕೆಯಲ್ಲಿದ್ದ ದಕ್ಷಿಣ ಕನ್ನಡವನ್ನ ಮೈಸೂರು ರಾಜ್ಯದಿಂದ ಅದು ವಿಭಜಿಸುತ್ತಿತ್ತು. ದಟ್ಟಕಾಡು, ವರ್ಷದ ಹತ್ತು ತಿಂಗಳ ಧಾರಾಕಾರ ಮಳೆಯ ದೆಸೆಯಿಂದ ಜಿಗಣೆಗಳ ಕಾಟ, ಮಲೇರಿಯದಂತಹ ಜ್ವರದ ಕಾರಣಕ್ಕೆ ಮಲೆನಾಡು ಆಗ ಖ್ಯಾತವಾಗಿತ್ತು. ಅಂತಹ ದುರ್ಗಮ ದಾರಿಯಲ್ಲಿ ಡಕಾಯಿತರ ಹಾಗೂ ಕಾಡುಪ್ರಾಣಿಗಳ ಭೀತಿ ಸದಾ ಇರುತ್ತಿದ್ದರಿಂದ ಆ ಮಾರ್ಗವಾಗಿ ಸಾಗುವವರು ಧೈರ್ಯಕ್ಕೆ ಗುಂಪುಗಟ್ಟಿಕೊಂಡೆ ಘಾಟಿಯ ಹಾದಿಯಲ್ಲಿ ಸಾಗುತ್ತಿದ್ದರು. ಜನ ಕಡಿಮೆ ಇದ್ದರೆ ಇನ್ನಷ್ಟು ಮಂದಿ ಕೂಡುವವರೆಗೆ ಸೋಮೇಶ್ವರದಲ್ಲಿಯೇ ಕೂತು ಕಾಯುತ್ತಿದ್ದರಂತೆ.

ಮುಂದೆ ಮಂಗಳೂರಿನ ಸಿಪಿಸಿ ಕಂಪನಿಯವರು ಘಟ್ಟದ ಮೇಲಿನ ಸಾಗರದ ದೇವಂಗಿ ಮೋಟರ್ ಸರ್ವಿಸ್'ನವರೊಂದಿಗೆ ಜೊತೆ ಸೇರಿ "ಕಂಬೈಂಡ್ ಬುಕ್ಕಿಂಗ್ ಏಜೆನ್ಸಿ"ಯನ್ನ ಆರಂಭಿಸಿ ಇಲ್ಲಿ ಸಂಪರ್ಕಕ್ಕೆ ಅನುವು ಮಾಡಿಕೊಟ್ಟರಂತೆ. ಸಿಪಿಸಿಯವರ ದೊಡ್ಡ ಬಸ್ಸು ಸೋಮೇಶ್ವರದಲ್ಲಿ ತಂದಿಳಿಸಿದ ಪ್ರಯಾಣಿಕರು ನಾಲ್ಕಾಣೆ ಕೊಟ್ಟು ಅಲ್ಲಿರುತ್ತಿದ್ದ ಟ್ಯಾಕ್ಸಿಗಳಲ್ಲಿ ಕೂತು ಆಗುಂಬೆ ಸೇರಿದರೆ ಅಲ್ಲಿ ಕಾದಿರುತ್ತಿದ್ದ ಡಿಎಂಎಸ್ ತಾವಿಳಿಸಿದ ಪ್ರಯಾಣಿಕರ ಜಾಗದಲ್ಲಿ ಇವರನ್ನ ಹೊತ್ತು ತೀರ್ಥಹಳ್ಳಿ-ಶಿವಮೊಗ್ಗದ ದಿಕ್ಕಿಗೆ ಓಡುತ್ತಿದ್ದವು. ಎರಡನೆ ಮಹಾಯುದ್ದದ ಸಮಯ ಅದಾಗಿದ್ದರಿಂದ ಪೆಟ್ರೋಲ್-ಡೀಸಲ್ ಎಲ್ಲಾ ಸೈನ್ಯದ ಬಳಕೆಗೆ ಸೀಮಿತವಾಗಿ ತತ್ವಾರವಾಗಿತ್ತು. ಹೀಗಾಗಿ ಅಂದು ಓಡುತ್ತಿದ್ದುದು ಕಲ್ಲಿದ್ದಲ ಬಸ್ಸುಗಳು!

ಕಲ್ಲಿದ್ದಲ ಬಸ್ಸುಗಳೆಂದರೆ ಹನುಮಂತನ ಮೂತಿಯಂತೆ ಊದಿಕೊಂಡ ಮುಂಭಾಗದಲ್ಲಿ ಇಂಜಿನ್ ಇದ್ದು ಹಿಂದಿನ ಸೀಟಿನಡಿಯಲ್ಲಿ ಎರಡೋ ಮೂರೋ ಸಿಲೆಂಡರಿನ ಬಾಯ್ಲರ್'ಗಳಿರುತ್ತಿದ್ದ ವಿಶಿಷ್ಟ ತಂತ್ರಜ್ಞಾನದ ವಾಹನಗಳು. ಸಿಲೆಂಡರಿನ ಪಕ್ಕದಲ್ಲಿ ಮುಚ್ಚಿದ ಒಂದು ಓಲೆ ಇರುತ್ತಿದ್ದು ಅದಕ್ಕೆ ಕಲ್ಲಿದ್ದಲು ತುಂಬಿಸಿ ಮುಚ್ಚಿ ಚನ್ನಾಗಿ ಉರಿಯಲು ಹೊರಗಡೆಯಿರುತ್ತಿದ್ದ ಹ್ಯಾಂಡಲನ್ನು ಎಡೆಬಿಡದೆ ತಿರುಗಿಸ ಬೇಕಾಗುತ್ತಿತ್ತು, ನಿಗಿನಿಗಿ ಕಲ್ಲಿದ್ದಲ ಶಾಖಕ್ಕೆ ಸಿಲೆಂಡರಿನಲ್ಲಿದ್ದ ನೀರು ಕುದ್ದು ಆದರಿಂದೇಳುವ ಹಬೆಯ ಒತ್ತಡದ ಶಕ್ತಿಯಲ್ಲಿ ಬಸ್ಸಿನ ಇಂಜಿನ್ ಚಾಲನೆಗೊಂಡು ವಾಹನ ಮುಂದೋಡುತ್ತಿತ್ತು . ಓಡುತ್ತಿತ್ತು ಅನ್ನೋದಕ್ಕಿಂತ ತೆವಳುತ್ತಿತ್ತು ಅನ್ನೋದೇ ವಾಸಿ. ಏಕೆಂದರೆ ಕೇವಲ ಮೂವತ್ತು ಕಿಲೋಮೀಟರ್ ದೂರದ ತೀರ್ಥಹಳ್ಳಿ ಮುಟ್ಟಲು ಆಗುಂಬೆಯಿಂದ ಹೊರಟ ಅಂತಹ ಒಂದು ಬಸ್ಸಿಗೆ ಕೇವಲ ಎರಡು ಗಂಟೆ ಬೇಕಾಗುತ್ತಿತ್ತು. ತೀರ್ಥಹಳ್ಳಿಯಿಂದ ಅದರ ಎರಡು ಪಟ್ಟು ದೂರದ ಶಿವಮೊಗ್ಗ ಸೇರಲು ನಾಲ್ಕು ತಾಸು ಕಡಿಮೆಯೆಂದರೂ ಬೇಕೇ ಇತ್ತು. ಇದಷ್ಟೇ ಅಲ್ಲದೆ ಏರಿನಲ್ಲಿ ಬಸ್ಸು ಒತ್ತಡ ಸಾಲದೆ ಮುಂದೋಡಲು ಮುಷ್ಕರ ಹೂಡುತ್ತಲೂ ಇತ್ತು. ಆಗ ಬಸ್ಸಿನ ಕ್ಲೀನರ್ ಕೆಳಗಿಳಿದು ಬೆವರು ಕಿತ್ತು ಬರುವ ತನಕ ಒಲೆಯ ಹ್ಯಾಂಡಲ್ ತಿರುವುತ್ತಿದ್ದ. ಅಷ್ಟೂ ಸಾಕಾಗಾದಿದ್ದರೆ ಪ್ರಯಾಣಿಕರೆಲ್ಲ ಎದ್ದು ಒಂದು ಸುತ್ತು ಬಸ್ಸನ್ನ ತಳ್ಳಿ ಮುಂದೆ ತರಬೇಕಾಗುತ್ತಿತ್ತು!

ಹೀಗೆ ಗುರಿ ಮುಟ್ಟುವ ಭರದಲ್ಲಿ ಸೀಟು ಸರಿಯಾಗಿ ಸಿಕ್ಕದೆ ಹಿಂದಿನ ಸಾಲಿನಲ್ಲಿ ಸಿಲೆಂಡರ್ ಮೇಲಿನ ಸ್ಥಳದಲ್ಲಿ ಕೂತುಕೊಳ್ಳುವ ಅನಿವಾರ್ಯತೆಗೆ ಸಿಕ್ಕ ಪ್ರಯಾಣಿಕರದ್ದಂತೂ ನಾಯಿ ಪಾಡಾಗುತ್ತಿತ್ತು. ಕುದಿ ನೀರ ಸಿಲೆಂಡರಿನ ಉರಿಯಲ್ಲಿ ಸ್ವಲ್ಪ ಪಾಲು ಅವರಿಗೂ ಉಚಿತವಾಗಿ ಸಿಗುತ್ತಿತ್ತಲ್ಲ! ಮನಸಿಲ್ಲದಿದ್ದರೂ ಬಸ್ಸಿನೊಂದಿಗೆ ಖಡ್ಡಾಯವಾಗಿ ಅದನ್ನ ಹಂಚಿಕೊಳ್ಳಲೆಬೇಕಿತ್ತು! ಸಾಲದ್ದಕ್ಕೆ ಮೇಲೇಳುತ್ತಿದ್ದ ಕಲ್ಲಿದ್ದಲ ಹೊಗೆಯ ಕರಿ ಹಾಗೂ ಹಿಟ್ಟಿನಂತಾಗಿರುತ್ತಿದ್ದ ಮಣ್ಣು ಹಾದಿಯ ಧೂಳುಗಳೆಲ್ಲ ಸರಿ ಸಮವಾಗಿ ಬೆರೆತು ಅವರನ್ನ ಆವರಿಸಿ ಬಸ್ಸಿಳಿಯುವಾಗ ಅವರು ಥೇಟ್ ಆದಿಮಾನವನ ಅಪರಾವತಾರವಾಗಿ ಕಂಗೊಳಿಸುತ್ತಿದ್ದರು. ಆಗಿನ್ನೂ ಡಾಮರ್ ಅಥವಾ ಟಾರ್ ಎನ್ನುವ ಅದ್ಭುತ ವಸ್ತು ಮಲೆನಾಡಿನ ರಸ್ತೆಗಳನ್ನ ಮುತ್ತಿಟ್ಟಿರಲಿಲ್ಲ . ಮುಂದೆ ಕೂತವರಿಗೇನೂ ಹೆಚ್ಚು ವಿನಾಯತಿ ಇರುತ್ತಿರಲಿಲ್ಲ. ಅವರಿಗೆ ರಸ್ತೆ ಧೂಳಿಗೆ ಸಿಕ್ಕು ಕಂಚ್ಗಿನ ಪ್ರತಿಮೆಗಳಾಗುವ ವಿಶೇಷ ಯೋಗವಿರುತ್ತಿತ್ತು!. ಒಟ್ಟಿನಲ್ಲಿ ಯಾವ ಬಣ್ಣದ್ದೆಂದೆ ಗುರುತಿಸಲಾಗದ ಸ್ಥಿತಿಯಲ್ಲಿರುತ್ತಿದ್ದ ಅವರು ಹಾಕಿರ ಬಹುದಾದ ಬಿಳಿ ಅಂಗಿ ಹಾಗು ಮುಂಡನ್ನು ಹಿಂದೊಮ್ಮೆ ಅದು ಬಿಳಿಯದೇ ಆಗಿತ್ತು ಅಂತ ಯಾರಾದರೂ ಆಣೆ ಪ್ರಮಾಣ ಮಾಡಿ ಹೇಳಬೇಕಾಗುತ್ತಿತ್ತು?!



ಅಂತಹ ದುರ್ಗಮ ಹಾದಿಯನ್ನ ಹಿಡಿದು ಕೈಯಲ್ಲಿ ಮೂರು ಕಾಸಿಲ್ಲದ ಕರ್ಮಕ್ಕೆ ಎಂಟು ವರ್ಷದ ನಾರಾಯಣ ಹಾಗೂ ಐದು ವರ್ಷದ ನಾಗಪ್ಪ ಅನ್ನದ ತಲಾಶಿನಲ್ಲಿ ಮತ್ತು ಭವಿಷ್ಯದ ನೆಮ್ಮದಿಯ ಹುಡುಕಾಟದಲ್ಲಿ ಯಾತ್ರಾರ್ಥಿಗಳ ತಂಡವೊಂದರ ಜೊತೆ ಜೊತೆಗೆ ಹೆಜ್ಜೆ ಹಾಕುತ್ತಾ ನಡೆದೇ ತೀರ್ಥಹಳ್ಳಿ ಸೀಮೆ ಮುಟ್ಟಿದರು. ಮೇಳಿಗೆಯ ಸಾಹುಕಾರರಾದ ಐತಾಳರ ಅಡುಗೆ ಮನೆಯಲ್ಲಿ ಹುಡುಗರಿಗೆ ಅಡುಗೆ ಸಹಾಯಕರ ಕೆಲಸ ಸಿಕ್ಕಿತು. ಬಾಳಿನಲ್ಲಿ ಅವರ ಮುಂದಿನ ಅನ್ನದ ದಾರಿ ಅಲ್ಲೆ ಎಲ್ಲೋ ಇತ್ತು...

ಜಾತ್ರೆಯ ನೆನಪು....



ತೀರ್ಥಹಳ್ಳಿ ಪೇಟೆ ಮೂರು ಮುಕ್ಕಾಲು "ರಾಜ"ಬೀದಿ ಗಳಲ್ಲೇ ಮುಗಿದು ಹೋಗುವಂತದ್ದು. ಅಂದು ಅದರ ಒಟ್ಟು ಜನಸಂಖ್ಯೆ ಮೂರು ಸಾವಿರ ಮೀರಿರಲಿಕ್ಕಿಲ್ಲ. ಇಂದು ಹೆಚ್ಚೆಂದರೆ ಅದರ ಎರಡು ಪಟ್ಟು ಹೆಚ್ಚಾಗಿದ್ದರೆ ಅದೆ ಒಂದು ಸಾಧನೆ. ಊರಿನ ವಾಣಿಜ್ಯ ಚಟುವಟಿಕೆಗಳೆಲ್ಲ ಆಜಾದ್ ರಸ್ತೆ, ರಥಬೀದಿ, ಮಸೀದಿರಸ್ತೆಗೆ ಸೀಮಿತವಾಗಿದ್ದವು. ಊರೊಳಗೆ ಗದ್ದೆ ತೋಟಗಳಿದ್ದು ಅದರ ವ್ಯಾಪ್ತಿಯಾಚೆಗೆ ಸೊಪ್ಪುಗುಡ್ಡೆ-ಬೆಟ್ಟಮಕ್ಕಿಯಂತಹ ಬಡಾವಣೆಗಳು ವ್ಯಾಪಿಸಿರುತ್ತಿದ್ದರಿಂದ ಇದನ್ನ ಹಳ್ಳಿ ಎನ್ನಬೇಕೊ ಇಲ್ಲಾ ಪಟ್ಟಣ ಎನ್ನಬೇಕೊ ಅನ್ನುವ ಗೊಂದಲ ನಿರಂತರ ಕಾಡುತ್ತಿತ್ತು. ಆಗುಂಬೆ ಮಾರ್ಗವಾಗಿ ಕರಾವಳಿಯ ಮಂಗಳೂರು, ಉಡುಪಿಗಳನ್ನ ಮಲೆನಾಡಿನ ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಊರಿನ ಮಧ್ಯ ಸಾಗಿ ಹೋಗುತ್ತಿದ್ದರಿಂದ ಊರಿಗೆ ಒಂದು ಗಡಿಬಿಡಿಯ ಕಳೆ ಬಂದಿತ್ತು.

ಇಲ್ಲದಿದ್ದರೆ ಇಡೀ ಊರಿನ ಜನ ಬಾಳಲ್ಲಿ ಅಷ್ಟೇನೂ ಅವಸರ ಇಲ್ಲದವರಂತೆ "ಸ್ಲೋಮೊಶನ್" ಸಿನೆಮಾದ ಪಾತ್ರಧಾರಿಗಳಂತೆಯೇ ವರ್ತಿಸುತ್ತಾ ಕಾಲ ಹಾಕುತ್ತಿದ್ದರು. ಊರಲ್ಲಿ ನಡೆದ ಯಾವುದಾದರೂ ಹಗರಣದ ಗಾಸಿಪ್ ಮಾತಾಡಿಕೊಳ್ಳುತ್ತಾ ಬಸ್'ಸ್ಟ್ಯಾಂಡ್'ನಲ್ಲೋ, ಇಲ್ಲಾ ಮಲ್ಯರ ಜವಳಿಅಂಗಡಿಯ ಬೆಂಚಿನ ಮೇಲೋ, ಇಲ್ಲಾ ಮೀನಾಕ್ಷಿಭವನ-ಲಕ್ಷ್ಮಿಪ್ರಸಾದ ಅಥವಾ ಕಾರಂತರ ಹೋಟೆಲ್ ಕಟ್ಟೆಯ ಮೇಲೋ ಕೂತು ಕಂಡವರ ಪುರಾಣದ ಪೋಸ್ಟ್'ಮಾರ್ಟಂ ಮಾಡುತ್ತಾ ಮೋಟು ಬೀದಿ ಸೇದುತ್ತಾ ಕುಳಿತ "ಊರಿನ ಹತ್ತು ಸಮಸ್ತ"ರನ್ನು ಸದಾಕಾಲವೂ ಕಾಣಬಹುದಾಗಿತ್ತು! ಯಾರದಾದರೂ ಸಂಸಾರದಲ್ಲಿ ಅತಿಚಿಕ್ಕ ಹಗರಣವೊಂದು ಬೆಳಕಿಗೆ ಬಂದರೂ ಸಾಕು. ಸ್ವಯಂ ಸ್ಪೂರ್ತಿಯಿಂದ ಚಿಟಿಕೆ ನಶ್ಯ-ಮೂರೇ ಮೂರು ಬೀಡಿ-ಅರ್ಧ ಲೋಟ ಕಾಪಿಗೆ (ಇದು ಕಾಫಿಯಲ್ಲ ಕಾಪಿ) ಇವರು ಸ್ಥಳದಲ್ಲೇ ವಿಚಾರಣೆ ನಡೆಸಿ ರಾಜಿ ಪಂಚಾಯ್ತಿ ಮಾಡಲು ಯಾವಾಗಲೂ ತುದಿ ಕಾಲಿನ ಮೇಲೆ ನಿಂತಿರುತ್ತಿದ್ದರು. ಟಿವಿ ಹಾವಳಿಯಿಲ್ಲದ ಆ ದಿನಗಳಲ್ಲಿ ಟಾಕೀಸಿನ ಸಿನೆಮಾ, ವರ್ಷಕ್ಕೊಂದಾವರ್ತಿ ಜಾತ್ರೆಗೆ ಬರುವ ನಾಟಕ ಹಾಗೂ ಆಗಾಗ ದಾಂಗುಡಿಯಿಡುವ ಯಕ್ಷಗಾನಗಳಷ್ಟೆ ಸೀಮಿತ ಮನರಂಜನೆಯ ಮಾರ್ಗಗಳಾಗಿರುತ್ತಿದ್ದರಿಂದ ಇಂತಹ "ಮನರಂಜಕ" ಪರ್ಯಾಯಗಳನ್ನು ಹುಡುಕಿಕೊಳ್ಳುವುದು ಅಂತವರಿಗೆ ಅನಿವಾರ್ಯವೂ ಆಗಿತ್ತನ್ನಿ. ಇಂತಹ ಪೂಟು ಲಾಯರಿಗಳ ಗುಂಪಿರುವ ಹಲವಾರು "ಸೋಮಾರಿ ಕಟ್ಟೆ"ಗಳು ಆಗ ಚಾಲ್ತಿಯಲ್ಲಿದ್ದು ಸಂದರ್ಭಾನುಸಾರ ಅವರಲ್ಲೇ ಒಬ್ಬರು ನ್ಯಾಯಾಧೀಶನ ಪಾತ್ರ ವಹಿಸಿಕೊಂಡು ಪ್ರಕರಣ ಇತ್ಯರ್ಥಗೊಳಿಸಿ ಕೈ ಕರ್ಚಿಗೆ ನಾಲ್ಕು ಕಾಸು ಮಾಡಿಕೊಳ್ಳುತ್ತಿದ್ದರು! ಮುಂದಿನ ಹಗರಣವೊಂದು ಕೈಗೆ ಸಿಗುವ ತನಕ ನಿತ್ಯ ಸಭೆ ಸೇರಿದಾಗಲೆಲ್ಲ ಈ ಪ್ರಕರಣದ ಕೂಲಂಕುಷ ಪೋಸ್ಟ್'ಮಾರ್ಟಂ ಮಾಡಿ ಬಾಯಿ ಚಪಲವನ್ನ ಆದಷ್ಟು ತೀರಿಸಿಕೊಳ್ಳುತ್ತಾ ರೋಮಾಂಚಿತರಾಗುತ್ತಿದ್ದರು!


ಸದ್ಯ ಅದೇ ರಾಜ್ಯ ಹೆದ್ದಾರಿಯ ಅರ್ಧಭಾಗ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಗೊಂಡಿದೆ. ಸುತ್ತು ಬಳಸಿ ಶೃಂಗೇರಿ ಮಾರ್ಗವಾಗಿ ಸಾಗುವ ಈ ರಾಷ್ಟ್ರೀಯ ಹೆದ್ದಾರಿ ಹೈದರಾಬಾದಿನಿಂದ ಮಂಗಳೂರನ್ನ ಸಂಪರ್ಕಿಸುತ್ತದೆ. ಊರಿನ ಬಹುಸಂಖ್ಯಾತರು ದಕ್ಷಿಣಕನ್ನಡ ಮೂಲದ ಕೊರಗರು, ಹೊಲೆಯರು, ಬಂಟರು, ಜೈನರು, ಹವ್ಯಕ ಬ್ರಾಮ್ಹಣರು, ಕೊಂಕಣಿ ಸಾರಸ್ವತರು, ಪೂಜಾರಿಗಳು, ಬ್ಯಾರಿಗಳು ಹಾಗೂ ಕ್ಯಾಥೊಲಿಕ್ ಪರ್ಬುಗಳು. ರಾಜಕೀಯವಾಗಿ ಸಾಕಷ್ಟು ಪ್ರಭಾವಶಾಲಿಗಳಾಗಿದ್ದರೂ ಇವರ ಪ್ರತಿನಿಧಿಯೊಬ್ಬ ಇಲ್ಲಿಯ ತನಕ ಸ್ಥಳೀಯ ಶಾಸಕನಾಗೋದು ಸಾಧ್ಯವಾಗಿಲ್ಲ. ಆ ಪಟ್ಟ ಇಲ್ಲಿನ ಮೂಲ ನಿವಾಸಿಗಳಾದ ಗೌಡರಿಗೆ ಮೀಸಲು. ಏಕೆಂದರೆ ಅಲಿಖಿತ ಒಪ್ಪಂದಕ್ಕೆ ಬಂದವರಂತೆ ಎಲ್ಲಾ ರಾಜಕೀಯ ಪಕ್ಷಗಳೂ ಒಕ್ಕಲಿಗ ಅಭ್ಯರ್ಥಿಯನ್ನೇ ಚುನಾವಣಾ ಕಣಕ್ಕಿಳಿಸುತ್ತವೆ. ಈ ಒಕ್ಕಲಿಗರ ಕೋಟೆಯಲ್ಲಿ ಕೋಣಂದೂರು ಲಿಂಗಪ್ಪ ಒಂದು ಅವಧಿಗೆ ಶಾಸಕರಾದದ್ದೊಂದು ಪವಾಡ. ಏಕೆಂದರೆ ಅವರು ಈಡಿಗ. ಇದು ಊರಿನ ಜಾತಿವಾರು ವಿವರಣೆಯಾದರೂ ಇಲ್ಲಿ ಜಾತಿ-ಕೋಮು ಸಾಮರಸ್ಯಕ್ಕೆ ನನಗೆ ನೆನಪಿರುವಂತೆ ಎಂದೂ ಬೆಂಕಿ ಬಿದ್ದಿಲ್ಲ. ದೇಶವೆಲ್ಲ ಕೋಮುದ್ವೇಷದ ದಳ್ಳುರಿಗೆ ಹೊತ್ತು ಉರಿದರೂ ತೀರ್ಥಹಳ್ಳಿಯ ಮಂದಿ ಮಾತ್ರ ತಮ್ಮ ನಿತ್ಯ ಕರ್ಮಗಳಲ್ಲೇ ವ್ಯಸ್ಥರಾಗಿರುತ್ತಾರೆ.ಅಷ್ಟೊಂದು ಮುಗ್ಧರು ಹಾಗು ಆಲಸಿಗಳು ಇಲ್ಲಿನವರು.

ಇಲ್ಲಿಗೆ ಒಂದು ಸ್ಥಳ ಪುರಾಣ ಬೇರೆ ಇದೆ. ಇದು ಪರಶುರಾಮ ಕ್ಷೇತ್ರ ಅಂತೆ. ತನ್ನ ಪರಶುವಿಗೆ ಅಂಟಿದ್ದ ಕೊನೆ ಹನಿ ನೆತ್ತರು ಇಲ್ಲಿನ ತುಂಗಾನದಿಯ ನೀರಲ್ಲಿ ತೊಳೆದು ಹೋದದ್ದರಿಂದ ಮಾತೃಹತ್ಯಾ ದೋಷದಿಂದ ವಿಮೋಚಿತನಾದ ಪರಶುರಾಮ ಇಲ್ಲಿ ಲಿಂಗ ಸ್ಥಾಪಿಸಿ ಆರಾಧಿಸಿಧನಂತೆ. ಆ ಜಾಗದಲ್ಲಿಯೆ ಕೆಳದಿಯ ದೊರೆಗಳು ಕಟ್ಟಿಸಿದ "ರಾಮೇಶ್ವರ' ದೇವಸ್ಥಾನ ಇರೋದು. ಪ್ರತಿ ವರ್ಷಕ್ಕೊಮ್ಮೆ ಬಲು ವೈಭವದಿಂದ ರಾಮೇಶ್ವರನಿಗೆ ಎಳ್ಳಮವಾಸ್ಯೆ ತೇರನೆಳೆದು ಮೂರುದಿನದ ಜಾತ್ರೆ ಮಾಡಲಾಗುತ್ತದೆ. ಮೊದಲ ದಿನ ಸ್ನಾನ, ಮರುದಿನ ರಥ, ಕೊನೆದಿನ ತೆಪೋತ್ಸವ ಹೀಗೆ ಇಡಿ ತೀರ್ಥಹಳ್ಳಿ ಈ ಮೂರುದಿನಗಳಲ್ಲಿ ಥಳಥಳ ಹೊಳೆಯುತ್ತಿರುತ್ತದೆ. ಅಂತಹ ಜಾತ್ರೆಯಲ್ಲಿಯೇ ಖಾದರ್ ಸಾಬರ ಮೂರು ಮಾರ್ಕಿನ ಬೀಡಿಗಳ ವ್ಯಾನ್ ಮೇಲಿನ ದಿಲೀಪನ ಕ್ಯಾಬರೆಗೆ ವಿಶೇಷ ಕಳೆ ಕಟ್ಟುತ್ತಿತ್ತು. ಅಂದು ಬೆಳ್ಳಿ ಬಣ್ಣದ ಮಿರಿಮಿರಿ ಮಿಂಚುವ ದಿರಿಸು ಧರಿಸಿದ ದಿಲೀಪ ಹಾಗು ಕಡುಗಪ್ಪು ಹೊಳೆವ ಬಟ್ಟೆ ಹಾಕಿದ ಅವನ ರಂಗದ ಮೇಲಿನ ನಾಯಕ ಮೈಬಳುಕಿಸಿ ಕುಣಿದು ಜಾತ್ರೆಗೆ ನೆರೆದ "ಕಲಾರಸಿಕರ" ತೃಷೆ ತಣಿಸಲು "ಮೈಯಾರೆ" ಶ್ರಮಿಸುತ್ತಿದ್ದರು. ಅದರಿಂದ ವ್ಯಾಪಾರ ಖಾದರ್ ಸಾಬರ ವ್ಯಾಪಾರ ಅದೆಷ್ಟು ವೃದ್ಧಿಸಿತು ಎನ್ನುವ ಬಗ್ಗೆ ಯಾವುದೆ ಅಂಕಿ ಅಂಶಗಳು ಲಭ್ಯವಿಲ್ಲ!

ಇವೆಲ್ಲ ವಯಸ್ಕರ, ಮೀಸೆ ಚಿಗುರಿದವರ ಮಾತಾಯಿತು. ನನ್ನಂತಾ ಎಳೆಯರಿಗೆ ಜಾತ್ರೆಯೆಂದರೆ ಬೆಂಡು-ಬತಾಸು, ಬೊಂಬಾಯಿ ಮಿಠಾಯಿ ಹಾಗೂ ಮರದ ಕುದುರೆ ಚಕ್ರದಲ್ಲಿ ಕೂತು ವೇಗವಾಗಿ ಸಾಗೋದು ಹಾಗೂ ಬಾವಿಯಲ್ಲಿ ಬೈಕೋಡಿಸುವುದನ್ನ ಬಿಡುಗಣ್ಣಿನಲ್ಲಿ ಬೆರಗಾಗಿ ನೋಡೋದು. ಇವಕ್ಕೆಲ್ಲ ಬೇಕಾಗುವ ಚಿಲ್ಲರೆ ಕಾಸಿಗಾಗಿ ಮನೆಯ ಹಿರಿಯರನ್ನ ಕಾಡಿ ಬೇಡ ಬೇಕಾಗುತ್ತಿತ್ತು. ಅದೃಷ್ಟ ನೆಟ್ಟಗಿದ್ದರೆ ದೊಡ್ಡ ಪುಗ್ಗೆಯ ಬಲೂನು, ಪ್ಲಾಸ್ಟಿಕ್ ವಾಚು ಹಾಗೂ ಊದುಪ ಪೀಪಿಯೂ ಹಿರಿಯರ ಬಳುವಳಿಯಾಗಿ ದೊರಕುವ ಸಾಧ್ಯತೆಯಿತ್ತು. ವರ್ಷದ ಏಕೈಕ ಗಮ್ಮತ್ತಿನ ಹೊತ್ತು ಅದಾಗಿರುತ್ತಿದ್ದರಿಂದ ತಾಲೂಕಿನ ಶಾಲಾ-ಕಾಲೇಜುಗಳಿಗೂ ಅಂದು ರಜೆ ಘೋಷಿಸಿರಲಾಗುತ್ತಿತ್ತು . ಮನೆಗೆ ಪರವೂರಿನ ನೆಂಟರು ಬರಲು ಜಾತ್ರೆಯೊಂದು ನೆಪವಾಗುತ್ತಿತ್ತು. ಬಾಲ್ಯದುದ್ದ ಜೀವನದಾಲ್ಲಿ ಅತ್ಯಂತ ಸಂತಸಮಯವಾಗಿರುತ್ತಿದ್ದ ದಿನಗೆಂದರೆ ಅವೆ. ಕಣ್ಣಿ ಹರಿದ ಕರುವಿನಂತೆ ಊರಿನುದ್ದ ಜಿಗಿದಾಡಿ ನಲಿಯಲು ಆ ದಿನಗಳಲ್ಲಿ ಸ್ವಲ್ಪ ಮಟ್ಟಿನ ಸ್ವಾತಂತ್ರವಿರುತ್ತಿತ್ತು. ರಥಬೀದಿಯ ಇಕ್ಕೆಲಗಳಲ್ಲೂ ಯಾವ್ಯಾವುದೋ ಊರಿನಿಂದ ಬರುತ್ತಿದ್ದ ವ್ಯಾಪಾರಿಗಳು ಕಣ್ಸೆಳೆಯುವ ಅನೇಕ ಸಾಮಾನುಗಳ ಅಂಗಡಿಯ ಟೆಂಟ್ ಹಾಕುತ್ತಿದ್ದರು. ಹೆಂಗಸರ ಸರ ಬಿಂದಿ, ಗಂಡಸರ ಟೊಪ್ಪಿ ಬೆಲ್ಟು, ನಮ್ಮಂತಹ ಮಕ್ಕಳ ಬಾಯಲ್ಲಿ ನೀರೂರಿಸುವ ಸಕ್ಕರೆ ಮಿಠಾಯಿ ಐಸ್'ಕ್ಯಾಂಡಿ ಯಾವುದು ಕೇಳುತ್ತೀರಿ? ಸಾಕ್ಷಾತ್ ಇಂದ್ರನ ಅಮರಾವತಿಗೆ ಹೋದ ಹಾಗಾಗಿ ಮನಸು ನಿಯಂತ್ರಣ ಕಳೆದುಕೊಂಡ ಕುದುರೆಯಾಗುತ್ತಿತ್ತು. ಕಣ್ಣು ಹಾಯಿಸಿದಷ್ಟು ದೂರವೂ ಜನಾ ಜನಾ ಜನಾ. ಜಾತ್ರೆಯ ಕಥೆ ಇನ್ನೂ ಇದೆ.

ಹೀಗಿತ್ತು ನಮ್ಮೂರು....






ನಮ್ಮೂರಿನ ಜನ ಬಡ ಭಾರತದ ಇನ್ಯಾವುದೇ ಹಳ್ಳಿಗಾಡಿನ ಪ್ರಜೆಗಳಂತೆ ಸಾಕಷ್ಟು ಎಬಡರಾಗಿದ್ದರು. ವಿಪರೀತವೆನ್ನುವಷ್ಟು ದೈವಭಕ್ತರು. ಸಾಲ ಮಾಡಿಯಾದರೂ ವರ್ಷಕ್ಕೊಂದಾವರ್ತಿ ಧರ್ಮಸ್ಥಳ, ಉಡುಪಿ, ಕಟೀಲು, ಮಂದಾರ್ತಿ, ಸುಬ್ರಮಣ್ಯಕ್ಕೆ ಯಾತ್ರೆ ಹೋಗಿ ಇಡೀ ವರ್ಷ ಹುಟ್ಟಿದ್ದಕ್ಕೆ-ಸತ್ತದ್ದಕ್ಕೆ-ಜಾನುವಾರು ಕಳೆದು ಹೋಗಿದ್ದಕ್ಕೆ-ಸೀಕಾದದ್ದಕ್ಕೆ ಹೀಗೆ ಹೊತ್ತ ಅಸಂಖ್ಯ ಹರಕೆಗಳನ್ನೆಲ್ಲ ತೀರಿಸಿ ತಲೆ ಬೋಳಿಸಿಕೊಂಡೆ ಬರುವವರು. ಮಾತುಮಾತಿಗೆ "ಕೆಳಗಿನ ದೇವರ ಆಣೆ" ( ಧರ್ಮಸ್ಥಳದ ಮಂಜುನಾಥನ ಭಕ್ತರಾಗಿದ್ದ ಎಲ್ಲರಿಗೂ ಅವನ ಹೆಸರನ್ನ ಹೇಳೋಕೂ ಅಂಜಿಕೆ!) ಹಾಕಿ ಭಯ ಹುಟ್ಟಿಸುವುದರಲ್ಲಿ ನಿಸ್ಸೀಮರು. ಅವರ ಭಕ್ತಿಯ ಬೆಳೆಯಲ್ಲಿ ದೇವರಿಗೆ ಕೊಟ್ಟಷ್ಟೇ ಮಹತ್ವ ಭೂತಕ್ಕೂ ಇತ್ತು,ಈಗಲೂ ಇದೆ. ಘಟ್ಟದ ಮೇಲಿನ ಊರಾಗಿದ್ಧರೂ ತೀರ್ಥಹಳ್ಳಿಯ ಬಹುಸಂಖ್ಯಾತರು ದಕ್ಷಿಣ ಕನ್ನಡ ಮೂಲದವರೆ ಆಗಿರೋದರಿಂದಲೂ ಏನೋ ಭೂತಾರಾಧನೆ ಅಲ್ಲಿ ಸಹಜವಾಗಿ ಬೇರುಬಿಟ್ಟಿತ್ತು. ತೀರ್ಥಹಳ್ಳಿ ಈಗೇನೋ ಬೆಳೆದು ದೊಡ್ಡ ಊರಾಗಿರಬಹುದು ಆದರೆ ಕೇವಲ ಇಪ್ಪತ್ತೇ-ಇಪ್ಪತ್ತು ವರ್ಷಗಳ ಹಿಂದೆ ಹೆಸರಿಗೆ ತಕ್ಕಂತೆ ದೊಡ್ಡದೊಂದು ಹಳ್ಳಿಯಾಗಿಯೆ ಇತ್ತು.


ಹೀಗಾಗಿ ಅಲ್ಲಿನ ಪ್ರತಿ ಬಡಾವಣೆಗಳಲ್ಲೂ ಭೂತರಾಯಸ್ವಾಮಿಯದ್ದೋ ಇಲ್ಲ ಚೌಡಿಯದ್ದೋ ಬನ ಇದ್ದೆ ಇರುತ್ತಿತ್ತು. ಆಗೆಲ್ಲ ಸಣ್ಣ ಮಕ್ಕಳು ಸಂಜೆ ಕವಿದ ಮೇಲೆ ಹೋಗಲು ಹೆದರುತ್ತಿದ್ದ ಇಂತಹ ಬನಗಳ ಸುತ್ತಮುತ್ತ ಇತ್ತೀಚಿಗೆ ಜೀವಂತ ಭೂತಗಳಂತ ಜನರು ಎರಡೋ-ಮೂರೋ ಅಂತಸ್ತಿನ ಉಪ್ಪರಿಗೆಯ ಮನೆ ಕಟ್ಟಿಕೊಂಡಿರೋದು ಇತ್ತೀಚಿಗೆ ಊರಿಗೆ ಹೋಗಿದ್ದಾಗ ನೋಡಿ ಬೇಜಾರಾಯಿತು. ನಾವೆಲ್ಲ ಚಿಕ್ಕವರಾಗಿದ್ಧಾಗ ಒಂದು ತರಹ ನಿಗೂಡ ಭಯ ಹುಟ್ಟಿಸುವ ಇಂತಹ ಪವರ್ ಫುಲ್(!) ಭೂತದ ಕಲ್ಲುಗಳಿದ್ದ ತಾಣಗಳೆಲ್ಲ ಇಂದು ಗತ ವೈಭವ ಕಳೆದುಕೊಂಡು ಪಳಯುಳಿಕೆಯಂತೆ ನಿಂತಿವೆ. ಹಿಂದೊಮ್ಮೆ ತಮಗೆ ಹೆದರುತ್ತಿದ್ದ ಹುಲುಮಾನವರಿಗೆ ಇದೀಗ ತಾವೇ ಹೆದರಿ ಸಾಯಬೇಕಾದ ದೈನೇಸಿ ಸ್ಥಿತಿ ಭೂತಗಳಿಗೆ! ಅದಕ್ಕೆ ಇರಬೇಕು ಇಂದಿನ ಮಕ್ಕಳಿಗೆ ನಮಗಿದ್ದಷ್ಟು ಕಲ್ಪನಾ ಸಾಮರ್ಥ್ಯವೂ ಇಲ್ಲ. ನಾವು ಕಂಡ ಚಂದದ ತೀರ್ಥಹಳ್ಳಿಯ ಕಾಣೋ ಭಾಗ್ಯವೂ ಅವರಿಗಿಲ್ಲ. ಒಟ್ಟಿನಲ್ಲಿ ನಾನು ಕಂಡು ಬೆಳೆದಿದ್ದ ಆ ತೀರ್ಥಹಳ್ಳಿ ಇವತ್ತು ಎಲ್ಲೋ ಕಳೆದೇಹೋಗಿದೆ. ಕಣ್ಣು ಮುಚ್ಚಿಕೊಂಡು ತೀರ್ಥಹಳ್ಳಿಯನ್ನು ನೆನಪಿಸಿಕೊಂಡರೆ ಮೊದಲಿಗೆ ನನಗೆ ನೆನಪಾಗೋದು ವೆಂಕಟೇಶ್ವರ ಟಾಕೀಸು, ಆಮೇಲೆ ಸೋಮವಾರದ ಸಂತೆ, ಅದರ ನಂತರ ರಾಮೇಶ್ವರ ದೇವಸ್ಥಾನ, ಅನಂತರ ತುಂಗಾ ಹೊಳೆ ಮಧ್ಯದ ರಾಮಮಂಟಪ, ಅದಾದ ಮೇಲೆ ನಮ್ಮ ಮನೆ ಕೆಳಗಿದ್ದ ನಾಗರಬನ. ಅದಾದ ನಂತರ ನಾನು ಇಷ್ಟಪಟ್ಟು ಹೋಗುತ್ತಿದ್ದ ಸರಕಾರಿ ಜೆ ಸಿ ಆಸ್ಪತ್ರೆ (ಸಣ್ಣಪುಟ್ಟ ಸೀಕಿಗೂ ಇಂಜೆಕ್ಷನ್ ಹಾಕಿಸಿಕೊಳ್ಳುವ ವಿಲಕ್ಷಣ ಖಯಾಲಿ ನನಗಿತ್ತು, ಸಾಮಾನ್ಯವಾಗಿ ಪುಟ್ಟ ಮಕ್ಕಳು ಸೂಜಿಗೆ ಅಂಜುತ್ತವೆ... ನಾನದಕ್ಕೆ ಅಪವಾದವಾಗಿದ್ದೆ. ನನ್ನ ಅಂಜಿಸುತ್ತಿದ್ದುದು ಕಹಿ ಸಿರಪ್ ಹಾಗು ಮಾತ್ರೆಗಳಷ್ಟೆ!). ಬಸ್'ಸ್ಟ್ಯಾಂಡ್'ನಲ್ಲಿದ್ದಕಾರಂತರ ಮಯೂರ ಹೋಟೆಲಿನಲ್ಲಿ ಅಜ್ಜ ಕೊಡಿಸುತ್ತಿದ್ದ ಮಸಾಲೆ ದೋಸೆ! ಹೀಗೆ ಇವೆಲ್ಲ ನನ್ನ ಸ್ಮ್ರತಿಯಲ್ಲಿ ಫ್ರೇಮ್ ಹಾಕಿದಂತೆ ಉಳಿದುಬಿಟ್ಟಿವೆ.ಬಹುಶಃ ನಾನೂ ಅಲ್ಲಿಯೇ ಫ್ರೀಜ್ ಆಗಿದ್ದೇನೆ!


ಹಾಗೆ ನೋಡಿದರೆ ನಮ್ಮ ಅಜ್ಜನಿಗೆ ಒಟ್ಟು ಆರು ಮಕ್ಕಳು. ನನ್ನ ಹೆತ್ತಮ್ಮ ಮೊದಲನೆಯವಳು, ನನ್ನ ಮೊದಲ ಚಿಕ್ಕಮ್ಮನಿಗೆ ಎರಡೆ-ಎರಡು ವರ್ಷ ವಯಸ್ಸಾಗಿದ್ದಾಗ ಕ್ಷುಲ್ಲಕ ಕಾರಣಕ್ಕಾಗಿ ನನ್ನಜ್ಜಿ ಆತ್ಮಹತ್ಯೆ ಮಾಡಿಕೊಂಡರಂತೆ. ಡ್ರೈವರ್ ಕೆಲಸ ಮಕ್ಕಳ ದೆಖಾರೇಖಿ ಮಾಡಿಕೊಳ್ಳಬೇಕಾದ ಸಂಕಟ ನೋಡಲಾರದೆ ಅಳಿಯನ ಮರು ಮದುವೆಯನ್ನ ತಾವೇ ಖುದ್ಧಾಗಿ ಹೆಣ್ಣು ನೋಡಿ ಅತ್ತೆ-ಮಾವನೆ ಮುಂದೆನಿಂತು ಮಾಡಿಸಿಕೊಟ್ಟರಂತೆ. ಶೀಘ್ರ ಕೋಪಿಯೂ, ಅವಿವೇಕಿಯೂ ಆದ ಮಗಳ ತಪ್ಪು ತಿಳಿದ ವಿವೇಕಿಗಳು ಅವರಿದ್ದಿರಬಹುದೇನೋ!. ಹೀಗೆ ನಮ್ಮ ಮನೆತುಂಬಿ ಬಂದವರೇ ನನ್ನಮ್ಮ. ಅವರಿಗೂ ಎರಡು ಗಂಡು ಹಾಗು ಎರಡು ಹೆಣ್ಣು ಮಕ್ಕಳಾದವು. ನನ್ನ ಹೆತ್ತಮ್ಮ ಅಹಲ್ಯ, ಚಿಕ್ಕಮ್ಮ ನಾಗರತ್ನ, ಮಾವಂದಿರಾದ ಸುರೇಶ-ಪ್ರಕಾಶ, ಕಿರಿಚಿಕ್ಕಮ್ಮಂದಿರು ಆಶಾ -ಪೂರ್ಣಿಮಾ ಇವರಿಷ್ಟೇ ಇದ್ದ ನಮ್ಮ ಮನೆಗೆ ಕಿರಿಯವನಾಗಿ ನಾನು ಹುಟ್ಟಿದ್ಧು ೨೬ ಆಗೋಸ್ಟ್ ೧೯೮೨ ರಂದು. ಮನೆಗೆ ಮೊದಲ ಮೊಮ್ಮಗ ನಾನಾಗಿದ್ದರಿಂದ ಆ ಕಾಲದ ಪದ್ದತಿಯಂತೆ ನಾನು ಮನೇಲೆ ಹುಟ್ಟಿದೆ.

ಇಲ್ಲೊಂದು ತಮಾಷೆಯೂ ಇದೆ.ನನ್ನ ಹುಟ್ಟಿನ ಕಾಲಕ್ಕೋ ನಮ್ಮಜ್ಜ ಡ್ಯೂಟಿ ಮೇಲಿದ್ದರು, ಅವರು ಬಂದು ನನ್ನ ಮೊದಲಿಗೆ ನೋಡಿದಾಗ ನಾನು ನಾಲ್ಕು ಧಿನ ದೊಡ್ಡವನಾಗಿದ್ದೆ. ಇವರು ಪುರಸಭೆಗೆ ಜನನ ನೋಂದಣಿ ಮಾಡಿಸೋಕೆ ಹೋದಾಗ ಅಲ್ಲಿನವರು ತಡವಾಗಿ ಬಂದುದಕ್ಕೆ "ಏನ್ರಿ ನಾಲ್ಕ್ ದಿನದಿಂದ ಮಗು ಹುಟ್ಟಲೇ ಇತ್ತ?" ಅಂತ ಸರಿಯಾಗಿ ಬೈದರಂತೆ.ಅವರ ಮಾತಿಗೆ ಬೆಪ್ಪಾಗಿ ನನ್ನ ಜನನ ದಿನವನ್ನ ಅಜ್ಜ ಅದೇ ದಿನಕ್ಕೆ ಅಂದರೆ ೧ನೆ ಸೆಪ್ಟೆಂಬರ್ ಅಂತಲೇ ಬರಿಸಿದ್ದಾರೆ. ಹೀಗಾಗಿ ದಾಖಲಾತಿಗಳಲ್ಲಿ ನಾನು ನಾಲ್ಕುದಿನ ತಡವಾಗಿ ಹುಟ್ಟಿದೆ! ನಾನು ಹುಟ್ಟುವಾಗ ಮೊದಲ ಚಿಕ್ಕಮ್ಮ ಅಲ್ಲೆ ಸಮೀಪದ ಕಟ್ಟೆಹಕ್ಕಲು ಎಂಬ ಊರಲ್ಲಿ ಟೀಚರ್ ಆಗಿದ್ದರು. ಮಾವಂದಿರು ಕಾಲೇಜಿನ ಮೆಟ್ಟಲು ಹತ್ಟಿದ್ದರೆ ಒಬ್ಬ ಚಿಕ್ಕಮ್ಮ ಹೈಸ್ಕೂಲಿನಲ್ಲೂ ಇನ್ನೊಬ್ಬಳು ನಾಲ್ಕನೇ ಕ್ಲಾಸಿನಲ್ಲೂ ಇದ್ದಳು. ಹೀಗಾಗಿ ನಾನೆಂದರೆ ಎಲ್ಲರಿಗೂ ವಿಪರೀತ ಪ್ರೀತಿ. ಅವರೆಲ್ಲರಿಗೂ ಆಡಲು ಒಂದು ಜೀವಂತ ಬೊಂಬೆ ಸಿಕ್ಕಂತೆ ಆಗಿತ್ತೇನೋ! ಅದೇನೇ ಇದ್ದರೂ ನನ್ನ ನೆನಪಿನಲ್ಲಿ ಭದ್ರವಾಗಿರುವ ಮೊದಲ ನಾಲ್ಕೈದು ವರ್ಷಗಳು ಸಂಭ್ರಮದಿಂದಲೇ ಕೂಡಿದ್ದವು.


ನನಗೆ ನೆನಪಿರುವ ಹಾಗೆ ನಮಗ್ಯಾರಿಗೂ ಬಾಲ್ಯದಲ್ಲೇನೂ ನಮ್ಮೆಲ್ಲರಿಗೆ ಸುಖ ಸಂತೋಷಕ್ಕೆ ಕೊರತೆಯಿರಲಿಲ್ಲ ಅಥವಾ ನೋವಿನ ಅರಿವೂ ಇರದ ಎಲ್ಲವೂ ಸುಂದರ ಎನಿಸೊ ಮುಗ್ಧ ಸ್ಥಿತಿಯದು ಎನ್ನೋದು ಹೆಚ್ಚು ಸರಿ. ಆಗಿನಿಂದಲೂ ನಾವು ಅಂದರೆ ನನ್ನಮ್ಮ, ಅಜ್ಜ, ಅಜ್ಜಿ. ಇಬ್ಬರು ಚಿಕ್ಕಮ್ಮಂದಿರು ಹಾಗೆ ಇಬ್ಬರು ಮಾವಂದಿರು ಜೊತೆಯಾಗಿಯೇ ಇದ್ದ ನೆಮ್ಮದಿಗೇನೂ ಕೊರತೆಯಿರದ ಸರಳ ಮಧ್ಯಮವರ್ಗದ ಕುಟುಂಬ ನಮ್ಮದು. ನನ್ನ ಪ್ರಪಂಚವೂ ಅಷ್ಟಕ್ಕೆ ಸೀಮಿತ. ಅದು ಬಿಟ್ಟರೆ ನಾನು ಹೋಗುತ್ತಿದ್ದ ಬಾಲವಾಡಿ, ಅಲ್ಲಿನ ಉದ್ದ ಜಡೆಯ ಟೀಚರ್ ಹಾಗು ತುರುಬಿನ ಟೀಚರ್ ಇವರಿಗೆ ನನ್ನ ಅರಿವಿನ ಪರಿಧಿ ಮುಗಿದಿರುತ್ತಿತ್ತು. ನಿಜವಾಗಿ ನಾನು ಅಂಟಿಕೊಂಡಿರುತ್ತಿದ್ದುದು ನನ್ನಜ್ಜಿಗೆ ಅವರನ್ನೇ ಅಮ್ಮ ಎಂದು ಕರೆಯುತ್ತಿದ್ದೆ, ಈಗಲೂ ಅವರನ್ನೇ ಅಮ್ಮ ಎನ್ನೋದು. ಬಡತನ ಸಾರ್ವತ್ರಿಕವಾಗಿದ್ದ ಆ ದಿನಗಳಲ್ಲಿ ಇಂದು ಎಲ್ಲರ ಮನೆಯಲ್ಲೂ ಕಾಣಸಿಗುವ ಐಶಾರಾಮಿ ಸಲಕರಣೆಗಳು ಎಲ್ಲೋ ಒಂದೆರಡು ಉಳ್ಳವರ ಮನೆಯ ಸ್ವತ್ತು ಮಾತ್ರ ಆಗಿದ್ದವು. ಹೀಗಾಗಿ ಯಾರಿಗೂ ಅದೊಂದು ಕೊರತೆ, ಅದಿಲ್ಲದ ಬಾಳು ಪರಿಪೂರ್ಣವಲ್ಲ ಅಂತ ಅನ್ನಿಸುತ್ತಲೇ ಇರಲಿಲ್ಲ ಅಂದುಕೊಳ್ಳುತ್ತೇನೆ.

ಮನೆಯಲ್ಲಿ ಆರು ಕರೆಯುವ ದನಗಳಿದ್ದವು ಅಜ್ಜ ಆಗಿನ್ನೂ ಗಜಾನನ ಕಂಪೆನಿಯಲ್ಲಿ ಡ್ರೈವರ್ ಆಗಿದ್ದರು. ನಿತ್ಯ ಉಡುಪಿಯಿಂದ ಶಿವಮೊಗ್ಗದ ರೂಟಲ್ಲಿ ಅವರದ್ದು ಪಾಪ ಗಾಣದೆತ್ತಿನ ದುಡಿತ. ಇತ್ತ ಮನೆಯಲ್ಲಿ ತಿನ್ನೋ ಕೈಗಳು ಹದಿನಾರು, ಅತ್ತ ದುಡಿಮೆ ಆಗುತಿದ್ದುದು ಎರಡೇ ಕೈಗಳಿಗೆ. ಹೀಗಾಗಿ ಅಷ್ಟಿಷ್ಟು ಮನೆ ಖರ್ಚು ಸರಿದೂಗಿಸಲು ಅಮ್ಮ ಮಾಡುತಿದ್ದ ಪ್ರಯತ್ನದ ಫಲವೆ ಹಾಲು ಮಾರಾಟಕ್ಕಾಗಿ ದನ ಸಾಕಣೆ. ಹೀಗೆ ಕರೆದ ಹಾಲನ್ನ ವರ್ತನೆಮನೆಗಳಿಗೆ ಕೊಟ್ಟು ಬರೊ ಜವಾಬ್ದಾರಿ ನನ್ನದಾಗಿತ್ತು. ಪುಟ್ಟ ಬುಟ್ಟಿಯಲ್ಲಿ ಅಮ್ಮ ತುಂಬಿಸಿಕೊಟ್ಟ ಚಟಾಕು ಬಾಟಲಿಗಳನ್ನೆಲ್ಲ ನನ್ನ ಪುಟ್ಟ ಅಂಗೈಯಲ್ಲಿ ಭದ್ರವಾಗಿ ತುಳುಕದಂತೆ ಹಿಡಿದು ಸಮೀಪದ ಮನೆಗಳಿಗೆ ಹೊತ್ತಿಗೆ ಸರಿಯಾಗಿ ನಾನು ಹಾಲು ಮುಟ್ಟಿಸುತ್ತಿದ್ದೆ.

ನನಗೆ ಹಿಡಿಸಿದ ಕೆಲವು ನಿಜಗಳು..... ನಿಮಗೂ ನಿಜವನಿಸೀತು...




ನಮ್ಮ ದೇಶದ ರೈತರ ಶಕ್ತಿಯನ್ನು ವೃತ್ತಿಪರ ನಿರ್ವಹಣೆಯೊಂದಿಗೆ ಕಲೆಹಾಕಿದರೆ ಏನಾಗಬಹುದು? ಅವರು ಏನನ್ನು ತಾನೆ ಸಾಧಿಸುವುದು ಅಸಾಧ್ಯ? ಭಾರತ ಏನನ್ನು ತಾನೆ ಹೊಂದಲಾರದು? ಆದರೆ ಇದನ್ನೆಲ್ಲಾ ಆಗ ಮಾಡುವ ಮುನ್ನ ಬಾರ್ಬರ ವಾರ್ಡ್ ಹೇಳಿದ "ಪಾಲ್ಗೊಂಡ, ಪೂರ್ಣ ಸಹಕಾರದ ನಿಜವಾದ ಅಸ್ತಿಭಾರ" ಹಾಕಬೇಕು. ಪಟ್ಟಣ ಮತ್ತು ಹಳ್ಳಿಗಳ ನಡುವೆ, ಕೈಗಾರಿಕೆ ಮತ್ತು ಕೃಷಿಗಳ ನಡುವೆ ಇರುವ ದಟ್ಟವಾದ ವ್ಯತ್ಯಾಸವನ್ನು ಸರಿಪಡಿಸಬೇಕಾದರೆ ರೈತರನ್ನು ಸಂಘಟಿಸುವುದು ಅತ್ಯಗತ್ಯವಾಗಿದೆ. ಅದನ್ನೇ ಗಮನದಲ್ಲಿಟ್ಟುಕೊಂಡು "ಆನಂದ್"ನಲ್ಲಿ ನಮ್ಮ ಜನರನ್ನು ತೀರ್ಮಾನ ತೆಗೆದುಕೊಳ್ಳುವ ಕಾರ್ಯವಿಧಾನಗಳಲ್ಲಿ ತೊಡಗಿಸಿಕೊಳ್ಳುವ ವ್ಯವಸ್ಧೆಗಳನ್ನು ರೂಪಿಸುವ ಅಗತ್ಯತೆ ನಮಗೆ ಕಂಡುಬಂತು. ಜನ ಸಾಮಾನ್ಯರ ಮಟ್ಟದಲ್ಲಿ ನಾವು ಪ್ರಜಾಪ್ರಭುತ್ವವನ್ನು ಹೊಂದಿಲ್ಲವಾದರೆ ಡೆಲ್ಲಿಯಲ್ಲಿ ಅದು ಇದ್ದು ಏನು ಪ್ರಯೋಜನ? ತಮ್ಮತಮ್ಮ ವಿವಾದಗಳನ್ನು ಬಗೆಹರಿಸಿಕೊಳ್ಳುವುದನ್ನು ನಮ್ಮ ಭಾವಿ ನಾಯಕರು ಕಲಿಯುವ ಶಾಲೆ ಹಳ್ಳಿಯ ಸಹಕಾರಿ ಸಂಘಗಳಲ್ಲದೆ ಮತ್ತೆಲ್ಲಿ? ನಿರ್ವಹಣೆ ಮತ್ತು ವ್ಯಾಪಾರ ವಾಹಿವಾಟುಗಳ ಸ್ನಾತಕೋತ್ತರ ತರಬೇತಿಯನ್ನು ಚುನಾಯಿತ ಪ್ರತಿನಿಧಿಗಳಿಗೆ ನೀಡುವ ಕಾಲೇಜುಗಳು ತಾಲೂಕು ಅಥವಾ ಜಿಲ್ಲಾ ಯೂನಿಯನ್'ಗಳೇ ಅಲ್ಲವೆ?

ದೆಹಲಿಯಲ್ಲಿ ಫ್ಲೈ ಓವರ್ ಗಳನ್ನು ಕಟ್ಟುವುದು ತಪ್ಪಲ್ಲ, ನಮ್ಮ ಹಳ್ಳಿಗಳಿಗೆ ಸಂಪರ್ಕ ರಸ್ತೆಗಳನ್ನು ನಾಡಿನುದ್ದಕ್ಕೂ ನಾವು ನಿರ್ಮಿಸದಿರುವುದು ಅಪರಾಧ. ನಮ್ಮ ರಾಜಧಾನಿ ಬಣ್ಣ ಬಣ್ಣದ ಬೆಳಗು ಸೂಸುವ ಕಾರಂಜಿಗಳನ್ನು ಹೊಂದಿರುವುದು ಎಂದೂ ತಪ್ಪಲ್ಲ, ಏನೆ ಆದರೂ ದೆಹಲಿ ಸುಂದರವಾಗಿರಲೇಬೇಕು. ಆದರೆ ನಾವು ನಮ್ಮ ಎಲ್ಲ ಹಳ್ಳಿಗಳಿಗೂ ಕುಡಿಯುವ ನೀರಿನ ವ್ಯವಸ್ಧೆ ಮಾಡದಿರುವುದು, ಹನಿ ನೀರಿಗಾಗಿ ಗ್ರಾಮೀಣ ಜನ ಮೈಲುಗಟ್ಟಲೆ ಅಂಡಲೆಯುವುದು ಅನ್ಯಾಯ. ಮುಂಬಯಿಯಲ್ಲಿ ಆಧುನಿಕ ಖಾಸಗಿ ಆಸ್ಪತ್ರೆ ಇರುವುದಾಗಲಿ ಇಲ್ಲವೇ ಏಮ್ಸ್ ದೆಹಲಿಯಲ್ಲಿರುವುದಾಗಲಿ ತಪ್ಪೇನೂ ಅಲ್ಲ, ಆದರೆ ಹಳ್ಳಿಯ ಬಡವನ ಆಗತಾನೆ ಜನಿಸಿದ ಮಗುವಿಗೆ ಸಂಭಾವ್ಯ ಕುರುಡು ತಪ್ಪಿಸಲು ಎರಡೇ ಎರಡು ಹನಿ ಔಷಧಿ ವ್ಯವಸ್ಥೆ ಮಾಡದಿರುವುದು ಪರಮ ಘಾತುಕತನ. ಇದ್ದಕ್ಕೆಲ್ಲ ಕೇವಲ ಮುಂದಾಲೋಚನೆಯ ಮುತುವರ್ಜಿ ಸಾಕೆ ಸಾಕು, ಹಣದ ಅಗತ್ಯ ತೀರಾ ಕಡಿಮೆ ಆದರೂ ಪಂಚತಾರಾ ಆಸ್ಪತ್ರೆಗಳನ್ನು ಕೋಟ್ಯಾಂತರ ಖರ್ಚು ಮಾಡಿ ಮಹಾನಗರಗಳಲ್ಲಿ ಕಟ್ಟಲು ಮುಂದಾಗುತ್ತೇವೆ. ಕುಗ್ರಾಮಗಳಲ್ಲಿ ಜೀವರಕ್ಷಕ ಮದ್ದುಗಳ ಕಿರು ಆರೋಗ್ಯ ಘಟಕಗಳನ್ನ ಸ್ಥಾಪಿಸಲು ಮರೆಯುತ್ತೇವೆ. ಹೀಗೆ ಆಗುತ್ತಿರುವುದಾದರೂ ಏಕೆ? ಏಕೆಂದರೆ ನೀತಿ ನಿರೂಪಿಸುವ ಅಧಿಕಾರ ನಮ್ಮ ಗಣ್ಯರ ಕೈಯಲ್ಲಿ ಇದ್ದು ಮತ್ತು ಸ್ವಾಭಾವಿಕವಾಗಿಯೋ ಇಲ್ಲವೇ ಅವರ ಅರಿವಿಗೆ ಬಾರದೆ ನಿರೂಪಿಸುವ ಕಾನೂನುಗಳೆಲ್ಲ ಅವರಿಗೆ ಹಾಗು ಇದನ್ನ ಓದುತ್ತಿರುವ ನಮ್ಮಂತಹ "ನಾಗರೀಕ"ರಿಗೆ ಮಾತ್ರ ಅನುಕೂಲವಾಗುವಂತೆಯೇ ಇರುತ್ತದೆ. ಹೀಗಾಗಿ ನಾಚಿಕೆಯೇ ಇಲ್ಲದೆ ಎಲ್ಲರಿಗೂ ಸೇರಿದ ಸಂಪತ್ತುಗಳನ್ನು ನಾವಷ್ಟೆ ನಿರ್ಲಜ್ಜರಾಗಿ ಅನುಭವಿಸುತ್ತಿದ್ದೇವೆ. ಇನ್ನೂ ದುರಂತವೆಂದರೆ ಇದರ ಅರಿವೇ ನಮಗಿಲ್ಲ!

-ವರ್ಗೀಸ್ ಕುರಿಯನ್ (ಅಮೂಲ್ ಯಶಸ್ಸಿನ ರೂವಾರಿ)

ಹೇಳಲು ಇದೆ ಕಾರಣ...







ಹಳೆ ನೆನಪುಗಳು ಮರುಕಳಿಸುವಾಗ ಹಬೆಯಾಡುವ ಚಹಾ ಕಪ್ ಕೈಯಲ್ಲಿ ಹಿಡಿದು ಮಳೆಯನ್ನೇ ನೋಡುತ್ತಾ ಅದರ ಬಿಸಿಯ ಗುಟುಕು ಗುಟುಕಾಗಿ ಅನುಭವಿಸುತ್ತಾ ಕಿಟಕಿಯಂಚಿನಲ್ಲಿ ಕೂರೋದೇ ಹಿತ. ನಿಂತ ಮಳೆಯ ಉಳಿದ ಹನಿ ಮೆಲ್ಲನೆ ಬೀಸೊಗಾಳಿಗೆ ಮರದ ಎಲೆಗಳಿಂದ ಉದುರೋವಾಗ ಅವಕ್ಕೂ ನನ್ನಂತೆ ಚಳಿಗೆ ನಡುಕ ಹುಟ್ಟಿರಬಹುದೇ? ಎಂಬ ಅನುಮಾನ ನನಗೆ. ಮೈತುಂಬ ಹೊದ್ದುಕೊಂಡು ಅಕ್ಷರಶಃ ಕಂಬಳಿ ಮರೆಯಲ್ಲಿ ಭೂಗತನಾದವನು ಹಳೆಯ ಸ್ಮ್ರತಿಗೆ ಜಾರಿದೆ. ಹೌದಲ್ವ? ಹೀಗೆಯೇ ಮಳೆಯ ಸವಾರಿ ಬಂದಾಗಲೆಲ್ಲಾ ಬೆಚ್ಚಗೆ ಹೊದಿಸಿ ಅಮ್ಮ ಚಿಕ್ಕಂದಿನಲ್ಲಿ ನನ್ನ ತಬ್ಬಿ ಮಲಗುತಿದ್ದರಲ್ಲ! ಎಂಬ ಬೆಚ್ಚನೆಯ ನೆನಪು. ಆಗೆಲ್ಲ ಕಂಬಳಿಗಿಂತಲೂ ಹಿತವೆನಿಸಿದ್ದು ಅಮ್ಮನ ಮೈಯ್ಯ ಹಿತವಾದ ಬಿಸಿ ಹಾಗು ಅವರ ಸೀರೆಯ ಆಪ್ತ ವಾಸನೆ. ಬಾರ್ ಮಾತ್ರ ಬದಲಿಸಿದ ಹಳೆಯ ಹವಾಯಿ ಚಪ್ಪಲಿಯನ್ನು ವರ್ಷ ವರ್ಷವೂ ಬಳಸುತ್ತಿದ್ದುದು. ಮಳೆಗೆ ರಾಡಿಯೆದ್ದು ಕೆಸರಾದ ರಸ್ತೆಗಳಲ್ಲಿ ಅವನ್ನೇ ಮೆಟ್ಟಿ ಶಾಲೆಗೆ ಹೋಗುವಾಗ ಬೆನ್ನಿಗೆಲ್ಲ ಕೆಮ್ಮಣ್ಣ ಕೆಸರ ಚಿತ್ತಾರ ಹರಡುತ್ತಿದ್ದುದು ಎಲ್ಲಾ ನೆನಪಾಗುತ್ತೆ. ಮುಗಿಯದ ನೆನಪುಗಳ ಜಾತ್ರೆ ! ಜೋಕಾಲಿ, ಭರಪೂರ ಆಟಿಕೆ, ಕೊಳಲು, ವಾಚು, ಬೆಂಡು-ಬತಾಸು, ಸಕ್ಕರೆ ಮಿಠಾಯಿ, ಬೊಂಬಾಯಿ ಮಿಠಾಯಿ, ಖರ್ಜೂರ, ಬಣ್ಣಬಣ್ಣದ ತಿಂಡಿಗಳೇ ತುಂಬಿದ ಎಳ್ಳಮವಾಸ್ಯೆ ಜಾತ್ರೆಯಲ್ಲಿ ಇದ್ದಕ್ಕಿದ್ದಂತೆ ಎಲ್ಲರೂ ಮಾಯವಾಗಿ ನಾನೊಬ್ಬನೇ ಪುಟ್ಟ ಮಗುವಾಗಿ ಉಳಿದಂತಿದೆ ನನ್ನ ಮನಸ್ತಿತಿ. ನೆನಪಿನ ಒಲೆಯ ಮುಂದೆ ಮಾರ್ದವ ಬೆಚ್ಚಗಿನ ಚಳಿ ಕಾಯಿಸೋದೆ ಚೆನ್ನ ಅಲ್ಲವಾ?



ಪ್ರೀತಿಯಲ್ಲಿ ಒತ್ತಾಯ ಸಲ್ಲ, ಒಪ್ಪಿಗೆ ಮಾತ್ರ ಚೆನ್ನ. ಕ್ರಮೇಣ ಕಳೆದೆ ಹೋಗಿರುವ ಬಾಲ್ಯವನ್ನು ನೆನಪಿಸಿಕೊಳ್ಳೋದ್ದಕ್ಕಿಂತ ಹೆಚ್ಚಿನ ಸುಖ ಬಾಳಲ್ಲಿ ಉಳಿದೆ ಇಲ್ಲ. ಊರು ಬಿಟ್ಟು ಊರು ಸೇರಿ ಮತ್ತೊಂದು ಪರಿಚಯವೇ ಇರದ ಜಗತ್ತಿನಲ್ಲಿ ಹೊಸದಾಗಿ ಬೆರೆಯುವ ಅನಿವಾರ್ಯತೆಯ ತಲ್ಲಣ. ಅಲ್ಲಿಗೂ ನನ್ನೊಂದಿಗೆ ಜೊತೆಯಾಗಿ ಬಂದದ್ದು ಮಳೆ ಮಾತ್ರ ಇನ್ನೊಂದು ಶಾಲೆ, ನಗೆಪಾಟಿಲಿಗೆ ಈಡಾಗೋ ನನ್ನ ಹಳ್ಳಿ ಕನ್ನಡ, ಗೊತ್ತಿರುವ ಭಾಷೆಯೇ ಆದರೂ ಬೇರೆಯದೇ ಅನ್ನಿಸೋ ಉಚ್ಛಾರಣೆಯ ಅನುಕರಿಸೋ ಸರ್ಕಸ್'ಮಾಡುವ ಕರ್ಮ. ನನ್ನಂತ ಇಬ್ಬರನ್ನು ತೂರಿಸ ಬಹುದಾಗಿರುತ್ತಿದ್ದ ಯಾವಾಗಲೂ ದೊಡ್ಡ ಅಳಯತೆಯದೆ ಆಗಿರುತಿದ್ದು ರೇಜಿಗೆ ಹುಟ್ಟಿಸುತ್ತಿದ್ದ ಯೂನಿಫಾರ್ಮ್. ಆಗಲೂ ಆಪ್ತವಾಗುತ್ತಿದ್ದ ಕ್ಷಣಗಳು ಯಾವುದೆಂದರೆ, ಮತ್ತದೇ ಹಬೆಯಾಡುವ ಚಹಾದ ಬಿಸಿಯನ್ನು ಗುಟುಕು ಗುಟುಕಾಗಿ ಗಂಟಲಲ್ಲಿ ಇಳಿಸುವ ಸುಖದ ಮತ್ತಲಿ ಮುಳುಗಿ ಹನಿವ ಮಳೆಯನ್ನೇ ಮುಗ್ಧನಂತೆ ದಿಟ್ಟಿಸುತ್ತಿದ್ದೆನಲ್ಲ ಅದು ಮಾತ್ರ.



ರಾಜಧಾನಿಯಲ್ಲಿದ್ದೇನೆ ಈಗ. ಇಂದೊಂತರಾ ಕಾಂಕ್ರೀಟ್ ಸ್ಲಂ-ನಾನು ಇದರ ಖಾತೆಯಿಲ್ಲದ ಅಕ್ರಮ ನಿವಾಸಿ! ಇಲ್ಲಿಯೂ ಮಳೆ ಸುರಿಯುತ್ತದೆ ಆದರೆ ಬಾಲ್ಯದ ಸ್ಮ್ರತಿಯಲ್ಲಿ ಉಳಿದಿರುವಂತೆ ಚುಚ್ಚುವುದಿಲ್ಲ. ತೇಪೆ ಹಾಕಿದ ಕೊಡೆ ನಿರ್ದಯಿಯಾಗಿ ಬೀಸೊ ಗಾಳಿಗೆ ಕೋಡಂಗಿಯಂತೆ ಮುಂಬಾಗಿದಾಗ ಕೆಕರುಮೆಕರಾಗಿ ಮೊದಲು ಜಾರೋ ಚಡ್ಡಿಯನ್ನು ಸರಿಮಾಡಿಕೊಳ್ಳಲೋ? ಮುರುಟಿದ ಛತ್ರಿಯನ್ನು ಸಂಭಾಳಿಸಲೋ? ಎಂಬ ಸಂದಿಗ್ಧ ಕಾಡುತಿತ್ತು. ಇಲ್ಲಿ ಕಾಡೋ ಸಂಧಿಗ್ಧವೆ ಬೇರೆ, ಅದು ಹಣಕಾಸಿನ ಮೇಲಾಟಕ್ಕೆ ಸಂಬಂಧಿಸಿದ್ದು ಅಂತ ನಿರ್ಲಜ್ಜವಾಗಿ ಹೇಳಬೇಕಿದೆ. ಬಾಲ್ಯದುದ್ದಕ್ಕೂ ನಿಷ್ಕರುಣೆಯಿಂದ ಸೂಜಿ ಚುಚ್ಚಿದಂತೆ ಒಂದೇ ಸಮ ಮುಖದ ಮೇಲೆ ರಾಚಿ ಮೈಯೆಲ್ಲಾ ತೋಯಿಸಿ ತೊಪ್ಪೆ ಮಾಡುತ್ತಿದ್ದರೂ ಅದೇಕೋ ಮಳೆಯೆಂದರೆ ಮನಸ್ಸಿಗೆ ವಿಚಿತ್ರ ಮೋಹ. ನಲವತ್ತೈದೆ ರೂಪಾಯಿಗೆ ಸಿಗೋ ಪಾಸ್ ಜೇಬಿಗಿಳಿಸಿ ಗೊತ್ತುಗುರಿಯಿಲ್ಲದೆ ಸಿಕ್ಕಸಿಕ್ಕ ಬಿ ಎಂ ಟಿ ಸಿ ಬಸ್ಸನ್ನೇರಿ ಹೊರಗೆ ಜಡಿಮಳೆ ಚೆಚ್ಚುತ್ತಿರುವಾಗ ಕಾರಣವೆ ಇಲ್ಲದೆ ತಿರುಗಾಡೋ ಹೊಸ ಹವ್ಯಾಸವೊಂದು ಇತ್ತೀಚಿಗೆ ಅಂಟಿಕೊಂಡಿದೆ. ಬೆಂಗಳೂರಿನ ಮಳೆಗೆ ಊರ ಮಳೆಯ ಆರ್ದ್ರತೆ ಇಲ್ಲದಿದ್ದರೂ ಮಳೆ ಮಳೆಯೇತಾನೆ? ಎಂಬ ಹುಸಿ ಕಳ್ಳ ಸಮಾಧಾನ. ಇಂತಹದ್ದೇ ಒಂದು ಮಳೆಯಲ್ಲೇ ತಾನೆ ನೀನು ಮೊದಲ ಬಾರಿಗೇನನ್ನ ಕಣ್ಣಿಗೆ ಬಿದ್ದದ್ದು? ಮಳೆಯ ಬಗ್ಗೆ ವಿಪರೀತ ಮೋಹಿತನಾಗಿಗಿದ್ದ ನನ್ನ ಇನ್ನಷ್ಟು ಮೋಹದ ಗುಂಗಲ್ಲಿ ತೇಲಿಸಿದ್ದು?

ಈ ನಿನ್ನ ಅಸಮ್ಮತಿಯ ಸೂಚನೆ, ಯಾವುದೇ ಕಾರಣದಿಂದಲೂ ಪ್ರತಿಕ್ರಿಯಿಸದ ನಿನ್ನ ಅಸಡ್ಡೆಯಿಂದಲೇ ಸ್ಪಷ್ಟವಾಗಿದೆ. ಆದರೂ ನಿನ್ನೊಂದಿಗೆ ಮನಬಿಚ್ಚಿ ಹರಟುವ ವಾಂಛೆ. ಎಂದೆಂದೂ ಮುಗಿಯಲಾರದ ರಾತ್ರಿಗಳಲ್ಲಿ ಮನಸ್ಸಿಗೆ ತೀರಾ ಹತ್ತಿರವಾದ ಜೀವದೊಂದಿಗೆ ಎದೆಯಾಳದ ನವಿರು ನೋವನ್ನು ನಿರ್ಭಾವುಕವಾಗಿ ತೆರೆದಿಡುವ ರೀತಿಯಷ್ಟೇ ಇದು. ಇದನ್ನು ಕೇಳಲು ನೀನೊಂದು ಕಿವಿಯಾದರಷ್ಟೇ ಸಾಕು. ಹೌದು ...ಪ್ರೇಮದ ನಗುವನ್ನು ನಿನ್ನಿಂದ ನಿರೀಕ್ಷಿಸಿ ಸೋತಿದ್ದೇನೆ. ಹೀಗಾಗಿ ಇನ್ಯಾವುದೇ ಪ್ರತಿಕ್ರಿಯೆಯ ನಿರೀಕ್ಷೆ ಖಂಡಿತ ಇಲ್ಲ. ಕಡೇಪಕ್ಷ ನನ್ನ ಈ ಹರಿಕಥೆ ಕೇಳ್ತಾ ಕೇಳ್ತಾ ನಿನ್ನ ಕೆಲಸದ ಏಕತಾನತೆಯಾದರೂ ಕಳೆದೀತು ಕೇಳು.


ಎಲ್ಲಾ ಯಾತ್ರೆಗಳಿಗೂ ಒಂದು ಕಾರ್ಯಸಾಧನೆಯ ಉದ್ದೇಶ ಇರಲೇಬೇಕಂತಿಲ್ಲ ಎನ್ನುವುದು ನನ್ನ ಆಲೋಚನಾ ಬುನಾದಿ. ಹುಟ್ಟು ಅಲೆಮಾರಿಯ ಮನಸಿರುವ ನನ್ನ ಈ ವಾದ ನಿನ್ನೊಂದಿಗಿನ ಪ್ರೇಮ ನಿವೇದನೆಯಲ್ಲೂ ಬದಲಾಗಿಲ್ಲ ಎಂದರೆ ಆಶ್ಚರ್ಯ ಪಡಬೇಕಿಲ್ಲ. ನನ್ನ ಜೀವಮಾನದಲ್ಲಿ ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸಿದ್ದು ಕೇವಲ ಮೂವರನ್ನು. ಅಮ್ಮ ಮೊದಲನೆಯವರು, ನನಗೀಗಲೂ ನೆನಪಿದೆ ಹೆತ್ತತಾಯಿಗಿಂತ ಹೆಚ್ಚಾಗಿ ನಾನು ಅಂಟಿಕೊಂಡಿರುತ್ತಿದ್ದುದು ಅಮ್ಮನಿಗೇನೆ. ಅವರ ಸೀರೆಯ ಹಿತವಾದ ವಾಸನೆ ಇಲ್ಲದಿದ್ದರೆ ನನಗೆ ನಿದ್ದೆ ಬರುತ್ತಿರಲಿಲ್ಲ. ಅನಂತರ ಹೆಚ್ಚು ಹತ್ತಿರವಾದವನು ರುದ್ರಪ್ರಸಾದ್ ಅವನು ನಂಗೆ ಕೇವಲ ಗೆಳೆಯ ಮಾತ್ರನಲ್ಲ ಜೀವದ ಬಂಧು, ಆತ್ಮಸಖ. ನನ್ನ ಬಗ್ಗೆ ನನಗಿಂತ ಹೆಚ್ಚು ಕಳಕಳಿ ಇರುವ ಒಬ್ಬನೇ ಒಬ್ಬ ಅವನು. ಅವನ ಬಗ್ಗೆ ಇನ್ನೊಮ್ಮೆ ಹೇಳುತ್ತೇನೆ. ಇನ್ನು ನೀನು ಮನಕೆ ಜೀವಕೆ ಹತ್ತಿರವಾದವಳು. ದೂರವೇ ಇದ್ದರೂ...ಏನನೂ ಹೇಳದಿದ್ದರೂ ನನ್ನೊಳಗೆ ಆವರಿಸಿರುವವಳು. ನನ್ನ ಪಾಲಿಗೆ ನೀನು ಪಾರಿಜಾತ, ದೇವಲೋಕದ ಆ ಸುಮದಂತೆ ಕಾರಣವೆ ಇಲ್ಲದೆ ಕನಸಾಗಿ ಕಾಡುವವಳು. ಅಸಲಿಗೆ ನಾನು ನನ್ನ ಪುರಾಣ ಹೇಳದೆ ನೀನೆ ಅದನ್ನು ಅರಿತುಕೊಂಡರೆ ಚೆನ್ನ. ಆದರೆ ನಿನಗೆ ಹೇಳುವ ನೆಪದಲ್ಲಿ ನಾನು ಹಳೆಯ ನೆನಪಿನ ಹೊಳೆಯಲ್ಲಿ ಈಜುವಂತಾಗಿದೆ...ಕೊರೆತವಂತೆನಿಸಿದರೂ ಸಹಿಸಿಕೋ ಪ್ಲೀಸ್!



ಆಗಷ್ಟೆ ನಾನು ಶಾಲೆಗೆ ಸೇರಿ ಒಂದುವರ್ಷ ಕಳೆದಿತ್ತು. ಟಿವಿ "ರಾಮಾಯಣ"ದ ಜನಪ್ರಿಯತೆಯ ಉತ್ತುಂಗದ ದಿನಗಳವು. ಅಪ್ಪಿ ತಪ್ಪಿ ಟಿ ವಿ ಇಟ್ಟುಕೊಂಡಿರುವವರ ಮನೆಯಲ್ಲಿ ಜನಜಾತ್ರೆ. ಭಾನುವಾರ ಬಂದರೆ ಊರೆಲ್ಲ ಕರ್ಫ್ಯೂ ಹಾಕಿದಂತೆ ನಿರ್ಜನವಾಗುತ್ತಿದ್ದ ಅಧ್ಭುತ ಕಾಲವದು. ಆಗ ಎಲ್ಲರಂತೆ ನಾನೂ ಅದರ ದಾಸಾನುದಾಸ. ಮನೆಯ ನಿರ್ವಹಣೆ ಅಮ್ಮ ಹೇಗೆ ಮಾಡುತ್ತಿದ್ದರೋ? ಎಂಬ ವಿಸ್ಮಯ ಈಗಲೂ ಕಾಡುತ್ತದೆ. ಅಜ್ಜ ಡ್ರೈವರ್ ಆಗಿದ್ದರಿಂದ ಸಮೀಪದ ಹಳ್ಳಿಗರ ಪರಿಚಯ ಅವರಿಗಿತ್ತು. ಅವರಲ್ಲಿ ಒಬ್ಬರಾದ ಎಡುವಿನಕೊಪ್ಪದ ಪುಟ್ಟಯ್ಯಗೌಡರ ಒಬ್ಬ ಮಗ ಹಾಗು ಮೂವರು ಸಂಬಂಧಿಕರನ್ನು ಶಾಲೆಗೆ ಹೋಗುವ ಸಲುವಾಗಿ ಮನೆಯಲ್ಲಿ ಇಟ್ಟುಕೊಂಡರು. ಆಗ ತುಂಗಾನದಿಗೆ ಅವರೂರಿನಿಂದ ಸೇತುವೆ ಇರದಿದ್ದರಿಂದ ಮಳೆಗಾಲದಲ್ಲಿ ತುಂಗೆ ಉಕ್ಕಿಹರಿದಾಗ ಅವರೂರಿನ ಸಂಪರ್ಕ ತೀರ್ಥಹಳ್ಳಿಯಿಂದ ಕಡಿದು ಹೋಗುತ್ತಿತ್ತು, ಆದ್ದರಿಂದ ಓದುವ ಹುಡುಗರು ಪೇಟೆಯಲ್ಲಿ ಹೀಗೆ ವ್ಯವಸ್ಥೆ ಮಾಡಿಕೊಂಡೋ, ಇಲ್ಲ ಹಾಸ್ಟೆಲ್ಲಿನಲ್ಲಿ ಇದ್ದುಕೊಂಡೋ ಶಾಲೆಗೆ ಹೋಗುವುದು ಅನಿವಾರ್ಯವಾಗಿತ್ತು. ಇವರೊಂದಿಗೆ ಊರಿನ ಅಜ್ಜನ ಮನೆಕಡೆಯ ಇಬ್ಬರು ಟೀಚರ್'ಗಳೂ ಆಗ ನಮ್ಮ ಮನೆಯಲ್ಲೇ ಉಳಿದುಕೊಂಡಿದ್ದರು. ಅವರೆಲ್ಲರ ಕಡೆಯಿಂದ ಒಂದಲ್ಲ ಒಂದು ರೀತಿಯ ಪ್ರತಿಫಲ ದೊರೆಯುತ್ತಾ ಇದ್ದಿರಬೇಕು ಎಂಬುದು ನನ್ನ ಊಹೆ. ಇದರೊಂದಿಗೆ ಸಾಕಿದ್ದ ದನಗಳ ಹಾಲಿನ ವ್ಯಾಪಾರ-ಅಮ್ಮ ಇಟ್ಟುಕೊಂಡಿದ್ದ ಹೊಲಿಗೆ ಮಿಶನ್ನಿನಿಂದ ಹುಟ್ಟುತ್ತಿದ್ದ ಪುಡಿಗಾಸು.... ಹೀಗೆ ಉಟ್ಟು ಉಡಲು ಕೊರತೆಇಲ್ಲದಂತೆ ನಮ್ಮೆಲ್ಲರ ಕನಿಷ್ಠ ಅಗತ್ಯಗಳು ಸುಸೂತ್ರವಾಗಿ ಪೂರೈಕೆ ಆಗುತ್ತಿದ್ದವು.


ನಾನು ಬಾಲವಾಡಿಗೆ ಹೋಗಲಾರಂಭಿಸಿದ ನಂತರ ನನ್ನ ಪ್ರಪಂಚವೂ ನಿಧಾನವಾಗಿ ಹಿಗ್ಗಿತು ಅನ್ನಿಸುತ್ತೆ. ಅಲ್ಲಿಂದ ನನ್ನನ್ನು ಭಾರತಿ ಶಿಶುವಿಹಾರಕ್ಕೆ ಸೇರಿಸಲಾಯಿತು. ಅಲ್ಲಿ ಎರಡು ವರ್ಷದ ಓದು. ಅನಂತರ ಸೇವಾಭಾರತಿಯಲ್ಲಿ ಭರ್ತಿಯಾದೆ. ಮನೆ, ಶಾಲೆ, ಶಿಶುವಿಹಾರದಲ್ಲಿದ್ದಾಗ ಕರೆದುಕೊಂಡು ಹೋಗುತ್ತಿದ್ದ ಶಾರದಕ್ಕ... ಅಲ್ಲಿನ ಮೊದಲ ಗೆಳೆಯರು. ಮನೆ ತುಂಬ ಇದ್ದ ಹಲವಾರು ಅಕ್ಕ, ಅಣ್ಣ, ಮಾವಂದಿರು ಹೀಗೆ ಯಾವಾಗಲೂ ತುಂಬಿದ ಮನೆಯಲ್ಲಿದ್ದು ಅಭ್ಯಾಸವಾಗಿದ್ದ ನನಗೆ ಒಳಗೂ-ಹೊರಗೂ ಹೆಚ್ಚಿನ ವ್ಯತ್ಯಾಸ ಅನ್ನಿಸುತ್ತಿರಲಿಲ್ಲ.

Wednesday, September 12, 2012

ಊರು ಬಿಟ್ಟ ಆ ಕ್ಷಣ....




ಶಾಲೆಗೆ ಸೇರಿದ್ದ ಆರಂಭದ ದಿನಗಳಲ್ಲಿ ನನ್ನ ಬುದ್ದಿಮಟ್ಟ ವಿಶೇಷವೆಂದು ಯಾರಿಗೂ ಅನಿಸಿರಲಿಲ್ಲ. ಕಲಿಕೆಯಲ್ಲಿ ಏನಾದರೂ ವಿಶೇಷವಿದ್ದಿರಬಹುದು ಎಂದು ನನಗೂ ಅನಿಸಿರಲಿಲ್ಲ. ಆದರೆ ಬರುಬರುತ್ತಾ ಓದಿನ ವಿಷಯದಲ್ಲಿ ನನ್ನ ಸಾಮರ್ಥ್ಯ ಇನ್ನುಳಿದವರಿಗಿಂತ ಸ್ವಲ್ಪ ಹೆಚ್ಚೇ ಇರುವುದು ನನಗೆ ಅರಿವಾದಂತೆ ನನ್ನ ಶಿಕ್ಷಕರಿಗೂ ಅರಿವಾಗಿತ್ತು. ಆದರೆ ಪ್ರೋತ್ಸಾಹದ ವಿಷಯದಲ್ಲಿ ಮಾತ್ರ ನಾನು ನಿರಾಶ್ರಿತನಾದೆ. ಕಾರಣಗಳನ್ನು ಉಹಿಸುವ ದ್ರಾಷ್ಟ್ಯಕ್ಕೆ ಖಂಡಿತಾ ಇಳಿಯಲಾರೆ, ಆದರೆ ನನ್ನ ಪ್ರತಿಭೆಯ ಪ್ರದರ್ಶನದ ವಿಷಯ ಬಂದಾಗ ಕೇವಲ ಹಣವಂತರಾಗಿದ್ದ ಅಲ್ಪ ಮಟ್ಟದ ಬುದ್ದಿವಂತ ಸಹಪಾಠಿಗಳ ನಂತರದ ಸ್ಥಾನ ನನ್ನದಾಗಿತ್ತು ಎಂಬುದಷ್ಟೇ ನನ್ನ ನೋವಿಗೆ ಕಾರಣ. ಈಗ ನನಗಿರುವ ನ್ಯಾಯಪರತೆಯ ಅರಿವಿನ ಪರಿಧಿಯಲ್ಲೆ ಹೇಳುವದಾದರೆ ಅಷ್ಟು ಅಸಡ್ಡೆ ಹಾಗು ಎರಡನೇ ದರ್ಜೆಯ ಆದರಕ್ಕೆ ಖಂಡಿತಾ ನಾನು ಅರ್ಹನಾಗಿರಲಿಲ್ಲ. ಅಲ್ಲದೆ ತಾರತಮ್ಯದ ಮೂಲಕ ಮಕ್ಕಳ ಎಳೆ ಮನಸಸಿನಲ್ಲಿ ಖೇದದ ಬೀಜ ಬಿತ್ತಿ ಆ ವಯಸಿನಲ್ಲಿಯೆ ಅವರನ್ನು ಸಿನಿಕರನ್ನಾಗಿಸುವ ತಮ್ಮ ನಡುವಳಿಕೆಗಳ ಬಗ್ಗೆ ಶಿಕ್ಷಕರಿಗೂ ಅರಿವಿಲ್ಲದಿರುವುದು ವಿಷಾದದ ಸಂಗತಿ.

ನನ್ನ ಹೆತ್ತಮ್ಮನಿಗೆ ಅದೇನೋ ದುರಾಸೆ, ಮಗ ಒಂದು ಖಾಸಗಿ ಶಾಲೆಯಲ್ಲಿ ಕಲಿತರೆ ಮಾತ್ರ ಉತ್ತಮ ನಾಗರೀಕನಾಗಬಲ್ಲ ಎಂಬ ಗೊಡ್ಡು ಭ್ರಮೆ. ಹೀಗಾಗಿ ಊರಿನಲ್ಲಿದ್ದ ಪ್ರತಿಷ್ಠಿತ ಶಾಲೆಯೊಂದಕ್ಕೆ ನಾನು ಸೇರಿಸಲ್ಪಟ್ಟೆ. ಅವರೇನೋ ಪಿಗ್ಮಿ ಸಂಗ್ರಹ ಮಾಡಿ, ಹೂವಿನಂಗಡಿಗೆ ಹೂ ಕಟ್ಟಿಕೊಟ್ಟು ನಾಲ್ಕಾರು ಕಾಸು ಸಂಪಾದಿಸಿ ಶಾಲೆಗೂ ಕಳಿಸುವ ನಿರ್ಧಾರ ಮಾಡಿದ್ಧರು ನಿಜ ಆದರೆ ವಾಸ್ತವದಲ್ಲಿ ಅವರ ದುಡಿಮೆಯಲ್ಲಿ ಅವರದ್ದೇ ಆದ ಇತರ ಖರ್ಚುಗಳೆಲ್ಲ ಕಳೆದ ನಂತರ ನನ್ನ ಶಾಲೆಯ ಫೀಸಿಗೆ ಸಾಕಷ್ಟು ಹಣ ಉಳಿಯುತ್ತಿರಲಿಲ್ಲ. ಹೀಗಾಗಿ ಪ್ರತಿ ತಿಂಗಳ ಕೊನೆಯಲ್ಲಿ ನನ್ನೊಬ್ಬನ ಹೊರತು ಇನ್ನೆಲ್ಲರೂ ತಮ್ಮ ಫೀಸ್ ಕೊಟ್ಟಿರುತ್ತಿದ್ದು ನಾನೊಬ್ಬ ಮಾತ್ರ ಅಪರಾಧಿ ಪ್ರಜ್ಞೆಯಿಂದ ನರಳುತ್ತಿದ್ದೆ. ಮೇಲಾಗಿ ಡೈರಿಯಲ್ಲಿ ಅಮ್ಮನಿಗೆ ಕರೆ, ಸಕಾಲದಲ್ಲಿ ಹಣ ಸಂದಾಯವಾಗದ ಬಗ್ಗೆ ನನಗೆ ತರಗತಿಯಲ್ಲಿ ಸದಾ ಕರಕರೆ. ಹೀಗಾಗಿ ಶಿಕ್ಷಕರ ದೃಷ್ಟಿ ನನ್ನ ಪ್ರತಿಭೆಯನ್ನು ಗುರುತಿಸುವ ಹೊರತು ಅವರಿಗೆ ತಿಳಿಯದಂತೆ ಭರ್ತ್ಸನೆಗಳಿಂದ ಕಮರಿಸುವುದರತ್ತಲೆ ಸಾಗಿತು.ಈ ಎಲ್ಲ ಮಾನಸಿಕ ಹಿಂಸೆಯಿಂದ ಮುಕ್ತಿ ದೊರಕಿದ್ದು ನಾನು ಐದನೆ ತರಗತಿಗೆ ಸೇರಲು ಚಿಕ್ಕಮ್ಮನೂರಾದ ಕಾರ್ಕಳಕ್ಕೆ ಕಾಲಿಟ್ಟಾಗ.

ಆದರೆ ಅದೊಂದು ಬೆಂಕಿಯಿಂದ ಬಾಣಲೆಗೆ ಬಿದ್ದ ಅನುಭವದಂತಾಗಿದ್ದು ಮಾತ್ರ ಬೇರೆಯದೇ ಕಥೆ. ನನ್ನ ಅಪ್ಪ ಅಮ್ಮನಲ್ಲಿದ್ದ ಸಮರಸದ ಕೊರತೆಯಿಂದ ಅವರಿಬ್ಬರೂ ಯಾವಾಗಲೂ ಒಂದಾಗಿರುತ್ತಿದ್ದುದು ಕಡಿಮೆ. ಒಂದು ವೇಳೆ ಹಿರಿಯರ ರಾಜಿ-ಕಬೂಲಿಯಿಂದ ಜೊತೆಯಾದರೂ ಆ ಅಂಕ ಆದಷ್ಟು ಬೇಗ ಸರಿದು ಮತ್ತೊಂದು ರಾಜಿಗೆ ವೇದಿಕೆ ಸಿದ್ಧವಾಗುವ ತನಕ ಬೇರೆಯಾಗಿರುತ್ತಿದ್ದರು. ಅಮ್ಮ ತವರಿನಲ್ಲೇ ಬಿಡಾರ ಹೂಡಿರುತ್ತಿದ್ದರಿಂದ ನಾನು ಅಲ್ಲೆ ಉಳಿಯಬೇಕಾಗುತ್ತಿತ್ತು. ಹೀಗಾಗಿ ನನ್ನ ಹೆತ್ತವರ ಬಗ್ಗೆ ಕುಟುಂಬದಲ್ಲಿ ಅಂತಹ ಆದರವೇನೂ ಇರಲಿಲ್ಲ. ದುರಾದೃಷ್ಟಕ್ಕೆ ಅದಕ್ಕೆ ಬಲಿಯಾದವರು ಮಾತ್ರ ನಾವು ಮಕ್ಕಳು. ಅದೇ ಕಾರಣ ಬೊಟ್ಟು ಮಾಡಿ ಚಿಕ್ಕಮ್ಮ ಊರಿಗೆ ಕರೆಸಿಕೊಂಡರೂ ಮನೆಯಲ್ಲಿ ಇರಗೊಡದೆ ಹಾಸ್ಟೆಲ್ಳಿಗೆ ಸೇರಿಸಿ ಬಿಟ್ಟರು. ಕೂಗಳತೆಯ ದೂರದಲ್ಲಿದ್ದರೂ ಅವರ ಮನೆಗೆ ಬಾರದಂತಹ ವಾತಾವರಣ. ಬಹುಷಃ ಆಗಿನಿಂದಲೇ ಒಂಟಿತನಕ್ಕೆ ನಾನು ಹೊರಳಿಕೊಂಡೆ ದೈಹಿಕವಾಗಿಯೂ...ಮಾನಸಿಕವಾಗಿಯೂ.



ಹುಟ್ಟಿ ಬೆಳೆದ ಊರನ್ನು, ಅದರ ಸೆಳೆಯುವ ನೆನಪುಗಳನ್ನು ಬಿಟ್ಟು ಮತ್ತೊಂದು ಹೊಸ ಪ್ರಪಂಚಕ್ಕೆ ಕಾಲಿಡುವುದು ಅಪಾರ ಯಾತನೆಯ ಸಂಗತಿ. ಅದರಲ್ಲೂ ಇನ್ನು ಈ ಊರಿನ ಋಣ ಹರಿದಂತೆ ಎನ್ನುವ ಅಗೋಚರ ಭಾವವೊಂದು ಮನದೊಳಗೆ ವೇದನೆಯ ಅಲೆ ಎಬ್ಬಿಸುತಿರುವಾಗಲಂತೂ ಯಾತನೆ ಆಡಲೂ ಅನುಭವಿಸಲೂ ಆಗದಂತಾಗಿ ಮನವ ಹಿಂಡುತ್ತದೆ. ನನ್ನ ವಿಷಯದಾಲ್ಲಂತೂ ಆ ಊರಿನ ಋಣ ಅಂದಿಗೆ ಹರಿದಿದ್ದು ವಾಸ್ತವವೂ ಹೌದು. ಮೊದಲ ಬಾರಿಗೆ ತೀರ್ಥಹಳ್ಳಿ ತೊರೆದು ಕಾರ್ಕಳದ ಹಾದಿ ಹಿಡಿದಾಗ ನನ್ನೊಳಗೆ ತುಂಬಿದ್ದುದೂ ಅದೆ ಯಾತನೆ.

ನಾನು ಹುಟ್ಟಿ (ಆಗಿನ ಪದ್ದತಿಯಂತೆ ನನ್ನ ಹುಟ್ಟು ಮನೆಯಲ್ಲೇ ಆಗಿತ್ತು) ಬೆಳೆದ ಮನೆ,ಬಾಲ್ಯದಿಂದ ಚಿರಪರಿಚಿತವಾಗಿದ್ದ ನಮ್ಮ ಕೇರಿಯ ಪರಿಸರ. ಮನೆಯ ಹಟ್ಟಿ ತುಂಬಿದ್ದ ಭಾನು, ಲಕ್ಷ್ಮಿ, ಕುರುಡಿ, ಬೂಚ, ತುಂಗೆ, ನೇತ್ರ (ಇವಳೊಬ್ಬಳೆ ನಮ್ಮಲ್ಲಿದ್ದ ಎಮ್ಮೆ), ನಂದಿನಿ ಮತ್ತವರ ಅಸಂಖ್ಯ ಸಂತಾನ, ಚಳಿಯ ದಿನಗಳಲ್ಲಿ ರಾತ್ರೆ ಮನೆಯೊಳಗೆ ಎಳೆಕರುಗಳನ್ನು ಗೋಣಿತಾಟಿನ ಮಲಗಿಸಿ ಕೊಳ್ಳುತ್ತಿದ್ದುದು. ಅದೆಷ್ಟೊ ಬಾರಿ ಅವುಗಳ ಅಭೋದ ಕಣ್ಣುಗಳಿಗೆ ಮನಸೋತು ಹಟಾಮಾಡಿ ಅವು ಮಲಗುವ ಗೋಣಿಯಲ್ಲೇ ಅವುಗಳ ತಬ್ಬಿಕೊಂಡು ಆ ಸಿನಗುವಾಸನೆಯ ಸವಿಯಲ್ಲೇ ನಿದ್ರೆಗೆ ಜಾರುತ್ತಿದ್ದುದು. ಆದರೆ ಬೆಳಗಾಗೆದ್ದು ನೋಡುವಾಗ ಮಾತ್ರ ಅದು ಹೇಗೋ ಅಮ್ಮನ ಕಂಬಳಿಯಿಂದಲೇ ಹೊರಗೆ ಇಣುಕುತ್ತಿದ್ದುದು! ಈ ಎಲ್ಲ ಸವಿನೆನಪುಗಳ ಬಿಟ್ಟು ಮೂಕ ಬಲಿಪಶುವಿನಂತೆ ಇನ್ನೆಲ್ಲಿಗೋ ಒತ್ತಾಯಪೂರ್ವಕವಾಗಿ ಹೋಗುವಂತಿತ್ತು ನನ್ನ ಸ್ಥಿತಿ.

ಆದರೆ ಹೋಗದೆ ವಿಧಿಯಿಲ್ಲ. ಹೆತ್ತವರ ನಿರ್ಲಕ್ಷ್ಯ, ಸುತ್ತಲಿನವರ ಸಸಾರಗಳ ಸಹಿಸಲಾಗದೆ ಇರುವುದಕ್ಕಾದರೂ ಊರು ಬಿಡಲೇಬೇಕಿತ್ತು. ಆದೆ ನನ್ನ ವಿಧಿ. ಹೀಗಾಗಿ ನಾನು ನನ್ನ ನಾಲು ಜೊತೆ ಅಂಗಿ-ಚಡ್ಡಿಗಳ ಜೊತೆ ಬೈರಾಸು ಒಂದೆರಡು ಬಹುಮಾನವಾಗಿ ಬಂದಿದ್ದ ಪುಸ್ತಕಗಳನ್ನು ಜತನವಾಗಿ ಬಟ್ಟೆಯ ಚೀಲದಲ್ಲಿಟ್ಟುಕೊಂಡು, ಕಿತ್ತುಹೋಗಿದ್ದ ಬಾರನ್ನು ಕಳೆದ ವಾರವಷ್ಟೆ ಬದಲಿಸಿದ್ದ ನನ್ನವೆ ಹಳೆಯ ಹವಾಯಿ ಚಪ್ಪಲಿಗಳನ್ನು ಮೆಟ್ಟಿಕೊಂಡು (ನನಗಾಗ ಪದೆಪದೆ ಚಪ್ಪಲಿ ಕೊಡಿಸುವವರ್ಯಾರೂ ಇರಲಿಲ್ಲ, ಹೆಚ್ಚೆಂದರೆ ಹರಿದ ಚಪ್ಪಲಿಗೆ ಬಾರು ಹಾಕಿಸಿ ಕೊಡುತ್ತಿದ್ದರು ಅಷ್ಟೆ!) ಅಜ್ಜನ ಬೆನ್ನು ಹಿಡಿದು ಊರು ಬಿಟ್ಟೆ. ದುರಂತವೆಂದರೆ ಎರಡುದಿನ ಹಿಂದಿನವರೆಗೂ ನನ್ನ ಈ ಗಡಿಪಾರಿನ ವಿಷಯ ಸ್ವತಃ ನನಗೆ ಗೊತ್ತೇ ಇರಲಿಲ್ಲ! ಗೊತ್ತಾದ ನಂತರದ ಕಡೆಯ ಎರಡು ದಿನಗಳು ವಿಪರೀತ ಮಂಕಾಗಿದ್ದೆ ಹಾಗು ಬೆಳಗ್ಗೆ ಮಲಗಿದ್ದವ ಏಳುವಾಗ ದಿಂಬು ಅದು ಏಕೋ ಒದ್ದೆಯಾಗಿರುತಿತ್ತು.

ಒಮ್ಮೆ ನೋಡಿದರೆ ಮತ್ತೊಮ್ಮೆ... ಮತ್ತೆ ನೋಡಿದರೆ ಮಗದೊಮ್ಮೆ...





ಒಂಟೆತ್ತಿನ ಗಾಡಿಯ ಮೇಲೆ ಎರಡೂ ಪಕ್ಕ ಜೋತು ಬಿದ್ದ ಪೋಸ್ಟರ್ ಗಳ ಸಂದಿಯಲ್ಲಿ ಸಿಕ್ಕಿಸಿದ ಡೈನಮೋ ಚಾಲಿತ ಸ್ಪೀಕರಿನಲ್ಲಿ ಫಕೀರನ ಕೀರಲು ಧ್ವನಿ ಮೂರು ದಿಕ್ಕಿಗೂ ಮಾರ್ದನಿಸಿ ಕಿವಿಯ ಮೇಲೆ ಬಿದ್ದಾಗ ಬಾಲ್ಯದಲ್ಲಿ ಚಡ್ಡಿ ಪೈಲ್ವಾನರಾಗಿದ್ದ ನಮಗೆಲ್ಲರಿಗೂ ಇಹಪರದ ಅರಿವು ಕ್ಷಣಕಾಲ ಮರೆತು ಹೋಗುತಿತ್ತು. "ಒಮ್ಮೆ ನೋಡಿದರೆ ಮತ್ತೊಮ್ಮೆ ...ಮತ್ತೆ ನೋಡಿದರೆ ಮಗದೊಮ್ಮೆ..ಹೀಗೆ ಬಾರಿ ಬಾರಿಗೂ ನೋಡಲೇ.... ಬೇಕೆನಿಸುವ ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ ಮಹೋನ್ನತ {ಅದೆಷ್ಟೇ ಕಳಪೆ ಸೀ-ಗ್ರೇಡಿನದಾಗಿದ್ದರೂ!} ಕನ್ನಡ ಚಲನಚಿತ್ರ ನಿಮ್ಮ ನೆಚ್ಚಿನ (?!) ವೆಂಕಟೇಶ್ವರ ಚಿತ್ರಮಂದಿರದಲ್ಲಿ........ನೋಡಲು ಮರೆಯದಿರಿ..... ಮರೆತು ನಿರಾಶರಾಗದಿರಿ!" ಎಂಬ ಫುಲ್'ಸ್ಟಾಪ್, ಕಾಮಾ ಒಂದೂ ಇಲ್ಲದ ಉದ್ಘೋಷ ಕಿವಿಯಂಚಿಗೆ ತಲಪುತ್ತಲೇ ಮನಸ್ಸು ಹೆಂಡ ಕುಡುಕನಿಗೆ ಬಾರ್ ಎದುರಾದಾಗ ಆಗುವಂತೆ ಮನಸು ಚಡಪಡಿಸಿ ಹೋಗುತ್ತಿತ್ತು! ಯಾವಾಗ ಎದ್ದು ಆ ಬಂಡಿ ಹಿಂದೆ ಓಡಲಿಲ್ಲ. ಒಂಚೂರೂ ಅರ್ಥವಾಗದಿದ್ದರೂ ಫಕೀರ ಎಸೆಯುತ್ತಿದ್ದ "ಮಹೋನ್ನತ ಕನ್ನಡ ಚಲನಚಿತ್ರ"ದ(?) ಹ್ಯಾಂಡ್'ಬಿಲ್ ಸಂಪಾದಿಸಿ ಹಿಡಿಯಲಿಲ್ಲ.... ಎಂಬ ಉಮೇದು ಹುಚ್ಚಿನಂತೆ ಉಕ್ಕೇರಿ ಬಿಡುತ್ತಿತ್ತು. ನನ್ನಂತೆ ಅವನ ಮೋಹಕ(?) ಸ್ವರ ಮಾಧುರ್ಯಕ್ಕೆ ಮನಸೋತ ನನ್ನದೇ ವಯಸ್ಸಿನ ಇನ್ನಿತರ ಪ್ರತಿಸ್ಪರ್ಧಿಗಳ ಪೈಪೋಟಿಯೂ ತಡವಾದಂತೆಲ್ಲ ಹೆಚ್ಚುವ ಸಹಜ ಸಾಧ್ಯತೆಯೂ ಇರುವುದರಿಂದ ಈ ತಹತಹಿಕೆ-ಆತಂಕ ಸಹಜ.



ಫಕೀರ ನಮ್ಮೂರಿನ ಏಕಾಮೆದ್ವಿತೀಯ ಶ್ರೀವೆಂಕಟೇಶ್ವರ ಚಿತ್ರಮಂದಿರದ ಗೇಟ್ ಕೀಪರ್ ಆಗಿದ್ದವ. ಸಮಯಕ್ಕೆ ತಕ್ಕಂತೆ ಟಿಕೆಟ್ ಮಾರಾಟ, ಸಿನೆಮ ಪ್ರಚಾರಕ, ಅಗತ್ಯಬಿದ್ದರೆ ಉದ್ದನೆಕೋಲಿನಿಂದ ಅರ್ಧಕ್ಕೆ ಎದ್ದುನಿಂತ ಪರದೆಯನ್ನ ಪೂರ್ತಿ ಎತ್ತಿ ಸರಿಸೋದು ಮಾಡುತ್ತಾ ಒಟ್ಟಾರೆ ಆಲ್ ಇನ್ ವನ್ ಆಗಿದ್ದ. ಪುಂಗಿಯ ನಾದಕ್ಕೆ ಮನ ಸೋಲುವ ಮಿಡಿನಾಗರಗಳಂತಹ ನನ್ನಂತ ಅನೇಕ ಅಭಿಮಾನಿಗಳೂ ಅವನಿಗಿದ್ದೆವು ಎಂಬುದೂ ಸತ್ಯ. ಅವನ ಗಾಡಿ ಸಿಂಗಾರಗೊಂದು ಬೀದಿಗಿಳಿದರೆ ನಮ್ಮ ನಿರೀಕ್ಷೆ ಗರಿಗೆದರುತ್ತಿತ್ತು. ಅವನ ವಿವರಣೆ ಹಾಗೂ ಧ್ವನಿಯ ಗುಣಮಟ್ಟ ಚಿತ್ರಗಳಲ್ಲಿ ನಟಿಸಿರೋ ನಟರ ಇಮೇಜಿಗೆ ತಕ್ಕಂತೆ ಏರಿಳಿಯುತ್ತ ಬದಲಾಗುತ್ತಿತ್ತು. ಪದ್ಮಭೂಷಣ ಡಾ,ರಾಜಕುಮಾರ್, ಸಾಹಸಸಿಂಹ ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಶ್, ಪ್ರಣಯರಾಜ ಶ್ರೀನಾಥ್, ಕ್ರೇಜಿಸ್ಟಾರ್ ರವಿಚಂದ್ರನ್, ಮಿನುಗುತಾರೆ ಕಲ್ಪನಾ, ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್, ಕನಸಿನ ರಾಣಿ ಮಾಲಾಶ್ರಿ ಇವರೆಲ್ಲ ನನಗೆ ಮೊದಲಿಗೆ ಪರಿಚಿತರಾಗಿದ್ದು ಅದೇ ಫಕೀರಣ್ಣನ ಕ್ರಪೆಯಿಂದ!



ಅವನೊಂಥರಾ ತೀರ್ಥಹಳ್ಳಿಯ ಪಾಲಿನ ಕಿಂದರಿಜೋಗಿ. ಹಾಗೆ ನೋಡಿದರೆ ಆಗ ನಮ್ಮೂರಿನಲ್ಲಿ ಇನ್ನೂ ಒಂದು ಟಾಕೀಸು ಎಂಬ ಕಳ್ಳ ಹೆಸರಿನ ಜೈಶಂಕರ್ ಟೆಂಟು ಇತ್ತು. ಆದರೆ ಆಕರ್ಷಣೆಯ ಕೇಂದ್ರ ಮಾತ್ರ ಅವತ್ತೂ ವೆಂಕಟೇಶ್ವರನೇ-ಇವತ್ತೂ ಅವನೇ... ಅಂದು ಅದರ ತೂಕ ಇಂದಿಗಿಂತ ಚೂರು ಹೆಚ್ಚೇ ಇತ್ತು, ಏಕೆಂದರೆ ಮೂಗಿನಲ್ಲಿ ಮಾತನಾಡೋ ಫಕೀರ ಅಲ್ಲಿದ್ದ!




ನಮೋ ವೆಂಕಟೇಶಾ.....



ಅಳಿದ ಊರಿಗೆ ಉಳಿದವನೆ ಗೌಡ ಅಂತನ್ನಿ ಅಥವಾ ಕರುಡರೂರಿನಲ್ಲಿ ಒಕ್ಕಣ್ಣನೆ ಹೀರೋ ಎಂತಾದರೂ ಅನ್ನಿ ಒಟ್ಟಿನಲ್ಲಿ ತೀರ್ಥಹಳ್ಳಿಯಲ್ಲಿ ವೆಂಕಟೇಶ್ವರ ಚಿತ್ರಮಂದಿರಕ್ಕೆ ಎದುರಾಳಿಗಳಂತೂ ಇರಲೇಇಲ್ಲ, ಇಪ್ಪತ್ತೆರಡು ವರ್ಷಗಳ ಹಿಂದೆ ವಿನಾಯಕ ಟಾಕೀಸು ಹುಟ್ಟುವತನಕ! ಸಗಣಿ ಸಾರಿಸಿದ ನೆಲ-ಸರ್ವರಿಗೂ ಸಮಪಾಲು ಎಂಬಂತೆ ಉದ್ದಾನುದ್ದ ಪಟ್ಟಿ ಹೊಡೆದ ಬೆಂಚುಗಳಿದ್ದ ಜೈಶಂಕರ್ ಎಂಬ ಟಾಕೀಸ್ ಎಂಬ ಆರೋಪ ಹೊತ್ತ ಟೆಂಟ್.ಸಿಮೆಂಟಿನ ನೆಲ-ಎರಡೆರಡು ವರ್ಗ ಜೋತೆಗೆರಡು ಬಾಲ್ಕನಿಯೆಂಬ ಡಬ್ಬಗಳನ್ನು ಹೊಂದಿದ್ದ ವೆಂಕಟೇಶ್ವರದ ಮುಂದೆ ಮಂಕೋಮಂಕು.


ಚಿತ್ರವೊಂದು ಆರಂಭವಾಗುವ ಮುನ್ನ "ನಮೋ ವೆಂಕಟೇಶ"ದ ಹಿನ್ನೆಲೆಯಲ್ಲಿ ಬೆಳ್ಳಿತೆರೆಯ ಮೇಲಿನ ಪರದೆ ಮೇಲೇರುತ್ತಿತ್ತಾದರೂ ಪರದೆ ತುದಿ ತಲುಪುವಾಗ ಆ ಹಾಡು ಪೂರ್ತಿಯಾಗುವ ಮೊದಲೆ ಬಂದಾಗಿ "ಡಿಸ್ಕೋ ಡ್ಯಾನ್ಸರ್"ನ (ಮಿಥುನ್ ಚಕ್ರವರ್ತಿಯ ಆ ಚಿತ್ರ ಆ ಕಾಲಕ್ಕೆ ಸೂಪರ್ ಹಿಟ್ ಆಗಿದ್ದು ಯುವಕರನ್ನು ಸೆಳೆದಿತ್ತು) "ಜಿಮ್ಮಿ ಜಿಮ್ಮಿ ಜಿಮ್ಮಿ ಆಜಾ ಆಜಾ..." ನಾಜಿಯ ಹಸನ್ ಧ್ವನಿಯಲ್ಲಿ ತೇಲಿಬರುತ್ತಿದ್ದ ಹಾಗೆ "ಧೂಮಪಾನ ಆರೋಗ್ಯಕ್ಕೆ ಹಾನಿಕರ" "ಬೀಡಿ-ಸಿಗರೇಟು-ಚುಟ್ಟ ವಗೈರೆ ಸೇದುವುದನ್ನು ಖಡ್ಡಾಯವಾಗಿ ನಿಷೇಧಿಸಲಾಗಿದೆ" (ಈ ವಗೈರೆ ಅಂದರೆ ಏನು? ಎಂದು ಬಾಲ್ಯದುದ್ದಕ್ಕೂ ನಾವೆಲ್ಲ ಆಗ ತಲೆ ಕೆಡಿಸಿಕೊಳ್ಳುತ್ತಿದ್ದೆವು!) ಮುಂತಾದ ಅಣಿಮುತ್ತುಗಳ ಸ್ಲೈಡ್ ಬಂದು.....ಆನಂತರ ಮುಂಬರುವ ಚಿತ್ರಗಳ ಸ್ಲೈಡ್ ಬರುವುದನ್ನೇ ಜಾತಕಪಕ್ಷಿಗಳಂತೆ ಕಾತರದಿಂದ ಕಾಯುತ್ತಿದ್ದೆವು. ಆನಂತರ ಬರುತ್ತಿದ್ದುದೆ ನಾವೆಲ್ಲರೂ ಎಷ್ಟು ರೀಲ್ ಎಂದು ನೋಡಿ ಹೇಳಲು ಕಾಯುತ್ತಿದ್ದ ಸೆನ್ಸಾರ್ ಸರ್ಟಿಫಿಕೆಟ್. ಇದೆಲ್ಲ ಆಗುವಾಗಲೇ ಉರಿಯುತ್ತಿದ್ದ ಮೂರು-ಮತ್ತೊಂದು ಲೈಟುಗಳು ಕುಗುರುವವರಂತೆ ಉದಾಸೀನದಿಂದ ಕಣ್ಣು ಮುಚ್ಚುತಿದ್ದವು. ಅಲ್ಲಿಗೆ ನಮ್ಮ ಕಲ್ಪನೆ ಊಹೆ, ಮುಂಬರುವ ಚಿತ್ರಗಳ ನೋಡುವ ಭವಿಷ್ಯದ ಯೋಜನೆಯ ಮನೋವ್ಯಾಪಾರಗಳೆಲ್ಲ ಮುಗಿದು ಕನಸಿನ ಲೋಕಕ್ಕೆ ಜಾರಿಕೊಳ್ಳುತಿದ್ದೆವು.

ಇನ್ನೇನು ಚಿತ್ರದ ರೋಮಾಂಚಕಾರಿ ಸೀನ್ ಬರಬೇಕು ತಟ್ಟನೆ ಕರೆಂಟ್ ಕೈಕೊಟ್ಟು ಬಿಡುತ್ತಿತ್ತು! ಇದು ಯಾವಾಗಲೂ ಹೀಗೆ... ಎಲ್ಲರೂ ಮನಸಿಟ್ಟು ನೋಡುತ್ತಿರುವಾಗಲೆ ರೀಲ್ ಕಟ್ ಆಗೋದೊ ಇಲ್ಲ ಕರೆಂಟ್ ಕೈಕೊಡೋದೊ ಆಗಿ ಟಾಕೀಸ್ ಒಳಗೆ ಕುಳಿತ ಸಭ್ಯ ಪ್ರೇಕ್ಷಕ ಪ್ರಭುಗಳು ಫಕ್ಕನೆ ಅಸಭ್ಯವಾಗಿ ಫಕೀರನ ಅಮ್ಮ -ಅಕ್ಕನ್ನನ್ನೂ ಬಿಡದೆ ನಿವಾಳಿಸಿ ಕೂಗೋದು... ಕೂಡಲೆ ಅವ ಓಡಿಹೋಗಿ ಜನರೇಟರ್ ಆನ್ ಮಾಡಿ ಆ ಭೀಕರ ಹಿನ್ನೆಲೆ ಸದ್ದಿನೊಂದಿಗೆ ಮತ್ತೆ ನಿಂತ ರೀಲೋಡಿಸುವುದು... ಪುನಃ ಅಲ್ಲಿಂದಲೆ ಶುರುವಾಗೋ ಸೀನಿನಲ್ಲಿ ಎಲ್ಲರೂ ಪುಂಗಿಗೆ ಮನಸೋತ ಹಾವಿನಂತೆ ತನ್ಮಯರಾಗೋದು..ಇವೆಲ್ಲ ಸಂಪ್ರದಾಯದಂತೆ ನಡೆದುಹೊಗುತಿತ್ತು. ನಿತ್ಯ ನಡೆಯುವ ಈ ಜಂಜಾಟಗಳನ್ನೆಲ್ಲ ಫಕೀರನಾಗಲೀ ಪ್ರೆಕ್ಷಕರಾಗಲೀ ನಿತ್ಯದ ಅಭ್ಯಾಸ ಬಲದಿಂದ ಎಂಬಂತೆ ತಲೆಕೆಡಿಸಿಕೊಳ್ಳದೆ ಅನುಭವಿಸುತ್ತಿದ್ದರು!



ನೋಡಲು ಮರೆಯದಿರಿ. ಮರೆತು ನಿರಾಶರಾಗದಿರಿ....



ಕಾಲ ಕಳೆದಂತೆ ಬದಲಾವಣೆಯ ಗಾಳಿ ತೀರ್ಥಹಳ್ಳಿಯಲ್ಲೂ ಬೀಸಿತಲ್ಲ, ಫಕೀರನ ಒಂಟೆತ್ತಿನ ಜಾಗಕ್ಕೆ ಆಟೋರಿಕ್ಷಾ ಆಧುನಿಕತೆಯ ಸ್ಪರ್ಶ ನೀಡಿತು. ಸೋಮವಾರ ತೀರ್ಥಹಳ್ಳಿಯಲ್ಲಿ ಸಂತೆ ಹೀಗಾಗಿ ಬೇರೆಡೆಯಲ್ಲಿ ಶುಕ್ರವಾರ ಸಿನೆಮಾಗಳಿಗೆ ಬಿಡುಗಡೆಯ ಭಾಗ್ಯ ಸಿಕ್ಕರೆ ಇಲ್ಲಿ ಮಾತ್ರ ಸೋಮವಾರ ಮುಂಬರುವ ಸಿನೆಮಾಗಳನ್ನು ನೋಡಬಹುದಾಗಿತ್ತು. ಹಾಗಂತ ಹೊಸ ಚಿತ್ರಗಳೇನು ದಾಂಗುಡಿಯಿಟ್ಟು ಬರುತ್ತಿರಲಿಲ್ಲ. ಅಲ್ಲಿಯ ಮಟ್ಟಿಗೆ ಹೊಸತು ಎಂದರೆ ಕೇವಲ ಎರಡು ವರ್ಷದ ಹಿಂದೆ ತೆರೆಕಂಡ ಚಿತ್ರಗಲಷ್ಟೇ. ಟಿವಿ ಲಭ್ಯತೆ ಮರಳುಗಾಡಿನ ಓಯಸಿಸ್ ಆ ದಿನಗಳಲ್ಲಿ, ಮನರಂಜನೆಗೆ ಬರಗೆಟ್ಟವರಂತೆ ಟಾಕೀಸಿನ ಸಿನೆಮಗಳನ್ನೆ ನೆಚ್ಚಿಕೊಂಡಿದ್ದ ತೀರ್ಥಹಳ್ಳಿ ಸುತ್ತ-ಮುತ್ತಲಿನವರಿಗೆ ಈ ಹಳಸಲು ಸರಕೆ ಮ್ರಷ್ಟಾನ್ನವಾಗಿತ್ತು. ಆಟೋ ಬಂದಮೇಲೆ ಪ್ರಚಾರದ ಖದರೇ ಬೇರೆಯಾಯ್ತು. ಹೊಸ ಸಿನೆಮಾ ಬಂದ ಮೊದಲದಿನ ಪೇಟೆಯಲ್ಲಿ , ಇನ್ನುಳಿದ ದಿನಗಳಲ್ಲಿ ಮಂಡಗದ್ದೆ, ಕೋಣಂದೂರು, ಮೇಗರವಳ್ಳಿ, ದೇವಂಗಿ ಸಮೀಪದ ಹಳ್ಳಿಗಳಲ್ಲೂ ಫಕೀರನ "ಪ್ರತೀ ದಿನ ಕೇವಲ ಮೂರು ದೇಖಾವೆಗಳು...ನೋಡಲು ಮರೆಯದಿರಿ,ಮರೆತು ನಿರಾಶರಾಗದಿರಿ" ಎಂಬ 'ಅಮೃತವಾಣಿ' ಎಡೆಬಿಡದೆ ಮೊಳಗುವಂತಾಯಿತು.



ಇನ್ನು ಸಂತೆಗೆ ಬಂದ ಜನ ಮರಳಿ ಅವರವರ ಊರಿಗೆ ಮರಳುವ ಮುನ್ನ ಟಿಕೇಟ್ ಇಲ್ಲದ ಇನ್ನೊಂದು ಪುಕ್ಕಟೆ ಮನರಂಜನೆಯೂ ಕಾದಿರುತಿತ್ತು. ಊರಿನ ಹೃದಯ ಭಾಗವಾದ ಗಾಂಧಿಚೌಕದಲ್ಲಿ ನಿಂತಿರುತ್ತಿದ್ದ ಖಾದರ್ ಸಾಬರ ಮೂರುಮಾರ್ಕಿನ ಬೀಡಿಗಳ ಪ್ರಚಾರದ ವ್ಯಾನ್ ಮೇಲೆ ಮಿರಿಮಿರಿ ಸ್ಕರ್ಟ್-ಟೈಟ್ ಪ್ಯಾಂಟ್ ಹಾಕಿದ್ದ ಹೆಣ್ಣು ವೇಷದ ದಿಲೀಪ -ಮತ್ತವನ ಹೀರೋನ ಕಾಂಬಿನೇಶನ್'ನಲ್ಲಿ "ಚಳಿಚಳಿ ತಾಳೆನು ಈ ಚಳಿಯ" (ನಿಜವಾಗಿಯೂ ಆಗ ಚಳಿ ಇರುತ್ತಿತ್ತು!),"ಪ್ರೀತಿಯೇ ನನ್ನುಸಿರೂ" "ಯಾರ್ ಬಿನ ಚೇನ್ ಕಹಾನ್ ರೆ? " "ಡ್ಯಾನ್ಸ್ ವಿತ್ ಮೀ..ಮೇರಿ ಮೇರಿ ಡಿಸ್ಕೋ" "ಮೇರಿ ಮೇರಿ ಮೇರಿ ಐ ಲವ್ ಯೂ" ಮುಂತಾದ ಡಿಸ್ಕೋ ನಂಬರ್'ಗಳಿಗೆ ಮಾದಕ ನ್ರತ್ಯವಿರುತ್ತಿತ್ತು. ಬಪ್ಪಿ ಲಹರಿಯ ಭಕ್ತರನೇಕರು ಆ ಪೀಳಿಗೆಯ ಯುವಕರಾಗಿದ್ದರಿಂದ ಈ ಬಹಿರಂಗ ಲೈವ್ ಬ್ಯಾಂಡ್(!) ನೋಡಲು ಕಲಾರಸಿಕರ (?) ಹಿಂಡೇ ಅಲ್ಲಿ ನೆರೆದಿರುತ್ತಿದ್ದು ಈ ಮಾದಕ ನೃತ್ಯದ ನಡುವೆ ಅವನ ಮೋಹಕ ಬೆರಳುಗಳು ಎಸೆಯಿತ್ತಿದ್ದ ಮೂರೆಮೂರು ಬೀಡಿಗಳ ಸ್ಯಾಂಪಲ್ ಬೀಡಿಕಟ್ಟಿಗಾಗಿ ಅಕ್ಷರಶಃ ಪ್ರೇಕ್ಷಕ ಪ್ರಭುಗಳ ನಡುವೆ ಹೊಯ್-ಕೈ ಮಟ್ಟಿನ ಪೈಪೋಟಿ ಏರ್ಪಡುತ್ತಿತ್ತು, ಇಂತಹ ಉನ್ಮತ್ತ ಕಲಾರಸಿಕರನ್ನು ನಿಯಂತ್ರಿಸಲು ಒಬ್ಬ ಲಾಠಿಧಾರಿ ಪೊಲೀಸ್ ಪೇದೆ ಅಲ್ಲಿ ಹಾಜರಿರುತ್ತಿದ್ದ ಹಾಗು ಸುಂದರಿಯರನ್ನೆಲ್ಲ ಮೀರಿಸುವಂತೆ ಮಿಂಚುತ್ತಿದ್ದ ದಿಲೀಪನ ಮಾದಕ(?!) ದೇಹಸಿರಿಯನ್ನ ಹಸಿದ ಕಣ್ಣುಗಳಿಂದ ನೋಡುವುದರಲ್ಲೇ ಅವನೂ ಕರ್ತವ್ಯ ಮರೆತು ಮೈಮರೆಯುತ್ತಿದ್ದ. ದಿಲೀಪ ಹೆಣ್ಣು ವೇಷದ ಗಂಡು ಎಂಬ ಬಹಿರಂಗ ಸತ್ಯ ಅಲ್ಲಿ ನೆರೆದವರಿಗೆಲ್ಲ ಸ್ಪಷ್ಟವಾಗಿ ಗೊತ್ತಿದ್ದರೂ ಕಲೆಯ (!) ಆಸ್ವಾದನೆಯಲ್ಲಿ ನೆರೆದವರ್ಯಾರೂ ಹಿಂದೆ ಬೀಳುತ್ತಿರಲಿಲ್ಲ. ಕಟ್ಟ ಕಡೆಯ "ಐಯಾಮ್ ಎ ಡಿಸ್ಕೋ ಡ್ಯಾನ್ಸರ್" ಕುಣಿತ ನೋಡದೆ ಜಾಗ ಖಾಲಿ ಮಾಡುತ್ತಲೂ ಇರಲಿಲ್ಲ! ದಿಲೀಪನ ನಶೆ ಹೆಚ್ಚಾದ ಅವನ ಕೆಲವು ಕಟ್ಟಾ ಅಭಿಮಾನಿಗಳು ಅವ ವ್ಯಾನ್ ನಿಂದಿಳಿದು ಚೌಕದ ಕಟ್ಟೆಯ ಮೇಲೆ ಅದೇ ಮೂರು ಮಾರ್ಕಿನ ಬೀಡಿ ಸೇದುತ್ತ ಕುಳಿತಿರುವುದನ್ನು ಬರಗೆಟ್ಟವರಂತೆ ಆಸೆ ಕಂಗಳಿಂದ ನೋಡುತ್ತಿದ್ದರು!



ಇಂದು ಫಕೀರನೂ ಇಲ್ಲ,ಖಾದರ್ ಸಾಬರೂ ಇಲ್ಲ, ಮೂರು ಮಾರ್ಕಿನ ಬೀಡಿಗಳೂ ಇಲ್ಲ ಹಾಗು ವ್ಯಾನ್ ಮೇಲೆ ದಿಲೀಪನ ಮಾದಕ ನ್ರತ್ಯವೂ ಇಲ್ಲ. ತೀರ್ಥಹಳ್ಳಿಯ ಇತಿಹಾಸವಾಗಿ ಹಳೆಯ ಪುಟಗಳ ಸಾಲಿಗೆ ಇವೆಲ್ಲವೂ ಸೇರಿ ಹೋಗಿವೆ. ಅಂದಿದ್ದ ಜೀವಂತ ತೀರ್ಥಹಳ್ಳಿ ನಿಜಾರ್ಥದಲ್ಲಿ ಇಂದು ಎಲ್ಲೋ ಕಳೆದು ಹೋಗಿದೆ.



ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......