ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Wednesday, August 27, 2014

ದ್ವಾದಶ ರಾಶಿಗಳ ವಾರ ಭವಿಷ್ಯ


ಮೇಷ : ಶ್ರಾವಣ ಮುಗಿಯುತ್ತಿದ್ದಂತೆ ನಿಮ್ಮ ಸಂತಸದ ದಿನಗಳೂ ಮುಗಿದವು. ವಧಾ ಸ್ಥಾನದಲ್ಲಿ ಇರುವ ಕುಜನ ಕೆಂಗಣ್ಣು ನಿಮ್ಮ ಮೇಲಿದೆ. ಬಿರಿಯಾನಿ ಆಗುವುದನ್ನು ತಪ್ಪಿಸಿಕೊಳ್ಳಲು ನಿತ್ಯವೂ ಕಟುಕ ಹೃದಯ ಪರಿವರ್ತನಾ ಸ್ತೋತ್ರ ಪಠಿಸಿದಲ್ಲಿ ಸಹಾಯವಾಗಬಹುದು. ಉಳಿದಂತೆ ದೇವರೇ ದಿಕ್ಕು.

ವೃಷಭ: ಕೆಟ್ಟಕಾಲ ಬರುತ್ತಾ ಇದೆ. ಮುಂದೆ ಹೋದರೆ ಹಾಯಬೇಡಿ , ಹಿಂದೆ ಬಂದರೆ ಒದೆಯ ಬೇಡಿ. ಚಂಚಲ ಚಂದ್ರ ಘಾತಕ ಸ್ಥಾನದಲ್ಲಿರುವುದರಿಂದ ಮನಸಿನ ಮೇಲೆ ಹಿಡಿತ ಕಳೆದುಕೊಂಡು ಕಂಡವರ ಬೇಲಿ ಹಾರಿ ಮೇಯಲು ಹೋಗದಿರಿ. ನಿಮ್ಮ ಹೆಡೆಮುರಿ ಕಟ್ತಿ ದೊಡ್ಡಿಗೆ ದೂಡುವ ಸಂಭವವಿದೆ. ಒಳಿತ್ತಿಗಾಗಿ ರಾಮಚಂದ್ರಾಪುರದ ಮಠಕ್ಕೆ ಮುಡಿಪಿಟ್ಟು ಪ್ರಾರ್ಥಿಸಿ.

ಮಿಥುನ: ಶುಕ್ರ ಉಚ್ಚನಾಗಿ ೫ನೇ ಮನೆಯಲ್ಲಿರುವುದು ನಿಮ್ಮ ಅದೃಷ್ಟ. ಶ್ರಾವಣ ಮಾಸ ಮುಗಿದರೂ ನಿಮ್ಮ ಒಳ್ಳೆಯದಿನಗಳು ಮುಗಿದಿಲ್ಲ. ಮಲೆನಾಡಿನ ಕಡೆ ಮಳೆ ಇನ್ನೂ ನಿಂತಿಲ್ಲ. ಬೆಚ್ಚಗಿನ ಪ್ರವಾಸಕ್ಕೆ ಸಕಾಲ. ಆದರೂ ಶನಿ ೭ನೆ ಮನೆಯಲ್ಲಿ ಹೊಂಚು ಹಾಕಿ ಕುಳಿತಿರುವುದರಿಂದ ಪಬ್/ಬಾರ್/ಪಾರ್ಕ್ ಗಳಿಗೆ ಹೋಗುವಾಗ ಎಚ್ಚರ. moral ಪೊಲೀಸರ ಕೈಗೆ ಸಿಕ್ಕುಬಿದ್ದಲ್ಲಿ ನಿಮ್ಮ ಮಾನ ಮೂರು ಕಾಸಾಗುವ ಸಾಧ್ಯತೆಗಳಿವೆ.ನಿಮ್ಮಿಬ್ಬರಲ್ಲಿ ಹೆಣ್ಣು ಕತ್ತಿನಲ್ಲಿ ಸದಾ ತಾಳಿ ಧರಿಸುವುದು,ಬುರ್ಕಾ ಧರಿಸುವುದು ಮಾಡಿದಲ್ಲಿ ಶನಿಯ ಕೆಟ್ಟ ದೃಷ್ಟಿ ಕರಗುವ ಭರವಸೆ ಇದೆ. ಗಂಡಿಗೆ ಒದೆ ತಿನ್ನುವುದೇ ಭಾಗ್ಯ.

ಕಟಕ: ಎಲ್ಲೆಂದರಲ್ಲಿ ಚೀನಾ,ಹಾಂಕಾಂಗ್, ಸಿಂಗಾಪುರ್ಗಳಿಗೆ ಏಡಿ ನಿರ್ಯಾತ ಮಾಡುವ ಕಂಪನಿಗಳು ಹುಟ್ಟುತ್ತಿರುವುದು ನಿಮ್ಮ ಸಂತಾನಕ್ಕೆ ಕಂಟಕವಾಗುತ್ತಿದೆ. ಈಗಿರುವ ಕುಜ-ರಾಹು ಸಂಧಿ ಕಳೆದ ನಂತರ ಆ ಕಂಪನಿಗಳೆಲ್ಲಾ ಬಾಗಿಲು ಹಾಕಿ ನಿಮಗೆ ನಿರಾಳವಾಗುತ್ತದೆ. ಅಲ್ಲಿಯವರೆಗೆ ನಿಮ್ಮ ಕುಲದೇವತೆ ಗಂಗೆಯ ಪ್ರಾರ್ಥನೆಯೊಂದೇ ನಿಮಗಿರುವ ಭರವಸೆ.

ಸಿಂಹ: ನಿಮ್ಮ ಸಂಖ್ಯೆ ಕಮ್ಮಿ ಆಗಿರುವುದೇ ನಿಮಗೆ ಶ್ರೀರಕ್ಷೆ. ಕಣ್ಣಲ್ಲಿ ಕಣ್ಣಿಟ್ಟು ನಿಮ್ಮನ್ನು ಕಾಯುತ್ತಾ ಇರುವ ಸರ್ಕಾರ ಇರುವ ತನಕ .. ಶನಿ, ಕುಜ , ರಾಹು , ಕೇತುಗಳು ನಿಮ್ಮ ತಂಟೆಗೆ ಬರವು. ಆದರೂ ಜನ್ಮ ಸ್ಥಾನದ ಗುರು ಮನಸ್ಸಿಗೆ ಆತಂಕ ಉಂಟುಮಾಡುವನು. ಆಗಾಗ ಬೇಟೆಗಾರರ ಕಾಟವಿರುವುದು. ಅತ್ತಿಮರದ ಕೆಳಗೆ ಸತ್ತಂತೆ ಬಿದ್ದು ಗುರುನಾಮ ಜಪಿಸಿ ಬೇಟೆಗಾರರಿಗೆ ನಿರಾಶೆ ಉಂಟು ಮಾಡಿ.

ಕನ್ಯಾ: ಗುರು-ಶುಕ್ರರ ಶುಭ ದೃಷ್ಟಿ ಇದ್ದರೂ ನಿಮ್ಮ ಮೇಲಿನ ದೌರ್ಜನ್ಯ ತಪ್ಪಿಲ್ಲ. ಅಂಕಾಳಮ್ಮನಿಗೆ ಅರ್ಚನೆ ಮಾಡಿದ ಮೆಣಸಿಕಾಯಿಗಳನ್ನು ಪುಡಿಮಾಡಿ ನಿಮ್ಮ ಕೈಚೀಲದಲ್ಲಿ ಅಡಗಿಸಿಟ್ಟುಕೊಳ್ಳಿ.ಉಪಯೋಗಕ್ಕೆ ಬರಬಹುದು. ಗುರುಬಲ ಚೆನ್ನಾಗಿರುವುದರಿಂದ ಕರಾಟೆ ಜೂಡೋ ಕಲಿಯಲು ಸಕಾಲ.

ತುಲಾ: ತುಕ್ಕು ಹಿಡಿಯುವ ಮೊದಲು ಎಣ್ಣೆ ಹಚ್ಚಿಸಿಕೊಳ್ಳಿ. ಎಲೆಕ್ಟ್ರಾನಿಕ್ ತಕ್ಕಡಿಗಳು ಸಂತೆಯಲ್ಲಿ ಉಪಯೋಗವಾಗುವ ಕಾಲ ಇನ್ನೂ ಬಂದಿಲ್ಲ ನಿಶ್ಚಿಂತೆಯಿಂದಿರಿ. ಮಿತ್ರ ಸ್ಥಾನದಲ್ಲಿರುವ ಬುಧ ದೂರಸರಿಯುತ್ತಾ ಇರುವುದರಿಂದ ತೂಕದ ಬಟ್ಟುಗಳ ಜೊತೆ ವಾಗ್ಯುದ್ಧಕ್ಕಿಳಿದಲ್ಲಿ ನಿಮಗೇ ನಷ್ಟ.

ವೃಷ್ಚಿಕ: ಗ್ರಾನೈಟ್ ಉದ್ಯಮ ಬೆಳೆದಂತೆ ಬಂಡೆಗಳ ಸಂದು ಗೊಂದುಗಳು ಇಲ್ಲವಾಗಿ ನಿಮ್ಮ ಆವಾಸಕ್ಕೆ ಸಂಚಾಕಾರ. ಬಂಡೆಯೊಡೆಯಲು ಬಂದವರನ್ನು ಕರುಣೆ ಇಲ್ಲದೆ ಕುಟುಕಿ ಓಡಿಸಿ. ನೀವು ಸತ್ತರೂ ಪರವಾಗಿಲ್ಲ . ನಿಮ್ಮ ಬಲ ಏನೆಂದು ಜಗತ್ತಿಗೇ ತಿಳಿಸಿ.

ಧನು: ಮ್ಯೂಸಿಯಂಗಳಿಂದಲೂ ಮಾಯವಾಗುವ ಕಾಲದಲ್ಲಿ ದೇವರು ಕಣ್ ಬಿಟ್ಟ. ಟಿವಿ ಸೀರಿಯಲ್ಗಳ ಮೂಲಕ ಮರುಹುಟ್ಟು ಪಡೆದ ನಿಮ್ಮ ಅದೃಷ್ಟಕ್ಕೆ ಏನು ಹೇಳುವುದು? ರಾಮ-ಲಕ್ಷ್ಮಣ, ಅರ್ಜುನ , ಕರ್ಣ, ದ್ರೋಣ , ಎಕಲವ್ಯರ ಹೆಸರಿನಲ್ಲಿ ಗುರುವಾರ ಪ್ರಾಣದಾನ ಮಾಡಿ.

ಮಕರ: ಎಚ್ಚರ!! ಸೊಂಟಕ್ಕೆ ನಿಮ್ಮ ಚರ್ಮದಲ್ಲಿ ಮಾಡಿದ ಬೆಲ್ಟ್ ಹಾಕಿಕೊಳ್ಳುವ ಟ್ರೆಂಡ್ ಹಿಂತಿರುಗುತ್ತಾ ಇದೆ. ಸದಾ ನೀರಿನಲ್ಲಿ ಮುಳುಗಿದ್ದರೆ ಕ್ಷೇಮ. ನೀರು ಒಣಗಿಸದಂತೆ ಸೂರ್ಯನಲ್ಲಿ ಪ್ರಾರ್ಥನೆ ಶ್ರೇಯಸ್ಕರ.

ಕುಂಭ: ಕೃಷ್ಣಾಷ್ಟಮಿ ಕಳೆಯಿತು. ಬೆಣ್ಣೆ ಮಡಿಕೆ , ಮೊಸರು ಮಡಿಕೆ ಒಡೆಯುವ ಆಟದ ನೆಪದಲ್ಲಿ ನಿಮ್ಮ ಬಂಧುಗಳ ಮಾರಣ ಹೋಮ ನಡೆಯಿತು. ಅಗಿದ್ದು ಆಯ್ತು. ಹೋದ ಸಂಗಾತಿಗಳು ಹೋದರು. ಉಳಿದವರು ಕೊರಗದೆ ಅರಾಮವಾಗಿ ಮಲಗಿ. ಬೇಸಿಗೆಯಲ್ಲಿ ತಣ್ಣಗಿನ ನೀರು ತುಂಬಲು ನೀವೇ ಗತಿ. ಮೂಷಕನ ಕಾಟದಿಂದ ಅಟ್ಟದ ಮೇಲಿಂದ ಬೀಳುವ ಕೆಟ್ಟಕಾಲ ಬರದಂತೆ ಗಣೇಶನನ್ನು ಪ್ರಾರ್ಥಿಸಿ.

ಮೀನ:ನೀವು ರುಚಿಯಾಗಿ, ಪುಷ್ಟಿಕರವಾಗಿರುವುದೇ ನಿಮ್ಮ ಅಪರಾಧ. ನೀರಿನಲ್ಲಿ ತಿಂದು ಕೊಬ್ಬಿದ್ದನ್ನು ದಡಕ್ಕೆ ಬಂದು ಪ್ರಾಣ ಸಹಿತ ಕಕ್ಕಬೇಕು.ನಿಮ್ಮ ಕರ್ಮ ಅನುಭವಿಸಿ. ಆದರೂ ಜಾಗೃತ ಸ್ಥಾನದಲ್ಲಿರುವ ಕುಜ , ರಾಹು ,ಕೇತುಗಳು ನಿಮ್ಮ ಪ್ರಾಣ ಉಳಿಸಿಯಾರು. ಸಿಕ್ಕ ಸಿಕ್ಕ ಪ್ಲಾಸ್ಟಿಕ್ ಕಸ ಕಡ್ಡಿ ನುಂಗಿ ಹೊಟ್ಟೆಯಲ್ಲಿ ತುಂಬಿಸಿಟ್ಟುಕೊಳ್ಳಿ. ನಿಮ್ಮನ್ನು ಹಿಡಿದು ಕೊಯ್ದವರು ಅದನ್ನು ನೋಡಿ ವಾಕರಿಸಿ ಮತ್ತೆ ನಿಮ್ಮ ಬೇಟೆಗೆ ಸುಳಿಯರು. ನಿಮ್ಮ ಮಕ್ಕಳು ಮರಿಗಳಾದರೂ ಅರಾಮವಾಗಿ ಬದುಕಿಯಾರು.

No comments:

Post a Comment