"..... ನಾನು ಸಾಮಾನ್ಯನಲ್ಲಿ, ಸಾಮಾನ್ಯವ್ಯಕ್ತಿಯಾಗಿ ಬದುಕಬೇಕು...." - ನಾಗೇಶ ಸೂರ್ಯ

ನೀವು “ಲೂಸಿಯ” ಸಿನಿಮಾ ನೋಡಿದ್ದೀರಾ??? ಚಿತ್ರದ ಕೊನೆಯಲ್ಲಿ ಒಂದು ದೃಶ್ಯವಿದೆ. ನಾಯಕ ಒಬ್ಬ ಸ್ಟಾರ್ ನಟ, ಚಾನಲ್ ಒಂದಕ್ಕೆ ಸಂದರ್ಶನ ನೀಡುತ್ತಿದ್ದಾನೆ. ಸಂದರ್ಶಕ ಕೇಳುತ್ತಾನೆ ನಿಮ್ಮ ಕನಸುಗಳೇನು ಅಂತ??? ಆ ನಟ.... ನಾನು ಸಾಮಾನ್ಯನಲ್ಲಿ, ಸಾಮಾನ್ಯವ್ಯಕ್ತಿಯಾಗಿ ಬದುಕಬೇಕು. ನನಗೆ ಜನರುಗಳ ಮಧ್ಯೆ ಕಳೆದುಹೋಗಬೇಕೆನ್ನೋ ಆಸೆ, ರೋಡ್ನಲ್ಲಿ ಪಾನಿಪುರಿ ತಿನ್ನೋ ಆಸೆ, ಬಸ್ ಸ್ಟಾಂಡ್ ನಲ್ಲಿ ಬಸ್ ಗಾಗಿ ಕಾಯೋ ಆಸೆ ಅನ್ನುತ್ತಾನೆ. ಒಳ ಮನಸ್ಸಿನಿಂದ ಆಲಿಸಿದಾಗ ನಿಜಕ್ಕೂ ಅವನ ಮಾತುಗಳು ನಮಗೆ ಆಶ್ಚರ್ಯವೆನಿಸುತ್ತದೆ. ಸಾಮಾನ್ಯ ವ್ಯಕ್ತಿಯಾಗಿದಾಗ ದೊಡ್ಡ, ದೊಡ್ಡ ಕನಸ್ಸುಗಳನ್ನ, ಆಸೆಗಳನ್ನ ಕಾಣುವ ಇವರು ದೊಡ್ಡ ವ್ಯಕ್ತಿಗಳಾದ ಮೇಲೆ ಯಾಕೋ ಚಿಕ್ಕ, ಚಿಕ್ಕ ಕನಸು ಕಾಣುತ್ತಾರೆ!!! ಮತ್ತು ಅದರಲ್ಲೇ ಸುಖವನ್ನ ಹುಡುಕಲು ಬಯಸುತ್ತಾರೆ. ಅದಕ್ಕೆ ಏನೋ ಅಡಿಗರು ಹೇಳಿರೋದು “ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ” ಅಂತ. ಇದು ಇವರೊಬ್ಬರ ಕಥೆಯಲ್ಲ. ನಮ್ಮ ಸಿನಿಮಾದಲ್ಲಿದ್ದು ದೊಡ್ಡ ವ್ಯಕ್ತಿಗಳಾಗಿರೋ ಇನ್ನೂ ಅನೇಕರು ಈ ರೀತಿಯ ಚಿಕ್ಕ, ಚಿಕ್ಕ ಆಸೆಗಳನ್ನ ಕಂಡು ಆ ಆಸೆಗಳನ್ನ ನೆರವೇರಿಸಿಕೊಳ್ಳಲು ಕಷ್ಟ ಪಟ್ಟಿದ್ದಾರೆ ಮತ್ತು ಪಡುತ್ತಲೇ ಇದ್ದಾರೆ.
ಜೀವನದಲ್ಲಿ ಕಷ್ಟಪಟ್ಟು ಒಂದೊಂದೇ ಮೆಟ್ಟಿಲು ಮೇಲೇರಿ ಯಶಸ್ಸು, ಹಣ, ಕೀರ್ತಿ ಎಲ್ಲವನ್ನೂ ಪಡೆದ ನನ್ನ ಗುರು ನಾಗತಿಹಳ್ಳಿ ಚಂದ್ರಶೇಖರ ರವರು ನಾನು ಒಮ್ಮೆ ಅವರ ಊರಿಗೆ ಹೋಗಿ ವಾಪಸ್ಸು ಬರುವಾಗ ರೋಡ್ ಒಂದರಲ್ಲಿ ಗಂಡ ಹೆಂಡತಿ ಶೆಟಲ್ ಕಾಕ್ ಆಡುತ್ತಿರುವುದನ್ನ ನೋಡಿ, ನಾನು ಆ ರೀತಿ ಹೆಂಡತಿ ಜೊತೆ ಆರಮಾಗಿ ಶೆಟ್ಟಲ್ ಕಾಕ್ ಆಡುವ ಆಸೆ ಕಣಯ್ಯ. ಆದರೆ ಏನು ಮಾಡೋದು ಸಾಧ್ಯವಾಗುವುದಿಲ್ಲವೇ??? ಅಂತ ಹೇಳಿ ನೊಂದುಕೊಂಡರು. ದೇಶ ಸುತ್ತಿ ಕೋಶ ಓದಿರೋ ನನ್ನ ಗುರುಗಳಿಗೆ ಇಷ್ಟು ಚಿಕ್ಕ ಆಸೆ ನೆರವೇರಿಸಿಕೊಳ್ಳಲು ಕಷ್ಟನಾ??? ಮನಸ್ಸಿನಲ್ಲೇ ಪ್ರಶ್ನೆ ಕಾಡಲಾರಂಭಿಸಿತು. ವಿಚಿತ್ರ ಅಂದ್ರೆ ಅವರ ಆಸೆ ಈವರೆಗೆ ನೆರವೇರಲು ಸಾಧ್ಯವಾಗಿಲ್ಲ.
ತನ್ನ ಜೀವನದಲ್ಲಿ ಅಂದುಕೊಂಡಿದ್ದಕ್ಕಿಂತ ಸಾವಿರ ಪಟ್ಟು ಹೆಚ್ಚು ಪಡೆದ ಸೂಪರ್ ಸ್ಟಾರ್ ರಜನಿಕಾಂತ್ ರವರಿಗೆ ಮಟ ಮಟ ಮಧ್ಯಾಹ್ನ ಆರಮಾಗಿ ಪಾರ್ಕ್ ನಲ್ಲಿ ಮಲಗಬೇಕೆನ್ನೋ ವಿಚಿತ್ರ ಆಸೆಯಿತ್ತು. ಅದನ್ನ ಅವರೊಮ್ಮೆ ಎಫ್.ಎಮ್ ನಲ್ಲಿ ಹೇಳಿಕೊಂಡಿದ್ದರು. ಒಂದೆರಡು ಸಿನಿಮಾಗಳು ಹಿಟ್ಟಾದ ನಟನೇ ರೋಡ್ ನಲ್ಲಿ ನೆಡೆದಾಡಿದರೆ ಮುತ್ತಿಕೊಳ್ಳುವ ಈ ಕಾಲದಲ್ಲಿ ಅಷ್ಟು ದೊಡ್ಡ ನಟ ಬಂದರೆ ಸುಮ್ಮನಿರುತ್ತಾರಾ??? ಏನು ಮಾಡಬೇಕೆಂದು ತಿಳಿಯದೆ ಎಷ್ಟೋ ವರ್ಷಗಳ ಕಾಲ ಅವರ ಆಸೆ ಹಾಗೆ ಉಳಿದಿತ್ತು. ಕೊನೆಗೆ ಮಾರು ವೇಷದಲ್ಲಿ ಬಂದು ಪಾರ್ಕ್ ನಲ್ಲಿ ಮಲಗಿ ಅವರ ಆಸೆ ನೆರವೇರಿಸಿಕೊಂಡರು.
ಇನ್ನೂ ತನ್ನ ಜೀವಿತಾವಧಿಯಲ್ಲಿ ಎಂದು ತೆರೆಯ ಮೇಲೆ ಸಿಗರೇಟು ಸೇದಿ ಅಭಿನಯಿಸದ ಮೇರು ನಟರೊಬ್ಬರಿಗೆ ನಿಜ ಜೀವನದಲ್ಲಿ ಸಿಗರೇಟು ಸೆದೋ ಅಭ್ಯಾಸವಿತ್ತು (ಯಾವಾಗಲು ಅಲ್ಲ ಆಗೊಮ್ಮೆ, ಈಗೊಮ್ಮೆ). ತನ್ನ ಮನೆಗೆ ಸ್ಕ್ರಿಪ್ಟ್ ಕೆಲಸಕ್ಕೆ ಬರುವ ಬರಹಗಾರರು ಬಿಡುವಿನ ವೇಳೆಯಲ್ಲಿ ಸಿಗರೇಟು ಸೇದುತ್ತಿದ್ದರೆ ನನಗೂ ಒಂದ್ ಕೊಡಿ ಜಮಾಯಿಸ್ಬಿಡ್ತೀನಿ ಅಂತ ಪ್ರೀತಿಯಿಂದ ಕೇಳಿ ಪಡೆದು ಎಲ್ಲೋ ಮೂಲೆಯಲ್ಲಿ ನಿಂತು ಯಾರಿಗೂ ಕಾಣದಾಗೆ ಸೇದುತ್ತಿದ್ದರು. ಆಮೇಲೆ ಬಂದು ನೋಡ್ರಿ ದೇವರು ನನಗೆ ಯಶಸ್ಸು, ಕೀರ್ತಿ, ಹಣ ಎಲ್ಲ ಕೊಟ್ಟಿದ್ರು ಈ ಒಂದ್ ಚಿಕ್ಕ ಆಸೆಯನ್ನ ನೆರವೇರಿಸಿಕೊಳ್ಳೋಕ್ಕೆ ಎಷ್ಟು ಕಷ್ಟ ಪಡ್ತೀನಿ ಅಂತ ಮಗುವಿನಂತೆ ಕೇಳುತ್ತಿದ್ದರು. ಅವರಿಗಿದ್ದ ಜನಮನ್ನಣೆ, ಸ್ಟಾರ್ ವ್ಯಾಲ್ಯು ಕದ್ದು ಸೇದುವಂತೆ ಮಾಡುತ್ತಿತ್ತು.
80ರ ದಶಕದಲ್ಲಿ ನಾಯಕನ ಸರಿಸಮನಾಗಿ ಸ್ಟಾರ್ ವ್ಯಾಲ್ಯು ಹೊಂದಿದ್ದ ಕೆ. ಬಾಲ ಚಂದರ್ ರವರಿಗೆ ರೋಡ್ನಲ್ಲಿ ಕೊನ್ ಐಸ್ಕ್ರೀಮ್ ತಿನ್ನಬೇಕೆನ್ನೋ ಆಸೆ ತುಂಬ ಇತ್ತು. ದಕ್ಷಿಣ ಭಾರತದಲ್ಲೇ ಹೆಸರುಮಾಡಿದ್ದ ಅವರಿಗೆ ಎಲ್ಲಿ ಹೋದರೂ ಅಭಿಮಾನಿಗಳು, ಅದರಲ್ಲೂ ಬೆಂಬಿಡದೆ ಅವಕಾಶ ಕೇಳೋ ಕಲಾವಿದರ ಕಾಟದಿಂದ ಎಲ್ಲಿಯೂ ಈ ಆಸೆ ನೆರವೇರಿಸಿಕೊಳ್ಳಲಾಗಿರಲಿಲ್ಲ. ಕೊನೆಗೆ ಕಮಲಾಸನ್ ಮತ್ತು ರಜನಿಕಾಂತ್ ಅಭಿನಯದ “ನಿನೈತಾಲೇ ಇನಿಕ್ಯುಂ” ಚಿತ್ರದ ಶೂಟಿಂಗ್ಗೆಂದು ಸಿಂಗಾಪುರ್ ಗೆ ಬಂದಾಗ ಖುಷಿಯಿಂದ ಕೊನ್ ಐಸ್ಕ್ರೀಮ್ ತಂದು ರೋಡ್ ನಲ್ಲಿ ಇನ್ನೇನು ತಿನ್ನಬೇಕೆನ್ನುವಷ್ಟರಲ್ಲಿ ಹಿಂದೆಯಿಂದ ಬಂದ ವ್ಯಕ್ತಿಯೊಬ್ಬ ಸಾರ್ ನಾನು ನಿಮ್ಮ ಅಭಿಮಾನಿ ಒಂದೇ ಒಂದು ನಿಮ್ ಸಿನಿಮಾದಲ್ಲಿ ಛಾನ್ಸ್ ಕೊಡಿ ಸಾರ್ ಅಂತ ಕೇಳಿ ಕಾಟ ಕೊಟ್ಟಿದ್ನಂತೆ. ಕೋಪ ಬಂದು ಐಸ್ಕ್ರೀಮ್ ಅಲ್ಲೇ ಬಿಸಾಕಿ ಹೊರಟುಹೋದರಂತೆ ಬಾಲ ಚಂದರ್ ರವರು.
ನೋಡಿ ಭಾರತದಂತಹ ವೈವಿಧ್ಯಮಯ ರಾಷ್ಟ್ರದಲ್ಲಿರೋ ನಾವು ಸೆಲೆಬ್ರಿಟೀಗಳಿಗೆ ಕೊಡುವಷ್ಟು Importance ಇನ್ನಾರಿಗೂ ಕೊಡುವುದಿಲ್ಲ. ಅದು ಸಿನಿಮವೇ ಆಗಿರಬಹುದು, ಕ್ರೀಡೆಯೇ ಆಗಿರಬಹುದು ಅಥವಾ ರಾಜಕಾರಣವೇ ಆಗಿರಬಹುದು. ಈ ಯಾವುದೇ ಕ್ಷೇತ್ರದಲ್ಲಿ ಒಮ್ಮೆ ಹೆಸರು ಮಾಡಿದರೆ ಸಾಕು ಅವರನ್ನ ನಾವು ನೋಡುವ ದೃಷ್ಟಿಕೋನವೇ ಬದಲಾಗಿರುತ್ತದೆ. ಅವರು ನಮ್ಮಂತಯೇ ಸಾಮಾನ್ಯ ವ್ಯಕ್ತಿಗಳು ಅಂದುಕೊಳ್ಳುವುದೇ ಇಲ್ಲ ನಾವು. ಇನ್ನೂ ಇದಕ್ಕೆ ಮೀರಿ ಕೆಲವು ಸೆಲೆಬ್ರಿಟೀಗಳು ನಮ್ಮಂತೆಯೇ ಸಾಮಾನ್ಯವಾಗಿ ಓಡಾಡಿಕೊಂಡಿದ್ದರೆ ಅವರನ್ನ ಮುತ್ತಿಕೊಂಡು, ಚಿತ್ರವಿಚಿತ್ರ ಪ್ರಶ್ನೆಕೇಳಿ, ಅವರ ಸ್ವತಂತ್ರ ಹರಣ ಮಾಡಿ ಮತ್ತೆ ಇನ್ನೆಂದೂ ಓಡಾಡದಂತೆ ಮಾಡಿಬಿಡುತ್ತೇವೆ.

ಈಗ ಹೇಳಿ ಹೆಂಡತಿ ಜೊತೆ ಶೆಟಲ್ ಕಾಕ್ ಆಡೋದು, ಪರ್ಕ್ನಲ್ಲಿ ನೆಮ್ಮದಿಯಾಗಿ ಮಲಗೋದು, ಸಿಗರೇಟು ಸೆದೋದು, ರೋಡ್ ನಲ್ಲಿ ಕೊನ್ ಐಸ್ಕ್ರೀಮ್ ತಿನ್ನೋದು ನಿಮಗೆ ದೊಡ್ಡ ಆಸೆಗಳು ಅನಿಸುತ್ತಾ!!! ದೊಡ್ಡ, ದೊಡ್ಡ ಕನಸುಗಳ ಬೆನ್ನತ್ತುವ ಬರಾಟೆಯಲ್ಲಿ ನಾವು ಚಿಕ್ಕ, ಚಿಕ್ಕ ಸಂತೋಷಗಳನ್ನ ಕಳೆದುಕೊಳ್ಳಬೇಕಾಗುತ್ತೆ. ಇದೇ ಜಗದ ನಿಯಮ. ಇವರನೆಲ್ಲಾ ನೋಡಿದರೆ ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ನನ್ನ ಗೆಳೆಯ ಹೇಳಿದ ಮಾತು ನೆನಪಾಗುತ್ತಿದೆ  “Never hurry to get famous because once you are famous you will definitely regret it” ಅಂತ. ಎಂಥ ವಿಚಿತ್ರ ಅಲ್ವಾ!!!


Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು