Friday, June 17, 2011

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಸೋ! ಎಂದು ಶೃತಿ ಹಿಡಿದು ಸುರಿಯುತಿತ್ತು ||
ಅದಕೇ ಹಿಮ್ಮೇಳವನೆ ಸೂಸಿಪಹ ಸುಳಿಗಾಳಿ
ತೆಂಗು ಗರಿಗಳ ನಡುವೆ ನುಸುಳುತಿತ್ತು ||ಪ||

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ||

ಇಳೆವೆಣ್ಣು ಮೈದೊಳೆದು ಮಕರಂದದರಿಶಣದಿ
ಹೂ ಮುಡಿದು ಮದುಮಗಳ ಹೋಲುತಿತ್ತು ||೨||
ಮೂಡಣದಿ ನೇಸರನ ನಗೆ ಮೊಗದಾ ಶ್ರೀಕಾಂತಿ
ಬಿಳಿಯಾ ಮೋಡದ ಹಿಂದೆ ಹೊಳೆಯುತಿತ್ತು||

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ||

ಹುಲ್ಲೆಸಳು ಹೂಪಕಳೆ ಮುತ್ತು ಹನಿಗಳ ಮಿಂಚು ||೨||
ಸೊಡರಿನಲಿ ಆರತಿಯ ಬೆಳಗುತಿತ್ತು
ಕೊರಲುಕ್ಕಿ ಹಾಡುತಿಹ ಚಿಕ್ಕಪಕ್ಕಿಯ ಬಳಗ ||೨||
ಶುಭಮಸ್ತು ಶುಭಮಸ್ತು ಎನ್ನುತಿತ್ತು||

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ||

ತಳಿರ ತೋರಣದಲ್ಲಿ ಬಳ್ಳಿ ಮಾಡಗಳಲ್ಲಿ
ದುಂಬಿಗಳ ಓಂಕಾರ ಹೊಮ್ಮುತಿತ್ತು ||೨||
ಹಚ್ಚ ಹಸುರಿನ ಪಚ್ಚೆ ನೆಲಗಟ್ಟಿನಂಗಳದಿ
ಚಿಟ್ಟೆ ರಿಂಗಣ ಗುಣಿತ ಹಾಕುತಿತ್ತು||

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ||

ಉಷೆಯ ನುಙ್ಗದಪಿನಲಿ ಹರ್ಷಬಾಷ್ಪಗಳಂತೆ
ಮರದ ಹನಿ ತಟಪಟನೆ ಉದುರುತಿತ್ತು ||೨||
ಸೃಷ್ಠಿಲೀಲೆಯೊಳಿಂತು ತಲ್ಲೀನವಾದ ಮನ
ಮುಂಬಾಳ ಸವಿಗನಸ ನೆನೆಯುತಿತ್ತು||

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಸೋ! ಎಂದು ಶೃತಿ ಹಿಡಿದು ಸುರಿಯುತಿತ್ತು
ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಆ.. ಆ….. ಆ… ಆ…..ಆ.. ಆ….. ಆ….

Get this widget | Track details | eSnips Social DNA


ಗಾಯನ: ಬಿ.ಆರ್.ಛಾಯ
ಸಂಗೀತ: ಸಿ. ಅಶ್ವಥ್
ರಚನೆ: ಚನ್ನವೀರ ಕಣವಿ

No comments:

Post a Comment

ಹೀಗೂ ಇದ್ದರು ನಮ್ಮ ಹೆಮ್ಮೆಯ ಕನ್ನಡ ಸಾಹಿತಿಗಳು - ಸಂಗ್ರಹ

ಗಳಗನಾಥರು ಗಳಗನಾಥರು ಕನ್ನಡದ ಪುಸ್ತಕಗಳನ್ನು ತಲೆಯಲ್ಲಿ ಹೊತ್ತುಕೊಂಡು ಮಾರಾಟ ಮಾಡುತ್ತಿದ್ದ ಪುಣ್ಯಾತ್ಮರು ಇವರು.  ನಿಮ್ಮ ಮನೆಯಲ್ಲಿ ಲಕ್ಷ್ಮಿ ಇದ್ದರೆ ಸಾಲದು, ನಾನು ಸರ...