ಹಲ್ಮಿಡಿ ಶಾಸನ
ಹಲ್ಮಿಡಿ ಒಂದು ಪುಟ್ಟ ಗ್ರಾಮ. ಸುಮಾರು ಮುನ್ನೂರು ಮನೆಗಳು ೧,೨೦೦ ಜನವಸತಿಯುಳ್ಳ ಇನ್ನೂ ನಾಗರಿಕ ಸವಲತ್ತುಗಳು ತಲುಪದೇ ಇರುವ ಗ್ರಾಮ. ಹಾಸನ ಜಿಲ್ಲೆಯ ಉತ್ತರ ತುದಿಯ ಚಿಕ್ಕಮಗಳೂರು ಜಿಲ್ಲೆಯ ಜತೆ ಸೇರುವ ಗಡಿ ಭಾಗದಲ್ಲಿ ಅಂದರೆ ಬೇಲೂರು ತಾಲೂಕಿನ ಉತ್ತರ ಭಾಗದ ಕೊನೆಯಲ್ಲಿ ಈ ಊರು ನೆಲೆಸಿದೆ. ಒಂದೂವರೆ ಸಾವಿರ ವರ್ಷಗಳ ಹಿಂದೆಯೇ ಜನಜೀವನಕ್ಕೆ ಯೋಗ್ಯವಾಗಿ, ಕೆರೆಕಟ್ಟೆಗಳಿಂದ ಕೂಡಿ ವ್ಯವಸಾಯ ಯೋಗ್ಯ ಗದ್ದೆಗಳು ರೂಪುಗೊಂಡು ರಾಜನಿಗೆ ಕಂದಾಯ ಕೊಡುವಷ್ಟು ಮಟ್ಟಿಗೆ ಆಗಲೇ ಈ ಹಳ್ಳಿ ಬೆಳೆದಿತ್ತು. ಸ್ಥಳನಾಮ ಶಾಸನದಲ್ಲಿ ಹಲ್ಮಿಡಿಯನ್ನು ‘ಪಲ್ಮಿಡಿ’ಎಂದು ಕರೆಯಲಾಗಿದೆ. ಒಂದೂವರೆ ಸಾವಿರ ವರ್ಷಗಳ ಹಿಂದೆ ಈ ಊರನ್ನು ಹಾಗೆ ಕರೆಯುತ್ತಿದ್ದರು ಎಂಬುದು ಸ್ಪಷ್ಟ. ಆದರೆ ಇಂದಿನ ಕಂದಾಯ ಇಲಾಖೆಯ ದಾಖಲೆಗಳಲ್ಲಿ ಜನಸಾಮಾನ್ಯರ ಬಾಯಲ್ಲೂ ‘ಹನುಮಿಡಿ’ ಎಂಬ ರೂಪವೂ ಬಳಕೆಯಲ್ಲಿದೆ. ಇಂದು ಕೆಲವರು ‘ಹನುಮಿಡಿ’ ಎಂದು ಉಚ್ಚರಿಸಿದ ಮಾತ್ರಕ್ಕೆ ಆ ಊರಿನ ನಿಜವಾದ ಹೆಸರು ಅದೇ ಇರಬೇಕಿಲ್ಲ. ಸ್ಥಳನಾಮವೂ ಪೀಳಿಗೆಯಿಂದ ಪೀಳಿಗೆಗೆ ರೂಪಾಂತರ ಹೊಂದುತ್ತಾ ಬರುತ್ತದೆಂಬುದು ಸ್ಥಳನಾಮಗಳ ಸಮೀಕ್ಷೆಯಿಂದ ಸಿದ್ಧವಾಗಿದೆ. ಒಂದು ಸ್ಥಳದ ಪುರಾತನ ನಾಮರೂಪ ಮತ್ತು ರೂಪಾಂತರಗಳನ್ನು ತಿಳಿಯಲು ಶಾಸನ ಸಾಹಿತ್ಯವೂ ಅಧಿಕೃತ ಸಾಕ್ಷ್ಯವಾಗಿರುತ್ತದೆ. ಹಲ್ಮಿಡಿ ಶಾಸನದಲ್ಲಿ ಊರಿನ ಹೆಸರು ‘ಪಲ್ಮಿಡಿ’ ಎಂದಿದೆ. ಇದರ ನಂತರದಲ್ಲಿ ಹಾಕಲ್ಪಟ್ಟ ಕ್ರಿ.ಶ. ೫೨೦ರ ಕದಂಬರ ೫ನೇ ರಾ...