Wednesday, November 3, 2021

ಸಂಗ್ರಹ

ಇದು ನನಗೆ ವ್ಯಾಟ್ಸಪ್ ಬಂದ ಮೆಸೇಜ್, ಎಷ್ಟು ಚೆನ್ನಾಗಿ ಬರೆದಿದ್ದಾರೆ ,
ಓದಿದ ನನಗೆ ನಮ್ಮ ಮನೆಯ ಹಳೇ ದೀಪಾವಳಿ ಕಣ್ಣಮುಂದೆ ಬಂದಂತಾಯಿತು 👌👌👌

*ಪ್ಲವನಾಮ ಸಂವತ್ಸರದ* *ದೀಪಾವಳಿ ಹಬ್ಬದ ಆರಂಭದ ದಿನ* ಎಲ್ಲರಿಗೂ ಜಗತ್ತಿಗೂ‌‌‌ ಶುಭವನ್ನು‌ ಹಾರೈಸುತ್ತಾ....
 *ಇಂದು ನೀರು ತುಂಬುವ ಹಬ್ಬ* ಹೌದೇ??  ಹೌದು.
ಆದರೆ ನೀರು ತುಂಬಲು
*ಹಂಡೆ ಇಲ್ಲ. ಕೊಡವಿಲ್ಲ. ಬೋಸಿ ಇಲ್ಲವೇ ಇಲ್ಲ*
ಸುಣ್ಣದ ಪಟ್ಟೆ ಕೆಮ್ಮಣ್ಣು ಇಲ್ಲ. 
*ಹಂಡೆಯ ಸುತ್ತ ಸುತ್ತಲು ಮಾಲಿಂಗನ ಬಳ್ಳಿ* ಇಲ್ಲ. 

ನರಕ ಚತುರ್ದಶಿಯಂದು ಅಭ್ಯಂಗ ಸ್ನಾನಕ್ಕಾಗಿ ಧಗಧಗಿಸುವ ನೀರೊಲೆ ಇಲ್ಲ.
ಸೆಗಣಿ ಕದಡಿದ ನೀರು ಹಾಕಿ ಅಂಗಳ‌ ಸಾರಿಸಿ  ದೊಡ್ಡ ದೊಡ್ಡ ರಂಗೋಲಿ ಇಡುವ ಪೈಪೋಟಿ ಇಲ್ಲ. 
ಅಕ್ಕಿ ನೆನೆಸಿ, ನುಣ್ಣಗೆ ಒರಳಿನಲ್ಲಿ‌ ತಿರುವಿ,  ಹತ್ತಿಯ ತುಂಡಿನ ಸಹಾಯದಿಂದ ಹೊಸ್ತಿಲು, ಮೆಟ್ಟಿಲು ದೇವರ ಮುಂದೆ, ನಡುಮನೆ, ಕೋಣೆ ಕೋಣೆಗಳ ಗೋಡೆ ನೆಲದ ಅಂಚಿನಲ್ಲಿ ..  ಬೆರಳಿನಲ್ಲಿ ಇಡುತ್ತಿದ್ದ ಅಕ್ಕಿಹಿಟ್ಟಿನ ರಂಗೋಲಿ ಇಲ್ಲ...
ಸೆಗಣಿಯಿಂದ ಕೆರಕನನ್ನು ಮಾಡಿ, ಗುಂಡನೆಯ ಚೆಂಡು ಹೂ ಸಿಕ್ಕಿಸಿ, ಮನೆಯ ಪ್ರತಿ ಬಾಗಿಲಿನ ಹೊಸ್ತಿಲಿನ ಅಂಚಿನಲ್ಲಿ ಇಡಲು ಎಷ್ಟೊಮನೆಗಳಿಗೆ ಹೊಸ್ತಿಲೇ ಇಲ್ಲ

ಬೆಳಗಿನ ಜಾವ ಮೂರು ನಾಲ್ಕುಗಂಟೆಗೇ  ಎಣ್ಣೆ ನೀರಿಗಾಗಿ ಎಬ್ಬಿಸುತ್ತಿದ್ದ ಅಮ್ಮ, ನಡು ಮನೆ ಸಾರಿಸಿ ರಂಗೋಲಿ ಇಟ್ಟು ಮಣೆ ಹಾಕಿ ಮಕ್ಕಳನ್ನೆಲ್ಲಾ  ಸಾಲಾಗಿ  ಕೂರಿಸಿ, ಹಣೆಗೆ ಕುಂಕುಮವಿಟ್ಟು, ಬೆಳ್ಳಿಯ ಬಟ್ಟಲಲ್ಲಿ ಎಣ್ಣೆ ತಂದು‌, ಹೂವಿನಿಂದ ನೆತ್ತಿಗೆ ಮೂರುಬಾರಿ ಎಣ್ಣೆ ಇಟ್ಟು, ನಂತರ ತಲೆಗೆಲ್ಲಾ ಎಣ್ಣೆ ಹಚ್ಚಿ ಟಪ ಟಪ  ಬಡಿದು, ಕೈ ಕಾಲ್ಗಳಿಗೂ ಹಚ್ಚಿ   ಎರಡೂ ಕೆನ್ನೆ, ಕೈ ಕಾಲ್ಗಳಿಗೂ ಎಣ್ಣೆಯ ಬೊಟ್ಟಿಟ್ಟು ಆರತಿ ಮಾಡುತ್ತಿದ್ದ... *ಹಬ್ಬದ ನೀರು ಇಬ್ಬರಿಗೆ ಒಂದು ಚೊಂಬು*  ಎಂಬ ಗಾದೆಯಂತೆ  ಶೇಖರಿಸಿಡಲು ಸಾಧ್ಯವಾಗುತ್ತಿದ್ದ ಮಿತ ಪ್ರಮಾಣದ ನೀರಿನಲ್ಲೇ ಎಲ್ಲರಿಗೂ ಸ್ವತಃ ಕೈಯಾರೆ, ಸೌದೆ ಉರಿಯಿಂದ ಕಾಯುತ್ತಿದ್ದ ಹಂಡೆಯಿಂದ ಬೋಸಿಯಲ್ಲಿ ತುಂಬಿಕೊಂಡು ‌ನೀರು ಹಾಕುತ್ತಾ, *ಒಳ್ಳೆಯ ವಿದ್ಯಾಭ್ಯಾಸ ಪಡ್ದು, ಆಯಸ್ಸು ಆರೋಗ್ಯ, ಐಶ್ವರ್ಯ ಸುಖ ಶಾಂತಿಯಿಂದ ನೂರ್ಕಾಲ ಬಾಳು ಮಗು*  ಎಂದು ಪ್ರತಿಯೊಬ್ಬರಿಗೂ ಆಶೀರ್ವದಿಸುತ್ತಿದ್ದ *ಅಮ್ಮ...., *ಪೈಪೋಟಿಯ ಮೇಲೆ  *ನನಗೆ‌ ಮೊದಲು ನೀರು, ನನಗೆ ಮೊದಲು ನೀರು* ಎಂದು ಜಗಳ ಕಾಯುತ್ತಿದ್ದ ನಾವು ಒಡಹುಟ್ಟಿದವರು.....

*ಈಗಿನಂತೆ ೩೬೫ ದಿನವೂ ಯಾವ ಹೊತ್ತಿನಲ್ಲಿ ಬೇಕಾದರೂ ತಂದು ತಿನ್ನ ಬಹುದಾದ, ಒಬ್ಬಟ್ಟು  ಆಂಬೊಡೆ ಕರಿಗಡುಬು ಚಕ್ಕುಲಿ,ಮುಚ್ಚೊರೆ ಕೋಡುಬಳೆ, ಅತ್ರಾಸ, ಎರೆಯಪ್ಪ ಇತ್ಯಾದಿ ಇತ್ಯಾದಿ ಇತ್ಯಾದಿ ...ಊಹೂಂ ....ಅಂದು ಹಬ್ಬದ ದಿನಗಳಲ್ಲಿ ಮಾತ್ರ ಮಾಡುತ್ತಿದ್ದುದರಿಂದ ಹಬ್ಬದ ಪ್ರಮುಖ  ಆಕರ್ಷಣೆಗಳಲ್ಲೊಂದು ವಿಶೇಷ ಭಕ್ಷ್ಯಗಳೂ ಆಗಿದ್ದವಲ್ಲವೇ??,*

*ಧೀಮಂತ ವ್ಯಕ್ತಿತ್ವದ ಆಜಾನುಬಾಹು ಅಪ್ಪ ತಮ್ಮ ಕಂಚಿನ ಕಂಠದಿಂದ ಮಂತ್ರಗಳನ್ನು ಹೇಳುತ್ತಿದ್ದರೆ ಒಂದು ಅಲೌಕಿಕ ವಾತಾವರಣ ಸೃಷ್ಟಿಯಾಗುತ್ತಿತ್ತು*
ನಾವು ಮಕ್ಕಳು ಚಿನುಕುರುಳಿ ಚಟಚಟ ಗುಟ್ಟಿಸುತ್ತಾ ಮತಾಪು ಹಚ್ಚಿ  ಹಿಗ್ಗುತ್ತಿದ್ದೆವು. 
ಸಾಂಗವಾಗಿ, ಸಾವಕಾಶವಾಗಿ ಅಭಿಷೇಕ ಪೂಜೆ ನಡೆದು, ಮಾಡಿದ ಎಲ್ಲಾ ಅಡುಗೆಯ ಸ್ವಲ್ಪ ಭಾಗವನ್ನು ಅಮ್ಮ, ಕುಡಿ ಬಾಳೆ ಎಲೆಯಲ್ಲಿ  ಪಾಂಗಿತವಾಗಿ ಬಡಿಸಿಟ್ಟು ತಂದರೆ, ಅಪ್ಪ ಮಂಡಲ 
ಮಾಡಿ ಎಲ್ಲವನ್ನೂ ಹಣ್ಣು ಕಾಯಿ ತಾಂಬೂಲದ ಜೊತೆ ನೈವೇದ್ಯ ಮಾಡಿ....

ಚಟಪಟ ಪಟಾಕಿಯ ಆಟದಲ್ಲಿ ಮಗ್ನರಾಗಿದ್ದರೂ‌ ಅಡುಗೆ ಮನೆಯಿಂದ ಹೊಮ್ಮುತ್ತಿದ್ದ ತರೆಹಾವರಿ ಭಕ್ಷ್ಯ ಭೋಜ್ಯಗಳ ಸುವಾಸನೆ ಮೂಗೊಡೆಯುತ್ತಿತ್ತು.....

*ಮಂಗಳಾರತಿಗೆ ಬನ್ನಿ* ಎಂಬ ಕರೆಗೇ ಕಾಯುತ್ತಿದ್ದ‌ ನಾವೆಲ್ಲ ಒಳಗೆ ದುಡದುಡನೆ ಧಾವಿಸಿ ಬಂದು ..... *ಅಪ್ಪನ ಉಚ್ಚ ಕಂಠದಿಂದ ಹೊಮ್ಮುತ್ತಿದ್ದ ಮಂತ್ರದೊಂದಿಗೆ ಮಂಗಳಾರತಿ ಮುಗಿದು*.... ನಾವೆಲ್ಲ ಮಂಗಳಾರತಿ ತೆಗೆದುಕೊಂಡು.... ಅಪ್ಪ ದೀರ್ಘದಂಡ ನಮಸ್ಕರಿಸಿದ ಮೇಲೆ.... ನಾವು  ಅಕ್ಕತಂಗಿಯರು, ಅಮ್ಮ,  ತಮ್ಮನೂ ದನಿಗೂಡಿಸಿ ಒಂದಿಷ್ಟು ದೇವರ ನಾಮವನ್ನು ಹಾಡಿ....  ಅಕ್ಷತೆ ಹೂವು ಹಾಕಿ ನಮಸ್ಕರಿಸಿಯಾದ ಮೇಲೆ... ಅಪ್ಪ ಪ್ರಸಾದದ ಹೂ ಕೊಟ್ಟು ಆಶೀರ್ವದಿಸಿ.. ತೀರ್ಥ ಕೊಡುತ್ತಿದ್ದರು.,   ನಾವು ಕಣ್ಣಿಗೊತ್ತಿಕೊಂಡು ತೀರ್ಥ ಸೇವಿಸಿದ ತಕ್ಷಣ,  ಅಮ್ಮ ಮಾಡಿಟ್ಟಿದ್ದ ಆಂಬೊಡೆಯನ್ನೊ ಬೋಂಡವನ್ನೊ  ಒಂದೆರಡನ್ನು ಲಪಟಾಯಿಸಿ ಗಬಕ್ಕೆಂದು ಬಾಯಿಗೆ ಹಾಕಿಕೊಂಡರೆ..... ಆಹಾ!!!! ಆಹಾ!!!!...

 ಕೋಸಂಬರಿ ಪ್ರಿಯರಾದ ನಾನು ಮತ್ತು ನನ್ನ ಅಕ್ಕ ಯಥಾಶಕ್ತಿ ಕೋಸಂಬರಿ ಸೇವೆಯನ್ನೂ ಮಾಡಿಕೊಳ್ಳುತ್ತಿದ್ದೆವು....

ಸಾಲಾಗಿ ಕುಡಿ ಬಾಳೆ ಎಲೆ ಹಾಕಿ,  ಊಟದ ಚಾಪೆ ಹಾಕಿ ... ಅಭಿಗ್ಯಾರ ಮಾಡಿ... ಶಾತ್ರೊಕ್ತವಾಗಿ ಒಂದೊಂದೇ ವ್ಯಂಜನಗಳನ್ನು ಎಲೆಯ ಮೇಲೆ ಅವುಗಳ ನಿಯತ ಜಾಗದಲ್ಲೆ ಬಡಿಸಿ ಕಡೆಯಲ್ಲಿ ತೊವ್ವೆ ತುಪ್ಪ ಹಾಕಿ..... ಅಪ್ಪ  ಪರಿಶಂಚನೆ ಮಾಡಿ, ಅನ್ನ ಬ್ರಹ್ಮನಿಗೆ‌ ನಮಸ್ಕರಿಸಿ ಊಟ ಆರಂಭಿಸಿದ ನಂತರವೇ ನಮ್ಮ ಉದರಾಗ್ನಿ‌ ಶಾಂತಿಯ, ರುಚಿ ರುಚಿ‌ ಪಾಕದ ಸಂತೃಪ್ತ ಭೋಜನದ ರಸಮಯ ಆರಂಭ.... 

ಸಂಜೆ  ದೀಪ ಬೆಳಗಿಸುವ ಸಂಭ್ರಮ.

ಬಲಿಪಾಡ್ಯಮಿಯ ದಿನ  ಮರದ ಮಣೆಯ ಮೇಲೆ, ಸಗಣಿಯಲ್ಲಿ ಬಲೀಂದ್ರನ ಕೋಟೆಯ ವಿನ್ಯಾಸ ರಚಿಸಿ, ಚೆಂಡು ಹೂವು ಸೆಕ್ಕಿಸಿ, ಕೆರಕನನ್ನೂ ಸುತ್ತ ಯಥೇಚ್ಛವಾಗಿ ದೀಪಗಳನ್ನೂ ಇಟ್ಟು, ಬಲೀಂದ್ರನನ್ನು ಆವಾಹಿಸಿ, ಪೂಜಿಸಿ *ಹಾಲು ಹಳ್ಳವಾಗಿ, ಬೆಣ್ಣೆ ಬೆಟ್ಟವಾಗಿ ಬಲಿಚಕ್ರವರ್ತಿಯ ರಾಜ್ಯ ಮೂರು ಲೋಕದಲ್ಲೂ ಹರಡಲಿ* ಎಂದು ಹೇಳಿ‌ ನಮಸ್ಕರಿಸಿ ನಂತರ, ಬಲೀಂದ್ರನ ಎದುರಿಗೇ ಸುರುಸುರು ಬತ್ತಿ ಹಚ್ಚಿದ ನಂತರವೇ ಬೇರೆ ಢಮ್ ಢಮ್ ಢಮಾರ್ ಆಟಂ ಬಾಂಬ್, ಲಕ್ಷ್ಮೀ ಬಾಂಬ್, ಇತ್ಯಾದಿ ಪಟಾಕಿಗಳ, ಹೂವಿನ ಕುಂಡ, ಭೂಚಕ್ರ, ವಿಷ್ಣುಚಕ್ರಗಳ‌ನ್ನು ಹಚ್ಚಿ ಕುಣಿಯುವ ಸಂಭ್ರಮ

ಮನೆಯ ಒಂಭತ್ತು ಜನಕ್ಕೆ ಹೊಸ ಬಟ್ಟೆ ತರಲು ಸಾಧ್ಯವಾಗದಿದ್ದರೂ ಅದೊಂದು ಕೊರತೆ ಎಂದು‌ ಯಾರಿಗೂ ಯಾವತ್ತೂ‌ ಅನಿಸುತ್ತಿರಲಿಲ್ಲ.

🌟 *ಹಬ್ಬ* 🌟  *ಎಂಬ ಪದದಲ್ಲೇ ಸಂಭ್ರಮ ಸಡಗರ ಸಂತೋಷ ತುಂಬಿ ತುಂಬಿ ತುಳುಕುತ್ತಿತ್ತಾಗಿ ಆಗೆಲ್ಲ ನಮಗೆ ಕೊರತೆಗಳ ನಡುವೆಯೂ ಹಬ್ಬ ಹಬ್ಬವೇ ಆಗಿ ಸಂತೋಷ,  ಸಡಗರ ಸಂಭ್ರಮಗಳನ್ನೇ ಉಡುತ್ತಿದ್ದೆವು.*ತೊಡುತ್ತಿದ್ದೆವು*.

*ಒಳಗೂ ಹೊರಗೂ ಹಬ್ಬವನ್ನೇ ತುಂಬಿಕೊಂಡು ನಲಿಯುತ್ತಿದ್ದೆವು....*

*ಇಂದು......???  ಕಾಲಾಯ ತಸ್ಮೈ ನಮಃ... ಅಷ್ಟೇ*
✍🏼ಸಂಗ್ರಹ: HNS 

ಇದನ್ನು ಓದಿ ನನ್ನ ಮನಃಪಟಲದ
ಹಳೆಯ ನೆನಪುಗಳ ಸುರಿಮಳೆ. ಮನಸ್ಸಿಗೆ ಸಿಂಚನವಾಯ್ತು 
ಬರಹ ಚೇತೊಹಾರಿ ಇಂದಿನವರಿಗೆ ಇದೆಲ್ಲದರ ಅನುಭವ ಗೋವಿಂದ 
*ಆಂದಿನವರಿಗೆ ಆನಂದವೊ *ಅನಂದ.*

Saturday, October 16, 2021

ಸುಭಾಷಿತ

ಮುರಿದ ಲೇಖನಿಯು ಒಳ್ಳೆಯದನ್ನು  ಬರೆಯಲು ಬಿಡುವುದಿಲ್ಲ, ಅಂತೆಯೇ ಅಸೂಯೆಯ ಗುಣವು  ಉತ್ತಮ ಜೀವನ ನಡೆಸಲು ಬಿಡುವುದಿಲ್ಲ! 

Friday, October 15, 2021

ಸುಭಾಷಿತ

ಸುಭಾಷಿತ

ಸಂಬಂಧಗಳಲ್ಲಿ ಏನನ್ನಾದರೂ ಅಪೇಕ್ಷಿಸುವುದು ಸ್ವಾರ್ಥವಲ್ಲ, ಆದರೆ ಏನಾದರು ಅಪೇಕ್ಷೆ ಇಟ್ಟುಕೊಂಡೇ ಸಂಬಂಧಕಟ್ಟಿಕೊಳ್ಳುವುದು ಸ್ವಾರ್ಥ ಎನಿಸುವುದು. 

ಸುಭಾಷಿತ

ಹಣ - ಸಂಪತ್ತಿನ ದಾಹ ಎನ್ನುವುದು ತುಂಬಾ ಬಿಸಿಯಾಗಿರುತ್ತದೆ.  ಎಲ್ಲಕ್ಕಿಂತ ಮೊದಲು ಸಂಬಂಧಗಳನ್ನು ಸುಟ್ಟು ಭಸ್ಮ ಮಾಡುತ್ತದೆ. 

Wednesday, October 14, 2020

ಪರ್ವತ - ಜಯಂತ ಕಾಯ್ಕಿಣಿ

 ॥ *ಪರ್ವತ* ॥


ಒಂದು ಪರ್ವತ ನನಗೆ ಏನು ಹೇಳುತ್ತದೆ

ಊದಿಕೊಂಡ ಗುಟ್ಟಿನಂತೆ ಒಡೆಯದೆ

ನಕ್ಕರೆ ಫಕ್ಕನೆ ತೆರೆಯದೆ ಗಾಳಿಗೆ ಹಾಳೆಯಂತೆ ಹಾರದೆ 

ಒಳ ಸ್ನಾಯುಗಳ ತೋರದೆ ಏನು ಹೇಳುತ್ತದೆ 

ನಡು ರಾತ್ರಿಗಳ ಅವಿತಿಟ್ಟು ಇಕೋ

ಬೇಕಾದರೆ ಬಿಟ್ಟೇನು ಎಂಬಂತೆ ಅಪಾರ

ಕಥೆಗಳನ್ನು ಅಜ್ಜಿಗಳೊಂದಿಗೇ ಬೆನ್ನ ಹಿಂದೆ

ಕಾದಿರಿಸಿದಂತೆ ಯಾವ ಯಶದ ನೋವಿಗೆ ಇಳಿದ ಪರದೆ 

ಸನಿಹ ನಕ್ಷತ್ರ ಸುಳಿದರೂ ಕಣ್ಣು ಮಿಟುಕಿಸದ ಅದು 

ಮತೀಯ ರಸ್ತೆಯಲ್ಲಿ ಬಿದ್ದ ಕತ್ತರಿಸಿದ ರುಂಡ 

ಯುದ್ಧಸನ್ನದ್ಧನಾಗಿಯೇ ನಿದ್ದೆ ಹೋದ ಯೋಧ 

ಅಡ್ಡ ಬಂದ ಅದರ ಬೆನ್ನಿಂದ ಪ್ರತಿ ಸೂರ್ಯೋದಯಕ್ಕೆ 

ಯಾವ ಹೊಸ ಸಂದೇಶ ಬಂದಂತಿಲ್ಲ ಬದಲಿಗೆ 

ಪ್ರತಿ ರಾತ್ರಿಗೊಂದು ನವೀನ ಒಡಪು

ಬಾಡುವ ಬೆಳಕಿನಲ್ಲಿ ಸಂಜೆ ಆಡುತ್ತ ವೇಳೆ ಮರೆತ 

ಮಕ್ಕಳಿಗೆ ಹಠಾತ್ತನೆ ಭೀತಿ ಗೋವರ್ಧನ ಕುಸಿದಂತೆ 

ತಾಯಿ ಮಡಿಲಿಗೆ ಓಡುತ್ತವೆ ಅವು

ಹಜಾರದಲ್ಲಿ ಕೂತ ಅತಿಥಿಗಳ ನಡುವಿಂದ

ರಸ್ತೆ ಬದಿ ಕಣ್ಮುಚ್ಚಿ ನಿಂತ ಟ್ರಕ್ಕುಗಳ ನಡುವೆ 

ರಂಗವಲ್ಲಿ ಇಕ್ಕುವಳು ವೃದ್ದ ಮಹಿಳೆ

ಕೊನೆಯ ಲೋಕಲ್‌ಗಳು ಶೆಡ್ ಸೇರಿದನಂತರ 

ಶಸ್ತ್ರಕ್ರಿಯೆ ಮುಗಿಸಿ ಕೈ ತೊಳೆಯುತ್ತಿರುವ ಮಂದಿ 

ಕಿಟಕಿಯಿಂದ ನೋಡುತ್ತಾರೆ 

ಹೊಸ ರಾಗವನ್ನು ನೀವಿ ಎಚ್ಚರಿಸುತಿಹ ಪರ್ವತ 

ಸಾಯುವ ಶಿಶುಗಳ ಎದುರು ತನ್ನ

ಮರಗಳನ್ನು ಅಡವಿಟ್ಟಿದೆ


✍ *ಜಯಂತ ಕಾಯ್ಕಿಣಿ*

{'ಶ್ರಾವಣ ಮಧ್ಯಾಹ್ನ' ಕವನ ಸಂಕಲನ}

Monday, September 7, 2020

ಪ್ರೌಢಶಾಲಾ ಶಿಕ್ಷಕರ ಗೋಳು ಕೇಳುವವರಾರು?

 

                                                            ಪ್ರೌಢಶಾಲಾ ಶಿಕ್ಷಕರ ಗೋಳು ಕೇಳುವವರಾರು?

ಇಂದು ಹತ್ತನೇ ತರಗತಿಯ ಫಲಿತಾಂಶ ಎನ್ನುವುದು ಒಂದು ಯುದ್ದ ಎನ್ನುವಂತೆ ಆಗಿದೆ. 8 ತರಗತಿಯಿಂದ ಪ್ರೌಢ ಶಾಲೆಗೆ ಮಗು ಬಂದ ದಿನದಿಂದ ಅವರನ್ನು 10 ನೇ ತರಗತಿ ಫಲಿತಾಂಶಕ್ಕಾಗಿ ತಯಾರು ಮಾಡಲಾಗುತ್ತಿದೆ. ಸಂಪೂರ್ಣ ಪ್ರೌಢ ಶಿಕ್ಷಣ ವ್ಯವಸ್ಥೆ ಹತ್ತನೇ ತರಗತಿಯ  ಪರಿಕ್ಷೆ  ನಡೆದು ಅದರಲ್ಲಿ ಮಕ್ಕಳು ಏನು ಬರೆಯುತ್ತಾರೆ ಎಂಬುದನ್ನು ಅಂಕದಿಂದ ನೋಡಿ ತಿಳಿದುಕೊಳ್ಳುವ ಉದ್ದೇಶಕ್ಕಾಗಿಯೇ ಬದುಕುತ್ತಾ ಇರುವಂತೆ ಕಾಣುವುದು. ನಮ್ಮ ಸಮಾಜದಲ್ಲಿ ದಿನೇ ದಿನೇ ಹೆಚ್ಚುತ್ತಾ ಇರುವ ಅಂಕದ ಹುಚ್ಚು ಸಾಮಾನ್ಯ ಜನರಿಂದ ಹಿಡಿದು ಜನಪ್ರತಿನಿಧಿಗಳ ವರೆಗೆ,  ಶೈಕ್ಷಣಿಕ ವ್ಯವಸ್ಥೆಯ ಎಲ್ಲಾ ಸ್ತರದ ಆಡಳಿತಗಾರರಿಗೆ ಅತಿಯಾಗಿಯೇ ಹಿಡಿದಿರುವುದು.

ಯಾವಾಗ 10 ನೇ ತರಗತಿಯ ಫಲಿತಾಂಶವನ್ನು ಹೆಚ್ಚು  ಮಾಡುವ ಉದ್ದೇಶದಿಂದ ನಮ್ಮ ಪರೀಕ್ಷಾ ಮೌಲ್ಯಾಂಕನ ಪದ್ದತಿಯನ್ನೇ ಬದಲಿಸಿದ್ದೆವೋ ಅಂದಿನಿಂದ ಅದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುವ ಸಂಪೂರ್ಣ ವ್ಯವಸ್ಥೆ  ಬದಲಾಯಿತು. ಅಂಕ ನೀಡುವಲ್ಲಿಯೂ ಶಿಕ್ಷಕರು ಧಾರಾಳವಾಗಿ ನೀಡ ತೊಡಗಿದರು. ಕಾಲ ಕ್ರಮೇಣ 100 ಕ್ಕೆ 100 ಫಲಿತಾಂಶ ಎಂಬ ಮಾಪನ   ಪ್ರಾರಂಭವಾಯಿತು.  ಅದು ಇನ್ನೂ ಮುಂದುವರೆದು ಇಂದು ಶಾಲೆಗೆ ಒಂದು ರ್ಯಾಂಕ ಬೇಕು ಎಂಬಲ್ಲಿಗೆ ಬಂದು ತಲುಪಿರುವುದು. ಒಟ್ಟಾರೇ ಇಂತಹ ಶೈಕ್ಷಣಿಕ ವ್ಯವಸ್ಥೆಯಿಂದ ನೇರವಾಗಿ ಮಕ್ಕಳು ಸಾಕಷ್ಟು ತೊಂದರೆ ಅನುಭವಿಸುತ್ತಾ ಇರುವರು. ಜೊತೆಗೆ ತಮ್ಮ ಸಹಜ ಬಾಲ್ಯವನ್ನು ಯಾಂತ್ರಿಕೃತವಾಗಿ ಕಳೆಯುತ್ತಾ ಇರುವರು. ಇದರ ಜೊತೆಗೆ  ವಿಷಯವನ್ನು ಭೋದಿಸುವ ಎಲ್ಲಾ ಪ್ರೌಢ ಶಾಲಾ ಶಿಕ್ಷಕರು ಒಂದು ರೀತಿಯ ಒತ್ತಡಕ್ಕೆ ಗುರಿಯಾಗಿರುವರು.   ಶಿಕ್ಷಕರು ಸಹಾ ಯಂತ್ರಗಳಂತೆ ಒಂದೇ ಉದ್ದೇಶಕ್ಕಾಗಿ ಕಾರ್ಯನಿರ್ವಹಿಸುವಂತೆ ಆಗಿರುವುದು. ಇದಕ್ಕೆ ಕಾರಣವಾದ  ಶಿಕ್ಷಕರ ಮೇಲೆ ಒತ್ತಡ ಹೇರುತ್ತಿರುವ ಅಂಶಗಳನ್ನು ಕೆಳಗಿನಂತೆ ಗಮನಿಸಬಹುದಾಗಿದೆ.

ಮೇಲಾಧಿಕಾರಿಗಳ ಒತ್ತಡ :  ತಾಲ್ಲೂಕಾ ಹಂತದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾದವರಿಗೆ ತನ್ನ ವ್ಯಾಪ್ತಿಯ ಎಲ್ಲಾ ಶಾಲೆಯ ಫಲಿತಾಂಶವನ್ನು 100 ಕ್ಕೆ 100 ಮಾಡುವ ಉತ್ಸಾಹ ಮೂಲಕ ಜಿಲ್ಲಾ ಹಂತದ ಅಧಿಕಾರಿಗಳನ್ನು ಸಂತುಷ್ಟ ಪಡಿಸುವ ಧಾವಂತ ಕೆಲವರಿಗೆ, ಇನ್ನೂ ಕೆಲವರಿಗೆ ಮೇಲ ಹಂತದ ಅಧಿಕಾರಿಗಳ ಭಯ, ಅನಗತ್ಯವಾಗಿ ಮೂಗು ತೂರಿಸುವ ಜನಪ್ರತಿನಿಧಗಳ ಹೆದರಿಗೆ ಎಲ್ಲವೂ ಒಟ್ಟರೇ ತಾಲ್ಲೂಕಾ ಹಂತದ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಶಿಕ್ಷಕರೊಂದಿಗೆ ಹೆಚ್ಚಿನ ಒತ್ತಡ ಹಾಕಲು ಕಾರಣವಾಗಿರುವುದು.  ಏನಾದರೂ ಮಾಡಿ ನಾವು  ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಬೇಕು ಎಂಬ ಒತ್ತಡವನ್ನು ಶಿಕ್ಷಕರ ಮೇಲೆ ಹಾಕುವರು.

ಅನುದಾನಿತ/ಅನುಧಾರಹಿತ ಶಾಲೆಯಲ್ಲಿ ಆಡಳಿತ ಮಂಡಳೀ ಒತ್ತಡ : ಅನುಧಾನಿತ ಶಾಲೆಯ ಶಿಕ್ಷಕರ ಸ್ಥಿತಿ ಇನ್ನೂ ಕಷ್ಟ. ಒಂದು ಕಡೆ ತಾಲ್ಲೂಕಾ ಅಧಿಕಾರಿಗಳು, ಇನ್ನೊಂದಡೆ ಘಟಾನುಘಟಿ ಆಡಳಿತ ಮಂಡಳಿಯ ಸದಸ್ಯರನ್ನು ಎದುರಿಸುವುದು. ಎಲ್ಲಾ ಸದಸ್ಯರು ಪುಕ್ಕಟೆ ಸಲಹೆ ನೀಡಲು ಬರುವರು. ಆಗಾಗ ಸಭೆಯಲ್ಲಿ ಅವರಿಗೆ ತಮ್ಮ ವಿಷಯದ ಬಗ್ಗೆ ತಿಳಿಸಬೇಕು. ಒಟ್ಟರೇ ಅನುದಾನಿತ ಶಾಲೆಯ ಶಿಕ್ಷಕರಾದವರು ಆಡಳಿತ ಮಂಡಳಿ, ಮುಖ್ಯಶಿಕ್ಷಕರು, ಎಲ್ಲರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಜೊತೆಗೆ 100 ಕ್ಕೆ 100 ಫಲಿತಾಂಶ ತಮ್ಮ ವಿಷಯದಲ್ಲಿ ಬರುವಂತೆ ಆಗಬೇಕು. ಇದರಲ್ಲಿಯೂ ಮೀಸಲಾತಿಯಿಂದಾಗಿ ಬೇರೆ ಬೇರೆ ಜಿಲ್ಲೆಯಿಂದ ಬಂದ ಶಿಕ್ಷಕರಂತು ಇನ್ನೂ ಹೆಚ್ಚಿನ ಸವಾಲನ್ನು ಎದುರಿಸಬೇಕಾಗುವುದು. ( ಒತ್ತಡ ಸ್ಥಳೀಯ ಶಿಕ್ಷಕರಿಗೆ ಕಡಿಮೆ.. ಯಾಕೆಂದರೆ ಅವರ ಡೊನೇಷನ..ಜಾತಿಯ ಪ್ರಭಾವ, ರಾಜಕೀಯ ಪ್ರಭಾವವು ಹೆಚ್ಚಾಗಿರುವುದು) ಅನುಧಾನ ರಹಿತ ಶಾಲೆಗಳಲ್ಲಿ ಶಿಕ್ಷಕರ ನೌಕರಿಯ ಅಸ್ತಿತ್ವದ ಬಗ್ಗೆ ಮಾತನಾಡುತ್ತಾ ಒತ್ತಡ ಹೇರಲಾಗುವುದು.

ಮುಖ್ಯ ಶಿಕ್ಷಕರ ಒತ್ತಡ : ಮುಖ್ಯ ಶಿಕ್ಷಕರಾದವರು ಶಿಕ್ಷಕರು ಮತ್ತು ಮೇಲ ಅಧಿಕಾರಿಗಳ/ಜನಪ್ರತಿಗಳ/ ಆಡಳಿತ ಮಂಡಳಿಯ ನಡುವಿನ ಪೋಸ್ಟಮ್ಯಾನ ರೀತಿ ಕಾಯ9ನಿವ9ಹಿಸಬೇಕಾಗಿದೆ. ಆದರೂ ದಿನನಿತ್ಯ ಸಿಗುವವರು ಶಿಕ್ಷಕರು ಅವರ ಮೇಲೆ ಹೆಚ್ಚಿನ ಒತ್ತಡ ಇದ್ದೆ ಇರುವುದು. ಅದರಲ್ಲಿಯೂ ಗಣಿತ, ವಿಜ್ಞಾನ ಮತ್ತು ಇಂಗ್ಲೀಷ ಶಿಕ್ಷಕರಾದವರು ಹೆಚ್ಚು ಕಡಿಮೆ ಮುಖ್ಯ ಶಿಕ್ಷಕರ ವೈರಿಗಳಂತೆ ಕಂಡು ಬರುವರು. ಎಲ್ಲಾ ವಿಚಯಲ್ಲಿ 100 ಕ್ಕೆ 100 ಫಲಿತಾಂಶ ತರುವ ಹೊಣೆ ಮುಖ್ಯ ಶಿಕ್ಷಕರ ಮೇಲೆ ಇರುವುದರಿಂದ ಒತ್ತಡವನ್ನು ಶಿಕ್ಷಕರ ಮೇಲೆ ಬೇರೆ ಬೇರೆ ರೀತಿಯಲ್ಲಿ ತಿಳಿಸಲು ಪ್ರಯತ್ನಿಸುವರು. ಅದು ಶಿಕ್ಷಕರಿಗೆ ಒತ್ತಡವಾಗಿ ಪರಿಣಮಿಸಿರುವುದು.

ಜಪ್ರತಿನಿಧಗಳ ಮೀತಿ ಮಿರಿದ ಆಸಕ್ತಿ : ಸ್ಥಾಯಿ ಸಮಿತಿ ಸದಸ್ಯರು, ಎಂಎಲ್ಎ, ತಾಲ್ಲೂಕಾ ಪಂಚಾಯತ್ ಸದಸ್ಯರು ರೀತಿಯ ಎಲ್ಲಾ ಜನಪ್ರತಿನಿಧಿಗಳು ತಮ್ಮ ವ್ಯಾಪ್ತಿಯ ಶಾಲೆಯಲ್ಲಿ ಒಂದು ರ್ಯಾಂಕ ಬಂದರೆ ಅಥವಾ ಶಾಲೆ ಉತ್ತಮ ಫಲಿತಾಂಶ ದಾಖಲಿಸಿದರೆ ಅದಕ್ಕೆ ತಾವೆಲ್ಲರೂ ಕಾರಣಿಕರ್ತರು ಎಂಬು ಪೋಸು ನೀಡಿ ದಿನಪತ್ರಿಕೆಯಲ್ಲಿ ಕಾಣಿಸಿಕೊಳ್ಳುವರು.  ಅದೇ ಫಲಿತಾಂಶ ಉತ್ತಮವಾಗಿರದೇ ಇದ್ದರೇ ಅದಕ್ಕೆ ಆಯಾ ವಿಷಯದ ಶಿಕ್ಷಕರನ್ನು ಹೊಣೆಯನ್ನಾಗಿಸಿ ಮನಸ್ಸಿಗೆ ಬಂದಂತೆ ತಮ್ಮ ವ್ಯಾಪ್ತಿ ಮೀರಿ ವತರ್ಿಸುವರು. ಶಿಕ್ಷಕರ ಸಮಸ್ಯೆಯನ್ನು ಆಲಿಸುವ ಬದಲು ತಮ್ಮದೇ ಉಪನ್ಯಾಸ ನೀಡಿ ಒತ್ತಡವನ್ನು ಹೇರುವರು. ಹಾಲಿ ಮಾಜಿಗಳೆಲ್ಲರೂ ಸ್ಪಧರ್ೆಗೆ ಬಿದ್ದವರೆಂತೆ ರ್ಯಾಂಕ ವಿಜೇತರನ್ನು ಸನ್ಮಾನಿಸಿ ಪ್ರಚಾರಕ್ಕಾಗಿ ಹಪಹಪಿಸುತ್ತಿರುವುದನ್ನು ಕಾಣಬಹುದು. ಜನಪ್ರತಿನಿಧಿಗಳ ವರ್ತನೆ ಶಿಕ್ಷಕರಲ್ಲಿ ಒತ್ತಡ ಹೆಚ್ಚಾಗಲು ಕಾರಣವಾಗಿರುವುದು.

ಪಾಲಕರ ಒತ್ತಡ : ಎಲ್ಲವುಗಳ ನಡುವೆ ಪಾಲಕರ ಒತ್ತಡ. ಮಕ್ಕಳಿಗೆ ಹೊಡೆದರೆ ಅದು ತಪ್ಪು, ಅತಿ ಹೆಚ್ಚು ಬೈದರೂ ತಪ್ಪು ಮಕ್ಕಳೀಗೆ ಹೆಚ್ಚು ಅಂಕ ಬೇಕು. ಇದು ಪಾಲಕರ ಮನಸ್ಥಿತಿ.  ಹತ್ತನೇ ತರಗತಿ ಮಕ್ಕಳ ಪಾಲಕರಿಗೆ ಬೆಳ್ಳಿಗೆ 5 ಗಂಟೆಗೆ ಪೋನ ಮಾಡಿ ಮಕ್ಕಳನ್ನು ಓದಿಸಲು ಎಬ್ಬಿಸುವದು, ರಾತ್ರಿ 10 ಗಂಟೆಗೆ ಪೋನ ಮಾಡಿ ಮಕ್ಕಳು ಏನು ಮಾಡಿದರು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಇದು ಪರಿಕ್ಷೇಗಿಂತ 4-5 ತಿಂಗಳು ಮುಂಚಿನಿಂದ ಪ್ರಾರಂಭವಾಗುವುದು. ಮಹಿಳಾ ಶಿಕ್ಷಕರು ರಾತ್ರಿ ಪೋನ ಮಾಡಿದಾದ ಏನೇನೋ ಅರ್ಥ ಮಾಡಿಕೊಂಡು ಕೆಲವು ಪಾಲಕರು ಮರುದಿನ ಶಾಲೆಗೆ ಬಂದಿರುವ ಉದಾಹರಣೆಯೂ ಇದೆ. ಒಟ್ಟಾರೇ  ಪಾಲಕರ ಒತ್ತಡ ಸಹಾ ಶಿಕ್ಷಕರ ಮೇಲೆ ಅತಿಯಾಗುತ್ತಾ ಇರುವುದು.

ಮೇಲೆ ಕಾಣಿಸಿದ ಎಲ್ಲಾ ರೀತಿಯಿಂದಲ್ಲೂ ಪ್ರೌಢ ಶಾಲಾ ಶಿಕ್ಷಕರ ಮೇಲೆ ಒತ್ತಡ ಇರುವುದು.  ಉತ್ತಮ ಫಲಿತಾಂಶ ಮತ್ತು  ರ್ಯಾಂಕ ಒತ್ತಡದ ನಡುವೆ ಶಿಕ್ಷಕರ ಕ್ರೀಯಾ ಶೀಲತೆ ಎಂಬುದು ನಶಿಸಿ ಹೋಗುತ್ತಿರುವುದು. ಪ್ರೌಢ ಶಾಲಾ ಮಕ್ಕಳಲ್ಲಿ ಸ್ವಂತಿಯನ್ನು ಬೆಳೆಸುವುದು, ಒಂದು ವಿಷಯದಲ್ಲಿ  ಆಸಕ್ತಿಯನ್ನು ಬೆಳೆಸುವುದು, ವಿಭಿನ್ನವಾಗಿ  ಆಲೋಚನೆ ಮಾಡುವ ಸಾಮಥ್ರ್ಯವನ್ನು ಬೆಳೆಸುವುದು, ತರ್ಕ ಮಾಡುವ ಸಾಮಥ್ರ್ಯ ಬೆಳೆಸುವುದು ಎಲ್ಲವೂ ಮರೆಯಾಗಿ 100 ಕ್ಕೆ 100 ಅಂಕ ಗಳಿಸುವುದು, 100 ಕ್ಕೆ 100 ಶಾಲಾ ಫಲಿತಾಂಶ ದಾಖಲಿಸುವುದು  ಹೇಗೆ ಎಂಬುದರ ಹಿಂದೆ ಬಿದ್ದಿರುವರು. ಎಲ್ಲೋ ಒಂದಿಬ್ಬರು ಸ್ವಲ್ಪ ಆಸಕ್ತಿ ತೋರಿಸಿ ವಿಜ್ಞಾನ ಮೇಳ, ಸಾಹಿತ್ಯ, ಭಾಷಣ ಎಂದು ಮಕ್ಕಳ ಬಗ್ಗೆ ಗಮನ ನೀಡಿದರೆ  ಅದಕ್ಕೆ ಮುಖ್ಯ ಶಿಕ್ಷಕರಿಂದ, ಪಾಲಕರಿಂದ, ಆಡಳಿತ ಮಂಡಳಿಯಿಂದ  ತಡೆಯಾಗುವುದು, ಅವೆಲ್ಲಾ ಸರಿ ಮೊದಲು ಫಲಿತಾಂಶದ ಬಗ್ಗೆ ಗಮನ ನೀಡಿ ಎಂಬ ಪುಕ್ಕಟೆ ಸಲಹೆ ಬರುವುದು ಒಟ್ಟಾರೆ ಪ್ರೌಢ ಶಾಲಾ ಶಿಕ್ಷಕರಲ್ಲಿ ಸ್ವಂತಿಕೆ ಎಂಬುದು ನಶಿಸಿ ಯಂತ್ರಗಳಂತೆ ಕಾರ್ಯನಿರ್ವಹಿಸುತ್ತಾ ಇರುವರು.

ಎಲ್ಲಾ ಒತ್ತಡಗಳ ನಡುವೆಯೂ ಕೆಲವೊಂದು ಶಿಕ್ಷಕರು ವಿಭಿನ್ನವಾಗಿ ಕಾರ್ಯನಿರ್ವಹಿಸಲು ಪ್ರಯತ್ನಿಸುತ್ತಾ ಇರುವರು.  ಆದರೇ ದಿನ ಕಳೆದಂತೆ ಸಂಖ್ಯೆ ಕಡಿಮೆಯಾಗುತ್ತಾ ಇರುವುದು. ನಮ್ಮ ಶೈಕ್ಷಣೀಕ ವ್ಯವಸ್ಥೆಯೇ ಅಂಕ ಪದ್ದತಿಯೆಂಬ ಹುಚ್ಚು ಕುದುರೆಯನ್ನು ಏರಿ ಸಾಗುತ್ತಿರುವಾಗ ವ್ಯವಸ್ಥೆಯ ಪ್ರಮುಖ ಭಾಗವಾಗಿರುವ ಶಿಕ್ಷಕರು ವಿಭಿನ್ನವಾಗಿ ಯೋಚಿಸುದಾದರೂ ಹೇಗೆ? ಶಿಕ್ಷಕರ ಗೋಳು ಕೇಳುವವರಾದರು  ಯಾರು?

ಹೊಸ ಶಿಕ್ಷಣ ನೀತಿ ಜಾರಿಯಾಗುತ್ತಿದೆ. ಶಿಕ್ಷಣ ನೀತಿಯ ಬಗ್ಗೆ ಬರುತ್ತಿರುವ ಸುದ್ದಿಗಳು ಸ್ವರ್ಗವನ್ನೇ ಧರೆಗೆ ಇಳಿಸುವಂತೆ ಇರುವುದು. ಮೌಲ್ಯಾಂಕನ ಪದ್ದತಿಯಲ್ಲಿ ಬದಲಾವಣೆ ಹೊಸ ಶಿಕ್ಷಣ ನೀತಿಯಿಂದ ಆಗಬಹುದು ಎಂಬ ಆಶಾ ಭಾವನೆ ಇದೆ. ಅದೇ ಆಶಾ ಭಾವನೆಯೊಂದಿಗೆ ಪ್ರೌಢ ಶಾಲಾ ಶಿಕ್ಷಕರು ಮುಂದೆ ಸಾಗಬೇಕಾಗಿದೆ.

                                                                               

                                                                                                                                ವಿವೇಕ ಬೆಟ್ಕುಳಿ                                                                                                                                                                                                                                                                                                                  8722954123

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......