ಪರ್ವತ - ಜಯಂತ ಕಾಯ್ಕಿಣಿ

 ॥ *ಪರ್ವತ* ॥


ಒಂದು ಪರ್ವತ ನನಗೆ ಏನು ಹೇಳುತ್ತದೆ

ಊದಿಕೊಂಡ ಗುಟ್ಟಿನಂತೆ ಒಡೆಯದೆ

ನಕ್ಕರೆ ಫಕ್ಕನೆ ತೆರೆಯದೆ ಗಾಳಿಗೆ ಹಾಳೆಯಂತೆ ಹಾರದೆ 

ಒಳ ಸ್ನಾಯುಗಳ ತೋರದೆ ಏನು ಹೇಳುತ್ತದೆ 

ನಡು ರಾತ್ರಿಗಳ ಅವಿತಿಟ್ಟು ಇಕೋ

ಬೇಕಾದರೆ ಬಿಟ್ಟೇನು ಎಂಬಂತೆ ಅಪಾರ

ಕಥೆಗಳನ್ನು ಅಜ್ಜಿಗಳೊಂದಿಗೇ ಬೆನ್ನ ಹಿಂದೆ

ಕಾದಿರಿಸಿದಂತೆ ಯಾವ ಯಶದ ನೋವಿಗೆ ಇಳಿದ ಪರದೆ 

ಸನಿಹ ನಕ್ಷತ್ರ ಸುಳಿದರೂ ಕಣ್ಣು ಮಿಟುಕಿಸದ ಅದು 

ಮತೀಯ ರಸ್ತೆಯಲ್ಲಿ ಬಿದ್ದ ಕತ್ತರಿಸಿದ ರುಂಡ 

ಯುದ್ಧಸನ್ನದ್ಧನಾಗಿಯೇ ನಿದ್ದೆ ಹೋದ ಯೋಧ 

ಅಡ್ಡ ಬಂದ ಅದರ ಬೆನ್ನಿಂದ ಪ್ರತಿ ಸೂರ್ಯೋದಯಕ್ಕೆ 

ಯಾವ ಹೊಸ ಸಂದೇಶ ಬಂದಂತಿಲ್ಲ ಬದಲಿಗೆ 

ಪ್ರತಿ ರಾತ್ರಿಗೊಂದು ನವೀನ ಒಡಪು

ಬಾಡುವ ಬೆಳಕಿನಲ್ಲಿ ಸಂಜೆ ಆಡುತ್ತ ವೇಳೆ ಮರೆತ 

ಮಕ್ಕಳಿಗೆ ಹಠಾತ್ತನೆ ಭೀತಿ ಗೋವರ್ಧನ ಕುಸಿದಂತೆ 

ತಾಯಿ ಮಡಿಲಿಗೆ ಓಡುತ್ತವೆ ಅವು

ಹಜಾರದಲ್ಲಿ ಕೂತ ಅತಿಥಿಗಳ ನಡುವಿಂದ

ರಸ್ತೆ ಬದಿ ಕಣ್ಮುಚ್ಚಿ ನಿಂತ ಟ್ರಕ್ಕುಗಳ ನಡುವೆ 

ರಂಗವಲ್ಲಿ ಇಕ್ಕುವಳು ವೃದ್ದ ಮಹಿಳೆ

ಕೊನೆಯ ಲೋಕಲ್‌ಗಳು ಶೆಡ್ ಸೇರಿದನಂತರ 

ಶಸ್ತ್ರಕ್ರಿಯೆ ಮುಗಿಸಿ ಕೈ ತೊಳೆಯುತ್ತಿರುವ ಮಂದಿ 

ಕಿಟಕಿಯಿಂದ ನೋಡುತ್ತಾರೆ 

ಹೊಸ ರಾಗವನ್ನು ನೀವಿ ಎಚ್ಚರಿಸುತಿಹ ಪರ್ವತ 

ಸಾಯುವ ಶಿಶುಗಳ ಎದುರು ತನ್ನ

ಮರಗಳನ್ನು ಅಡವಿಟ್ಟಿದೆ


✍ *ಜಯಂತ ಕಾಯ್ಕಿಣಿ*

{'ಶ್ರಾವಣ ಮಧ್ಯಾಹ್ನ' ಕವನ ಸಂಕಲನ}

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು