ಅಮ್ಮ_ಹೆಂಡತಿ_ಮಕ್ಕಳು

"ನಿವೃತ್ತಿಯಾದ ಮೊದಲ ದಿನ ನಾನು ಮೊದಲು ಮಾಡುವ ಕೆಲಸವೆಂದರೆ ನನ್ನ ಅಮ್ಮನನ್ನು

ವೃಧ್ಧಾಶ್ರಮಕ್ಕೆ ಸೇರಿಸುವುದು..."


ನನ್ನ ಮನೆಯಲ್ಲಿ  ನಾನು ಈ ಮಾತುಗಳನ್ನು ಹೇಳುತ್ತ ಹೇಳುತ್ತ ಒಂದು ವರುಷವಾಯಿತು.....

ಇನ್ನು ಈ ಕೆಲಸವನ್ನು ಮುಂದು ಹಾಕುವಂತಿಲ್ಲ...

ಯಾಕೆಂದರೆ ನಿನ್ನೆ ನನಗೆ ನಿವೃತ್ತಿ ಯಾಯಿತು...


ನನ್ನ ಹೆಂಡತಿ ಮಕ್ಕಳೆಲ್ಲ ಈ ದಿನಕ್ಕಾಗಿಯೇ ಕಾದು ಕುಳಿತವರಂತೆ ಇದ್ದಾರೆ..

ನನ್ನ ಅಮ್ಮ ಆರೊಗ್ಯವಾಗಿಯೇ ಇದ್ದವಳು,ಸುಮಾರು ಎರಡೂವರೆ ವರುಷಗಳಿಂದ ಅನಾರೋಗ್ಯಕ್ಕೆ ಬಿದ್ದಳು...

ಇತ್ತೀಚೆಗೆ ಒಂದು ವರುಷದಿಂದ 

ಮಲ ಮೂತ್ರ ವಿಸರ್ಜನೆಯ ಮೇಲೆ ಕೂಡಾ ಅವಳಿಗೆ ನಿಯಂತ್ರಣವಿಲ್ಲ...

ಬೆಳಗ್ಗೆ ರಾತ್ರಿ ಅವಳನ್ನು ನಾನು ನೋಡಿ ಕೊಳ್ಳಬಲ್ಲೆ...

ಆದರೆ ನಾನು ಕೆಲಸಕ್ಕೆ ಹೋದಾಗ ಅವಳನ್ನು ನೋಡಿ ಕೊಳ್ಳಬೇಕಾದವಳು ಇವಳೇ ... ಅಂದರೆ ನನ್ನ ಹೆಂಡತಿಯೇ...


ನನಗಾದರೂ ಅವಳು

ತಾಯಿ..ನನ್ನವಳಿಗೆ ಅವಳು ತಾಯಿಯಾ..?

ನನ್ನ  ಸಿಡುಕಿನ ನೋಟಕ್ಕೆ ಬೆದರಿ ಇವಳು ಅತ್ತೆಯ ಚಾಕರಿ ಮಾಡುತ್ತಿದ್ದಾಳೆ.

ಆದರೆ  ಇವಳ ಮುಖದಲ್ಲೊಂದು ತಿರಸ್ಕಾರದ ನೋಟ ಚಿರ ಸ್ಥಾಯಿಯಾಗಿ ನಿಂತ ಹಾಗೆ ನನಗೆ ಕಾಣಿಸುತ್ತಿದೆ..

ಇವಳಿಗಾದರೂ ಈ ಭಾವ ಸಹಜವೇ...ಹೊರಗಿನಿಂದ ಬಂದವಳು....

ಆದರೆ ನನ್ನ 

ಮಕ್ಕಳಿಗೂ ಅನಾರೋಗ್ಯದ ಅಜ್ಜಿ ಬೇಡವೆನ್ನಿಸುವುದು ನನಗೆ ದಿಗಿಲು ಹುಟ್ಟಿಸುವುದು.....

ಅಭಿಲಾಷ್ ಆದರೂ ಹುಡುಗ...ಮುಲಾಜಿಲ್ಲದೆ ಹೇಳಿದ್ದ"ಅಮ್ಮಾ ನನ್ನ ಫ್ರೆಂಡ್ಸ್ ಇರುವಾಗ ಅಜ್ಜಿಯನ್ನು ಹೊರಗೆ ಬಿಡಬೇಡ"

ಆದರೆ ನನ್ನ ಮಗಳು ಶಿಶಿರ "ಅಬ್ಬಾ  ,ಅಜ್ಜಿ ಗಬ್ಬು ನಾತ...ವ್ಯಾಕ್" ಅಂದಾಗ ಸಿಟ್ಟು ನೆತ್ತಿಗೇರಿತ್ತು...


"ಮಕ್ಕಳೇ..ಸ್ವಲ್ಪ ಕಾಲ ಸಹಿಸಿ..ನನ್ನ ಅಮ್ಮನನ್ನು ವೃದ್ಧಾಶ್ರಮಕ್ಕೆ ಸೇರಿಸುವ " ಅಂದಿದ್ದೆ...

ಹೆಂಡತಿ ಮಕ್ಕಳೇನೋ ಸುಮ್ಮನಾದರು... 


ಆದರೆ ಅಮ್ಮ ಅಂದಿನಿಂದ ಮತ್ತಷ್ಟು ಮೌನಿಯಾದಳು...

*********

ಇಂದು ನನ್ನ ನಿವೃತ್ತಿಯ ಮೊದಲ  ದಿನ .

ಅಮ್ಮನ ಪ್ರಾಃತ ವಿಧಿಗಳನೆಲ್ಲ

ಮುಗಿಸಿ ನಾವು ಹೊರಟು ನಿಂತೆವು...


ಯಾಕೋ ಹೆಂಡತಿ ಮಕ್ಕಳೂ ಹೊರಟು ನಿಂತರು...

ಅಮ್ಮನ ಮುಖದಲ್ಲಿ ಕಳೆ ಇಲ್ಲ...


"ವೃಧ್ಧಾಶ್ರಮಕ್ಕೆ ಸೇರಿಸುತ್ತೇನೆ " ಎಂದ ಮಗನ ಮಾತು ಇವಳ ಕಿವಿಗೂ ಬಿದ್ದಿರಬೇಕು.

ಬಲಿ ಪೀಠಕ್ಕೆ ಕರೆದೊಯ್ಯುವ ಮೇಕೆಯಂತೆ  ಉಸಿರೆತ್ತದೆ ಮಗ ಕರೆದಲ್ಲಿ ಬರುತ್ತಾಳೆ.

ನಾವೆಲ್ಲರೂ ಕಾರಿನಲ್ಲಿ ಕುಳಿತೆವು.


ಮಗರಾಯ ಕಾರನ್ನು ಚಲಾಯಿಸುತ್ತೇನೆ ಅಂದ.


 ಅವನಿಗೆ ಕೊಡದೆ ನಾನೇ ಕಾರನ್ನು ಚಲಾಯಿಸಿಕೊಂಡು ಬಂದೆ..


ಒಂದು ಹಂಚಿನ ಮನೆಯ ಬಳಿ ಕಾರು ನಿಲ್ಲಿಸಿದೆ..


ಹಾರನ್ ಮಾಡಿದೆ..

ಮನೆಯೊಳಗಿನಿಂದ ನನ್ನ ಗೆಳೆಯ ಓಡೋಡಿ ಬಂದ..


ನಾನು ಕಾರಿನ ಬಾಗಿಲು ತೆಗೆದು ಅಮ್ಮನನ್ನು ಕೆಳಗಿಳಿಸಿದೆ..

"ವೃದ್ಧಾಶ್ರಮ ಅಲ್ವಾ..?" ಹೆಂಡತಿ

ಬಾಯಿ ತೆಗೆದಳು...


ನಾನು ಮಾತನಾಡದೆ ಅಮ್ಮನನ್ನು ಕರೆದು ಕೊಂಡು ಮನೆಯ ಒಳಗೆ ಕರೆದು ಕೊಂಡು ಬಂದೆ...

ಒಂದು ಬೆಡ್ ರೂಂ...ಒಂದು ಹಾಲ್ ಒಂದು ಕಿಚನ್....ನನ್ನ ಗೆಳೆಯ ಸರಿಯಾದ ಚಿಕ್ಕ ಮನೆಯನ್ನೇ ಆಯ್ದು ಕೊಂಡಿದ್ದ.


..ಬಾಡಿಗೆಯ ಮನೆ...ಗೆಳೆಯ ಮನೆಯ ಕೀಲಿ ಕೈ ಕೊಟ್ಟು ಹೊರಟ..

"ಏನಿದು ಆವಾಂತರ... ಅತ್ತೆಯನ್ನು  ಇಲ್ಲಿ ನೋಡಿ ಕೊಳ್ಳುವವರು ಯಾರು?"

ನನ್ನವಳ ಪ್ರಶ್ನೆ..


"ಅವಳ ಮಗ  ನಾನು ಜೀವದಲ್ಲಿ ಇದ್ದೇನೆ"ನನ್ನ ಉತ್ತರ.

"ಅಂದರೆ ನೀವು ಇಲ್ಲಿ ನಿಂತು ಅಮ್ಮನನ್ನು ನೋಡಿ ಕೊಳ್ಳುತ್ತೀರಾ?"


"ಹಾಗೆಂದು ಕೊಳ್ಳಬಹುದು" ಎಂದೆ...


"ನಮ್ಮ ಗತಿ..?" ಹೆಂಡತಿಯ ಪ್ರಶ್ನೆ...


"ಮನೆಯ ಖರ್ಚು ನನ್ನದೇ" ನನ್ನ ಉತ್ತರ.

"ಮನೆಯಲ್ಲಿ ನೀವಿಲ್ಲದೆ ಇದ್ದರೆ ಭಯ ಅಗುತ್ತೆ".

"ಮಗ ನನಗಿಂತ ಎತ್ತರಕ್ಕೆ ಬೆಳೆದು ನಿಂತಿದ್ದಾನೆ.ಏನು ಭಯವೇ" ಅಂದೆ.


"ಅಯ್ಯೋ ನೀವಿಲ್ಲದ ಮನೆಯೆ".

ಇವಳ ಕಣ್ಣಲ್ಲಿ ಗಂಗಾ ಪ್ರವಾಹ..


ಅಮ್ಮನ ಕಣ್ಣಲ್ಲಿ ಅಶ್ರುಧಾರೆ..

ಅವಳನ್ನು ವೃದ್ದಾಶ್ರಮಕ್ಕೆ ಸೇರಿಸುತ್ತೇನೆ ಅಂದು ಕೊಂಡಿರಬೇಕು..

 ಈಗ ಅವಳ ಕಣ್ಣಲ್ಲಿ ಸಂತೋಷ ಉಕ್ಕಿ ಹರಿಯುತ್ತಿದೆ.


ಅವಳನ್ನು ಮಂಚದ ಮೇಲೆ ಮಲಗಿಸಿದೆ...


ಮಗ, ಮಗಳು, ಇವಳು ಎಲ್ಲರು  ಸ್ಥಭ್ದ ಚಿತ್ರದ ಹಾಗೆ ಮೂಗರಾಗಿದ್ದಾರೆ..


ಮಗ ಬಾಯಿ ತೆಗೆದ"ಅಪ್ಪಾ ಇದೆಲ್ಲ  ಏನು  nonsence...?

ನಾನೆಂದೆ"ಮಗಾ ನಿನಗೆ ನಿನ್ನ ಫ್ರೆಂಡ್ಸ್  ಮನೆಗೆ ಬರುವಾಗ ನನ್ನ ಅಮ್ಮ ಮನೆಯಲ್ಲಿದ್ದರೆ..ಅದು shame....ಅನ್ನಿಸುತ್ತಿತ್ತಲ್ಲ...ಅದು nonsense...


ನಾನೂ ಅಮ್ಮ ಇಲ್ಲಿರುತ್ತೇವೆ..ನೀವು ಮನೆಗೆ ಹೋಗಿ ಮಗೂ..ಚೆನ್ನಾಗಿರಿ"."ಅಪ್ಪಾ "

ಮಗಳು  ಮಾತಿಲ್ಲದೆ ನಿಂತ ಅಣ್ಣನ ಸಹಾಯಕ್ಕೆ ಬರುತ್ತಾಳೆ, "ಅಜ್ಜಿಗೆ ನೀನೊಬ್ಬನೇ ಮಗನಾ. ಮೂರು ಮಂದಿ ಮಕ್ಕಳಲ್ವಾ...ನೀನೆ ಯಾಕೆ ಅಜ್ಜಿಯನ್ನು ನೋಡಿಕೊಳ್ಳ ಬೇಕು...?"


ಇದು ಇವಳ ಮಾತಲ್ಲ...ಯಾವತ್ತೋ ಇವಳ ಅಮ್ಮನಾಡಿದ ಮಾತು..ಅದನ್ನೇ

ಉರು ಹೊಡೆದು ಹೇಳುತ್ತಿದ್ದಾಳೆ...ನನ್ನವಳು ಏನೂ ತಿಳಿಯದ ಹಾಗೆ ಕುಳಿತಿದ್ದಾಳೆ.

"ಮಗಳೇ... ನನಗಾಗ ಆರೇಳು ವರ್ಷ ಇರಬಹುದು.ಅಪ್ಪ ತೀರಿ ಹೋಗಿ ಎರಡೋ ಮೂರೋ ವರ್ಷಗಳಾಗಿತ್ತು. ... ನನಗೆ ವಾಂತಿ ಬೇಧಿ ಆರಂಭವಾಯಿತು...ನಮ್ಮದು ಹಳ್ಳಿ... ವಾಹನದ ಸೌಕರ್ಯ ಇರಲಿಲ್ಲ ಮಗಾ...ಹಳ್ಳಿಯ ನಾಟಿ ಮದ್ದು ನಾಟಲಿಲ್ಲ.


 ಮಗೂ... ನಾನು ಬದುಕುವ ಆಸೆ ಯಾರಿಗೂ ಇರಲಿಲ್ಲವಂತೆ.

 ಅರೆ ನಿರ್ಜೀವ ಸ್ಥಿತಿಯಲ್ಲಿದ್ದ ನನ್ನನ್ನು ಇದೇ ನನ್ನ ಅಮ್ಮ  ಆ  ಹೆಗಲ ಮೇಲೆ ಹಾಕಿ ಆರು ಮೈಲು ನಡೆದು ವೈದ್ಯರ ಹತ್ತಿರ ಕೊಂಡು ಹೋಗಿ ಇಂಜೆಕ್ಷನ್ ಚುಚ್ಚಿಸಿ ಮತ್ತೆ ಆರು ಮೈಲು ಹೊತ್ತು ನಡೆದು.ಬದುಕಿಸಿದಳು.


ದೇವಾ...ಇಂತಹ ಅಮ್ಮನಿಗೆ ಈಗಮಲಮೂತ್ರದ ಮೇಲೆ ನಿಯಂತ್ರಣ ಇಲ್ಲ ಮಗೂ.

ಹೆಣ್ಣಾದ ನಿನಗೂ ನಿನ್ನಮ್ಮನಿಗೂ ಇದು ಅಸಹ್ಯ ಅಂತ ಆದರೆ ,ನನ್ನ ಅಣ್ಣಂದಿರ ಹೆಂಡಂದಿರಿಗೂ ನನ್ನ ಅಮ್ಮ ಈ ವೃಧ್ದಾಪ್ಯದಲ್ಲಿ ಅಸಹ್ಯವೇ ಆಗುವಳು ಮಗೂ....


ಈ ಪ್ರಾಯದಲ್ಲಿ ಅವಳು ಯಾರಿಗಾದರೂ ಅಸಹ್ಯ ಅನ್ನಿಸಿದರೆ ಅವಳ ಮಗನಾದ ನನಗೆ ಹೇಗಾಗಬೇಡ...?

ಬೇಡ ಮಗೂ ,ನನ್ನ ಅಮ್ಮ ನನಗೆ ಅಸಹ್ಯವಲ್ಲ...ಸಾಯುವವರೆಗೆ ನಾನು ಅವಳಿಗೆ ಮಗನಂತೆ ಅಲ್ಲ... ಮಗಳಂತೆ ಅವಳ ಸೇವೆ ಮಾಡುತ್ತೇನೆ.. ನೀವು ಹೋಗಿ...ನಾನು ವಾರಕ್ಕೊಮ್ಮೆ  ಮನೆಗೆ ಬಂದು ಹೋಗುತ್ತೇನೆ....ಅಮ್ಮನಿರುವ ವರೆಗೆ ಮಾತ್ರ..."


ಹೆಂಡತಿ ಕೈ ಜೋಡಿಸುತ್ತಾಳೆ.."ಬನ್ನಿ ನಮ್ಮದು ತಪ್ಪಾಯ್ತು,ಅತ್ತೆಯನ್ನು ಅಮ್ಮ ಅಂತ ತಿಳಿದು ಕೊಳ್ಳುತ್ತೇನೆ.ನೀವಿಲ್ಲದ ಮನೆ ನನಗೆ ಮನೆಯೇ...ಹೋಗುವ ಬನ್ನಿ.. "ಅವಳಿಗೆ ಗಾಬರಿಯಾಗಿದೆ.


"ಮಕ್ಕಳೇ "

ನಾನು ಹೇಳುತ್ತೇನೆ"ಈ ಮಲ ಮೂತ್ರಗಳೆಲ್ಲ ಮಾನವನ ಜೀವನದ ಅನಿವಾರ್ಯ ಸಂಗತಿಗಳು...ಅದು ಬೇಡ ಅನ್ನಿಸಿದರೆ ಯಾವ ಹೆಣ್ಣೂ ಹೆರಲಾರಳು...ಯಾವ ದಾದಿಯೂ ಕೂಡಾ ಸೇವೆ ಸಲ್ಲಿಸಲಾರಳು .. ಯಾವ ಡಾಕ್ಟರ್ ಕೂಡಾ ಡಾಕ್ಟರ್ ಅಗಲಾರ.....


ಇನ್ನು ಬದುಕಿ ಉಳಿದರೆ ನಾನೂ ಮುದುಕನಾಗುತ್ತೇನೆ...ಆರೋಗ್ಯದ ವಿಷಯ ನನ್ನ ಕೈಯಲ್ಲಿ ಇಲ್ಲ..ನನ್ನಮ್ಮನಿಗಾದರೂ ನಾನಿದ್ದೆ...ಈಗಿನ ಮಕ್ಕಳು ನಮ್ಮ ಕೊನೆಗಾಲದಲ್ಲಿ ನಮ್ಮ ಸೇವೆ

ಮಾಡಬೇಕೆಂಬ ನಿರೀಕ್ಷೆಯೂ ತಪ್ಪೆ...

ನೀವು ಮನೆಗೆ ಹೋಗಿ... ವೃದ್ಧರಿಲ್ಲದ ಮನೆ ಸ್ವಚ್ಛ ಸುಂದರ ಮತ್ತು ನೆಮ್ಮದಿಯದ್ದು ಹೋಗಿ ಬನ್ನಿ" ಮಗ  ಕದಲಿ ಹೋದ


"ಅಪ್ಪಾ ಮಕ್ಕಳು ತಪ್ಪು ಮಾಡಿದರೆ ಕ್ಷಮಿಸಬೇಕಾದುದು,ತಪ್ಪಿದ್ದರೆ ಸರಿ ದಾರಿಯಲ್ಲಿ ನಡೆಸಬೇಕಾದುದು ಹಿರಿಯರ ನೀತಿಯಲ್ಲವೇನಪ್ಪ...ನೀವು ನಮ್ಮ ಕಣ್ಣ ತೆರೆಸಿದಿರಿ...ನಿಮ್ಮ ಅಮ್ಮನನ್ನು  ನೀವು ನೋಡಿಕೊಂಡಂತೆ ನಾವು ಕೂಡ ಅಜ್ಜಿಯನ್ನೂ , ನಿಮ್ಮಿಬ್ಬರನ್ನೂ ಕೊನೆ ಕಾಲದ ವರೆಗೆ ಪ್ರೀತಿ.. ಗೌರವದಿಂದ ನೋಡಿ ಕೊಳ್ಳುತ್ತೇವೆ.."


ಮೂವರೂ  ಅಳುತ್ತಾ ನನ್ನ ಕಾಲಿಗೆ ಬಿದ್ದರು...ನಾನೆಂದೆ "ನೀವು  ಬೀಳಬೇಕಾದುದು ಈ ಕಾಲುಗಳಿಗಲ್ಲ..ಆ ಕಾಲುಗಳಿಗೆ".


ಅಮ್ಮನಿಗೆ ಎಷ್ಟು ಅರ್ಥವಾಯಿತೋ...ಅವಳ  ಸೊಸೆಯೂ ಮೊಮ್ಮಕ್ಕಳೂ ಅವಳ ಕಡ್ಡಿಯಂತಿರುವ ಕಾಲಿಗೆ ಬೀಳುವಾಗ ಅವಳ ಒಣ ಕಣ್ಣುಗಳು ಒದ್ದೆಯಾಗಿದ್ದವು..


ಇದು ಕಥೆಯಲ್ಲ..    ನಮ್ಮ ಮುಂದಿರುವ ಹಿರಿಯ ಜೀವಗಳ ವ್ಯಥೆ.

ಬರಹ ಕೃಪೆ:   ಬರೆದವರು ಯಾರೆಂದು ತಿಳಿದಿಲ್ಲ.


ಇಂತಹ ಕಣ್ಣುತೆರೆಸುವ ಬರಹಕ್ಕೆ ನಿಮಗಿದೋ ನನ್ನ ಅನಂತಾನಂತ ಧನ್ಯವಾದಗಳು.

🌹🌹ಒಳ್ಳೆಯ ತಿಳುವಳಿಕೆ ಕೊಡುವಂತಹ ಬರಹ, ನಮ್ಮ (Generation) ಪೀಳಿಗೆಗೆ, ಮಕ್ಕಳ ಪೀಳಿಗೆಗೆ ಹಾಗೂ ಮುಂದಿನ ಎಲ್ಲಾ ಪೀಳಿಗೆಗೂ ಅನ್ವಯವಾಗುವಂತಹ ಬರಹ. ಇದನ್ನು ಬರೆದವರಿಗೂ ಹಾಗೂ ಕಳುಹಿಸಿದವರಿಗೂ ಅನಂತ ಧನ್ಯವಾದಗಳು.

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು