ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Saturday, October 6, 2012

ವಲಿ.... ( ಭಾಗ- 9 )


ಇಷ್ಟಲ್ಲದೆ ಕ್ರಿಸ್ತನ ಹುಟ್ಟು ಹಾಗೂ ಆತನ ಶಿಲುಬೆಗೇರಿಸಿದ ವಧೆಯನ್ನು ಮಹಮದ್ ಸಾರಾಸಗಟಾಗಿ ಅಲ್ಲಗೆಳೆದ. ಸುರಾ 19/1 ಹಾಗೂ 5/109ಗಳ ಮೂಲಕ ದೈವಾನುಗ್ರಹದಿಂದ ಕನ್ಯಾ ಮೇರಿಮಾತೆಯ ಒಡಲಲ್ಲಿ ಕ್ರಿಸ್ತನ ಜೀವಾಂಕುರವಾಯಿತು ಎಂದ ! ಜೈವಿಕವಾಗಿ ಅಸಾಧ್ಯವಾದ ಈ ನೆಲಗಟ್ಟಿಲ್ಲದ ಪೊಳ್ಳು ನಂಬಿಕೆಯನ್ನ ಬೈಬಲ್ಲಿನಂತೆಯೇ ಖುರಾನ್ ಕೂಡ ಸಮರ್ಥಿಸುತ್ತದೆ. ಆದರೆ ಮಹಮದ್ ಇಷ್ಟಕ್ಕೆ ನಿಲ್ಲಿಸದೆ, ದೇವರ ಕೃಪೆಯಿಂದ ಇನ್ನೂ ಜನಿಸಿ ತೊಟ್ಟಿಲಲ್ಲಿದ್ದಾಗಲೆ ತಾನು ದೇವರ ಸೇವಕ ಎಂಬುದು ಅವನಿಗೆ ಅರಿವಾಗಿ ಕ್ರಿಸ್ತ ತಾನು ದೇವದೂತನೆಂದು ಸಾರಿದ ಎಂದ !. ಮಗು ತೊಟ್ಟಿಲಿನಲ್ಲಿಯೇ ತಾರ್ಕಿಕವಾಗಿ ಮಾತನಾಡಿತು ಎನ್ನುವ ಅತಾರ್ಕಿಕ ವಾದವನ್ನ್ನ ಖುರಾನ್ ಸಾರಿ ಹೇಳಿತು!!! ಎಸುವಿನಿಂದ ತನಗೊಂದು ಧರ್ಮಗ್ರಂಥ ಕೊಡಲ್ಪಟ್ಟಿದೆ ಎಂದ ಮಹಮದ್ ತನ್ನ ಮರಣಕ್ಕೆ ಹಲವು ವರ್ಷ ಮೊದಲು ಮದೀನಾದಲ್ಲಿ ಸುರಾ 3/32-57ರ ಮೂಲಕ ಕ್ರಿಸ್ತನ ಜನನ, ಜೀವನ ಹಾಗೂ ಮರಣಗಳ ಕುರಿತ ತನ್ನ ವ್ಯಾಖ್ಯಾನಗಳನ್ನು ಪುನರುಚ್ಚರಿಸಿದ. ಈ ಮೂಲಕ ಮಹಮದ್ ಏಸುವಿನ ಜನನ, ಮರಣ ಹಾಗೂ ಆತ ಸಾರಿದ ತತ್ವಗಳ ಬಗ್ಗೆ ಕ್ರಿಸ್ತ ಮತಾವಲಂಭಿಗಳಲ್ಲಿದ್ದ ಪುರಾತನ ನಂಬಿಕೆಗಳನ್ನ ನಿರಾಕರಿಸಿದ. ಕ್ರಿಸ್ತನನ್ನು ಅವನ ಪ್ರಕಾರ ಯಹೂದಿಗಳು ಶಿಲುಬೆಗೆ ಏರಿಸಿಯೆ ಇರಲಿಲ್ಲ! ವಧೆಯಾಗದೆ ಆತ ದೇವರ ಕೈಹಿಡಿದು ಸಶರೀರನಾಗಿ ಸ್ವರ್ಗ ಆರೋಹಣ ಮಾಡಿದ ಎಂದು ಅವನು ಸುರಾ 4/155-159 ಹಾಗೂ 5/109-110ಗಳ ಮೂಲಕ ಆತ ಸಾಧಿಸಿದ. ಖುರಾನ್ ಪ್ರತಿಪಾದನೆಯ ಪ್ರಕಾರ ಅಲ್ಲಿಗೆ ದೇವಲೋಕಕ್ಕೆ ದೇವದೂತ ಏಸು ಸಾಯದೆ ಬದುಕಿದ್ದೆ ಸ್ವರ್ಗ ಸೇರಿ ಹೋಗಿದ್ದ ?! ಮಹಮದನ ಈ ಹೊಸ ಉಪಖ್ಯಾನದ ಹಿನ್ನೆಲೆಯಲ್ಲಿ ಪ್ರಾಯಶಃ ಏಸುವಿನ ಕೊಲೆಯ ಆರೋಪದಿಂದ ಯಹೂದಿಗಳನ್ನು ಮುಕ್ತಗೊಳಿಸಿ ಅವರನ್ನೂ ಇಸ್ಲಾಮಿನತ್ತ ಸೆಳೆದುಕೊಳ್ಳುವ ಹುನ್ನಾರ ಅಡಗಿತ್ತು ಎನ್ನುವ ಊಹೆ ಇತಿಹಾಸಕಾರ ಕ್ಲೇರನದ್ದು. ಇದೇನೆ ಇದ್ದರೂ ಮಹಮದ್ ಏಸು ಒಬ್ಬ ಪ್ರವಾದಿಯೆಂದು ಸಾಧಿಸಿ ಆತನ ಕೊಲೆಯಾಗದೆ ನೇರ ದೇವರೆ ಕೈಹಿಡಿದು ಆತನ ಸ್ವರ್ಗಾರೋಹಣ ಮಾಡಿಸಿದ ಎಂದು ಸಾರಿದ್ದು ವಿಶೇಷ ಮಹತ್ವ ಪಡೆಯುತ್ತದೆ. ಹೀಗಿರುವಾಗ ಮೆಕ್ಕಾದಲ್ಲಿ ಪ್ರತಿವರ್ಷದಂತೆ ಜರಗುವ ವರ್ಷಾವಧಿಯ ಪವಿತ್ರ ಯಾತ್ರೆಗೆ ಮದೀನದ ನವ ಮತಾಂತರಿತರೂ ಯಾತ್ರೆ ಕೈಗೊಂಡು ಕಾಬಾದ ಆರಾಧನೆಗೆ ಸಿದ್ಧರಾದರು. ಆದರೆ ಅವರ ಮತಾಂತರದ ಸುದ್ದಿ ಖುರೈಷಿಗಳಿಗೇನಾದರೂ ತಿಳಿದ್ದಿದ್ದೆ ಹೌದಾಗಿದ್ದಲ್ಲಿ ಅವರು ಖುರೈಶಿಗಳೊಂದಿಗೆ ಹೊಡೆದಾಟ ಹಾಗು ರಕ್ತಪಾತಕ್ಕೂ ಈ ಬಾರಿ ಅಣಿಯಾಗಿಯೇ ಹೋಗಬೇಕಿತ್ತು! ಆದರೆ ಮಹಮದನಿಗೆ ಇಂತಹದ್ದೊಂದು ತಿಕ್ಕಾಟ ಬೇಕಿರಲಿಲ್ಲ. ಹಾಗೊಂದು ವೇಳೆ ಹೊಡೆದಾಟವಾದರೆ ಅದರಿಂದ ತನ್ನ ಗುರಿ ಸಾಧನೆಗೆ ಘೋರ ಧಕ್ಕೆ ಬಂದೊದಗುತ್ತದೆ ಎಂಬ ಅರಿವು ಅವನಿಗಿತ್ತು. ಹೀಗಾಗಿ ಅದಕ್ಕೂ ಮೊದಲೆ ಆತ ಮದೀನಾದ ನವ ಮತಾಂತರಿಗಳನ್ನು ಗುಪ್ತವಾಗಿ ಸಂಧಿಸಿದ. ಅವರ ಸಂಖ್ಯೆ, ಧರ್ಮನಿಷ್ಠೆ ಹಾಗೂ ಮನೋಗುಣ ಅರಿಯುವ ಪ್ರಯತ್ನ ಇದಾಗಿತ್ತು. ಆತ ಅವರನ್ನು ಅಕಾಬಾದಲ್ಲಿಯೆ ಸಂಧಿಸಿದ. ಮಧ್ಯರಾತ್ರಿ ನಡೆದ ಆ ಸಭೆಯಲ್ಲಿ ಮತಾಂತರಿತ ಎಪ್ಪತ್ತೆರಡು ಮದೀನಾವಾಸಿಗಳನ್ನು ಉದ್ದೇಶಿಸಿ ಮಹಮದ್ ಖುರಾನ್ ದೈವವಾಣಿಗಳನ್ನು ಸಾದರ ಪಡಿಸಿದ. ಜೊತೆಗೆ ತನ್ನ ಜೀವ ರಕ್ಷಣೆಯ ಪ್ರತಿಜ್ಞೆಯನ್ನು ಅವರೆಲ್ಲರಿಂದಲೂ ಮಾಡಿಸಿಕೊಂಡ ! ಎನ್ನುತ್ತಾನೆ ಇತಿಹಾಸಕಾರ ಕ್ಯಾರನ್ ಅರ್ಮೆಸ್ತ್ರಾಂಗ್. ಈ ಪೈಕಿ ಹನ್ನೆರಡು ಮೂಲ ಮತಾಂತರಿತರನ್ನು ಅವರೆಲ್ಲರ ನಾಯರನ್ನಾಗಿ ಆತ ನೇಮಿಸಿದ, ಇದನ್ನೆ 'ಎರಡನೆ ಅಲ್ ಅಕಾಬಾ' ಎಂದು ಕರೆಯಲಾಯಿತು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಕಿ. ಆದರೆ ಗುಪ್ತಚಾರರ ಮೂಲಕ ಈ ಗುಪ್ತ ಸಭೆಯ ಸುದ್ದಿ ಖುರೈಶಿಗಳನ್ನು ಮಿಂಚಿನಂತೆ ಮುಟ್ಟಿತು. ಅವರು ಆ ಎಲ್ಲಾ ಮತಾಂತರಿತ ಮದೀನ ನಿವಾಸಿಗಳನ್ನು ಸೆರೆ ಹಿಡಿಯಲು ಅತ್ತ ಧಾವಿಸುವಷ್ಟರಲ್ಲಿ ಆ ಎಲ್ಲಾ ಯಾತ್ರಿಕರೂ ಅಲ್ಲಿಂದ ಸಕಾಲದಲ್ಲಿ ಕಾಲು ಕಿತ್ತಾಗಿತ್ತು. ಆದರೆ ಈ ಘಟನೆಯ ನಂತರ ಮಹಮದನಿಗೆ ಶಾಂತಿ ಎನ್ನುವುದು ಮೆಕ್ಕಾದಲ್ಲಿ ಅಕ್ಷರಶಃ ಮರೀಚಿಕೆಯೆ ಆಯಿತು. ಖುರೈಷಿಗಳ ಇಮ್ಮಡಿಗೊಂಡ ಆಕ್ರೋಶ ನಾನಾ ಕೋಟಲೆಗಳಾಗಿ ಅವನ ಮೇಲೆರಗಿತು. ಮಹಮದ್ ಹಾಗೂ ಅವನ ಸ್ಥಳೀಯ ನಿವಾಸಿ ಅನುಯಾಯಿಗಳ ಮೇಲೆ ಹಿಂಸೆ ಹೆಚ್ಚಾಯಿತು. ಹೀಗಾಗಿ ಮತ್ತೆ ಆತ ಮೆಕ್ಕಾವನ್ನು ತೊರೆಯಲು ನಿರ್ಧರಿಸಿದ. ನೂರಕ್ಕೆ ನೂರರಷ್ಟು ಪ್ರಾಣ ಸುರಕ್ಷತೆಯ ಖಾತ್ರಿಯಿರುವ ತನ್ನ ನವ ಹಿಂಬಾಲಕರಿರುವ ಮದೀನಕ್ಕೆ ತೆರಳಲು ಆತ ನಿರ್ಧರಿಸಿದ. ತನ್ನ ಮತ ಬಾಂಧವರಿಗೂ ಆತ ಇದೆ ಅಪ್ಪಣೆಯನ್ನು ರವಾನಿಸಿದ. ಅಕಾಬಾದಲ್ಲಿ ಮದೀನಾ ವಾಸಿಗಳಿಂದ ಮಾಡಿಸಿಕೊಂಡಿದ್ದ ಪ್ರತಿಜ್ಞೆ ಅವನ ಈ ನಿರ್ಧಾರಕ್ಕೆ ಬಲತುಂಬಿತ್ತು. ಮನೆ- ಮಠ ತೊರೆದು ಮೆಕ್ಕಾದಿಂದ ನೂರಾ ಎಂಬತ್ತು ಮೈಲಿ ದೂರದಲ್ಲಿದ್ದ ಮದೀನಕ್ಕೆ ಕೈಗೊಂಡ ಆ ವಲಸೆ ಅವರೆಲ್ಲರಿಗೂ ಸಾಕಷ್ಟು ಸಂಕಷ್ಟಗಳನ್ನು ತಂದೊಡ್ಡಿತು. ಪ್ರಯಾಸಕರವಾಗಿದ್ದ ಆ ಪ್ರಯಾಣದಲ್ಲಿ ಸುಮಾರು ಇನ್ನೂರು ಮಂದಿ ಮೆಕ್ಕಾದಿಂದ ಮದೀನಕ್ಕೆ ವಲಸೆ ಹೋದರೆಂದು ಇತಿಹಾಸಕಾರ ಅಲ್ ಮುಬಾರಕಿ ತಿಳಿಸುತ್ತಾನೆ. ಅತ್ಯಂತ ಗುಟ್ಟಾಗಿ ಕೈಗೊಂಡಿದ್ದ ಈ ಪಯಣ ಸುಮಾರು ಎರಡು ತಿಂಗಳಲ್ಲಿ ಮುಗಿಯಿತು! ಹೇಗೊ ಸುರಕ್ಷಿತವಾಗಿ ಮದೀನಾ ತಲುಪಿಕೊಂಡ ಅವರನ್ನು ಮದೀನಾದ ಮುಸ್ಲೀಮರು ಆದರ ಹೊತ್ತ ಅಂತಃಕರಣದಿಂದ ಬರಮಾಡಿಕೊಂಡರು. ಇತ್ತ ಈ ವಿಷಯ ಅರಿವಾದ ಖುರೈಶಿಗಳಿಗೆ ದಿಗ್ಭ್ರಮೆಯಾಯಿತು. ಚೂರೂ ಸುಳಿವು ಕೊಡದೆ ಕುಟುಂಬಗಳು ತಮ್ಮ ಮನೆ- ಮಠ ಗಳನ್ನು ಇದ್ದಕ್ಕಿದಂತೆ ಅದೆ ಸ್ಥಿತಿಯಲ್ಲಿ ತೊರೆದು ಹೋಗಿದ್ದು ಅವರೆಲ್ಲರ ಅಚ್ಚರಿಗೆ ಕಾರಣವಾಯಿತು. ಹಾಗೊಂದು ವೇಳೆ ಆ ಬಗ್ಗೆ ಅವರಿಗೆ ಸುಳಿವು ಮೊದಲೆ ದೊರೆತಿದ್ದರೂ ಅವರೇನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಅವರೇನಾದರೂ ಉಗ್ರವಾಗಿ ವರ್ತಿಸಿದ ಪಕ್ಷದಲ್ಲಿ ತಮ್ಮ ರಕ್ತ ಸಂಬಂಧಿಗಳೊಂದಿಗೆ ಕಾದಾಡಿ ಅವರ ದ್ವೇಷ ಕಟ್ಟಿಕೊಳ್ಳಬೇಕಾಗುತ್ತಿತ್ತು, ಅಲ್ಲದೆ ಅದು ಅವರ ಬುಡಕಟ್ಟಿನ ಒಳಗೆ ಅದು ಬಿರುಕು ಮೂಡಿಸಿದ್ದರೂ ಆಶ್ಚರ್ಯ ಪಡಬೇಕಾಗಿರಲಿಲ್ಲ. ಒಟ್ಟಿನಲ್ಲಿ ಖುರೈಷಿಗಳು ನಿಸ್ಸಹಾಯಕರಾಗಿದ್ದರು. ಇಷ್ಟರ ನಡುವೆಯೂ ಮಹಮದ್, ಅವನ ಮಾವ ಅಬು ಬಕರ್ ಹಾಗೂ ದೊಡ್ಡಪ್ಪನ ಮಗ ಅಲಿಯೊಂದಿಗೆ ಅವನ ಕುಟುಂಬದವರು ಇನ್ನೂ ಅಲ್ಲಿಯೆ ಉಳಿದುಕೊಂಡಿದ್ದರು! ಮಹಮದನ ಈ ನಡೆ ಖುರೈಶಿಗಳಂತೆ ಅಬು ಬಕರನಿಗೂ ಬಿಡಿಸಲಾರದ ಒಗಟಾಗಿತ್ತು. ಮಹಮದನೂ ಅವರೊಂದಿಗೆ ಹೋಗಿದ್ದಿದ್ದರೆ ಪೀಡೆ ತೊಲಗಿತು ಎಂದುಕೊಳ್ಳಲು ತಯಾರಿದ್ದ ಖುರೈಶಿಗಳೆಲ್ಲ ಈ ಹಿನ್ನೆಲೆಯಲ್ಲಿ ಸಭೆಗೂಡಿದರು. ಅಲ್ಲಿ ಕೆಲವರು ಮಹಮದನ ಜೀವಹರಣ ಮಾಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಸಲಹೆ ಕೊಟ್ಟರಾದರೂ ಹಾಗೊಂದು ವೇಳೆ ಮಹಮದನ ಕೊಲೆ ಮಾಡಿದರೆ ಆತನ ಕುಟುಂಬಸ್ಥರು ಅರಬ್ಬಿ ಬುಡಕಟ್ಟಿನ ಒಳ ನಿಯಮಗಳಂತೆ ಪ್ರತಿಕಾರಕ್ಕೆ ಮುನ್ನುಗ್ಗಿದರೆ ವ್ಯಥಾ ರಕ್ತಪಾತ ಆದೀತು ಎಂಬ ಅಭಿಪ್ರಾಯವೂ ಎದುರಾಗಿ, ಅವನನ್ನು ಅವನ ಮನೆಯಲ್ಲೆ ಭೇಟಿಯಾಗಿ ತೀವ್ರವಾಗಿ ಅವನನ್ನು ಹೆದರಿಸಿ ಸುಮ್ಮನಾಗಿಸಲು ತೀರ್ಮಾನ ಕೈಗೊಂಡು ಸಭೆ ಬರಖಾಸ್ತುಗೊಳಿಸಲಾಯಿತು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಕಿ. ಆದರೆ ಮಹಮದನಿಗೆ ಖುರೈಷಿಗಳ ಸಂಧಾನದ ಕರೆ ಸಂಶಯ ಮೂಡಿಸಿತು. ಹಾಗೊಮ್ಮೆ ತಾನವರನ್ನು ಎದುರುಗೊಂಡರೆ ಅವರು ತನ್ನ ಹತ್ಯೆ ಜರುಗಿಸಿಯಾರು ಎಂಬ ಸಂಶಯಕ್ಕೆ ಅವನು ಒಳಗಾದ. ಖುರಾನಿನ ಸುರಾ 8/30ರಲ್ಲಿ ಅದನ್ನವನು ವ್ಯಕ್ತಪಡಿಸಿದ ಎನ್ನುತ್ತಾನೆ ಇತಿಹಾಸಕಾರ ಮ್ಯೂರ್. ಈ ವಿಷಯ ತಿಳಿದ ಮಹಮದ್ ಆಲಿಯನ್ನು ತನ್ನ ಮನೆಯಲ್ಲಿ ಇರಲು ಹೇಳಿ ಅಬು ಬಕರನ್ನು ಕಾಣಲು ದೌಡಾಯಿಸಿದ. ಅಲ್ಲಿ ಮದೀನಕ್ಕೆ ಪಲಾಯನ ಮಾಡಲು ತೀರ್ಮಾನಿಸಲಾಯಿತು. ಅದೆ ರಾತ್ರಿ ಆತ ಹಾಗೂ ಅಬುಬಕರ್ ಮೆಕ್ಕಾದಿಂದ ಓಡಿಹೋದರು. ಎರಡು ಘಂಟೆ ಪ್ರಯಾಣಿಸಿ ದಾರಿಯಲ್ಲಿ ಸಿಗುವ ಥೌರ್ ಎಂಬ ಬೆಟ್ಟವನ್ನು ಕಷ್ಟದಿಂದ ಏರಿ ಅಲ್ಲಿದ್ದ ಗುಹೆಯೊಂದರಲ್ಲಿ ಇಬ್ಬರೂ ಅಡಗಿಕೊಂಡರು. ಅಬು ಬಕರನ ಮಗ ಅಬ್ದುಲ್ಲಾ ಹಾಗೂ ಮಗಳು ಆಸ್ಮಾ ಇವರಿಗೆ ಹಾಲು-ಹಣ್ಣು ಹಾಗೂ ಅಗತ್ಯ ತಿನಿಸುಗಳನ್ನು ಸರಬರಾಜು ಮಾಡಿದರು. ಇದೆ ಗುಹೆಯಲ್ಲಿ ಅಡಗಿ ಕುಳಿತಾಗ ಜೇಡವೊಂದು ಗುಹೆ ಬಾಗಿಲಿಗೆ ಬಲೆ ಹೆಣೆದು ಹಿಂಬಾಲಿಸಿ ಬಂದ ಕೊಲೆಗಡುಕ ಖುರೈಶಿಗಳಿಂದ ಮಹಾಮದನನ್ನು ಪಾರುಮಾಡಿತು ಎಂಬ ದಂತಕಥೆಯೊಂದು ಚಾಲ್ತಿಯಲ್ಲಿದೆ. ಇತ್ತ ಮಹಮದನ ಪಲಾಯನದ ಸುದ್ದಿ ಅರಿತ ಖುರೈಷಿಗಳು ಗಲಿಬಿಲಿಗೊಂಡರು. ಅವನನ್ನು ಹಿಡಿದು ಹೆಡೆಮುರಿಗೆ ಕಟ್ಟಿತರಲು ಬೆನ್ನ ಹಿಂದೆಯೆ ಪಡೆಗಳನ್ನೂ ಅಟ್ಟಲಾಯಿತು. ಆ ಪ್ರಯತ್ನವೂ ವಿಫಲವಾದ ನಂತರ ಮೂರು ದಿನಗಳನ್ನು ಗುಹೆಯೊಳಗೆ ಕಳೆದ ಮಹಮದ್ ಹಾಗೂ ಅಬು ಬಕರ್ ಧೈರ್ಯವಹಿಸಿ ಗುಹೆಯಿಂದ ಹೊರಬಿದ್ದರು. ಅವರಿಗಾಗಿಯೆ ಬೆಟ್ಟದ ತಪ್ಪಲಿನಲ್ಲಿ ಗುಪ್ತವಾಗಿ ಒಂಟೆಗಳನ್ನು ಸಿದ್ಧಪಡಿಸಿ ಇಡಲಾಗಿತ್ತು. ಅವನ್ನೇರಿ ಇಬ್ಬರೂ ಮದೀನದತ್ತ ಪೇರಿಕಿತ್ತರು. ಕ್ಷೇಮವಾಗಿಯೆ ಅವರಲ್ಲಿಗೆ ಮುಟ್ಟಿದರು. ಹೀಗೆ ಮದೀನದತ್ತ ಆತ ಯಾತ್ರಿಸಿದ ದಿನ ಮುಸ್ಲೀಮರಿಗೆ ಪವಿತ್ರವಾಗಿ ಪರಿಣಮಿಸಿ ಅಂದಿನಿಂದ 'ಹಿಜ್ರಾ' ಶಕೆ ಆರಂಭವಾಯಿತು ಎನ್ನುವುದು ಇತಿಹಾಸಕಾರ ಮ್ಯೂರನ ಅಭಿಪ್ರಾಯ. ದಿನದರ್ಶಿಕೆಯ ಪ್ರಕಾರ ಅಂದು ಕ್ರಿಸ್ತಶಕೆ 622ರ ಜೂನ್ 20ನೆ ತಾರೀಕು ಆಗಿತ್ತು. ಮಹಾಮದನಿಗಾಗ ಐವತ್ತಮೂರರ ಹರೆಯ. ಮಹಮದನ ದೊಡ್ಡಪ್ಪನ ಮಗ ಆಲಿ, ಆತನ ಹೆಂಡತಿ ಸೌದ, ಮಕ್ಕಳಾದ ಜೈನಾಬ್, ಉಮ್'ಕುಲ್'ಸುಮ್ ಹಾಗೂ ಫಾತಿಮಾರ ಜೊತೆಗೆ ಮಹಮದನ ಎಳೆಯ ಹೆಂಡತಿ ಆಯೆಷಾ ಇವರಿಷ್ಟು ಮಂದಿ ಮಾತ್ರ ಇನ್ನೂ ಮೆಕ್ಕಾದಲ್ಲಿಯೆ ಉಳಿದುಕೊಂಡಿದ್ದರು. ಇವರಿಗ್ಯಾರಿಗೂ ಖುರೈಷಿಗಳು ಉಪಟಳ ನೀಡದಿದ್ದುದ್ದು ಸೋಜಿಗ ಹುಟ್ಟಿಸಿತು ಎನ್ನುತ್ತಾನೆ ಇತಿಹಾಸಕಾರ ಮ್ಯೂರ್. ಏಕೆಂದರೆ ಮಹಮದ್ ಖುರೈಷಿಗಳ ಪುರಾತನ ಮತ, ವಿಗ್ರಹಾರಾಧನೆ ಹಾಗೂ ಆಚಾರಗಳ ವಿರುದ್ಧ ಎಸಗಿದ ಅಪಚಾರ ಇವೆಲ್ಲ ಅವರಲ್ಲಿ ಅವನ ಹಾಗೂ ಅವನ ಆತ್ಮೀಯರ ವಿರುದ್ಧ ವೈರತ್ವ ಸಾರುವಂತೆ ಮಾಡಿತ್ತು, ಹೀಗಿರುವಾಗ ಆತ ಕೈಸಿಗದೆ ಪಲಾಯನಗೈದ ಹತಾಶೆ ಆತನ ಕುಟುಂಬದವರ ಮೇಲೆ ಹಿಂಸಾತ್ಮಕವಾಗಿ ತಿರುಗದಿದ್ದುದು ಅಚ್ಚರಿ ಹುಟ್ಟಿಸುವುದು ಸಕಾರಣವಾಗಿದೆ. ಇದೇನೆ ಇದ್ದರೂ ಮಹಮದ್ ಕ್ಷೇಮವಾಗಿ ಅಬು ಬಕರನೊಂದಿಗೆ ಮದೀನ ಮುಟ್ಟಿದ. ಈ ಹಿಂದೆ ಮದೀನವನ್ನು 'ಯಾತ್ರಿಬ್' ಎಂದು ಕರೆಯಲಾಗುತ್ತಿತ್ತು. ಕ್ರಮೇಣ ಖುರಾನಿನಲ್ಲಿ ಅದನ್ನು ಯಹೂದಿಗಳು ಅರಮಾಯಿಕ್ ಭಾಷೆಯಲ್ಲಿ ಕರೆಯುತ್ತಿದ್ದಂತೆ 'ಮೆದಿಂಕಾ' ಅಂದರೆ 'ನಗರ'ವೆಂದು ಕರೆಯಲಾಯಿತು. ಇದೆ ಮದಿಂಕಾ ಮುಂದೆ ಮದೀನ ಎಂದು ಕರೆಸಿಕೊಂಡಿತು. ಮಹಮದ್ ಅಲ್ಲಿಗೆ ವಲಸೆ ಬಂದ ನಂತರ ಅದನ್ನು 'ಅಲ್ ಮದೀನಾತ್' ಅಂದರೆ 'ಪ್ರವಾದಿಯ ನಗರ'ವೆಂದು ಕರೆಯಲಾಯಿತು ಎನ್ನುತ್ತಾನೆ ಇತಿಹಾಸಕಾರ ಕ್ಯಾರನ್ ಅರ್ಮೆಸ್ಟ್ರಾಂಗ್. (ಇನ್ನೂ ಇದೆ....)

No comments:

Post a Comment