ವಲಿ.... ( ಭಾಗ- 7 )


ಅಬು ತಾಲಿಬನ ಮರಣಾನಂತರ ಅವನ ಸಹೋದರ ಅಬು ಲಹಾಬ್ ಮಹಮದನ ಬಗ್ಗೆ ಕರುಣೆ ತೋರಿದ. ಎಷ್ಟಾದರೂ ತನ್ನ ಅಣ್ಣನ ಮಗನಲ್ಲವೆ ಎಂಬ ಕರುಣೆಯಿಂದ ಆತನೆದೆ ಮೃದುಧೋರಣೆ ಹೊಂದಿದ ಅಬು ಲಹಾಬ್ ತನ್ನ ಮಕ್ಕಳಿಗೆ ಮಹಮದನ ಇನ್ನಿಬ್ಬರು ಹೆಣ್ಣುಮಕ್ಕಳನ್ನು ತಂದು ಕೊಂಡು ಮಹಮದನಿಗೆ ದೊಡ್ಡಪ್ಪನ ಜೊತೆಗೆ ಬೀಗನೂ ಆದ. ಆದರೆ ಈ ಬಾಂಧವ್ಯ ಹೆಚ್ಚು ಕಾಲ ಬಾಳಲಿಲ್ಲ. ಇತರ ಖುರೈಷಿಗಳ ಪ್ರಭಾವ ದಟ್ಟವಾಗಿದ್ದುದರಿಂದ ಅಬು ಲಹಾಬ್ ಆತನ ನೂತನ ಮತಭೋದನೆ ಹಾಗೂ ಅದರ ಬಗ್ಗೆ ಮಹಮದನ ಪ್ರಚಾರ ವೈಖರಿಯ ಬಗ್ಗೆ ಕಿಡಿಕಾರತೊಡಗಿದ. ಈ ಅಸಹನೆಯಿಂದಲೆ ಮಹಮದನನ್ನು ಮತಭ್ರಷ್ಟನೆಂದು ಹೀಯಾಳಿಸಿ ಅವನಿಗೆ ಕಿರುಕುಳ- ಉಪಟಳ ನೀಡಲೂ ಆರಂಭಿಸಿದ. ಅವನ ಈ ಹಿಂಸೆಗೆ ರೋಸಿ ಹೋದ ಮಹಮದ್ ತನ್ನ ಒಂದು ದೈವವಾಣಿಯಲ್ಲಿ ಅವನ ಮೇಲಿದ್ದ ದ್ವೇಷವನ್ನು ಹೊರಹಾಕಿದ. ಅದೇ ಸುರಾ 111/1-5ದಲ್ಲಿನ ದೈವವಾಣಿ ಎನ್ನುತ್ತಾನೆ ಇತಿಹಾಸಕಾರ ಮ್ಯೂರ್. ಅದರಲ್ಲಿ ಹೀಗೆ ಹೇಳಲಾಗಿದೆ: 1) ಅಬು ಲಹಾಬನ ಕೈಗಳು ಮುರಿದು ಹೋದವು ಹಾಗೂ ಅವನು ನಾಶವಾಗಿ ಹೋದನು. 2) ಅವನು ಮಾಡುತ್ತಿದ್ದ ಸಂಪಾದನೆಯಾಗಲಿ, ಅವನು ಕೂಡಿಟ್ಟ ಸಂಪತ್ತಾಗಲಿ ಅವನ ಯಾವ ಕೆಲಸಕ್ಕೂ ಬರಲಿಲ್ಲ. 3) ಖಂಡಿತವಾಗಿಯೂ ಅವನು ನರಕದ ಸುಡುವ ಬೆಂಕಿಯಲ್ಲಿ ಹಾಕಲ್ಪಡುವನು. 4) ಕುಪ್ರಚಾರಕಳಾದ ಅವನ ಪತ್ನಿಗೂ ಅದೆ ಭೀಕರ ನರಕ ಕಾದಿದೆ. 5) ಅವರಿಬ್ಬರ ಕತ್ತಿನಲ್ಲಿಯೂ ಆಗ ದರ್ಭೆಯ ಹಾರವಿರುವುದು. ಕ್ರಮೇಣ ಮಹಮದನಿಗೂ ಅವನ ಅನುಯಾಯಿಗಳಿಗೂ ಖುರೈಷಿಗಳ ಉಪಟಳ ಹೆಚ್ಚಾಗಿ ಅವರು ಅವಮಾನಪೂರಿತವಾಗಿ ಜೀವನ ಸಾಗಿಸಬೇಕಾಗಿತ್ತು. ಇತ್ತ ಅಬು ತಾಲೀಬನ ಮರಣದ ನಂತರ ಸೂಕ್ತ ಭದ್ರತೆಯೂ ಇಲ್ಲದೆ ದೈಹಿಕ ರಕ್ಷಣೆ ಒಂದು ಸವಾಲಾಗಿ ಪರಿಣಮಿಸಿತ್ತು ಅವನಿಗೆ. ಅಪ್ಪಿತಪ್ಪಿ ಮನೆಯಿಂದ ಹೊರಗೆ ಅಡಿಯಿಟ್ಟರೆ ಅವನ ಮತದತ್ತ ಹನಿಯಷ್ಟೂ ಆಸಕ್ತಿ ಪ್ರಕಟಿಸದ ಮೆಕ್ಕಾದ ಮಂದಿಯಿಂದ ಅವನ ಮೇಲೆ ಕಲ್ಲು ಮಣ್ಣುಗಳು ಎಲ್ಲೆಂದರಲ್ಲಿ ಸುರಿಮಳೆಯಾಗುತ್ತಿತ್ತು. ಅಲ್ಲದೆ ಅವನ ಮತಪ್ರಚಾರವೂ ಕುಂಠಿತವಾಗಿತ್ತು. ಹೀಗಾಗಿ ತನ್ನ ಜೀವಮಾನದ ಪರಮ ಗುರಿಯಾದ ಇಸ್ಲಾಂ ಪ್ರಚಾರಕ್ಕಾಗಿ ಸೂಕ್ತ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ಆತ ನಿರ್ಧರಿಸಿದ. ಅದೆ ಕಾರಣಕ್ಕೆ ಮೆಕ್ಕಾದಿಂದ ಅರವತ್ತು ಮೈಲಿ ದೂರದ ಅಲ್ ತೈಫ್ ಎಂಬ ಪಟ್ಟಣಕ್ಕೆ ಸೇವಕ ಜೈದ್'ನೊಂದಿಗೆ ಪ್ರಯಾಣಿಸಿದ. ಅಲ್ಲಿನ ಒಂದು ಕುಟುಂಬದೊಂದಿಗೆ ತನ್ನ ಉದ್ದೇಶ ತಿಳಿಸಿ ಅದಕ್ಕಾಗಿ ಅವರ ಬೆಂಬಲ ಅಪೇಕ್ಷಿಸಿದ. ಆದರೆ ಆತ ನಿರೀಕ್ಷಿಸಿದಷ್ಟು ಬೆಂಬಲ ವ್ಯಕ್ತವಾಗಲಿಲ್ಲ. ತನ್ನ ಹಾಗೂ ತನ್ನ ಮತಬಾಂಧವರ ರಕ್ಷಣೆಗೆ ಆತನಿಟ್ಟ ಮೊರೆಯನ್ನು ಅಲ್ಲಿನವರು ಪುರಸ್ಕರಿಸಲಿಲ್ಲ. ಅವನ ಹುಟ್ಟಿನ ಕುಲವಾದ ಖುರೈಶಿಗಗಳಿಂದಲೇ ದೊರೆಯದ ಬೆಂಬಲ ಇನ್ನುಳಿದವರರಿಂದ ಹೇಗೆ ನಿರೀಕ್ಷಿಸುತ್ತಿ ಎಂದು ಮೊದಲಿಸಿಕೊಂಡು 'ಅಂಗೈ ತೋರಿಸಿ ಅವಲಕ್ಷಣ' ಎನ್ನಿಸಿಕೊಂಡವನಂತೆ ಪೆಚ್ಚಾಗಿ ಆತ ಅಲ್ಲಿಂದ ಕಾಲ್ತೆಗೆಯಬೇಕಾಯಿತು. ಅಲ್ಲಿನ ಮಂದಿ ಮಹಮದ್ ಹಾಗೂ ಜೈದ್'ನನ್ನು ಅಲ್ಲಿಂದ ಹೊಡೆತ, ಬೈಗುಳ ಹಾಗೂ ಭರ್ತ್ಸನೆಗಳೊಂದಿಗೆ ಹೊರದಬ್ಬಿದರು ಎನ್ನುತ್ತಾನೆ ಇತಿಹಾಸಕಾರ ಡೋಜಿ. ಹೀಗೆ ಅವಮಾನಿತನಾದ ಮಹಮದ್ ಮರಳಿ ಮೆಕ್ಕಾಗೆ ವಾಪಸ್ಸಾಗುವಾಗ ಅತಿಯಾದ ಹಸಿವು ಹಾಗೂ ದೈಹಿಕ ಬಳಲಿಕೆಗೆ ತುತ್ತಾಗಿ ನಖ್ಲಾ ಎಂಬಲ್ಲಿ ಬೀಡು ಬಿಟ್ಟನು. ಅವರ ಹೀನಸ್ಥಿತಿ ಕಂಡು ಮರುಕಗೊಂಡ ಅಲ್ಲಿನ ತೋಟದ ಯಜಮಾನ ಕರುಣಾಪೂರಿತನಾಗಿ ಆಹಾರ ನೀಡಿ ಅವರಿಬ್ಬರನ್ನೂ ಆದರಿಸಿದ. ಅವರು ತಂಗಿದ್ದ ತೋಟ ವಾಸ್ತವವಾಗಿ ಇಬ್ಬರು ಖುರೈಷಿಗಳಿಗೆ ಸೇರಿತ್ತು. ಹೃದಯ ವೈಶಾಲ್ಯದ ಅವರುಗಳು ಅವನ ಸ್ಥಿತಿಗೆ ಮರುಗಿ ತಮ್ಮ ಕ್ರೈಸ್ತ ಸೇವಕನ ಕೈಯಲ್ಲಿ ದ್ರಾಕ್ಷಿಹಣ್ಣಿನ ಬುಟ್ಟಿಯೊಂದನ್ನು ಅವನಿಗಾಗಿ ಕಳುಹಿಸಿಕೊಟ್ಟರು. ಅದ್ವಾಸ್ ಎಂಬ ಆ ಸೇವಕನೊಂದಿಗೆ ಮಾತನಾಡುವಾಗ ಆತ ನಿನೆವಾ ಪಟ್ಟಣದವನು ಎಂಬುದು ಮಹಮದನ ಅರಿವಿಗೆ ಬಂತು. ಅಬ್ಬಾಸನೆದುರು ಬೈಬಲ್ಲಿನಲ್ಲಿ ಉಲ್ಲೇಖವಾಗಿರುವ ಪ್ರವಾದಿ ಮೋಸೆಸನ ಬಗ್ಗೆ ಪ್ರಸ್ತಾಪಿಸಿದ ಮಹಮದ್ ಅದ್ವಾಸನ ಅಚ್ಚರಿಗೆ ಕಾರಣವಾದ. ತನ್ನಂತೆ ಮೋಸೆಸ್ ಕೂಡ ಪ್ರವಾದಿ ಎಂದು ಮಹಮದ್ ಆತನಿಗೆ ಸಾರಿದ. ಮಹಮದನ ವಿನಯ ಹಾಗೂ ಧರ್ಮಶ್ರದ್ಧೆಗೆ ಮಾರುಹೋದ ಅಬ್ಬಾಸ್ ಮಹಮದನಿಗೆ ಒದಗಿ ಬಂದ ಸಂಕಟ ಹಾಗೂ ಪರಿತಾಪಗಳಿಗೆ ದೇವರಲ್ಲಿ ಪರಿಪರಿಯಾಗಿ ಪ್ರಾರ್ಥನೆ ಸಲ್ಲಿಸಿದ. ಮಹಮದನೂ ದೇವರಿಗೆ ತನ್ನ ಹೀನಸ್ಥಿತಿಯನ್ನು ಮನವರಿಕೆ ಮಾಡುವ ಪ್ರಾರ್ಥನೆಗಳನ್ನು ಸಲ್ಲಿಸಿ ದೇವರು ತನ್ನ ಮೊರೆಯನ್ನಾಲಿಸುವನು ಎಂಬ ನಂಬಿಕೆ ಹೊತ್ತು ಮೆಕ್ಕಾದೆಡೆಗೆ ಪ್ರಯಾಣ ಬೆಳೆಸಿದ. ದಾರಿಯಲ್ಲಿ ಸಿಗುವ ನೆಖ್ಲಾದ ಕಣಿವೆಯ ಬಳಿಯೆ ಇದ್ದ ಗುಡಿಯೊಂದರಲ್ಲಿ ತಂಗಿ, ಮರಳಿ ಮೆಕ್ಕಾ ಪ್ರವೇಶಿಸಿದರೆ ತನಗ್ಯಾವ ಸತ್ಕಾರ ಕಾದಿದೆಯೋ ಎಂದು ಹೆದರಿ ಆ ರಾತ್ರಿ ಅಲ್ಲಿಯೆ ವಿರಮಿಸಿದ. ರಾತ್ರಿ ಮಲಗುವ ಮುನ್ನ ದೇವರಿಗೆ ಪ್ರಾರ್ಥನೆ ಸಲ್ಲಿಸುವಾಗ ಅವನ ಖುರಾನಿನ ಸೂತ್ರ ಪಠಣವನ್ನು ಆಲಿಸಿದ 'ಜಿನ್ನು'ಗಳು (ಭೂತಗಳು) ಉತ್ತೇಜಿತರಾಗಿ ತಮ್ಮ ಬಳಗದವರನ್ನು ಕೂಡಿಕೊಂಡು ಮಹಮದನ ಪ್ರಾರ್ಥನೆಯನ್ನು ಆಲೈಸಿದವು. ಅವೆಲ್ಲ ಇದರಿಂದ ಪ್ರಭಾವಿತರಾಗಿ ಮಹಮದನ ಹಿಂಬಾಲಕರಾಗಿ ಖುರಾನಿನ ಆದೇಶ ಪಾಲಿಸಿದರೆ ಮುಕ್ತಿ ಖಚಿತ ಎಂದು ನಂಬಿ ಅಲ್ಲಿನ ಅವೆಲ್ಲ ನಿರ್ಗಮಿಸಿದವು. ಇದೆ ವಿವರಣೆ ಖುರಾನಿನ ಸುರಾ 66/28-30 ಹಾಗೂ 12/1 ಗಳಲ್ಲಿ ಪ್ರಸ್ತಾಪಿತವಾಗಿದೆ ಎನ್ನುತ್ತಾನೆ ಇತಿಹಾಸಕಾರ ಮ್ಯೂರ್. ಮರಳಿದ ನಂತರ ಖುರೈಷಿ ದ್ವೇಷಿಗಳಿಂದ ಮೆಕ್ಕಾದಲ್ಲಿ ಕಾದಿರಬಹುದಾದ ವಿಪತ್ತಿಗೆ ಹೆದರಿದ ಮಹಮದ್ ಖುರೈಷಿಗಳಲ್ಲೆ ದಯಾರ್ದವಾಗಿದ್ದ ಅಲ್ ಮಾತಮ್ ಎಂಬ ಮುಖಂಡನೊಬ್ಬನನ್ನು ಸಂಪರ್ಕಿಸಿ ಮರಳಿ ಊರನ್ನ ಹೊಕ್ಕಲು ಅವನ ಸಹಾಯವನ್ನು ಬೇಡಿದ. ಆಸರೆಯ ಭರವಸೆ ಅವನಿಂದ ದೊರಕಿದ ನಂತರ ಮೆಕ್ಕಾದ ಮನೆಗೆ ಹಿಂದಿರುಗಿದ ಮಹಮದನ ಪರಿಸ್ಥಿತಿ ದಿನದಿಂದ ದಿನಕ್ಕೆ ಕೆಡುತ್ತಲೆ ಹೋಯಿತು. ವಿಪರೀತವಾಗಿದ್ದ ಆರ್ಥಿಕ ಹಿನ್ನೆಡೆ ಅನೇಕ ಕಷ್ಟ ಕಾರ್ಪಣ್ಯಗಳಿಗೆ ಮೂಲವಾಯಿತು. ಆದರೆ ಇಂತಹ ಪರಿಸ್ಥಿಯನ್ನು ಎದುರಿಗಿಟ್ಟುಕೊಂಡೆ ಆತ ಸೌದಾ ಎಂಬ ವಿಧವೆಯೊಬ್ಬಳನ್ನು ಮರುವಿವಾಹವಾದ. ಮೂರು ತಿಂಗಳ ಹಿಂದಷ್ಟೆ ಪತ್ನಿ ಖತೀಜಳನ್ನು ಕಳೆದುಕೊಂಡು ವಿಧುರನಾಗಿದ್ದ ಮಹಮದ್ ಈಗ ಹೊಸ ಮದುವೆಯ ಜೊತೆಜೊತೆಗೆ ಗೆಳೆಯ ಅಬು ಬಕರನ ಆರು ವರ್ಷದ ಎಳೆ ಮಗಳು ಆಯೆಶಾಳೊಂದಿಗೆ ತನ್ನ ವಿವಾಹ ನಿಸ್ಚಿತಾರ್ಥವನ್ನೂ ನೆರವೇರಿಸಿಕೊಂಡ!. ಇದಕ್ಕೆ ಇತಿಹಾಸಕಾರರಾದ ಮ್ಯೂರ್ ಹಾಗೂ ಅಲ್ ಮುಬಾರಕಿ ಮುಂತಾದವರು ಮಹಮದನಿಗೆ ಅದಾಗಲೆ ಐವತ್ತುವರ್ಷ ವಯಸ್ಸಾಗಿದ್ದರೂ ಮುಂದಿನ ದಿನಗಳಲ್ಲಿ ತನ್ನ ಮತಪ್ರಚಾರಕ್ಕೆ ಅಬು ಬಕರನ ಪ್ರಬಲ ಬೆಂಬಲ ಅಪೇಕ್ಷಿಸಿ, ಅದಕ್ಕೆ ಪೂರ್ವಭಾವಿಯಾಗಿ ತಮ್ಮಿಬ್ಬರ ನಡುವಿನ ಸ್ನೇಹಕ್ಕೆ ಸಂಬಂಧದ ನಿಕಟತೆಯ ಲೇಪ ಹಚ್ಚಲು ಈ ನಿರ್ಧಾರಕ್ಕೆ ಬಂದಿದ್ದಾನೆ ಎಂದು ಹೇಳುತ್ತಾರೆ. ಕ್ರಿಸ್ತಶಕ 620ರಲ್ಲಿ ಮೆಕ್ಕಾದ ಪವಿತ್ರ ದಿನಗಳ ಜಾತ್ರೆ ಪ್ರಾರಂಭವಾದಾಗ ಅಲ್ಲಿಗೆ ಯಾತ್ರಾರ್ಥಿಗಳಾಗಿ ಬಂದಿದ್ದ ಅನೇಕ ಮದಿನಾ ವಾಸಿಗಳನ್ನು ಮಹಮದ್ ಅನಾಯಾಸವಾಗಿ ಸಂಪರ್ಕಿಸಿದ. ಮದೀನ ವಾಸಿಗಳು ಮಹಮದನ ನೂತನ ಧರ್ಮದ ಬಗ್ಗೆ ಕೇಳಿ ಅದಾಗಲೆ ಅರಿತಿದ್ದರು. ಅವನನ್ನೆ ಈಗ ನೇರವಾಗಿ ಭೇಟಿಯಾಗಿ ಅವನ ಸಂದೇಶಗಳನ್ನು ಕೇಳಿ ಸಂತುಷ್ಟರಾದರೂ ಒಮ್ಮೆಲೆ ಅವರಲ್ಲಿ ಯಾರೂ ಮತಾಂತರವಾಗಲಿಲ್ಲ. ಅಲ್ಲದೆ ಅಷ್ಟು ಸುಲಭವಾಗಿ ಅವರ ಬೆಂಬಲವೂ ಅವನಿಗೇನೂ ಸಿಗಲಿಲ್ಲ. ಆದರೆ ಆತನ ಹಾಗೂ ಆತನ ನೂತನ ಮತದ ಬಗ್ಗೆ ಸದ್ಭಾವನೆ ಬೆಳಿಸಿಕೊಂಡ ಅವರು ಮರಳಿ ಮದೀನಾ ಸೇರಿದಾಗ ಅದು ಅಲ್ಲಿ ಬಾಯಿಪ್ರಚಾರವಾಗಿ ಒಬ್ಬರಿಂದ ಇನ್ನೊಬ್ಬರಿಗೆ ಸುಲಭವಾಗಿ ಮುಟ್ಟಿತು. ಅತ್ತ ಇಸ್ರೇಲಿನ ಯಹೂದಿಗಳು ರೋಮನ್ ಚಕ್ರಾಧಿಪತ್ಯದ ಅಧೀನಕ್ಕೆ ಒಳಪಟ್ಟು ಧರ್ಮ ದ್ವೇಷದ ಹಿನ್ನೆಲೆಯಲ್ಲಿ ಅವರಿಂದ ನಿರಂತರ ಹಿಂಸಾಚಾರಕ್ಕೆ ಒಳಗಾಗಿ ಪಡಬಾರದ ಪಾಡುಪಟ್ಟು ಅಲ್ಲಿಂದ ಅನಿವಾರ್ಯವಾಗಿ ದೇಶಭ್ರಷ್ಟರಾಗಿ ಪ್ರಪಂಚದಾದ್ಯಂತ ಹರಡಿಹೋದ ಐತಿಹಾಸಿಕತೆಗೆ ಈಗ ಹೊಸತಿರುವು ಸಿಗಲಾರಂಭಿಸಿತು. ಹೀಗೆ ನೆಲೆ ಕಳೆದುಕೊಂಡ ಯಹೂದಿಗಳ ಗುಂಪುಗಳು ಅರೇಬಿಯವನ್ನೂ ಪ್ರವೇಶಿಸಿ ಮದೀನ ಸುತ್ತಮುತ್ತಲು ನೆಲೆಯೂರಿ ಕೋಟೆ- ಕೊತ್ತಲು ಕಟ್ಟಿಕೊಂಡು ಜೀವನವನ್ನಾರಂಭಿಸಿದರು. ಹೀಗೆ ವಲಸೆ ಬಂದಿದ್ದ ಪ್ರಮುಖ ಯಹೂದಿ ಬುಡಕಟ್ಟುಗಳೆಂದರೆ ಅಲ್ ನದೆಶ್, ಬೆನ್ ಕುರೈಜಾ ಹಾಗೂ ಬೆನ್ ಕೆನುಕಾ. ಇವರ ವಲಸೆಯೆಲ್ಲ ಕ್ರಿಸ್ತಶಕಾರಂಭ 70ರಲ್ಲಿಯೆ ಆರಂಭವಾಗಿತ್ತು ಎನ್ನುವುದು ಇತಿಹಾಸಗಾರ ಮಾರ್ಗೊಲಿಯತ್ತನ ಅಭಿಪ್ರಾಯ. (ಇನ್ನೂ ಇದೆ....)

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು